Thursday, 28 August 2014

ಮುಸುಕು (ಭಾಗ ೧)


                                 ಮತ್ತೊಮ್ಮೆ ಅಲಾರಾಂ ಹೊಡೆದುಕೊಂಡಿತು. ಇದು ಐದನೇ ಬಾರಿ. ಸ್ನೂಜ್ ಬಟನ್ ಒತ್ತಿದೆನಾದರೂ ತಿರುಗಿ ಮುಸುಕೆಳೆದು ಮಗ್ಗಲು ಹೊರಳಿಸುವ ಮನಸ್ಸಾಗದೇ ಎದ್ದು ಕುಳಿತೆ. ಮೊಬೈಲ್ ಕೈಗೆತ್ತಿಕೊಂಡರೆ ಏಳು ಮಿಸ್ಡ್ ಕಾಲ್ ಗಳೆಂದು ನೋಟಿಫಿಕೇಷನ್ ಕುಣಿಯುತ್ತಿತ್ತು. ಯಾರದೆಂದು ಗೊತ್ತಾಗಿ ಸುಮ್ಮನೇ ಮೊಬೈಲ್ ಅನ್ನು ದಿಂಬಿನ ಕಡೆ ಎಸೆದೆ. ಅಷ್ಟು ಮಿಸ್ಡ್ ಕಾಲ್ ಗಳಿದ್ದರೂ ಬೆಳ್ಳಂಬೆಳಿಗ್ಗೆ ಸುಮ್ಮನೇ ಮನಸ್ಸು ಕೆಡುವುದು ಬೇಡವೆಂದು ನಾನಾಗಿಯೇ ಕಾಲ್ ಮಾಡುವ ಆಲೋಚನೆಯನ್ನು ತಡೆಹಿಡಿದೆ. ಗಡಿಯಾರ ೧೦.೧೦ ಎಂದು ತೋರಿಸುತ್ತಿತ್ತು. ಐದು ನಿಮಿಷ ಹಾಗೆಯೇ ಕುಳಿತೆ. "ಕ್ಯೂಂ ಕೀ ತುಮ್ ಹೀ ಹೋ, ಅಬ್ ತುಮ್ ಹೀ ಹೋ" ಎನ್ನುತ್ತಾ ಅಲಾರಾಂ ಹಾಡಲು ಪ್ರಾರಂಭಿಸಿತು. ಬೇರೆ ಯಾವುದೂ ಹಾಡು ಸಿಕ್ಕಲಿಲ್ಲವೇ ಎಂಬ ಅಸಮಾಧಾನದೊಂದಿಗೆ ನನ್ನ ಮೇಲೆಯೇ ನನಗೆ ಸಿಟ್ಟು ಬಂದು ಥತ್ ಎನ್ನುತ್ತಾ ಎಕ್ಸ್ ಪೀರಿಯಾವನ್ನು ಹಾಸಿಗೆಯ ಮೇಲೆ ಕುಟ್ಟಿದೆ. ಒಮ್ಮೆಲೇ ವಿನಾಕಾರಣ ಮನಸ್ಸಿನಲ್ಲಿ ವ್ಯಸನ ತುಂಬಿಕೊಂಡಿತು. ಇನ್ನೊಂದು ನಿಮಿಷ ಹೀಗೆಯೇ ಕುಳಿತಿದ್ದರೆ ಹುಚ್ಚು ಹಿಡಿಯುವುದು ಗ್ಯಾರಂಟಿ ಎಂದೆನಿಸಿ ಭಯವಾಗಿ ಥಟ್ಟನೆ ಎದ್ದು ಟೂತ್ ಪೇಸ್ಟ್. ಬ್ರಶ್ ಗಳನ್ನು ಹಿಡಿದು ಬಾತ್ ರೂಮಿನತ್ತ ನಡೆದೆ.
                               ಸಿಂಕ್ ನತ್ತ ಬಗ್ಗಿ ನಲ್ಲಿಯ ನೀರನ್ನು ಮೂರು ಬಾರಿ ಮುಖಕ್ಕೆ ಹೊಯ್ದುಕೊಳ್ಳುತ್ತಿದ್ದಂತೆ ಅಮ್ಮ ನೆನಪಾದಳು. ಈಗೀಗ ಅವಳ ನೆನಪಾದಾಗಲೆಲ್ಲಾ ಒಂದು ಬಗೆಯ ಕಿರಿಕಿರಿ ಉಂಟಾಗುತ್ತದೆ. ಮೊದಲು ಸ್ವತಃ ನಾನೇ ದಿನಕ್ಕೆ ೩-೪ ಬಾರಿ ಕಾಲ್ ಮಾಡಿ ಅವಳೊಂದಿಗೆ ಮಾತನಾಡುತ್ತಿದ್ದೆ. ಈಗ ಅವಳಾಗಿಯೇ ಕರೆ ಮಾಡಿದರೂ ಎತ್ತುವ ಮನಸ್ಸಾಗದೇ ಆಮೇಲೆ ಏನಾದರೊಂದು ನೆಪ ಹೇಳುವಂತಾಗುತ್ತದೆ. ನಿನ್ನೆ ರಾತ್ರಿ ಮಲಗುವ ಮುನ್ನವಷ್ಟೆ ಮಾತನಾಡಿದ್ದೇನೆ. ಇಂದು ಬೆಳಿಗ್ಗೆ ನಾನು ಏಳುವ ಮುನ್ನವೇ ಮತ್ತೆ ಏಳು ಬಾರಿ ಕರೆ. ಪ್ರತಿ ಬಾರಿಯೂ ಅದೇ ಹಾಡು, ಅದೇ ಅಲಾಪ. ಛೇ, ಹೆತ್ತ ತಾಯಿಯ ಕುರಿತಾಗಿ ಹೀಗೆಲ್ಲಾ ಬೇಸರಿಸಿಕೊಳ್ಳಬಾರದೆಂದು ಅದೆಷ್ಟು ಬಾರಿ ಅಂದುಕೊಂಡರೂ ಹಾಗೆ ನಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. "ಹೇಗಿದ್ದೀಯಾ..?? ಕೆಲಸ ಹೇಗೆ ಸಾಗಿದೆ..?? ಊಟವಾಯಿತಾ..?? " ಎಂಬ ಯಾವತ್ತೂ ಕ್ಷೇಮ ಸಮಾಚಾರಗಳ ನಂತರ ಶುರುವಾಗುತ್ತದೆ ಪದ್ಯ. "ಮನು, ಇನ್ನೂ ಎಷ್ಟು ದಿನಾಂತ ಹೀಗೆ ಒಂಟಿಯಾಗಿರ್ತೀಯಾ..?? ಈಗಂತೂ ಲೈಫ್ ಅಲ್ಲಿ ಫುಲ್ ಸೆಟಲ್ ಆಗಿದೀಯಾ. ನಿನ್ನ ಓರಗೆಯವರಿಗೆಲ್ಲಾ ಕಳೆದ ವರ್ಷವೇ ಮದುವೆಯಾಯಿತು. ನೀನು ಮಾತ್ರ ಎಲ್ಲಿಯವರೆಗೆ ಹೀಗೆ ಹೊಟೆಲ್ ಊಟ ತಿಂತೀಯಾ..?? ಜಾಬ್ ಮಾಡಲಿಕ್ಕೆ ಶುರುವಾದಾಗಿನಿಂದ ಇಳಿತಾನೇ ಇದೀಯಾ. ಹೆಂಡತಿಯ ಕೈ ಅಡುಗೆ ಇದ್ದಿದ್ದರೆ ಹೀಗಾಗ್ತಿತ್ತಾ..??.." ಮುಂದುವರೆಯುತ್ತಲೇ ಇರುತ್ತದೆ ಅದು. ಒಂದೆರಡು ಬಾರಿ ತಾಳಲಾರದೇ ಅರ್ಧದಲ್ಲಿಯೇ ಫೋನ್ ಕಟ್ ಮಾಡಿದ್ದೂ ಇದೆ. ಅಲ್ಲಾ, ಈ ತಾಯಂದಿರಿಗೆ ಮಕ್ಕಳು ಯಾವಾಗ ದಪ್ಪಗಾದ ಹಾಗೆ ಕಾಣುತ್ತಾರೆ..?? ಮನೆಯಲ್ಲಿದ್ದರೂ ಒಂದೇ, ಹೊರಗಡೆಯಿದ್ದರೂ ಒಂದೇ. ಇನ್ನು ಅವಳ ಹೆಂಡತಿಯ ಕೈ ಅಡುಗೆ ಎಂಬ ಮಾತನ್ನು ನೆನೆಸಿಕೊಂಡರೆ ನಗು ಬರುತ್ತದೆ. "ಅಮ್ಮಾ, ಅದೆಲ್ಲಾ ನಿನ್ನ ಕಾಲಕ್ಕಾಯಿತು. ಈಗ ಕಾಫಿ ಮಾಡುವುದು ಬಿಡು, ನೆಟ್ಟಗೆ ಕಾಫಿ ಲೋಟವನ್ನು ತೊಳೆಯುವ ಕೆಲಸ ಕೂಡ ಮುಕ್ಕಾಲು ಮಂದಿ ಹುಡುಗಿಯರಿಗೆ ಬರುವುದಿಲ್ಲ" ಎಂದು ಹೇಳಬೇಕೆನಿಸುತ್ತದೆ.
                                    ಮುಖ ಮಾರ್ಜನ ಮುಗಿಸಿ ಡ್ರಾಯಿಂಗ್ ರೂಮಿಗೆ ಬಂದೆ. ದಿನಪತ್ರಿಕೆಗಳಲ್ಲಿ ಏನಿದೆಯೆಂದು ನೋಡಲು ಕೈಗೆತ್ತಿಕೊಂಡರೆ ಅದ್ಯಾವುದೋ ಅತ್ಯಾಚಾರ ಪ್ರಕರಣದ ಕುರಿತು ದೊಡ್ಡದಾದ ಕೆಂಪು ಅಕ್ಷರಗಳ ತಲೆಬರಹ ಕಣ್ಣಿಗೆ ರಾಚಿಸಿತು. ಇವತ್ತಿನ ದಿನ ಅತ್ಯಾಚಾರವೆನ್ನುವುದು ಮಾಮೂಲಿ ಸುದ್ದಿಯಾಗಿ ಬಿಟ್ಟಿದೆ, ಅವನ್ಯಾರೋ ಕಾಲು ಜಾರಿ ಬಿದ್ದನಂತೆ ಎನ್ನುವಷ್ಟು ಸಹಜವಾಗಿ ಅಲ್ಲೆಲ್ಲೋ ಅತ್ಯಾಚಾರವಾಗಿದೆಯಂತೆ ಅಂತಾ ಹೇಳುವುದನ್ನು ಕೇಳಿದ್ದೇನೆ. ಆಚಾರವಿಲ್ಲದ ಮನಸ್ಸುಗಳಿಂದಾಗುವ ಅನಾಚಾರವೇ ಅತ್ಯಾಚಾರವಲ್ಲವೇ..?? ತಲೆಬರಹದ ಕೆಂಪು ಬಣ್ಣ ನನ್ನ ಬದುಕಿನ ಆಚಾರ-ಅನಾಚಾರಗಳನ್ನು ಬಿಂಬಿಸುತ್ತಿರುವಂತೆ ಭಾಸವಾಗಿ ಕೂಡಲೇ ದೃಷ್ಟಿ ಹೊರಳಿಸಿ ಪೇಪರ್ ಅನ್ನು ಟೇಬಲ್ ಮೇಲೆ ಎಸೆದು ಸೋಫಾದ ಮೇಲೆ ಅಡ್ಡಾಗಿ ರಿಮೋಟ್ ಒತ್ತಿ ಟಿವಿ ಆನ್ ಮಾಡಿದೆ. ಯಾವುದೋ ಹಿಂದಿ ಮ್ಯೂಸಿಕ್ ಚಾನೆಲ್ ಹೊತ್ತಿಕೊಂಡಿತು. ‘ಧೂಮ್ ಮಚಾಲೆ ಧೂಮ್ ಮಚಾಲೆ ಧೂಮ್’ ಎನ್ನುತ್ತಾ ಹಳದಿ ಬಣ್ಣದ ತಿಳಿಯಾದ ತುಂಡು ಅಂಗಿ ತೊಟ್ಟು ಕತ್ರೀನಾ ಕುಣಿಯುತ್ತಿದ್ದಳು. ನನಗೆ ಮೊನ್ನೆ ಮೊನ್ನೆಯಷ್ಟೆ ಸ್ನೇಹಿತ ಚಂದುವಿನ ಜೊತೆ ಕ್ಲಬ್ ಗೆ ಹೋಗಿದ್ದ ಸಂಗತಿ ನೆನಪಾಯಿತು. ಅಂದೇಕೋ ನನಗೆ ಕ್ಲಬ್ಬಿನ ಆವರಣ ಬಹಳವೇ ಕತ್ತಲಾಗಿ ಕಾಣಿಸುತ್ತಿತ್ತು. ಮೇಲೊಂದು ಕೆಳಗೊಂದು ಮಾತ್ರವೇ ಧರಿಸಿದ್ದ ಯುವತಿಯೊಬ್ಬಳು ಅವು ಕೂಡ ಕಳಚಿ ಹೋಗಲೆಂಬಂತೆ ಮೈ ಕುಲುಕಿಸುತ್ತಾ ನರ್ತಿಸುತ್ತಿದ್ದಳು. ನರ್ತನವಾ ಅದು..?? ಅವಳ ಮುಖ ಎಷ್ಟು ಲಕ್ಷಣವಾಗಿದೆ ಎಂದೆನಿಸಿದರೂ ಮರು ಕ್ಷಣವೇ ತೀರಾ ಅಸಹ್ಯ ಭಾವನೆ ಉಂಟಾಗಿತ್ತು. ಆ ಭಾವನೆ ಅರೆ ನಗ್ನವಾಗಿ ಕುಣಿಯುತ್ತಿದ್ದ ಆಕೆಯ ಕುರಿತಾಗಿ ಮೂಡಿದ್ದೋ ಅಥವಾ ಅದನ್ನು ಗುಡಿಯ ಪೂಜಾರಿಯ ನೃತ್ಯವೆಂಬಂತೆ ನೋಡುತ್ತಾ ನಿಂತಿದ್ದ ನನ್ನ ಮೇಲೆ ಉಂಟಾದದ್ದೋ ಅಥವಾ ಬೇಡ ಬೇಡವೆಂದರೂ ಕೇಳದೇ ಬಲವಂತವಾಗಿ ಎಳೆದು ಕರೆತಂದು ಎರಡು ಪೆಗ್ ಕುಡಿಸಿದ್ದ ಚಂದುವಿನ ಮೇಲೋ ಎಂಬುದು ಬಗೆಹರಿದಿರಲಿಲ್ಲ. ತಲೆ ಕೊಡವಿಕೊಂಡು ಟಿವಿ ಆಫ್ ಮಾಡಿದ ಕೂಡಲೇ ಸ್ನಾನ ಮಾಡುವುದೋ ಬೇಡವೋ ಎಂಬ ಜಿಜ್ಞಾಸೆ ಮೂಡಿತು. ಆಫೀಸಿಲ್ಲವಾದ್ದರಿಂದ ಸ್ನಾನ ಮಾಡದಿದ್ದರೂ ನಡೆಯುತ್ತದೆ ಎಂಬ ಸತ್ಯ ಹೊಳೆಯಿತು. ಆದರೂ ತಲೆಯ ಮೇಲೆ ನಾಲ್ಕು ಚೊಂಬು ನೀರು ಸುರಿದುಕೊಳ್ಳುವುದರಿಂದ ಆಗುವ ನಷ್ಟವೇನೂ ಇಲ್ಲ ಎಂದು ವಾಸ್ತವವನ್ನು ಸಮರ್ಥಿಸಿಕೊಳ್ಳುತ್ತಾ ಹೆಗಲ ಮೇಲೆ ಟವೆಲ್ ಹೊದೆದುಕೊಂಡಂತೆ ನಾನದೆಷ್ಟು ಸಲ ಬಾರ್, ಲಬ್, ಪಬ್ ಗಳಿಗೆ ಹೋಗಿಲ್ಲ. ಆದರೂ ಅಂದು ಮಾತ್ರ ಯಾಕೆ ಹಾಗನಿಸಿತು ಎಂಬ ಪ್ರಶ್ನೆ ಮಿಂಚಿ ಮಾಯವಾಯಿತು.
                                           ಬಿಸಿ ಬಿಸಿ ನೀರಿನಿಂದ ಬೆನ್ನು, ಎದೆ ಒದ್ದೆಯಾಗುತ್ತುರುವಂತೆಯೇ ಮತ್ತೆ ಅಮ್ಮನ ಚಿತ್ರ ಕಾಣಿಸಿಕೊಂಡಿತು. ಪಾಪ, ತಾಯಿಯಾಗಿ ಅವಳ ಕರ್ತವ್ಯವನ್ನು ಅವಳು ಮಾಡುತ್ತಿದ್ದಾಳೆ. ವಯಸ್ಸಿಗೆ ಬಂದ ಮಗ ಮದುವೆ ಮಾಡಿಕೊಂಡು ಸಂಸಾರಸ್ಥನಾಗಲಿ ಎಂದು ಯಾವ ತಾಯಿ ತಾನೇ ಆಸೆ ಪಡುವುದಿಲ್ಲ..?? ಅದಕ್ಕಾಗಿ ನಾನು ಅವಳ ಮೇಲೆ ಮುನಿಸು ತೋರಿಸಿದರೆ ಅದು ನನ್ನ ಸಣ್ಣತನವಾಗುತ್ತದೆಯೆನ್ನಿಸಿತು. ಕಳೆದ ಒಂದು ವರ್ಷದಿಂದ ಅವಳು ಮದುವೆಯ ಪ್ರಸ್ತಾಪವನ್ನು ಎತ್ತುತ್ತಿದ್ದಾಳೆ. ಇತ್ತೀಚೆಗೆ ಅದು ಜಾಸ್ತಿಯೇ ಹೆಚ್ಚಾಗಿದೆ. ಅವಳೆಂದಂತೆ ನನ್ನ ಸ್ನೇಹಿತರೆಲ್ಲರಿಗೂ ಹಿಂದಿನ ವರ್ಷದಲ್ಲೇ ಕಂಕಣ ಬಲ ಕೂಡಿ ಬಂದು ಅವರೆಲ್ಲ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟು ನೂರು ಹೆಜ್ಜೆ ನಡೆದೂ ಆಯಿತು. ಇನ್ನೆರಡು ವರ್ಷಗಳಲ್ಲಿ ಅವರ ವಂಶದ ಕುಡಿಗಳು ಹತ್ತು ಹೆಜ್ಜೆ ನಡೆಯುತ್ತಾರಷ್ಟೆ. ಆದರೂ ನನಗೇಕೋ ಮದುವೆಯಾಗುವ ಮನಸ್ಸು ಬಂದಿಲ್ಲ. ಮದುವೆಯ ಕುರಿತಾಗಿ ಒಳ್ಳೆಯ ಭಾವನೆಗಳಾಗಲೀ, ಅಭಿಪ್ರಾಯವಾಗಲೀ ಇಲ್ಲ. ಅದೇಕೆ ಹೀಗೆ ನಾನು..?? ಬಹಳಷ್ಟು ಸಲ ನನಗೆ ನಾನೇ ಕೇಳಿಕೊಂಡರೂ ಇಲ್ಲಿಯ ತನಕ ಉತ್ತರ ಸಿಕ್ಕಿಲ್ಲ. (ಮುಂದುವರೆಯುವುದು)


1 comment: