Sunday, 24 August 2014

ಕೈ ತೋರಿಸುತ್ತಾ ಬಾಯಿ ತೆರೆಯುವ ಮೊದಲು...


                                             ಇದು ಸುಮಾರು ಎರಡು ವರ್ಷಗಳ ಹಿಂದೆ ನಡೆದ ಘಟನೆ.
                                             ಆಗ ಜೂನ್ ಅಥವಾ ಜುಲೈ ತಿಂಗಳು. ನನಗೆ ಎರಡನೇ ಸೆಮಿಸ್ಟರ್ ಮುಗಿದು ರಜಾದಿನಗಳು ಪ್ರಾರಂಭವಾಗಿದ್ದವು. ಹಾಗಾಗಿ ನನ್ನ ಕಾರುಬಾರೆಲ್ಲಾ ಮನೆಯಲ್ಲಿ ನಡೆದಿತ್ತು. ಒಂದು ದಿನ ಸಂಜೆ ಸುಮಾರು ಐದು- ಐದೂವರೆ ಹೊತ್ತಿಗೆ ಅಮ್ಮ ಮತ್ತು ಚಿಕ್ಕಮ್ಮ ಹೊರಗಡೆ ಮೆಟ್ಟಿಲ ಮೇಲೆ ಕುಳಿತು ಟಿಪಿಕಲ್ ಹೆಂಗಸರ ಹರಟೆ ಕಾರ್ಯಕ್ರಮವನ್ನು ನಡೆಸಿದ್ದರು. ದೂರದ ಸೋನಿಯಮ್ಮನಿಂದ ಹಿಡಿದು ಊರಿನ ಗಂಗಮ್ಮನ ವರೆಗೆ ಎಲ್ಲರೂ ಅವರಿಬ್ಬರ ನಾಲಿಗೆಯ ಮೇಲೆ ಕ್ಯಾಟ್ ವಾಕ್ ಮಾಡಿ ಹೋಗುತ್ತಿದ್ದರು. ನಾನು ಒಳಗೆ ಜಗಲಿಯಲ್ಲಿ ಕುಳಿತು ಕನ್ನಡದ ಕಾದಂಬರಿಯನ್ನು ಓದುತ್ತಿದ್ದೆ. ಹಾಗೆ ಇವರ ಸಂಭಾಷಣೆಯ ತುಣುಕುಗಳನ್ನು ಆಲಿಸುತ್ತಲೂ ಇದ್ದೆ. ಆಗ ಕೇಳಿಸಿತು,
                                            "ಇವತ್ತಿನ ಪೇಪರ್ ನೋಡ್ದ್ಯನೇ..?? ಅದ್ಯಾವ್ದೋ ಕೂಸು ಕಾಲೇಜಿಗೆ ಹೋಪದು ಓಡಿ ಹೋಜಡಾ. ಇವತ್ತಿನ ಲೋಕಧ್ವನಿಲಿ ಇತ್ತಪಾ."
                                             "ಹೌದೇ ಅತ್ಗೆ, ನೋಡಿದ್ದಿ. ದಿನಾ ಬಿಟ್ಟು ದಿನಾ ಒಬ್ರಲ್ಲಾ ಒಬ್ರು ಓಡಿ ಹೋಗ್ತ್ವಪಾ."
                                             "ಮಳ್ಳು ಕೂಸ್ಗ. ಮನೆ, ಮಠ ಎಲ್ಲಾ ಬಿಟ್ಟಿಕ್ಕಿ ಯಾವನ್ದೋ ಜೊತೆ ಓಡಿ ಹೋಪಲ್ಲೆ ಹೆಂಗಾದ್ರೂ ಮನ್ಸು ಬತ್ತೆನ. ದೊಡ್ಡಾದ್ರು ಬುದ್ಧಿ ಮಾತ್ರ ಬೆಳದಿರ್ತಿಲ್ಲೆ."
                                             "ಅಯ್ಯೋ ಅತ್ಗೆ, ಅಪ್ಪಾ ಅಮ್ಮಾ ಹಂಗೆ ಸಂಸ್ಕಾರ ಕೊಟ್ರೆ ಎಲ್ಲಾ ಕೂಸ್ಗನೂ ಸಮಾನೇ ಇರ್ತ."
                                           ನಮ್ಮ ಶಿರಸಿಯ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಹುಡುಗಿಯೊಬ್ಬಳು ಕಾಣೆಯಾಗಿದ್ದಾಳೆ ಎಂದಷ್ಟೆ ಪ್ರಕಟವಾಗಿದ್ದು. ಅದಕ್ಕೆ ಕುರಿತಾಗಿಯೇ ಅವರು ಮಾತನಾಡುತ್ತಿದ್ದುದು. ಇವತ್ತಿಗೆ ಮುಗಿಯುವುದಿಲ್ಲವೇನೋ ಎನ್ನುವಂತೆ ಅವರ ಆರೋಪಗಳು, ಸಮರ್ಥನೆಗಳು, ಸ್ಪಷ್ಟೀಕರಣಗಳು ನಡೆದೇ ಇದ್ದವು. ಸ್ವಲ್ಪ ಹೊತ್ತಿನ ನಂತರ ಸುಮ್ಮನೇ ಕುಳಿತು ಅವರನ್ನು ಆಲಿಸುತ್ತಿದ್ದ ನನಗೆ ತಡೆದುಕೊಳ್ಳಲಾಗಲಿಲ್ಲ. ಹೇಳಿಯೇ ಬಿಟ್ಟೆ.
                                            "ಅಯ್ಯೋ ಮಾರಾಯ್ರೇ, ಇಬ್ಬರೂ ಅದೆಷ್ಟು ಕಾಮೆಂಟ್ ಮಾಡ್ತಾ ಇದೀರಿ. ಆ ಕೂಸು ಯಾರೋ ಏನೋ. ಯಾಕೆ ಓಡಿ ಹೋದಳೋ ಏನೋ. ಅದೆಂಥದು ಗೊತ್ತಿಲ್ಲದಿದ್ದರೂ ಕಣ್ಣಾರೆ ನೋಡಿದ್ದೇವೆಯೆಂಬಂತೆ ಮಾತನಾಡ್ತಾ ಇದೀರಲ್ಲಾ. ನಿಮಗಿಬ್ಬರಿಗೂ ಕೂಡ ಒಂದೊಂದು ಹೆಣ್ಣು ಮಕ್ಕಳಿದಾರೆ ಅನ್ನೋದು ಮರೆತು ಹೋಯ್ತಾ ಹೇಗೆ..??"
                                           ನನ್ನ ಮಾತು ಕೇಳಿ ಅಮ್ಮನಿಗೆ ತುಸು ಸಿಟ್ಟು ಬಂತು. "ನಿಂಗೆ ತಿಳಿತಿಲ್ಲೆ, ಸುಮ್ನೆ ನಿನ್ನ ಪಾಡಿಗೆ ನೀನು ಕಾದಂಬರಿ ಓದ್ಕ್ಯಾ ಹೋಗು" ಎಂದು ಗದರಿದಳು. ನಾನು ನನ್ನ ಪಾತ್ರವು ಮುಗಿಯೆಂಬಂತೆ ಅಲ್ಲಿಂದ ಎದ್ದು ಅಡುಗೆ ಮನೆಗೆ ಹೋಗಿ ಓದುತ್ತಾ ಕುಳಿತೆ.


                                       ನಿನ್ನೆ ಯಾರೋ ನನಗೆ ಫೇಸ್ ಬುಕ್ ನಲ್ಲಿ ಇನ್ ಬಾಕ್ಸ್ ಗೆ ಮೆಸೇಜ್ ಮಾಡಿ ಕೇಳಿದ್ದೇನೆಂದರೆ,
                                     "ಎಲ್ಲಾ ವಿಷಯಗಳ ಕುರಿತು ನಾಲ್ಕು ಸಾಲಾದರೂ ನಿಮ್ಮ ಟೈಮ್ ಲೈನ್ ಅಥವಾ ಬ್ಲಾಗಿನಲ್ಲಿ ಬರೆಯುವ ನೀವು ಯಾಕೆ ಅನಂತಮೂರ್ತಿಗಳ ಕುರಿತಾಗಿ ಏನನ್ನೂ ಬರೆಯಲಿಲ್ಲಾ ಮೇಡಮ್..??" ನನಗೆ ಈ ಪ್ರಶ್ನೆಗೆ ಉತ್ತರ ಹೇಳುವ ಅಗತ್ಯವಾಗಲಿ, ಅರ್ಥವಾಗಲಿ ಕಾಣದೇ ಸುಮ್ಮನಾದೆ.
                                        ಸ್ವಾಮಿ, ನಾನೇನು ಬರೆಯಬೇಕೆಂದು ನೀವು ನಿರೀಕ್ಷಿಸುತ್ತೀದ್ದಿರಿ..?? ಅಷ್ಟಕ್ಕೂ ಬರೆಯಲೇಬೇಕೆಂಬ ಕಾಯಿದೆ ಏನಾದರೂ ಇದೆಯೇ..?? ನನ್ನ ಅಜ್ಜನ ವಯಸ್ಸಿನ ಅವರು ತೀರಿಕೊಂಡ ಸುದ್ದಿ ತಿಳಿದಾಗ ಸಾಹಿತ್ಯ ಲೋಕದ ಹಿರಿಯ ತಲೆಯೊಂದು ತನ್ನ ಯಾತ್ರೆ ಮುಗಿಸಿತೆಂದು ತಿಳಿದು ಒಂದು ಕ್ಷಣ ಮನಸ್ಸು ನಿಶ್ಚಲವಾಯಿತು. ತದನಂತರ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇನ್ನಷ್ಟು ಒದ್ದಾಡದೇ ತೀರಿಕೊಂಡಿದ್ದು ಒಳ್ಳೆಯದೇ ಆಯಿತೆಂಬ ಅಭಿಪ್ರಾಯ ಮೂಡಿತು. ಸತ್ತ ವ್ಯಕ್ತಿಯೊಬ್ಬರ ಬಗ್ಗೆ ಮಾತನಾಡುವುದು, ಬರೆಯುವುದು, ಅವರನ್ನು ಹೊಗಳುವುದು ಅಥವಾ ತೆಗಳುವುದು ನನಗೆ ಸರಿ ಕಾಣಿಸುವುದಿಲ್ಲ. ಅದು ಕೇವಲ ತೋರಿಕೆಯ, ಆಡಂಬರದ ಭಾವ ಮಾತ್ರವೇ. ವ್ಯಕ್ತಿಯೊಬ್ಬರ ಕುರಿತು ನಿಜವಾದ, ಪ್ರಾಮಾಣಿಕವಾದ ಪ್ರೀತಿ, ಗೌರವ, ಅಭಿಮಾನ, ಬೇಸರ, ವಿರೋಧಗಳಿದ್ದರೆ ಅವನ್ನೆಲ್ಲಾ ಅವರು ಜೀವಂತ ಇರುವಾಗಲೇ ವ್ಯಕ್ತಪಡಿಸಬೇಕೆ ವಿನಃ ಅವರ ಉಸಿರು ನಿಂತ ಮೇಲಲ್ಲ. ಆದರೆ, ಜನ ಹಾಗಲ್ಲ. ವ್ಯಕ್ತಿಯೊಬ್ಬರು ಇನ್ನಿಲ್ಲವಾದರೆಂದು ತಿಳಿದಾಗಲೇ ಅವರು ಇಷ್ಟು ದಿನ ಬದುಕಿಯೇ ಇದ್ದರೆಂಬ ಸತ್ಯ ತಲೆಗೆ ಹೊಳೆದು ತಾವು ಅವರ ಕುರಿತು ನಾಲ್ಕು ಮಾತನ್ನು ಹೇಳದಿದ್ದರೆ, ಬರೆಯದಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲವೆಂಬಂತೆ ನಾಲಿಗೆ ಹರಿಯಬಿಡುತ್ತಾರೆ. ಅಷ್ಟೆಲ್ಲಾ ಮಾಡಿದ ಮೇಲೆ ಕೊನೆಯಲ್ಲಿ "ರೆಸ್ಟ್ ಇನ್ ಪೀಸ್", "ಅವರ ಆತ್ಮಕ್ಕೆ ಶಾಂತಿ ಸಿಗಲಿ", "ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ" ಎಂದೆಲ್ಲಾ ಬರೆದು ಶರಾ ಹಾಕುವುದು ತೀರಾ ಹಾಸ್ಯಾಸ್ಪದ ಎನಿಸುವುದಿಲ್ಲವೇ..??
                                    ಒಂದು ಮಾತು ಹೇಳಲಿಕ್ಕಿದೆ. ಅನಂತ ಮೂರ್ತಿಗಳು ತೀರಿಕೊಂಡಿದ್ದಕ್ಕೆ ಒಂದಿಷ್ಟು ಮಂದಿ ಪಟಾಕಿ ಹೊಡೆದರಂತೆ, ಸಿಹಿ ಹಂಚಿದರಂತೆ ಎನ್ನುವುದನ್ನು ಕೇಳಿ ಎಂಥಾ ವಿಕೃತ ಮನಸ್ಥಿತಿಯವರು ಎಂದು ಎಲ್ಲರೂ ಅವರನ್ನು ಜರೆದಿದ್ದಾಯಿತು. ಇನ್ನು ಕೆಲವು ಮಂದಿ ಮೂರ್ತಿಗಳು ಹಾಗಿದ್ದರು, ಹೀಗಿದ್ದರು ಎಂದೆಲ್ಲಾ ಪ್ರೀತಿ, ಅಭಿಮಾನ, ಗೌರವಗಳನ್ನು ಸಂತಾಪಸೂಚಕ ಮಾತುಗಳಲ್ಲಿ, ಕಂಬನಿ ತುಂಬಿದ ಭಾವಗಳಲ್ಲಿ ಬರೆದುಕೊಂಡು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡರು. ಕೆಲವರು ಅವರ್ಯಾರೋ ಹಾಕಿದ್ದಾರೆ, ಹೀಗಾಗಿ ನಾನು ಹಾಕದಿದ್ದರೆ ಅಪಚಾರವಾದೀತು ಎಂದು ಏನೋ ಒಂದನ್ನು ಗೀಚಿದರು ಕೂಡ. ಇವನ್ನೆಲ್ಲಾ ನೋಡಿ ನನಗೆ ಅನ್ನಿಸಿದ್ದೇನೆಂದರೆ ಎಷ್ಟು ಜನರಿಗೆ ನಿಜವಾಗಿಯೂ ಬಿಸಿ ಕಣ್ಣೀರು ಬಂತು, ಮತ್ತೆ ಎಷ್ಟು ಜನರದ್ದು ಮೊಸಳೆ ಕಣ್ಣೀರು ಎಂದು. ಎಲ್ಲರೂ ಅಂತ ಅಲ್ಲ, ಈಗ ತಾವು ಅನಂತ ಮೂರ್ತಿಯವರ ಕಟ್ಟಾ ಅಭಿಮಾನಿಗಳೆಂದು ಪೋಸು ಕೊಡುತ್ತಿರುವವರಲ್ಲಿ ಹಲವಾರು ಮಂದಿ ಮೊದಲು ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿರಲಿಲ್ಲವೇ..?? ಆಗ ಅವರ ಸೃಜನಶೀಲತೆ, ವೈಚಾರಿಕ ಚಿಂತನೆ ಅರ್ಥವಾಗಿರಲಿಲ್ಲವೇ..?? ಅವರು ಇನ್ನಿಲ್ಲ ಎಂದ ಕೂಡಲೇ ಎಲ್ಲವೂ ಜ್ಞಾನೋದಯವಾಯಿತೇ..?? ಪಟಾಕಿ ಹೊಡೆದು ಸಂಭ್ರಮಿಸಿದವರಿಗೂ ಇವರಿಗೂ ಬಹಳ ವ್ಯತ್ಯಾಸವಿದೆಯೇ..?? ಜನ ಅವರ ಸಾವಿನ ಸುದ್ದಿಯನ್ನು ಮುಂದಿಟ್ಟುಕೊಂಡು ತಾವು ಭಾಳ ಸಾಚಾ ವ್ಯಕ್ತಿಗಳು ಎನ್ನುವಂತೆ ಕುಣಿದಾಡುತ್ತಿದ್ದಾರಲ್ಲಾ, ಇವರೆದ್ದು ಅದೆಂಥ ಸಂಸ್ಕೃತಿ..??

                                      *****************************************

                                     "ನೀನು ಬೇರೆಯವರ ಕಡೆ ಬೆರಳು ತೋರಿಸುತ್ತಿರುವಾಗ ಉಳಿದ ನಾಲ್ಕು ಬೆರಳುಗಳು ನಿನ್ನತ್ತಲೇ ಮುಖ ಮಾಡಿರುತ್ತವೆ ಎನ್ನುವುದನ್ನು ಮರೆಯಬೇಡ." ಇದೊಂದು ಹಿರಿಯರ ಅನುಭವದ ಮಾತು. ಹೌದಲ್ಲ, ನಾವು ಯಾರತ್ತಲೋ ಕೈ ತೋರಿಸಿ ಮಾತನಾಡುವಾಗ ನಮ್ಮ ಕುರಿತಾಗಿಯೂ ಯಾವುದೋ ಮೂಲೆಯಲ್ಲಿ ಯಾರೋ ಒಬ್ಬರು ಕೈ ತೋರಿಸುತ್ತಿರಬಹುದಲ್ಲ. ನಾವೂ ಮನುಷ್ಯರೇ ತಾನೇ..?? ಟೀಕೆ, ಟಿಪ್ಪಣಿಗಳು ದೇವರನ್ನೇ ಬಿಟ್ಟಿಲ್ಲವೆಂದಾದರೆ ನಾವು ಹೇಗೆ ಅದಕ್ಕೆ ಹೊರತಾಗುತ್ತೇವೆ..?? ನಾಲಿಗೆಗೆ ಮೂಳೆಯಿಲ್ಲವೆಂದು ಬೇಕಾಬಿಟ್ಟಿ ತಿರುಗಿಸಿದರೆ ಕೊನೆಗೆ ಎಲ್ಲರ ಎದುರು ನಮ್ಮ ವ್ಯಕ್ತಿತ್ವದ ಬೆನ್ನು ಮೂಳೆ ಮುರಿದು ತಲೆತಗ್ಗಿಸಿ ಕುಬ್ಜರಾಗಬೇಕಾಗುತ್ತದೆಯಷ್ಟೆ. ಈ ಸತ್ಯ ನಮಗೇಕೆ ಅರ್ಥವೇ ಆಗುವುದಿಲ್ಲ..?? ನಮ್ಮ ವೈಯಕ್ತಿಕ ವಿಷಯಗಳ ಕುರಿತಾಗಿ ಕಣ್ಣು ಹಾಯಿಸಲು ಕೂಡ ಸಮಯವಿಲ್ಲದಷ್ಟು ಬ್ಯುಸಿ ಇರುವಾಗ ಬೇರೆಯವರ ಕುರಿತು ಮಾತನಾಡಲು ಅದೆಲ್ಲಿಂದ ಸಮಯ ದೊರಕುತ್ತದೆ..??
                                    ಅಷ್ಟಕ್ಕೂ ನಮಗೆ ನಮ್ಮ ವ್ಯಕ್ತಿತ್ವ, ನಿಲುವು, ಸಿದ್ಧಾಂತಗಳ ಕುರಿತು ನಯಾ ಪೈಸೆ ಅರಿವು ಇಲ್ಲದಿರುವಾಗ ಬೇರೆಯವರ ಸಿದ್ಧಾಂತ, ನಿಲುವುಗಳ ಮೇಲೆ ಟೀಕೆ, ಟಿಪ್ಪಣಿ, ಪರ-ವಿರೋಧ ವ್ಯಕ್ತಪಡಿಸಲು ನೈತಿಕ ಹಕ್ಕು ಎಂಬುದೊಂದು ಇದೆಯೇ..?? ಇದು ಅಜ್ಞಾನದ, ಮೌಢ್ಯದ ಪರಮಾವಧಿಯಲ್ಲವೇ..?? ಎಡ, ಬಲ, ಅತ್ತ, ಇತ್ತ ಎಂದು ಏನೇನೆಲ್ಲಾ ಗುಂಪುಗಳೊಂದಿಗೆ ಎಲ್ಲರನ್ನೂ ಗುರುತಿಸುತ್ತೇವೆ, ವ್ಯಾಖ್ಯಾನಿಸುತ್ತೇವೆ. ಆ ಮೂಲಕ ನಾವು ಬಹಳ ಸಾತ್ವಿಕರು ಎಂದು ನಟಿಸುತ್ತೇವೆ. ಹಾಗೆ ಮಾಡಲು ನಾವು ಯಾರು..?? ಮೊದಲು ನಾವು ನೆಟ್ಟಗೆ ಮನುಷ್ಯರೇ ಅಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಲ್ಲವೇ..?? ಮೊದಲು ನಾವು ಮಾನವರಾಗಬೇಕಲ್ಲವೇ..?? ತದನಂತರ ಪರರ ಕಡೆ ನೋಟ ಹರಿಸಿದರಾಯಿತು. ಏನಂತೀರಿ..??


1 comment:

  1. Rightly said. Peaople are waiting for opportunity to comment on others

    ReplyDelete