Wednesday, 6 July 2016

ಎಚ್ಚರ1.
"ಮಾವ ಅದೇನೋ ಮಾತಾಡ್ಬೇಕು ಅಂತಿದ್ರು, ಆ ಮೊಬೈಲ್ ಬದಿಗಿಟ್ಟು ಒಮ್ಮೆ ಹೋಗಿ ಏನಂತ ಅವರನ್ನ ಕೇಳ್ಬಾರ್ದಾ ..??"
ಕ್ಲೈಂಟ್ ಜೊತೆ ಚಾಟಿಂಗ್ ಅಲ್ಲಿ ಬ್ಯುಸಿಯಾಗಿದ್ದ ಆತ ಹೆಂಡತಿಯ ಮಾತಿಗೆ ತಲೆ ಎತ್ತದೇ "ಆಫೀಸಿಗೆ ಹೋಗೋವಾಗ ಮಾತಾಡ್ತೀನಿ ಕಣೇ, ಹೇಳಿದ್ದನ್ನೇ ಹತ್ತ್ ಸಲ ಹೇಳ್ಬೇಡ." ಎಂದು ಗದರಿದ. ಅರ್ಧಗಂಟೆಯ ನಂತರ ಅವಸರದಿಂದ ಆಫೀಸಿಗೆ ಹೊರಟು ನಿಂತ.
ಈ ಮೊದಲು ಅಮ್ಮನೊಂದಿಗೆ ಅಪ್ಪ ಹೇಳಿದ ಮಾತು ಕೇಳಿಸಿಕೊಂಡಿದ್ದ ಏಳು ವರ್ಷದ ಮಗ ತಂದೆ ಗಡಿಬಿಡಿಯಿಂದ ಹೋಗುವುದನ್ನೇ ನೋಡುತ್ತಿದ್ದ.

"ನಿಮ್ಮಪ್ಪ ಏನ್ ಮಾತಾಡ್ತಾರೋ. ನಂಗೇನೂ ಅರ್ಥ ಆಗಲ್ಲ."
ಆಫೀಸ್ ಮೀಟಿಂಗ್ ಗೆ ರೆಡಿಯಾಗುತ್ತಿದ್ದವನ ಕಿವಿಗೆ ಈ ಮಾತು ಬೀಳಲಿಲ್ಲ. ಆತನ ಕಾರು ಸ್ಟಾರ್ಟ್ ಆದ ಶಬ್ದ ಒಳಕೋಣೆಯಲ್ಲಿ ಪಾರ್ಶ್ವವಾಯು ಬಡಿದು ಮಲಗಿದ್ದ ತಂದೆಗೆ ಕೇಳಿಸಿತು.
ಅವಳ 'ಮೊಬೈಲ್ ಬದಿಗಿಟ್ಟು ಅವರನ್ನ ಏನಂತ ಕೇಳ್ಬಾರ್ದಾ' ಎಂಬ ಮಾತು ಮತ್ತೊಮ್ಮೆ ನೆನಪಾಗಿ ಕಾಡಿತು.


2.
ಅಂದು ಹುಟ್ಟಿ ಬೆಳೆದ ಮನೆ, ಆಡಿ ಕಳೆದ ತೋಟಗಳನ್ನು ಬಿಟ್ಟು ಹೋಗಬೇಕೆಂಬ ನೋವೇ ದೊಡ್ಡ ಸಂಗತಿಯಾಗಿ ಕಾಣಿಸಿತ್ತು. ನಾಳೆಯ ದಿನಗಳು ಭದ್ರವಾಗಿರುವಂತಹ ಭವ್ಯ ಅವಕಾಶ ಬಾಗಿಲ ಬಳಿ ಕಾದು ನಿಂತಿದ್ದರೂ, ಅದರತ್ತ ತಿರುಗಿಯೂ ನೋಡದೆ ವಾಪಸ್ಸು ಕಳಿಸಿದ್ದ. ಹೆಂಡತಿ, ಮಗನ ಭವಿಷ್ಯಕ್ಕಿಂತ ತನ್ನ ವರ್ತಮಾನ ಮುಖ್ಯವೆನಿಸಿತ್ತು.

ಇಂದು ಮನೆ ಮೂರು ಮಾಡಾಗಿದೆ, ತೋಟ ಆರು ಹೋಳಾಗಿದೆ. ಅತ್ತ ವಾರದಿಂದ ಮಗ ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಮೂರು ದಿನಗಳಿಂದ ಹೆಂಡತಿ ಬೇಸರಿಸಿಕೊಂಡು ಊಟ ಬಿಟ್ಟು ಕೂತಿದ್ದಾಳೆ. ಭವಿಷ್ಯದ ಬಾಗಿಲು ಬಿರುಕು ಬಿಟ್ಟಿದೆ. ವರ್ತಮಾನ ಇವನನ್ನೇ ನೋಡುತ್ತಾ ವ್ಯಂಗವಾಗಿ ನಗುತ್ತದೆ.


3.
"ಅಮ್ಮಾ, ಒಂದ್ಸಲ ನಾ ಹೇಳಿದ್ದನ್ನ ಪೂರ್ತಿಯಾಗಿ ಕೇಳಿಸ್ಕೊ." ಮಗಳ ಬೇಡಿಕೆ.

