Saturday, 9 August 2014

ರಕ್ಷಾಬಂಧನದ ಶುಭಾಶಯಗಳು


ಪ್ರೀತಿಯ ಅಣ್ಣಾ,
                                 ಪ್ರೀತಿಯ ಎನ್ನುವುದಕ್ಕಿಂತ ಶ್ರೇಷ್ಥವಾದ ಸಂಬೋಧನೆ ಬೇರೆ ಯಾವುದೂ ನೆನಪಾಗುತ್ತಿಲ್ಲ. ಅಣ್ಣನೆಂದರೆ ಅಲ್ಲಿ ಕಾಣಸಿಗುವುದು ಪ್ರೀತಿಯೇ ತಾನೇ..?? ಅಣ್ಣನ ಜೊತೆ ಜಗಳವಾಗಲಿ, ಹೊಡಪಡೆಯಾಗಲಿ, ಮುನಿಸಾಗಲಿ, ಅಣ್ಣ ಸಿಟ್ಟಿನಿಂದ ಬಯ್ಯಲಿ, ಪಕ್ಕದಲ್ಲಿ ಕೂರಿಸಿಕೊಂಡು ಕಿವಿ ಹಿಂಡಲಿ, ಒಂದಿಷ್ಟು ಕರಾರು-ಕಟ್ಟಳೆಗಳನ್ನು ಹಾಕಲಿ - ಇವೆಲ್ಲದರಲ್ಲೂ ಮೂಲತಃ ಇರುವುದು ಪ್ರೀತಿಯೇ ಅಲ್ಲವೇ..?? ಅದಕ್ಕೆ ಇರಬೇಕು, ಯಾವ ತಂಗಿಗೆ ಆದರೂ ಪ್ರತಿ ಸಲ "ಅಣ್ಣಾ" ಎನ್ನುವಾಗ ಮುಖದ ತುಂಬೆಲ್ಲಾ ನೂರು ವೋಲ್ಟಿನ ಬಲ್ಬು ಹೊತ್ತಿಕೊಂಡಿರುತ್ತದೆ. ಆ ಬೆಳಕಿನ ಪ್ರಕಾಶ ಬೇರೆ ಯಾರನ್ನಾದರೂ ಕರೆಯುವಾಗ ಇರುವುದಕ್ಕಿಂತ ಸಾವಿರ ಪ್ರತಿಶತ ಹೆಚ್ಚು. ಕೊರೆತ ಸಾಕು, ಬೇಗ ವಿಷಯಕ್ಕೆ ಬಾ ಮಾರಾಯ್ತಿ ಅಂತಿದೀಯಾ..?? ಸ್ವಲ್ಪ ತಾಳು ಮಾರಾಯಾ. ನೀನಿನ್ನು ಹಾಸಿಗೆ ಬಿಟ್ಟು ಎದ್ದಿರುವುದೇ ಇಲ್ಲ. ಆಗಲೇ ಅದೆಂತಾ ಅರ್ಜೆಂಟು ನಿನಗೆ..??
                                 ಇವತ್ತು ನೂಲು ಹುಣ್ಣಿಮೆ ಅಲ್ಲವಾ..?? ಅದೇ ರಕ್ಷಾ ಬಂಧನ ಮಾರಾಯಾ. ನಿನಗೆಲ್ಲಿ ನೆನಪಿರುತ್ತದೆ ಹೇಳು..?? ತಂಗಿ ರಾಖಿ ಕಟ್ಟಲಿಕ್ಕೆ ಬರುತ್ತಾಳೆ ಎಂದು ಇವತ್ತೊಂದಿನ ಆದ್ರೂ ಬೇಗ ಎದ್ದು ಸ್ನಾನ-ಗೀನ ಎಲ್ಲ ಮಾಡಿ ಚೆಂದವಾಗಿ ತಯಾರಾಗಿ ಕಾಯುತ್ತಾ ಕೂರಬಾರದಾ...?? ಊಹ್ಞೂಂ, ರಾಖಿ ಕಟ್ಟಬೇಕು ಅಂತಿದ್ರೆ ನಾನೇ ನಿನ್ನ ಎಬ್ಬಿಸಬೇಕು. ಹೋಗಲಿ ಬಿಡು, ತಂಗಿಯಾಗಿದ್ದಕ್ಕೆ ಅಷ್ಟಾದರೂ ಮಾಡದೆ ಇದ್ದರೆ ಹೇಗೆ..?? ಈಗಲಾದರೂ ಬೇಗ ಏಳು ಮಾರಾಯಾ. ಆಗಲೆ ಗಂಟೆ ಒಂಭತ್ತಾಯಿತು. ನಿನ್ನ ಹತ್ತಿರ ಒಂದಿಷ್ಟು ಮಾತನಾಡಲಿಕ್ಕಿದೆ ನಂಗೆ. ತಲೆ ತಿನ್ನಲಿಕ್ಕಿದೆ ಅಂದರೂ ಸರಿಯೇ. ಅಣ್ಣಂದಿರನ್ನು ಗೋಳು ಹೊಯ್ದುಕೊಳ್ಳಲು ತಂಗಿಯರಿಗೆ ಅಧಿಕೃತವಾಗಿ ದೊರೆಯುವುದು ಇದೊಂದು ದಿನ ಮಾತ್ರ ತಾನೇ..?? ಸುಮ್ಮನೇ ಇರಲಿಕ್ಕಾಗುತ್ತದೆಯೇ..??
                                   ಎಲ್ಲ ಹುಡುಗಿಯರ ಬದುಕಿನಲ್ಲೂ ಅಣ್ಣನಿಗೆ ವಿಶೇಷ ಸ್ಥಾನವಿದೆ. ಅಪ್ಪನೆಂದರೆ ಪ್ರೀತಿ, ಸ್ನೇಹಗಳಿಗಿಂತ ಭಯ ಭಕ್ತಿಗಳೇ ಜಾಸ್ತಿ. ಹಾಗಾಗಿ ಅಮ್ಮನ ಸೆರಗು ಬಿಟ್ಟರೆ ಹೆಚ್ಚು ಸಲಿಗೆಯೆನ್ನುವುದು ಅಣ್ಣನ ಬಳಿಯೇ ತಾನೇ..?? ಅದೂ ಅಲ್ಲದೇ ಅಣ್ಣ ತನಗಿಂತ ಮೊದಲೇ ಹುಟ್ಟಿದವನು, ತನಗಿಂತ ತಿಳಿದವನು ಎಂದು ಏನೋ ಒಂದು ಬಗೆಯ ಸಂತೋಷದ ಹೆಮ್ಮೆ. ಅಣ್ಣನ ಮಾತೆಂದರೇ ಅದು ವೇದ ವಾಕ್ಯದಂತೆ. ಅಪ್ಪ-ಅಮ್ಮನ ಮಾತಿಗಿಂತ ಅದು ಕೇಳಲು ಹಿತ, ಪಾಲಿಸಲು ಮುದ. ಬೇಜಾರಾದರೆ ನಗಿಸುವವನು ಅಣ್ಣ, ಖುಷಿಯನ್ನು ಹಂಚಿಕೊಳ್ಳಲು ಅಣ್ಣ, ಸಿಟ್ಟು ಬಂದರೆ ಬೆನ್ನಿಗೆ ಗುದ್ದಲು ಅಣ್ಣ, ತಮಾಷೆ ಮಾಡಲು ಅಣ್ಣ, ಏನೂ ತೋಚದೇ ಕುಳಿತಾಗ ಹೀಗೆ ಮಾಡು ಕೂಸೆ ಎಂದು ದಾರಿ ತೋರುವವನು ಅಣ್ಣ, ಅಸಹಾಯಕರಾದಾಗ ಸಹಾಯ ಹಸ್ತ ಚಾಚುವವನು ಅಣ್ಣ, ತಪ್ಪು ಮಾಡಿದಾಗ ತಿದ್ದುವವನು ಅಣ್ಣ - ಹೀಗೆ ಪಾಲಕ, ಸೋದರ, ಸ್ನೇಹಿತ, ಗುರು, ಹಿತೈಷಿ ಎಲ್ಲ ಸ್ಥಾನದಲ್ಲೂ ಅಣ್ಣನೇ ವಿರಾಜಮಾನನಾಗಿರುತ್ತಾನೆ. ಚಿಕ್ಕಂದಿನಿಂದಲೂ ಎಂದರೆ ರಕ್ಷಾಬಂಧನದ ಆಚರಣೆಯ ತಲೆ ಬುಡ ಅರ್ಥವಾಗಿರದ ಮುಂಚಿನಿಂದಲೂ ಅಣ್ಣನೆಂದರೆ ಒಂಥರಾ ಸುರಕ್ಷತೆಯ ಭಾವ.  ಅಣ್ಣನೊಬ್ಬ ಇದ್ದರೆ ಸಾಕು ಎಂಬ ಗಟ್ಟಿ ಧೈರ್ಯ-ಸ್ಥೈರ್ಯ.
                                ಈಗ ದೊಡ್ಡವರಾದ ಮೇಲೂ ಅಷ್ಟೆ ತಾನೇ..?? ಎಲ್ಲದಕ್ಕೂ ಅಣ್ಣನೇ ಮೊದಲು. ಮೊದಮೊದಲು ಕಾಲೇಜಿಗೆ ಹೋಗಲು ಏನೋ ಒಂದು ಬಗೆಯ ಅಳುಕೆಂದು ಕೆಲವು ದಿನಗಳ ತನಕ ಡ್ರಾಪ್ ಮಾಡುವವನು ಅಣ್ಣ, ಸಿಲೇಬಸ್ ಅರ್ಥವಾಗದಿದ್ದಾಗ ಪಾಠ ಮಾಡುವವನು ಅಣ್ಣ. ಎಕ್ಸಾಮ್ ನಲ್ಲಿ ಒಂದೆರಡು ವಿಷಯಗಳು ಹೊಗೆ ಹಾಕಿಕೊಂಡಾಗ ಮೊದಲು ಹೇಳುವುದು ಅಣ್ಣನ ಬಳಿಯೇ. ಕಾಲೇಜಿನಲ್ಲಿ ಯಾರಾದರೂ ಚುಡಾಯಿಸಿದಾಗ ಅವರ ಕಪಾಳಕ್ಕೆ ಬಾರಿಸುವವನು ಅಣ್ಣನೇ, ಪ್ರೀತಿಸಿದ ಹುಡುಗ ಕೈಕೊಟ್ಟಾಗ ಕಣ್ಣೀರು ಒರೆಸಿ ಸಮಾಧಾನ ಮಾಡುವವನೂ ಅಣ್ಣನೇ. ಉಸ್ಸಪ್ಪಾ, ಅಣ್ಣನೆಂದರೆ ತಂಗಿಯ ವಿಷಯದಲ್ಲಿ ಅದೆಷ್ಟು ಜವಾಬ್ದಾರಿಗಳು. ಅದು ಎಂದಿಗೂ ಮುಗಿಯುವುದೇ ಇಲ್ಲ. ಥೋ ಮಾರಾಯಾ, ನನ್ನ ಕೊರೆತ ಕೇಳಿ ನೀನು ಮತ್ತೆ ನಿದ್ರೆ ಮಾಡಿದೆಯೋ ಹೇಗೆ..?
                                 ಈ ರಕ್ಷಾಬಂಧನದ ಹಿಂದೆ ಏನಾದರೂ ಕಥೆ ಇರಬೇಕಲ್ವಾ..?? ನಿಂಗೆ ಗೊತ್ತಿದೆಯಾ..?? ಹೇಳ್ತೀನಿ ಕೇಳು. ಬಲಿ ಚಕ್ರವರ್ತಿ ಯಾರಂತ ಗೊತ್ತಲ್ವಾ..?? ಅದೇ ಮಾರಾಯಾ, ವಿಷ್ಣು ವಾಮನ ಅವತಾರದಲ್ಲಿ ಹೋಗಿ ಮೂರು ಅಡಿ ಭೂಮಿ ಕೇಳಿದಾಗ ತನ್ನ ತಲೆಯನ್ನೇ ದಾನ ಮಾಡಿದವನು. ನೆನಪಾಯಿತಾ..?? ಇಲ್ಲದಿದ್ದರೂ ಮುಂದೆ ಕೇಳು. ಆಮೇಲೆ ಬಲಿಯ ಭಕ್ತಿಗೆ ಮೆಚ್ಚಿ ವಿಷ್ಣು ಆತನ ಮನೆಯ ಬಾಗಿಲು ಕಾಯಲು ಒಪ್ಪಿಕೊಂಡು ಪಾತಾಳ ಸೇರಿದಾಗ ವೈಕುಂಠದಲ್ಲಿರೋ ಲಕ್ಷ್ಮೀ ದೇವಿಗೆ ಗಾಬರಿಯಾಯಿತಂತೆ. ಗಂಡ ಪಾತಾಳ ಸೇರಿಕೊಂಡರೆ ಇಲ್ಲಿ ವೈಕುಂಠದಲ್ಲಿ ತನ್ನ ಗತಿಯೇನು ಎಂದು ಚಿಂತಿತಳಾಗಿ ಬಲಿಯ ಚಕ್ರವರ್ತಿಯನ್ನು ಸಮೀಪಿಸಿ ಸೋದರಿ ಸ್ನೇಹದಿಂದ ಅವನ ಕೈಗೆ ರಾಖಿಯನ್ನು ಕಟ್ಟಿದಳಂತೆ. ಆಗ ಬಲಿ ವರ ಕೇಳುವಂತೆ ಕೋರಿದಾಗ ಪಾತಾಳದಲ್ಲಿರುವ ತನ್ನ ಗಂಡನನ್ನು ಬಿಟ್ಟು ಕೊಡುವಂತೆ ಕೇಳಿದಳಂತೆ. ಹಾಗೆ ಇನ್ನೊಂದು ಕಥೆಯೂ ಪ್ರಚಲಿತದಲ್ಲಿದೆ. ಶಿಶುಪಾಲನನ್ನು ವಧಿಸುವಾಗ ಸುದರ್ಶನ ಚಕ್ರದ ತುದಿ ತಾಕಿ ಕೃಷ್ಣನಿಗೆ ರಕ್ತಸ್ರಾವವಾಯಿತಂತೆ. ಅಲ್ಲೇ ಇದ್ದ ದ್ರೌಪದಿ ಒಡನೆಯೇ ಧಾವಿಸಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಕಟ್ಟಿ ಶುಶ್ರೂಷೆ ಮಾಡಿದಳಂತೆ. ಆಗ ಕೃಷ್ಣನೂ ಅವಳಿಗೆ ಆಜನ್ಮ ರಕ್ಷಣೆ ನೀಡುವುದಾಗಿ ಭರವಸೆ ಇತ್ತನಂತೆ. ತನ್ನ ಮಾತಿನಂತೆ ಮುಂದೆ ಕುರುಸಭೆಯಲ್ಲಿ ಅವಳ ಮಾನ ಸಂರಕ್ಷಿಸಿದ. ಹಿಂದಿನ ವಾರವಷ್ಟೇ ನ್ಯೂಸ್ ಪೇಪರ್ ನಲ್ಲಿ ನಾನು ಓದಿದ್ದು ಇದು.
                                ರಕ್ಷಾಬಂಧನ ರಕ್ಷೆಯ ದ್ಯೋತಕ. ಸೋದರ-ಸೋದರಿಯರ ಪ್ರೀತಿಯ ಪ್ರತೀಕ. ಅಣ್ಣನ ಅಥವಾ ತಮ್ಮನ ಕೈಹಿಡಿದು ರಾಖಿ ಕಟ್ಟುವಾಗ ಅದೆಂಥ ಬೆಚ್ಚನೆಯ ಭಾವ. ಕಟ್ಟಿಸಿಕೊಂಡವನಿಗೂ ತನ್ನ ಹೆಗಲು ಇನ್ನಷ್ಟು ಭಾರವಾದಂತೆ ಅನುಭವ. ಎಷ್ಟು ಸುಂದರ ಅಲ್ವಾ ಅಣ್ಣಾ..?? ಈಗ ಮಾತು ಸಾಕು. ನೀನು ತಯಾರಾದೆಯಾ..?? ನಾನಂತೂ ರಾಖಿ ಹಿಡಿದು ಕಟ್ಟಲು ರೆಡಿಯಾಗಿ ಕುಳಿತಿದ್ದೇನೆ. ಬೇಗ ಹೇಳು, ನೀನು ನನಗೇನು ವರ ಕೊಡ್ತೀಯಾ..??
                                                ಪ್ರೀತಿಯೊಂದಿಗೆ,

                                                                                                                    ಎಂದೆಂದೂ ನಿನ್ನ ತಂಗಿ,
                                                                                                                             ಲಹರಿ

8 comments:

 1. nice articles from good writer.... have a bright future..

  ReplyDelete
 2. ಒಮ್ಮೆ ಎಲ್ಲೋ ಹೋಗಿಬಿಟ್ಟೆ ಮರ್ರೆ ನಿಮ್ಮ ಲೇಖನ ತುಂಬ ಚನ್ನಾಗಿದೆ.

  ReplyDelete
 3. ಮಾತೇ ಹೊರಡುತ್ತಿಲ್ಲ! ಆದರೆ , ಕಣ್ಣಂಚಿಗೆ ಬಂದುನಿಂತ ಕಂಬನಿ ಎಲ್ಲವನ್ನೂ ಹೇಳುತ್ತಿದೆ.

  ReplyDelete
 4. ಮಾತೇ ಹೊರಡುತ್ತಿಲ್ಲ! ಆದರೆ , ಕಣ್ಣಂಚಿಗೆ ಬಂದುನಿಂತ ಕಂಬನಿ ಎಲ್ಲವನ್ನೂ ಹೇಳುತ್ತಿದೆ.

  ReplyDelete