Sunday, 5 June 2016

ಅಪ್ಪೆ ಮಾವು


"ಮೊನ್ನೆ ಮೊನ್ನೆಯಷ್ಟೇ ವಾಪಸ್ಸು ಹೋಗಿದ್ದು. ಈಗ ಮತ್ತೆ ಬಂದಿದ್ದು ಯಾಕಂತೆ ..??" ಸವಿತಕ್ಕ ಗಂಡನ ಬಳಿ ಕೇಳುತ್ತಿದ್ದರು.

"ಮಗ ಅಲ್ವೆನೇ ಬಂದಿದ್ದು..?? ಯಾಕಪ್ಪ ಮತ್ತೆ ಮನೆಗೆ ಬಂದೆ ಅಂತ ಕೇಳಕಾಗತ್ತಾ ..?? ಬೆಳಿಗ್ಗೆ ಬೆಳಿಗ್ಗೆ ಬಂದಿದಾನೆ, ರಾತ್ರಿಯಿಡೀ ನಿದ್ದೆಯಿಲ್ದೆ ಸುಸ್ತಾಗಿರತ್ತೆ. ರೆಸ್ಟ್ ಮಾಡಿ ಆರಾಮಾದ್ಮೇಲೆ ಅವನೇ ಹೇಳ್ತಾನೆ ಬಿಡು." ಕೇಶವ ಹೆಬ್ಬಾರರು ಉತ್ತರಿಸಿದರು.

ಸವಿತಕ್ಕನಿಗೆ ಸಮಾಧಾನವಾದೀತೇ ..?? ಮಧ್ಯಾಹ್ನದ ಊಟ ಮುಗಿದ ಬಳಿಕ ಪಾತ್ರೆಗಳನ್ನು ಸೇರಿಸುತ್ತಿದ್ದ ಸೊಸೆಯ ಬಳಿ ಕೇಳಿಯೇ ಬಿಟ್ಟರು. "ರಾಧಾ, ಆಕಾಶಂಗೆ ಆಫೀಸಿನಲ್ಲಿ ರಜಾ ಇದೆಯಾ..??"
"ಹ್ಞಾಂ ಅತ್ತೆ, ಬೋನಸ್ ಹಾಲಿಡೇಸ್ ಹಾಗೆ ಉಳ್ಕೊಂಡಿತ್ತಂತೆ." ರಾಧಿಕಾಗೆ ಏನೂ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಕ್ಷಣಕ್ಕೆ ಹೊಳೆದಿದ್ದನ್ನು ಹೇಳಿದಳು.

ಖರೇ ಹೇಳಬೇಕೆಂದರೆ, ಅವಳಿಗೇ ಗಂಡನ ಈ ಧಿಡೀರ್ ಪ್ರಯಾಣದ ತಲೆಬುಡ ಅರ್ಥವಾಗಿರಲಿಲ್ಲ. ಪುಟ್ಟಿಯ ಸಮ್ಮರ್ ಹಾಲಿಡೇಸ್ ಎಂದು ಮೇ ತಿಂಗಳ ಕೊನೆಯ ವಾರದಲ್ಲಿ ಊರಿಗೆ ಬಂದವರು ಕಳೆದ ವಾರವಷ್ಟೇ ಬೆಂಗಳೂರಿಗೆ ಮರಳಿದ್ದರು. ಈಗ ಜೂನ್ ಎರಡನೆಯ ವಾರ. ಹತ್ತೇ ದಿನಗಳಲ್ಲಿ ಮತ್ತೆ ಊರಿಗೆ ಮರಳುವಂತಹ ಅನಿವಾರ್ಯ ಕೆಲಸವೇನಿದೆಯೆಂದು ರಾಧಿಕಾಗೆ ತಿಳಿದಿರಲಿಲ್ಲ. ಅವತ್ತು ಶುಕ್ರವಾರ ಸಂಜೆ ಎಂದಿಗಿಂತ ಬಹಳ ಮುಂಚೆಯೇ ಆಕಾಶ್ ಆಫೀಸಿನಿಂದ ಮರಳಿದ್ದ. ಮನೆಯೊಳಗಡೆ ಕಾಲಿಟ್ಟ ಮರುಕ್ಷಣವೇ ಹೇಳಿದ, "ಈಗ ನೈಟ್ ಬಸ್ ಗೆ ಊರಿಗೆ ಹೋಗ್ಬೇಕು. ಬೇಗ ಲಗೇಜ್ ಪ್ಯಾಕ್ ಮಾಡಿ ರೆಡಿ ಆಗು. ಜಾಸ್ತಿ ಟೈಮ್ ಇಲ್ಲ, ಲೇಟ್ ಮಾಡ್ಬೇಡ." ರಾಧಿಕಾಳ ಯಾಕೆ, ಏನು ಎಂಬ ಪ್ರಶ್ನೆಗಳಿಗೆ ಆತ ಹಾರಿಕೆಯ ಉತ್ತರವನ್ನು ಕೊಟ್ಟನಷ್ಟೆ. ಪುಟ್ಟಿಯ ಶಾಲೆ ತಪ್ಪುವುದರಿಂದ ನಾವಿಬ್ಬರೂ ಬರುವುದಿಲ್ಲ, ನೀವು ಹೋಗಿ ಬನ್ನಿ ಎಂದರೆ "ಇಲ್ಲ, ಮೂವರೂ ಹೋಗೋಣ." ಎಂಬ ಹಠ. ಊರಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದೆಯೋ ಹೇಗೆ ಎಂದು ಸ್ವಲ್ಪ ತಲೆಬಿಸಿಯಲ್ಲೇ ಹೊರಟು ಬಂದರೆ, ಇಲ್ಲಿ ಏನೊಂದೂ ಆಗಿಲ್ಲ. ಎಲ್ಲವೂ ಸರಿಯಾಗಿದೆ. ಮಾತ್ರವಲ್ಲ, ಸ್ವತಃ ಅತ್ತೆ-ಮಾವನಿಗೂ ಮಗ ಬರುವ ಸಂಗತಿ ತಿಳಿದಿರಲಿಲ್ಲ. ಯಾಕೆ ಹೀಗೆ ಹೊರಟು ಬಂದದ್ದು ಎಂದು ಅವರಿಗೂ ಬಗೆಹರಿದಿಲ್ಲ.

