Wednesday, 1 June 2016

ಡಿಯರ್ ಡೈರಿ: ಡೇ - ೧


"ಹ್ಯಾಪೀ ನ್ಯೂ ಇಯರ್"

’ಇದ್ಯಾರಪ್ಪಾ ಇದು..?? ಅನ್ ನೌನ್ ನಂಬರು. ನಾನು ಹೆಲೋ ಅನ್ನೋದಕ್ಕಿಂತಾ ಮೊದಲೇ ಮಾತಾಡ್ತಾರೆ, ಅದೂ ಕೂಡ ನ್ಯೂ ಇಯರ್ ವಿಷ್. ಯಾರಿಗಪ್ಪಾ ಇವತ್ತು ಹೊಸ ವರ್ಷ..??’ ನಾನು ತಲೆಕೆರೆದುಕೊಳ್ಳುತ್ತಲೇ "ಹೆಲೋ, ಮೇ ಐ ನೋ ಹೂ ಈಸ್ ದಿಸ್ ಪ್ಲೀಸ್..??" ಎಂದೆ.

"ಯೇ ಕೋತಿ, ನಿಂಗೆ ನನ್ನ ಧ್ವನಿ ಕೂಡಾ ಮರೆತು ಹೋಗಿದೆನಾ..?? ಹ್ಞೂಂ, ಇನ್ನೇನ್ ಮತ್ತೆ. ಹತ್ತತ್ರ ಒಂದು ವರ್ಷಾನೇ ಆಗ್ತಾ ಬಂತು. ಒಂದ್ಸಲಾನೂ ನನ್ನ ನೆನಪಾಗಿಲ್ಲ. ನಾನು ಮಾರಾಯ್ತಿ, ನಿಯತಿ."

‘ಅಯ್ಯಯ್ಯೋ, ಇವಳಾ.?’ ಎಂದುಕೊಂಡೆ ಮನಸಲ್ಲಿ. ಕಾರಣ ಇಲ್ಲದೇ ನಾನಾಗೇ ಇವಳಿಂದ ದೂರ ಇದ್ದೆ. ಈಗ ಒಂದಿಷ್ಟು ಪೂಜೆ, ಮಂಗಳಾರತಿ, ಅರ್ಚನೆಗಳು ಗ್ಯಾರಂಟಿ ಅನ್ನೋದು ಪಕ್ಕಾ ಆಗಿ ಏನು ಮಾತನಾಡೋದು ಅಂತಾ ತಿಳಿದೇ ಸುಮ್ಮನೇ ಉಳಿದೆ. ಅಷ್ಟರಲ್ಲಿ ಅವಳೇ ಮಾತು ಮುಂದುವರೆಸಿದಳು.
"ಯಾಕೆ, ಏನು, ಹೇಗೆ ಅಂತೆಲ್ಲಾ ಹಳೆಯದರ ಬಗ್ಗೆ ನಾನೇನು ಕೇಳಲ್ಲಾ, ಹೇಳಲ್ಲಾ ಮಾರಾಯ್ತಿ. ನಿಂಗ್ಯಾವ ತೀರ್ಥ, ಪ್ರಸಾದಗಳನ್ನೂ ಕೊಡಲ್ಲಾ. ನೋ ವರೀಸ್. ಈಗಾ ನಾನು ವಿಷ್ ಮಾಡಿದ್ದು ಯಾಕೆ ಅಂತಾ ಗೊತ್ತಾಯ್ತಾ..??"

ಈಗ ನನಗೆ ಮಾತನಾಡಲಿಕ್ಕೆ ಉತ್ಸಾಹ ಬಂತು. "ನೀನು ಯಾವಾಗ ಏನೆಲ್ಲಾ ವಿಷ್ ಮಾಡ್ತಿಯೋ ಯಾರಿಗೆ ಗೊತ್ತು ಮಾರಾಯ್ತಿ. ಅರ್ಥ ಆಗ್ಲಿಲ್ಲ, ಇವತ್ತ್ಯಾಕೆ ಹೊಸ ವರ್ಷ..??"

"ಇವತ್ತು ಜೂನ್ ಫಸ್ಟ್ ಅಲ್ವಾ..?? ನಮಗೆಲ್ಲಾ ಶಾಲೆ ಶುರುವಾಗ್ತಿದ್ದ ದಿವಸ. ಇದೂ ಕೂಡ ಮರೆತು ಹೋಗಿದೆನಾ ನಿನಗೆ ಏನ್ ಕತೆ..??"

"ಹೇ, ನೆನಪಿದೆ. ಶಾಲೆ ಶುರುವಾಗೋದ್ರ ಜೊತೆಗೆ ಮಳೆಗಾಲನೂ ಶುರುವಾಗ್ತಿತ್ತು. ಜೂನ್ ಬಂತು ಅಂದ್ರೆ ಅದೇನೋ ಉತ್ಸಾಹ, ಸಡಗರ, ಪುಳಕ. ಎಂಜಿನಿಯರಿಂಗ್ ಬಂದ್ಮೇಲೂ, ಎಂಜಿನಿಯರಿಂಗ್ ಮುಗಿದ್ಮೇಲೂ ಸಹ ಶಾಲೆ, ಕಾಲೇಜು ಅಂದ್ರೆ ನಂಗೆ ಜೂನ್ ಅಲ್ಲಿ ಶುರುವಾಗೋದು ಅಂತಾನೇ ಅನ್ಸತ್ತೆ. ಬರೋಬ್ಬರೀ ಹದಿನೈದು ವರ್ಷಗಳ ಕಾಲ ಜೂನ್ ಅಂದ್ರೆ ಹೊಸ ವರ್ಷ ಅನ್ನೋ ವಿಷ್ಯ ತಲೇಲಿ ಇತ್ತಲ್ವಾ. ಅದಿನ್ನೂ ಹಾಗೆ ಇದೆ. ಜನವರಿ ಅಂದ್ರೆ ಅದೊಂದು ಬಗೆಯ ವ್ಯಾವಹಾರಿಕ ಹೊಸ ವರ್ಷ. ಇನ್ನು ಯುಗಾದಿ ಅಂತಂದ್ರೆ ಅದು ನಮ್ಮ ಪರಂಪರೆಯ ಹೊಸ ವರ್ಷ. ಭಾವನಾತ್ಮಕವಾದ ಹೊಸ ವರ್ಷ ಅನ್ನೋದೇನಿದ್ರೂ ಅದು ಜೂನ್ ಒಂದು.”

"ಈಗೆಲ್ಲಾ ಮೇ ೨೯, ೩೦ರ ಹಾಗೆನೇ ಶಾಲೆಗಳು ಬಾಗಿಲು ತೆಗೆದು ಬಿಡತ್ವೆ. ಆದರೂ ನನಗಂತೂ ಜೂನ್ ಒಂದು ಅಂದ್ರೆನೇ ಶಾಲಾ ಪ್ರಾರಂಭೋತ್ಸವ. ಇವತ್ತು ಅದೆಷ್ಟೆಲ್ಲಾ ಪುಟಾಣಿಗಳನ್ನ ನೋಡಿದೆ. ನಂಗೂ ಸ್ಕೂಲ್ ಗೆ ಹೋಗ್ಬಿಡಣಾ ಅನ್ನಿಸ್ತು."

"ಹೌದು ಮಾರಾಯ್ತಿ. ಆ ಸ್ಕೂಲ್ ಡೇಸ್ ಅನ್ನೋದೇ ಇನ್ನೊಂದು ಹತ್ತು-ಹದಿನೈದು ವರ್ಷಗಳು ಇರ್ಬೇಕಿತ್ತು. ಈ ದೊಡ್ಡವರಾದ ಮೇಲಿನ ಕಿರಿಕಿರಿಗಳಿಗಿಂತಾ ಆ ಚಿಕ್ಕವಯಸ್ಸಿನ ಸಿಟ್ಟು, ಬೇಜಾರು, ಅಳು ಎಲ್ಲವೂ ಅದೆಷ್ಟೋ ಬೆಟರು."

ಗಿವ್ ಮಿ ಸಮ್ ಸಮ್ ಶೈನ್
ಗಿವ್ ಮಿ ಸಮ್ ರೇನ್
ಗಿವ್ ಮಿ ಅನದರ್ ಚಾನ್ಸ್
ಐ ವಾನಾ ಗ್ರೋ ಅಪ್ ಒನ್ಸ್ ಅಗೇನ್

ಎಲ್ಲಾ ಶಾಲಾ ಮಕ್ಕಳಿಗೂ ಹ್ಯಾಪೀ ಹ್ಯಾಪೀ ಹ್ಯಾಪೀ ನ್ಯೂ ಇಯರ್. 


No comments:

Post a Comment