Saturday, 2 August 2014

ಡೈರಿ ಪುಟ - ೫೦


                         "ಟಣ್ ಟಣಾ, ಓಯ್ ಇಲ್ನೋಡು" ಟೈಮ್ ಟೇಬಲ್ ಬರೆದುಕೊಳ್ಳಲೆಂದು ಕ್ಲಾಸ್ ಮೇಟ್ ಒಬ್ಬಳ ರೂಮಿನಿಂದ ವಾಪಸ್ಸು ಬಂದ ನನ್ನ ರೂಮ್ ಮೇಟ್ ತನ್ನ ಬಲಗೈಯನ್ನು ಎತ್ತಿ ಕುಣಿಸುತ್ತಾ ಹೇಳಿದಳು. ಗುಲಾಬಿ, ಹಳದಿ ಬಣ್ಣದ ಎರಡು ಬ್ಯಾಂಡುಗಳು ಮಿರಿ ಮಿರಿ ಮಿಂಚುತ್ತಿದ್ದವು.
                     "ಅದೆಂಥದೇ ಮಾರಾಯ್ತಿ..?? ಓಹ್, ನೆನಪಾಯಿತು. ಇವತ್ತು ಫ್ರೆಂಡ್ ಶಿಪ್ ಡೇ. ಸ್ನೇಹಿತರಾದವರೂ ಸ್ನೇಹಿತರಲ್ಲದವರೂ ಗಿಫ್ಟು, ಕಾರ್ಡು, ಬ್ಯಾಂಡುಗಳ ವಿನಿಮಯ ಮಾಡಿಕೊಳ್ಳುವ ದಿನ. ಹೌದು, ನಿನಗೆ ಯಾರು ಕಟ್ಟಿದರೇ ಎರಡೆರಡು ಬ್ಯಾಂಡುಗಳನ್ನು..??" ನಾನು ಸ್ವಲ್ಪ ತಿರಸ್ಕಾರದಿಂದಲೇ ಕೇಳಿದೆ.
                       "ಅದೇ ನಮ್ಮ ಸಾಲಿನಲ್ಲಿ ಕೊನೆಯ ರೂಮ್ ಇಲ್ಲವಾ..?? ಅಲ್ಲಿ ಇರ್ತಾರಲ್ಲಾ, ಬಯೋಟೆಕ್ ಬ್ರ್ಯಾಂಚ್ ಹುಡುಗಿಯರು. ಅವರು ಕಟ್ಟಿದ್ದು. ನನಗೆ ಅವರ ಹೆಸರು ಗೊತ್ತಾಗಿದ್ದೇ ಲಾಸ್ಟ್ ಸೆಮ್ ಫೈನಲ್ ಎಕ್ಸಾಮ್ ಹೊತ್ತಿಗೆ. ಅವರೂ ಸಹ ಟಿವಿ ಹಾಲ್ ಗೆ ಓದಲು ಬರುತ್ತಿದ್ದರು. ಆಗಿನಿಂದ ಫ್ರೆಂಡುಶಿಪ್ಪು" ಅವಳು ನಗುತ್ತಾ ಹೇಳಿದಳು.
                       "ಸರಿಹೋಯ್ತು. ಫಾದರ್ಸ್ ಡೇ, ಮದರ್ಸ್ ಡೇ ಅಂತಾ ರಕ್ತಸಂಬಂಧಿಗಳಿಗೆ ಒಂದೊಂದು ದಿನವನ್ನು ಎತ್ತಿ ಕೊಟ್ಟಿದ್ದಾಯಿತು. ಈಗ ಭಾವಗಳಿಗೆ, ಬಂಧನಗಳಿಗೂ ಒಂದೊಂದು ಡೇ. ಗಾಳಿಯ ಹಾಗೆ ಕಣ್ಣಿಗೆ ಕಾಣದ, ಕಿವಿಗೆ ಕೇಳದ ಕೇವಲ ಅನುಭವ ಮಾತ್ರದಿಂದಲೇ ತನ್ನ ಅಸ್ತಿತ್ವ ಸಾರುವ ಸ್ನೇಹ, ಪ್ರೀತಿ, ಪ್ರೇಮ, ಮಮತೆಗಳಿಗೆಲ್ಲ ಒಂದೊಂದು ದಿನದ ಆಚರಣೆಯ ಬೇಲಿ ಹಾಕುವುದು ಸರಿಯೇ..?? ಹಾಗೆ ಮಾಡಿದರೆ ಅದು ಅವುಗಳ ಅರ್ಥ ವೈಶಾಲ್ಯತೆಯನ್ನು ಸಂಕುಚಿತಗೊಳಿಸಿದಂತೆ ಅಲ್ಲವೇ..?? ಅವೆಲ್ಲವೂ ನಮ್ಮ ಮನಸ್ಸಿನಲ್ಲಿ, ನಡೆ-ನುಡಿಗಳಲ್ಲಿರಬೇಕೆ ಹೊರತು ಕಾರ್ಡು, ಬ್ಯಾಂಡುಗಳ ಮೇಲಲ್ಲ."
                         "ಖರೇ ಹೌದು. ಅದಕ್ಕೆ ಸ್ನೇಹದ ನಿಜವಾದ ಅರ್ಥ ತಿಳಿದಿರುವವರು ಯಾರು ಫ್ರೆಂಡ್ ಶಿಪ್ ಡೇ ಆಚರಿಸುವುದೇ ಇಲ್ಲ. ಅವರಿಗೆ ಸ್ನೇಹಜೀವನದ ಪ್ರತಿ ದಿನ ಪ್ರತಿ ಕ್ಷಣ ಕೂಡ ಹಬ್ಬದ ಹಾಗೆಯೇ. ಎಲ್ಲವನ್ನೂ ಆಡಂಬರದ ಬಣ್ಣ ಹಚ್ಚಿ ನೋಡುತ್ತ ತೋರಿಕೆಯ ಸಲುವಾಗಿ ನಡೆಯುವ ಮಂದಿಯೇ ಇಂಥ ಡೇಸ್ ಗಳನ್ನು ಆಚರಿಸಿವುದು. ನೋಡು ಬೇಕಾದರೆ ಈ ವರ್ಷ ಯಾರು ಬ್ಯಾಂಡು ಕಟ್ಟಿರುತ್ತಾರೋ, ಅವರು ಮುಂದಿನ ವರ್ಷ ಕಟ್ಟುವುದಿಲ್ಲ. ಯಾಕೆಂದರೆ ಅಷ್ಟೊತ್ತಿಗೆ ಅವರಿಗೆ ಹಳೇ ಸ್ನೇಹಿತರು ಮರೆತೇ ಹೋಗಿರುತ್ತಾರೆ. ಅಂಥವರಿಗೆಂದೇ ಇಂಥ ದಿನಗಳು ಇದ್ದದ್ದು."
                     "ಹ್ಞೂಂ, ಮುಂದೆ ಇನ್ನೂ ಒಂದು ಆಚರಣೆ ಬಂದರೂ ಬರಬಹುದು. ಹ್ಯೂಮನ್ ಡೇ ಅಂತ, ಮನುಷ್ಯರ ದಿನ. ಅವತ್ತೊಂದು ದಿನದ ಮಟ್ಟಿಗೆ ಎಲ್ಲರೂ ಮನುಷ್ಯರಾಗಿರುವುದು. ಏನಂತೀಯಾ..??"



1 comment:

  1. ಆಚರಣೆಗಳಿರುವುದೇನೂ ತಪ್ಪಲ್ಲ . ಆದರೆ ಅದಕ್ಕೇ ಸೀಮಿತವಾಗಬಾರದಷ್ಟೆ .

    ReplyDelete