                                                            ********

"ಇದು ನೋಡು ರಾಧು, ನಾವು ಚಿಕ್ಕೋರಿದ್ದಾಗ ಅದೆಷ್ಟು ಹಣ್ಣು ಬಿಡ್ತಿತ್ತು ಗೊತ್ತಾ ..?? ಇಡೀ ನಮ್ಮ ಬೆಂಗಳೂರಿಗೆ ರಸಾಯನ ಮಾಡಿ ಬಡಿಸುವಷ್ಟು." ತೋಟದ ಆಚೆ ದಿಂಬದಲ್ಲಿರುವ ಈಸಾಡಿ ಮಾವಿನ ಮರದತ್ತ ಕೈ ತೋರಿಸುತ್ತಾ ಹೆಂಡತಿಗೆ ಹೇಳುತ್ತಿದ್ದ ಆಕಾಶ್. "ಈಗ ನೆಟ್ಟಗೆ ನೂರು ಕಾಯಿಗಳು ಬರಲ್ಲ ಈ ಮರಕ್ಕೆ. ಏನೋ ರೋಗ ಬಂದವರ ಹಾಗೆ ಬಾಡಿ ಹೋಗಿದೆ ಅಲ್ವಾ..?? ಪಾಪ, ಈಗ ಈ ಮರಗಳ ಹತ್ರ ಹಣ್ಣು ಹೆಕ್ಕಲು ಬರುವ ಮಕ್ಳಾದ್ರೂ ಯಾರಿದಾರೆ..?? ಹಾಗಾಗಿ ಮರಕ್ಕೂ ತಾನು ಹಣ್ಣು ಬಿಡೋದೆಲ್ಲಾ ವೇಸ್ಟು ಅಂತಾ ಅನಿಸಿರಬೇಕು. ಅಲ್ಲೇ ಬಲಗಡೆ ಒಂದು ಅಪ್ಪೆ ಹಣ್ಣಿನ ಮರ ಇದೆ. ಅದಂತೂ ಕಾಯಿ ಬಿಡದೇ ಮೂರು ವರ್ಷಗಳೇ ಆಯ್ತಂತೆ. ನಮಗೆಲ್ಲಾ ಫೇವರೇಟ್ ಆಗಿತ್ತು ಆ ಅಪ್ಪೆ ಹಣ್ಣು." ಆತ ಮಾತನಾಡುತ್ತಲೇ ಇದ್ದ.

ರಾಧಿಕಾಗೆ ಇನ್ನಷ್ಟು ಗೊಂದಲ. ಇವತ್ತಿನ ತನಕ ಕಾಡು, ಮರ, ಹಣ್ಣು, ಹೂವು ಅಂತೆಲ್ಲಾ ಎರಡು ಸಾಲುಗಳನ್ನು ಸಹ ತನ್ನ ಗಂಡ ಮಾತನಾಡಿದ್ದಿಲ್ಲ. ಆಫೀಸು, ಮನೆ, ಕ್ರಿಕೆಟ್, ಸಿನೆಮಾ - ಇದಿಷ್ಟರ ಕುರಿತೇ ಆಸಕ್ತಿ, ಮಾತು, ಹರಟೆ. ಪಾರ್ಕ್ ಹೋದಾಗ ಅಪ್ಪಿತಪ್ಪಿ ಮರ, ಗಿಡ, ಹೂವುಗಳತ್ತ ಕಣ್ಣು ಹಾಯಿಸದವ ಈಗ ಒಮ್ಮಿಂದೊಮ್ಮೆಗೇ ಈಸಾಡಿ ಮಾವು, ಅಪ್ಪೆ ಮಿಡಿ ಅಂತೆಲ್ಲಾ ವಿವರಣೆ, ವಿಶ್ಲೇಷಣೆ ಕೊಡುತ್ತಿರುವುದಕ್ಕೆ ಕಾರಣ ಏನಿರಬಹುದು ..?? ತಲೆ ನೋವು ಬರಬಹುದೆನ್ನಿಸಿತು ಅವಳಿಗೆ. ಯೋಚನೆಯನ್ನು ಬಿಟ್ಟು ಗಂಡನ ಮಾತಿಗೆ ಹ್ಞೂಂಗುಟ್ಟತೊಡಗಿದಳು.

ಮರುದಿನ ಬೆಳಿಗ್ಗೆ ಆಕಾಶ್ ಸೊಪ್ಪಿನ ಬೆಟ್ಟವನ್ನು ನೋಡಲು ಹೊರಟ. ಮಧ್ಯಾಹ್ನದ ಊಟದ ವೇಳೆಗೂ ವಾಪಸ್ಸು ಬರಲಿಲ್ಲ. ಸಂಜೆ ಕತ್ತಲಾದ ಮೇಲೆ ಮರಳಿ ಬಂದ. ಒಂದು ಪ್ಲಾಸ್ಟಿಕ್ ಕವರ್ ತುಂಬಾ ನೇರಳೆ ಹಣ್ಣು ತಂದಿದ್ದ. "ಅಮ್ಮಾ, ಅಲ್ಲಿ ಬೆಟ್ಟದ ತುದಿಯಲ್ಲಿರೋ ಹಲಸಿನ ಮರಕ್ಕೆ ಎರಡು ಕಾಯಿಗಳಿವೆ. ಹಿಂದಿನ ವರುಷ ಒಂದೂ ಕಾಯಿ ಇರಲಿಲ್ಲವಂತೆ. ಆಳು ಹೇಳಿದ. ಪರವಾಗಿಲ್ಲ ಈ ಸಲ ಕಾಯಿ ಬಂದಿದೆ."

ಮಗನ ಮಾತು ಕೇಶವ ಹೆಬ್ಬಾರರಿಗೆ ಅಚ್ಚರಿ ಮೂಡಿಸಿತಾದರೂ ಏನೂ ಪ್ರತಿಕ್ರಿಯಿಸಲಿಲ್ಲ. ಪೇಟೆಯ ಯಾಂತ್ರಿಕ ಜನ-ಜೀವನದಿಂದ ತಲೆಚಿಟ್ಟು ಹಿಡಿದು ಬದಲಾವಣೆಗಾಗಿ ಆತ ಧಿಡೀರ್ ಎಂದು ಊರಿಗೆ ಬಂದಿರುವುದಷ್ಟೆ ಎಂದು ನಿರ್ಧರಿಸಿದರು. ಮಾತ್ರವಲ್ಲ, ಹೆಂಡತಿಯ ಬಳಿಯೂ ಹೀಗೆಂದು ಹೇಳಿದರು.

                                                                ********

"ನೋಡೋ ಆಕಾಶ್, ಈ ಸಿಟಿಯಲ್ಲಿರೋ ಮಾವಿನ ಮರಗಳೆಲ್ಲ ಅದೆಷ್ಟು ಚೆನ್ನಾಗಿ ಕಾಯಿ ಬಿಟ್ಟಿವೆ. ಬೆಂಗಳೂರಿನ ಈ ಧೂಳು, ಬಿಸಿಲು ಕೂಡ ಅವುಗಳನ್ನು ಬಾಡಿಸಿಲ್ಲ. ಅದೇ ನಮ್ಮನೆ ತೋಟದಲ್ಲಿರೋ ಮಾವಿನ ಮರಕ್ಕೆ ಎರಡು ವರ್ಷಗಳಿಂದ ಹತ್ತೋ ಇಪ್ಪತ್ತೋ ಕಾಯಿಗಳು ಬರತ್ವೆ. ಈ ಸಲವಂತೂ ಒಂದು ಕಾಯಿಯೂ ಇಲ್ಲ. ನಂಗನ್ಸತ್ತೆ ಕಣೋ, ಗಿಡಮರಗಳು ಸೊಂಪಾಗಿ ಬೆಳೆದು ಫಲ ಕೊಡ್ಬೇಕು ಅಂತಂದ್ರೆ ಬರೇ ನೀರು, ಗೊಬ್ಬರ ಅಷ್ಟೆ ಅಲ್ಲ. ಮನುಷ್ಯರ ಮಾತು, ನಗು, ಅಳು, ನೋಟ, ಸ್ಪರ್ಶ ಎಲ್ಲಾನೂ ಬೇಕು. ಹಳ್ಳಿಗಳೆಲ್ಲಾ ಖಾಲಿ ಖಾಲಿ ಆಗ್ತಿರೋವಾಗ ಅಲ್ಲಿನ ಮರಗಳು ಮೊದಲಿನಂತೆ ಹಣ್ಣು ಬಿಡಲಿಕ್ಕೆ ಹೇಗೆ ಸಾಧ್ಯ ಹೇಳು."

ಹೊತ್ತು ಹೋಗದೆಂದು ಹರಟೆ ಹೊಡೆಯುತ್ತಿದ್ದಾಗ ಗೆಳೆಯ ಸಾಗರ್ ಈ ಮಾತುಗಳನ್ನು ಹೇಳಿ ವಾರವೇ ಕಳೆದುಹೋಗಿತ್ತು. ಸ್ವತಃ ಆತನಿಗೆ ಇವೆಲ್ಲ ಮರೆತು ಹೋಗಿರಬೇಕು. ಅದ್ಯಾಕೋ ಏನೋ, ಆಕಾಶ್ ಗೆ ಗೆಳೆಯನ ಮಾತುಗಳು ಪದೇ ಪದೇ ನೆನಪಾಗತೊಡಗಿದವು. ಬೆಳಿಗ್ಗೆ ವಾಕ್ ಹೋಗುವಾಗ, ನಂತರ ಆಫೀಸಿಗೆ ಕಾರು ಓಡಿಸುವಾಗ, ತನ್ನ ಕ್ಯಾಬಿನ್ ಕಿಟಕಿಯಿಂದ ಕಾಣಿಸುವ ಪಾರ್ಕಿನತ್ತ ಕಣ್ಣು ಹೊರಳಿದಾಗ, ಸಂಜೆ ಕ್ಯಾಂಟೀನಿನಲ್ಲಿ ಗ್ರೀನ್ ಟೀ ಹೀರುವಾಗ, ರಾತ್ರೆ ಮನೆಯತ್ತ ಕಾರು ಓಡಿಸುವಾಗ, ಊಟದ ನಂತರ ಅಲ್ಫಾನ್ಸೋ ಹಣ್ಣುಗಳ ಹೋಳುಗಳನ್ನು ಚಪ್ಪರಿಸುವಾಗ - ಸಾಗರ್ ಹೇಳಿದ್ದರಲ್ಲಿ ಸತ್ಯವಿಲ್ಲದೇ ಇಲ್ಲ. ಪಕ್ಕದ ಮನೆಯಲ್ಲಿ ಸುಂದರಶ್ರೀ ಮರವಿದೆ. ಪ್ರತಿವರ್ಷವೂ ಸೊಂಪಾಗಿ ಹಣ್ಣು ಬಿಡುವುದನ್ನು ತಾನು ಕಳೆದ ಮೂರ್ನಾಲ್ಕು ವರ್ಷಗಳಿಂದ ನೋಡುತ್ತಿದ್ದೇನೆ. ನಮ್ಮ ಮನೆಯಲ್ಲಿಯೂ ಒಂದು ಜಾತಿ ಮಾವಿನ ಮರವಿತ್ತಲ್ಲ. ಈಸಾಡಿಯೋ, ಗಿಡುಗನ ಮನೆಯೋ ಅಥವಾ ಸುಂದರಶ್ರೀಯೋ..?? ಥತ್, ನೆನಪಾಗುತ್ತಲೇ ಇಲ್ಲ. ಆ ಮರ ಈಗಲೂ ಕಾಯಿ ಬಿಡ್ತಾ ಇದೆಯಾ ..?? ಅಥವಾ ಸಾಗರನ ತೋಟದ ಮರದಂತೆಯೇ ಪೂರಾ ಬಾಡಿ ಹೋಗಿದೆಯಾ..?? ನಾನ್ಯಾವತ್ತೂ ಅಮ್ಮ ಅಥವಾ ಅಪ್ಪನ ಬಳಿ ಇವೆಲ್ಲದರ ಕುರಿತು ಕೇಳುವುದೇ ಇಲ್ಲ.

