Monday, 1 September 2014

ಮುಸುಕು (ಭಾಗ - ೨)                                     ಮನಸ್ಸು ಆರೇಳು ವರ್ಷಗಳ ಹಿಂದಕ್ಕೋಡಿತು. ಮನೆಯಲ್ಲಿ ಅಣ್ಣನ ಎಂದರೆ ದೊಡ್ಡಪ್ಪನ ಮಗನ ಮದುವೆ ನಿಶ್ಚಯವಾಗಿತ್ತು. ಆಗಷ್ಟೇ ನನಗೆ ಎಂಜಿನಿಯರಿಂಗ್ ಪ್ರಥಮ ವರ್ಷ ಮುಗಿದು ಸೆಮಿಸ್ಟರ್ ರಜಾದಿನಗಳು ಶುರುವಾಗಿದ್ದವು. ಹಾಗಾಗಿ ನಿಶ್ಚಿತಾರ್ಥದಿಂದ ಪ್ರಾರಂಭವಾಗಿ ಮದುವೆಯ ತನಕದ ಎಲ್ಲ ಕಾರ್ಯಕ್ರಮಗಳನ್ನೂ, ಸಿದ್ಧತೆಗಳನ್ನೂ ತೀರಾ ಹತ್ತಿರದಿಂದ ನೋಡಿದ್ದೆ, ಅವೆಲ್ಲವುಗಳಲ್ಲಿ ಖುದ್ದು ಭಾಗವಹಿಸಿದ್ದೆ. ಮನೆಯಲ್ಲಿ, ಮನೆಯ ಜನರಲ್ಲಿ ಎದ್ದು ಕಾಣುವ ಸಂಭ್ರಮ, ಸಡಗರ, ಶ್ರದ್ಧೆ, ಆಸ್ಥೆಗಳನ್ನು ನೋಡಿ ಪುಳಕಿತನಾಗಿ ಮದುವೆಯೆಂದರೆ ಬಹಳ ಪವಿತ್ರವಾದ ಕಾರ್ಯವೆಂಬ ಬೆಚ್ಚಗಿನ ಭಾವನೆ ಮನದಲ್ಲಿ ಮನೆ ಮಾಡಿತ್ತು. ಅದರಿಂದಾಗಿಯೇ ಏನೋ ಎಂಬಂತೆ ಆ ಎರಡು ತಿಂಗಳುಗಳಲ್ಲಿ ಎಂದೂ ಇಲ್ಲದ ಉತ್ಸಾಹ ನನ್ನಲ್ಲಿ ಮೂಡಿತ್ತು. ಅದನ್ನು ಗಮನಿಸಿದ ದೊಡ್ಡಮ್ಮ "ನೋಡೇ, ತನ್ನದೇ ಮದುವೆ ಎನ್ನುವಂತೆ ಓಡಾಡುತ್ತಿದ್ದಾನೆ ನಿನ್ನ ಮಗ" ಎಂದು ಅಮ್ಮನೊಡನೆ ಹಾಸ್ಯ ಮಾಡಿದ್ದಳು ಕೂಡಾ. ಅಂದು ಅವರ ಮಾತುಗಳನ್ನು ಕೇಳಿ ನನ್ನ ಒರಟು ಮುಖದಲ್ಲೂ ಮೃದುವಾದ ಕೆಂಪು ಕಾಣಿಸಿತ್ತು. ಅದೇಕೆ ಎಂದು ನನಗೆ ಅಂದು ಅರ್ಥವಾಗಿರಲಿಲ್ಲ. ಆದರೆ ಆಗಿನ ಬೆಚ್ಚಗಿನ ಭಾವ ಈಗ ಇಲ್ಲ. ಪೂರ್ತಿ ತಣ್ಣಗಾಗಿ ಕೊರಡಾಗಿ ಹೋಗಿದೆ.
                                 ಸ್ನಾನ ಮುಗಿಸಿ ಬಂದವನೇ ಸೀದಾ ದೇವರ ಫೋಟೋದ ಮುಂದೆ ಅಡ್ಡಬಿದ್ದೆ. ಜನಿವಾರವೇನೋ ನೆಪಮಾತ್ರಕ್ಕೆ ಮೈಯ್ಯಲ್ಲಿತ್ತು. "ಗಜಾನನಂ ಭೂತ ಗಣಾದಿ ಸೇವಿತಂ" ಒಂದನ್ನು ಬಿಟ್ಟು ಬೇರೆ ಯಾವ ಮಂತ್ರಗಳೂ ನೆನಪಿರಲಿಲ್ಲ. ಪ್ರತಿ ಬಾರಿ ಊರಿಗೆ ಹೋದಾಗಲೂ ಅಮ್ಮ ಮರೆಯದೇ ಕಟ್ಟಿಕೊಡುತ್ತಿದ್ದ ದೇವಸ್ಥಾನದ ಕುಂಕುಮ ಪ್ರಸಾದವನ್ನು ಹಣೆಗೆ ಒತ್ತಿಕೊಳ್ಳುವ ರೂಢಿಯೂ ಅದ್ಯಾವಾಗಿನಿಂದ ತಪ್ಪಿ ಹೋಗಿದೆಯೆಂದು ನೆನಪಾಗುತ್ತಿಲ್ಲ. ಫೋಟೋದ ಹಿಂದೆ ಅಡಗಿ ಕುಳಿತಿದ್ದ ಪುಟ್ಟ ಹಲ್ಲಿಯೊಂದು ನನ್ನನ್ನೇ ಅಣಕಿಸುವಂತೆ ದಿಟ್ಟಿಸುತ್ತಿತ್ತು. ಅದನ್ನು ಅಲ್ಲಿಂದ ಓಡಿಸಿ ಬೆಡ್ ರೂಮಿಗೆ ಬಂದು ಕಬೋರ್ಡ್ ತೆಗೆದು ಕೈಗೆ ಸಿಕ್ಕ ಶರ್ಟ್ ಸಿಕ್ಕಿಸಿ ಜೀನ್ಸ್ ಮೇಲಕ್ಕೇರಿಸಿಕೊಂಡು ಮನೆಯಿಂದ ಹೊರಬಿದ್ದು ಮುಂದಿನ ಬಾಗಿಲಿಗೆ ಬೀಗ ಜಡಿದ ನಂತರ ಎಲ್ಲಿಗೆ ಹೋಗುವುದು ಎಂಬ ಯೋಚನೆ. ಹಿಂದಿನ ರಾತ್ರಿಯ ತೀರ್ಥ ಪ್ರಸಾದಗಳ ಪ್ರಭಾವ ಇನ್ನೂ ಇಳಿದಿರದ ಕಾರಣ ಹೊಟ್ಟೆ ತುಂಬಿಸುವ ಕೆಲಸ ಸದ್ಯಕ್ಕಂತೂ ಅಗತ್ಯವೆನಿಸಲಿಲ್ಲ. ಪೋರ್ಟಿಕೋದಲ್ಲಿ ಮಲಗಿದ್ದ ಬೆಂಝ್ ಅನ್ನು ಎಬ್ಬಿಸಿ ಸವಾರಿ ಹೊರಡಿಸುವ ಮನಸ್ಸಾಗಲಿಲ್ಲ. ಹೀಗೆಯೇ ಸುಮ್ಮನೆ ನಡೆದು ಹೋಗುತ್ತಿರೋಣವೆಂಬ ಲಹರಿ ಬಂದು ಅಂತೆಯೇ ಸಾಗಿ ಗೇಟು ದಾಟಿದೆ. ಹಾಗೆಯೇ ನೂರು ಹೆಜ್ಜೆ ನಡೆದು ಬರುವಷ್ಟರಲ್ಲಿ ಸಣ್ಣದೊಂದು ಟೀ ಸ್ಟಾಲ್ ಕಣ್ಣಿಗೆ ಬಿತ್ತು. ಅಂಗಡಿಯ ಓನರ್ ಇರಬೇಕು ಆ ಹೆಂಗಸು. ತನ್ನ ಸುಮಾರು ಹದಿನಾರು-ಹದಿನೇಳು ವರ್ಷದ ಮಗನಿಗೆ ಬೈಯ್ಯುತ್ತಿದ್ದಳು. ಆ ಮಹರಾಯ ಅದ್ಯಾವ ತಪ್ಪು ಕೆಲಸ ಮಾಡಿದ್ದನೋ ಏನೋ. "ಬರಬರುತ್ತಾ ರಾಯರ ಕುದುರೆ ಕತ್ತೆಯಾಯ್ತಂತೆ. ನಿನ್ನ ಕಥೆನೂ ಹಂಗೆ ಆಯ್ತು, ಬೇವರ್ಸಿ ನನ್ನ ಮಗನೇ". ಆಕೆಯ ಬೈಗುಳ ಕೇಳಿದ ಮರುಕ್ಷಣವೇ ನನಗೆ ದೀಪಿಕಾ ನೆನಪಾದಳು. ಅವಳು ನನಗೆ ಯಾವಾಗ ಬೈಯ್ಯುವುದಿದ್ದರೂ ಅದೊಂದೇ ಗಾದೆಯನ್ನು ಹೇಳುತ್ತಿದ್ದಳು. ಹಿಂದೆ ಮುಂದೆ ಬೇರೆ ಏನೂ ಬೈಗುಳವಾಗಲೀ, ಗದರಿಕೆಯಾಗಲೀ, ಬುದ್ಧಿಮಾತುಗಳನ್ನಾಗಲೀ ಹೇಳುತ್ತಾ ತಾಸುಗಳವರೆಗೆ ಕೊರೆಯುತ್ತಿರಲಿಲ್ಲ. ನನ್ನ ತುಟಿಯಂಚಿನಲ್ಲಿ ಮುಗುಳ್ನಗೆ ಅರಳಿತು. ಹಾಗೆಯೇ ದೀಪಿಕಾಳ ಮೇಲೆ ಕೋಪವೂ ಬಂತು. ಅವಳು ನನ್ನೊಡನೆ ಮಾತನಾಡಿ ಅದೆಷ್ಟು ದಿವಸಗಳಾದವು. ಹಿಂದಿನ ಶುಕ್ರವಾರ ಬೆಳಿಗ್ಗೆ ಗುಡ್ ಮಾರ್ನಿಂಗ್ ಅಂದಿದ್ದೇ ಕೊನೆ. ಆ ನಂತರ ಹ್ಞೂಂ ಇಲ್ಲ, ಹ್ಞಾಂ ಇಲ್ಲ. ಇವಳೊಬ್ಬಳೇ ಏನು ಅಮೆರಿಕಾಗೆ ಎಂ. ಡಿ. ಓದಲಿಕ್ಕೆ ಹೋಗಿದ್ದು..?? ಹುಡ್ಗೀರ ಫ್ರ್ಂಡ್ ಶಿಪ್ ಎಂದರೆ ಹೀಗೆ. ಭೌತಿಕವಾಗಿ ದೂರ ಇದ್ದಾರೆಂದರೆ ಮನಸ್ಸಿಂದಾನೂ ದೂರ ಆಗಿ ಬಿಡ್ತಾರೆ. ನಾನೇ ಒಂದು ವ್ಯಾಟ್ಸ್ ಆಪ್ ಮೆಸೇಜು ಹಾಕಲೇ..?? "ಮನು ಇನ್ನೂ ಬದುಕಿಯೇ ಇದ್ದಾನೆ ಕಣೇ" ಅಂತ. ಬೇಡ, ಅವಳಾಗಿಯೇ ಮಾತನಾಡಿಸುವವರೆಗೂ ನಾನು ಕೂಡ ಬಾಯಿ ತೆರೆಯುವುದಿಲ್ಲ ಎಂದು ನಿರ್ಧರಿಸಿ ಸುಮ್ಮನಾದೆ.
                                   ದೀಪಿಕಾ!! ಚಡ್ಡಿ ಕೆಳಗೆ ಜಾರಿದರೆ ಸರಿಯಾಗಿ ಮೇಲಕ್ಕೇರಿಸಿಕೊಳ್ಳಲೂ ಬಾರದಿದ್ದ ವಯಸ್ಸಿನಿಂದಲೇ ನಾವಿಬ್ಬರೂ ಸ್ನೇಹಿತರು, ಸಮವಯಸ್ಕರೂ ಹೌದು. ನನಗೆ ಒಡ ಹುಟ್ಟಿದವರ್ಯಾರೂ ಇಲ್ಲ, ಆಕೆಗೆ ಅಣ್ಣನೊಬ್ಬ ಇದ್ದರೂ ಇಬ್ಬರಿಗೂ ವಯಸ್ಸಿನ ಅಂತರ ಬಹಳ. ಹಾಗಾಗಿ ಅಕ್ಕಪಕ್ಕದ ಮನೆಯವರಾಗಿದ್ದ ನಮ್ಮಿಬ್ಬರಿಗೂ ಗಾಢವಾದ ಸ್ನೇಹವಿತ್ತು. ಹತ್ತನೇ ತರಗತಿಯ ಕೊನೆಯ ದಿನಗಳಲ್ಲಿ ಎಂದು ನೆನಪು. ಸಹಪಾಠಿ ದರ್ಶನ್ ಒಮ್ಮೆ ಕೇಳಿದ್ದ, "ಅಲ್ವೋ, ಅವಳು ಅದ್ ಹ್ಯಾಗೆ ನಿಂಜೊತೆ ಅಷ್ಟು ಸಲುಗೆಯಿಂದಿದ್ದಾಳೋ ಮಾರಾಯಾ..?? ನಾನೂ ಕೂಡಾ ಚಿಕ್ಕಂದಿನಿಂದಲೇ ಅವಳೊಟ್ಟಿಗೆ ಓದ್ದೋನು. ಎಲ್ಲಾ ಪ್ರೊಜೆಕ್ಟ್ಸ್, ಗ್ರೂಪ್ ಆಕ್ಟಿವಿಟೀಸ್ ಅಲ್ಲಿ ಪಾರ್ಟ್ನರ್ ಬೇರೆ. ಆದರೂ ನನ್ನ ಜೊತೆಗಾಗ್ಲಿ, ಬೇರೆ ಯಾವ್ದಾದ್ರೂ ಹುಡುಗನ ಜೊತೆಗಾಗ್ಲಿ ಎಷ್ಟು ಬೇಕೋ ಅಷ್ಟೆ ಮಾತು, ಸಲುಗೆ ಅನ್ನೋವಷ್ಟೆಲ್ಲಾ ಇಲ್ವೇ ಇಲ್ಲ." "ಶಾಲೆಯಲ್ಲಿ ಮಾತ್ರ ಅಲ್ಲ ಕಣೋ, ನಾವಿಬ್ಬರೂ ಚೈಲ್ಡ್ ಹುಡ್ ಫ್ರೆಂಡ್ಸ್" ನನ್ನ ಉತ್ತರ ಕೇಳಿ ಆತ ತಲೆಯಲ್ಲಾಡಿಸುತ್ತಾ ಹೇಳಿದ್ದ, "ಅದೇನೆ ಇದ್ರೂನು ಅವಳು ಬಹಳ ಹಚ್ಚಿಕೊಂಡಿರೋದು ನಿನ್ನ ಮಾತ್ರ ನೋಡು. ಯುಶೂವಲಿ, ಹೈ ಸ್ಕೂಲ್ ನಲ್ಲಿ ಚೈಲ್ಡ್ ಹುಡ್ ಫ್ರೆಂಡ್ಸ್ ಆಗಿರೋ ಹುಡ್ಗೀರೆಲ್ಲಾ ಸ್ವಲ್ಪ ಸಲಿಗೆ ಕಮ್ಮಿ ಮಾಡ್ತಾರಪಾ. ದೀಪಿಕಾ ನಿಂಜೊತೆ ಹಾಗಿಲ್ವಲ್ಲಾ" ಅಂದು ಅವನೇನು ಹೇಳುತ್ತಿದ್ದಾನೆ ಅನ್ನೋದು ನನಗೆ ದೇವರಾಣೆ ಅರ್ಥ ಆಗಿರಲಿಲ್ಲ. ಅವಳು ನನ್ನ ಜೊತೆ ಮಾತ್ರ ಕ್ಲೋಸ್ ಆಗಿರೋದನ್ನ ಕಂಡು ಹೊಟ್ಟೆ ಉರಿಯಿಂದ ಏನೇನೋ ಹೇಳಿದಾನೆ ಮಗಾ ಅಂತ ತೀರ್ಮಾನಿಸಿದ್ದೆ. ಆದರೆ ನನಗೇಕೋ ಒಳಗೊಳಗೆ ಖುಷಿಯಾಗಿತ್ತು. ಒಂದೆರಡು ವಾರಗಳ ನಂತರ ಅಚಾನಕ್ ಆಗಿ ದರ್ಶನ್ ಹೇಳಿದ್ದ ಮಾತುಗಳು ನೆನಪಾಗಿ ದೀಪಿಕಾ ಏಕೆ ನನ್ನ ಜೊತೆ ಅಷ್ಟು ಸಲಿಗೆಯಿಂದಿದ್ದಾಳೆ ಎಂದು ಆಶ್ಚರ್ಯವಾಗಿತ್ತು. ಎಷ್ಟು ಯೋಚಿಸಿದರೂ ಉತ್ತರ ಹೊಳೆದಿರಲಿಲ್ಲ. ಇದರ ಕುರಿತು ಅವಳನ್ನೇ ಕೇಳುವ ಮನಸ್ಸೂ, ಧೈರ್ಯವೂ ಇರಲಿಲ್ಲ. ಅಂತೆಯೇ ನನಗೂ ಬೇರೆ ಯಾವ ಹುಡುಗಿಯೊಂದಿಗೂ ಸಲಿಗೆಯಿರಲಿಲ್ಲವೆಂಬ ನೆನಪಾಯಿತು. ಈಗಲೂ ಇಲ್ಲವಲ್ಲ. ಒಮ್ಮೆ ತಲೆ ಕೊಡವಿಕೊಂಡೆ. ಎಲ್ಲಿಂದಲೋ ದೋಸೆಯ ಮಸಾಲೆ ಪರಿಮಳ. ಕತ್ತನ್ನು ಮುನ್ನೂರಾ ಅರವತ್ತು ಡಿಗ್ರಿಯಲ್ಲಿ ಅತ್ತ, ಇತ್ತ, ಸುತ್ತಲೆಲ್ಲಾ ಹೊರಳಿಸಿ ನೋಡಿದರೂ ಎಲ್ಲಿಯೂ ದೋಸೆ ಮಾಡುತ್ತಿರುವವರಾಗಲೀ, ತಿನ್ನುತ್ತಿರುವವರಾಗಲೀ ಕಾಣಿಸಲಿಲ್ಲ. ನನಗೂ ದೋಸೆ ತಿನ್ನಬೇಕೆಂಬ ಬಲವಾದ ಆಸೆ ಕಾಣಿಸಿಕೊಂಡಿತು. ಆದರೆ ಇಲ್ಲೆಲ್ಲೂ ದೋಸೆ ಸಿಗುವುದಿಲ್ಲ. ಅದರ ಸಲುವಾಗಿ ಇನ್ನೆಷ್ಟು ದೂರವನ್ನು ಸವೆಸಬೇಕಾದೀತೋ ಎನಿಸಿದರೂ ದೋಸೆಯ ಆಸೆ ಮಾತ್ರ ಕೊಂಚವೂ ಕಡಿಮೆಯಾಗಲಿಲ್ಲ. ದೇವರು ನಾಲಿಗೆ ಕೊಟ್ಟಿದ್ದು ದಂಡಕ್ಕೆ ಏನು ಎಂದುಕೊಂಡು ಒಂದೆರಡು ಅಂಗಡಿಗಳಲ್ಲಿ ವಿಚಾರಿಸಿದಾಗ ತಿಳಿಯಿತು, ಇನ್ನೂರು ಮೀಟರ್ ಅಂತರದಲ್ಲಿಯೇ ಇದೆ ಹೋಟೆಲ್. ಸರಿ ಎನ್ನುತ್ತಾ ಹಾದಿ ಹಿಡಿದು ಹೊರಟೆ.
                                          ಹೋಟೆಲ್ ಎದುರು ಬಂದು ನಿಂತುಕೊಂಡಾಗ ಮಾತ್ರ ತಲೆ ಕೆರೆದುಕೊಳ್ಳುವಂತಾಯಿತು. ಉಡುಪಿ ಹೋಟೆಲ್!!! ನಾನು, ದೀಪು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಇಲ್ಲಿಯ ದೋಸೆಗಳ ರುಚಿ ಸವಿದಿದ್ದೆವು. ಈ ಹೋಟೆಲ್ ಇಲ್ಲಿ, ನನ್ನ ಮನೆಗೆ ಇಷ್ಟು ಹತ್ತಿರದಲ್ಲಿ ಇತ್ತೇ..?? ಅಂಗಡಿಯವರು ದಾರಿ ತಿಳಿಸಿದ ಮೇಲಾದರೂ ನಾನು ಹೆಜ್ಜೆ ಹಾಕುತ್ತಿರುವುದು ಇಲ್ಲಿಗೆನೇ ಎಂಬ ಸತ್ಯ ಹೊಳೆಯದೇ ಹೋಗಿದ್ದು ಹೇಗೆ..?? ಕಳೆದೆರಡು ವರ್ಷಗಳಿಂದ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಗಳನ್ನು ಬಿಟ್ಟು ಬೇರೆ ಹೋಟೆಲ್ ಗಳತ್ತ ನಾನು ಕಾರು ಓಡಿಸಿದ್ದೇ ಇಲ್ಲ. ದೀಪುಗೆ ಸಣ್ಣ ಹೋಟೆಲ್ ಗಳಿಗೆ ಹೋಗುವುದೇ ಇಷ್ಟವಾಗುತ್ತಿತ್ತು. "ಹಸಿವು ಅಂತಾ ತಿನ್ಲಿಕ್ಕ್ ಹೋದ್ರೆ ಹಸಿವಾರೋ ತನಕಾ ಕಾಯಿಸಿ ಕೂರಿಸ್ತಾರೆ" ಎನ್ನುತ್ತಾ ಸ್ಟಾರ್ ಹೋಟೆಲ್ ಗಳ ಕುರಿತಾದ ತನ್ನ ಅಸಮಾಧಾನವನ್ನು ಹೊರಹಾಕುತ್ತಿದ್ದಳು. ಅವಳು ಅಮೆರಿಕಾಗೆ ಹಾರಿ ಹೋದಂದಿನಿಂದ ನಾನು ಇತ್ತ ಕಡೆ ಬಂದೇ ಇಲ್ಲ. ಇವತ್ತು ನಡೆದುಕೊಂಡು ಬಂದಿದ್ದರಿಂದ ಮತ್ತೆ ಈ ಹೋಟೆಲ್ ಗೆ ಬರುವಂತಾಯಿತು. ಕಾರಿನ ಗ್ಲಾಸ್ ಏರಿಸಿಕೊಂಡು ನೂರಿಪ್ಪತ್ತು ಕಿಲೋ ಮೀಟರ್ ವೇಗದಲ್ಲಿ ಸಾಗುವಾಗ ದೋಸೆಯ ವಾಸನೆ ಮೂಗಿಗೆ ಬಡಿಯುತ್ತಿತ್ತೇ..?? ಆದರೂ ಇಷ್ಟು ಬೇಗನೇ ನನಗೆ ಅದು ಹೇಗೆ ಈ ಜಾಗ ಅಪರಿಚಿತವಾಗಿ ಹೋಯಿತು ಎಂದುಕೊಳ್ಳುತ್ತಿರುವಾಗ ಬಂದಿತು ನನ್ನ ನೆಚ್ಚಿನ ಈರುಳ್ಳಿ ದೋಸೆ. ಹಸಿಮೆಣಸಿನ ಕಾಯಿಯ ಚಟ್ನಿಯನ್ನು ದೊಸೆ ಚೂರಿಗೆ ಹಚ್ಚಿಕೊಂಡು ಬಾಯೊಳಗಿಟ್ಟು ನಾಲಿಗೆಗೆ ಖಾರದ ಬಿಸಿ ತಾಗುವಷ್ಟರಲ್ಲಿ ನೆನಪಾಯಿತು. (ಮುಂದುವರೆಯುವುದು)

1 comment: