Friday, 3 July 2015

ನಾ ನಗಲೇ..??
ಕಣ್ಣೊಳಗಿನ ಕನಸುಗಳು
ತಣ್ಣಗೆ ಮನಸಿನೊಳಗಿರದೇ
ಕೊಳದಲ್ಲಿ ಈಸುವ ಆಸೆಯಲ್ಲಿ

Monday, 22 June 2015

ಡೆಲ್ಲಿ ಡೈರಿ - ಪುಟ ೧

                                                               
                                   "ಟಪ್ ಟಪ್ ಟಪ್", "ಉಫ್, ಉಫ್, ಊಫ್"
                                   "ಬೆಳಿಗ್ಗೆ ಬೆಳಿಗ್ಗೆ ಅದೆಂತಾ ಮಾಡ್ತಾ ಇದ್ದೀಯೇ..??" ನಿಯತಿ ಕೇಳಿದಳು.
                                   ( ಈ ನಿಯತಿ ಯಾರಾಗಿರ್ಬೋದು ಅನ್ನೋ ಕುತೂಹಲ ಬಂತಾ..?? ಅವಳು ನನ್ನ ಜೊತೆಗಾತಿ. ಸದಾ ನನ್ನೊಂದಿಗೇ ಇರುತ್ತಾಳೆ. ಅವಳ ಕುರಿತಾಗಿ ಕೇವಲ ಇದಿಷ್ಟು ಮಾತ್ರವೇ ಹೇಳಬಲ್ಲೆ. ಮಿಕ್ಕಿದ್ದನ್ನೆಲ್ಲಾ ನಿಮ್ಮ ಊಹೆಗೇ ಬಿಡುತ್ತೇನೆ. ಹ್ಞಾಂ, ಅತಿಯಾಗಿ ಊಹಿಸಿಕೊಂಡು ಅಪಾರವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಅದಕ್ಕೆ ನಾನು ಜವಾಬ್ದಾರಳಲ್ಲ ನೋಡಿ. )

Saturday, 31 January 2015

ಡೈರಿ ಪುಟ - ೬೭


                      ಧಡ್ ಎಂದು ಬಾಗಿಲನ್ನು ಒದ್ದುಕೊಂಡೇ ಒಳಗೆ ಬಂದಳು ನನ್ನ ರೂಮ್ ಮೇಟ್. ಇವಳಿಗೇನಾಯ್ತಪ್ಪಾ ಎಂದುಕೊಂಡು ಹುಬ್ಬು ಕೂಡಿಸಿದೆ ನಾನು.
                     "ಏನಾಯ್ತೇ ಮಾರಾಯ್ತಿ..?? ಯಾರ ಮೇಲಿನ ಕೋಪವನ್ನು ಬಾಗಿಲಿಗೆ ಒದ್ದು ತೀರಿಸಿಕೊಂಡೆ..??" ನಾನು ಕೇಳಿದೆ.
                     "ಈ ಹಾಳು ವೈಫೈ ಸಹವಾಸ ಸಾಕೋ ಸಾಕು. ಒಂದು 3MB ಪಿಡಿಎಫ್ ಫೈಲ್ ಡೌನ್ ಲೋಡ್ ಮಾಡಲಿಕ್ಕೆ ಎಷ್ಟು ಹೊತ್ತು ಆ ಅಟೆಂಡೆನ್ಸ್ ಹಾಲಿನಲ್ಲಿ ಕೂರಬೇಕು ಮಾರಾಯ್ತಿ..?? ಈಗ ಕನೆಕ್ಟೆಡ್ ಇದ್ರೆ ಒಂದೆರಡು ನಿಮಿಷಗಳಲ್ಲಿ ಡಿಸ್ ಕನೆಕ್ಟ್ ಅಂತಾ ತೋರಿಸತ್ತೆ. ಥೋ, ನಂಗೆ ತಲೆ ಚಿಟ್ಟು ಹಿಡಿದು ಸಿಟ್ಟು ಬಂದು ಎದ್ದು ಬಂದೆ."
                      "ಅದು ಯಾವಾಗಲೂ ಇರೋದೆ ಅಲ್ಲವಾ..?? ಮೂರೂವರೆ ವರ್ಷದಿಂದ ನೋಡ್ತಾನೇ ಇದೀವಲ್ಲಾ. ಬೇಕಾದಷ್ಟು ಸಲ ಕಂಪ್ಲೈಂಟ್ ಕೂಡಾ ಮಾಡಿ ನೋಡಾಯ್ತು. ಆ ವೈಫೈ ಸ್ಪೀಡ್ ಆಗೋದು ಅಷ್ಟ್ರಲ್ಲೇ ಇದೆ. ನೀನೊಳ್ಳೆ ಫಸ್ಟ್ ಇಯರ್ ಗರ್ಲ್ಸ್ ಥರಾ ಮಾತಾಡ್ತಿದೀಯಾ. ಅಂದ ಹಾಗೆ ಇವತ್ತು ಯಾವ ವಾರ..?? ಶನಿವಾರ ಅಲ್ವಾ..??"
                     "ಶನಿವಾರ ಹೌದು. ಆದ್ರೆ ಅದಕ್ಕೂ ವೈಫೈಗೂ ಎಂತದೇ ಸಂಬಂಧ..??"
                     "ಅಯ್ಯೋ, ನಿಂಗಿನ್ನೂ ಈ ಬಾದರಾಯಣ ಸಂಬಂಧ ಗೊತ್ತಿಲ್ವಾ..?? ಅಲ್ಲಿ ಓಲ್ಡ್ ಹಾಸ್ಟೆಲಿನಲ್ಲಿ ರಾತ್ರೆ ಆದ ಕೂಡಲೇ ಎಲ್ಲಾರೂ ವೈಫೈಗೆ ಕನೆಕ್ಟ್ ಮಾಡ್ಕೊಂಡು ಕನ್ನಡ ಸೀರಿಯಲ್ಸ್ ನೋಡ್ತಾ ಕೂತಿರ್ತಾರೆ. ಅದಕ್ಕೆ ಈ ಕಡೆ ವೈಫೈ ಪೂರಾ ಸ್ಲೋ ಆಗತ್ತೆ. ಹೀಗಂತಾ ತುಂಬಾ ಜನ ಹೇಳೋದನ್ನ ಕೇಳಿದೀನಿ ನಾನು. ಅಸಲಿ ವಿಷಯ ನಂಗೂ ಗೊತ್ತಿಲ್ಲ."
                      "ಆದರೆ ಶನಿವಾರ ಕೂಡಾ ಸೀರಿಯಲ್ಸ್ ಇರತ್ತಾ..??"
                      "ಆ ಈಟಿವಿ ಕನ್ನಡದಲ್ಲಿ ಶನಿವಾರ ಕೂಡಾ ಹಾಕ್ತಾರೆ ಮಾರಾಯ್ತಿ." ನಾನು ಉತ್ತರಿಸಿದೆ.
                      "ಕರ್ಮಕಾಂಡ, ಇವರಿಗೆ ಮನೇಲಿ ಇದ್ದಾಗ ಮಾತ್ರ ಸೀರಿಯಲ್ಸ್ ನೋಡಿದ್ರೆ ಸಾಕಾಗಲ್ವಂತಾ..?? ಹಾಸ್ಟೆಲಿನಲ್ಲಿ ಕೂಡಾ ಅದೇ ಕೆಲ್ಸಾ ಮಾಡ್ಬೇಕಾ..??"
                      "ಮನೇಲಿ ಇದ್ದಾಗ ನೋಡೋವಷ್ಟೂ ಚೆನ್ನಾಗಿರಲ್ಲಾ ಅವ್ಯಾವವೂ ಸೀರಿಯಲ್ಸ್. ಕೌಟುಂಬಿಕ ಅಂತಾ ದೊಡ್ಡದಾಗಿ ಟ್ಯಾಗ್ ಲೈನ್ ಇಟ್ಕೊಂಡು ತೋರಿಸೋದೆಲ್ಲಾ ಮನೆಹಾಳು ಮಾಡೋವಂಥಾ ಕಥೆಗಳನ್ನೇ. ಎರಡು-ಮೂರು ವರ್ಷಗಳ ಕಾಲ ಸೀರಿಯಲ್ ಓಡ್ತಾ ಇರ್ಬೇಕು ಅನ್ನೋದಷ್ಟೇ ಅವರ ಉದ್ದೇಶ. ಹೆಂಗಳೆಯರ ಎಮೋಷನ್ಸ್ ಅನ್ನೋದೇ ಅವರ ಬಹುದೊಡ್ಡ ಮಾರ್ಕೆಟ್. ಅದಕ್ಕಾಗಿ ಸಂಬಂಧಗಳನ್ನೆಲ್ಲಾ ತಿರುಚಿಹಾಕಿ, ಅರ್ಥವೇ ಇಲ್ಲದ ಪಾತ್ರಗಳನ್ನು ಸೃಷ್ಟಿಸಿ, ಯದ್ವಾತದ್ವಾ ಕಥೆ ಹೆಣೆಯುತ್ತಾರೆ. ಒಮ್ಮೆ ಹಾಕೋದು ಸಾಲದೆಂದು ಅದನ್ನು ಮರುಪ್ರಸಾರ ಮಾಡುವುದು ಬೇರೆ. ಅದನ್ನು ಮನೆಯ ಹೆಂಗಸರೆಲ್ಲಾ ಕಣ್ಣು ಬಾಯಿ ಬಿಟ್ಟುಕೊಂಡು ನೋಡ್ತಾರೆ. ಧಾರವಾಹಿಯ ಕಥೆಯಲ್ಲಿ ಒಂದು ಚೂರಾದ್ರೂ ಅರ್ಥ ಇದೆಯಾ ಅನ್ನೋದನ್ನ ಅವರ ಮೆದುಳು ಯೋಚನೆ ಮಾಡೋ ಗೋಜಿಗೆ ಹೋಗಲ್ಲ. ಹುಡುಗನೊಬ್ಬ ಎರಡೆರಡು ಹುಡುಗಿಯರಿಗೆ ತಾಳಿ ಕಟ್ಟುವಂಥದ್ದನ್ನು, ತನ್ನ ಹಳೆಯ ಪ್ರಿಯತಮನನ್ನು ಪಡೆಯುವುದಕ್ಕೋಸ್ಕರ ಆತನ ಹೆಂಡತಿಯ ವಿರುದ್ಧ ಯುವತಿಯೊಬ್ಬಳು ಪಿತೂರಿ ಮಾಡುವುದನ್ನೆಲ್ಲಾ ನೋಡುತ್ತ ಬೆಳೆಯುವ ತಮ್ಮ ಮಗ-ಮಗಳ ವ್ಯಕ್ತಿತ್ವ ಅದು ಹೇಗೆ ರೂಪುಗೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನವೂ ಟಿವಿ ಮುಂದೆ ಕುಳಿತೊಡನೆಯೇ ವಯಸ್ಸಿನಲ್ಲಿ ಹಿರಿಯರಾದವರಿಗೂ ಇಲ್ಲದೇ ಹೋಗುವದಕ್ಕೆ ಏನಂತಾ ಹೇಳೋದು ಮಾರಾಯ್ತಿ..?? ಇವರ ಸೀರಿಯಲ್ಸ್ ಹುಚ್ಚು ಅದ್ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಅಲ್ಲಿ ಯಾವುದೋ ಧಾರವಾಹಿಯಲ್ಲಿ ಒಬ್ಬಳು ಕಣ್ಣೀರು ಹಾಕಿದರೆ ಇವರ ಹೊಟ್ಟೆ ಕರುಳಿನಲ್ಲಿ ಸಂಕಟವಾಗುತ್ತದೆ. ಅದೇ ತಮ್ಮದೇ ಕುಟುಂಬಗಳಲ್ಲಿ, ನೆಂಟರಿಷ್ಟರಲ್ಲಿ ಅಂಥಾ ದುರ್ಭಾಗ್ಯ ಹೆಣ್ಣುಮಗಳೊಬ್ಬಳಿದ್ದರೆ, ಅವಳತ್ತ ಇವರು ಒಮ್ಮೆಯೂ ಕಣ್ಣೆತ್ತಿ ಸಹ ನೋಡಲಾರರು."
                      "ನಾವು ಪ್ರೈಮರಿಯಲ್ಲಿ ಓದ್ತಾ ಇರೋವಾಗೆಲ್ಲಾ ಈ ಧಾರವಾಹಿಗಳು ಒಂದು ಲೆವೆಲ್ಲಿಗೆ ಚೆನ್ನಾಗೇ ಇರ್ತಿದ್ವು ಅಲ್ವಾ..??"
                      "ಹ್ಞೂಂ. ಈಗ ಕಾಲ ಸಾರಿ, ಜಗತ್ತು ಬದಲಾಗಿದೆ. ಜನರೂ ಬದಲಾಗಿದ್ದಾರೆ. ಆಗಿನ ದಿನಗಳ ಬಗ್ಗೆ ಮಾತನಾಡುತ್ತಾ ಕೂತರೆ ಮುಗಿಯೋದೇ ಇಲ್ಲ. ಜೊತೆಗೆ ಸಣ್ಣದಾಗಿ ಸಂಕಟವೂ ಆಗತ್ತೆ. ಬಿಡು ಅದನ್ನ."
