Thursday, 28 August 2014

ಮುಸುಕು (ಭಾಗ ೧)


                                 ಮತ್ತೊಮ್ಮೆ ಅಲಾರಾಂ ಹೊಡೆದುಕೊಂಡಿತು. ಇದು ಐದನೇ ಬಾರಿ. ಸ್ನೂಜ್ ಬಟನ್ ಒತ್ತಿದೆನಾದರೂ ತಿರುಗಿ ಮುಸುಕೆಳೆದು ಮಗ್ಗಲು ಹೊರಳಿಸುವ ಮನಸ್ಸಾಗದೇ ಎದ್ದು ಕುಳಿತೆ. ಮೊಬೈಲ್ ಕೈಗೆತ್ತಿಕೊಂಡರೆ ಏಳು ಮಿಸ್ಡ್ ಕಾಲ್ ಗಳೆಂದು ನೋಟಿಫಿಕೇಷನ್ ಕುಣಿಯುತ್ತಿತ್ತು. ಯಾರದೆಂದು ಗೊತ್ತಾಗಿ ಸುಮ್ಮನೇ ಮೊಬೈಲ್ ಅನ್ನು ದಿಂಬಿನ ಕಡೆ ಎಸೆದೆ. ಅಷ್ಟು ಮಿಸ್ಡ್ ಕಾಲ್ ಗಳಿದ್ದರೂ ಬೆಳ್ಳಂಬೆಳಿಗ್ಗೆ ಸುಮ್ಮನೇ ಮನಸ್ಸು ಕೆಡುವುದು ಬೇಡವೆಂದು ನಾನಾಗಿಯೇ ಕಾಲ್ ಮಾಡುವ ಆಲೋಚನೆಯನ್ನು ತಡೆಹಿಡಿದೆ. ಗಡಿಯಾರ ೧೦.೧೦ ಎಂದು ತೋರಿಸುತ್ತಿತ್ತು. ಐದು ನಿಮಿಷ ಹಾಗೆಯೇ ಕುಳಿತೆ. "ಕ್ಯೂಂ ಕೀ ತುಮ್ ಹೀ ಹೋ, ಅಬ್ ತುಮ್ ಹೀ ಹೋ" ಎನ್ನುತ್ತಾ ಅಲಾರಾಂ ಹಾಡಲು ಪ್ರಾರಂಭಿಸಿತು. ಬೇರೆ ಯಾವುದೂ ಹಾಡು ಸಿಕ್ಕಲಿಲ್ಲವೇ ಎಂಬ ಅಸಮಾಧಾನದೊಂದಿಗೆ ನನ್ನ ಮೇಲೆಯೇ ನನಗೆ ಸಿಟ್ಟು ಬಂದು ಥತ್ ಎನ್ನುತ್ತಾ ಎಕ್ಸ್ ಪೀರಿಯಾವನ್ನು ಹಾಸಿಗೆಯ ಮೇಲೆ ಕುಟ್ಟಿದೆ. ಒಮ್ಮೆಲೇ ವಿನಾಕಾರಣ ಮನಸ್ಸಿನಲ್ಲಿ ವ್ಯಸನ ತುಂಬಿಕೊಂಡಿತು. ಇನ್ನೊಂದು ನಿಮಿಷ ಹೀಗೆಯೇ ಕುಳಿತಿದ್ದರೆ ಹುಚ್ಚು ಹಿಡಿಯುವುದು ಗ್ಯಾರಂಟಿ ಎಂದೆನಿಸಿ ಭಯವಾಗಿ ಥಟ್ಟನೆ ಎದ್ದು ಟೂತ್ ಪೇಸ್ಟ್. ಬ್ರಶ್ ಗಳನ್ನು ಹಿಡಿದು ಬಾತ್ ರೂಮಿನತ್ತ ನಡೆದೆ.
                               ಸಿಂಕ್ ನತ್ತ ಬಗ್ಗಿ ನಲ್ಲಿಯ ನೀರನ್ನು ಮೂರು ಬಾರಿ ಮುಖಕ್ಕೆ ಹೊಯ್ದುಕೊಳ್ಳುತ್ತಿದ್ದಂತೆ ಅಮ್ಮ ನೆನಪಾದಳು. ಈಗೀಗ ಅವಳ ನೆನಪಾದಾಗಲೆಲ್ಲಾ ಒಂದು ಬಗೆಯ ಕಿರಿಕಿರಿ ಉಂಟಾಗುತ್ತದೆ. ಮೊದಲು ಸ್ವತಃ ನಾನೇ ದಿನಕ್ಕೆ ೩-೪ ಬಾರಿ ಕಾಲ್ ಮಾಡಿ ಅವಳೊಂದಿಗೆ ಮಾತನಾಡುತ್ತಿದ್ದೆ. ಈಗ ಅವಳಾಗಿಯೇ ಕರೆ ಮಾಡಿದರೂ ಎತ್ತುವ ಮನಸ್ಸಾಗದೇ ಆಮೇಲೆ ಏನಾದರೊಂದು ನೆಪ ಹೇಳುವಂತಾಗುತ್ತದೆ. ನಿನ್ನೆ ರಾತ್ರಿ ಮಲಗುವ ಮುನ್ನವಷ್ಟೆ ಮಾತನಾಡಿದ್ದೇನೆ. ಇಂದು ಬೆಳಿಗ್ಗೆ ನಾನು ಏಳುವ ಮುನ್ನವೇ ಮತ್ತೆ ಏಳು ಬಾರಿ ಕರೆ. ಪ್ರತಿ ಬಾರಿಯೂ ಅದೇ ಹಾಡು, ಅದೇ ಅಲಾಪ. ಛೇ, ಹೆತ್ತ ತಾಯಿಯ ಕುರಿತಾಗಿ ಹೀಗೆಲ್ಲಾ ಬೇಸರಿಸಿಕೊಳ್ಳಬಾರದೆಂದು ಅದೆಷ್ಟು ಬಾರಿ ಅಂದುಕೊಂಡರೂ ಹಾಗೆ ನಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. "ಹೇಗಿದ್ದೀಯಾ..?? ಕೆಲಸ ಹೇಗೆ ಸಾಗಿದೆ..?? ಊಟವಾಯಿತಾ..?? " ಎಂಬ ಯಾವತ್ತೂ ಕ್ಷೇಮ ಸಮಾಚಾರಗಳ ನಂತರ ಶುರುವಾಗುತ್ತದೆ ಪದ್ಯ. "ಮನು, ಇನ್ನೂ ಎಷ್ಟು ದಿನಾಂತ ಹೀಗೆ ಒಂಟಿಯಾಗಿರ್ತೀಯಾ..?? ಈಗಂತೂ ಲೈಫ್ ಅಲ್ಲಿ ಫುಲ್ ಸೆಟಲ್ ಆಗಿದೀಯಾ. ನಿನ್ನ ಓರಗೆಯವರಿಗೆಲ್ಲಾ ಕಳೆದ ವರ್ಷವೇ ಮದುವೆಯಾಯಿತು. ನೀನು ಮಾತ್ರ ಎಲ್ಲಿಯವರೆಗೆ ಹೀಗೆ ಹೊಟೆಲ್ ಊಟ ತಿಂತೀಯಾ..?? ಜಾಬ್ ಮಾಡಲಿಕ್ಕೆ ಶುರುವಾದಾಗಿನಿಂದ ಇಳಿತಾನೇ ಇದೀಯಾ. ಹೆಂಡತಿಯ ಕೈ ಅಡುಗೆ ಇದ್ದಿದ್ದರೆ ಹೀಗಾಗ್ತಿತ್ತಾ..??.." ಮುಂದುವರೆಯುತ್ತಲೇ ಇರುತ್ತದೆ ಅದು. ಒಂದೆರಡು ಬಾರಿ ತಾಳಲಾರದೇ ಅರ್ಧದಲ್ಲಿಯೇ ಫೋನ್ ಕಟ್ ಮಾಡಿದ್ದೂ ಇದೆ. ಅಲ್ಲಾ, ಈ ತಾಯಂದಿರಿಗೆ ಮಕ್ಕಳು ಯಾವಾಗ ದಪ್ಪಗಾದ ಹಾಗೆ ಕಾಣುತ್ತಾರೆ..?? ಮನೆಯಲ್ಲಿದ್ದರೂ ಒಂದೇ, ಹೊರಗಡೆಯಿದ್ದರೂ ಒಂದೇ. ಇನ್ನು ಅವಳ ಹೆಂಡತಿಯ ಕೈ ಅಡುಗೆ ಎಂಬ ಮಾತನ್ನು ನೆನೆಸಿಕೊಂಡರೆ ನಗು ಬರುತ್ತದೆ. "ಅಮ್ಮಾ, ಅದೆಲ್ಲಾ ನಿನ್ನ ಕಾಲಕ್ಕಾಯಿತು. ಈಗ ಕಾಫಿ ಮಾಡುವುದು ಬಿಡು, ನೆಟ್ಟಗೆ ಕಾಫಿ ಲೋಟವನ್ನು ತೊಳೆಯುವ ಕೆಲಸ ಕೂಡ ಮುಕ್ಕಾಲು ಮಂದಿ ಹುಡುಗಿಯರಿಗೆ ಬರುವುದಿಲ್ಲ" ಎಂದು ಹೇಳಬೇಕೆನಿಸುತ್ತದೆ.
                                    ಮುಖ ಮಾರ್ಜನ ಮುಗಿಸಿ ಡ್ರಾಯಿಂಗ್ ರೂಮಿಗೆ ಬಂದೆ. ದಿನಪತ್ರಿಕೆಗಳಲ್ಲಿ ಏನಿದೆಯೆಂದು ನೋಡಲು ಕೈಗೆತ್ತಿಕೊಂಡರೆ ಅದ್ಯಾವುದೋ ಅತ್ಯಾಚಾರ ಪ್ರಕರಣದ ಕುರಿತು ದೊಡ್ಡದಾದ ಕೆಂಪು ಅಕ್ಷರಗಳ ತಲೆಬರಹ ಕಣ್ಣಿಗೆ ರಾಚಿಸಿತು. ಇವತ್ತಿನ ದಿನ ಅತ್ಯಾಚಾರವೆನ್ನುವುದು ಮಾಮೂಲಿ ಸುದ್ದಿಯಾಗಿ ಬಿಟ್ಟಿದೆ, ಅವನ್ಯಾರೋ ಕಾಲು ಜಾರಿ ಬಿದ್ದನಂತೆ ಎನ್ನುವಷ್ಟು ಸಹಜವಾಗಿ ಅಲ್ಲೆಲ್ಲೋ ಅತ್ಯಾಚಾರವಾಗಿದೆಯಂತೆ ಅಂತಾ ಹೇಳುವುದನ್ನು ಕೇಳಿದ್ದೇನೆ. ಆಚಾರವಿಲ್ಲದ ಮನಸ್ಸುಗಳಿಂದಾಗುವ ಅನಾಚಾರವೇ ಅತ್ಯಾಚಾರವಲ್ಲವೇ..?? ತಲೆಬರಹದ ಕೆಂಪು ಬಣ್ಣ ನನ್ನ ಬದುಕಿನ ಆಚಾರ-ಅನಾಚಾರಗಳನ್ನು ಬಿಂಬಿಸುತ್ತಿರುವಂತೆ ಭಾಸವಾಗಿ ಕೂಡಲೇ ದೃಷ್ಟಿ ಹೊರಳಿಸಿ ಪೇಪರ್ ಅನ್ನು ಟೇಬಲ್ ಮೇಲೆ ಎಸೆದು ಸೋಫಾದ ಮೇಲೆ ಅಡ್ಡಾಗಿ ರಿಮೋಟ್ ಒತ್ತಿ ಟಿವಿ ಆನ್ ಮಾಡಿದೆ. ಯಾವುದೋ ಹಿಂದಿ ಮ್ಯೂಸಿಕ್ ಚಾನೆಲ್ ಹೊತ್ತಿಕೊಂಡಿತು. ‘ಧೂಮ್ ಮಚಾಲೆ ಧೂಮ್ ಮಚಾಲೆ ಧೂಮ್’ ಎನ್ನುತ್ತಾ ಹಳದಿ ಬಣ್ಣದ ತಿಳಿಯಾದ ತುಂಡು ಅಂಗಿ ತೊಟ್ಟು ಕತ್ರೀನಾ ಕುಣಿಯುತ್ತಿದ್ದಳು. ನನಗೆ ಮೊನ್ನೆ ಮೊನ್ನೆಯಷ್ಟೆ ಸ್ನೇಹಿತ ಚಂದುವಿನ ಜೊತೆ ಕ್ಲಬ್ ಗೆ ಹೋಗಿದ್ದ ಸಂಗತಿ ನೆನಪಾಯಿತು. ಅಂದೇಕೋ ನನಗೆ ಕ್ಲಬ್ಬಿನ ಆವರಣ ಬಹಳವೇ ಕತ್ತಲಾಗಿ ಕಾಣಿಸುತ್ತಿತ್ತು. ಮೇಲೊಂದು ಕೆಳಗೊಂದು ಮಾತ್ರವೇ ಧರಿಸಿದ್ದ ಯುವತಿಯೊಬ್ಬಳು ಅವು ಕೂಡ ಕಳಚಿ ಹೋಗಲೆಂಬಂತೆ ಮೈ ಕುಲುಕಿಸುತ್ತಾ ನರ್ತಿಸುತ್ತಿದ್ದಳು. ನರ್ತನವಾ ಅದು..?? ಅವಳ ಮುಖ ಎಷ್ಟು ಲಕ್ಷಣವಾಗಿದೆ ಎಂದೆನಿಸಿದರೂ ಮರು ಕ್ಷಣವೇ ತೀರಾ ಅಸಹ್ಯ ಭಾವನೆ ಉಂಟಾಗಿತ್ತು. ಆ ಭಾವನೆ ಅರೆ ನಗ್ನವಾಗಿ ಕುಣಿಯುತ್ತಿದ್ದ ಆಕೆಯ ಕುರಿತಾಗಿ ಮೂಡಿದ್ದೋ ಅಥವಾ ಅದನ್ನು ಗುಡಿಯ ಪೂಜಾರಿಯ ನೃತ್ಯವೆಂಬಂತೆ ನೋಡುತ್ತಾ ನಿಂತಿದ್ದ ನನ್ನ ಮೇಲೆ ಉಂಟಾದದ್ದೋ ಅಥವಾ ಬೇಡ ಬೇಡವೆಂದರೂ ಕೇಳದೇ ಬಲವಂತವಾಗಿ ಎಳೆದು ಕರೆತಂದು ಎರಡು ಪೆಗ್ ಕುಡಿಸಿದ್ದ ಚಂದುವಿನ ಮೇಲೋ ಎಂಬುದು ಬಗೆಹರಿದಿರಲಿಲ್ಲ. ತಲೆ ಕೊಡವಿಕೊಂಡು ಟಿವಿ ಆಫ್ ಮಾಡಿದ ಕೂಡಲೇ ಸ್ನಾನ ಮಾಡುವುದೋ ಬೇಡವೋ ಎಂಬ ಜಿಜ್ಞಾಸೆ ಮೂಡಿತು. ಆಫೀಸಿಲ್ಲವಾದ್ದರಿಂದ ಸ್ನಾನ ಮಾಡದಿದ್ದರೂ ನಡೆಯುತ್ತದೆ ಎಂಬ ಸತ್ಯ ಹೊಳೆಯಿತು. ಆದರೂ ತಲೆಯ ಮೇಲೆ ನಾಲ್ಕು ಚೊಂಬು ನೀರು ಸುರಿದುಕೊಳ್ಳುವುದರಿಂದ ಆಗುವ ನಷ್ಟವೇನೂ ಇಲ್ಲ ಎಂದು ವಾಸ್ತವವನ್ನು ಸಮರ್ಥಿಸಿಕೊಳ್ಳುತ್ತಾ ಹೆಗಲ ಮೇಲೆ ಟವೆಲ್ ಹೊದೆದುಕೊಂಡಂತೆ ನಾನದೆಷ್ಟು ಸಲ ಬಾರ್, ಲಬ್, ಪಬ್ ಗಳಿಗೆ ಹೋಗಿಲ್ಲ. ಆದರೂ ಅಂದು ಮಾತ್ರ ಯಾಕೆ ಹಾಗನಿಸಿತು ಎಂಬ ಪ್ರಶ್ನೆ ಮಿಂಚಿ ಮಾಯವಾಯಿತು.
                                           ಬಿಸಿ ಬಿಸಿ ನೀರಿನಿಂದ ಬೆನ್ನು, ಎದೆ ಒದ್ದೆಯಾಗುತ್ತುರುವಂತೆಯೇ ಮತ್ತೆ ಅಮ್ಮನ ಚಿತ್ರ ಕಾಣಿಸಿಕೊಂಡಿತು. ಪಾಪ, ತಾಯಿಯಾಗಿ ಅವಳ ಕರ್ತವ್ಯವನ್ನು ಅವಳು ಮಾಡುತ್ತಿದ್ದಾಳೆ. ವಯಸ್ಸಿಗೆ ಬಂದ ಮಗ ಮದುವೆ ಮಾಡಿಕೊಂಡು ಸಂಸಾರಸ್ಥನಾಗಲಿ ಎಂದು ಯಾವ ತಾಯಿ ತಾನೇ ಆಸೆ ಪಡುವುದಿಲ್ಲ..?? ಅದಕ್ಕಾಗಿ ನಾನು ಅವಳ ಮೇಲೆ ಮುನಿಸು ತೋರಿಸಿದರೆ ಅದು ನನ್ನ ಸಣ್ಣತನವಾಗುತ್ತದೆಯೆನ್ನಿಸಿತು. ಕಳೆದ ಒಂದು ವರ್ಷದಿಂದ ಅವಳು ಮದುವೆಯ ಪ್ರಸ್ತಾಪವನ್ನು ಎತ್ತುತ್ತಿದ್ದಾಳೆ. ಇತ್ತೀಚೆಗೆ ಅದು ಜಾಸ್ತಿಯೇ ಹೆಚ್ಚಾಗಿದೆ. ಅವಳೆಂದಂತೆ ನನ್ನ ಸ್ನೇಹಿತರೆಲ್ಲರಿಗೂ ಹಿಂದಿನ ವರ್ಷದಲ್ಲೇ ಕಂಕಣ ಬಲ ಕೂಡಿ ಬಂದು ಅವರೆಲ್ಲ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟು ನೂರು ಹೆಜ್ಜೆ ನಡೆದೂ ಆಯಿತು. ಇನ್ನೆರಡು ವರ್ಷಗಳಲ್ಲಿ ಅವರ ವಂಶದ ಕುಡಿಗಳು ಹತ್ತು ಹೆಜ್ಜೆ ನಡೆಯುತ್ತಾರಷ್ಟೆ. ಆದರೂ ನನಗೇಕೋ ಮದುವೆಯಾಗುವ ಮನಸ್ಸು ಬಂದಿಲ್ಲ. ಮದುವೆಯ ಕುರಿತಾಗಿ ಒಳ್ಳೆಯ ಭಾವನೆಗಳಾಗಲೀ, ಅಭಿಪ್ರಾಯವಾಗಲೀ ಇಲ್ಲ. ಅದೇಕೆ ಹೀಗೆ ನಾನು..?? ಬಹಳಷ್ಟು ಸಲ ನನಗೆ ನಾನೇ ಕೇಳಿಕೊಂಡರೂ ಇಲ್ಲಿಯ ತನಕ ಉತ್ತರ ಸಿಕ್ಕಿಲ್ಲ. (ಮುಂದುವರೆಯುವುದು)


ಗುಪ್ತಗಾಮಿನಿ


ನಿನ್ನೆ ಮೊನ್ನೆಯಷ್ಟೆ ಅದೆಂಥ ಹರಿವು
ಇಂದು ಕೇವಲ ಹೆಜ್ಜೆ ಗುರುತುಗಳು
ಉಸಿರಿತ್ತೆನ್ನುವ ನೆನಪನ್ನು ಹಸಿಯಾಗಿಡಲು
ಸೆಲೆಗೂ ನೆಲೆಗೂ ತಾವೇ ರಾಯಭಾರಿಯಾಗಿ
ದೂರ ನಿಂತು ಕಣ್ಣು ಹಾಯಿಸುವವನಿಗೆ
ಸುಂದರ ಅಶರೀರ ಶವದ ಕುರುಹಾಗಿ

ಒಡಲು ತೋಡಾಗಿ ತುಂಬಿ ಉಕ್ಕಿದಾಗ
ಹಿಗ್ಗದೇ ತನ್ನೊಳಗೆ ಹೂತು ಹೋಗುತ್ತಲಿ
ಎದೆ ಬರಿದಾಗಿ ಹಸಿರೆಲ್ಲ ಬಸಿದು ತೀರಿದರೆ
ತಾ ಹರಿದು ತನ್ನವರ ತೋಯಿಸುತ್ತಿದ್ದಳು
ಹೀಗೇಕೆ ಮಾಯವಾದಳೋ..?? ಎತ್ತ ಹೋದಳೋ..??
ಸಂಕುಚಿತತೆಗೆ ಸಾಕ್ಷಿಯಾದಳೇ ವಿಶಾಲಾಕ್ಷಿ..??

ಆಕೆ ಬತ್ತಿಲ್ಲ, ಹರಿಯುತ್ತಿದ್ದಾಳೆ
ಸಹಜವಾಗಿ ಶಾಂತವಾಗಿ ಸುಪ್ತವಾಗಿ
ಮನಸ್ಸಿನ ಮಡಿಲ ನೆರಿಗೆಯೊಳಗೆ
ಅಬ್ಬರವಿಲ್ಲದೇ ಉಬ್ಬರ ರಹಿತಳಾಗಿ
ಹರಿವಿದ್ದರೂ ನಿಶ್ಚಲವಾಗಿ ನಿಂತಂತೆ
ಬರಡಾಗಿದ್ದರೂ ಭಾವವು ಒಸರುವಂತೆ


Monday, 25 August 2014

ಡೈರಿ ಪುಟ - ೬೦


                                   "ಆಗಿನಿಂದ ನೋಡ್ತಿದೀನಿ. ಲ್ಯಾಪ್ ಟಾಪ್ ನಲ್ಲಿ ಅರ್ಧ ಹೂತು ಹೋಗಿದೀಯೋ ಹೇಗೆ..?? ಎಂತಾ ಇದೆ ಅಂಥದ್ದು ಇಂಟರ್ ನೆಟ್ ನಲ್ಲಿ." ರೂಮ್ ಮೇಟ್ ಕೇಳಿದಳು.
                                   "ವೇಟ್, ಟೂ ಮಿನಿಟ್ಸ್." ಎಂದಷ್ಟೆ ಉತ್ತರಿಸಿ ನನ್ನ ಕೆಲಸದಲ್ಲಿ ಮಗ್ನಳಾದೆ. ಐದು ನಿಮಿಷಗಳ ನಂತರ ಅವಳತ್ತ ಮುಖ ತಿರುಗಿಸಿ ಹೇಳಿದೆ, "ಇಂಟರ್ ನೆಟ್ ಏನಿಲ್ಲಾ ಹೇಳು..?? ಭೈರಪ್ಪನವರ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು ದಿ ಟೈಮ್ಸ್ ಆಫ್ ಇಂಡಿಯಾ ದಲ್ಲಿ. ಅದನ್ನ ಓದ್ತಾ ಇದ್ದೆ."
                                    "ಓಹೋ, ಹಂಗಾದ್ರೆ ಕೆಮ್ಮಂಗಿಲ್ಲ ಬಿಡು. ಆರ್ಟಿಕಲ್ ಅಲ್ಲಿ ಎಂತಾ ಇತ್ತೆ ಮಾರಾಯ್ತಿ.??"
                                    "ಅದನ್ನು ನೀನೇ ಓದಿ ತಿಳಿದುಕೊ. ಇಲ್ಲಿ ನೋಡು, ಯಾರೋ ಒಂದು ಲೈನ್ ಹಾಕಿದಾರೆ ತಮ್ಮ ಫೇಸ್ ಬುಕ್ ವಾಲ್ ಮೇಲೆ. ‘ಲೈಫ್ ಈಸ್ ಸೋ ಮಚ್ ಬ್ರೈಟರ್ ವೆನ್ ವಿ ಫೋಕಸ್ ಆನ್ ವಾಟ್ ಟ್ರ್ಯೂಲಿ ಮ್ಯಾಟರ್ಸ್’. ಎಷ್ಟು ಅರ್ಥಪೂರ್ಣವಾಗಿದೆ ಅಲ್ವಾ..??"
                                    "ವಾಹ್, ಯಾರು ಹಾಕಿದ್ದು..?? ಅವರ ಸ್ವಂತದ್ದೋ ಇಲ್ಲಾ ಬೇರೆಯವರಿಂದ ಕಾಪಿ ಮಾಡಿದ್ದೋ. ವಾಟೆವರ್, ಯಾರು ಹೇಳಿದ್ರೋ ರಿಯಾಲಿಟಿ ಹೇಳಿದಾರೆ ಅಲ್ವಾ..??"
                                     "ಹ್ಞೂಂ ಕಣೇ. ನಿಜವಾಗಿಯೂ ನಾವೆಲ್ಲಾ ತೊಂಭತ್ತು ಪ್ರತಿಶತಃ ಸಲ ಬೇಡದ ವಿಷಯಗಳ ಕುರಿತಾಗಿಯೇ ಅನಾವಶ್ಯಕ ದುಃಖ, ಬೇಸರ, ಸಿಟ್ಟು ಮಾಡಿಕೊಂಡು ಆಮೇಲೆ ಜೀವನವೆಂದರೆ ಜಿಗುಪ್ಸೆ ಎಂಬಂತೆ ವರ್ತಿಸುತ್ತೇವೆ. ಎಷ್ಟೆಲ್ಲಾ ಸಮಯವನ್ನು ಹಾಳು ಮಾಡುತ್ತೇವೆ. ಆ ಒಂದು ನಿರ್ದಿಷ್ಟ ಸಂಗತಿಗೆ ನಿಜಕ್ಕೂ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇದೆಯೇ ಎಂದು ನಾವು ಕ್ಷಣಮಾತ್ರವೂ ಯೋಚಿಸುವುದಿಲ್ಲ. ಆಸಕ್ತಿಗಿಂತ ಹೆಚ್ಚಾಗಿ ಆಕರ್ಷಣೆಯೆಂಬ ಬಿಸಿಲುಗುದುರೆಯ ಮೇಲೆ ಸವಾರಿ ಮಾಡುತ್ತಿರುತ್ತೇವೆ. ಬದಲಾಗಿ ಕೊಂಚ ವಿವೇಚನೆಯಿಂದ ತಲೆ ಓಡಿಸಿದರೆ ನಮ್ಮ ಕಣ್ಣು, ಕಿವಿ, ಮೆದುಳು, ಮನಸ್ಸು ಎಲ್ಲವೂ ನೆಟ್ಟಗೆ ನಮಗೆ ಸಂಬಂಧಿಸಿದ ವಿಷಯಗಳತ್ತ ಮಾತ್ರವೇ ಗಮನ ಹರಿಸುತ್ತವೆ. ಉಳಿದವುಗಳನ್ನೆಲ್ಲಾ ಸುಮ್ಮನೇ ಮೂಲೆಗೆಸೆಯುತ್ತವೆ. ಹಾಗಾದರೆ ನೋಡು, ಪ್ರತಿ ದಿನ ಪ್ರತಿ ಕ್ಷಣ ಉತ್ಸಾಹ, ಸಂತಸ, ಶಾಂತತೆಯೇ ಮೂಡಿ ಜೀವನವೆಂದರೆ ಇಷ್ಟೊಂದು ಸುಂದರವಾಗಿರುತ್ತದಾ..?? ಎಂದು ನಂಬಲಿಕ್ಕಾಗದೇ ಉದ್ಗಾರವೆತ್ತುವಂತಾಗುತ್ತದೆ. ಅಂಥ ಅನುಭೂತಿ ದೊರೆಯುತ್ತದೆ. ಅದು ಹೇಳಲಿಕ್ಕೆ ಬರುವಂಥದ್ದಲ್ಲ. ಸ್ವತಃ ಅನುಭವಿಸಿ ತೀರಬೇಕು."
                                     "ಅದಕ್ಕೆ ಹೇಳುವುದಲ್ಲವಾ, ಬೀ ಕ್ಲಿಯರ್ ಎಬೌಟ್ ಯುವರ್ ಸೆಲ್ಫ್ ಅಂತಾ."
                                      "ಯೆಸ್. ಜಗತ್ತು ಎಷ್ಟು ಸುಂದರವಾಗಿದೆ ಅಂತ ನೋಡಿ ತಿಳಿಯಲಿಕ್ಕೆ ಚೆಂದ ತಾಣಗಳಿಗೆ ಭೇಟಿ ಕೊಟ್ಟರೆ ಸಾಲುವುದಿಲ್ಲ. ಜೊತೆಯಲ್ಲಿ ನಮ್ಮೊಳಗಿನ ಪ್ರಪಂಚಕ್ಕೂ ಭೇಟಿ ನೀಡಬೇಕು. ಆಗ ಅರಿವು ಮೂಡುತ್ತದೆ, ‘ಹೌ ಮಚ್ ಬ್ಯೂಟಿಫುಲ್ ದಿಸ್ ಲೈಫ಼್ ಈಸ್ ಆಂಡ್ ಹೌ ಮಚ್ ಬ್ಯೂಟಿಫುಲ್ ಯು ಆರ್ ಇನ್ ದಟ್’.


