Thursday, 30 June 2016

ಆಲಪದ್ಮ


"ಮಾತಾಡ್ತೀನಿ ಅನ್ನೋದನ್ನೇ ದೊಡ್ಡ ರೋಗ ಅನ್ನೋ ನಿಮಗೆ ಮಾತನಾಡದೇ ಇರುವವರು ರೋಗಿಗಳಾಗಿ ಕಾಣ್ಸಲ್ವಾ ..??"

ಭಾವನಿಯ ಈ ಪ್ರಶ್ನೆ ಮನದಲ್ಲಿ ಮರಳಿ ಮರಳಿ ಸುಳಿಯಾಗಿ ಸುತ್ತುತ್ತಿತ್ತು. ನಿಜ ತಾನೇ, ಒಬ್ಬೊಬ್ಬರೇ ಮಾತನಾಡುವುದು ಸಮಸ್ಯೆ ಅಂತಾದರೆ, ಒಬ್ಬರೊಂದಿಗೂ ಮಾತನಾಡದೇ ಇರುವುದು ಕೂಡ ಸಮಸ್ಯೆಯೇ ಅಲ್ವೇ ..?? ಮನಃಶ್ಯಾಸ್ತ್ರದಲ್ಲಿ ಪುಸ್ತಕಗಳನ್ನು ಓದಿ ಮೂಡುವ ಸಂದೇಹಗಳಿಗಿಂತಲೂ ವ್ಯಕ್ತಿತ್ವಗಳ ವೈಚಿತ್ರ್ಯವನ್ನು ಕಂಡು ಕಾಡುವ ಕುತೂಹಲಗಳೇ ಹೆಚ್ಚು. ಇಂತಹ ಪ್ರಶ್ನೆಗಳಿಗೆ ಉತ್ತರ ಯಾವ ಮಹಾ ವೈಜ್ಞಾನಿಕ ಗ್ರಂಥದಲ್ಲಿಯೂ ಸಿಗಲಾರದು. ಮಸ್ತಕದಲ್ಲಿ ಅನುಭವಗಳು ಬರೆದಿಟ್ಟ ಪುಸ್ತಕಗಳನ್ನು ತಿರುವಿ ಹಾಕಿದರೆ ದೊರಕಬಹುದಷ್ಟೆ.

"ನನಗೆ ಹುಚ್ಚು ಹಿಡಿದಿಲ್ಲ ಆಂಟಿ. ಹೌದು, ನಾನು ಒಬ್ಳೇ ಮಾತಾಡ್ತೀನಿ, ನಗಾಡ್ತೀನಿ, ರೇಗ್ತೀನಿ, ಅಳ್ತೀನಿ. ಆದರೆ ಅದೇನೂ ಖಾಯಿಲೆಯಲ್ಲ. ಒಂಥರಾ ಚಟ ಅಂದ್ಕೊಳಿ. ಹಾಗೆಲ್ಲಾ ಮಾಡೋದ್ರಿಂದ ನಾನು ಆರಾಮಾಗಿ ಇರ್ತೀನಿ. ನನಗೆ ಜಾಸ್ತಿನೇ ಮಾತನಾಡ್ಬೇಕು, ಹೊಟ್ಟೆ ನೋವು ಬರೋವಷ್ಟು ನಗಾಡ್ಬೇಕು. ಕಣ್ಣು ಕೆಂಪಾಗೋವಷ್ಟು ಅಳಬೇಕು, ಮುಖ ಬಿಗಿದುಕೊಳ್ಳೊವಷ್ಟು ಸಿಟ್ಟು ಮಾಡ್ಕೊಬೇಕು. ನೀವ್ ಬೇಕಾದ್ರೆ ಇದನ್ನ ಖಾಯಿಲೆ ಅಂತನ್ನಿ, ಆದರೆ ಹುಚ್ಚು ಅನ್ಬೇಡಿ. ನೀವು ಟ್ರೀಟ್‌ಮೆಂಟ್ ನೀಡಲೇಬೇಕಾದ ಅದೆಷ್ಟೋ ಅಸಲಿ ಹುಚ್ಚರು ಇದಾರೆ. ಅವರಿಗೆ ಹುಚ್ಚರ ಪಟ್ಟ ಕಟ್ಟಿ ಏನ್ ಮಾಡ್ತಿರೋ ಮಾಡ್ಕೊಳಿ. ನನ್ನ ಪಾಡಿಗೆ ನನ್ನನ್ನು ಬಿಟ್ಬಿಡಿ."

ಸ್ವಲ್ಪ ಹಿಸ್ಟರಿಕ್ ಆಗಿಯೇ ಮಾತನಾಡಿದ್ದಳು ಭಾವನಿ. ಅವಳು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎನ್ನುವಂತೇನೂ ಇರಲಿಲ್ಲ. ಬಟ್, ಅವಳ ಬದುಕಿನಲ್ಲಿ ಕೆಲವು ಸಮಸ್ಯೆಗಳಿರುವುದು ನಿಜವೆಂದು ನನಗೆ ಮನವರಿಕೆಯಾಗಿತ್ತು. ಅದೇನೆಂದು ಬಾಯಿ ಬಿಡಿಸಬೇಕೆನ್ನುವಷ್ಟರಲ್ಲಿ ಕೂಗಾಡಿ ಹೊರಟು ಹೋಗಿದ್ದಳು. ಕೀ ತೋರಿಸಿದರೆ ಸಾಕು, ಈ ಆಂಟಿ ತನ್ನ ಮನದ ಬಾಗಿಲನ್ನು ತೆರೆಯುತ್ತಾರೆ ಎಂದು ಅವಳ ಗಮನಕ್ಕೆ ಬಂದಿರಬೇಕು. ಹುಡುಗಿ ಜಾಣೆ.

                                                         ******

ಕಳೆದ ವಾರ ಪದ್ಮಜಾ ಫೋನ್ ಮಾಡಿದ್ದಳು. ನಾವಿಬ್ಬರೂ ಕಾಲೇಜಿನಲ್ಲಿ ಕ್ಲಾಸ್ ಮೇಟ್ಸ್.

"ಮುಂದಿನ ವಾರ ಮಗಳ ಬರ್ತ್ ಡೇ ಫಂಕ್ಷನ್ ಇದೆ. ನೀನು ಮಿಸ್ ಮಾಡದೇ ಬರಬೇಕು ಕುಮುದಾ. ನಾವಿಬ್ಬರೂ ಭೇಟಿಯಾಗಲಿಕ್ಕೆ ಇದೊಂದು ನೆಪ ಅಂತಾನೇ ಅಂದ್ಕೊ. ಬಟ್ ಡೋಂಟ್ ಮಿಸ್ ಹಾ."

ಆ ವೀಕೆಂಡ್ ನನಗೆ ಬೇರೆ ಯಾವ ಘನಂಧಾರಿ ಕೆಲಸಗಳೂ ಇರಲಿಲ್ಲವಾದ್ದರಿಂದ ಬರ್ತ್ ಡೇ ಫಂಕ್ಷನ್ನಿಗೆ ಹೋಗಿದ್ದೆ. ಅಂದೇ ನಾನು ಮೊದಲು ಭಾವನಿಯನ್ನು ನೋಡಿದ್ದು. ೨೪-೨೫ರ  ವಯಸ್ಸು. ಎಂ. ಬಿ. ಎ. ಮುಗಿಸಿ ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ. ಸಾಧಾರಣ ಸೌಂದರ್ಯ. ಸ್ವಲ್ಪ ಮೈ ತುಂಬಿಕೊಂಡು ದಪ್ಪ ಕಾಣಿಸ್ತಾಳೆ. ಅಂದು ಅವಳನ್ನು ಕಂಡಾಗ ತೀರಾ ಸಿಂಪಲ್ ಹುಡುಗಿ ಎಂಬ ಅಭಿಪ್ರಾಯ ಗಟ್ಟಿಯಾಗಿತ್ತು. ಆದರೆ ನಂತರದಲ್ಲಿ ಅವಳ ಅಮ್ಮ ನನ್ನೊಡನೆ ಹೇಳಿದ ಮಾತುಗಳು ಬೇರೆಯೇ ಆಗಿದ್ದವು.

"ನಮ್ಮ ಭಾವನಿ ಕಳೆದ ಐದಾರು ತಿಂಗಳುಗಳಿಂದ ವಿಚಿತ್ರವಾಗಿ ಆಡ್ತಿದಾಳೆ. ತನ್ನಷ್ಟಕ್ಕೆ ತಾನೇ ನಗಾಡೋದು, ಒಬ್ಬೊಬ್ಳೇ ಮಾತಾಡೋದು. ನಮ್ಮೆದುರಿಗೆ ಸರಿಯಾಗೇ ಇರ್ತಾಳೆ. ನಾವು ಮನೇಲಿ ಇಲ್ಲದಿದ್ದಾಗ ಹೀಗೆಲ್ಲ ಮಾಡ್ತಾಳಂತೆ. ಕೆಲಸದವ್ಳು ಹೇಳದ್ಲು. ಅವ್ಳೇನಾದ್ರೂ ಸುಳ್ಳು ಹೇಳ್ತಿದಾಳಾ ಅಂತ ನಾನೇ ತುಂಬಾ ಸಲ ಅವಳನ್ನ ಗಮನಿಸ್ದೆ. ಕೆಲಸದ ಹೆಂಗ್ಸು ಹೇಳಿದ್ದು ನಿಜಾನೆ."

"ಭಾವನಿ ಹತ್ರಾನೆ ಒಮ್ಮೆ ಈ ಬಗ್ಗೆ ಮಾತಾಡಿ ನೋಡ್ಬೇಕಿತ್ತು."

"ಇನ್ ಡೈರಕ್ಟ್ ಆಗಿ ಕೇಳ್ದೆ. ಅವ್ಳು ಹಾರಿಕೆ ಉತ್ರ ಕೊಟ್ಳು. ನಂಗೆ ಸಣ್ಣಕೆ ಚಿಂತೆ ಹತ್ಕೊಂಡಿದೆ ಕಣೇ. ಇಪ್ಪತ್ತೈದು ವರ್ಷದವ್ಳು ಹೀಗೆಲ್ಲಾ ಆಡ್ತಾಳೆ ಅಂತ ನಾಲ್ಕು ಜನಕ್ಕೆ ಗೊತ್ತಾದ್ರೆ..?? ಇವ್ಳ ಮುಂದಿನ ಜೀವನ ಹೇಗೆ ಸಾಗ್ಬೇಕು ..?? ನಾನು ಯಜಮಾನರ ಹತ್ರಾನೂ ಈ ವಿಷ್ಯ ಹೇಳಿಲ್ಲ. ಏನೂ ಮಾಡೋದಪ್ಪ ಅಂತಾ ಯೋಚಿಸ್ತಾ ಇರೋವಾಗ ನಿನ್ನ ನೆನಪಾಯ್ತು. ನೀನು ಸೈಕಿಯಾಟ್ರಿಸ್ಟ್ ಅಲ್ವಾ ..?? ಅವಳನ್ನ ಹೆಂಗಾದ್ರೂ ಸರಿ ಮಾಡು ಕುಮುದಾ."

ಮೂರ್ನಾಲ್ಕು ದಿನಗಳ ನಂತರ ಅದೊಂದು ಕಾರ್ಯಕ್ರಮಕ್ಕೆ ಭಾವನಿ ಹೊರಟು ನಿಂತಾಗ 'ಕುಮುದಾ ಆಂಟಿಗೂ ಭರತನಾಟ್ಯ ಇಷ್ಟ, ಅವರೊಡನೆ ಹೋಗು' ಎಂದು ಪದ್ಮಜಾ ನನ್ನನ್ನು ಜೊತೆ ಮಾಡಿ ಕಳುಹಿಸಿದ್ದಳು. ಅದರ ಮರುದಿನವೇ ಮತ್ತೊಮ್ಮೆ ಭೇಟಿಯಾಗಿದ್ದ ಭಾವನಿ "ನನ್ನ ಪಾಡಿಗೆ ನನ್ನನ್ನು ಬಿಟ್ಬಿಡಿ" ಎಂದು ಕೂಗಾಡಿ ಹೋಗಿದ್ದು.

                                                          ******

"ನಾನು ಮಾತಾಡ್ತೀನಿ ಅನ್ನೋದನ್ನು ಯಾಕೆ ಅಂತಾ ಕೇಳೋ ಬದ್ಲು ಯಾರ ಜೊತೆ ಅಂತ ಕೇಳಿದ್ರೆ ಚೆನ್ನಾಗಿರ್ತಿತ್ತು."