                       "ಬಿಟ್ಟೆ, ನೋಡು ಗಂಟೆ ಎಂಟೂವರೆ ಆಯ್ತು. ನಡಿ ಊಟಕ್ಕೆ." ಅವಳು ನೀರು ಬಾಟಲನ್ನು ತೆಗೆದುಕೊಳ್ಳುತ್ತಾ ಹೇಳಿದಳು.


Tuesday, 27 January 2015

ಸಂವೇದನೆ..?? ಹಾಗೆಂದ್ರೆ ಏನ್ರಿ..?? ಅದ್ಯಾವ ಆಂಡ್ರಾಯ್ಡ್ ಆಪ್..??

                                            

 ಹಾಗೊಂದು :
                          ಸುಮಾರು ೭-೮ ವರ್ಷಗಳ ಹಿಂದಿನ ಘಟನೆ. ಅಂದು ಬೆಳಂಬೆಳಿಗ್ಗೆಯೇ ಕಾಕ ಫೋನ್ ಅನ್ನು ಕಿವಿಗೆ ಹಚ್ಚಿಕೊಂಡು ಕುಳಿತುಬಿಟ್ಟಿದ್ದರು. ಒಬ್ಬರ ನಂತರ ಒಬ್ಬರಿಗೆ ಕರೆ ಮಾಡಿ ಜೋರು ದನಿಯಲ್ಲಿ ಒಂದೇ ಸಂಗತಿಯನ್ನು ಹೇಳುತ್ತಿದ್ದರು, "ಹಲೋ, ಕೇಳ್ತಾ ಇದ್ಯಾ..?? ಒಂದು ಒಳ್ಳೆ ಸುದ್ದಿ ಇದೆ ಮಾರಾಯ್ರೇ. ಎಲ್.ಐ.ಸಿ.ಯವರು ನಮ್ಮ ಶಾಲೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ. ನಿನ್ನೆ ತಡರಾತ್ರಿ ಫೋನ್ ಮಾಡಿ ತಿಳಿಸಿದರು. ತುಂಬಾ ಸಂತೋಷದ ಸಂಗತಿ ಅಲ್ವಾ..??" ಈ ಒಂದು ಸಂತಸದ ಸಂಗತಿಯನ್ನು ಹಂಚಿಕೊಳ್ಳಲು ಅಂದು ಅವರು ಅದೆಷ್ಟು ಜನರಿಗೆ ಕರೆ ಮಾಡಿದರೋ. ನನಗೆ ಅನಿಸಿತ್ತು, ಇಷ್ಟೆಲ್ಲಾ ಜನರಿಗೆ ಕರೆ ಮಾಡಿಯೇ ಹೇಳುವ ಅಗತ್ಯವಾದರೂ ಏನು..?? ತಡೆಯಲಾಗದೇ ಕೊನೆಗೆ ಕಾಕನ ಹತ್ತಿರ ಕೇಳಿಯೇ ಬಿಟ್ಟೆ. "ಅಲ್ಲ ಕಾಕ, ನಿಮಗೆ ಫ್ರೀ ಎಸ್.ಎಂ.ಎಸ್. ಉಂಟು ತಾನೇ..?? ಮತ್ತೆ ಅಷ್ಟೊಂದು ಜನರಿಗೆ ಕರೆ ಮಾಡುವ ಬದಲು ವಿಷಯ ಹೀಗೆ ಅಂತ ಒಂದು ಟೆಕ್ಟ್ಸ್ ಮೆಸೇಜ್ ಫಾರ್ ವರ್ಡ್ ಮಾಡಿದ್ದರೆ ಆಗುತ್ತಿತ್ತಲ್ಲ..?? ಎಲ್ಲರಿಗೂ ಕರೆ ಮಾಡುತ್ತಾ ಕೂರುವ ಅಗತ್ಯವಿರಲಿಲ್ಲ." ಆಗ ಕಾಕ ಹೇಳಿದ ಮಾತುಗಳನ್ನು ನಾನು ಯಾವ ಕಾಲಕ್ಕೂ ಮರೆಯದಂತೆ ನನ್ನ ಮನಸ್ಸು ಮತ್ತು ಮೆದುಳಿನಲ್ಲಿ ಅಚ್ಚೊತ್ತಿ ನಿಂತುಬಿಟ್ಟವು. ಅವರು ಹೇಳಿದರು, "ಕೂಸೆ, ಮನುಷ್ಯನಿಗೆ ಭಾವನೆ, ಸಂವೇದನೆ ಅನ್ನುವ ಸಂಗತಿಗಳುಂಟು. ಅವುಗಳನ್ನು ಇನ್ನೊಬ್ಬರೊಂದಿಗೆ ಹೇಗೆ ಹಂಚಿಕೊಳ್ಳಬೇಕೋ ಹಾಗೆಯೇ ನಡೆದುಕೊಳ್ಳಬೇಕು. ಈ ಸಂತಸದ ಸುದ್ದಿಗೆ ಬಹಳಷ್ಟು ಜನ ಕಾರಣರಾಗಿದ್ದಾರೆ. ಅವರೆಲ್ಲರಿಗೂ ನಾನೇ ಸ್ವತಃ ಕರೆ ಮಾಡಿ ವಿಷಯ ತಿಳಿಸುವುದು ಸೌಜನ್ಯವೆನಿಸಿಕೊಳ್ಳುತ್ತದೆ. ಟೆಕ್ಟ್ಸ್ ಮೆಸೇಜ್ ಹಾಕುವುದರಿಂದ ಕೇವಲ ವಿಷಯ ವಿನಿಮಯವಾಗುತ್ತದೆ. ಭಾವನೆಗಳ, ಸಂವೇದನೆಗಳ ಅನುಭವವಾಗುವುದಿಲ್ಲ. ಅದಿಲ್ಲದೇ ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಉಳಿಯುವುದಿಲ್ಲ."

ಹೀಗೊಂದು :
                         ಬರ್ತ್ ಡೇ ದಿನ ಸ್ನೇಹಿತನೊಬ್ಬನ ವ್ಯಾಟ್ಸ್ ಆಪ್ ಮೆಸೇಜ್. "ಹೇಯ್, ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ. ಹ್ಯಾಪಿ ಬರ್ತ್ ಡೇ." ಪಕ್ಕದಲ್ಲಿ ನಗುತ್ತಿರುವ, ಬರ್ತ್ ಡೇ ಟೊಪ್ಪಿಯ, ಗಿಫ್ಟ್ ಬಾಕ್ಸ್ ನ ಸ್ಮೈಲಿಗಳು. "ಥ್ಯಾಂಕ್ ಯೂ ಸೋ ಮಚ್." ನಾನು ಉತ್ತರಿಸಿದೆ. "ಪಾರ್ಟಿ ಎಲ್ಲಿ..?? ಯಾವಾಗ..??" ಆತ ಕೇಳಿದ. ನಾನು ಒಡನೆಯೇ ಡ್ರಿಂಕ್ಸ್, ಬರ್ಗರ್, ಚೀಸ್, ಚಾಕ್ಲೇಟ್ ಗಳೆಲ್ಲವುಗಳ ಸ್ಮೈಲಿಗಳನ್ನು ಕಳಿಸಿದೆ. "ಹೇ, ಇದೆಂತಾ ಪಾರ್ಟಿ..??" "ಆನ್ ಲೈನ್ ವಿಷ್ ಗೆ ಆನ್ ಲೈನ್ ಪಾರ್ಟಿ." ನಾನು ತರ್ಕ ಹೇಳಿದೆ. "ನೋಡು, ಪಾರ್ಟಿ ಎಲ್ಲಾ ಹೊಟ್ಟೆಯ ವಿಷಯ ಮಾರಾಯ್ತಿ." ಆತ ಪ್ರತಿಕ್ರಿಯಿಸಿದ. " ಅಂತೆಯೇ ಶುಭಾಶಯ ಕೂಡ ಹೃದಯದ ವಿಷಯ ಮಾರಾಯ." ನಾನು ಉತ್ತರಿಸಿದೆ.


