Friday, 15 August 2014

ಸ್ವಾತಂತ್ರ್ಯ..??!!


ಆರರ ಮುಂದೊಂದು ಎಂಟರ ಗಂಟು
ಸ್ವಾತಂತ್ರ್ಯೋತ್ಸವದೊಂದಿಗಿನ ನಂಟು
ಪರರ ತಂತ್ರವೋ..?? ಸ್ವಾತಂತ್ರ್ಯವೋ..??
ತಾನೇ ರೂಪಿಸಿಕೊಂಡಿಹ ಸ್ವ ತಂತ್ರವೋ..??
ಎಲ್ಲಿಯ ಸ್ವಾತಂತ್ರ್ಯ..?? ಉತ್ತರವಿಲ್ಲ
ಎಂತಹ ಸ್ವಾತಂತ್ರ್ಯ..?? ಪ್ರಶ್ನೆಗಳೇ ಎಲ್ಲ

ಆಂಗ್ಲರ ದಾಸ್ಯವನ್ನು ಕಿತ್ತೆಸಿದ್ದು ಯಾರು..??
ಅಧಿಕಾರವ ಹಸ್ತಾಂತರಿಸಿ ಅತ್ತ ಹೋದರವರು
ಅಂದಿನ ಬೇರುಗಳು ಇಂದು ಮರಗಳಾಗಿಲ್ಲವೇ..??
ಎಲ್ಲ ಕಡೆಯೂ ತನ್ನ ನೆರಳನ್ನು ಹಾಯಿಸುತ್ತ
ಸ್ವಂತ ನೆಲದ ಬಿಸಿಲಿಗಿಂತ ಹೆಚ್ಚಾಯಿತಲ್ಲವೇ
ಮತ್ತೊಬ್ಬರ ಎಂಜಲಿನ ಬಾಳೆಯ ತಂಪು..??

ಯಾರಿಗಿದೆ ಸ್ವಾತಂತ್ರ್ಯ ಇಂದು..?? ಯಾವುದಕ್ಕಿದೆ..??
ಮೈ ಏಕೆ, ಮನಸ್ಸುಗಳೂ ಮೈಲಿಗೆಯ ಮೂಟೆ
ನಡೆ-ನುಡಿಗಳಿಗೆ ನೆಚ್ಚಿಕೊಂಡಿದೆ ನಂಜು
ಮುಂದುವರೆಯುವ ಓಟದಲ್ಲಿ ಬಿದ್ದು
ಆರಿಹೋಗಿದೆ ಆತ್ಮಗೌರವದ ಆದರ್ಶ ಪಂಜು
ಸ್ವೇಚ್ಛೆಯ ಮುಖವಾಡದ ಹಿಂದೆ ದಾಸ್ಯದ ಕಳೆ

ಮಾತುಗಳಲ್ಲಿ ಮಾಡು ಕಟ್ಟುವುದೊಂದೇ ಮಾತ್ರ
ಕೃತಿಯಲ್ಲಿ ಅಡಿಪಾಯ ಹಾಕುವ ಹಂಬಲವಿಲ್ಲ
ಅಡಿಯಲ್ಲಿ ಕೈ ಚಾಚಿ ದೋಚುವ ಹುನ್ನಾರ
ಹೆಜ್ಜೆಹೆಜ್ಜೆಗೂ ತುಳಿತದ ರುಚಿಯ ತಿಂದು
ಸತ್ತುಹೋಗಿದೆ ಮತಿಯ ರಸಗ್ರಂಥಿ
ಕೊಚ್ಚಿಹೋಗುತ್ತಿದ್ದರೂ ಈಜುತ್ತಲೇ ದಡ ಕಾಣಬೇಕು

ಆದರೂ ಇನ್ನೂ ಏತಕೆ ಉಸಿರಿದೆ ಉದರದಲ್ಲಿ..??
ಕಾರಣ, ಅದಕ್ಕೆ ಭಾರತೀಯನೆಂಬ ಹೆಸರಿದೆಯಲ್ಲ
ಜೀವ ಹೆಸರು ಮರೆತರೇನಂತೆ, ಒಡಲೊಳಗಿನ
ಆತ್ಮವು ತನ್ನ ರಕ್ತಗುಣವನ್ನು ಅರಿಯದೇ..??
ನೆತ್ತರು ಹೆಪ್ಪುಗಟ್ಟಿರಬಹುದಷ್ಟೆ, ಬತ್ತಿಲ್ಲ
ಬಿಸಿ ತಾಕಿತೆಂದರೆ ಹರಿವಿಗೆ ತಡೆಯೇ ಇಲ್ಲ

ನಾನಾರೆಂಬುದರ ಅರಿವು ನನಗಿಲ್ಲ, ನಿನಗೂ ಕೂಡ
ಮಿಥ್ಯೆಯ ಮಾಯೆಯಲ್ಲಿ ಭ್ರಮೆಯಲ್ಲಿ ಬದುಕು
ಸತ್ಯವೆಂಬ ಶಿವನ ಸಾಕ್ಷಾತ್ಕಾರವಿಲ್ಲದೆ
ಕಣ್ಣು ತೆರೆದು ಜಗತ್ತನ್ನಲ್ಲ, ಒಳಗೆ ನೋಡದಿದ್ದರೆ
ಮುಸುಕಿನ ಮರೆಯಲ್ಲೇ ಮಣ್ಣಾಗುವೆವು ಮೂಢರೆಲ್ಲ
ಸಾಕಿನ್ನು ಎದ್ದೇಳಬೇಕು, ಕಾಲು ಹಾಕಿ ಸಾಗಬೇಕು

ಮಾನವ ಮಾತ್ರವಲ್ಲ, ಭಾರತೀಯನಾಗು
ಅಸಾಧ್ಯವೆಂಬುದರ ಅಸ್ತಿತ್ವ ಅಲ್ಲಿಲ್ಲ
ಎಲ್ಲವೂ ಸತ್ವಸಹಿತ ಸುಲಭ ಸುಂದರ ಸತ್ಯ
ಇಳೆಯ ಕಳೆಯನ್ನೆಲ್ಲ ಹೊಳೆಯಲ್ಲಿ ತೊಳೆದು
ಸ್ವಚ್ಛ, ಶ್ರೇಷ್ಠ ನಾಡು ಕಟ್ಟುವುದು ಕನಸಲ್ಲ
ನೆನಪಿಡು, ನೀ ಮೊದಲು ಭಾರತೀಯನಾಗಿರಬೇಕು


1 comment:

  1. ಅರ್ಥಪೂರ್ಣ ಸಾಲುಗಳು. ಸ್ನೇಹಿತರ ಆಡಂಬರಿಕ ಹಾಗು ತೋರಿಕೆಯ ಶುಭಾಶಯಗಳನ್ನು ಕಂಡಾಗ ನನ್ನಲ್ಲೂ ಇಂಥಹ ಆತ್ಮವಿಮರ್ಶೆಯ ಭಾವನೆ ಹುಟ್ಟಿತ್ತು. ಸ್ವಾತಂತ್ರಕ್ಕಾಗಿ ಮಡಿದವರ, ಹೋರಾಡಿದವರ ಭವಿಷ್ಯ ಭಾರತದ ಪರಿಕಲ್ಪನೆಯನ್ನು, ಕನಸುಗಳನ್ನು ಎಷ್ಟು ಮಾತ್ರಕ್ಕೆ ಸಕಾರಗೊಳಿಸಿದ್ದೇವೆಂದು ನಂತರದ ಪೀಳಿಗೆಯಾದ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಿದೆ. ಪಾಶ್ಚಿಮಾತ್ಯದ ಬಾಹ್ಯಿಕ ಅಂಧಾನುಕರಣೆ ಮತ್ಯಾವುದೋ ದಾಸ್ಯದೆಡೆಗೆ ನಮ್ಮನ್ನು ಕೊಂಡೊಯ್ಯುತ್ತಿದೆ. ಸ್ವಾತಂತ್ರದ ಹೆಸರಿನಲ್ಲಿ ನೈತಿಕ ಅಧಃಪತನ. ಡಾಲರಿನ ಹಿಂದೆ ಓಡುವವರಿಂದ ಆತ್ಮಗೌರವ ನಿರೀಕ್ಷಿಸುವುದು ತಪ್ಪಾದೀತು.

    ReplyDelete