ಭಾವನಿಯೊಂದಿಗೆ ಇನ್ನೊಮ್ಮೆ ಮಾತನಾಡ್ಬೇಕಲ್ಲ, ಹೇಗೆ ಮಾತನಾಡಿಸೋದು ಎಂದುಕೊಳ್ಳುತ್ತಲೇ ಎರಡು ದಿನ ಕಳೆದಿದ್ದೆ. ನನ್ನನ್ನು ಆಶ್ಚರ್ಯಗೊಳಿಸಲೆಂಬಂತೆ ಅವಳಾಗಿಯೇ ಭೇಟಿಯಾಗಲು ಬಂದಿದ್ದಳು. ತಾನೇ ಮಾತನಾಡಲು ಶುರು ಮಾಡಿದಳು.

"ನನ್ನ ಇಬ್ಬರು ಗೆಳತಿಯರಿದ್ದಾರೆ. ಅವರಿಬ್ಬರೂ ಈಗ ಕಾಲೇಜು ಓದ್ತಿದಾರೆ. ಒಬ್ಬಳು ಬಿ.ಕಾಂ. ಇನ್ನೊಬ್ಬಳು ಬಿ.ಎ. ಪುಣ್ಯವಂತರು ಅವರು. ನನ್ನಂತೆ ಎಂಜಿನಿಯರಿಂಗ್, ಎಂ.ಬಿ.ಎ. ಎಂದು ಓದಿ ಓದಿ ಗುಡ್ಡೆ ಹಾಕುವ ಕರ್ಮವಿಲ್ಲವಲ್ಲ. ಒಬ್ಬಳದು ಈಗಷ್ಟೇ ಜ್ಯೂನಿಯರ್ ಮುಗಿದಿದೆ. ಇನ್ನೊಬ್ಬಳು ಬರುವ ವರ್ಷ ಸೀನಿಯರ್ ಪರೀಕ್ಷೆ ಬರಿತಾಳೆ. ಅವರಿಬ್ಬರೂ ನನ್ನ ಬಳಿ ಆ ದಿನದ ಭರತನಾಟ್ಯ ಕ್ಲಾಸಿನಲ್ಲಿ ಏನೆಲ್ಲಾ ಕಲಿತೆವು ಎಂಬುದಾಗಿ ಮಾತಾಡ್ತಾರೆ. ಅವರಿಗೆ ಏನಾದರೂ ಸಂದೇಹಗಳಿದ್ದರೆ ಕೇಳಿ ಪರಿಹರಿಸಿಕೊಳ್ತಾರೆ. ಅವರ ಭರತನಾಟ್ಯ ಕ್ಲಾಸ್ ಮೇಟ್ಸ್ ಬಗ್ಗೆ ಕಾಮೆಂಟ್ ಮಾಡ್ತಾರೆ, ಜೋಕ್ಸ್ ಮಾಡ್ತಾರೆ. 'ಅವಳಿಗೆ ಹಸ್ತ ಶುದ್ಧಿಯೇ ಬರುವುದಿಲ್ಲ, ಇವಳಿಗೆ ಕಣ್ಣನ್ನು ಅತ್ತ ಇತ್ತ ಮಾಡುವುದು ಹೇಗೆಂದೇ ಗೊತ್ತಿಲ್ಲ, ಆಕೆ ತಲೆಯನ್ನು ಅತಿಯಾಗಿ ಕುಣಿಸುತ್ತಾಳೆ.' ಹೀಗೆಯೇ ಅವರ ಮಾತುಕತೆಗಳು. 'ನೀವು ಎಲ್ಲವನ್ನೂ ಸರಿಯಾಗಿ ಮಾಡ್ತೀರಾ ..??' ಅಂತ ಕೇಳಿದ್ರೆ ಕಿಸಕ್ ಅಂತ ನಕ್ಕು ಬಿಡುತ್ತಾರೆ.