                            
ಕೇವಲ ಎಂಟು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಯಾಗಿ ಹೋಗಿದೆ. ಅಷ್ಟೇಕೆ, ತೀರಾ ಕಳೆದೊಂದು ವರ್ಷದಲ್ಲೇ ಜಗತ್ತು ಬಿಡಿ, ಜನರು ಅದೆಷ್ಟು ಛೇಂಜ್ ಆಗಿದ್ದಾರೆ. ಹೋದವರ್ಷ ಕರೆ ಮಾಡಿ ಹುಟ್ಟುಹಬ್ಬದ ಶುಭಾಷಯಗಳನ್ನು ಹೇಳಿದವರು ಈ ಸಲ ವ್ಯಾಟ್ಸ್ ಆಪ್ ಮೆಸೇಜುಗಳಲ್ಲೇ ವಿಷ್ ಮಾಡಿದರು. ಹಿಂದಿನ ಬಾರಿ ಹ್ಯಾಪಿ ಬರ್ತ್ ಡೇ, ಮೇ ಆಲ್ ಯುವರ್ ಡ್ರೀಮ್ಸ್ ಕಮ್ ಟ್ರ್ಯೂ ಎಂದವರು ಈ ಬಾರಿ WHB(!!!) ಎಂದಷ್ಟೇ ಟೈಪ್ ಮಾಡಿದರು. ಇನ್ನು ಕೆಲವರು "ನೀನು ಫೇಸ್ ಬುಕ್ಕಿನಲ್ಲಿ ಬರ್ತ್ ಡೇ ಪಬ್ಲಿಕ್ ಮಾಡಿಲ್ಲ. ಇಲ್ಲದಿದ್ದರೆ ನೋಟಿಫಿಕೇಷನ್ ಬರುತ್ತಿತ್ತು. ಹಾಗಾಗಿಯೇ ನನಗೆ ಮರೆತು ಹೋಯಿತು." ಎಂದರು. ಅಯ್ಯೋ ಕರ್ಮವೇ, ಇವರಿಗೆಲ್ಲಾ ಏನು ಹೇಳುವುದು ಮಾರಾಯ್ರೇ..?? ಹುಟ್ಟುಹಬ್ಬದ ಶುಭಾಶಯವೊಂದರಿಂದಾಗಿ ಹೇಳಿದವರಿಗೆ, ಹೇಳಿಸಿಕೊಂಡವರಿಗೆ ದೊರೆಯುವ ಆನಂದದ ಅರಿವೇ ಇವರಿಗಿಲ್ಲವೇ..?? ಅಥವಾ ಆಂಡ್ರಾಯ್ಡ್ ಫೋನ್ ಬಂದ ಮರುಕ್ಷಣವೇ ಭಾವನೆ, ಸಂವೇದನೆಗಳೆಲ್ಲವೂ ಹಾರಿ ಹೋದವೇ..?? ಇನ್ನು ಬರ್ತ್ ಡೇ ನೆನಪಿಟ್ಟುಕೊಳ್ಳಲೂ ಒಂದು ನೋಟಿಫಿಕೇಷನ್ ಅನಿವಾರ್ಯವೇ..?? ಫೇಸ್ ಬುಕ್ ಸೇರುವ ಮೊದಲು ಎಲ್ಲರ ಬರ್ತ್ ಡೇಟ್ಸ್ ನೆನಪಿರುತ್ತಿದ್ದವಲ್ಲ..?? ಈಗ ಮತ್ತೇನು, ಮೆದುಳನ್ನು ಫೇಸ್ ಬುಕ್ಕಿಗೆ ಮಾರಿಕೊಂಡಿರಾ..?? ಹೀಗೆಲ್ಲಾ ಹೇಳಿದರೆ ಅಯ್ಯೋ, ಇವತ್ತು ಎಲ್ಲಾ ಹಾಗೆ. ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗ್ಬೇಕಪಾ. ಮೊದಲಿನ ಹಾಗೆ ಇರಬೇಕಂದ್ರೆ ಹೇಗಾಗುತ್ತೆ ಅಂತಾ ಮೂಗು ಮುರಿಯುವವರೇ ಇಂದು ಜಾಸ್ತಿ. ಸ್ವಾಮಿ, ಅಪ್ಡೇಟ್ ಅನ್ನೋದು ನಮ್ಮ ಚಿಂತನೆ, ಯೋಚನೆಗಳಲ್ಲಾಗಬೇಕು. ಅದು ಬಿಟ್ಟು ಮನುಷ್ಯನ ಮೂಲ ಸ್ವಭಾವಗಳನ್ನೇ ಅಪ್ಡೇಟ್ ಹೆಸರಿನಲ್ಲಿ ಮರೆತು