Sunday, 24 August 2014

ಡೈರಿ ಪುಟ - ೫೯


                                 "ಪ್ರೊ. ಕೃಷ್ಣೇಗೌಡರ ಇವತ್ತಿನ ಅಂಕಣ ಎಷ್ಟು ಚೆನ್ನಾಗಿದೆ ಅಲ್ವಾ..??" ರೂಮ್ ಮೇಟ್ ನನ್ನನ್ನು ಕೇಳಿದಳು.
                                 "ವಾಟ್ ಅ ಸರ್ಪ್ರೈಸ್..!! ನೀನು ಓದಿದೆಯಾ..?? ಆದರೂ ಇವತ್ತು ಜೋರು ಮಳೆ ಬರಲೇ ಇಲ್ವಲ್ಲಾ ಮಾರಾಯ್ತಿ." ನಾನು ಬೇಕಂತಲೇ ಕೆಣಕುತ್ತಾ ಹೇಳಿದೆ.
                                 "ಸಾಕು, ಸುಮ್ನಿರೇ. ನಿನ್ನ ಒಣಾ ಜೋಕಿಗೆ ಬಂದ ಮಳೆಯೂ ಆರಿ ಹೋಯಿತಷ್ಟೆ. ನಾನು ಹೇಳುವುದನ್ನು ಸುಮ್ಮನೇ ಕೇಳು. ಅವರ ಬರಹದ ಶೀರ್ಷಿಕೆ ಎಷ್ಟು ಅರ್ಥಪೂರ್ಣವಾಗಿತ್ತಲ್ವಾ..?? ‘ಒಂದೇ ಮಾತನ್ನ ಸಾವಿರ ಸಾರಿ ಆಡಿದರೆ ಆ ಮಾತುಗಳೂ ಸವೆದು ಹೋಗ್ತವೆ’."
                                  "ಹೌದು, ಅವರು ಕ್ಲೀಷೆಗಳ ಕುರಿತಾಗಿ ಹಾಗೆ ಮಾತನ್ನು ಹೇಳಿದ್ರು. ನನಗೆ ಶೀರ್ಷಿಕೆ ಓದಿ ಬೇರೆಯದೇ ವಿಷಯ ತಲೆಗೆ ಬಂತು. ನಾವೆಲ್ಲಾ ಎಷ್ಟೊಂದು ಮಂದಿಗೆ ಎಷ್ಟೊಂದು ಬಾರಿ ಹೀಗೆ ಮಾತುಗಳಲ್ಲೇ ಮನೆ ಕಟ್ಟಿದ್ದೇವೆ ಅಲ್ವಾ..?? ಕೇವಲ ಮಾತುಗಳ ಮೂಲಕ ಎಷ್ಟೊಂದು ಭರವಸೆ, ಕನಸು, ನಂಬಿಕೆಗಳನ್ನು ಅವರ ಮನಸಿನ ಅಂಗಳದಲ್ಲಿ ನೆಟ್ಟಿದ್ದೇವೆ. ಆಮೇಲೆ ಅದು ಚಿಗುರೊಡೆಯುವಷ್ಟರಲ್ಲಿ ನಮಗೆ ಅವರ್ಯಾರೆಂದು ನೆನಪೇ ಇರುವುದಿಲ್ಲ. ಆ ಚಿಗುರು ಕೇವಲ ಭ್ರಮೆಯೆಂದು ಅರಿವಾಗಿ ಅವರಿಗೂ ನಮ್ಮ ಮೇಲೆ ವಿಶ್ವಾಸ ಹೋಗಿರುತ್ತದೆ. ಮಾತುಗಳಿಗೆ ಅರ್ಥವಿಲ್ಲವೆನಿಸಿರುತ್ತದೆ. ಹಾಗೆ ಸಾವಿರ ಬಾರಿ ನುಡಿಯುವ ಬದಲಾಗಿ ಒಂದು ಬಾರಿ ಹೇಳಿದಂತೆ ನಡೆದುಕೊಂಡಿದ್ದರೆ ಸಾವಿರ ಮಾತುಗಳಿಗೆ ನೂರು ಕಾಸಿನಷ್ಟಾದರೂ ಕಿಮ್ಮತ್ತು ಇರುತ್ತಿತ್ತು. ಇತ್ತೀಚೆಗೆ ಸಾಮಾನ್ಯ ಜನರ ಮಾತುಗಳೂ ಸಹ ರಾಜಕಾರಣಿಗಳ ಪೊಳ್ಳು ಭರವಸೆಯೆನಿಸುವ ಮಟ್ಟಿಗೆ ಅರ್ಥ ಕಳೆದುಕೊಂಡು ಬಿಟ್ಟಿವೆ."
                                   "ಪುಣ್ಯ ಮನುಷ್ಯನಿಗೆ ಒಂದೇ ಬಾಯಿ. ಇಲ್ಲದಿದ್ದರೆ ಅದೆಷ್ಟು ಮರುಳು ಮಾತುಗಳು ಮರಳಾಗಿ ಹೋಗುತ್ತಿದ್ದವೋ."
                                   "ಮಾತು ಕಡಿಮೆ, ಕೆಲಸ ಜಾಸ್ತಿ ಎಂದೇ ಅಲ್ಲವೇ ಎರಡು ಕೈಗಳಿರುವುದು..??"


ಕೈ ತೋರಿಸುತ್ತಾ ಬಾಯಿ ತೆರೆಯುವ ಮೊದಲು...


                                             ಇದು ಸುಮಾರು ಎರಡು ವರ್ಷಗಳ ಹಿಂದೆ ನಡೆದ ಘಟನೆ.
                                             ಆಗ ಜೂನ್ ಅಥವಾ ಜುಲೈ ತಿಂಗಳು. ನನಗೆ ಎರಡನೇ ಸೆಮಿಸ್ಟರ್ ಮುಗಿದು ರಜಾದಿನಗಳು ಪ್ರಾರಂಭವಾಗಿದ್ದವು. ಹಾಗಾಗಿ ನನ್ನ ಕಾರುಬಾರೆಲ್ಲಾ ಮನೆಯಲ್ಲಿ ನಡೆದಿತ್ತು. ಒಂದು ದಿನ ಸಂಜೆ ಸುಮಾರು ಐದು- ಐದೂವರೆ ಹೊತ್ತಿಗೆ ಅಮ್ಮ ಮತ್ತು ಚಿಕ್ಕಮ್ಮ ಹೊರಗಡೆ ಮೆಟ್ಟಿಲ ಮೇಲೆ ಕುಳಿತು ಟಿಪಿಕಲ್ ಹೆಂಗಸರ ಹರಟೆ ಕಾರ್ಯಕ್ರಮವನ್ನು ನಡೆಸಿದ್ದರು. ದೂರದ ಸೋನಿಯಮ್ಮನಿಂದ ಹಿಡಿದು ಊರಿನ ಗಂಗಮ್ಮನ ವರೆಗೆ ಎಲ್ಲರೂ ಅವರಿಬ್ಬರ ನಾಲಿಗೆಯ ಮೇಲೆ ಕ್ಯಾಟ್ ವಾಕ್ ಮಾಡಿ ಹೋಗುತ್ತಿದ್ದರು. ನಾನು ಒಳಗೆ ಜಗಲಿಯಲ್ಲಿ ಕುಳಿತು ಕನ್ನಡದ ಕಾದಂಬರಿಯನ್ನು ಓದುತ್ತಿದ್ದೆ. ಹಾಗೆ ಇವರ ಸಂಭಾಷಣೆಯ ತುಣುಕುಗಳನ್ನು ಆಲಿಸುತ್ತಲೂ ಇದ್ದೆ. ಆಗ ಕೇಳಿಸಿತು,
                                            "ಇವತ್ತಿನ ಪೇಪರ್ ನೋಡ್ದ್ಯನೇ..?? ಅದ್ಯಾವ್ದೋ ಕೂಸು ಕಾಲೇಜಿಗೆ ಹೋಪದು ಓಡಿ ಹೋಜಡಾ. ಇವತ್ತಿನ ಲೋಕಧ್ವನಿಲಿ ಇತ್ತಪಾ."
                                             "ಹೌದೇ ಅತ್ಗೆ, ನೋಡಿದ್ದಿ. ದಿನಾ ಬಿಟ್ಟು ದಿನಾ ಒಬ್ರಲ್ಲಾ ಒಬ್ರು ಓಡಿ ಹೋಗ್ತ್ವಪಾ."
                                             "ಮಳ್ಳು ಕೂಸ್ಗ. ಮನೆ, ಮಠ ಎಲ್ಲಾ ಬಿಟ್ಟಿಕ್ಕಿ ಯಾವನ್ದೋ ಜೊತೆ ಓಡಿ ಹೋಪಲ್ಲೆ ಹೆಂಗಾದ್ರೂ ಮನ್ಸು ಬತ್ತೆನ. ದೊಡ್ಡಾದ್ರು ಬುದ್ಧಿ ಮಾತ್ರ ಬೆಳದಿರ್ತಿಲ್ಲೆ."
                                             "ಅಯ್ಯೋ ಅತ್ಗೆ, ಅಪ್ಪಾ ಅಮ್ಮಾ ಹಂಗೆ ಸಂಸ್ಕಾರ ಕೊಟ್ರೆ ಎಲ್ಲಾ ಕೂಸ್ಗನೂ ಸಮಾನೇ ಇರ್ತ."
                                           ನಮ್ಮ ಶಿರಸಿಯ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಹುಡುಗಿಯೊಬ್ಬಳು ಕಾಣೆಯಾಗಿದ್ದಾಳೆ ಎಂದಷ್ಟೆ ಪ್ರಕಟವಾಗಿದ್ದು. ಅದಕ್ಕೆ ಕುರಿತಾಗಿಯೇ ಅವರು ಮಾತನಾಡುತ್ತಿದ್ದುದು. ಇವತ್ತಿಗೆ ಮುಗಿಯುವುದಿಲ್ಲವೇನೋ ಎನ್ನುವಂತೆ ಅವರ ಆರೋಪಗಳು, ಸಮರ್ಥನೆಗಳು, ಸ್ಪಷ್ಟೀಕರಣಗಳು ನಡೆದೇ ಇದ್ದವು. ಸ್ವಲ್ಪ ಹೊತ್ತಿನ ನಂತರ ಸುಮ್ಮನೇ ಕುಳಿತು ಅವರನ್ನು ಆಲಿಸುತ್ತಿದ್ದ ನನಗೆ ತಡೆದುಕೊಳ್ಳಲಾಗಲಿಲ್ಲ. ಹೇಳಿಯೇ ಬಿಟ್ಟೆ.
                                            "ಅಯ್ಯೋ ಮಾರಾಯ್ರೇ, ಇಬ್ಬರೂ ಅದೆಷ್ಟು ಕಾಮೆಂಟ್ ಮಾಡ್ತಾ ಇದೀರಿ. ಆ ಕೂಸು ಯಾರೋ ಏನೋ. ಯಾಕೆ ಓಡಿ ಹೋದಳೋ ಏನೋ. ಅದೆಂಥದು ಗೊತ್ತಿಲ್ಲದಿದ್ದರೂ ಕಣ್ಣಾರೆ ನೋಡಿದ್ದೇವೆಯೆಂಬಂತೆ ಮಾತನಾಡ್ತಾ ಇದೀರಲ್ಲಾ. ನಿಮಗಿಬ್ಬರಿಗೂ ಕೂಡ ಒಂದೊಂದು ಹೆಣ್ಣು ಮಕ್ಕಳಿದಾರೆ ಅನ್ನೋದು ಮರೆತು ಹೋಯ್ತಾ ಹೇಗೆ..??"
                                           ನನ್ನ ಮಾತು ಕೇಳಿ ಅಮ್ಮನಿಗೆ ತುಸು ಸಿಟ್ಟು ಬಂತು. "ನಿಂಗೆ ತಿಳಿತಿಲ್ಲೆ, ಸುಮ್ನೆ ನಿನ್ನ ಪಾಡಿಗೆ ನೀನು ಕಾದಂಬರಿ ಓದ್ಕ್ಯಾ ಹೋಗು" ಎಂದು ಗದರಿದಳು. ನಾನು ನನ್ನ ಪಾತ್ರವು ಮುಗಿಯೆಂಬಂತೆ ಅಲ್ಲಿಂದ ಎದ್ದು ಅಡುಗೆ ಮನೆಗೆ ಹೋಗಿ ಓದುತ್ತಾ ಕುಳಿತೆ.


                                       ನಿನ್ನೆ ಯಾರೋ ನನಗೆ ಫೇಸ್ ಬುಕ್ ನಲ್ಲಿ ಇನ್ ಬಾಕ್ಸ್ ಗೆ ಮೆಸೇಜ್ ಮಾಡಿ ಕೇಳಿದ್ದೇನೆಂದರೆ,
                                     "ಎಲ್ಲಾ ವಿಷಯಗಳ ಕುರಿತು ನಾಲ್ಕು ಸಾಲಾದರೂ ನಿಮ್ಮ ಟೈಮ್ ಲೈನ್ ಅಥವಾ ಬ್ಲಾಗಿನಲ್ಲಿ ಬರೆಯುವ ನೀವು ಯಾಕೆ ಅನಂತಮೂರ್ತಿಗಳ ಕುರಿತಾಗಿ ಏನನ್ನೂ ಬರೆಯಲಿಲ್ಲಾ ಮೇಡಮ್..??" ನನಗೆ ಈ ಪ್ರಶ್ನೆಗೆ ಉತ್ತರ ಹೇಳುವ ಅಗತ್ಯವಾಗಲಿ, ಅರ್ಥವಾಗಲಿ ಕಾಣದೇ ಸುಮ್ಮನಾದೆ.
                                        ಸ್ವಾಮಿ, ನಾನೇನು ಬರೆಯಬೇಕೆಂದು ನೀವು ನಿರೀಕ್ಷಿಸುತ್ತೀದ್ದಿರಿ..?? ಅಷ್ಟಕ್ಕೂ ಬರೆಯಲೇಬೇಕೆಂಬ ಕಾಯಿದೆ ಏನಾದರೂ ಇದೆಯೇ..?? ನನ್ನ ಅಜ್ಜನ ವಯಸ್ಸಿನ ಅವರು ತೀರಿಕೊಂಡ ಸುದ್ದಿ ತಿಳಿದಾಗ ಸಾಹಿತ್ಯ ಲೋಕದ ಹಿರಿಯ ತಲೆಯೊಂದು ತನ್ನ ಯಾತ್ರೆ ಮುಗಿಸಿತೆಂದು ತಿಳಿದು ಒಂದು ಕ್ಷಣ ಮನಸ್ಸು ನಿಶ್ಚಲವಾಯಿತು. ತದನಂತರ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇನ್ನಷ್ಟು ಒದ್ದಾಡದೇ ತೀರಿಕೊಂಡಿದ್ದು ಒಳ್ಳೆಯದೇ ಆಯಿತೆಂಬ ಅಭಿಪ್ರಾಯ ಮೂಡಿತು. ಸತ್ತ ವ್ಯಕ್ತಿಯೊಬ್ಬರ ಬಗ್ಗೆ ಮಾತನಾಡುವುದು, ಬರೆಯುವುದು, ಅವರನ್ನು ಹೊಗಳುವುದು ಅಥವಾ ತೆಗಳುವುದು ನನಗೆ ಸರಿ ಕಾಣಿಸುವುದಿಲ್ಲ. ಅದು ಕೇವಲ ತೋರಿಕೆಯ, ಆಡಂಬರದ ಭಾವ ಮಾತ್ರವೇ. ವ್ಯಕ್ತಿಯೊಬ್ಬರ ಕುರಿತು ನಿಜವಾದ, ಪ್ರಾಮಾಣಿಕವಾದ ಪ್ರೀತಿ, ಗೌರವ, ಅಭಿಮಾನ, ಬೇಸರ, ವಿರೋಧಗಳಿದ್ದರೆ ಅವನ್ನೆಲ್ಲಾ ಅವರು ಜೀವಂತ ಇರುವಾಗಲೇ ವ್ಯಕ್ತಪಡಿಸಬೇಕೆ ವಿನಃ ಅವರ ಉಸಿರು ನಿಂತ ಮೇಲಲ್ಲ. ಆದರೆ, ಜನ ಹಾಗಲ್ಲ. ವ್ಯಕ್ತಿಯೊಬ್ಬರು ಇನ್ನಿಲ್ಲವಾದರೆಂದು ತಿಳಿದಾಗಲೇ ಅವರು ಇಷ್ಟು ದಿನ ಬದುಕಿಯೇ ಇದ್ದರೆಂಬ ಸತ್ಯ ತಲೆಗೆ ಹೊಳೆದು ತಾವು ಅವರ ಕುರಿತು ನಾಲ್ಕು ಮಾತನ್ನು ಹೇಳದಿದ್ದರೆ, ಬರೆಯದಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲವೆಂಬಂತೆ ನಾಲಿಗೆ ಹರಿಯಬಿಡುತ್ತಾರೆ. ಅಷ್ಟೆಲ್ಲಾ ಮಾಡಿದ ಮೇಲೆ ಕೊನೆಯಲ್ಲಿ "ರೆಸ್ಟ್ ಇನ್ ಪೀಸ್", "ಅವರ ಆತ್ಮಕ್ಕೆ ಶಾಂತಿ ಸಿಗಲಿ", "ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ" ಎಂದೆಲ್ಲಾ ಬರೆದು ಶರಾ ಹಾಕುವುದು ತೀರಾ ಹಾಸ್ಯಾಸ್ಪದ ಎನಿಸುವುದಿಲ್ಲವೇ..??
                                    ಒಂದು ಮಾತು ಹೇಳಲಿಕ್ಕಿದೆ. ಅನಂತ ಮೂರ್ತಿಗಳು ತೀರಿಕೊಂಡಿದ್ದಕ್ಕೆ ಒಂದಿಷ್ಟು ಮಂದಿ ಪಟಾಕಿ ಹೊಡೆದರಂತೆ, ಸಿಹಿ ಹಂಚಿದರಂತೆ ಎನ್ನುವುದನ್ನು ಕೇಳಿ ಎಂಥಾ ವಿಕೃತ ಮನಸ್ಥಿತಿಯವರು ಎಂದು ಎಲ್ಲರೂ ಅವರನ್ನು ಜರೆದಿದ್ದಾಯಿತು. ಇನ್ನು ಕೆಲವು ಮಂದಿ ಮೂರ್ತಿಗಳು ಹಾಗಿದ್ದರು, ಹೀಗಿದ್ದರು ಎಂದೆಲ್ಲಾ ಪ್ರೀತಿ, ಅಭಿಮಾನ, ಗೌರವಗಳನ್ನು ಸಂತಾಪಸೂಚಕ ಮಾತುಗಳಲ್ಲಿ, ಕಂಬನಿ ತುಂಬಿದ ಭಾವಗಳಲ್ಲಿ ಬರೆದುಕೊಂಡು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡರು. ಕೆಲವರು ಅವರ್ಯಾರೋ ಹಾಕಿದ್ದಾರೆ, ಹೀಗಾಗಿ ನಾನು ಹಾಕದಿದ್ದರೆ ಅಪಚಾರವಾದೀತು ಎಂದು ಏನೋ ಒಂದನ್ನು ಗೀಚಿದರು ಕೂಡ. ಇವನ್ನೆಲ್ಲಾ ನೋಡಿ ನನಗೆ ಅನ್ನಿಸಿದ್ದೇನೆಂದರೆ ಎಷ್ಟು ಜನರಿಗೆ ನಿಜವಾಗಿಯೂ ಬಿಸಿ ಕಣ್ಣೀರು ಬಂತು, ಮತ್ತೆ ಎಷ್ಟು ಜನರದ್ದು ಮೊಸಳೆ ಕಣ್ಣೀರು ಎಂದು. ಎಲ್ಲರೂ ಅಂತ ಅಲ್ಲ, ಈಗ ತಾವು ಅನಂತ ಮೂರ್ತಿಯವರ ಕಟ್ಟಾ ಅಭಿಮಾನಿಗಳೆಂದು ಪೋಸು ಕೊಡುತ್ತಿರುವವರಲ್ಲಿ ಹಲವಾರು ಮಂದಿ ಮೊದಲು ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿರಲಿಲ್ಲವೇ..?? ಆಗ ಅವರ ಸೃಜನಶೀಲತೆ, ವೈಚಾರಿಕ ಚಿಂತನೆ ಅರ್ಥವಾಗಿರಲಿಲ್ಲವೇ..?? ಅವರು ಇನ್ನಿಲ್ಲ ಎಂದ ಕೂಡಲೇ ಎಲ್ಲವೂ ಜ್ಞಾನೋದಯವಾಯಿತೇ..?? ಪಟಾಕಿ ಹೊಡೆದು ಸಂಭ್ರಮಿಸಿದವರಿಗೂ ಇವರಿಗೂ ಬಹಳ ವ್ಯತ್ಯಾಸವಿದೆಯೇ..?? ಜನ ಅವರ ಸಾವಿನ ಸುದ್ದಿಯನ್ನು ಮುಂದಿಟ್ಟುಕೊಂಡು ತಾವು ಭಾಳ ಸಾಚಾ ವ್ಯಕ್ತಿಗಳು ಎನ್ನುವಂತೆ ಕುಣಿದಾಡುತ್ತಿದ್ದಾರಲ್ಲಾ, ಇವರೆದ್ದು ಅದೆಂಥ ಸಂಸ್ಕೃತಿ..??

                                      *****************************************

                                     "ನೀನು ಬೇರೆಯವರ ಕಡೆ ಬೆರಳು ತೋರಿಸುತ್ತಿರುವಾಗ ಉಳಿದ ನಾಲ್ಕು ಬೆರಳುಗಳು ನಿನ್ನತ್ತಲೇ ಮುಖ ಮಾಡಿರುತ್ತವೆ ಎನ್ನುವುದನ್ನು ಮರೆಯಬೇಡ." ಇದೊಂದು ಹಿರಿಯರ ಅನುಭವದ ಮಾತು. ಹೌದಲ್ಲ, ನಾವು ಯಾರತ್ತಲೋ ಕೈ ತೋರಿಸಿ ಮಾತನಾಡುವಾಗ ನಮ್ಮ ಕುರಿತಾಗಿಯೂ ಯಾವುದೋ ಮೂಲೆಯಲ್ಲಿ ಯಾರೋ ಒಬ್ಬರು ಕೈ ತೋರಿಸುತ್ತಿರಬಹುದಲ್ಲ. ನಾವೂ ಮನುಷ್ಯರೇ ತಾನೇ..?? ಟೀಕೆ, ಟಿಪ್ಪಣಿಗಳು ದೇವರನ್ನೇ ಬಿಟ್ಟಿಲ್ಲವೆಂದಾದರೆ ನಾವು ಹೇಗೆ ಅದಕ್ಕೆ ಹೊರತಾಗುತ್ತೇವೆ..?? ನಾಲಿಗೆಗೆ ಮೂಳೆಯಿಲ್ಲವೆಂದು ಬೇಕಾಬಿಟ್ಟಿ ತಿರುಗಿಸಿದರೆ ಕೊನೆಗೆ ಎಲ್ಲರ ಎದುರು ನಮ್ಮ ವ್ಯಕ್ತಿತ್ವದ ಬೆನ್ನು ಮೂಳೆ ಮುರಿದು ತಲೆತಗ್ಗಿಸಿ ಕುಬ್ಜರಾಗಬೇಕಾಗುತ್ತದೆಯಷ್ಟೆ. ಈ ಸತ್ಯ ನಮಗೇಕೆ ಅರ್ಥವೇ ಆಗುವುದಿಲ್ಲ..?? ನಮ್ಮ ವೈಯಕ್ತಿಕ ವಿಷಯಗಳ ಕುರಿತಾಗಿ ಕಣ್ಣು ಹಾಯಿಸಲು ಕೂಡ ಸಮಯವಿಲ್ಲದಷ್ಟು ಬ್ಯುಸಿ ಇರುವಾಗ ಬೇರೆಯವರ ಕುರಿತು ಮಾತನಾಡಲು ಅದೆಲ್ಲಿಂದ ಸಮಯ ದೊರಕುತ್ತದೆ..??
                                    ಅಷ್ಟಕ್ಕೂ ನಮಗೆ ನಮ್ಮ ವ್ಯಕ್ತಿತ್ವ, ನಿಲುವು, ಸಿದ್ಧಾಂತಗಳ ಕುರಿತು ನಯಾ ಪೈಸೆ ಅರಿವು ಇಲ್ಲದಿರುವಾಗ ಬೇರೆಯವರ ಸಿದ್ಧಾಂತ, ನಿಲುವುಗಳ ಮೇಲೆ ಟೀಕೆ, ಟಿಪ್ಪಣಿ, ಪರ-ವಿರೋಧ ವ್ಯಕ್ತಪಡಿಸಲು ನೈತಿಕ ಹಕ್ಕು ಎಂಬುದೊಂದು ಇದೆಯೇ..?? ಇದು ಅಜ್ಞಾನದ, ಮೌಢ್ಯದ ಪರಮಾವಧಿಯಲ್ಲವೇ..?? ಎಡ, ಬಲ, ಅತ್ತ, ಇತ್ತ ಎಂದು ಏನೇನೆಲ್ಲಾ ಗುಂಪುಗಳೊಂದಿಗೆ ಎಲ್ಲರನ್ನೂ ಗುರುತಿಸುತ್ತೇವೆ, ವ್ಯಾಖ್ಯಾನಿಸುತ್ತೇವೆ. ಆ ಮೂಲಕ ನಾವು ಬಹಳ ಸಾತ್ವಿಕರು ಎಂದು ನಟಿಸುತ್ತೇವೆ. ಹಾಗೆ ಮಾಡಲು ನಾವು ಯಾರು..?? ಮೊದಲು ನಾವು ನೆಟ್ಟಗೆ ಮನುಷ್ಯರೇ ಅಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಲ್ಲವೇ..?? ಮೊದಲು ನಾವು ಮಾನವರಾಗಬೇಕಲ್ಲವೇ..?? ತದನಂತರ ಪರರ ಕಡೆ ನೋಟ ಹರಿಸಿದರಾಯಿತು. ಏನಂತೀರಿ..??


Saturday, 23 August 2014

ಡೈರಿ ಪುಟ -೫೮


                                 "ಹೇಯ್, ನಾಳೆ ಯುಪಿಎಸ್ಸಿ ಪ್ರಿಲಿಮ್ಸ್ ಎಕ್ಸಾಮ್ ಅಲ್ವಾ ಮಾರಾಯ್ತಿ..??" ರೂಮ್ ಮೇಟ್ ನಿನ್ನೆ ರಾತ್ರಿ ಊಟ ಮುಗಿಸಿ ಮೆಸ್ ನಿಂದ ವಾಪಸ್ಸು ಬರುವಾಗ ಕೇಳಿದಳು.
                                   "ಹಾ, ಹೌದು ನೋಡು. ಅಗಸ್ಟ್ ೨೪ ಅಲ್ವಾ..?? ನೆನಪೇ ಇರ್ಲಿಲ್ಲ." ನಾನು ಆಗ ತಾನೇ ಟ್ಯೂಬ್ ಲೈಟ್ ಹತ್ತಿಕೊಂಡವರಂತೆ ಕಣ್ಣು ಅರಳಿಸುತ್ತಾ ಹೇಳಿದೆ.
                                   "ಎಷ್ಟೆಲ್ಲಾ ಓದ್ಬೇಕಲಾ ಅದ್ಕೆ..?? ಈ ಸಲವಂತೂ ಯುಪಿಎಸ್ಸಿ ಅಭ್ಯರ್ಥಿಗಳಿಗೆ ನೆಮ್ಮದಿಯಿಂದ ಓದಲು ಆಗಲಿಲ್ಲ. ಗೊಂದಲ, ಪ್ರತಿಭಟನೆಗಳ ಮಧ್ಯದಲ್ಲೇ ಎಕ್ಸಾಮ್ ತಯಾರಿ ಮಾಡಬೇಕಾಯಿತು."
                                   "ಹೌದು ಕಣೇ. ವಿಶ್ವದ ಅತೀ ಕಠಿಣ ಪರೀಕ್ಷೆಗಳಲ್ಲೊಂದು ನಮ್ಮ ದೇಶದ ಯುಪಿಎಸ್ಸಿ ಎಕ್ಸಾಮ್. ಅದರಲ್ಲಿ ತೇರ್ಗಡೆಯಾಗಿ ನಾಗರಿಕ ಸೇವೆಯ ಅಧಿಕಾರಿಗಳಾಗಿ ಆಯ್ಕೆಯಾಗುವುದೆಂದರೆ ಸಾಮಾನ್ಯದ ಮಾತಲ್ಲ. ಸರಿಸುಮಾರು ಎಲ್ಲ ವಿಷಯಗಳ ಅಂದರೆ ಕ್ಷೇತ್ರಗಳ ಕುರಿತೂ ಆಳವಾದ ಜ್ಞಾನವಿರಬೇಕು. ಸ್ವತಂತ್ರ ವಿಚಾರಧಾರೆ ಇರಬೇಕು. ಅದಕ್ಕೆ ಎಷ್ಟೆಲ್ಲಾ ಓದಬೇಕು, ತಿಳಿದುಕೊಳ್ಳಬೇಕು. ಅಚಲವಾದ ಶ್ರದ್ಧೆ ಬೇಕು, ಅಪಾರ ಪರಿಶ್ರಮ ಬೇಕು. ಎಲ್ಲರಿಗೂ ಒಮ್ಮೆಲೇ ಯಶಸ್ಸು ಸಿಗುವುದಿಲ್ಲ ಯುಪಿಎಸಿಯಲ್ಲಿ. ಅಕಸ್ಮಾತ್ ಮೊದಲನೇ ಪ್ರಯತ್ನದಲ್ಲಿ ವಿಫಲವಾದೆವೆಂದರೆ ಕುಗ್ಗದೇ ಆತ್ಮವಿಶ್ವಾಸದಿಂದ ಮರಳಿ ಯತ್ನವ ಮಾಡುವಂಥ ಛಲ, ದೃಢ ಮನಸ್ಸು ಬೇಕು. ಇವೆಲ್ಲಾ ಗಂಭೀರ ಸಂಗತಿಗಳು ಲೆಕ್ಕಕ್ಕಿಲ್ಲವೆಂಬಂತೆ ಈ ವರ್ಷ, ಪಾಪ ಅಭ್ಯರ್ಥಿಗಳು ಒಂದು ಬಗೆಯ ಆತಂಕ, ಚಡಪಡಿಕೆಯಲ್ಲೇ ಪ್ರಿಪರೇಷನ್ ಮಾಡಬೇಕಾಯಿತು. ಕೊನೆಪಕ್ಷ ಪರೀಕ್ಷೆಯಾದರೂ ಯಾವುದೇ ವಿವಾದ, ಗೊಂದಲಗಳಿಲ್ಲದೇ ಸುಗಮವಾಗಿ ನಡೆದರೆ ಸಾಕು."
                                  "ಹೌದು. ನಾವಿಬ್ಬರೂ ಆಲ್ ದಿ ಬೆಸ್ಟ್ ಹೇಳಿಬಿಡೋಣ"


Friday, 22 August 2014

ಡೈರಿ ಪುಟ - ೫೭


                                "ಹ್ವಾಯ್, ಎಂತಾ ಮಾರಾಯ್ತಿ ಬೆಳಿಗ್ಗೆ ಏಳೂವರೆಗೆ ಹಾಸ್ಟೆಲ್ ಬಿಟ್ಟವಳು ಈಗ ಬರ್ತಾ ಇದೀಯಾ..?? ನಾನೇನೋ ನೀನು ಇವತ್ತು ಕಾಲೇಜು ವಾಸ್ತವ್ಯ ಮಾಡ್ತೀಯೇನೋ ಅಂದ್ಕೊಂಡಿದ್ದೆ. ಇವತ್ತೇನು ಅಂಥಾ ವಿಶೇಷವಿತ್ತು..??" ಉಸ್ಸಪ್ಪಾ ಎನ್ನುತ್ತ ರೂಮು ಪ್ರವೇಶಿಸಿ ತನ್ನ ಮಂಚದ ಮೇಲೆ ದೊಪ್ಪನೆ ಕುಸಿದು ಕುಳಿತ ರೂಮ್ ಮೇಟ್ ಅನ್ನು ಕೇಳಿದೆ.
                                "ನಿಂಗೆ ತಲೆಹರಟೆ. ಇವತ್ತು ಇದ್ದಿದ್ದು ಮೂರೇ ಕ್ಲಾಸಾಗಿತ್ತು ಕಣೇ. ಅದೂ ಕೂಡ ಎರಡು ಕ್ಲಾಸುಗಳ ಮಧ್ಯೆ ಎರಡು ತಾಸು ಬಿಡುವಿತ್ತು. ಲಾಸ್ಟ್ ಕ್ಲಾಸ್ ಅಲ್ಲಿ ಸರ್ ಹೇಳ್ಬೇಕಾ ಈಗ ೪.೪೫ಕ್ಕೆ ಲ್ಯಾಬ್ ಇದೆ ನಿಮಗೆ ಅಂತಾ. ಕ್ಲಾಸು ೨.೧೫ಗೆ ಮುಗೀತು. ಅಲ್ಲಿ ತನಕ ಕಾದು ಕೂರೋದಾ ಅಂತಾ ನಾವೆಲ್ಲಾ ಸರ್ ಗೆ ಈಗಲೇ ತಗೊಳ್ಳಿ ಅಂದ್ರೆ ಅವರೇನಂದ್ರು ಗೊತ್ತಾ..?? "ನೋ ಲ್ಯಾಬ್ಸ್ ಆರ್ ಫ್ರೀ ನೌ". ಹಾಗಾಗಿ ಬರೋಬ್ಬರಿ ಎರಡೂವರೆ ತಾಸು ವ್ಯರ್ಥ ಸಮಯ ಕಳೀತು ನೋಡು. ಅಲ್ಲಾ, ಕಾಲೇಜಿನವರಿಗೆ ಅಷ್ಟು ತಿಳಿಯುವುದಿಲ್ಲವಾ..?? ವಿದ್ಯಾರ್ಥಿಗಳ ಸಮಯ ಎಂದರೆ ಅಷ್ಟು ಹಗುರವಾಗೇಕೆ ಭಾವಿಸುತ್ತಾರೋ..?? ಕೇವಲ ಮೂರು ಕ್ಲಾಸುಗಳ ಸಲುವಾಗಿ ಇಡೀ ದಿನ ಕಾಲೇಜಿನಲ್ಲಿರಬೇಕಪಾ. ಫುಲ್ ಸುಸ್ತಾಗಿದೆ ಕಣೇ. ನಾಳೆ ಬೇರೆ ಮತ್ತೆ ಎಂಟಕ್ಕೆ ಕ್ಲಾಸು. ಓಹ್ ಮೈ ದ್ಯಾವ್ರೇ." ಅವಳು ಸಿಟ್ಟು, ಬೇಸರ ಎಲ್ಲವನ್ನೂ ಒಟ್ಟುಗೂಡಿಸಿ ಮಾತನಾಡಿದಳು.
                                   "ವಿದ್ಯಾರ್ಥಿಗಳ ಸಮಯದ ಬಗ್ಗೆ ಅಷ್ಟೆಲ್ಲಾ ಕಾಳಜಿ ಇದ್ದಿದ್ದರೆ ಎಂಜಿನಿಯರಿಂಗ್ ನಾಲ್ಕು ವರ್ಷಗಳದ್ದಾಗಿರುತ್ತಿರಲಿಲ್ಲ. ಮತ್ತೆ ಕಾಲೇಜಿನವರಿಗೆ ಪ್ರತಿಯೊಬ್ಬರ ಸಮಯವೂ ಅಮೂಲ್ಯವಾದದ್ದು ಎಂಬ ವಿವೇಚನೆ ಇದ್ದಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು ಬಿಡು. ಕ್ಲಾಸು, ಕ್ಯಾಂಪಸ್ಸುಗಳಲ್ಲಿ ಸಮಯ ಕಳೆದಿರೋದಕ್ಕಿಂತಲೂ ಕ್ಲಾಸುಗಳಿಗಾಗಿ, ಲೆಕ್ಚರರ್ಸ್ ಸಲುವಾಗಿ ಕಾದಿದ್ದೇ ಹೆಚ್ಚು. ಇದು ನಮ್ಮ ಕಾಲೇಜಿನಲ್ಲಿ ಮಾತ್ರವಲ್ಲ, ಎಲ್ಲಾ ಕಡೆಯ ಹಣೆಬರಹ. ನಮ್ಮ ಜೀವನದಲ್ಲಿ ಬಹಳ ದುಬಾರಿ ಆಸ್ತಿಯೆಂದರೆ ಸಮಯ. ಅದೂ ಬೇರೆಯವರ ವಿಷಯದಲ್ಲೂ ಹೌದು. ನಮ್ಮ ಕಾಲವನ್ನು ನಾವಾಗೇ ಖರ್ಚು ಮಾಡುವಾಗಲೂ, ಬೇರೆಯವರಿಗಾಗಿ ವ್ಯಯಿಸುವಾಗಲೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಮತ್ತೊಬ್ಬರ ಸಮಯದ ಕುರಿತಾಗಿಯೂ ಗೌರವದಿಂದ ವರ್ತಿಸಬೇಕು. ಈ ಪ್ರಬುದ್ಧತೆ ಇಪ್ಪತ್ತು ವರ್ಷದ ನಂತರವಾದರೂ ಬರಬೇಕಪ್ಪ. ಆದರೆ ಐದು ಬೆರಳುಗಳೂ ಒಂದೇ ಸಮನಾಗಿರುವುದಿಲ್ಲ ಅಲ್ಲವಾ..??"
                                 "ಈ ವಾರ ಪೂರ್ತಿ ಹೀಗೆ ಆಗಿದೆ ಕಣೇ. ಬರೇ ಟೈಮ್ ವೇಸ್ಟ್. ಅದರಿಂದಾಗಿ ಎಷ್ಟೆಲ್ಲಾ ಕೆಲಸಗಳು ಬಾಕಿ ಉಳಿದುಕೊಂಡಿವೆ ಗೊತ್ತಾ..?? ಛೇ."
                                  "ಮಾರಾಯ್ತಿ, ಹಳೆಯದರ ಕುರಿತು ಯಾಕೆ ಯೋಚಿಸುತ್ತೀಯಾ..?? ಈಗ ಮತ್ತೆ ಮೂಡ್ ಆಫ್ ಮಾಡಿಕೊಂಡರೆ ಈಗಿನ ಸಮಯವೂ ವ್ಯರ್ಥವಾಗುವುದಷ್ಟೆ. ಮೊದಲು ಫ್ರೆಶ್ ಆಗು ಹೋಗು."


ಹಕ್ಕಿ ಹಾರುತಿದೆಆಗಸಕ್ಕೆ ಹತ್ತಿರವಾಗುತ್ತ
ಉತ್ತರದಲ್ಲಿ ಎತ್ತರ ಎತ್ತರಕ್ಕೆ
ಹಕ್ಕಿ ಹಾರುತಿದೆ, ಹಾಡುತಲಿ
ರೆಕ್ಕೆಗಳನ್ನು ಪಟಪಟವೆನಿಸುತಿದೆ
ಕಣ್ಣು ಹೊರಳಿಸುತ್ತ ಕಿವಿ ನಿಮಿರಿಸುತ್ತ
ಕತ್ತು ಬಾಗಿಸದೇ ಕುತ್ತು ಬರದಂತೆ
ತಲೆ ಎತ್ತರಿಸಿ ತಾನವಾಗಿ ಹಾರುತಿದೆ

ಅತ್ತ ಇತ್ತ ಎಂಬ ಸುತ್ತಲಿಲ್ಲದೇ
ಗುರಿ ಗಡಿಗಳೆಂಬ ಚಿತ್ತವಿಲ್ಲದೇ
ಹಾರುತಿದೆ ಕೇವಲ ಹಾರುತಿದೆ
ಗುಡ್ಡ ಬೆಟ್ಟಗಳಿರಲಿ, ಬಯಲೇ ಬರಲಿ
ನದಿ ತೊರೆಗಳೆಂಬ ತಂಪು ಸಿಗಲಿ
ಮರುಭೂಮಿಯ ಮರಳ ಕೆಂಪಿನಲ್ಲೂ
ಊರು ಕೇರಿಗಳ ಇರುವಿನೊಂದಿಗೂ

ತತ್ವ ಶಾಸ್ತ್ರಗಳ ಶಸ್ತ್ರ ಧರಿಸದೆ
ಜಾತಿ ಧರ್ಮಗಳ ಮತಿಯ ಮರೆತು
ದೇಹವನ್ನೇ ದಾರಿಯಾಗಿಸಿಕೊಂಡಿದೆ
ಭಾವ ಬುದ್ಧಿಗಳ ಬಂಧವನ್ನು ಬಿಟ್ಟು
ಮನಸೆಂಬ ಮನೆಯನ್ನು ತೊರೆದು
ಆತ್ಮವನ್ನೇ ಆಹುತಿಯನ್ನಾಗಿಸಿದೆ
ಮುಕ್ತವಾಗಿ ತಪ್ತವಾಗಿ ಹಾರುತಿದೆ

ಹಕ್ಕಿ ಶಾಂತವಾಗಿ ಹಾರುತಿದೆ
ಭೂಮಿ ಬಾನುಗಳ ಬೇಲಿಯನ್ನು ದಾಟಿ
ಎಲ್ಲ ನಿಲುವುಗಳ ಎಲ್ಲೆ ಮೇರಿ
ನನ್ನನ್ನು ನಿನ್ನನ್ನು ನಿವಾಳಿಸಿ
ನಮ್ಮವರನ್ನೆಲ್ಲಾ ಒಟ್ಟಾಗಿ ಕೂಡಿಸುತ್ತ
ತನ್ನಿಂದ ತಾನು ದೂರ ಸಾಗುತಿದೆ
ಹಾರುತಿದೆ ಕೇವಲ ಹಾರುತಿದೆ


Tuesday, 19 August 2014

ಡೈರಿ ಪುಟ - ೫೬


                               "ಹೇಯ್, ಇವತ್ತು ಸುಧಾಮೂರ್ತಿ ಅವರ ಬರ್ತ್ ಡೇ ನಾ..?? ಫೇಸ್ ಬುಕ್ಕಲ್ಲಿ ನೋಡಿದಂಗಾಯ್ತು." ಕಾಲೇಜಿನಿಂದ ಬಂದವಳೇ ರೂಮ್ ಮೇಟ್ ನನ್ನನ್ನು ಕೇಳಿದಳು.
                                "ಹೌದು ಕಣೇ. ನಂಗೂ ಬೆಳಿಗ್ಗೆ ಫೇಸ್ ಬುಕ್ ನೋಡಿದಾಗಲೇ ಗೊತ್ತಾಗಿದ್ದು." ನಾನು ಉತ್ತರಿಸಿದೆ.
                                "ಅವರೂ ಸಹ ನಮ್ಮ ಬಿವಿಬಿಯಲ್ಲೇ ಓದಿದವರಲ್ಲವಾ..?? ಎಲೆಕ್ಟ್ರಿಕಲ್ಸ್ ಆಂಡ್ ಎಲೆಕ್ಟ್ರಾನಿಕ್ಸ್ ಆಗಿತ್ತಲ್ವಾ ಅವರ ಬ್ರ್ಯಾಂಚ್..?? ಸಾವಿರದ ಒಂಭೈನೂರಾ ಎಪ್ಪತ್ತನಾಲ್ಕೋ ಎಪ್ಪತ್ತಾರೋ ಅಂತಾ ಸರಿಯಾಗಿ ನೆನಪಾಗ್ತಿಲ್ಲ. ಅದೂ ಅಲ್ಲದೇ ಅವರು ಬ್ಯಾಚ್ ಟಾಪರ್ ಆಗಿದ್ರಂತೆ ಕಣೇ. ಆಮೇಲೆ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿಯೂ ಅವರೇ ಮೊದಲ ಗರ್ಲ್ ಸ್ಟೂಡೆಂಟ್. ಎಂಥಾ ಅಚ್ಛೀವ್ ಮೆಂಟ್ ಅಲ್ವಾ..?? ನಮ್ಮ ಸೀನಿಯರ್ ಅಂತಾ ಹೇಳ್ಕೊಳ್ಳೋಕೆ ಹೆಮ್ಮೆಯಾಗತ್ತೆ"
                               "ಹ್ಞೂಂ, ನಂಗೆ ಅದಕ್ಕಿಂತಾನೂ ಇಷ್ಟ ಆಗೋದು ಅವರ ಸರಳತೆ ಕಣೇ. ಇಲ್ಲೇ ಹುಬ್ಬಳ್ಳಿಯ ಶಾಂತಿ ಕಾಲನಿ ನಾರ್ತ್ ನಲ್ಲಿ ಅವರು ಹುಟ್ಟಿ ಬೆಳೆದ ಮನೆ ಇದೆಯಲ್ವಾ..?? ಅದೀಗ ವಿದ್ಯಾಪೋಷಕ್ ಲೈಬ್ರರಿ ಆಗಿದೆ. ಅದರ ಉದ್ಘಾಟನಾ ಸಮಾರಂಭಕ್ಕೆ ಅವರು ಬಂದಿದ್ರು. ಆಗ ಅವರಿಗೆ ಬೊಕ್ಕೆ ಕೊಟ್ಟು ವೆಲ್ ಕಮ್ ಮಾಡಿದ್ದು ನಾನೇ. ನಾನಾಗ ಆರನೇ ತರಗತಿಯಲ್ಲಿದ್ದೆ. ಅವತ್ತು ಎಲ್ಲರ ಜೊತೆಯೂ ಅದೆಷ್ಟು ಚೆನ್ನಾಗಿ ಬೆರೆತರು ಗೊತ್ತೇ..?? ಎಲ್ಲರನ್ನೂ ಮಾತನಾಡಿಸಿದರು, ಎಲ್ಲರ ಮಾತನ್ನೂ ಆಲಿಸಿದರು. ಇವರು ಒಂದು ಬಹುರಾಷ್ಟ್ರೀಯ ಕಂಪನಿಯ ಛೇರ್ ಪರ್ಸನ್ ಅಂತಾ ಅನ್ನಿಸಲೇ ಇಲ್ಲ. ತೀರಾ ಹತ್ತಿರದ ಸಂಬಂಧಿಕರು ಎನ್ನುವಂತೆ ಎಲ್ಲರೊಳಗೊಂದಾದರು. ಈ ಗುಣ ಎಲ್ಲರಲ್ಲಿಯೂ ಇರುವುದಿಲ್ಲ. ಅದೂ ಅಲ್ಲದೇ ಕಾರ್ಯಕ್ರಮದ ಹಿಂದಿನ ದಿನ ವಿಮಾನ ವಿಳಂಬವಾಗಿ ಅವರು ಹುಬ್ಬಳ್ಳಿ ತಲುಪುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಆದರೂ ನಾಳಿನ ಕಾರ್ಯಕ್ರಮಕ್ಕೆ ತಯಾರಿ ಹೇಗೆ ನಡೆದಿದೆ ಎಂದು ನೋಡಲು ಒಮ್ಮೆ ಲೈಬ್ರರಿಯ ಅಂದರೆ ಅದೇ ಅವರ ಮನೆಗೆ ಬಂದಿದ್ದರು. ಆ ಹೊತ್ತಿನಲ್ಲೂ ನಗು ಮುಖ, ಉಲ್ಲಾಸದ ನಡಿಗೆ. ಪ್ರಯಾಣದ ಆಯಾಸ ಒಂದು ಚೂರು ಕಂಡು ಬರಲಿಲ್ಲ. ನಾನಂತೂ ಆ ಎರಡು ದಿನಗಳೂ ನೆಲದ ಮೇಲೆಯೇ ಇರಲಿಲ್ಲ ಬಿಡು. ಮೊನ್ನೆ ಪುಸ್ತಕ ವಾಪಸ್ಸು ಕೊಡಲಿಕ್ಕೆಂದು ವಿದ್ಯಾಪೋಷಕ ಲೈಬ್ರರಿಗೆ ಹೋಗಿದ್ದೆನಲ್ಲಾ, ಆಗ ಇದೆಲ್ಲಾ ನೆನಪಾಗಿತ್ತು."
                                  "ನೀನು ಲಕ್ಕಿ ಮಾರಾಯ್ತಿ. ಹೌದು, ಅವರ ಬಗ್ಗೆ ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ. ನೋಡಿದಷ್ಟೂ ತಂಪು, ಕೇಳಿದಷ್ಟೂ ಇಂಪು. ಅಂಥ ಮೇರು ವ್ಯಕ್ತಿತ್ವ ಅವರದು. ಹ್ಯಾಪ್ಪಿ ಬರ್ತ್ ಡೇ ಸುಧಾ ಮ್ಯಾಡಮ್".


