Tuesday, 25 November 2014

ಕ್ಷಮಿಸುವುದೇ..??ತನ್ನ ಮೌನದಿಂದ ನನ್ನ ಮಾತನ್ನು
ತನ್ನ ಗೈರಿನಿಂದ ನನ್ನ ಹಾಜರಿಯನ್ನು
ತನ್ನದೆಲ್ಲದರಿಂದ ನನ್ನದೆಲ್ಲವನ್ನೂ
ಸದ್ದಿಲ್ಲದೇ ಕದ್ದೊಯ್ದ ಅವ
ನನ್ನೊಬ್ಬಳನ್ನೇ ಬಿಟ್ಟು ಹೋದನೇಕೆ..??

ರೆಪ್ಪೆ ತೆರೆಯುವ ಮುನ್ನವೇ ಕಣ್ಣಿಗೆ
ಕನಸುಗಳ ಬಣ್ಣ ಹಚ್ಚಿ
ಬಯಕೆಗಳಿಗೆ ರೆಕ್ಕೆ ತೊಡಿಸಿದಾತ
ಇದೀಗ ನೆನಪುಗಳ ಗೂಡಿನೊಳಗೆ
ನನ್ನನ್ನು ಬಂಧಿ ಮಾಡಿದನೇಕೆ..??

ಸದಾ ನನಗೆ ತನ್ನ ಸಂಗಾತದ
ಆಣೆ ಪ್ರಮಾಣಗಳನಿತ್ತು ಕೊನೆಯಲ್ಲಿ
ಏಕಾಂತ ಮಾತ್ರವೊಂದನ್ನೇ ಜೊತೆಯಾಗಿಸಿ
ಹಿಂತಿರುಗಿಯೂ ನೋಡದೇ ಹೋದನೇಕೆ..??
ನನ್ನ ನೆನಪೂ ಕಾಡದೇ ಸುಮ್ಮನಿತ್ತೇ..??

ಅವ ಮರಳಿ ಬರುವನೇ ಗೆಳತಿ..??
ನನಗಾಗಿ, ನನ್ನ ಪ್ರೀತಿಗಾಗಿ
ಬಾಡಿ ಹೋದ ಸುಮದಿಂದ ತಿರುಗಿ
ಸಹಜ ಸೌರಭವು ಹೊಮ್ಮುವುದೇ..??
ಚೂರಾದ ಹೃದಯ ಅವನ ಕ್ಷಮಿಸಬಲ್ಲುದೇ..??


ಡೈರಿ - ಪುಟ ೬೬


                                 "ನಾಳೆಯ ಲ್ಯಾಬ್ ಎಕ್ಸಾಮ್ ಕಣೇ. ಇದೊಂದು ಎಕ್ಸ್ ಪೆರಿಮೆಂಟ್ ಹೇಗೆ ಮಾಡೋದು ಅಂತಾನೇ ಗೊತ್ತಿಲ್ಲ. ಅವಳ ಹತ್ತಿರ ಹೇಳಿಸ್ಕೊಂಡು ಬರ್ತೀನಿ" ಅಂತಾ ತನ್ನ ಗೆಳತಿಯ ರೂಮಿಗೆ ಹೋದ ನನ್ನ ರೂಮ್ ಮೇಟ್ ಮಹಾರಾಣಿ ಎರಡು ತಾಸು ಕಳೆದರೂ ವಾಪಸ್ಸು ಬರಲಿಲ್ಲ. ಅವಳಿಲ್ಲದಿದ್ದರೆ ನನ್ನ ಬಾಯಿಗೆ ಬೀಗ ತಾನೇ..?? ‘ಶೆಟ್ಟಿ ಹೋದಲ್ಲೇ ಪಟ್ಟಣ’ ಎಂಬಂತಾಯಿತಲ್ಲ ಇವಳ ಕತೆ ಎಂದುಕೊಳ್ಳುತ್ತಿರುವಾಗಲೇ ಭಡ್ ಎಂದು ಬಾಗಿಲು ದೂಡಿಕೊಂಡು ಒಳಗೆ ಬಂದಳು ಪುಣ್ಯಾತ್ಗಿತ್ತಿ.
                                 "ಇವತ್ತೇ ಲ್ಯಾಬ್ ಎಕ್ಸಾಮ್ ಮುಗಿಸಿ ಬರ್ತೀಯೇನೋ ಅಂದ್ಕೊಂಡೆ ನಾನು. ಅದೊಂದು ಎಕ್ಸ್ ಪೆರಿಮೆಂಟ್ ಅಷ್ಟು ಟಫ್ ಇದ್ಯಾ..??" ನಾನು ಕೇಳಿದೆ. ಅವಳು ಉಸ್ಸಪ್ಪಾ ಎನ್ನುತ್ತಾ ಬೆಡ್ ಮೇಲೆ ಧೊಪ್ಪನೆ ಕುಳಿತಳು.
                                  "ಟಫ್ಫು ಇಲ್ಲಾ, ಗಿಫ್ಫು ಇಲ್ಲಾ. ಆ ಮಾರಾಯ್ತಿಯ ಮುಖವೆಲ್ಲಾ ಚಳಿಗೆ ಡ್ರೈ ಆಗೋಗಿದೆಯಂತೆ. ಅದೇ ಚಿಂತೆಲಿ ಅವಳು ಒಂದು ತಾಸು ತನ್ನ ಗೋಳು ಹೇಳ್ತಾ ಕೂತ್ಕೊಂಡ್ಳು. ಆಮೇಲೆ ಕಾಟಾಚಾರಕ್ಕೆ ಎಕ್ಸ್ ಪೆರಿಮೆಂಟ್ ಹೇಳಿಕೊಟ್ಳು. ನಂಗೆ ಅವಳು ಹೇಳಿದ್ದು ದೇವ್ರಾಣೆ ಅರ್ಥ ಆಗ್ಲಿಲ್ಲ. ಇನ್ನೊಮ್ಮೆ ಯಾರ ಹತ್ರನಾದ್ರೂ ಹೇಳಿಸ್ಕೊಬೇಕು."
                                 ನಂಗೆ ಜೋರಾಗಿ ನಗು ಬಂತು. "ಚಳಿರಾಯನಿಂದಾಗಿ ನಿನಗೆ ಎಕ್ಸ್ ಪೆರಿಮೆಂಟ್ ಹೇಳಿಸಿಕೊಳ್ಳಲಿಕ್ಕೂ ಆಗ್ಲಿಲ್ಲ ಅನ್ನು" ನಗುತ್ತಲೇ ಕೇಳಿದೆ.
                                "ಹೋಗೆ, ನಿಂದೊಂದು ತಮಾಷೆ. ಅಲ್ಲಾ ಕಣೇ, ಈ ಚಳಿರಾಯನಿಗೆ ಹುಡುಗಿಯರ ಮೇಲೆ ಹಳೆಯ ದ್ವೇಷ ಏನಾದ್ರೂ ಇರಬಹುದಾ ಅಂತ ಸಂದೇಹ ನನಗೆ. ಹುಡುಗಿಯರು ಎಷ್ಟೆಲ್ಲಾ ಖರ್ಚು ಮಾಡಿ ಕಷ್ಟ ಪಟ್ಟು ಅಷ್ಟು ವರ್ಷಗಳಿಂದ ಜತನದಿಂದ ಕಾಪಾಡ್ಕೊಂಡು ಬಂದ ಸೌಂದರ್ಯಾನಾ ಇವ ಒಂದೆರಡು ದಿನಗಳಲ್ಲಿಯೇ ಕೆಡಿಸಿಬಿಡುತ್ತಾನಲ್ಲಾ. ಆಮೇಲೆ ವ್ಯಾಸ್ಲೀನ್, ನೇವಿಯಾ, ಬೋರೋಪ್ಲಸ್ ಅದೂ ಇದೂ ಅಂತೆಲ್ಲಾ ಮುಖ, ಮೈ-ಕೈಗಳಿಗೆ ಬಳಿದುಕೊಂಡರೂ ಚಳಿರಾಯನ ಪ್ರತಾಪದ ಮುಂದೆ ಅವು ಕೂಡಾ ಸೋತು ಆತನಿಗೆ ಶರಣಾಗಿ ಬಿಡುತ್ವೆ. ಪಾಪ, ನಮ್ಮ ಹುಡುಗಿಯರು ತಾಸೆರಡು ಹೆಚ್ಚಾಗಿ ಕನ್ನಡಿಯ ಮುಂದೆ ನಿಂತು ಚಳಿರಾಯನಿಗೆ ಶಾಪ ಹಾಕುತ್ತಾ ಪ್ಚ್ ಪ್ಚ್ ಅನ್ನುವುದೊಂದನ್ನು ಬಿಟ್ಟರೆ ಮತ್ತೇನು ತಾನೇ ಮಾಡಬಲ್ಲರು..??"
                               "ದ್ವೇಷದ ಕತೆ ನಂಗೊತ್ತಿಲ್ಲ. ಆದರೆ ನಮ್ಮ  ಹುಡುಗಿಯರೂ ಒಂಥರಾ ಒಣಾ ಅಲ್ವೇನೆ..?? ಚಳಿಗಾಲವಿಡೀ ಕೈ-ಕಾಲುಗಳಿಗೆ ಗ್ಲೌಸ್, ಸಾಕ್ಸ್ ಹಾಕಿಕೊಂಡು ಮೈಗೆ ಶಾರ್ಟ್ ಟಾಪ್, ಚಡ್ಡಿ ತೊಟ್ಟುಕೊಂಡು ಓಡಾಡುತ್ತಾರೆ. ಹೀಗಾದರೆ ಚಳಿರಾಯ ಸುಮ್ಮನೇ ಬಿಟ್ಟಾನೆಯೇ..?? ಅದೂ ಅಲ್ದೇ ಚಳಿಗಾಲದಲ್ಲಿ ಸ್ಕಿನ್ ಡ್ರೈ ಆಗೋದು ಯಾವಾಗ್ಲೂ ಇದ್ದದ್ದೇ. ಮೂರು-ನಾಲ್ಕು ತಿಂಗಳುಗಳಷ್ಟೆ, ಖಾಯಂ ಅಲ್ವಲ್ಲಾ."
                               "ಏನೋ ಕರ್ಮ. ಒಟ್ನಲ್ಲಿ ಇವತ್ತು ಸುಮ್ನೆ ಒಂದು ತಾಸು ವೇಸ್ಟ್ ಮಾಡಿ ನಾನು ಅವಳ ಗೋಳು ಕೇಳೋ ಹಾಗಾಯ್ತು. ಫ್ಯಾನ್ ಹಾಕ್ಕೊಂಡು ಕುಳಿತಿದ್ದೀಯಲ್ಲಾ ಮಾರಾಯ್ತಿ, ಚಳಿ ಆಗ್ತಿಲ್ವಾ ನಿಂಗೆ..??" ಗೊಣಗುತ್ತಾ ಫ್ಯಾನ್ ಆರಿಸಲೆಂದು ಎದ್ದಳು.


Saturday, 8 November 2014

‘ಕನಸು ಕಾಣೆಯಾಗಿದೆ’ - ಹೇಗಿದೆ..?? ಏನಿದೆ..??

                                              
                            ಒಂದು ವರ್ಷದ ಹಿಂದಿನ ಮಾತು. ದಿನಪತ್ರಿಕೆಯೊಂದನ್ನು ತಿರುವು ಹಾಕುತ್ತಿರುವಾಗ ‘ಕನಸು ಕಾಣೆಯಾಗಿದೆ’ ಅನ್ನೋ ಹೊಸ ಕನ್ನಡ ಕಾದಂಬರಿಯೊಂದು ಬಿಡುಗಡೆಯಾಗಿರುವ ಸಂಗತಿ ಕಣ್ಣಿಗೆ ಬಿತ್ತು. ಶೀರ್ಷಿಕೆಯೇ ಬಹಳವಾಗಿ ನನ್ನನ್ನು ಆಕರ್ಷಿಸಿತು. ಎರಡು-ಮೂರು ದಿನಗಳಲ್ಲಿ ಅದೆಷ್ಟು ನನ್ನನ್ನು ಸತಾಯಿಸಿತೆಂದರೆ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ನಾನೊಂದು ಕವಿತೆಯನ್ನು ಬರೆದಾಗಿತ್ತು. ಇನ್ನು ನನ್ನ ಕೈಲಾಗುವುದಿಲ್ಲವೆಂಬುವ ಸತ್ಯ ಮನದಟ್ಟಾದ ಮೇಲೆ ಸೀದಾ ಕೊಪ್ಪಿಕರ್ ತನಕ ಹೋಗಿ ಸಪ್ನಾ ಬುಕ್ ಹೌಸ್ ನಿಂದ ಪುಸ್ತಕವನ್ನು ಕೊಂಡುತಂದಿದ್ದೆ. ಇಂಟರ್ನಲ್ ಎಕ್ಸಾಮ್ಸ್ ಮುಗಿಯುವುದನ್ನೇ ಕಾದು ಕುಳಿತಿದ್ದು ಒಂದೇ ಸುತ್ತಿನಲ್ಲಿ ಓದಿ ಮುಗಿಸಿದ್ದೆ. ಒಂದ್ಸಲ ನನ್ನೊಳಗೆ ನನ್ನನ್ನು ಇಳಿಸಿ ಮತ್ತೆ ಹೊರಗೆಳೆದುಕೊಂಡು ಬಂದಂತಹ ಅನುಭವ. ಅದರಲ್ಲೂ, "ನೋಡೋ, ಈ ಇಡೀ ಪ್ರಪಂಚ ಕ್ಯೂಬಿಕಲ್ ಗಳಿಂದಲೇ ತುಂಬಿದೆ. ನಾವು ಏನಿದ್ರೂ  ಇಲ್ಲಿ ಒಂದು ಕ್ಯೂಬಿಕಲ್ ನಿಂದ ಇನ್ನೊಂದಕ್ಕೆ ಹೋಗ್ತಾ ಇರ್ತೀವಿ." ಈ ಒಂದೇ ಒಂದು ಸಾಲು ಅದೆಷ್ಟು ಬಾರಿ ಬಿಡದೇ ನನ್ನನ್ನು ಕಾಡಿತ್ತು ಅಂತೀರಿ. ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲವೂ, ಎಲ್ಲರೂ ಕ್ಯೂಬಿಕಲ್ ಅನ್ನಿಸಲಿಕ್ಕೆ ಶುರುವಾಗಿಬಿಟ್ಟಿತ್ತು. ಜೊತೆಗೆ ನಾನೂ ಕೂಡ ಒಂದು ಕ್ಯೂಬಿಕಲ್ ಆಗಿಹೋದ್ರೆ ಅನ್ನೋ ಸಣ್ಣ ಭಯವೂ ಸ್ವಲ್ಪ ದಿನ ಮನೆಮಾಡಿತ್ತು. ಕೊನೆಯಲ್ಲಿ ಹಾಗೆ ಕ್ಯೂಬಿಕಲ್ ಆಗದೇ ಇರೋಕೆ ಏನು ಮಾಡೋದು ಪ್ರಶ್ನೆಗೆ ಉತ್ತರವೂ ಇದೇ ಪುಸ್ತಕದಲ್ಲಿ ಸಿಕ್ಕಿತೆನ್ನಿ. ಅಂಥಾದ್ದು ಏನಿದೆ ‘ಕನಸು ಕಾಣೆಯಾಗಿದೆ’ಯಲ್ಲಿ..??
                                 ತನ್ನ ಸುತ್ತ, ತನ್ನ ಬದುಕಿನ ಸುತ್ತ ಅರಿವಿದ್ದೋ ಇಲ್ಲದೆಯೋ ಬೇಲಿಗಳನ್ನು ನಿರ್ಮಿಸಿಕೊಂಡು ಬದುಕುವಾಗ, ಅದೊಂದು ದಿನ ಒಮ್ಮಿಂದೊಮ್ಮೆಲೇ ಎಲ್ಲ ಇದ್ದೂ ಏನೂ ಇಲ್ಲದಂಥ ಭಾವ ಅತಿಯಾಗಿ ಕಾಡಲಿಕ್ಕೆ ಶುರುವಾಗಿ, ಕೊನೆಗೆ ಇದ್ಯಾಕೆ ಹೀಗೆ ಕಾಡ್ತಿದೆ ಅಂತ ತಲೆ ಕೆರೆದುಕೊಂಡು ಅದರ ರಹಸ್ಯ ಭೇದಿಸಲು ಹೊರಟಾಗ, ನಮಗೇ ತಿಳಿದಿರದ ನಮ್ಮ ಕುರಿತಾದ ತೀರಾ ಸಾಮಾನ್ಯ ಸಂಗತಿಗಳೂ ಅರಿವಿಗೆ ಬಂದು ಅವೆಲ್ಲವೂ ಅದ್ಭುತವೆನಿಸತೊಡಗುತ್ತವಲ್ಲಾ..?? ಇಲ್ಲಿ ಮಿಥುನ್ ಕತೆಯೂ ಹೀಗೆಯೇ. ತನ್ನ ಯಾಂತ್ರಿಕ ಬದುಕಿನಲ್ಲಿ ತಾನಾರೆಂಬುದೇ ಮರೆತುಹೋಗಿರುವಷ್ಟರ ಮಟ್ಟಿಗೆ ಮುಳುಗಿ ಹೂತು ಹೋಗಿರುವ ಅವನಿಗೆ ಒಂದು ದಿನ ತಿಳಿಯುವ ಕಟು ಸತ್ಯವೇನೆಂದರೆ ತನಗೇ ಕನಸುಗಳೇ ಬೀಳುತ್ತಿಲ್ಲವೆಂಬುದು. ಅರೇ, ತನಗೇಕೆ ಕನಸುಗಳು ಬೀಳುತ್ತಿಲ್ಲ ಎಂದು ಚಿಂತಿತನಾಗುವ ಅವನು ಇಷ್ಟು ದಿನಗಳೂ ಕನಸುಗಳು ಬೀಳುತ್ತಿಲ್ಲವೆಂಬ ವಿಷಯ ತಿಳಿಯದೇ ಹೋಯಿತಲ್ಲ ಎಂದು ಪೇಚಾಡುತ್ತಾನೆ. ತನ್ನ ಕನಸುಗಳನ್ನು ಹುಡುಕಲಿಕ್ಕೆ ಮುಂದಾಗುತ್ತಾನೆ. ಈ ಹುಡುಕಾಟ ತನ್ನಿಂದಲೇ ಬಹುದೂರ ಸಾಗಿದ್ದ ಅವನನ್ನು ಹಂತ ಹಂತವಾಗಿ ಮರಳಿ ತನ್ನೆಡೆಗೇ ಕರೆತರುತ್ತದೆ. ಅವನಿಗೂ ಎಲ್ಲರಂತೆಯೇ ಸಹಜವಾಗಿ ಕನಸುಗಳು ಬೀಳಲು ಪ್ರಾರಂಭವಾಗುತ್ತವೆ.
                                    ಈ ಮಿಥುನ್ ಕೇವಲ ಕಾದಂಬರಿಯೊಂದರ ಪಾತ್ರವಲ್ಲ, ಆದರೆ ಆತ ನಮ್ಮೊಳಗೂ ಎಲ್ಲೋ ಒಂದು ಮೂಲೆಯಲ್ಲಿ ಇದ್ದಾನೆ ಎನ್ನುವ ಸಂಗತಿ ಪುಸ್ತಕದ ಹಾಳೆಗಳನ್ನು ಒಂದೊಂದಾಗಿ ತಿರುವಿದಂತೆಲ್ಲಾ ನಿಚ್ಚಳವಾಗಿ ಗೋಚರಿಸುತ್ತಾ ಹೋಗುತ್ತದೆ. ಪುಸ್ತಕದ ಕೊನೆಯ ಪುಟವನ್ನು ತಲುಪುವ ಹೊತ್ತಿಗೆಲ್ಲಾ "ನನಗೆ ಕೊನೆಯ ಬಾರಿಗೆ ಕನಸು ಬಿದ್ದಿದ್ದು ಯಾವಾಗ..?" ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡು ಉತ್ತರ ಹುಡುಕಲು ತೊಡಗದಿದ್ದರೆ ಕೇಳಿ. ಅದೇ ಈ ಕಾದಂಬರಿಯ ಶ್ರೇಷ್ಠತೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಸರಳವಾದ ಭಾಷೆ, ಹೊಸತಾದ ನಿರೂಪಣಾ ಶೈಲಿಯಿದ್ದು ಕುತೂಹಲ ಕಾಯ್ದುಕೊಳ್ಳುತ್ತದೆ. ಕೆಲವು ಸಾಲುಗಳು, ಪ್ಯಾರಾಗಳು ಮನಸ್ಸಿನ ಮೇಲೆ ಗಟ್ಟಿಯಾಗಿ ಅಚ್ಚು ಮೂಡಿಸುವಂತಿವೆ. ಅವು ಕಾಡುವ ಪರಿಯನ್ನು ಕಾದಂಬರಿಯನ್ನು ಓದಿಯೇ ಅನುಭವಿಸಬೇಕು. ಜೀವನವೆಂದರೆ ಓಟವೆಂದು ಬಗೆದು ಸದಾ ಓಡುತ್ತಲೇ ಇದ್ದರೂ ಎಲ್ಲಿಯೂ ತಲುಪದೇ ನಿಂತಲ್ಲೇ ಇರುವವರು, ಬದುಕೆಂದರೆ ಅದೊಂದು ಪಯಣವೆಂಬ ಸರಳ ಸತ್ಯವನ್ನರಿತು ಒಂದೊಂದೇ ಹೆಜ್ಜೆಯನಿಟ್ಟು ಆರಾಮದಾಯಕವಾಗಿ ನಡೆದು ಸಾಗುತ್ತಿರುವವರು - ಪ್ರತಿಯೊಬ್ಬರೂ ಓದಲೇಬೇಕಾದಂತಹ ಪುಸ್ತಕವಿದು. ತಡ ಮಾಡಬೇಡಿ, ಕೂಡಲೇ ‘ಕನಸು...’ ಕೊಂಡುತನ್ನಿ.