ಕೂರುವುದಲ್ಲ. ಆಗ ಸಂಬಂಧಗಳೆಂಬ ಸಿಸ್ಟಮ್ ಕ್ರಾಷ್ ಆಗುತ್ತದೆಯಷ್ಟೆ. ಹಿಂದಿನ ವರ್ಷ ನನ್ನ ಸರ್ ಒಬ್ಬರ ಸ್ನೇಹಿತನ ಮದುವೆ ನಿಶ್ಚಯವಾಗಿತ್ತಂತೆ. ಆತ ತನ್ನ ಸ್ನೇಹಿತರಿಗೆಲ್ಲಾ ಮುಖತಃ ಭೇಟಿ ಮಾಡಿ ಮದುವೆಗೆ ಕರೆಯುವುದಿರಲಿ, ಸೌಜನ್ಯಕ್ಕೆಂದು ಕಾರ್ಡ್ ಕೂಡಾ ಇನ್ನೊಬ್ಬರ ಮೂಲಕವೋ ಅಥವಾ ಪೋಸ್ಟಿನಲ್ಲಿಯೋ ಕಳಿಸಲಿಲ್ಲವಂತೆ. ಬದಲಾಗಿ ಫೇಸ್ ಬುಕ್ಕಿನಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ ಒಂದನ್ನು ಹಾಕಿ, ಒಂದಿಷ್ಟು ಜನರನ್ನು ಟ್ಯಾಗ್ ಮಾಡಿ, ಮದುವೆಗೆ ಆಮಂತ್ರಿಸಲು ಬರಲಾಗದಿದ್ದಕ್ಕೆ ವಿಷಾದಿಸುತ್ತೇನೆ. ದಯವಿಟ್ಟು ಇದನ್ನೇ ಆಹ್ವಾನವೆಂದು ತಿಳಿದು ಮದುವೆಗೆ ಬನ್ನಿ ಎಂದೊಂದು ಪೋಸ್ಟ್ ಹಾಕಿದನಂತೆ. ಅವನ ಸ್ನೇಹಿತರೂ ಅವನಂತೆಯೇ ಪ್ರತಿಕ್ರಿಯಿಸಿದರು. ದೊಡ್ಡದೊಂದು ಗಿಫ್ಟ್ ಬಾಕ್ಸ್ ನ ಫೋಟೋ ಒಂದನ್ನು ಅವನಿಗೆ ಟ್ಯಾಗ್ ಮಾಡಿ, ಮದುವೆಗೆ ಬರಲಾಗದಿದ್ದಕ್ಕೆ ವಿಷಾದಿಸುತ್ತೇವೆ. ದಯವಿಟ್ಟು ಇದೇ ನಮ್ಮ ಉಡುಗೊರೆಯೆಂದು ತಿಳಿ ಎಂದು ಪೋಸ್ಟ್ ಮಾಡಿದರಂತೆ.
                                   ತಾಂತ್ರಿಕ ಅಭಿವೃದ್ಧಿಯ ಲಾಭ ಉಣ್ಣುತ್ತಿರುವ ಇವತ್ತಿನ ಮನುಷ್ಯನಿಗೆ ತನ್ನ ಮೂಲಗುಣಗಳೇ ಮರೆತುಹೋದಂತಿವೆ. ಕೆಲವರಿಗಂತೂ ತಾಂತ್ರಿಕತೆಯ ಉಗಮಕ್ಕಿಂತಲೂ ಮೊದಲಿನಿಂದಲೂ ಮನುಷ್ಯನ ಅಸ್ತಿತ್ವವಿದೆ ಎನ್ನುವ ಸರಳ ಸತ್ಯವೇ ಗೊತ್ತಿಲ್ಲ. ಇಂದಿನ ದಿನ ಎಲೆಕ್ಟ್ರಾನಿಕ್ ಗ್ಯಾಜೆಟ್ಟುಗಳಿಗೂ, ಅಪ್ಲಿಕೇಷನ್ ಪ್ರೋಗ್ರಾಮುಗಳಿಗೂ, ಮನುಷ್ಯನೆಂಬ ಅತಿ ಬುದ್ಧಿವಂತ ಸೃಷ್ಟಿಗೂ ವ್ಯತ್ಯಾಸವೇ ಇಲ್ಲ. ಮೊದಲಿನವೆರಡೂ ಮನುಷ್ಯನ ಮೇಲೆ ಅವಲಂಬಿತವಾಗುವುದು ಒಪ್ಪುವ ಮಾತು. ಯಾಕೆಂದರೆ ಅವುಗಳನ್ನು ನಾವೇ ಸೃಷ್ಟಿಸಿದ್ದು ತಾನೇ..?? ಆದರೆ ಮನುಷ್ಯನೇ ಉಳಿದವುಗಳ ಮೇಲೆ ಅವಲಂಬಿತನಾಗುವುದು ಎಷ್ಟರ ಮಟ್ಟಿಗೆ ಸರಿ..?? ಟೆಕ್ನಾಲಜಿಯ ಹೆಸರು ಜಪಿಸುತ್ತಾ ಮನುಷ್ಯ ತನ್ನನ್ನು ತಾನೇ ಮಾರಿಕೊಳ್ಳುತ್ತಾ ಸಾಗುತ್ತಿಲ್ಲವೇ..?? ತಾನೇ ಸಂಶೋಧಿಸಿದ, ಆವಿಷ್ಕರಿಸಿದ ಸಂಗತಿಗಳ ಕೈಗೊಂಬೆಯಾಗಿ ಅಧ್ಬುತ ಮತ್ತು ಅಮೂಲ್ಯವಾದ ತನ್ನ ಭಾವನಾ ಶಕ್ತಿ, ಸಂವೇದನಾ ಶಕ್ತಿ, ವಿವೇಚನಾ ಶಕ್ತಿಗಳನ್ನು ಕಳೆದುಕೊಳ್ಳುತ್ತಿಲ್ಲವೇ..?? ಫ್ರೀಡಂ ಆಫ್ ಸ್ಪೀಚ್, ಎಕ್ಸ್ ಪ್ರೆಷನ್ಸ್, ಬಿಲೀಫ್, ವರ್ಶಿಪ್ ಎಂದೆಲ್ಲಾ ದೊಡ್ಡ ದೊಡ್ಡ ಮಾತನಾಡುವ ಇಪ್ಪತ್ತೊಂದನೆಯ ಶತಮಾನದ ಮನುಷ್ಯ ತನ್ನತನವೆನ್ನುವುದನ್ನೇ ದಾಸ್ಯದ ಅಡಿಯಲ್ಲಿಟ್ಟುಕೊಂಡು ಬದುಕುತ್ತಿಲ್ಲವೇ..?? ಹೀಗೆ ಸಾಗಿದರೆ ಮುಂದೊಂದು ದಿನ ಮನುಷ್ಯನಿಗೂ ಮಷಿನುಗಳಿಗೂ ವ್ಯತ್ಯಾಸವೇನು ಉಳಿಯುದಿಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಅಜ್ಜ-ಅಜ್ಜಿಯರು ನಮ್ಮ ಕಾಲದಲ್ಲಿ ಹೀಗಿರ್ಲಿಲ್ಲಪ್ಪಾ ಅಂತಾ ಹೇಳುವುದನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಮಗೂ ಅವರಿಗೂ ಒಂದು ಜನರೇಷನ್ ಗ್ಯಾಪ್ ಇದೆ ಅನ್ನುವ ಸತ್ಯದಿಂದ ಅವರು ಹೇಳಿದ್ದನ್ನು ಒಪ್ಪಬಹುದು. ಆದರೆ ಈಗ ಸ್ವತಃ ನಾವೇ ನಮಗಿಂತ ೩-೪ ವರ್ಷಕ್ಕೆ ಸಣ್ಣವರನ್ನು ನೋಡಿ ಇದೇ ಮಾತನ್ನು ಹೇಳುವಂತಾಗುತ್ತದಲ್ಲಾ..?? ಇದು ಅರಗಿಸಿಕೊಳ್ಳಲಾಗದಂಥ ಸಂಗತಿ. ಅಂಥದ್ದೇನಾಗಿದೆ ಈಗಿನ ಕಾಲದಲ್ಲಿ..?? ಶರವೇಗದಲ್ಲಿ ಸಾಗುತ್ತಿರುವ ತಾಂತ್ರಿಕ ಅಭಿವೃದ್ಧಿಯಿಂದಾಗಿ ನಮ್ಮೆಲ್ಲರ ಬದುಕು ಸುಲಭವೇನೋ ಆಗಿದೆ. ಆದರೆ ಮೊದಲಿದ್ದ ಸುಂದರತೆ ಈಗಿಲ್ಲ. ಅದನ್ನು ತಾಂತ್ರಿಕತೆಯೇ ಹಂತ ಹಂತವಾಗಿ ಕಿತ್ತುಕೊಳ್ಳುತ್ತ ಸಾಗಿದೆ.
                                   ಕೊನೆಯಲ್ಲೊಂದು ಮಾತು. "ಸಂವೇದನೆ ಅಂದ್ರೆ ಏನ್ರಿ..?? ಅದ್ಯಾವ ಆಂಡ್ರಾಯ್ಡ್ ಆಪ್..?? ಯಾವುದಕ್ಕೆ ಯೂಸ್ ಮಾಡ್ತಾರೆ ಅದನ್ನ..??" ಅಂತಾ ಕೇಳೋ ಕಾಲ ಮುಂದೊಂದು ದಿನ ಬರದೇ ಇದ್ರೆ ಸಾಕು.