Friday, 3 July 2015

ನಾ ನಗಲೇ..??




ಕಣ್ಣೊಳಗಿನ ಕನಸುಗಳು
ತಣ್ಣಗೆ ಮನಸಿನೊಳಗಿರದೇ
ಕೊಳದಲ್ಲಿ ಈಸುವ ಆಸೆಯಲ್ಲಿ


ರೆಪ್ಪೆಯಂಚಿನ ಕಪ್ಪಿನಲಿ ಮುಳುಗಿ
ಅಳಿಸಿಹೋದಾಗ ನಾ ನಗಲೇ..??

ಅಂಗ ಅಂಗದೊಳಗಿನ ರಂಗು
ರಂಗಕ್ಕೇರಿ ಗರಿಬಿಚ್ಚುವಾಗ
ಬಿರುಗಾಳಿಯ ದಾಳಿಗೆ ರೆಕ್ಕೆಗಳು
ತತ್ತರಿಸಿ ಕತ್ತರಿಸಿ ಬಿಕ್ಕಿದಾಗ
ಚುಕ್ಕಿಯಂತೆ ನಾ ನಗಲೇ..??

ಹೆಜ್ಜೆ ಇಡಲು ಹೊರಟ ಗೆಜ್ಜೆಗೆ
ಜೊತೆಯಿಲ್ಲದ ಚಿತೆಯಿಂದ
ಸುದ್ದಿಯಿಲ್ಲದೇ ಸದ್ದು ಬರದೇ
ಮೂಕವಾಗಿ ದನಿ ಹೊಮ್ಮಿದಾಗ
ಹನಿಯಾಗಿ ನಾ ನಗಲೇ..??

ನಿನ್ನೆ ಮೊನ್ನೆಗಳ ಚಿಹ್ನೆಗಳಿಂದ
ನಾಳೆಯ ಬೆಳಗು ಕರಾಳವಾಗಿ
ಅರಮನೆಯನ್ನೇ ಸೆರೆಮನೆಯಾಗಿಸಿ
ಯೋಚನೆಗಳು ಯಾಚನೆಯಾಗುವ
ಯೋಜನೆಗೆ ನಾ ನಗಲೇ..??


1 comment:

  1. ನೀವು ನೀವಾಗಿ ನಿಮಗಾಗಿ ನಗುತಿರಿ..😃

    ReplyDelete