Friday, 24 June 2016

ಇರುವೆಯ ಕಷ್ಟ....."ಹುಟ್ಟಿದ್ರೆ ಶ್ರೀಮಂತರಾಗಿಯೇ ಹುಟ್ಬೇಕು. ಅಪ್ಪಿ ತಪ್ಪಿ ಬಡ ಕುಟುಂಬದಲ್ಲಿ ಹುಟ್ಬಾರ್ದು."

ಬೇರೆ ಯಾವ ಹೊತ್ತಿಗೆ ಹೀಗನಿಸದಿದ್ದರೂ ಓದಿನ ವಿಷಯದಲ್ಲಿ ಯೋಚನೆ, ಚಿಂತನೆ ಬಂದಾಗಲೆಲ್ಲ ಹೀಗೆಯೇ ಅನಿಸಿ ನಿಟ್ಟುಸಿರು ಬಿಡುವಂತಾಗುತ್ತದೆ. ಬಂಗಲೆ ಬೇಡ, ಕಾರು ಬೇಡ, ರೇಶಿಮೆ ಬೇಡ, ಮೃಷ್ಟಾನ್ನವೂ ಬೇಡ. ಹಸಿವಾದಾಗ ತುತ್ತು ಅನ್ನ-ಸಾರು, ಮಲಗಲು ಒಂದು ಕೋಣೆ, ಮೈ ಮುಚ್ಚಲು ಹರಕು ಮುರುಕಲ್ಲದ ಬಟ್ಟೆ, ಓದಲು ಪುಸ್ತಕಗಳು - ಇಷ್ಟೇ ಸಾಕು. ಊಹ್ಞೂಂ, ಇವುಗಳೂ ಕೂಡ ನಮ್ಮಂಥವರ ಕೈಗೆ ಎಟುಕಲಾರವು. ಬಟ್ಟೆ ದೊರಕಿದರೆ ತಟ್ಟೆ ಖಾಲಿ ಉಳಿಯುವಂತಾಗುತ್ತದೆ.

ದೇವರು ನಿಜಕ್ಕೂ ಇರುವುದು ಹೌದೇ ಅಂತ ಅನಿಸದಿರುವುದು ಹೇಗೆ ..??

"ಸಾಕು ಮಗಾ ಓದಿದ್ದು, ಇನ್ನೂ ಓದಿ ಓದಿ ಏನ್ ಸಾಧನೆ ಮಾಡ್ಬೇಕಾಗಿದೆ ನೀನು..?? ನಿನ್ನನ್ನು ಕಷ್ಟಪಟ್ಟು ಓದ್ಸಿದ್ದು ನೀನು ನೌಕರಿ ಮಾಡ್ಲಿ ಅಂತ ಅಲ್ವೆನೋ ..?? ಇನ್ನೂ ಓದ್ತೀನಿ ಅಂತೀಯಲ್ಲ, ಅದಕೆ ದುಡ್ಡೆಲ್ಲಿಂದಾ ತರೋದು ..?? ಇದೆಲ್ಲಾ ತಾಪತ್ರಯಗಳು ಬೇಕಾ..?? ಹೇಗಿದ್ರೂ ನಿಂಗೆ ಬ್ಯಾಂಕ್ ಅಲ್ಲಿ ನೌಕರಿ ಸಿಗತ್ತೆ. ಅದನ್ನ ಮಾಡ್ಕೊಂಡು ಆರಾಮಾಗಿ ಇರಬಾರ್ದಾ ..??"

ಪಾಪ, ಅಪ್ಪ-ಅಮ್ಮ ಹೀಗಲ್ಲದೇ ಬೇರೆ ಏನು ಹೇಳಿಯಾರು..? ಅವರಿಗೆ ಹೊಟ್ಟೆಯ ಹಸಿವಿನ ಬಗ್ಗೆ ಮಾತ್ರವೇ ಗೊತ್ತು. ನನ್ನ ತಲೆ ಹೊಟ್ಟೆಗಿಂತಲೂ ಹೆಚ್ಚು ಹಸಿದು ಬಸಿಯುವುದು ಅವರಿಗೆ ಅರ್ಥವಾಗುವುದಿಲ್ಲ. ಸರಸ್ವತಿ ಮತ್ತು ಲಕ್ಷ್ಮೀ ಇಬ್ಬರೂ ಇದ್ದರೆ ಇವೆಲ್ಲಾ ಸಮಸ್ಯೆಗಳೇ ಇರುವುದಿಲ್ಲ. ಎಷ್ಟಾದರೂ ಪಡೆದುಕೊಂಡು ಬಂದಿರಬೇಕು ಎನ್ನುವ ಮಾತು ಸುಳ್ಳಲ್ಲ.

ಈಗೇನು ಮಾಡುವುದು ..?? ಬ್ಯಾಂಕ್ ಸೇರುವುದಾ..?? ಅಥವಾ ಎಂ.ಬಿ.ಎ.ಗೆ ಸೇರಲಾ ..?? ಥತ್, ಏನೊಂದೂ ಬಗೆ ಹರಿಯುತ್ತಿಲ್ಲ. ಒಮ್ಮೆ ಕನ್ನಡ ಸರ್ ಭೇಟಿಯಾಗಿ ಬರುವುದು ಒಳಿತು. ಇಂತಹ ಗೊಂದಲವನ್ನು ಬಗೆಹರಿಸಿಕೊಳ್ಳಲು ಅವರ ಸಹಾಯ ಕೇಳುವುದೇ ಸೈ. ಈಗ ನೆನಪಾಯ್ತು, ಲೈಬ್ರರಿಯ ಪುಸ್ತಕಗಳನ್ನೂ ವಾಪಸ್ಸು ಮಾಡಿಲ್ಲ ನಾನು. ಕಾಲೇಜಿಗೆ ಹೋಗಿ ಬರೋಣ. ಮನೆಯಲ್ಲಿ ಕೂತು ಕೂತು ತಲೆ ಇನ್ನಷ್ಟು ಮಂಕಾಗಿದೆ.

                                                          ******

"ಸರಸ್ವತೀ ಮತ್ತು ಲಕ್ಷ್ಮೀ ಇಬ್ಬರೂ ಒಟ್ಟಿಗೆ ಇರ್ಬಾರ್ದು. ಒಂದೋ ಆಕೆಯಿರಬೇಕು, ಇಲ್ಲಾ ಈಕೆಯಿರಬೇಕು."

"ಅಲ್ಲಾ ನೀನ್ಯಾಕೆ ವಿದೇಶಕ್ಕೆಲ್ಲ ಹೋಗಿ ಓದ್ಬೇಕು ..?? ಏನ್ ಕಡಿಮೆಯಾಗಿದೆ ನಿನಗೆ ಈಗ..?? ನೂರಾರು ಎಕರೆ ಆಸ್ತಿ ಇರೋದು ಸಾಕಾಗಲ್ವಾ ..?? ಹೆಚ್ಚು ಹೆಚ್ಚಿ ಓದಿ ಸಂಪಾದನೆ ಮಾಡೋ ಅಗತ್ಯವಾದ್ರೂ ಎಲ್ಲಿದೆ..?? ಹೆಸರಿಗೆ ಡಿಗ್ರಿ ಒಂದು ಇರಲಿ ಅನ್ನೋ ಒಂದೇ ಒಂದು ಕಾರಣಕ್ಕೆ ಓದ್ಸಿದ್ದು ನಿನ್ನ. ಓದೋಕೆ ಅಂತ ವಿದೇಶಕ್ಕೆ ಹೋದ್ರೆ ಇಲ್ಲಿ ಆಸ್ತಿ ನೋಡ್ಕೊಳ್ಳೋರು ಯಾರು ..??"

ಯಾಕಾದರೂ ನಾನು ಶ್ರೀಮಂತ ಮನೆತನದಲ್ಲಿ, ಅದು ಕೂಡ ಒಬ್ಬನೇ ಮಗನಾಗಿ ಹುಟ್ಟಿದೆನೋ ಅಂತ ಅದೆಷ್ಟು ಬಾರಿ ಅಂದುಕೊಂಡಿಲ್ಲ. ಇಷ್ಟೊಂದು ಆಸ್ತಿ ಮಾಡಿದ್ದಾದರೂ ಯಾಕೆ ಅಂತ ಅದೆಷ್ಟು ಬಾರಿ ಪ್ರಶ್ನಿಸಿಕೊಂಡಿದ್ದೇನೆ. ನಾನೊಂದು ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಬೇಕಿತ್ತು. ಕಾಂಚಾಣದ ಝಣಝಣ ಇಲ್ಲದಿದ್ದ ಕಡೆ ಅ ಆ ಇ ಈಗೆ ಹೆಚ್ಚು ಗೌರವವಿರುತ್ತದೆ. ಇವರಿಗೆ ಆಸ್ತಿಯಲ್ಲಿ ಮಾತ್ರ ಶ್ರೀಮಂತಿಕೆ ಬೇಕು. ವಿದ್ಯೆಯಲ್ಲಿ ಬೇಡವೇ ಬೇಡ. ನನಗೋ ಆಸ್ತಿಯ ಬಗ್ಗೆ ಮೋಹವೂ ಇಲ್ಲ, ಸ್ನೇಹವೂ ಇಲ್ಲ. ನನ್ನ ಗೆಳೆತನ, ನಂಟುತನವೇನಿದ್ದರೂ ಓದಿನ ಜೊತೆಗೆ. ಇದು ಯಾರೊಬ್ಬರಿಗೂ ಅರ್ಥವಾಗುವುದಿಲ್ಲ. ಅಪ್ಪ-ಅಮ್ಮ ಇಬ್ಬರದೂ ಒಂದೇ ಮಾತು, ಮುಂದೆ ಓದುವುದು ಬೇಡಲೇ ಬೇಡ ಎಂದು. ಮನೆಗೆ ಬಂದವರೂ ಸಹ ಇದೇ ಮಾತನ್ನು ಹೇಳುತ್ತಿದ್ದಾರೆ. "ಮುಂದೆ ಓದುವುದೇತಕ್ಕೆ ..?? ಮನೆಯ ವ್ಯವಹಾರದಲ್ಲಿ ತೊಡಗಿಸಿಕೊಂಡು ಬಿಡು." ನನಗಂತೂ ಈ ಮಾತನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗಿದೆ. ಏನು ಮಾಡಬೇಕೆಂದು ತೋಚುತ್ತಲೇ ಇಲ್ಲ.

ಅಯ್ಯೋ ಆಗಲೇ ಗಂಟೆ ಹತ್ತಾಗಿ ಹೋಯಿತೇ ..?? ಕಾಲೇಜಿಗೆ ಒಮ್ಮೆ ಹೋಗಿ ಬರಬೇಕು. ಒಂದಿಷ್ಟು ಸರ್ಟಿಫಿಕೇಟುಗಳಿಗೆ ಸೈನ್ ಮಾಡಿಸಿಕೊಂಡು ಬರುವ ಕೆಲಸವೊಂದಿದೆಯಲ್ಲ.

                                                          ******

ಕಾಲೇಜಿನ ದೊಡ್ಡ ಗಡಿಯಾರ ಹನ್ನೊಂದು ಬಾರಿ ಢಣ್ ಢಣ್ ಎಂದಿತು. ಲೈಬ್ರರಿಯಲ್ಲಿ ಜೋರು ರಷ್. ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನ ಕೊನೆಯ ದಿನದಂದೇ ಪುಸ್ತಕಗಳನ್ನು ವಾಪಸ್ಸು ಮಾಡಲು ಬಂದಿದ್ದಾರೆ.

ಯಾರೋ ಬಂದು ಕ್ಯೂದಲ್ಲಿ ನಿಂತಿದ್ದ ವಿಶ್ವನ ಭುಜ ತಟ್ಟಿದರು.
"ಎಕ್ಸಕ್ಯೂಸ್ ಮೀ, ಒಂದ್ಸಲ ಪೆನ್ ಕೊಡ್ತೀರಾ ..?? ಫಾರ್ಮ್ ಫಿಲ್ ಮಾಡ್ಬೇಕಿತ್ತು."

ಪೆನ್ ಇಸಿದುಕೊಂಡು ಥ್ಯಾಂಕ್ಸ್ ಎಂದು ಆತ ನೋ ಡ್ಯೂ ಸರ್ಟಿಫಿಕೇಟ್ ತುಂಬತೊಡಗಿದ.
ನೇಮ್ : ವಿಕಾಸ್
ಕೋರ್ಸ್ : ಬಿ.ಎಸ್ಸಿ.
ಐಡಿ ನಂಬರ್ :......

ಎರಡು ನಿಮಿಷಗಳ ನಂತರ ಪೆನ್ ವಾಪಸ್ಸು ಕೊಡುತ್ತಾ ಮತ್ತೊಮ್ಮೆ ಥ್ಯಾಂಕ್ ಯೂ ಎಂದ. "ಮೆನ್ಷನ್ ನಾಟ್" ಎಂದ ವಿಶ್ವನೂ ಮುಗುಳ್ನಕ್ಕ.

