Monday, 25 January 2016

ಇಪ್ಪತ್ತರ ಮೇಲೆರಡು

     
ಕಣ್ಣಿನ ಕಪ್ಪು ಕೊಳಗಳಲ್ಲಿ
ಬೆರಗು ಭಾವವಾಗಿದೆ
ರೆಪ್ಪೆಗಳಿಗೇಕೋ ಧಾವಂತ
ತುಸು ಹೆಚ್ಚಾಗಿಯೇ ಪಟಪಟ
ಹಣೆಯ ಮೇಲೆ ಹನಿಗಳಿಲ್ಲ
ಸಾಲುಗಳಿವೆ, ವಕ್ರವಾಗುತ್ತವೆ
ಅಧರಗಳು ಅರಳದೇ ಅರಸುತ್ತವೆ
ಕಂಡರೂ ಕಾಣಿಸದ ಲಜ್ಜೆಯನ್ನು

ಅವಳಿಗೀಗ ಇಪ್ಪತ್ತರ ಮೇಲೆರಡು
ಹಾರಬಯಸುವ ರೆಕ್ಕೆಗಳಿಗೆ
ಹೆಗಲ ಭಾರದ ತೊಡಕು
ದೇಹ ಮಾತ್ರವೇ ದಪ್ಪವಲ್ಲ
ಮನಸ್ಸಿಗೂ ಮಾನದ ತೂಕ
ಮಗುವೆಂಬ ಮೊಗ್ಗು ಮೂಲೆಯಲ್ಲಿ
ಮಾತಿನ ಮಲ್ಲಿ ಪದಗಳಲ್ಲಿ
ಕಣ್ಣಾಮುಚ್ಚಾಲೆಯ ಕಳ್ಳಾಟ

ಅವಳ ಹೆಜ್ಜೆಗಳಲ್ಲಿ ಗೆಜ್ಜೆಗಳಿಲ್ಲ
ಗುಟ್ಟಿನ ಗುರುತುಗಳ ಗಂಟು
ನೆರಳು ಕೂಡ ನೇರವಾಗಿಲ್ಲದೇ
ಅವಳ ಹಾದಿಯಂತೆ ಡೊಂಕು
ಇಕ್ಕೆಲಗಳ ಪರಿವೆ ಇಲ್ಲ
ಹಿಂದೆಮುಂದೆಂಬ ದ್ವಂದ್ವ ಸಲ್ಲ
ಮೋಡಗಳಿಲ್ಲದ ಆಕಾಶ
ಸುಸ್ಪಷ್ಟವಾದ ಅವಕಾಶ

ಅವಳಿಗೀಗ ಇಪ್ಪತ್ತರ ಮೇಲೆರಡು
ನಿನ್ನೆ ನಾಳೆಗಳು ಇಂದು ಕುರುಡು
ಬೆಳಗು ಬೆಳಕಲ್ಲ, ಬದುಕು
ರಾತ್ರಿ ರೌದ್ರವಲ್ಲ, ರಾಗದ ಸಾಲು
ಕುಳಿತು ಕಲ್ಲಾಗದೇ, ನಿಂತು ನೀರಾಗದೇ
ಹರಿವಾಗಿ ಧುಮುಕುವ ಝರಿಯಾಗಿ
ಓಡುತ ಕಾಲ, ನಡೆಯುತ ಕರ್ಮ
ಇಪ್ಪತ್ತರ ಮೇಲೆ ಮೂರಾಗಲಿ


4 comments:

  1. Good luck ..... Ankandiddu Ella aagli

    ReplyDelete
  2. ಹರಿವ ಝರಿಯಾಗಿ ಉರುಳಲಿ, ಇಪ್ಪತ್ತರ ಮೇಲೆ.ಮತ್ತೊಂದಿಷ್ಟಾಗ್ಲಿ.

    ReplyDelete
  3. Sampreeta Chougala8 March 2016 at 01:52

    Tumba sogasaagi barediddiri. nimma ella kavite, diary ,patra ,lekhana, kathegalannu nalkaidu saari odiddene..

    ReplyDelete