Saturday, 2 August 2014

ಡೈರಿ ಪುಟ -೪೯


                       "ಇದೆಂತಾ ಒಣಾ ಸುದ್ದಿ ಮಾರಾಯ್ತಿ. ‘೬ ರಂದು ನಿತ್ಯಾನಂದ ಪುರುಷತ್ವ ಪರೀಕ್ಷೆ ಫಿಕ್ಸ್’ ಅಂತೆ. ಅವನ ರಾಸಲೀಲೆಗಳೆಲ್ಲ ಬಹಿರಂಗವಾದಾಗಲೇ ಅವನ ಸಕಲ ಗುಣಾವಗುಣಗಳೂ ನಿಚ್ಚಳವಾಗಿ ತಿಳಿದಿವೆಯಲ್ಲ. ಇನ್ನು ಮತ್ತೆ ಯಾವ ಪುರುಷಾರ್ಥಕ್ಕಾಗಿ ಅವನ ಪುರುಷತ್ವ ಪರೀಕ್ಷೆಯಂತೆ..?? ಕೋರ್ಟುಗಳಿಗೆ ಇತ್ಯರ್ಥ ಮಾಡಲಿಕ್ಕೆ ಬೇರೆ ಯಾವ ಮಹತ್ವದ ಕೇಸುಗಳೂ ಇರುದಿಲ್ಲವೇನೇ..?? ಆಸ್ಪತ್ರೆಗಳಿಗೆ ಬೇರೆ ರೋಗಿಗಳ ಚಿಕಿತ್ಸೆಯ ಕೆಲಸವಿರುದಿಲ್ಲವಾ..?? ಅದನ್ನೆಲ್ಲಾ ಬಿಟ್ಟು ನಿತ್ಯಾನಂದನ ಸಲುವಾಗಿ ಹಣ, ಸಮಯ ವ್ಯರ್ಥ ಮಾಡಬೇಕಾ..?? ತಲೆ ಸಮ ಇಲ್ಲ ನೋಡು." ನ್ಯೂಸ್ ಪೇಪರ್ ಓದುತ್ತಿದ್ದ ರೂಮ್ ಮೇಟ್ ಸಿಟ್ಟಿನಿಂದ ಹೇಳಿದಳು.
                         "ಅದು ರಾಜ್ಯ ರಾಜಧಾನಿಯ ಸುದ್ದಿ. ಹಾಗೆ ಹತ್ತನೇ ಪುಟದಲ್ಲಿ ರಾಷ್ಟ್ರ ರಾಜಧಾನಿಯ ಸುದ್ದಿಯಿದೆ. ಓದು." ನಾನು ಉತ್ತರಿಸಿದೆ.
                      "ಅದೆಂಥಾ ಸುದ್ದಿ..?? ನೀನೇ ಹೇಳು ಮಾರಾಯ್ತಿ."
                      "ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸುಪ್ರೀಂ ಕೋರ್ಟಿಗೆ ಅಸಮಾಧಾನ ಉಂಟಾಗಿದೆಯಂತೆ. ನಿಧಾನಗತಿ ಕಾರ್ಯನಿರ್ವಹಣೆ ಕುರಿತು ಸಿಟ್ಟು ಬಂದಿದೆಯಂತೆ. ಅದಕ್ಕಾಗಿ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ತಿಂಗಳೊಳಗೆ ನೀತಿ ರೂಪಿಸುವಂತೆ ಮೋದಿ ಸರ್ಕಾರಕ್ಕೆ ಖಡಕ್ ಆಗಿ ಹೇಳಿದೆಯಂತೆ. ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸುವುದು, ಮೂಲಸೌಕರ್ಯವನ್ನು ಹೆಚ್ಚಿಸುವುದು - ಎಲ್ಲವನ್ನೂ ಮಾಡಬೇಕಂತೆ."
                       "ಬೇಡದೇ ಇರುವ ಕೇಸುಗಳನ್ನೆಲ್ಲಾ ಇತ್ಯರ್ಥ ಮಾಡುತ್ತಾ ಕಾಲಹರಣ ಮಾಡಿದರೆ ಉಳಿದ ಕೇಸುಗಳ ವಿಲೇವಾರಿ ನಿಧಾನವಾಗದೇ ಇನ್ನೇನಾಗಬೇಕಂತೆ..??"
                       "ಇಷ್ಟೆಲ್ಲಾ ಹೇಳಿರುವ ಸುಪ್ರೀಂ ಕೋರ್ಟ್ ಅದನ್ನೂ ಸಹ ಹೇಳಬೇಕಾಗಿತ್ತು. ಯಾವ ಯಾವ ಕೇಸುಗಳಿಗೆ ಎಷ್ಟೆಷ್ಟು ಮಹತ್ವ ನೀಡಬೇಕು, ಅವುಗಳನ್ನು ಎಷ್ಟು ದಿನಗಳ/ತಿಂಗಳುಗಳ ಅವಧಿಯಲ್ಲಿ ಇತ್ಯರ್ಥ ಮಾಡಬೇಕು - ಅಂತೆಲ್ಲಾ ಹೇಳಬೇಕಿತ್ತು. ಅಕಸ್ಮಾತ್ ಕೋರ್ಟು ಹಾಗೆ ಹೇಳಿದ ಮಾತ್ರಕ್ಕೆ ಆ ತೀರ್ಪು ಜಾರಿಗೆ ಬರುತ್ತದಾ..?? ಖಂಡಿತ ಇಲ್ಲ. ಈಗಾಗಲೇ ಅದೆಷ್ಟು ಬಾರಿ ನ್ಯಾಯಾಂಗದ ಕುಂಟು ನಡಿಗೆಯ ಬಗ್ಗೆ ಚರ್ಚೆಗಳಾಗಿ ತೀರ್ಪು ಹೊರಬಿದ್ದಿಲ್ಲ..?? ದೇಶದಲ್ಲಿ ಕೋರ್ಟಿನ ತೀರ್ಪುಗಳೆಂದರೆ ದೊಡ್ಡ ಜೋಕುಗಳೆಂಬಂತಾಗಿವೆ. ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಕಣ್ಣೆದುರಿಗೆ ಕಾಣುವ ಅಂಗೈ ಹುಣ್ಣಿನ ಬಗ್ಗೆಯೂ ಕೋರ್ಟು ತೀರ್ಪು ನೀಡುವ ಕಾಲ ಬಂದಿದೆ."


1 comment:

  1. ಆದ್ರೆ, ಸಂಸತ್-ಸದಸ್ಯರ ಮೇಲಿನ ಆರೋಪ ತನಿಖೆಗೆ ತ್ವರಿತ ಗತಿ ನ್ಯಾಯಾಲಯ ಮಾಡದು ಕಷ್ಟ ಹೇಳಿ ಹೆಲಾತಲಿ ಸುಪ್ರಿಂ ಕೋರ್ಟ್..!!!! ಬೇಗ ಬೇಗ ನ್ಯಾಯ ಸಿಗಲಿ ಹೇಳ ಇಚ್ಚಾಶಕ್ತಿ ಬೇಕು, ನ್ಯಾಯಾಲಯಗಳಿಗೆ ಮೊದಲು.

    ReplyDelete