ನನ್ನ ಗುರುಗಳು ಸಹ ನನ್ನನ್ನು ದಿನವೂ ಭೇಟಿಯಾಗ್ತಾರೆ. ಅವರು ಮಾತನ್ನು ಮೊದಲು ಮಾಡುವುದೇ 'ನಿನ್ನಂತಹ ಶಿಷ್ಯೆ ಇನ್ನೊಬ್ಬಳು ಇಂದಿಗೂ ನನಗೆ ದೊರಕಿಲ್ಲ' ಎಂದು. ಗುರುಗಳು ಈಗ ಭರತನಾಟ್ಯದಲ್ಲಿ ಏನೆಲ್ಲಾ ಹೊಸ ಹೊಸ ಎಕ್ಸಪೆರಿಮೆಂಟುಗಳು ನಡೀತಿವೆ, ಮಾಡರ್ನ್ ಮೇನಿಯಾದಲ್ಲೂ ನಮ್ಮ ಕ್ಲಾಸಿಕಲ್ ಡ್ಯಾನ್ಸ್ ಹೇಗೆ ಇಂಪಾರ್ಟಂಟ್ ಆಗಿಯೇ ಇದೆ ಅನ್ನೋದನ್ನೆಲ್ಲ ಹೇಳ್ತಾರೆ. ಮಾತು ಮುಗಿಸುವಾಗ ಎಂದಿನಂತೆ 'ನೀನು ಕಥಕ್ ಕಲಿಯುವ ವಿಷಯ ಎಲ್ಲಿಯ ತನಕ ಬಂತು ..?? ಬೇಗ ಕ್ಲಾಸಿಗೆ ಸೇರಿಕೊ ತಿಳೀತಾ' ಎಂದು ಹೇಳಿ ಟಾಟಾ ಎನ್ನುತ್ತಾರೆ.

ಈ ಮೂವರನ್ನು ಬಿಟ್ರೆ ನಾನು ಬೇರೆ ಯಾರೊಂದಿಗೆ ಮಾತಾಡ್ತೀನಿ ಗೊತ್ತಾ ..?? ನನ್ನ ಪುಟ್ಟ ಪುಟಾಣಿ ಸ್ಟೂಡೆಂಟ್ಸ್ ಜೊತೆ. ಈಗ ಯಾರೊಬ್ಬರೂ ಪುಟಾಣಿಗಳಿಲ್ಲ. ಕೆಲವರೆಲ್ಲ ಹೈಸ್ಕೂಲಿನಲ್ಲಿ ಓದ್ತಿದಾರೆ. ನನಗಂತೂ ಅವರೆಲ್ಲ ಮೊನ್ನೆಯಷ್ಟೇ ನನ್ನ ಕ್ಲಾಸ್ ಸೇರಿದ್ರು ಅನ್ಸತ್ತೆ. ಅವರ ಜೊತೆಗಿದ್ದಷ್ಟು ಹೊತ್ತು ಟೈಮ್ ಹೋಗೋದೇ ಗೊತ್ತಾಗಲ್ಲ. ಆ ಮಕ್ಳದ್ದು ಒಂದೇ ಮಾತು. 'ನೀವು ನೆಕ್ಸ್ಟ್ ಕ್ಲಾಸ್ ಯಾವಾಗ ತಗೋತೀರ ಅಕ್ಕಾ ..?? ಅದೊಂದು ಡ್ಯಾನ್ಸ್ ಅರ್ಧಕ್ಕೇ ನಿಂತು ಹೋಗಿದೆಯಲ್ಲ.' ಛೇ, ನಾನದೆಷ್ಟು ಬ್ಯುಸಿ ಆಗೋಗಿದೀನಿ ನೋಡಿ ಆಂಟಿ. ಅವರಿಗೆ ಕ್ಲಾಸ್ ತಗೊಳ್ಳಕೆ ಟೈಮ್ ಆಗ್ತಾನೇ ಇಲ್ಲ."

                                                                ******

ಅಂದು ಭಾವನಿ ತುಂಬಾ ಹೊತ್ತು ಮಾತನಾಡಿದಳು.

"ಚಿಕ್ಕಂದಿನಿಂದಲೂ ನನ್ನ ಪ್ರಪಂಚ ಕೇವಲ ಭರತನಾಟ್ಯವಾಗಿತ್ತು ಆಂಟಿ. ನನ್ನ ಮಾತು, ನಗು, ಅಳು, ಸಿಟ್ಟು ಎಲ್ಲವೂ ಅದೇ ಆಗಿತ್ತು. ನಾಲ್ಕು ವರ್ಷಗಳ ಹಿಂದಿನವರೆಗೂ ಎಲ್ಲ ಸರಿಯಾಗಿಯೇ ಇತ್ತು. ಐದನೇ ಸೆಮಿಸ್ಟರ್ ಅಲ್ಲಿ ಒಮ್ಮೆ ಇಂಟರ್ನಲ್ ಎಕ್ಸಾಂಗೆ ಮಾರ್ಕ್ಸ್ ಕಡಿಮೆ ಬಿತ್ತು. ಅಮ್ಮ ನನ್ನ ಭರತನಾಟ್ಯದಿಂದಾಗಿಯೇ ಹಾಗಾದದ್ದು ಅಂತ ಬಗೆದ್ರು. ಸಾಕು ಇನ್ಮೇಲಿಂದ ಡ್ಯಾನ್ಸ್ ಗೀನ್ಸ್ ಎಲ್ಲಾನೂ ಅಂತಾ ಬೈದು ನಾನು ಕ್ಲಾಸಿಗೆ ಹೋಗೋದನ್ನು ಬಿಡಿಸಿದ್ರು. ಜ್ಯೂನಿಯರ್ ಮಕ್ಳಿಗೆ ಬೇಸಿಕ್ ಕ್ಲಾಸ್ ಮಾಡೋದನ್ನೂ ಬಿಡಸಿದ್ರು. ಆ ವರ್ಷ ನಾನು ಕಥಕ್ ಕ್ಲಾಸಿಗೆ ಸೇರ್ಕೊಬೇಕು ಅಂತ ಪ್ಲ್ಯಾನ್ ಮಾಡಿದ್ದೆ. ಅದ್ಕೂ ಕಲ್ಲು ಬಿತ್ತು.

ನಾನು ಕ್ಲಾಸಿಗೆ ಹೋಗದೇ ಇದ್ರೂ ಮನೇಲಿ ಪ್ರ್ಯಾಕ್ಟೀಸ್ ಮಾಡಿದ್ರಾಯ್ತು ಅಂತ ಅಂದ್ಕೊಂಡ್ರೆ ಗೆಜ್ಜೆ ಸದ್ದು ಕೇಳಿದ್ರೆ ಅಮ್ಮ ರೇಗಲಿಕ್ಕೆ ಶುರು ಮಾಡಿದ್ರು. "ಕ್ಯಾಂಪಸ್, ಪ್ರೊಜೆಕ್ಟ್ ಅಂತಾ ಕಾನ್ಸಂಟ್ರೇಟ್ ಮಾಡದು ಬಿಟ್ಟು ಏನದು ಗೆಜ್ಜೆ ಕಟ್ಟಿ ಕುಣ್ಯದು..?? ಕೆರಿಯರ್ ಬಗ್ಗೆ ಯೋಚ್ನೆ ಬೇಡ್ವಾ..?" ಅಂತಾ ಬೈದು ಬೈದು ಪ್ರ್ಯಾಕ್ಟೀಸ್ ಮಾಡದನ್ನು ತಪ್ಸಿದ್ರು. ಅವರಿಗೆ ತಾನಂತೂ ಹೆಚ್ಚು ಓದಿಲ್ಲ, ಮಗಳು ತುಂಬಾ ಓದ್ಬೇಕು, ಒಳ್ಳೆ ಮಾರ್ಕ್ಸ್ ತಗೋಬೇಕು, ಸಿಕ್ಕಾಪಟ್ಟೆ ಸ್ಯಾಲರಿ ಇರೋ ಜಾಬ್ ಮಾಡ್ಬೇಕು ಅನ್ನೋ ಆಸೆ. ನಂಗೆ ಭರತನಾಟ್ಯ ಪೂರ್ತಿಯಾಗಿ ಬಿಟ್ಟು ಓದಿನ ಕಡೆ ಮಾತ್ರಾನೆ ಗಮನ ಕೊಡಕೆ ಆಗಲ್ಲ ಅನ್ನೋ ವಾಸ್ತವ ಅಮ್ಮಂಗೆ ಅರ್ಥ ಆಗ್ಲೇ ಇಲ್ಲ. ಸ್ಟಡೀಸ್, ಜಾಬ್ ಅಂತ ನನ್ನ ಮೇಲೆ ಅದೆಷ್ಟು ಪ್ರೆಷರ್, ವರ್ಕ್ ಲೋಡ್ ಬಿತ್ತು ಅಂತಂದ್ರೆ ಡ್ಯಾನ್ಸ್ ಬಗ್ಗೆ ಯೋಚ್ನೆ ಮಾಡಕೂ ಟೈಮ್ ಸಿಗದಷ್ಟು ನಾನು ಬ್ಯುಸಿ ಆದೆ. ಹಾಗೆ ಬ್ಯುಸಿ ಇರೋ ಹಂಗೆ ಅಮ್ಮ ಮಾಡಿದ್ರು.

