Thursday, 7 August 2014

ಇಟ್ ಡೆಪೆಂಡ್ಸ್!!!                                          ಇವತ್ತು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ ನಮ್ಮ ಸರ್ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟರ್ ಬಗ್ಗೆ ನಮಗೊಂದು ಪ್ರಶ್ನೆ ಎಸೆದರು. ಅದು ಮುಂಜಾನೆ ಒಂಭತ್ತೂಕಾಲರ ಸಮಯ. ಎಂಟಕ್ಕೊ ಎಂಟು ಕಾಲಿಗೋ ಮನಸ್ಸಿಲ್ಲದ ಮನಸ್ಸಿನಿಂದ ಹಾಸಿಗೆಯಿಂದೆದ್ದು ಶಾಸ್ತ್ರಕ್ಕೆ ಸ್ನಾನ, ತಿಂಡಿ-ತೀರ್ಥಗಳನ್ನು ಮುಗಿಸಿ ಕೈಗೆ ಸಿಕ್ಕ ಬುಕ್ಸ್ ಗಳನ್ನು ಬ್ಯಾಗೆಂಬ ಗೋಣಿಚೀಲದೊಳಕ್ಕೆ ತುರಿಕಿಕೊಂಡು ನಾವೆಲ್ಲಾ ಕ್ಲಾಸಿಗೆ ಬಂದಿದ್ದೆವು. ಫೈನಲ್ ಇಯರ್ ಎಂದರೆ ಸುಮ್ಮನೆ ಎಲ್ಲರ ಕ್ಷೇಮ ಸಮಾಚಾರ ವಿಚಾರಿಸಲು ಕಾಲೇಜಿಗೆ ಹೋಗಿ ಬರುವುದು, ಇಲ್ಲವೇ ಕ್ಯಾಂಟೀನ್ ನಲ್ಲಿ ಕೂತು ಗೆಳೆಯ-ಗೆಳತಿಯರೊಂದಿಗೆ ಹರಟೆ ಕೊಚ್ಚುವುದು, ಅದೂ ಇಲ್ಲವೆಂದರೆ ಇಲ್ಲಿಯ ತನಕ ಎದ್ದು ಕೂತು ಮಾಡಿರದ ಕ್ಯಾಂಪಸ್ಸಿನ ಎಲ್ಲಾ ಜಾಗಗಳಿಗೂ ಹತ್ತತ್ತು ಸಲ ಭೇಟಿ ನೀಡುವುದೇ ಹೊರತು ಕ್ಲಾಸ್ ಅಟೆಂಡ್ ಆಗೋದಾ..?? ಕೇಳಿದವರು ನಕ್ಕಾರು ಎಂಬಂತಹ ಮನೋಭಾವ. ಇಂತಿದ್ದರೂ ಇವತ್ತು ಬೆಳ್ಳಂಬೆಳಿಗ್ಗೆ ಕ್ಲಾಸಿಗೆ ಹೋಗಿ ಕೂರಲು ಕಾರಣವೂ ಇತ್ತು. ಯಾಕೆಂದರೆ ಅದು ಡಿಸ್ಟ್ರಿಬ್ಯೂಟೆಡ್ ಆಂಡ್ ಕ್ಲೌಡ್ ಕಂಪ್ಯೂಟಿಂಗ್ ವಿಷಯದ ಮೊದಲನೇ ತರಗತಿಯಾಗಿತ್ತು. ಅದಕ್ಕೆ ಹೋಗಿ ನಿದ್ದೆಗಣ್ಣುಗಳನ್ನು ಅರೆತೆರೆದು ಕೂತಿದ್ದೆವು. ಹೀಗಿರುವಾಗ ಅವರು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸುವುದು ಇರಲಿ ಅವರೇನು ಕೇಳುತ್ತಿದ್ದಾರೆನ್ನುವುದೇ ತಲೆಬುಡ ಹರಿಯಲಿಲ್ಲ.
                                 ಒಂದೆರಡು ನಿಮಿಷಗಳ ನಂತರ ಅವರೇ ಉತ್ತರ ಹೇಳಿದರು. "ಆಕ್ಚುವಲಿ, ಇಟ್ ಡೆಪೆಂಡ್ಸ್." ನಾವೆಲ್ಲಾ ನಿದ್ದೆಯ ಮಂಪರಿನಲ್ಲಿದ್ದರೂ ಗೊಳ್ಳೆಂದು ನಕ್ಕೆವು. "ನೋ ನೋ. ಯು ಶುಡ್ ಟೆಲ್ ಲೈಕ್ ದಟ್ ಓನ್ಲಿ. ಯಾಕೆಂದರೆ ಹಾಗೆ ಹೇಳಿದರೆ ನಿಮಗೆ ವಿಷಯದ ಕುರಿತು ಹೆಚ್ಚು ತಿಳಿದಿದೆಯೆಂದು ಅರ್ಥ. ಏನೂ ಗೊತ್ತಿಲ್ಲದಿದ್ದಾಗ ಹೇಳಲು ಏನೂ ಇರುವುದಿಲ್ಲವಲ್ಲ, ಹಾಗಾಗಿ ಇಟ್ ಡೆಪೆಂಡ್ಸ್. ಎಲ್ಲ ತಿಳಿದಿರುವಾಗಲೂ ಎಲ್ಲವನ್ನೂ ಹೇಳಿಬಿಟ್ಟರೆ ನಿಮಗೇ ನಷ್ಟ ತಾನೇ..?? ಹಾಗಾಗಿ ಆಗಲೂ ಇಟ್ ಡೆಪೆಂಡ್ಸ್." ಎನ್ನುತ್ತಾ ತಾವು ಹೇಳಿದ್ದನ್ನು ಸಮರ್ಥಿಸಿಕೊಂಡರು. ಅವರು ಕಲಿಸಿದ ಪಾಠ ಅರ್ಥವಾಗದೇ ಹೋದರೂ ಇಟ್ ಡೆಪೆಂಡ್ಸ್ ಕುರಿತಾಗಿ ಜೊತೆಗೆ ಅದನ್ನು ದಿನನಿತ್ಯದಲ್ಲಿ ನಾವು ಬಳಸುವ ಸನ್ನಿವೇಶಗಳು ನನ್ನ ತಲೆಯಲ್ಲಿ ಪಾತ್ರಗಳಾಗಿ ನರ್ತನಗೈಯ್ಯತೊಡಗಿದವು. ಕಾಲೇಜಿನಿಂದ ವಾಪಸ್ಸು ಬಂದಕೂಡಲೇ ಮನದ ಪರದೆಯನ್ನು ಸರಿಸಿ ಲ್ಯಾಪ್ ಟಾಪ್ ನ ಮುಂದೆ ಕುಳಿತುಕೊಂಡೆ.

                                                    ***********************************************

                               "ನನ್ನ ಮಗಳಿಗೆ ನಿಮ್ಮ ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ. ಹೇಗಿದೆ ನಿಮ್ಮ ಕಾಲೇಜು..?? ಲೆಕ್ಚರರ್ಸ್ ಎಲ್ಲಾ ಚೆನ್ನಾಗಿ ಕಲಿಸ್ತಾರಾ..??" ಎಂದು ನಿಮ್ಮ ಜ್ಯೂನಿಯರ್ ಅಥವಾ ಸಂಬಂಧಿ ಅಥವಾ ಪರಿಚಯದ ಹುಡುಗ-ಹುಡುಗಿಯ ಪಾಲಕರು ನಿಮ್ಮ ಬಳಿ ಕೇಳಿದಾಗ ನೀವು ಏನಂತ ಹೇಳುತ್ತೀರಿ..?? ಅಕಸ್ಮಾತ್ ಆ ಹುಡುಗ ಅಥವಾ ಹುಡುಗಿಯೇ ಖುದ್ದು ನಿಮ್ಮ ಹತ್ತಿರ ಕಾಲೇಜಿನ ಬಗ್ಗೆ ವಿಚಾರಿಸಿದರೆ ಹೇಳಬಹುದಿತ್ತೇನೋ. "ಯಾಕೆ ಸುಮ್ನೆ ನೀನಾಗೇ ಬಂದು ನರಕಕ್ಕೆ ಬೀಳ್ತೀಯಾ..?? ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಅಟೆಂಡನ್ಸ್, ಮಾರ್ಕ್, ಡಿಸಿಪ್ಲಿನ್ ಅದೂ ಇದೂ ಅಂತಾ ನೂರಾರು ರೂಲ್ಸ್ ಆಂಡ್ ರೆಗ್ಯುಲೇಷನ್ಸ್. ಏನೂ ಎಂಜಾಯ್ ಮಾಡಕೆ ಆಗಲ್ಲ. ಸುಮ್ಮನೇ ಬೇರೆ ಯಾವ್ದಾದ್ರೂ ಕಾಲೇಜಿಗೆ ಸೇರ್ಕೊ. ಮೊನ್ನೆ ಅಷ್ಟೆ ಅವನೂ/ಅವಳೂ ಸಹ ಹೀಗೆ ಕೇಳ್ದಾಗ ಇದೇ ಉತ್ರ ಕೊಟ್ಟಿದೀನಿ. ನಿಂಗೂ ಮತ್ತೆ ಹೇಳ್ತಿದೀನಿ. ನಮ್ಮ ಕಾಲೇಜಿಗೆ ಮಾತ್ರ ಬರಬೇಡಾ." ಅಂತಾ ಇಷ್ಟುದ್ದ ಭಾಷಣಾನೇ ಬಿಗಿಯಬಹುದಿತ್ತು. ಆದರೆ ದೊಡ್ಡವರ ಹತ್ತಿರ ಹೀಗೆಲ್ಲಾ ಹೇಳಲಿಕ್ಕಾಗುವುದೇ..?? ಸಂದಿಗ್ಧ ಪರಿಸ್ಥಿತಿ. ಆದರೂ ತಲೆ ಕೆಡಿಸಿಕೊಳ್ಳುದೇನೂ ಅಗತ್ಯವಿಲ್ಲ. "ಅಂಕಲ್/ಆಂಟಿ, ಹೀಗೇ ಅಂತಾ ಹೇಳಕಾಗಲ್ಲ. ಇಟ್ ಡೆಪೆಂಡ್ಸ್." ಎಂದು ಬಿಟ್ಟರೆ ಮುಗಿಯಿತು.
                              ಹುಶಾರಿಲ್ಲವೆಂದು ಡಾಕ್ಟರ್ ಹತ್ತಿರ ಹೋಗಿದ್ದೀರಿ. ಯಾವ ಕಾರಣಕ್ಕಾಗಿ ಹುಷಾರು ತಪ್ಪಿತು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ. ಎಲ್ಲವನ್ನೂ ತಪಾಸಣೆ ನಡೆಸಿ ಔಷಧಗಳನ್ನು ಬರೆದುಕೊಟ್ಟ ನಂತರ ಡಾಕ್ಟರ್ ಹತ್ತಿರ ಕೇಳುತ್ತೀರಿ. ಅವರು ವಯಸ್ಸಿನಲ್ಲಿ ಹಿರಿಯರಾಗಿದ್ದು ಅನುಭವಿಯಾಗಿದ್ದರೆ, ಅಥವಾ ಆಗ ತಾನೇ ವೈದ್ಯ ವೃತ್ತಿಗೆ ಬಂದಿದ್ದರೂ ಉತ್ತಮರಾಗಿದ್ದರೆ ಇಂಥದ್ದರಿಂದಾಗಿಯೇ ಹೀಗೀಗೆ ಆಯಿತೆಂದು ನಿಖರವಾಗಿ ಹೇಳಬಲ್ಲರು. ಇಲ್ಲವೆಂದಾದರೆ ಒಂದೇ ಮಾತಿನಲ್ಲಿ ಉತ್ತರಿಸುತ್ತಾರೆ. "ಇಟ್ ಡೆಪೆಂಡ್ಸ್."
                             ಸ್ನೇಹಿತೆ/ಸ್ನೇಹಿತ ಮದುವೆಯಾಗಬಯಸಿದ್ದಾಳೆ/ನೆ. ಜೀವನ ಸಂಗಾತಿ ಹೀಗಿದ್ದರೆ ತಾವಿಬ್ಬರೂ ಪರಸ್ಪರ ಹೊಂದಿಕೊಂಡು ಸ್ವರ್ಗಕ್ಕೆ ಸಮನಾಗಿ ಸಂಸಾರ ನಡೆಸಬಹುದು ಎನ್ನುವ ಗೊಂದಲ ಅವಳಿ/ನಿಗೆ. ಇಂತಹ ಸಮಯದಲ್ಲಿ ಸ್ನೇಹಿತರಲ್ಲದೇ ಇನ್ನಾರು ತಾನೇ ಜೊತೆಗಿದ್ದು ಸಲಹೆ-ಸೂಚನೆಗಳನ್ನು ನೀಡಬೇಕು...?? ಹಾಗಾಗಿ ನಿಮ್ಮ ಹತ್ತಿರ ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ನಿಮಗಾದರೋ ಅವಳಿ/ನಿಗಿಂತ ಹೆಚ್ಚು ಗೊಂದಲವಾಗುತ್ತದೆ. ತನಗೇ ಎಂತಹ ಸಂಗಾತಿ ಬೇಕೆಂಬುದು ಇಲ್ಲಿಯ ತನಕ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ, ಇನ್ನು ಸ್ನೇಹಿತೆ/ತಗೆ ಏನೆಂದು ಹೇಳುವುದು ಎಂದು ತಲೆ ಕೆರೆದುಕೊಳ್ಳುತ್ತೀರಿ. ಆಗಲೇ ಒಂದು ತಪ್ಪಿಸಿಕೊಳ್ಳುವ ಉತ್ತರ ಹೊಳೆಯುತ್ತದೆ. "ಕರೆಕ್ಟಾಗಿ ಹೀಗೆಯೇ ಇದ್ದರೆ ಚೆನ್ನ ಎಂದು ಹೇಗೆ ಹೇಳೋದು ಮಾರಾಯ್ತಿ/ಮಾರಾಯಾ..?? ಇಟ್ ಡೆಪೆಂಡ್ಸ್." ಆ ಸ್ನೇಹಿತೆ/ತನಿಗೆ ನಿಮ್ಮ ಮಾತಿನಿಂದ ಅದೆಷ್ಟು ಸಮಾಧಾನವಾಗುವುದೋ. ಆದರೂ ಅಹುದಹುದು ಎಂದು ನಿಮ್ಮನ್ನು ಒಪ್ಪಿಕೊಳ್ಳುತ್ತಾಳೆ/ನೆ.

                                                      **********************************************

                            ಇಂತಹ ಹಲವಾರು ಸಂದರ್ಭಗಳಲ್ಲಿ ನಾವು ಇನ್ನೊಬ್ಬರಿಗೆ, ಇನ್ನೊಬ್ಬರು ನಮಗೆ "ಇಟ್ ಡೆಪೆಂಡ್ಸ್" ಎಂದು ಹೇಳುವುದು ಇತ್ತೀಚೆಗೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಏನೂ ಗೊತ್ತಿಲ್ಲವೆಂದರೆ ಇಟ್ ಡೆಪೆಂಡ್ಸ್. ಎಲ್ಲವೂ ಗೊತ್ತಿದ್ದು ಹೇಳಲು ಮನಸ್ಸಾಗುವುದಿಲ್ಲವೆಂದರೆ ಇಟ್ ಡೆಪೆಂಡ್ಸ್. ಯಾವುದೋ ಒಂದು ವಿಷಯದಿಂದ ತಪ್ಪಿಸಿಕೊಳ್ಳಬೇಕಾದರೂ ಇಟ್ ಡೆಪೆಂಡ್ಸ್. ಮಾತು ಬೇಡವಾಗಿರುವಾಗ ಇಟ್ ಡೆಪೆಂಡ್ಸ್. ಕೊನೆಗೆ ಮಾತು ಮುಂದುವರೆಯಬೇಕೆಂದಿದ್ದರೂ ಇಟ್ ಡೆಪೆಂಡ್ಸ್. ಈಗೀಗಲಂತೂ ದಿನನಿತ್ಯದ ಕೆಲಸಕಾರ್ಯಗಳ ವಿಷಯದಲ್ಲೂ ಇಟ್ ಡೆಪೆಂಡ್ಸ್. "ನಾಳೆ ಬೆಳಿಗ್ಗೆ ಎಷ್ಟು ಗಂಟೆಗೆ ಏಳ್ತೀಯಾ..??" "ಗೊತ್ತಿಲ್ಲ ಕಣೇ, ಇಟ್ ಡೆಪೆಂಡ್ಸ್."
                             ಅಂದ ಹಾಗೆ ನೀವು ಈ ಲೇಖನವನ್ನು ಓದುತ್ತಿದ್ದೀರಾ..?? ಯಾರಿಗೆ ಗೊತ್ತು, ‘ಇಟ್ ಡೆಪೆಂಡ್ಸ್’ ತಾನೇ..??

2 comments: