Tuesday, 7 June 2016

ಬ್ಲ್ಯಾಕ್ ಫ್ರೇಮ್


"ಏ ರಾಮು, ಎಷ್ಟ್ ಸಲ ಹೇಳ್ಬೇಕೋ ನಿಂಗೆ. ಯಾವತ್ತೂ ಸ್ಪೆಕ್ಟ್ಸ್ ಹಾಕ್ಕೊಂಡೇ ಇರ್ಬೇಕು, ಮಲಗೋ ಹೊತ್ತು ಬಿಟ್ಟು ಉಳಿದ ಟೈಮ್ ಅಲ್ಲಿ ಬರಿಗಣ್ಣಲ್ಲಿ ಇರ್ಬಾರ್ದು. ದಿನಕ್ಕೆ ಒಂದು ನೂರು ಸಲ ಹೇಳ್ತಾನೆ ಇರೋದಾಯ್ತು. ಒಂದ್ಸಲ ಹೇಳದ್ರೆ ತಿಳ್ಕೊಬೇಕು. ನೀನೇನು ಪಾಪುನಾ...??"

"ಬೆಳಿಗ್ಗೆ ಬೆಳಿಗ್ಗೆ ಯಾಕೆ ಬೈತಿದೀಯಾ ಅವಂಗೆ ..??" ಕೈಯಲ್ಲಿ ಬ್ರಷ್ ಹಿಡಿದುಕೊಂಡು ಆಕಳಿಸುತ್ತಾ ಜಗುಲಿಗೆ ಬಂದ ವಿನಯ್ ಹೆಂಡತಿಗೆ ಕೇಳಿದ.

ಸುಧಾ ಗಂಡನತ್ತ ನೋಡದೇ ಮಾತು ಮುಂದುವರೆಸಿದಳು, "ಮೊನ್ನೆ ಅವನ ಕ್ಲಾಸ್ ಟೀಚರ್ ಮೀಟ್ ಮಾಡಕೆ ಹೋಗಿದ್ನಲ್ಲ, ಅವರೇನಂದ್ರು ಗೊತ್ತಾ ..?? 'ರಾಮು ಯಾಕೆ ಹೀಗ್ ಮಾಡ್ತಾನೆ ಗೊತ್ತಿಲ್ಲ. ಕ್ಲಾಸ್ ನಡೆಯೋವಾಗ ಕನ್ನಡಕ ಹಾಕ್ಕೊಳಲ್ಲ. ಬೇಕಂತಲೇ ತೆಗೆದು ಬ್ಯಾಗ್ ಒಳಗಡೆ ಹಾಕಿಡ್ತಾನೆ. ಆಮೇಲೆ ಬೋರ್ಡ್ ಮೇಲೆ ಬರೆದದ್ದು ಸರಿಯಾಗಿ ಕಾಣ್ಸಲ್ಲ, ನೋಟ್ ಬುಕ್ ಅಲ್ಲಿ ತಪ್ಪು ತಪ್ಪಾಗಿ ಬರೆದುಕೊಳ್ತಾನೆ. ಪಾಠ ಓದೋವಾಗ ತಪ್ಪು ತಪ್ಪು ಓದ್ತಾನೆ. ಕನ್ನಡಕ ಹಾಕ್ಕೊ ಅಂತಂದ್ರೆ ಆ ಕ್ಷಣಕ್ಕೆ ಹಾಕ್ಕೊಳ್ತಾನೆ. ಐದೇ ನಿಮಿಷಗಳು, ಮತ್ತೆ ತೆಗೆದು ಒಳಗಿಡ್ತಾನೆ. ನಾನು ಗದರಿಸಿ ಹೇಳಿದರೂ ಹೀಗೇ ಆಡ್ತಾನೆ.' ನೀವೇ ಹೇಳ್ರಿ. ಇವನು ಬೇಕಂತಲೇ ಹೀಗಾಡೋದಲ್ವಾ ..?? ಈ ಮೊದಲು ನಾನೂ ಸಹ ಇವ ಹಾಕ್ಕೊಳ್ಳೋದನ್ನ ಮರೆತು ಬಿಡ್ತಾನೆ ಅಂದ್ಕೊಳ್ತಿದ್ದೆ. ಊಹ್ಞೂಂ, ಬೇಕಂತಲೇ ಮಾಡೋ ಶನಿ ಅದು. ಕನ್ನಡಕ ಹಾಕ್ಕೊಂಡ್ರೆ ಇವನ ಕಣ್ಣೇ ಅಲ್ವಾ ಸರಿ ಆಗೋದು. ಇನ್ನೇನು ನಮಗೆ ಲಾಟರಿ ಹೊಡೆಯತ್ತಾ ..?? ಹೇಳಿದ್ದೇ ಅರ್ಥ ಆಗಲ್ಲ ನಿಮ್ಮ ಮಗಂಗೆ. ಇನ್ನೊಂದ್ಸಲ ಹೀಗೆ ಆಟ ಆಡು. ಇದೆ ನಿಂಗೆ ನನ್ನ ಕೈಯಲ್ಲಿ." ತುಸು ಸಿಡುಕಿನಿಂದ ಮಗನ ತಲೆಯ ಮೇಲೆ ಮೊಟಕಿ ಒಳಗೆ ಹೋದಳಾಕೆ.