ಚಿಕ್ಕಂದಿನಲ್ಲಿ ಬೇಸಿಗೆ ಬಂತೆಂದರೆ ಸಾಕು, ಇಡೀ ದಿನ ಮರಗಳ ಬುಡದಲ್ಲಿಯೇ ಇರುತ್ತಿದ್ದೆನಂತೆ. ಅಮ್ಮ ಯಾವಾಗಲಾದರೂ ಹೇಳುತ್ತಾ ಇರುತ್ತಾರೆ. ನೇರಳೆ, ಚಳ್ಳೆ, ಗೇರು, ಮಾವು, ಕೌಳಿ - ಹೀಗೆ ಒಂದರ ನಂತರ ಮತ್ತೊಂದು. ದಿನಕ್ಕೆ ಎರಡೆರಡು ಬಾರಿ ಎಲ್ಲ ಮರಗಳನ್ನೂ ಮಾತನಾಡಿಸಿಕೊಂಡು ಬರುತ್ತಿದ್ದೆನಂತೆ. "ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೂ ಬಾರದೇ ಅಲೆದಾಡುತ್ತಿದ್ದೆ. ಪಿಯುಸಿಯಲ್ಲಿ ರಿಸಲ್ಟ್ ಬಂದ ದಿನವೂ ಕಾಡಿನ ಸುತ್ತಾಟವನ್ನು ತಪ್ಪಿಸಿರಲಿಲ್ಲ. ಬೆಂಗಳೂರಿಗೆ ಹೋಗಿ ಎಂಜಿನಿಯರಿಂಗ್ ಸೇರಿದ ಮೇಲಿನಿಂದ ನೀನು ಕಾಡು ಸುತ್ತಲಿಕ್ಕೆ ಹೋಗಿಲ್ಲ." ಅಮ್ಮ ಯಾವಾಗಲೋ ಒಮ್ಮೆ ಹೇಳಿದ್ದರು.

ಅವತ್ತು ವಿಶ್ವ ಪರಿಸರ ದಿನ. ಎಲ್ಲ ಕಡೆಯೂ ಗಿಡನೆಡುವ, ಪರಿಸರದ ಕುರಿತು ಜಾಗೃತಿ ಮೂಡಿಸುವ, ಮಾನವನ ಕುರಿತಾಗಿ ಒಂದಿಷ್ಟು ಬೈಯ್ಯುವ ಕಾರ್ಯಕ್ರಮಗಳು. ತೋಟದ ಮಾವಿನ ಮರದ ನೆನಪು ಮತ್ತೆ ಮತ್ತೆ ಆಕಾಶನನ್ನು ಕಾಡತೊಡಗಿತು. ಮಧ್ಯಾಹ್ನದ ಲಂಚ್ ಹೊತ್ತಿಗೆ ಮ್ಯಾಂಗೋ ಜ್ಯೂಸ್ ಕುಡಿದಿದ್ದೇ ನೆನಪು ನೆತ್ತಿಗೇರಿತು. ಒಂದು ಬಾರಿ ಊರಿಗೆ ಹೋಗಿ ಆ ಮರವನ್ನು ನೋಡಿಯೇ ತೀರುವುದೆಂದು ನಿರ್ಧರಿಸಿ ಹೊರಟು ಬಂದುಬಿಟ್ಟ.

                                                            ********

ಹಲಸಿನ ಮರದಲ್ಲಿ ಕಾಯಿಗಳನ್ನು ಕಂಡ ಆಕಾಶನಿಗೆ ಅದೇನೋ ಒಂದು ಬಗೆಯ ಸಂತಸ. ಈ ಮರವಿನ್ನೂ ಬಾಡಿ ಹೋಗಿಲ್ಲವಲ್ಲ. ಇದು ಬಾಡಿ ಹೋಗದಂತೆ ಏನಾದರೂ ಮಾಡಬೇಕು. ಜೊತೆಗೆ ಆ ಮಾವಿನ ಮರಗಳೆಲ್ಲ ಮತ್ತೆ ಚಿಗುರುವಂತೆ ಮಾಡಬೇಕು. ಮುಂದಿನ ವರ್ಷ ಸ್ವಲ್ಪವಾದರೂ ಕಾಯಿ ಬಿಡುವಂತಾಗಬೇಕು. ಹಾಗಾಗಲು ಏನು ಮಾಡುವುದು..?? ಗೊತ್ತಿಲ್ಲ.

ರಾತ್ರಿ ಊಟದ ಸಮಯದಲ್ಲಿ ಅಪ್ಪನನ್ನು ಕೇಳಿದ ಆಕಾಶ್. "ಗದ್ದೆಯ ಮೇಲಿನ ಬೆಟ್ಟದಲ್ಲಿ ನೇರಳೆ ಮರವೊಂದಿತ್ತಲ್ಲ. ಈಗ ಅದು ಹಣ್ಣು ಬಿಟ್ಟಿದೆಯಾ..??"

"ಆ ಮರವನ್ನು ಕಡಿದು ಒಂದು ವರ್ಷದ ಮೇಲಾಯ್ತಲ್ಲ." ಅಪ್ಪ ಶಾಂತವಾಗಿ ಉತ್ತರಿಸಿದರು.

"ಯಾಕೆ...?? ಏನಾಗಿತ್ತು ಆ ಮರಕ್ಕೆ ..?? ಕಡಿದು ಹಾಕಿದ್ದೇಕೆ..??" ಆಕಾಶ್ ಗಾಬರಿಯಿಂದ ಕೇಳಿದ.

ಸವಿತಕ್ಕ ಬಾಯಿ ತೆಗೆದರು.
"ಆಗೋದೇನು. ಅದು ಹಣ್ಣು ಬಿಡುವುದನ್ನು ಬಿಟ್ಟು ಅದೆಷ್ಟೋ ವರ್ಷಗಳು ಕಳೆದವು. ಮೊದಲಾಗಿದ್ರೆ ನೀವು ಹುಡುಗರು ಅದರ ನೆರಳಲ್ಲೇ ದಿನ ಕಳೀತಾ ಇದ್ರಿ. ಈಗ ಯಾರು ಅದರತ್ತ ಕಾಲು ಹಾಕುವವರು ..?? ಎರಡು ವರ್ಷಗಳ ಹಿಂದೆ ಗೆದ್ದಲು ರೋಗ ಅಂಟಿಕೊಂಡ್ತು ಅದ್ಕೆ. ಹಾಗಾಗಿ ಕಡಿದು ಹಾಕಿದ್ರು. ಸ್ವಲ್ಪ ಉಪ್ಪಿನಕಾಯಿ ಹಾಕಲಾ ..??"

ಆಕಾಶನಿಗೆ ಏನು ಹೇಳಲೂ ತೋಚಲಿಲ್ಲ.
ಒಂದು ಚಮಚ ಉಪ್ಪಿನಕಾಯಿಯನ್ನು ಮಗನಿಗೆ ಹಾಕಿ ಸವಿತಕ್ಕ ಮುಂದುವರೆಸಿದರು.
"ತೋಟದ ಪಕ್ಕದ ಬೆಟ್ಟದಲ್ಲಿ ನಮ್ಮದೊಂದು ಅಪ್ಪೆ ಮಾವಿನ ಮರವಿದೆಯಲ್ಲ. ಅದಕ್ಕೂ ಒಂದು ಬಗೆಯ ರೋಗ ಬಂದಿದೆ. ಈ ಮಳೆಗಾಲ ಮುಗಿದ ನಂತರ ಕಡಿಸಿಬಿಡಿ ಒಡಿಯಾ ಅಂತ ಆಳು ಹೇಳ್ತಿದ್ದ."

ಬಾಯಿಯಲ್ಲಿದ್ದ ಅಪ್ಪೆ ಮಿಡಿ ಕಹಿ ಕಹಿಯೆನಿಸಿತೊಡಗಿತು ಆಕಾಶನಿಗೆ.


3 comments: