Sunday, 17 August 2014

ಕೃಷ್ಣಂ ವಂದೇ ಜಗದ್ಗುರುಂ


                                              "ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ
                                               ಕೃಷ್ಣಾ ಎನಬಾರದೇ, ಶ್ರೀಕೃಷ್ಣ ಎನಬಾರದೆ"
                                 ಹೌದಲ್ಲ, ಸಂಕಟ ಬಂದಾಗ ವೆಂಕಟರಮಣನೇ ನೆನಪಾಗುತ್ತಾನೆ. ಯಾಕೆ..?? ಅವನು ದೇವರೆಂದೇ..?? ದೇವಾನುದೇವತೆಗಳು ಮುಕ್ಕೋಟಿಗಳಷ್ಟಿದ್ದಾರಲ್ಲ. ಆದರೂ ಶ್ರೀಹರಿಯೇ ಏಕೆ..?? ಅವನು ಅವತಾರ ಪುರುಷನೆಂದೇ..?? ಅವನನ್ನು ಬಿಟ್ಟು ಇನ್ನು ನವ ಅವತಾರಗಳಿವೆಯಲ್ಲ. ಅವರಲ್ಲೇಕೆ ಮೊರೆಯಿಡಲು ಮನ ಓಗೊಡುವುದಿಲ್ಲ..?? ಸಂತಸವಾದರೂ ಕೃಷ್ಣನೇ, ಬೇಸರವಾದರೂ ಕೃಷ್ಣನೇ. ದಣಿದ ಉಸಿರಿಗೆ ಜೋಗುಳ ಹಾಡಿ ಮಲಗಿಸುವವನೂ ಅವನೇ, ಅರೆನಿದ್ದೆಯಿಂದ ಎಬ್ಬಿಸುವವನೂ ಅವನೇ. ಹಾಡು ಹೇಳಿ ಕುಣಿಸುವ ಕೆಲಸವೂ ಆತನದೇ, ಕೈ ಹಿಡಿದು ನಡೆಸುವ ಕಾಯಕವೂ ಅವನದೇ. ಎಂದಿಗೂ ಕೃಷ್ಣ, ಎತ್ತಲೂ ಕೃಷ್ಣ.
                                ಕೃಷ್ಣ ದೇವರೇ..?? ಹೌದೆಂದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಆತ ಯಾರಿಗೂ ಯಾವ ಬಗೆಯ ವರಗಳನ್ನು ನೀಡಿದವನಲ್ಲ. "ಸ್ವಾಮಿ, ಹಸಿವು ತಾಳಲಾರೆ" ಎಂದು ಅರ್ತನಾದಗೈದವರಿಗೆ ಕೇವಲ ಭಿಕ್ಷೆ ಹಾಕಿ ಕೈ ತೊಳೆದುಕೊಳ್ಳಲಿಲ್ಲ. ಅಥವಾ ತಾನೇ ಪ್ರತಿದಿನವೂ ಕೈತುತ್ತು ತಿನ್ನಿಸಿ ಅವರನ್ನು ಸೋಮಾರಿಯನ್ನಾಗಿಸಲಿಲ್ಲ. ಬದಲಾಗಿ ಒಂದು ಹಿಡಿ ಅನ್ನವನ್ನು ದುಡಿದು ಗಳಿಸುವ ಬಗೆಯನ್ನು ಕಲಿಸಿದ. ಕತ್ತಲೆಯಲ್ಲಿ ಕುಸಿದು ಕುಳಿತವರಿಗೆ ಕ್ಷಣಮಾತ್ರದಲ್ಲಿ ಬೆಳಕು ನೀಡಿ ಹರಸಲಿಲ್ಲ. ಕೈ ಹಿಡಿದು ಮೇಲೆಬ್ಬಿಸಿ ಬೆಳಕನ್ನು ಹುಡುಕಿ ಹೋಗುವ ಹಾದಿಯ ಕುರಿತು ಮಾರ್ಗದರ್ಶನ ಮಾಡಿದ. ಅದಕ್ಕೆ ಇರಬೇಕು, ಯಾರೂ ಸಹ ಕೃಷ್ಣನನ್ನು ಮೆಚ್ಚಿಸಲು ವರ್ಷಗಳವರೆಗೆ ತಪಸ್ಸು ಮಾಡಿದ ಉದಾಹರಣೆಯಿಲ್ಲ. ಹಾಗಂತ ಆತನಿಗೆ ಭಕ್ತರಿರಲಿಲ್ಲವೇ..?? ಆತನಾರಿಗೂ ತನ್ನ ಕೃಪೆ ತೋರಿಸಿರಲಿಲ್ಲವೇ..?? ಇಲ್ಲವೆಂದಿಲ್ಲ, ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಅವುಗಳಲ್ಲೆಲ್ಲೂ ಭಕ್ತಿ, ಶ್ರದ್ಧೆಯ ಆಡಂಬರವಿಲ್ಲ. ನಿಷ್ಕಳಂಕ, ನಿಷ್ಕಪಟ, ಪ್ರಾಮಾಣಿಕ ಮನಸ್ಸಿನಿಂದ ಒಮ್ಮೆ ಕೃಷ್ಣಾ ಎಂದರೂ ಸಾಕು, ಆತ ದರ್ಶನ ನೀಡುತ್ತಿದ್ದ.


                                  ಕೃಷ್ಣ ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯನಾಗಿ ಇದ್ದವನು. ನೋಡಿ ಬೇಕಾದರೆ. ಹುಟ್ಟಿದ್ದೇ ಕಾರಾಗ್ರಹದಲ್ಲಿ, ಅದೂ ಕೂಡ ಅರಮನೆಯಲ್ಲಿ ರಾಜಕುಮಾರನಾಗಿ ಬೆಳೆಯಬೇಕಾದವ ದೂರದ ಯಮುನೆಯ ತೀರದಲ್ಲಿ ಗೊಲ್ಲನಾಗಿ ಬೆಳೆದ. ಬಾಲ್ಯದಿಂದಲೇ ಶತ್ರುಗಳಿಂದ ಅದೆಷ್ಟು ಕಷ್ಟಗಳು ಅವನಿಗೆ. ಅವನೂ ಸಹ ಎಲ್ಲ ಚಿಕ್ಕಮಕ್ಕಳಂತೆಯೇ ತುಂಟಾಟ ಮಾಡಿದವನು, ಅಣ್ಣ ಬಲರಾಮನೊಡಗೂಡಿ ಹಾಲು, ಬೆಣ್ಣೆ ಕದ್ದವನು, ನದಿಯಲ್ಲಿ ಮೀಯಲು ಹೋಗುತ್ತಿದ್ದ ಹೆಂಗಳೆಯರ ಬಟ್ಟೆಗಳನ್ನು ಬಚ್ಚಿಡುತ್ತಿದ್ದವನು, ಗೋಪಿಕೆಯರೊಂದಿಗೆ ಬೃಂದಾವನದ ಬೆಳದಿಂಗಳಿನಲ್ಲಿ ಸರಸವಾಡಿದವನು. ಅಲ್ಲಿಂದ ಮುಂದೆ ಮಥುರೆಗೆ ಬಂದು ಅರಮನೆ ಸೇರಿದರೂ ಆತನೇನೂ ರಾಜಪುರುಷನಂತಾಗಲಿಲ್ಲ. ಎಲ್ಲರೊಂದಿಗೆ ತಾನು ಒಂದಾದ, ಬೆರೆತ, ಸ್ಪಂದಿಸಿದ. ಬಂಧನಗಳ ವಿಷಯದಲ್ಲಿ ಕೃಷ್ಣನಿಗಿಂತ ಎತ್ತರದಲ್ಲಿ ಯಾರು ತಾನೇ ನಿಲ್ಲಬಲ್ಲರು..?? ಪುತ್ರನಾಗಿ, ಸಂಗಾತಿಯಾಗಿ, ಗೆಳೆಯನಾಗಿ, ಸೋದರನಾಗಿ, ಗುರುವಾಗಿ ಆತ ನಡೆದುಕೊಂಡಂತೆ ಇನ್ನಾರು ನಡೆದಿದ್ದಾರೆ..?? ಕೊನೆಯಲ್ಲಿ ಶತ್ರುಗಳಿಗೂ ಕೂಡ ಆತ ಮಿತ್ರರ ಸ್ಥಾನವನ್ನು ನೀಡುವುದರೊಂದಿಗೆ ಅವರಿಗೆ ಮೋಕ್ಷಪ್ರಾಪ್ತಿಯಾಗುವಂತೆ ಮಾಡುತ್ತಾನೆ. ಅದರಿಂದಾಗಿಯೇ ಶ್ರೀಕೃಷ್ಣ ಮಕ್ಕಳಿಂದ ಹಿಡಿದು ಮುದಿ ವಯಸ್ಸಿನವರಿಗೂ ಆಪ್ತನಾಗುತ್ತಾನೆ.
                                ಇನ್ನು ಮಹಾಭಾರತವನ್ನು ನೆನಪಿಸಿಕೊಂಡರೆ ಅಲ್ಲಿ ಎಲ್ಲರ ಪಾತ್ರಗಳಲ್ಲೂ ಒಂದಲ್ಲ ಒಂದು ಬಗೆಯಲ್ಲಿ ಕೃಷ್ಣನೇ ವಿಜೃಂಭಿಸಿದ್ದಾನಲ್ಲವೇ..?? ಕುಂತಿಯ ವಾತ್ಸಲ್ಯದಲ್ಲಿ, ಯುಧಿಷ್ಠಿರನ ಧರ್ಮಪಾಲನೆಯಲ್ಲಿ, ಧೃತರಾಷ್ಟ್ರನ ಪುತ್ರ ವ್ಯಾಮೋಹದಲ್ಲಿ, ಕರ್ಣನ ಮಿತ್ರನಿಷ್ಠೆಯಲ್ಲಿ, ಅರ್ಜುನನ ಶೌರ್ಯದಲ್ಲಿ, ಅಭಿಮನ್ಯುವಿನ ಕೆಚ್ಚಿನಲ್ಲಿ, ಭೀಮನ ಬಲದಲ್ಲಿ, ಧುರ್ಯೋದನನ ಸೇಡಿನಲ್ಲಿ, ಭೀಮನ ಬಲದಲ್ಲಿ, ದ್ರೋಣರ ಗುರುಗಾಂಭೀರ್ಯದಲ್ಲಿ, ಶಕುನಿಯ ಸಂಚಿನಲ್ಲಿ, ಪಾಂಚಾಲಿಯ ಸಾತ್ವಿಕ ಸಿಟ್ಟಿನಲ್ಲಿ - ಹೀಗೆ ಎಲ್ಲರಲ್ಲಿ, ಎಲ್ಲದರಲ್ಲಿ ಆತನ ದನಿ ಕೇಳಿಸುತ್ತದೆ. ಇಡೀ ಮಹಾಭಾರತದ ಸೂತ್ರಧಾರ ಆತನೇ. ಅದಕ್ಕೆ ಮುಕುಟವಿಟ್ಟಂತೆ ಕೊನೆಯಲ್ಲಿ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿ ಭಗವದ್ಗೀತೆಯನ್ನು ಬೋಧಿಸಿದ. ಜೀವನದ ಕುರಿತಾದ ಆಳವಾದ ಸತ್ಯಗಳನ್ನು ಅದೆಷ್ಟು ಸಹಜ, ಸುಂದರ, ಸರಳವಾದ ಭಾಷೆಯಲ್ಲಿ ಆತ ಹೇಳಿದ ಪರಿ ಎಂಥಹ ಅದ್ಭುತ. ಇದೊಂದು ಸಂಗತಿ ಮಾತ್ರ ಕೃಷ್ಣ ದೇವರೇ ಎಂದು ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡುತ್ತದೆ.
                               ಆತ ದೇವನಾಗಿದ್ದನೋ ಇಲ್ಲವೋ, ಆದರೆ ಅಸಾಧಾರಣ ಅಸಾಮಾನ್ಯನಾಗಿದ್ದ. ಅದರಿಂದಾಗಿಯೇ ಸಾಮಾನ್ಯ ಮನುಷ್ಯನಿಗಿಂತ ಎತ್ತರದ ಸ್ಥಾನ ಸಂಪಾದಿಸಿದ. ಜೊತೆಯಲ್ಲಿ ಆ ಸ್ಥಾನಕ್ಕೇರುವ ಬಗೆಯನ್ನು ಇತರರಿಗೆ ತಿಳಿಯಪಡಿಸಿದ ಕೂಡಾ. "ಎಲ್ಲರಲ್ಲಿಯೂ ನಾನಿದ್ದೇನೆ" ಎಂದು ಆತ ಗೀತೆಯಲ್ಲಿ ಹೇಳಿದುದರ ಅರ್ಥವೇನು..?? ನಮಗೂ ಆತನಂತೆಯೇ ಅಸಾಮಾನ್ಯರಾಗುವ ತಾಕತ್ತಿದೆಯೆಂಬುದೇ ಅಲ್ಲವೇ..?? "ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತಃ" ಎಂದರೆ ಆತ ಇನ್ನು ಇದ್ದಾನೆ, ನಮ್ಮೆಲ್ಲರ ನಡುವೆಯೇ ಇದ್ದಾನೆ, ನಮ್ಮೊಳಗೂ ಇದ್ದಾನೆ.
                                     "ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ"
                                ಈ ಒಂದು ಮಾತನ್ನು ಚೆನ್ನಾಗಿ ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಸಾಕು. ಬದುಕಿನ ಎಲ್ಲ ಸಂಕಟ, ಗೊಂದಲ, ನೋವು, ಆಸೆಗಳು ದೂರವಾಗಿ ಕರ್ತವ್ಯವೊಂದೇ ಮೈ ಮನಸ್ಸನ್ನು ಆಳುತ್ತದೆ. ಅದೇ ಅರ್ಥಪೂರ್ಣವಾದ ಜೀವನಕ್ಕೆ ನಾಂದಿಯಾಗುತ್ತದೆ. ಕೃಷ್ಣಾಷ್ಟಮಿ ಎಲ್ಲರಿಗೂ ಶುಭ ತರಲಿ. ಹರೇ ಕೃಷ್ಣ.


No comments:

Post a Comment