Wednesday, 3 September 2014

ಡೈರಿ ಪುಟ - ೬೨


                                 "ಹೇಯ್, ನಳಂದಾ ಯುನಿವರ್ಸಿಟಿ ಮತ್ತೆ ಶುರುವಾಗಿದೆಯಂತೆ ಅಲ್ವಾ..??" ಊಟ ಮಾಡುತ್ತಿರುವಾಗ ರೂಮ್ ಮೇಟ್ ಕೇಳಿದಳು.
                                 "ಮೊನ್ನೆಯೇ ರೀಓಪನ್ ಆಯ್ತು. ನಿಂಗೆ ಇವತ್ತು ಬೆಳಗಾಯ್ತು ಅಂತಾ ಕಾಣ್ಸತ್ತೆ." ನಾನು ಹೇಳಿದೆ.
                                 "ಹೌದಮ್ಮಾ, ನಾನೇನು ನಿನ್ನಂತೆ ಇಡೀ ದಿನ ನ್ಯೂಸ್ ಪೇಪರ್ ಓದ್ತಾ ಕೂರ್ತೀನಾ..?? ಅದ್ಕೆ ಲೇಟ್ ಆಗಿ ಸುದ್ದಿ ತಿಳಿಯತ್ತೆ. ಇವತ್ತು ಮಧ್ಯಾನ್ಹ ಲಂಚ್ ಬ್ರೇಕ್ ಹೊತ್ತಲ್ಲಿ ನಮ್ಮ ಗುಂಪಿನಲ್ಲಿ ಆಕ್ಸ್ ಫರ್ಡ್, ಕೇಂಬ್ರಿಡ್ಜ್ ಗಳ ಬಗ್ಗೆ ಮಾತುಕತೆ ನಡೀತಾ ಇತ್ತು. ಆಗ ನಳಂದಾ ವಿಷಯ ಬಂತು."
                                  "ಆಕ್ಸ್ ಫರ್ಡ್, ಕೇಂಬ್ರಿಡ್ಜ್ ಗಳಿಗಿಂತ ಎಷ್ಟೋ ಮೊದಲೇ ನಮ್ಮ ನಳಂದಾ ಯುನಿವರ್ಸಿಟಿ ಸ್ಥಾಪನೆಯಾಗಿತ್ತು. ಅದರ ಕ್ಯಾಂಪಸ್ ಎಷ್ಟು ವಿಶಾಲವಾಗಿತ್ತಂತೆ ಗೊತ್ತಾ..?? ಅಲ್ಲಿ ಅಡ್ಮಿಷನ್ ಸಿಗೋದು ಅಂದ್ರೆ ಅದು ಪುಣ್ಯದ ಸಂಗತಿ ಆಗಿತ್ತಂತೆ. ಶಿಕ್ಷಣದ ಗುಣಮಟ್ಟವೂ ಅಷ್ಟೇ ಉತ್ತಮವಾಗಿತ್ತು. ಧಾರ್ಮಿಕ ತರಗತಿಗಳು ಮಾತ್ರವಲ್ಲ. ಗಣಿತ, ತತ್ವಶಾಸ್ತ್ರ, ಸಾಹಿತ್ಯದ ವಿಷಯಗಳೂ ಬೋಧಿಸಲ್ಪಡುತ್ತಿದ್ದವಂತೆ. ಅಲ್ಲಿನ ವಿದ್ಯಾರ್ಥಿ ಜೀವನವೂ ಸಹ ತುಂಬಾ ಶಿಸ್ತಿನಿಂದ ಕೂಡಿತ್ತಂತೆ. ಎರಡು ವಾರಗಳ ಹಿಂದಷ್ಟೆ ಭೈರಪ್ಪನವರ ಸಾರ್ಥ ಓದಿದ್ದೆನಲ್ಲ, ಇನ್ನು ಪೂರ್ತಿಯಾಗಿ ಅದರ ಗುಂಗು ಹೋಗಿಲ್ಲ. ಮೊನ್ನೆ ಪೇಪರ್ ನಲ್ಲಿ ನಳಂದಾ ಬಗ್ಗೆ ಓದಿದಾಗ ಅವರ ಕಾದಂಬರಿಯಲ್ಲಿನ ನಳಂದವೇ ಕಣ್ಣು ಮುಂದೆ ಬಂತು."
                                  "ಅದು ಆಗ ವರ್ಲ್ಡ್ ಫೇಮಸ್ ಆಗಿತ್ತಂತೆ ಅಲ್ವಾ..?? ಬೇರೆ ಬೇರೆ ದೇಶಗಳಿಂದಲೂ ಸ್ಟೂಡೆಂಟ್ಸ್ ಬರ್ತಿದ್ರಂತೆ."
                                   "ಹೌದು. ಹ್ಯುಯೆನ್ ತ್ಸಾಂಗ್ ನಂಥವರೇ ನಳಂದಾ ಯುನಿವರ್ಸಿಟಿಲಿ ಭರ್ತಿ ಹದಿನೈದು ವರ್ಷಗಳಷ್ಟು ಕಾಲ ವ್ಯಾಸಂಗ ಮಾಡಿದ್ರಂತೆ. ಆಮೇಲೆ ಪರಕೀಯರ ದಾಳಿಗೊಳಗಾಗಿ ಅದರ ವೈಭವಗಳೆಲ್ಲ ನಾಶವಾಗಿ ಕೇವಲ ಕುರುಹುಗಳು ಮಾತ್ರವೇ ಉಳಿದುಕೊಂಡಿದ್ದವು. ಇದೀಗ ಬರೋಬ್ಬರಿ ೮೦೦ ವರ್ಷಗಳ ನಂತರ ಮತ್ತೆ ನಳಂದಾ ಆರಂಭವಾಗಿದೆ. ಇದರ ಪುನರುಜ್ಜೀವನದ ಕನಸನ್ನು ಬಿತ್ತಿ ಅದರ ಅನುಷ್ಠಾನಕ್ಕೆ ಕಾರಣವಾಗಿದ್ದು ಮಾಜಿ ರಾಷ್ಟ್ರಪತಿ ನಮ್ಮ ಪ್ರೀತಿಯ ಕಲಾಂ ಅಜ್ಜ ಅಂತೆ. ನಮ್ಮ ದೇಶದ ಇತರ ಕಾಲೇಜು, ಯುನಿವರ್ಸಿಟಿಗಳಂತೆ ನಳಂದಾ ಕೂಡ ಉದ್ಯೋಗಿಗಳನ್ನು ನಿರ್ಮಾಣ ಮಾಡುವ ಇನ್ನೊಂದು ಕಾರ್ಖಾನೆ ಆಗದೇ, ಅಪ್ಪಟ ಜ್ಞಾನಾರ್ಜನೆಯ ಕೇಂದ್ರವಾಗಲಿ ಎಂಬುದು ಹಾರೈಕೆ. ಆಗಲಾದರೂ ಹೊರ ದೇಶಗಳಿಗೆ ಹಾರುವ ಭಾರತೀಯರ ಸಂಖ್ಯೆ ಕಡಿಮೆಯಾದೀತು."


4 comments:

 1. ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಜನೆಗೆ ಅವಕಾಶ ಸಿಗುವುದಾದರೆ ಅದು ಈಗಲೂ ಅವರವರ ಪುಣ್ಯವೇ ಸರಿ.
  ತಾಯಿ ಶಾರದೆಯ ಈ ಗುಡಿಯಲ್ಲಿ ಜ್ಞಾನದ ಚಿಲುಮೆ ಮತ್ತೆ ಚಿಮ್ಮಲಿ.
  ಜೈ ಹಿಂದ್.

  ReplyDelete
 2. ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಜನೆಗೆ ಅವಕಾಶ ಸಿಗುವುದಾದರೆ ಅದು ಈಗಲೂ ಅವರವರ ಪುಣ್ಯವೇ ಸರಿ.
  ತಾಯಿ ಶಾರದೆಯ ಈ ಗುಡಿಯಲ್ಲಿ ಜ್ಞಾನದ ಚಿಲುಮೆ ಮತ್ತೆ ಚಿಮ್ಮಲಿ.
  ಜೈ ಹಿಂದ್.

  ReplyDelete