Saturday, 31 January 2015

ಡೈರಿ ಪುಟ - ೬೭


                      ಧಡ್ ಎಂದು ಬಾಗಿಲನ್ನು ಒದ್ದುಕೊಂಡೇ ಒಳಗೆ ಬಂದಳು ನನ್ನ ರೂಮ್ ಮೇಟ್. ಇವಳಿಗೇನಾಯ್ತಪ್ಪಾ ಎಂದುಕೊಂಡು ಹುಬ್ಬು ಕೂಡಿಸಿದೆ ನಾನು.
                     "ಏನಾಯ್ತೇ ಮಾರಾಯ್ತಿ..?? ಯಾರ ಮೇಲಿನ ಕೋಪವನ್ನು ಬಾಗಿಲಿಗೆ ಒದ್ದು ತೀರಿಸಿಕೊಂಡೆ..??" ನಾನು ಕೇಳಿದೆ.
                     "ಈ ಹಾಳು ವೈಫೈ ಸಹವಾಸ ಸಾಕೋ ಸಾಕು. ಒಂದು 3MB ಪಿಡಿಎಫ್ ಫೈಲ್ ಡೌನ್ ಲೋಡ್ ಮಾಡಲಿಕ್ಕೆ ಎಷ್ಟು ಹೊತ್ತು ಆ ಅಟೆಂಡೆನ್ಸ್ ಹಾಲಿನಲ್ಲಿ ಕೂರಬೇಕು ಮಾರಾಯ್ತಿ..?? ಈಗ ಕನೆಕ್ಟೆಡ್ ಇದ್ರೆ ಒಂದೆರಡು ನಿಮಿಷಗಳಲ್ಲಿ ಡಿಸ್ ಕನೆಕ್ಟ್ ಅಂತಾ ತೋರಿಸತ್ತೆ. ಥೋ, ನಂಗೆ ತಲೆ ಚಿಟ್ಟು ಹಿಡಿದು ಸಿಟ್ಟು ಬಂದು ಎದ್ದು ಬಂದೆ."
                      "ಅದು ಯಾವಾಗಲೂ ಇರೋದೆ ಅಲ್ಲವಾ..?? ಮೂರೂವರೆ ವರ್ಷದಿಂದ ನೋಡ್ತಾನೇ ಇದೀವಲ್ಲಾ. ಬೇಕಾದಷ್ಟು ಸಲ ಕಂಪ್ಲೈಂಟ್ ಕೂಡಾ ಮಾಡಿ ನೋಡಾಯ್ತು. ಆ ವೈಫೈ ಸ್ಪೀಡ್ ಆಗೋದು ಅಷ್ಟ್ರಲ್ಲೇ ಇದೆ. ನೀನೊಳ್ಳೆ ಫಸ್ಟ್ ಇಯರ್ ಗರ್ಲ್ಸ್ ಥರಾ ಮಾತಾಡ್ತಿದೀಯಾ. ಅಂದ ಹಾಗೆ ಇವತ್ತು ಯಾವ ವಾರ..?? ಶನಿವಾರ ಅಲ್ವಾ..??"
                     "ಶನಿವಾರ ಹೌದು. ಆದ್ರೆ ಅದಕ್ಕೂ ವೈಫೈಗೂ ಎಂತದೇ ಸಂಬಂಧ..??"
                     "ಅಯ್ಯೋ, ನಿಂಗಿನ್ನೂ ಈ ಬಾದರಾಯಣ ಸಂಬಂಧ ಗೊತ್ತಿಲ್ವಾ..?? ಅಲ್ಲಿ ಓಲ್ಡ್ ಹಾಸ್ಟೆಲಿನಲ್ಲಿ ರಾತ್ರೆ ಆದ ಕೂಡಲೇ ಎಲ್ಲಾರೂ ವೈಫೈಗೆ ಕನೆಕ್ಟ್ ಮಾಡ್ಕೊಂಡು ಕನ್ನಡ ಸೀರಿಯಲ್ಸ್ ನೋಡ್ತಾ ಕೂತಿರ್ತಾರೆ. ಅದಕ್ಕೆ ಈ ಕಡೆ ವೈಫೈ ಪೂರಾ ಸ್ಲೋ ಆಗತ್ತೆ. ಹೀಗಂತಾ ತುಂಬಾ ಜನ ಹೇಳೋದನ್ನ ಕೇಳಿದೀನಿ ನಾನು. ಅಸಲಿ ವಿಷಯ ನಂಗೂ ಗೊತ್ತಿಲ್ಲ."