ಡೈರಿ ಪುಟ - ೫೫


                                  "ಓಯ್, ಈ ಫೋಟೋ ಹೇಗೆ ಬಂದಿದೆ..?? ಇದನ್ನು ಫೇಸ್ ಬುಕ್ ಪ್ರೊಫೈಲ್ ಪಿಕ್ ಹಾಕಲಾ..??" ಮೊಬೈಲ್ ಅನ್ನು ನನ್ನ ಮುಖದ ಹತ್ತಿರ ಹಿಡಿದು ತನ್ನ ಫೋಟೋ ತೋರಿಸುತ್ತಾ ಕೇಳಿದಳು ರೂಮ್ ಮೇಟ್.
                                  "ಪರವಾಗಿಲ್ಲ, ಚೆನ್ನಾಗಿ ಬಂದಿದೆ. ಆದರೆ ಪ್ರೊಫೈಲ್ ಪಿಕ್ ಹಾಕುವಷ್ಟು ಚೆಂದ ಇಲ್ಲ ಕಣೇ. ಆದರೂ ಮಾರಾಯ್ತಿ, ನೀನು ಅದೆಷ್ಟು ಫೋಟೋ ತೆಗೆಸಿಕೊಳ್ತೀಯಾ..?? ಅದೂ ಅಲ್ಲದೇ ನೀನು ಕ್ಲಿಕ್ ಮಾಡುವುದು ಕೂಡ ಕೇವಲ ನಿನ್ನ ಸ್ನೇಹಿತರ ಗುಂಪಿನದೇ" ನಾನು ಪ್ರಶ್ನಿಸಿದೆ.
                                   "ಅರೇ, ಅದು ನನ್ನಿಷ್ಟ. ನಾನು ಫೋಟೋ ತೆಗೆಸಿಕೊಂಡರೆ ನಿನಗ್ಯಾಕೆ ಹೊಟ್ಟೆ ಉರಿ..?? ಸ್ನೇಹಿತರದ್ದು ಕ್ಲಿಕ್ ಮಾಡದೇ ಮತ್ತೆ ದಾರಿಯಲ್ಲಿ ಹೋಗುವವರದ್ದು ಫೋಟೋ ತೆಗೆಯಲಾ"
                                   "ಅಮ್ಮಾ ತಾಯಿ, ಫೋಟೋಗ್ರಫಿ ಕೂಡ ಒಂದು ಕಲೆ. ಕೇವಲ ಸೆಲ್ಫೀ ಕ್ಲಿಕ್ ಮಾಡುತ್ತಾ ಇಲ್ಲವೇ ಗೆಳೆಯ-ಗೆಳತಿಯರ ಫೋಟೋ ತೆಗೆಯುತ್ತಾ ಇದ್ದರೆ ಮೂಡುವುದಿಲ್ಲ ಆ ಕಲೆ. ಅಷ್ಟು ಸುಲಭವಾಗಿ ಎಲ್ಲರಿಗೂ ಸಿದ್ಧಿಸುವುದೂ ಇಲ್ಲ. ಒಬ್ಬ ಪರಿಣಿತ ಛಾಯಾಗ್ರಾಹಕನಾಗಲು ಸಾಕಷ್ಟು ಶ್ರದ್ಧೆ, ತಾಳ್ಮೆ, ಪರಿಶ್ರಮ, ಅಧ್ಯಯನ - ಎಲ್ಲವೂ ಬೇಕು. ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು ದರ್ಶಕರಿಗೆ ಪ್ರತ್ಯಕ್ಷ ನೋಡುತ್ತಿರುವಂತೆ ಭಾವ ಮೂಡಿಸುವುದು ಸಣ್ಣ ಮಾತೇ..?? ಅದಕ್ಕಾಗಿ ವಿಭಿನ್ನ, ಹೊಸತನದ ವಸ್ತುಗಳನ್ನು ಸೆರೆಹಿಡಿಯಬೇಕು. ಕ್ರಿಯಾಶೀಲ, ಸೃಜನಾತ್ಮಕ ಪ್ರಯತ್ನ ಮಾಡಬೇಕು. ನೀನೇನೋ ನಂಗೆ ಫೋಟೋಗ್ರಫಿ ಇಷ್ಟಾ ಅಂತೀಯಾ. ಆದರೆ ಅದರ ಕುರಿತು ಕೊಂಚವೂ ಗಂಭೀರವಾಗಿ ಕೆಲಸ ಮಾಡಿದ್ದಿಲ್ಲ ನೋಡು. ಇನ್ನಾದರೂ ಸ್ವಲ್ಪ ಅದನ್ನು ಸೀರಿಯಸ್ ಆಗಿ ತೆಗೆದುಕೊ." ನಾನು ಆಕ್ಷೇಪಣಾ ದನಿಯಲ್ಲಿ ಹೇಳಿದೆ.
                                   "ಮಹಾರಾಣಿಯವರ ಚಿತ್ತ. ಅಪ್ಪಣೆಯಾಗಲಿ." ಅವಳು ಎರಡೂ ಕೈ ಜೋಡಿಸಿ ಬಗ್ಗಿ ವಂದಿಸುತ್ತಾ ನಾಟಕೀಯವಾಗಿ ನುಡಿದಳು.


Monday, 18 August 2014

ಬೆಳದಿಂಗಳು


ನಿಶೆಯ ಕತ್ತಲ ರಂಗದಲ್ಲಿ ಮಧ್ಯ
ಚಂದಿರನೇನೋ ನಗುತ ನಿಂತಿರೆ
ಮರೆಯಬೇಡಿ ಅಲ್ಲೆಲ್ಲೋ ಮೂಲೆಯಲ್ಲಿ
ಚುಕ್ಕಿಯೊಬ್ಬಳು ಮಿಂಚು ಹುಳದಂತೆ
ತೆರೆಯ ಸರಿಸಿ ಹೊರಬರಲಾಗದು
ತಾರೆಯಲ್ಲ ಬೆಳಗಲು, ಅವಳು ಚುಕ್ಕಿ

ಅಯ್ಯೋ, ಇದೆಂಥಾ ಪರಿಸ್ಥಿತಿ ಆಕೆಯದು..??
ಊಹ್ಞೂಂ ಅದು ಒಂದು ಪರಂಪರೆ
ದೌರ್ಬಲ್ಯಕೆ ಪೌರುಷದ ಮುಖವಾಡ ತೊಡಿಸಿ
ಬೆಳಕನ್ನೇ ಇದ್ದಿಲಾಗಿಸಿ ಉರಿಸುವ ಪರಿ
ಅದೆಷ್ಟು ನವರಾತ್ರಿಗಳು ಸವೆದು ಹೋಗಿಲ್ಲ
ಚುಕ್ಕಿ ಬೆಳಗುವುದೂ ಕರಗುವುದೂ ಅಲ್ಲಿಯೇ

ಅವಳಿಗೆ ಆಸೆಯಾಗಿಲ್ಲವೇ ರಂಗದ ಮೇಲೆ ಬರಲು..??
ಬಂದಿದ್ದಳು ಅದೊಂದು ದಿನ ಸಂತಸದಿ
ಅಂದು ಚಂದಿರ ಬೆಂಕಿಯ ಚೆಂಡಿನಂತಾದ
ತನ್ನ ಕಲೆಗಳನ್ನು ಮರೆ ಮಾಚಿ ಕಂಗೊಳಿಸಿದ
ಆ ಬೆಳದಿಂಗಳು ಅಕೆಯನ್ನು ಸುಟ್ಟಿತು
ಎಂದೆಂದಿಗೂ ಚುಕ್ಕಿಯಾಗಿಸಿ ಕೂರಿಸಿತು

ಹುಣ್ಣಿಮೆ ಬಂತೆಂದರೆ ಚಳಿಯಲ್ಲೂ ಬೆವರು
ನಡುಕ ಹುಟ್ಟಿಸುವ ನೋವಿನ ನೆರಳು
ಚಂದಿರನ ಕಲೆಗಳಿನ್ನೂ ಇವೆ, ಮಾಸವಾಗಿಲ್ಲ
ಆದರೂ ಆತ ಮುಕ್ತವಾಗಿ ನಗುವ
ಚುಕ್ಕಿ ಮನದೊಳಗೇ ಮೌನ ತಾಳುವಳು
ನಿಶೆ ನೋಡುತ್ತಾಳಷ್ಟೆ, ಮಾತನಾಡಲೊಲ್ಲಳು


Sunday, 17 August 2014

ಹರೇ ಕೃಷ್ಣ


ಅಲ್ಲಿ ನೋಡು ಗೋಪಿ, ಕಳ್ಳ ಕೃಷ್ಣನನ್ನು
ಓಡುತಿಹನವ ಬೆಣ್ಣೆ ಕದ್ದು ತಿನ್ನುತಲಿ
ಕೇಳಿದರೆ ಅಡ್ಡಡ್ಡ ಕತ್ತು ಹೊರಳಿಸುವನು
ಗದ್ದವೂ ಬೆಳ್ಳಗಾಗಿರುವುದು ಕಾಣಿಸದೇ..??
ಅದೆಷ್ಟು ಬಾರಿ ದೂರೊಯ್ಯಲಿ ಯಶೋದೆಗೆ..??
ಗೋಪಾಲನ ತುಂಟತನವು ಅತಿಯಾಯಿತಮ್ಮ

ಮೋಹನನ ಮುರಳಿ ಅದೆಷ್ಟು ಮಧುರವೇ
ಬೆಳದಿಂಗಳ ಚಂದಿರನೂ ಮನಸೋತಿಹನಂತೆ
ಕೊಳಲ ಗಾನಕೆ ತಲೆದೂಗುತ ಮೈ ಮರೆತು
ಒಮ್ಮೆ ಯಮುನೆಯೂ ಹರಿವುದ ನಿಲ್ಲಿಸಿದೆ
ಬೃಂದಾವನ ಬಗೆಬಗೆಯ ಬಣ್ಣ ತಳೆದು
ಮೋಹಕತೆಯ ಮಳೆಯಲ್ಲಿ ಮಿಂದಿದ್ದಿದೆ

ವಾಸುದೇವನ ಗುಣವೆಂಥದು ಗೆಳತಿ
ದುಷ್ಟ ಕಂಸನ ಕೊಂದು ಶಿಷ್ಟರನು ರಕ್ಷಿಸಿದ
ಸರ್ವರಿಗೂ ಅಭಯಹಸ್ತವನಿತ್ತು ಹರಸಿದ
ದೇವಕಿಯ ಕಣ್ಣೊರೆಸಿ ವಸುದೇವನ ಕಾಲಿಗೆರಗಿದ
ಮಥುರಾ ನಗರಿಗೆ ಮೆರುಗನು ತಂದ
ಮನೆ ಮಗನಂತಾದ ಮನಸಿನಲ್ಲಿ ನಿಂತ

ಗೋಪಿಕೆಯರ ಸೀರೆಯನು ಕದ್ದೊಯ್ದರೂ
ಸೋದರಿ ದ್ರೌಪದಿಯ ಮಾನ ಉಳಿಸಿದವನಾತ
ಸಂಧಾನಕೆ ಸ್ವತಃ ಮುಂದಾಗಿ ಹೋದರೂ
ಪಾರ್ಥನಿಗೆ ಯುದ್ಧಮಾಡೆಂದು ಬೋಧಿಸಿದ
ಸ್ನೇಹಕ್ಕೆ ಜೈ ಸಮರಕ್ಕೆ ಸೈ ಎಂದ ಶ್ಯಾಮ
ಗೀತೆಯ ಬೆಳಕಿನಿಂದ ಅಜ್ಞಾನವ ಓಡಿಸಿದ

ಶ್ರೀಕೃಷ್ಣನ ಕುರಿತಾಗಿ ಹೇಳಿ ತೀರುವುದೆಂತು
ಆತನ ಮಹಿಮೆಗೆ ಸಾಟಿ ಬೇರಿನ್ನಾವುದಿಹುದು..??
ಹರಿಯ ನಾಮ ಸ್ಮರಣೆಯೇ ಆತ್ಮಕೆ ಅಮೃತ
ನಡೆ-ನುಡಿಗಳೇ ನರನಾಡಿಗಳಿಗೆ ವೇದಾಂತ
ಅಷ್ಟಮಿಯ ಶುಭದಿನವು ಮಂಗಳ ತರಲಿ
ಮನತುಂಬಿ ಹೇಳಿರೊಮ್ಮೆ ಹರೇ ಕೃಷ್ಣ