ಈಗ ಜಾಬ್ ಸಲುವಾಗಿ ಅಮ್ಮ ನನ್ನನ್ನು ಭರತನಾಟ್ಯದಿಂದ ದೂರ ಮಾಡಿದ್ದಲ್ವಾ..?? ಸರಿ, ಜಾಬ್ ಸಿಗೋ ತನಕ ಹೇಗಾದ್ರೂ ಸಹಿಸಿಕೊಂಡ್ರಾಯ್ತು ಅಂತ ನಾನು ಅಷ್ಟೊಂದು ಬೇಸರಿಸದೇ ಅಕಾಡೆಮಿಕ್ಸ್ ಅಲ್ಲಿ ಇನ್ವಾಲ್ವ್ ಆದೆ. ಅಮೇಲೆ ಎಂಜಿನಿಯರಿಂಗ್ ಮುಗೀತು, ನಂತ್ರ ಎಂಬಿಎ ಸಹಾ ಆಯ್ತು, ಒಳ್ಳೆ ಕಂಪನಿಯಲ್ಲಿ ಜಾಬ್ ಸಹಾ ಆಯ್ತು. ಉಫ್, ಇನ್ನಾದ್ರೂ ಗೆಜ್ಜೆ ಕಟ್ಬೋದು ಅಂತ ನಾನಂದ್ಕೊಂಡ್ರೆ ಆಫೀಸ್ ವರ್ಕ್ ಅದಕ್ಕೆ ಅಡ್ಡಿ ಬಂತು. ಅಲ್ಲಿ ಕಂಪ್ಯೂಟರ್ ಮುಂದೆ ಕೂತು ಕೂತು ಆಗೋ ಆಯಾಸದಿಂದ ಡ್ಯಾನ್ಸ್ ಮಾಡಕೆ ಉತ್ಸಾಹ, ಶಕ್ತಿ ಎರಡೂ ಇರ್ತಾ ಇರ್ಲಿಲ್ಲ. ಅಲ್ಲಿಗೆ ನಾನು ಭರತನಾಟ್ಯದ ಪ್ರಪಂಚದಿಂದ ಪೂರ್ತಿಯಾಗಿ ದೂರ ಆಗ್ಬಿಟ್ಟೆ.

ಆ ಪ್ರಪಂಚದಿಂದ ದೂರವಾಗಿ ಬದುಕೋಕೆ ಅದೆಷ್ಟು ವರ್ಷ ಟ್ರೈ ಮಾಡ್ದೆ ನಾನು. ಕಳೆದ ಎರಡು ವರ್ಷಗಳಿಂದ ಮೂರು ದಿನಕ್ಕೊಮ್ಮೆಯಾದರೂ ತಲೆನೋವು, ಹೊಟ್ಟೆನೋವು ಇತ್ಯಾದಿಗಳು ಶುರುವಾದವು. ಕೆಲಸದ ಒತ್ತಡದಿಂದ ಹೀಗಾಗ್ತಿದೆ ಅಂತ ಬಗೆದ ಅಮ್ಮ ಡಾಕ್ಟರ್ ಬಳಿ ಕರೆದೊಯ್ದು ಟ್ರೀಟ್‌ಮೆಂಟ್ ಕೊಡಿಸಿದ್ಳು. ಸದಾ ಕಾಲ ಒಂದಲ್ಲ ಒಂದು ಬಗೆಯ ಸಂಘ, ಕ್ಲಬ್ ಅಂತ ಹೊರಗಡೆ ಓಡಾಡ್ತಾನೆ ಇರೋ ಅಮ್ಮಂಗೆ ಮನೇಲಿ ಮಗಳು ಪಡೋ ಕಷ್ಟ ಹೆಂಗೆ ಕಾಣಿಸ್ಬೇಕು ಹೇಳಿ..?? ಟ್ಯಾಬ್ಲೆಟ್ಸ್ ನುಂಗಿದಂತೆಲ್ಲ ನನ್ನ ಕಷ್ಟಗಳು ಹೆಚ್ಚಾದವೇ ಹೊರತು ಸಮಸ್ಯೆಗಳು ದೂರ ಆಗ್ಲಿಲ್ಲ. ಹಾಗಂತ ಭರತನಾಟ್ಯದ ಪ್ರಪಂಚಕ್ಕೆ ವಾಪಸ್ಸು ಹೋಗಲಿಕ್ಕೂ ಆಗಲ್ಲ. ಸೋ, ಈ ಥರ ಒಂದು ಫಿಕ್ಷನಲ್ ವರ್ಲ್ಡ್ ಕ್ರಿಯೆಟ್ ಮಾಡ್ಕೊಂಡೆ. ಆ ದಿನಗಳನ್ನು, ಆ ಸ್ನೇಹಿತರನ್ನು ಮತ್ತೆ ನನ್ನ ಬದುಕಿನೊಳಗೆ ವೆಲ್ ಕಂ ಮಾಡ್ದೆ. ಗೆಜ್ಜೆ ಕಟ್ಟದಿದ್ದರೇನು, ಹೆಜ್ಜೆಯ ಬಗ್ಗೆ ಮಾತನಾಡಬಹುದು ಎಂದು ಸಮಾಧಾನ ಮಾಡ್ಕೊಂಡೆ. ಅವರೊಡನೆ ಮಾತಾಡ್ದೆ, ಮನಸಾರೆ ನಕ್ಕೆ, ಅತ್ತೆ, ಮುನಿಸು ಮಾಡ್ದೆ. ಈಗ ನೋಡಿ, ತಲೆನೋವು ಇಲ್ಲ ಎಂಥದೂ ಇಲ್ಲ. ಎಷ್ಟು ಆರಾಮಾಗಿ ಇದೀನಿ. ಹೀಗೆ ಇದ್ದು ಹತ್ತಿರ ಹತ್ತಿರ ಒಂದು ವರ್ಷಾನೇ ಆಯ್ತು. ಅಮ್ಮನಿಗೆ ಮಾತ್ರ ನಿನ್ನೆ ಮೊನ್ನೆ ಈ ಬಗ್ಗೆ ಗೊತ್ತಾಗಿದೆ. ಅದ್ಕೆ ಏಕ್ ದಂ ತಲೆನೋವು ಶುರುವಾಗಿದೆ ಅವ್ರಿಗೆ. ಇನ್ ಫ್ಯಾಕ್ಟ್ ನೀವು ಅವರಿಗೆ ಟ್ರೀಟ್ ಮೆಂಟ್ ಕೊಡ್ಬೇಕು."

ನನಗೆ ನನ್ನ ಮಗಳ ನೆನಪಾಗಿತ್ತು.
ಈಗಷ್ಟೇ ಹತ್ತನೆಯ ಕ್ಲಾಸಿಗೆ ಕಾಲಿಟ್ಟಿರುವ ಅವಳಿಗೆ ಇದೊಂದು ವರ್ಷ ಸಂಗೀತ ಕ್ಲಾಸನ್ನು ಬಿಟ್ಟು ಬಿಡು ಎಂದು ದಿನಕ್ಕೆರಡು ಬಾರಿ ನಾನು ಸಲಹೆ ನೀಡುವುದು ಕಣ್ಣೆದುರು ಬಂತು.


6 comments:

 1. Replies
  1. I didn't get your comment. Can you please elaborate your 'hmm..'??

   Delete
 2. ಇಷ್ಟ ಆಯ್ತು. Talking to oneself is so underrated!

  ReplyDelete
 3. This comment has been removed by the author.

  ReplyDelete