                                ಹ್ಞಾಂ, ಬಹುಮುಖ್ಯವಾದ ವಿಷಯವೊಂದನ್ನು ಹೇಳಲು ಮರೆತೆ. ಈ ಕೃತಿಯು ೨೦೧೪ನೇ ಸಾಲಿನ ಧಾರವಾಡದ ಪ್ರತಿಷ್ಠಿತ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಯುವ ಬರಹಗಾರರಿಗೆ ನೀಡುವ ‘ಬೇಂದ್ರೆ ಗ್ರಂಥ ಬಹುಮಾನ ಪುರಸ್ಕಾರ’ಕ್ಕೆ ಪಾತ್ರವಾಗಿದೆ. ಇಂದು ಸಂಜೆ ಐದು ಗಂಟೆಗೆ ಧಾರವಾಡದ ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಲಿದೆ. ಅಭಿನಂದನೆಗಳು ನಟರಾಜು ಅವರಿಗೆ. ಅಂತೆಯೇ ಒಂದೊಳ್ಳೆ ಕೃತಿಯನ್ನು ಕನ್ನಡ ಓದುಗರ ಕೈಲಿರಿಸಿದ್ದಿಕ್ಕೆ ಧನ್ಯವಾದಗಳೂ ಕೂಡ.


Saturday, 1 November 2014

ಡೈರಿ - ಪುಟ ೬೫


                         "ನನ್ನ ಕ್ಲಾಸ್ ಮೇಟ್ಸ್ ತುಂಬಾ ಜನ ಕೇಳ್ತಾ ಇರ್ತಾರೆ. ನಿನ್ನ ರೂಮ್ ಮೇಟ್ ಯಾಕೆ ಇಂಗ್ಲಿಷಿನಲ್ಲಿ ಬರ್ಯೋದಿಲ್ಲಾ ಅಂತ." ನಮ್ಮ ರೂಮ್ ಮೇಟ್ ಮಹಾರಾಣಿ ಹೇಳಿದ್ದನ್ನು ಕೇಳಿ ಬಗ್ಗಿ ನ್ಯೂಸ್ ಪೇಪರ್ ಓದುತ್ತಿದ್ದ ನಾನು ತಲೆ ಎತ್ತಿದೆ.
                          "ಓಹ್, ನಾನ್ಯಾಕೆ ಇಂಗ್ಲಿಷಿನಲ್ಲಿ ಬರೆಯಬೇಕಂತೆ..??" ನಾನು ಪ್ರಶ್ನೆ ಹಾಕಿದೆ.
                          "ಇಂಗ್ಲಿಷಿನಲ್ಲಿ ಬರೆದರೆ ತುಂಬಾ ಜನ ಓದ್ತಾರಲ್ವಾ..?? ಅವ್ರಿಗೆಲ್ಲಾ ಕನ್ನಡ ಅಷ್ಟು ಚೆನ್ನಾಗಿ ಓದ್ಲಿಕ್ಕೆ ಬರಲ್ಲ."
                          "ಅವ್ರೆಲ್ಲರೂ ಕರ್ನಾಟಕದವ್ರೇ ತಾನೇ..?? ಇಲ್ಲೇ ಹುಟ್ಟಿ ಇಲ್ಲೇ ವಾಸ ಮಾಡ್ತಾ ಇರೋರಲ್ವಾ..?? ಮತ್ಯಾಕೆ ಕನ್ನಡ ಚೆನ್ನಾಗಿ ಬರಲ್ಲ..?? ಬರಲ್ಲ ಅಂತಿದ್ರೆ ಕಲೀಲಿ ಬಿಡು. ಅವ್ರ ಸಲುವಾಗಿ ನಾನು ಕನ್ನಡ ಬಿಟ್ಟು ಇಂಗ್ಲಿಷಿನಲ್ಲಿ ಬರೆಯಲಾ..??"
                           "ಹಾಗಲ್ಲ ಮಾರಾಯ್ತಿ. ಇವತ್ತಿನ ದಿನ ಇಂಗ್ಲಿಷನ್ನು ಚೆನ್ನಾಗಿ ಕಲಿಯಲೇಬೇಕಲ್ವಾ..?? ಈಗೇನೋ ಕನ್ನಡನಾಡಿನಲ್ಲೇ ಇದೀವಿ. ಕರ್ನಾಟಕದ ಹೊರಗೆಲ್ಲಾದ್ರೂ ಜೀವನ ಮಾಡ್ಬೇಕಾಗಿ ಬಂದ್ರೆ..?? ಆಗ ಅಲ್ಲಿ ನಿನ್ನ ಬರಹಗಳನ್ನು ಕನ್ನಡದಲ್ಲಿ ಬರದ್ರೆ ಎಷ್ಟು ಜನ ತಾನೇ ಓದ್ತಾರೆ..??"
                            "ಅಮ್ಮಾ ತಾಯಿ ನಾನು ಎಲ್ಲೇ ಇರಲಿ, ಬರ್ಯೋದು ಮಾತ್ರ ಕನ್ನಡದಲ್ಲೇ. ಕನ್ನಡ ಓದ್ಬೇಕು ಅನ್ನೋ ಕನ್ನಡ ಪ್ರೀತಿಯಿರೋ ಮಂದಿ ಓದ್ತಾರೆ ಬಿಡು. ಮಾತೃಭಾಷೆ ಮಾತ್ರವೇ ಭಾವನೆಗಳಿಗೆ, ಯೋಚನೆಗಳಿಗೆ ಸೂಕ್ತ ಭಾಷೆಯಾಗಬಲ್ಲದು. ಇಂಗ್ಲಿಷಿಗೇನಿದ್ರೂ ವ್ಯಾವಹಾರಿಕ ಭಾಷೆಯ ಸ್ಥಾನ ಅಷ್ಟೆ. ಒಂದು ಮಾತಿದೆ ಗೊತ್ತಾ..?? ಮಾತೃಭಾಷೆಯಲ್ಲಿ ಪರಿಣಿತಿ ಇದ್ದರೆ ಬೇರೆ ಯಾವ ಭಾಷೆಗಳನ್ನಾದರೂ ಸುಲಭವಾಗಿ ಕಲಿಯಬಹುದು ಅಂತಾ. ನಂಗೆ ಕನ್ನಡಾನೇ ನೆಟ್ಟಗೆ ಬರಲ್ಲ. ಇಂಗ್ಲಿಷ್ ಅಷ್ಟಕ್ಕಷ್ಟೆ. ಅಂಥಾದ್ರಲ್ಲಿ ಕನ್ನಡ ಬಿಟ್ಟು ಇಂಗ್ಲಿಷಿನಲ್ಲಿ ಬರೀತ ಕೂತ್ರೆ ಆ ಕಡೆ ಇಂಗ್ಲಿಷ್ ಒಲಿಯೋದಿಲ್ಲ, ಈ ಕಡೆ ಕನ್ನಡ ಬೆಳೆಯೋದಿಲ್ಲ. ನಂಗಂತೂ ಕನ್ನಡದಲ್ಲಿ ಅಲ್ಪ ಸ್ವಲ್ಪ ಗೀಚಲಿಕ್ಕೆ ಬರುತ್ತೆ ಅಂತಾ ಭಾಳನೇ ಖುಷಿಯಿದೆ. ನಿನ್ನ ಕ್ಲಾಸ್ ಮೇಟ್ಸ್ ಗೆ ಹೀಗೆ ಹೇಳ್ಬಿಡು."
                            "ಅಯ್ಯೋ ಆಯ್ತು ಕಣೇ. ಅಡ್ಡಬಿದ್ದೆ ನಿಂಗೆ" ಅವಳು ಕೈ ಜೋಡಿಸುತ್ತಾ ನಾಟಕೀಯವಾಗಿ ಹೇಳಿದಳು.