"ಬುಕ್ ರಿಟರ್ನಾ..??"
"ಹ್ಞಾಂ, ನಿಮ್ದು ನೋ ಡ್ಯೂ ಸರ್ಟಿಫಿಕೇಟಾ..??"
"ಯೆಸ್. ಯಾವ್ ಸ್ಟ್ರೀಮ್ ಮತ್ತೆ ಇಯರ್ ..??"
"ಬಿ.ಕಾಂ. ಫೈನಲ್. ನೀವು ..??"
"ಓಹ್ ನಮ್ದೇ ಬ್ಯಾಚ್. ನಂದು ಬಿ.ಎಸ್ಸಿ."

ಇನ್ನೊಂದಿಷ್ಟು ನೀವು, ನಿಮ್ಮದು, ಅದು, ಇದು ಮಾತುಕತೆಗಳನ್ನು ಮುಗಿಸಿ "ಲೆಕ್ಚರರ್ ಒಬ್ಬರನ್ನು ಮೀಟ್ ಮಾಡ್ಬೇಕು. ಸೀ ಯೂ." ಎಂದು ವಿಕಾಸ್ ಅಲ್ಲಿಂದ ಹೊರಟ. ವಿಶ್ವ ತನ್ನ ಸರದಿಗಾಗಿ ಕಾಯುವುದನ್ನು ಮುಂದುವರೆಸಿದ.

                                                           ******

"ಏನ್ ಸರ್ ..?? ಊಟದ ಹೊತ್ತಲ್ಲೂ ಏನೋ ಗಂಭೀರವಾಗಿ ಯೋಚ್ನೆ ಮಾಡ್ತಾ ಇದೀರಲ್ಲ."

ಸಹೋದ್ಯೋಗಿಯ ಮಾತಿಗೆ ಪ್ರತಿಕ್ರಿಯೆಯಾಗಿ ಶ್ರೀನಿವಾಸ್ ಸರ್ ಮುಗುಳ್ನಕ್ಕರಷ್ಟೆ.
ಅವರ ತಲೆಯಲ್ಲಿ ಬೇರೆಯದೇ ಸಂಗತಿ ಸುಳಿ ಸುಳಿಯಾಗಿ ಸುತ್ತುತ್ತಿತ್ತು.

ಒಬ್ಬನಿಗೆ ದುಡ್ಡು ಸಾಕಷ್ಟು ಇಲ್ಲದಿರುವುದು ಸಮಸ್ಯೆ. ಇನ್ನೊಬ್ಬನಿಗೆ ದುಡ್ಡು ಬೇಕಾದಷ್ಟು ಇರುವುದು ಸಮಸ್ಯೆ. ಒಂದೇ ನಾಣ್ಯದ ಎರಡು ಮುಖಗಳು ಎಂಬಂತಿವೆ ಇವರಿಬ್ಬರ ಸಮಸ್ಯೆಗಳು. ಆತನಿಗೆ ನಾಣ್ಯದ ಈ ಮುಖ ಪರಿಹಾರ. ಈತನಿಗೆ ನಾಣ್ಯದ ಆ ಮುಖ ಪರಿಹಾರ. ಇಲ್ಲಿ ಇರುವುದು ಒಂದೇ ನಾಣ್ಯ. ಯಾರು ಯಾವಾಗ ಹೇಗೆ ಈ ನಾಣ್ಯವನ್ನು ಚಲಾಯಿಸಿ ತಮಗೆ ಬೇಕಾದ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎನ್ನುವುದು ಅವರ ವಿವೇಕ, ವಿವೇಚನೆಗೆ ಬಿಟ್ಟಿದ್ದು.

ತಾನಿತ್ತ ಸಲಹೆ ಸೂಚನೆಗಳನ್ನು ಮತ್ತೊಮ್ಮೆ ಪರಾಮರ್ಶಿಸಿದ ಕನ್ನಡ ಲೆಕ್ಚರರ್, ತಾನು ಅವರಿಬ್ಬರಿಗೂ ಅನುಚಿತವಾದದ್ದನ್ನು ಹೇಳಲಿಲ್ಲವೆಂದು ಸಮಾಧಾನಗೊಂಡರು. ಸರಸ್ವತೀ ಮತ್ತು ಲಕ್ಷ್ಮೀ - ಇಬ್ಬರು ಅಕ್ಕತಂಗಿಯರು ವ್ಯಕ್ತಿಯ ಜೀವನದಲ್ಲಿ ಹೇಗೆಲ್ಲಾ ಆಟವಾಡುತ್ತಾರೆ ಎಂದುಕೊಳ್ಳುತ್ತಾ ಊಟವನ್ನು ಮುಂದುವರೆಸಿದರು.

No comments:

Post a Comment