"ತಡಿ, ಇದೊಂದು ಸೀರಿಯಲ್ ಮುಗೀಲಿ. ಪಾಪ ಗೌರಿ, ಡೈವೋರ್ಸ್ ಕೊಟ್ಟೆ ಬಿಡ್ತಾಳೆ ಅನ್ಸತ್ತೆ." - ತಾಯಿಯ ಉತ್ತರ.

ಸೀರಿಯಲ್ ಮುಗಿದ ಮೇಲೂ ಕಥಾನಾಯಕಿ ಗೌರಿಯ ಕುರಿತಾದ ಚರ್ಚೆ ಮುಗಿಯಲಿಲ್ಲ. 'ಅಯ್ಯೋ ಪಾಪ', 'ಇನ್ನವಳ ಬದುಕು ಏನಾಗತ್ತೋ', 'ಅವಳಮ್ಮನಿಗಾದ್ರೂ ನಿಜಾನೆಲ್ಲಾ ಹೇಳ್ಬೇಕಿತ್ತು' - ಅಲವತ್ತುಕೊಳ್ಳುತ್ತಲೇ ಆ ದಿನ ಕಳೆಯಿತು.

ಮರುದಿನ ಮಗಳು ವಾಪಸ್ಸು ಗಂಡನ ಮನೆಗೆ ಹೊರಟಳು. "ಹೋಗ್ಬರ್ತೀನಮ್ಮಾ" ಎಂದಷ್ಟೇ ಹೇಳಿದಳು.

ಅದಾಗಿ ಒಂದು ವಾರ ಕಳೆದಿದೆ. ಈಗ ಆ ಮಹಾತಾಯಿ ಸೀರಿಯಲ್ ನೋಡುವುದನ್ನೇ ಬಿಟ್ಟಿದ್ದಾಳೆ. ಟಿವಿ ಕಂಡ ಕೂಡಲೇ ಮಗಳ ಹೆಣವೇ ಕಣ್ಣಮುಂದೆ ಬರುತ್ತದೆ. 'ಪತಿ ವಿಚ್ಛೇದನ ನೀಡಿದನೆಂದು ಮಾನಸಿಕವಾಗಿ ನೊಂದು ಪತ್ನಿಯು ಆತ್ಮಹತ್ಯೆ' ಎಂದು ಸುದ್ದಿವಾಹಿನಿಗಳು ಪದೇ ಪದೇ ತೋರಿಸುವುದನ್ನು ಕಂಡಾಗ ಮಗಳ ಮಾತನ್ನು ತಾನು ಕೇಳಿಸಿಕೊಳ್ಳದೇ ಉಳಿದ ಕ್ರೂರತನದ ನೆನಪಾಗುತ್ತದೆ.


4.
"ನಾನಂತೂ ಓದದೇ ಕೆಟ್ಟೆ. ಹಂಗಾಗಿ ನಿಮ್ಮಪ್ಪನ ಹಂಗಿನಲ್ಲೇ ಬದುಕೋ ಹಾಗಾಯ್ತು. ನೀನು ಓದಿ ಕೆಡಬೇಡ. ಅಳಿಯ ಅದೆಷ್ಟೇ ದುಡಿದು ತಂದ್ರೂ ಪರವಾಗಿಲ್ಲ. ನೀನು ಕೆಲಸಕ್ಕೆ ಹೋಗೋದನ್ನ ಯಾವ್ದೇ ಕಾರಣಕ್ಕೂ ಬಿಡ್ಬೇಡ. ಕಷ್ಟಕಾಲಕ್ಕೆ ಆಪದ್ಧನ ಅಂತಾನಾದ್ರೂ ಹೆಣ್ಣಿನ ಕೈಯ್ಯಲ್ಲಿ ನಾಲ್ಕು ಕಾಸಿರ್ಬೇಕು, ತಿಳ್ಕೋ."

ಅಮ್ಮ ಅದೆಷ್ಟು ಸಲ ಹೇಳಿದ್ದಳು. ನಾನು ಕೇಳಿಸಿಕೊಂಡಂತೆ ನಾಟಕವಾಡಿದ್ದೆ.
ಮತ್ತೊಬ್ಬಳ ತೆಕ್ಕೆಗೆ ಬಿದ್ದಿರುವ ಅವರು ಮನೆಗೆ ಬರುವುದೇ ಅಪರೂಪ. ಅಲ್ಲಿ ಸುರಿದು ಉಳಿದಿದ್ದನ್ನು ಇಲ್ಲಿ ಕೊಟ್ಟು ಹೋಗುತ್ತಾರೆ. ಅದು ಹೊಟ್ಟೆಗೆ ಸಾಕಾದರೆ ಬಟ್ಟೆಗೆ ಸಾಲದು. ಬ್ಯಾಂಕ್ ಕೆಲಸವನ್ನು ಬಿಡದೇ ಇದ್ದಿದ್ದರೆ ..??

"ಅಮ್ಮಾ, ಸ್ಕೂಲ್ ಯುನಿಫಾರಂ ಫೀಸ್ ಗೆ ಹಣ ಕೊಡಮ್ಮಾ.?" ಹಿರಿಯ ಮಗ ಬಂದು ಕೇಳಿದ.

ಅಮ್ಮ ಹೇಳುತ್ತಿದ್ದ ಕಷ್ಟಕಾಲ ಎಂದರೆ ಇದೇನಾ. ??


No comments:

Post a Comment