"ಪುಟ್ಟಾ, ಯಾಕೆ ಹೀಂಗ್ ಮಾಡ್ತೀಯೋ ಮರಿ..??" ಮಗನ ಬೆನ್ನು ನೇವರಿಸುತ್ತಾ ಶಾಂತವಾಗಿ ಕೇಳಿದ ತಂದೆ.

ಕನ್ನಡಕದ ಧೂಳು ಒರೆಸುತ್ತಿದ್ದ ಹುಡುಗ ರಾಮಕೃಷ್ಣ ಒಮ್ಮೆ ತಲೆ ಎತ್ತಿ ನಿರ್ಭಾವುಕನಾಗಿ ತಂದೆಯತ್ತ ನೋಡಿದ. ಏನೊಂದೂ ಮಾತನಾಡದೇ ಪುನಃ ತಲೆತಗ್ಗಿಸಿ ಧೂಳು ಒರೆಸುವುದನ್ನು ಮುಂದುವರೆಸಿದ.

                                                                        ******

ಧಪ್ ಧಪ್ ಧಪ್ ಧಪ್.
ತೆಗೆಯದೇ ತುಂಬಾ ದಿನಗಳಾಗಿದ್ದಕ್ಕೆ ಧೂಳು ಮೆತ್ತಿಕೊಂಡಿದೆ ಇದಕ್ಕೆ.
ಪುಣ್ಯಕ್ಕೆ ಶಾಯಿ ಇನ್ನೂ ಖಾಲಿಯಾಗಿಲ್ಲ.

"ಆಗ ನಂಗೆ ಏಳು ಅಥವಾ ಎಂಟು ವರ್ಷಗಳಿರಬಹುದು. ಅಮ್ಮ ಅದೆಷ್ಟು ಬೈತಿದ್ದಳು ನಂಗೆ. ಮೊದಲೆಲ್ಲ ಅಪ್ಪ ನನ್ನ ಪರವಾಗಿ ನಿಲ್ತಿದ್ದ. ಆದರೆ ಕೊನೆಯ ಕೊನೆಗೆ ಅವನೂ ಬೈಯ್ಯಲು ಶುರು ಮಾಡಿದ. ಸುಮಾರು ಎರಡು ವರ್ಷಗಳ ಕಾಲ ಹೀಗೆ ಬೈಸಿಕೊಂಡಿದ್ದೇನೆಂಬ ನೆನಪು. ಶಾಲೆಯಲ್ಲಿ ಟೀಚರುಗಳು ಎಷ್ಟು ಸಲ ಬೈದಿದ್ದರೆಂದು ಲೆಕ್ಕ ಇಟ್ಟವರಾರು ..??

ನನಗೆ ಮಂದ ದೃಷ್ಟಿಯ ಸಮಸ್ಯೆಯಿತ್ತು. ಲಾಂಗ್ ಸೈಟೆಡ್ ನೆಸ್ ಅಂತಾರಲಾ, ಆ ಪ್ರಾಬ್ಲಮ್ ಇತ್ತು. ಕೆಲವು ವರ್ಷಗಳ ಮಟ್ಟಿಗೆ ಸದಾ ಕಾಲ ಸ್ಪೆಕ್ಟ್ಸ್ ಧರಿಸಿದ್ರೆ ದೃಷ್ಟಿ ತಕ್ಕ ಮಟ್ಟಿಗೆ ಸ್ಪಷ್ಟವಾದೀತು ಎಂಬುದಾಗಿ ಡಾಕ್ಟರ್ ಅಂಕಲ್ ಹೇಳಿದ್ದರು. ಹಾಗಾಗಿ ಅಮ್ಮ ಒಂದು ರೂಲ್ಸ್ ಮಾಡಿಬಿಟ್ಟಿದ್ದಳು. ಯಾವತ್ತಿಗೂ ಸ್ಪೆಕ್ಟ್ಸ್ ಇಲ್ಲದೇ ಇರತಕ್ಕದ್ದಲ್ಲ ಎಂಬುದಾಗಿ.

ನನಗೇಕೋ ಆ ಸ್ಪೆಕ್ಟ್ಸ್ ಹಾಕಿದ್ರೆ ಎಲ್ಲವೂ ಇನ್ನಷ್ಟು ಮಸುಕು ಮಸುಕಾಗಿ ಕಾಣಿಸುತ್ತಿತ್ತು. ಮೊದಲು ಕನ್ನಡಕದ ಗಾಜಿಗೆ ಧೂಳು ಮೆತ್ತಿಕೊಳ್ಳುವುದರಿಂದ ಹಾಗಾಗುತ್ತದೆಯೇನೋ ಎಂದುಕೊಂಡೆ. ಪದೇ ಪದೇ ಕನ್ನಡಕವನ್ನು ಒರೆಸಿಕೊಳ್ಳುವ ಚಟ ಅಂಟಿತು. ಊಹ್ಞೂಂ, ಇದು ಗಾಜಿನ ಸಮಸ್ಯೆಯೇ ಅಲ್ಲ. ಆನಂತರದಿಂದ ಕನ್ನಡಕ ಧರಿಸುವುದನ್ನೇ ಕಡಿಮೆ ಮಾಡತೊಡಗಿದೆ. ಅಮ್ಮ, ಅಪ್ಪ, ಟೀಚರ್ ಗದರಿದಾಗ ಅವರ ಎದುರಲ್ಲಿ ಹಾಕಿಕೊಳ್ಳುವುದು. ಮರುಕ್ಷಣವೇ ತೆಗೆದಿಟ್ಟು ಬಿಡುವುದು.

ಎರಡು ವರ್ಷಗಳು ಹೀಗೆ ನಾಟಕವಾಡಿದ್ದೆ. ಆಮೇಲೆ ಯಾಕೋ ಗೊತ್ತಿಲ್ಲ. ಒಮ್ಮೆಲೇ ಕನ್ನಡಕ ಹಾಕಿಕೊಂಡು ಇರೋಣ ಎನ್ನಿಸಿತು, ಹಾಕಿಕೊಳ್ಳತೊಡಗಿದೆ. ಗದರಿ ಸುಸ್ತಾಗುತ್ತಿದ್ದವರೆಲ್ಲಾ ಸಮಾಧಾನ ಪಟ್ಟರು. ಆಗ ಮೊದಲಿನಂತೆ ಮಸುಕಾಗಿ ಕಾಣುವ ಕಿರಿಕಿರಿ ತಲೆದೋರಲಿಲ್ಲವೆನಿಸುತ್ತದೆ."

                                                                      ******

"ಡಾಕ್ಟರ್ ಹೇಳಿಲ್ವಾ ಪಪ್ಪಾ..?? ಈ ವಯಸ್ಸಿಗೆ ನಿಮ್ಮ ವಿಷನ್ ಪೆರಫೆಕ್ಟ್ ಆಗಿಯೇ ಇದೆ, ಸ್ಪೆಕ್ಟ್ಸ್ ಏನೂ ಬೇಡಾ ಅಂತ. ಆದರೂ ಯಾಕೆ ಆ ಬ್ಲ್ಯಾಕ್ ಕಲರ್ ಆ್ಯಂಡ್ ಫ್ರೇಮ್ ಸ್ಪೆಕ್ಟ್ಸ್ ಹಾಕ್ಕೊಳ್ತೀರಿ ಅಂತ..?? ಅದನ್ನು ಹಾಕ್ಕೊಂಡೇ ವಿಷನ್ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ..?? ಈ ವಯಸ್ಸಿಗೆ ಅದೆಲ್ಲಾ ಬೇಕಾ ಪಪ್ಪಾ ..??" ಶಶಾಂಕ ಅಪ್ಪನ ಮನವರಿಕೆ ಮಾಡುವ ಧಾಟಿಯಲ್ಲಿ ಮೆಲ್ಲಗೆ ಹೇಳುತ್ತಿದ್ದ.

