Wednesday, 13 August 2014

ಚಂಚಲೆ


ಸಂಜೆಯ ಸಂಧ್ಯೆಯ ಸೆರಗಿನಲ್ಲಿ
ಚಂಚಲೆ ಸುಮ್ಮನೇ ಕುಳಿತಿದ್ದಳು
ಗದ್ದವು ಮೊಳಕಾಲಿನ ಗಂಟಿಗೆ
ಕೈ ಬೆರಳು ಕಾಲ್ಗೆಜ್ಜೆಯ ನಂಟಿಗೆ
ಮೆಲ್ಲಗೆ ಮಲಗೇಳುವ ರೆಪ್ಪೆಗಳು
ಕಥೆ ಹೇಳದೇ ಕಪ್ಪಾಗಿರುವ ಕಂಗಳು

ಗಾಳಿಯೂ ಹೊಸದಾಗಿ ಗಂಧವೂ ಹಿತವಾಗಿ
ಗೂಡಿಗೆ ಮರಳುವ ಕಲರವವೂ ಹೆಚ್ಚಾಗಿ
ಮೌನದಲ್ಲೂ ಮರೆಯಲ್ಲಿ ಮಾತುಕತೆ
ಚಂಚಲೆಯದೇಕೋ ಅಚಲ ನಿಲುವು
ಭಂಗಿಯಲ್ಲೂ ಬಾರದ ಬದಲಾವಣೆ
ಇದ್ಯಾವ ಬಗೆಯ ಲಹರಿಯೋ ಕಾಣೆ

ಏನಾಯಿತು ಕೂಸೆ..?? ಹೀಗೆ ಕುಳಿತಿಹೆ
ಚಿಗರೆಯಂತೆ ಚಿಮ್ಮುವ ನಡೆಯಿಲ್ಲ
ಅರಳು ಹುರಿದಂತೆ ಹರಿಯುವ ನುಡಿಗಳಿಲ್ಲ
ಬಣ್ಣ ಹಚ್ಚಿಕೊಂಡು ರಂಗಕೆ ಬಾರದೇ
ತೆರೆಯ ಹಿಂದೆ ಮೂಎಗೆ ಸರಿದೆಯೇಕೆ..??
ಮನದ ಮನಸ್ಸಿಗೂ ಆರದ ಅಚ್ಚರಿ

ಹೀಗೆ ತಾನೇ ಹೇಳಿಯಾಳು ಚಂಚಲೆ..??
ಹೂವು ಅರಳಿ ನಿಂತಿದೆ ಎಂದೋ
ಸೌರಭ ಬೀರಲೂ ಚಿತ್ತ ಮೂಡದೇ, ಮಾಗದೇ
ರೆಕ್ಕೆಗಳೆಲ್ಲವೂ ಗರಿಗೆದರಿ ಸಿದ್ಧವಾಗಿವೆ
ಹಾರುವ ಉತ್ಸಾಹಕ್ಕೆ ಉಸಿರಿಲ್ಲದೇ
ಚಂಚಲಕ್ಕೊಳಗಾಗಿದ್ದಳು ಚೆಂದದ ಚಂಚಲೆ


1 comment:

  1. ಹೂವು ಅರಳಿದ್ದಂರಿಂದ ಚಂಚಲೆಯಾದಳೇ! ಚಂಚಲೆಯಾದ್ದರಿಂದ ಹೂ ಅರಳಿತೇ?

    ಒಟ್ನಲ್ಲಿ ಕವಿತೆ ಪಸಂದಾಗಿದೆ ಕಣ್ರಿ!

    ReplyDelete