                      "ಆದರೆ ಶನಿವಾರ ಕೂಡಾ ಸೀರಿಯಲ್ಸ್ ಇರತ್ತಾ..??"
                      "ಆ ಈಟಿವಿ ಕನ್ನಡದಲ್ಲಿ ಶನಿವಾರ ಕೂಡಾ ಹಾಕ್ತಾರೆ ಮಾರಾಯ್ತಿ." ನಾನು ಉತ್ತರಿಸಿದೆ.
                      "ಕರ್ಮಕಾಂಡ, ಇವರಿಗೆ ಮನೇಲಿ ಇದ್ದಾಗ ಮಾತ್ರ ಸೀರಿಯಲ್ಸ್ ನೋಡಿದ್ರೆ ಸಾಕಾಗಲ್ವಂತಾ..?? ಹಾಸ್ಟೆಲಿನಲ್ಲಿ ಕೂಡಾ ಅದೇ ಕೆಲ್ಸಾ ಮಾಡ್ಬೇಕಾ..??"
                      "ಮನೇಲಿ ಇದ್ದಾಗ ನೋಡೋವಷ್ಟೂ ಚೆನ್ನಾಗಿರಲ್ಲಾ ಅವ್ಯಾವವೂ ಸೀರಿಯಲ್ಸ್. ಕೌಟುಂಬಿಕ ಅಂತಾ ದೊಡ್ಡದಾಗಿ ಟ್ಯಾಗ್ ಲೈನ್ ಇಟ್ಕೊಂಡು ತೋರಿಸೋದೆಲ್ಲಾ ಮನೆಹಾಳು ಮಾಡೋವಂಥಾ ಕಥೆಗಳನ್ನೇ. ಎರಡು-ಮೂರು ವರ್ಷಗಳ ಕಾಲ ಸೀರಿಯಲ್ ಓಡ್ತಾ ಇರ್ಬೇಕು ಅನ್ನೋದಷ್ಟೇ ಅವರ ಉದ್ದೇಶ. ಹೆಂಗಳೆಯರ ಎಮೋಷನ್ಸ್ ಅನ್ನೋದೇ ಅವರ ಬಹುದೊಡ್ಡ ಮಾರ್ಕೆಟ್. ಅದಕ್ಕಾಗಿ ಸಂಬಂಧಗಳನ್ನೆಲ್ಲಾ ತಿರುಚಿಹಾಕಿ, ಅರ್ಥವೇ ಇಲ್ಲದ ಪಾತ್ರಗಳನ್ನು ಸೃಷ್ಟಿಸಿ, ಯದ್ವಾತದ್ವಾ ಕಥೆ ಹೆಣೆಯುತ್ತಾರೆ. ಒಮ್ಮೆ ಹಾಕೋದು ಸಾಲದೆಂದು ಅದನ್ನು ಮರುಪ್ರಸಾರ ಮಾಡುವುದು ಬೇರೆ. ಅದನ್ನು ಮನೆಯ ಹೆಂಗಸರೆಲ್ಲಾ ಕಣ್ಣು ಬಾಯಿ ಬಿಟ್ಟುಕೊಂಡು ನೋಡ್ತಾರೆ. ಧಾರವಾಹಿಯ ಕಥೆಯಲ್ಲಿ ಒಂದು ಚೂರಾದ್ರೂ ಅರ್ಥ ಇದೆಯಾ ಅನ್ನೋದನ್ನ ಅವರ ಮೆದುಳು ಯೋಚನೆ ಮಾಡೋ ಗೋಜಿಗೆ ಹೋಗಲ್ಲ. ಹುಡುಗನೊಬ್ಬ ಎರಡೆರಡು ಹುಡುಗಿಯರಿಗೆ ತಾಳಿ ಕಟ್ಟುವಂಥದ್ದನ್ನು, ತನ್ನ ಹಳೆಯ ಪ್ರಿಯತಮನನ್ನು ಪಡೆಯುವುದಕ್ಕೋಸ್ಕರ ಆತನ ಹೆಂಡತಿಯ ವಿರುದ್ಧ ಯುವತಿಯೊಬ್ಬಳು ಪಿತೂರಿ ಮಾಡುವುದನ್ನೆಲ್ಲಾ ನೋಡುತ್ತ ಬೆಳೆಯುವ ತಮ್ಮ ಮಗ-ಮಗಳ ವ್ಯಕ್ತಿತ್ವ ಅದು ಹೇಗೆ ರೂಪುಗೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನವೂ ಟಿವಿ ಮುಂದೆ ಕುಳಿತೊಡನೆಯೇ ವಯಸ್ಸಿನಲ್ಲಿ ಹಿರಿಯರಾದವರಿಗೂ ಇಲ್ಲದೇ ಹೋಗುವದಕ್ಕೆ ಏನಂತಾ ಹೇಳೋದು ಮಾರಾಯ್ತಿ..?? ಇವರ ಸೀರಿಯಲ್ಸ್ ಹುಚ್ಚು ಅದ್ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಅಲ್ಲಿ ಯಾವುದೋ ಧಾರವಾಹಿಯಲ್ಲಿ ಒಬ್ಬಳು ಕಣ್ಣೀರು ಹಾಕಿದರೆ ಇವರ ಹೊಟ್ಟೆ ಕರುಳಿನಲ್ಲಿ ಸಂಕಟವಾಗುತ್ತದೆ. ಅದೇ ತಮ್ಮದೇ ಕುಟುಂಬಗಳಲ್ಲಿ, ನೆಂಟರಿಷ್ಟರಲ್ಲಿ ಅಂಥಾ ದುರ್ಭಾಗ್ಯ ಹೆಣ್ಣುಮಗಳೊಬ್ಬಳಿದ್ದರೆ, ಅವಳತ್ತ ಇವರು ಒಮ್ಮೆಯೂ ಕಣ್ಣೆತ್ತಿ ಸಹ ನೋಡಲಾರರು."
                      "ನಾವು ಪ್ರೈಮರಿಯಲ್ಲಿ ಓದ್ತಾ ಇರೋವಾಗೆಲ್ಲಾ ಈ ಧಾರವಾಹಿಗಳು ಒಂದು ಲೆವೆಲ್ಲಿಗೆ ಚೆನ್ನಾಗೇ ಇರ್ತಿದ್ವು ಅಲ್ವಾ..??"
                      "ಹ್ಞೂಂ. ಈಗ ಕಾಲ ಸಾರಿ, ಜಗತ್ತು ಬದಲಾಗಿದೆ. ಜನರೂ ಬದಲಾಗಿದ್ದಾರೆ. ಆಗಿನ ದಿನಗಳ ಬಗ್ಗೆ ಮಾತನಾಡುತ್ತಾ ಕೂತರೆ ಮುಗಿಯೋದೇ ಇಲ್ಲ. ಜೊತೆಗೆ ಸಣ್ಣದಾಗಿ ಸಂಕಟವೂ ಆಗತ್ತೆ. ಬಿಡು ಅದನ್ನ."
                       "ಬಿಟ್ಟೆ, ನೋಡು ಗಂಟೆ ಎಂಟೂವರೆ ಆಯ್ತು. ನಡಿ ಊಟಕ್ಕೆ." ಅವಳು ನೀರು ಬಾಟಲನ್ನು ತೆಗೆದುಕೊಳ್ಳುತ್ತಾ ಹೇಳಿದಳು.


1 comment:

  1. ಅದಕ್ಕೆ ನೋಡಿ ಮೊದಲಿನಿಂದಲೂ ನಮ್ಮ ಮನೆಯಲ್ಲಿ ಧಾರಾವಾಹಿ ಬ್ಯಾನ್!!!

    ReplyDelete