ಅವನಿಗೆ ನಿಜಕ್ಕೂ ವಿಚಿತ್ರವೆನಿಸಿತ್ತು. ದೃಷ್ಟಿ ಸರಿಯಿಲ್ಲದವರು ಧರಿಸಬೇಕೆಂದರೆ ಸರಿ. ಈ ಇಳಿ ವಯಸ್ಸಿನಲ್ಲೂ ಇಷ್ಟು ಚೆನ್ನಾಗಿ ಕಣ್ಣು ಕಾಣಿಸೋ ನಮ್ಮಪ್ಪ ವಿನಾಕಾರಣ ಸ್ಪೆಕ್ಟ್ಸ್ ಹಾಕ್ಬೇಕು ಅಂತ ಬಯಸೋದು ಅಂದ್ರೆ ಏನರ್ಥ ..?? ಇವರಿಗೇನಾದರೂ ಭ್ರಮೆ, ಅರಳು-ಮರುಳು ಅನ್ನೋದೆಲ್ಲ ಶುರುವಾಗಿದೆಯಾ ಹೇಗೆ ..??

ಮೊದಲು ಮನೆಯಿಂದ ಹೊರಗಡೆ ಹೋಗುವಾಗಲೆಲ್ಲ ಹಾಕ್ಕೊಳ್ತಿದ್ರು. ಧೂಳು ಇರತ್ತಲ್ವಾ, ಹಾಕ್ಕೊಂಡ್ರೇನೇ ಒಳ್ಳೇದು ಅಂತಾ ಅನ್ಬೋದು. ಈಗ ಮನೆಯ ಒಳಗಡೆ ಇರೋವಾಗಲೂ ಹಾಕ್ಕೊಳೋ ಚಟ. ಕಳೆದೆರಡು ತಿಂಗಳುಗಳಿಂದ ಶುರುವಾಗಿದೆ ಇದು. ಜೊತೆಗೆ ಬ್ಲ್ಯಾಕ್ ಕಲರ್ ದು ಮತ್ತೆ ಫ್ರೇಮಿನದೇ ಬೇಕು. ಹಠ ಹಿಡಿದು ಪುಟ್ಟನನ್ನು ಶಾಪ್ ಗೆ ಕರೆದೊಯ್ದು ಖರೀದಿ ಮಾಡ್ಕೊಂಡು ಬಂದಿದಾರೆ. ಈ ವಯಸ್ಸಾದವರಿಗಾದರೂ ಅದೇನೆಲ್ಲಾ ಹೊಸ ಚಟ, ಹಠ ಅಂಟಿಕೊಳ್ಳತ್ವೆ.

                                                                           ******

"ಊಹ್ಞೂಂ, ನಂಗೆ ಈ ದೃಷ್ಟಿ ಚೆನ್ನಾಗಿ ಇರೋದು ಬೇಕಿಲ್ಲ. ಕಣ್ಣುಗಳು ಮಂಜಾಗಿ ಎದುರಿನದೆಲ್ಲಾ ಮಸುಕಾಗಿ ಕಾಣಿಸಿದ್ದರೆ ಎಷ್ಟು ಹಾಯಾಗಿರ್ತಿತ್ತು. ಈ ಬಯಕೆಯೇ ಕನ್ನಡಕ ಹಾಕಿಕೊಳ್ಳೋ ಚಟಕ್ಕೆ ನನ್ನನ್ನು ದೂಡಿದ್ದು. ಗಾಜು ಬಿಳಿಯದು ಇದ್ದರೆ ಎಲ್ಲವೂ ಬಣ್ಣ ಬಣ್ಣವಾಗಿಯೇ ಕಾಣಿಸುತ್ತವೆ. ಬೇಡ, ಈ ಬಣ್ಣ ಬಣ್ಣದ ಲೋಕವನ್ನು ನನ್ನಿಂದ ನೋಡಲಿಕ್ಕಾಗುವುದಿಲ್ಲ. ಹಾಗಾಗಿಯೇ ಪುಟ್ಟನನ್ನು ಕರೆದೊಯ್ದು ಕಪ್ಪು ಗಾಜಿನ ಕನ್ನಡಕವನ್ನು ತೆಗೆದುಕೊಂಡು ಬಂದೆ. ಕಪ್ಪು ಫ್ರೇಮ್ ಇದ್ದಿದ್ದು ಮತ್ತೂ ಇಷ್ಟವಾಯಿತು. ಅದನ್ನೇ ಖರೀದಿಸಿದೆ.

ಡಾಕ್ಟರ್ ಹೇಳುತ್ತಾರೆ ಎಲ್ಲವನ್ನೂ. ಅಲ್ಲ, ಏನು ಮಾಡಲಿ ಈ ಸ್ಪಷ್ಟವಾದ ದೃಷ್ಟಿಯನ್ನು ಇಟ್ಟುಕೊಂಡು ..?? ಎಪ್ಪತ್ತೈದು ಕಳೆಯಿತಲ್ಲ ನನಗೆ. ಇಷ್ಟು ವರ್ಷಗಳ ಬದುಕಿನಲ್ಲಿ ಏನೇನೆಲ್ಲಾ ನೋಡಿಯಾಯಿತು, ಮಾಡಿಯಾಯಿತು. ಈಗ ಮತ್ತೇನೂ ತಾನೇ ನೋಡುವುದು ಬಾಕಿ ಇದೆಯೆಂದು ದೃಷ್ಟಿ ಸ್ಪಷ್ಟವಾಗಿರಬೇಕು. ಆ ದೇವರಿಗೆ ನನ್ನ ಕಣ್ಣನ್ನು ಮಂಜಾಗಿಸಲು ಮನಸ್ಸಿರದಿದ್ದರೆ ಪರವಾಗಿಲ್ಲ. ಈ ಬಣ್ಣ ಬಣ್ಣದ ಪ್ರಪಂಚವನ್ನು ದಿಟ್ಟಿಸುವ ಕರ್ಮವನ್ನು ನಾನೇ ಹೇಗಾದರೂ ತಪ್ಪಿಸಿಕೊಳ್ಳುತ್ತೇನೆ.

ಅವಳು ಹೊರಟುಹೋಗಿ ಎರಡು ತಿಂಗಳುಗಳ ಹಿಂದಷ್ಟೇ ಒಂದು ವರ್ಷವಾಯಿತು. ಅವಳಿಗೆ ಅರವತ್ತು ತುಂಬುತ್ತಿದ್ದಂತೆ ದೃಷ್ಟಿ ಸ್ವಲ್ಪವೇ ಮಂಜಾಗಿತ್ತು. ತೀರಾ ಏನೂ ಕಾಣಿಸದಷ್ಟು ಕಣ್ಣು ಹಾಳಾಗಿರಲಿಲ್ಲ. ಈ ಒಂದು ವರುಷ ಒಂದು ಯುಗದಂತೆ ಕಳೆಯಿತು. ನನ್ನ ಬದುಕಿನ ಕಣ್ಣಿಗೆ ದೃಷ್ಟಿಯಾಗಿದ್ದವಳು. ಈಗೀಗ ಅವಳ ಗೈರು ನನಗೆ ಅತೀವ ಬೇಸರ, ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಏನನ್ನು ನೋಡಲಿಕ್ಕೂ ಬೇಸರ. ಹಾಳಾದ ಕಣ್ಣು ಚಿಕ್ಕಂದಿನಲ್ಲಿ ಸಮಸ್ಯೆ ಹೊಂದಿದ್ದು ಈಗ ಆರೋಗ್ಯವಾಗಿದೆ. ಯಾರಿಗೆ ಬೇಕು ಅಂತ..??"

ಗಡಿಯಾರ ಹತ್ತು ಹೊಡೆಯುತ್ತಿದೆ.
ಬರೆದಿದ್ದು ಸಾಕು, ಮಲಗುವ.
ದೀಪ ಉರಿಯುತ್ತಿರುವುದು ಕಂಡರೆ ಸೊಸೆ ಕೂಗು ಹಾಕುತ್ತಾಳೆ.


5 comments:

  1. Kannadakadolagana a kannalli estella bhavagalu... chandiddu.. lahariya ee lahari

    ReplyDelete
  2. Kannadakadolagana a kannalli estella bhavagalu... chandiddu.. lahariya ee lahari

    ReplyDelete
  3. ಕನ್ನಡಕದ ಅನುಭವಾಮೃತಸಾರ ಚೆನ್ನಾಗಿದೆ.

    ReplyDelete