ಕೃಷ್ಣಂ ವಂದೇ ಜಗದ್ಗುರುಂ


                                              "ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ
                                               ಕೃಷ್ಣಾ ಎನಬಾರದೇ, ಶ್ರೀಕೃಷ್ಣ ಎನಬಾರದೆ"
                                 ಹೌದಲ್ಲ, ಸಂಕಟ ಬಂದಾಗ ವೆಂಕಟರಮಣನೇ ನೆನಪಾಗುತ್ತಾನೆ. ಯಾಕೆ..?? ಅವನು ದೇವರೆಂದೇ..?? ದೇವಾನುದೇವತೆಗಳು ಮುಕ್ಕೋಟಿಗಳಷ್ಟಿದ್ದಾರಲ್ಲ. ಆದರೂ ಶ್ರೀಹರಿಯೇ ಏಕೆ..?? ಅವನು ಅವತಾರ ಪುರುಷನೆಂದೇ..?? ಅವನನ್ನು ಬಿಟ್ಟು ಇನ್ನು ನವ ಅವತಾರಗಳಿವೆಯಲ್ಲ. ಅವರಲ್ಲೇಕೆ ಮೊರೆಯಿಡಲು ಮನ ಓಗೊಡುವುದಿಲ್ಲ..?? ಸಂತಸವಾದರೂ ಕೃಷ್ಣನೇ, ಬೇಸರವಾದರೂ ಕೃಷ್ಣನೇ. ದಣಿದ ಉಸಿರಿಗೆ ಜೋಗುಳ ಹಾಡಿ ಮಲಗಿಸುವವನೂ ಅವನೇ, ಅರೆನಿದ್ದೆಯಿಂದ ಎಬ್ಬಿಸುವವನೂ ಅವನೇ. ಹಾಡು ಹೇಳಿ ಕುಣಿಸುವ ಕೆಲಸವೂ ಆತನದೇ, ಕೈ ಹಿಡಿದು ನಡೆಸುವ ಕಾಯಕವೂ ಅವನದೇ. ಎಂದಿಗೂ ಕೃಷ್ಣ, ಎತ್ತಲೂ ಕೃಷ್ಣ.
                                ಕೃಷ್ಣ ದೇವರೇ..?? ಹೌದೆಂದು ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಆತ ಯಾರಿಗೂ ಯಾವ ಬಗೆಯ ವರಗಳನ್ನು ನೀಡಿದವನಲ್ಲ. "ಸ್ವಾಮಿ, ಹಸಿವು ತಾಳಲಾರೆ" ಎಂದು ಅರ್ತನಾದಗೈದವರಿಗೆ ಕೇವಲ ಭಿಕ್ಷೆ ಹಾಕಿ ಕೈ ತೊಳೆದುಕೊಳ್ಳಲಿಲ್ಲ. ಅಥವಾ ತಾನೇ ಪ್ರತಿದಿನವೂ ಕೈತುತ್ತು ತಿನ್ನಿಸಿ ಅವರನ್ನು ಸೋಮಾರಿಯನ್ನಾಗಿಸಲಿಲ್ಲ. ಬದಲಾಗಿ ಒಂದು ಹಿಡಿ ಅನ್ನವನ್ನು ದುಡಿದು ಗಳಿಸುವ ಬಗೆಯನ್ನು ಕಲಿಸಿದ. ಕತ್ತಲೆಯಲ್ಲಿ ಕುಸಿದು ಕುಳಿತವರಿಗೆ ಕ್ಷಣಮಾತ್ರದಲ್ಲಿ ಬೆಳಕು ನೀಡಿ ಹರಸಲಿಲ್ಲ. ಕೈ ಹಿಡಿದು ಮೇಲೆಬ್ಬಿಸಿ ಬೆಳಕನ್ನು ಹುಡುಕಿ ಹೋಗುವ ಹಾದಿಯ ಕುರಿತು ಮಾರ್ಗದರ್ಶನ ಮಾಡಿದ. ಅದಕ್ಕೆ ಇರಬೇಕು, ಯಾರೂ ಸಹ ಕೃಷ್ಣನನ್ನು ಮೆಚ್ಚಿಸಲು ವರ್ಷಗಳವರೆಗೆ ತಪಸ್ಸು ಮಾಡಿದ ಉದಾಹರಣೆಯಿಲ್ಲ. ಹಾಗಂತ ಆತನಿಗೆ ಭಕ್ತರಿರಲಿಲ್ಲವೇ..?? ಆತನಾರಿಗೂ ತನ್ನ ಕೃಪೆ ತೋರಿಸಿರಲಿಲ್ಲವೇ..?? ಇಲ್ಲವೆಂದಿಲ್ಲ, ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಅವುಗಳಲ್ಲೆಲ್ಲೂ ಭಕ್ತಿ, ಶ್ರದ್ಧೆಯ ಆಡಂಬರವಿಲ್ಲ. ನಿಷ್ಕಳಂಕ, ನಿಷ್ಕಪಟ, ಪ್ರಾಮಾಣಿಕ ಮನಸ್ಸಿನಿಂದ ಒಮ್ಮೆ ಕೃಷ್ಣಾ ಎಂದರೂ ಸಾಕು, ಆತ ದರ್ಶನ ನೀಡುತ್ತಿದ್ದ.


                                  ಕೃಷ್ಣ ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯನಾಗಿ ಇದ್ದವನು. ನೋಡಿ ಬೇಕಾದರೆ. ಹುಟ್ಟಿದ್ದೇ ಕಾರಾಗ್ರಹದಲ್ಲಿ, ಅದೂ ಕೂಡ ಅರಮನೆಯಲ್ಲಿ ರಾಜಕುಮಾರನಾಗಿ ಬೆಳೆಯಬೇಕಾದವ ದೂರದ ಯಮುನೆಯ ತೀರದಲ್ಲಿ ಗೊಲ್ಲನಾಗಿ ಬೆಳೆದ. ಬಾಲ್ಯದಿಂದಲೇ ಶತ್ರುಗಳಿಂದ ಅದೆಷ್ಟು ಕಷ್ಟಗಳು ಅವನಿಗೆ. ಅವನೂ ಸಹ ಎಲ್ಲ ಚಿಕ್ಕಮಕ್ಕಳಂತೆಯೇ ತುಂಟಾಟ ಮಾಡಿದವನು, ಅಣ್ಣ ಬಲರಾಮನೊಡಗೂಡಿ ಹಾಲು, ಬೆಣ್ಣೆ ಕದ್ದವನು, ನದಿಯಲ್ಲಿ ಮೀಯಲು ಹೋಗುತ್ತಿದ್ದ ಹೆಂಗಳೆಯರ ಬಟ್ಟೆಗಳನ್ನು ಬಚ್ಚಿಡುತ್ತಿದ್ದವನು, ಗೋಪಿಕೆಯರೊಂದಿಗೆ ಬೃಂದಾವನದ ಬೆಳದಿಂಗಳಿನಲ್ಲಿ ಸರಸವಾಡಿದವನು. ಅಲ್ಲಿಂದ ಮುಂದೆ ಮಥುರೆಗೆ ಬಂದು ಅರಮನೆ ಸೇರಿದರೂ ಆತನೇನೂ ರಾಜಪುರುಷನಂತಾಗಲಿಲ್ಲ. ಎಲ್ಲರೊಂದಿಗೆ ತಾನು ಒಂದಾದ, ಬೆರೆತ, ಸ್ಪಂದಿಸಿದ. ಬಂಧನಗಳ ವಿಷಯದಲ್ಲಿ ಕೃಷ್ಣನಿಗಿಂತ ಎತ್ತರದಲ್ಲಿ ಯಾರು ತಾನೇ ನಿಲ್ಲಬಲ್ಲರು..?? ಪುತ್ರನಾಗಿ, ಸಂಗಾತಿಯಾಗಿ, ಗೆಳೆಯನಾಗಿ, ಸೋದರನಾಗಿ, ಗುರುವಾಗಿ ಆತ ನಡೆದುಕೊಂಡಂತೆ ಇನ್ನಾರು ನಡೆದಿದ್ದಾರೆ..?? ಕೊನೆಯಲ್ಲಿ ಶತ್ರುಗಳಿಗೂ ಕೂಡ ಆತ ಮಿತ್ರರ ಸ್ಥಾನವನ್ನು ನೀಡುವುದರೊಂದಿಗೆ ಅವರಿಗೆ ಮೋಕ್ಷಪ್ರಾಪ್ತಿಯಾಗುವಂತೆ ಮಾಡುತ್ತಾನೆ. ಅದರಿಂದಾಗಿಯೇ ಶ್ರೀಕೃಷ್ಣ ಮಕ್ಕಳಿಂದ ಹಿಡಿದು ಮುದಿ ವಯಸ್ಸಿನವರಿಗೂ ಆಪ್ತನಾಗುತ್ತಾನೆ.
                                ಇನ್ನು ಮಹಾಭಾರತವನ್ನು ನೆನಪಿಸಿಕೊಂಡರೆ ಅಲ್ಲಿ ಎಲ್ಲರ ಪಾತ್ರಗಳಲ್ಲೂ ಒಂದಲ್ಲ ಒಂದು ಬಗೆಯಲ್ಲಿ ಕೃಷ್ಣನೇ ವಿಜೃಂಭಿಸಿದ್ದಾನಲ್ಲವೇ..?? ಕುಂತಿಯ ವಾತ್ಸಲ್ಯದಲ್ಲಿ, ಯುಧಿಷ್ಠಿರನ ಧರ್ಮಪಾಲನೆಯಲ್ಲಿ, ಧೃತರಾಷ್ಟ್ರನ ಪುತ್ರ ವ್ಯಾಮೋಹದಲ್ಲಿ, ಕರ್ಣನ ಮಿತ್ರನಿಷ್ಠೆಯಲ್ಲಿ, ಅರ್ಜುನನ ಶೌರ್ಯದಲ್ಲಿ, ಅಭಿಮನ್ಯುವಿನ ಕೆಚ್ಚಿನಲ್ಲಿ, ಭೀಮನ ಬಲದಲ್ಲಿ, ಧುರ್ಯೋದನನ ಸೇಡಿನಲ್ಲಿ, ಭೀಮನ ಬಲದಲ್ಲಿ, ದ್ರೋಣರ ಗುರುಗಾಂಭೀರ್ಯದಲ್ಲಿ, ಶಕುನಿಯ ಸಂಚಿನಲ್ಲಿ, ಪಾಂಚಾಲಿಯ ಸಾತ್ವಿಕ ಸಿಟ್ಟಿನಲ್ಲಿ - ಹೀಗೆ ಎಲ್ಲರಲ್ಲಿ, ಎಲ್ಲದರಲ್ಲಿ ಆತನ ದನಿ ಕೇಳಿಸುತ್ತದೆ. ಇಡೀ ಮಹಾಭಾರತದ ಸೂತ್ರಧಾರ ಆತನೇ. ಅದಕ್ಕೆ ಮುಕುಟವಿಟ್ಟಂತೆ ಕೊನೆಯಲ್ಲಿ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿ ಭಗವದ್ಗೀತೆಯನ್ನು ಬೋಧಿಸಿದ. ಜೀವನದ ಕುರಿತಾದ ಆಳವಾದ ಸತ್ಯಗಳನ್ನು ಅದೆಷ್ಟು ಸಹಜ, ಸುಂದರ, ಸರಳವಾದ ಭಾಷೆಯಲ್ಲಿ ಆತ ಹೇಳಿದ ಪರಿ ಎಂಥಹ ಅದ್ಭುತ. ಇದೊಂದು ಸಂಗತಿ ಮಾತ್ರ ಕೃಷ್ಣ ದೇವರೇ ಎಂದು ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡುತ್ತದೆ.
                               ಆತ ದೇವನಾಗಿದ್ದನೋ ಇಲ್ಲವೋ, ಆದರೆ ಅಸಾಧಾರಣ ಅಸಾಮಾನ್ಯನಾಗಿದ್ದ. ಅದರಿಂದಾಗಿಯೇ ಸಾಮಾನ್ಯ ಮನುಷ್ಯನಿಗಿಂತ ಎತ್ತರದ ಸ್ಥಾನ ಸಂಪಾದಿಸಿದ. ಜೊತೆಯಲ್ಲಿ ಆ ಸ್ಥಾನಕ್ಕೇರುವ ಬಗೆಯನ್ನು ಇತರರಿಗೆ ತಿಳಿಯಪಡಿಸಿದ ಕೂಡಾ. "ಎಲ್ಲರಲ್ಲಿಯೂ ನಾನಿದ್ದೇನೆ" ಎಂದು ಆತ ಗೀತೆಯಲ್ಲಿ ಹೇಳಿದುದರ ಅರ್ಥವೇನು..?? ನಮಗೂ ಆತನಂತೆಯೇ ಅಸಾಮಾನ್ಯರಾಗುವ ತಾಕತ್ತಿದೆಯೆಂಬುದೇ ಅಲ್ಲವೇ..?? "ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತಃ" ಎಂದರೆ ಆತ ಇನ್ನು ಇದ್ದಾನೆ, ನಮ್ಮೆಲ್ಲರ ನಡುವೆಯೇ ಇದ್ದಾನೆ, ನಮ್ಮೊಳಗೂ ಇದ್ದಾನೆ.
                                     "ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ"
                                ಈ ಒಂದು ಮಾತನ್ನು ಚೆನ್ನಾಗಿ ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಸಾಕು. ಬದುಕಿನ ಎಲ್ಲ ಸಂಕಟ, ಗೊಂದಲ, ನೋವು, ಆಸೆಗಳು ದೂರವಾಗಿ ಕರ್ತವ್ಯವೊಂದೇ ಮೈ ಮನಸ್ಸನ್ನು ಆಳುತ್ತದೆ. ಅದೇ ಅರ್ಥಪೂರ್ಣವಾದ ಜೀವನಕ್ಕೆ ನಾಂದಿಯಾಗುತ್ತದೆ. ಕೃಷ್ಣಾಷ್ಟಮಿ ಎಲ್ಲರಿಗೂ ಶುಭ ತರಲಿ. ಹರೇ ಕೃಷ್ಣ.


Friday, 15 August 2014

ಸ್ವಾತಂತ್ರ್ಯ..??!!


ಆರರ ಮುಂದೊಂದು ಎಂಟರ ಗಂಟು
ಸ್ವಾತಂತ್ರ್ಯೋತ್ಸವದೊಂದಿಗಿನ ನಂಟು
ಪರರ ತಂತ್ರವೋ..?? ಸ್ವಾತಂತ್ರ್ಯವೋ..??
ತಾನೇ ರೂಪಿಸಿಕೊಂಡಿಹ ಸ್ವ ತಂತ್ರವೋ..??
ಎಲ್ಲಿಯ ಸ್ವಾತಂತ್ರ್ಯ..?? ಉತ್ತರವಿಲ್ಲ
ಎಂತಹ ಸ್ವಾತಂತ್ರ್ಯ..?? ಪ್ರಶ್ನೆಗಳೇ ಎಲ್ಲ

ಆಂಗ್ಲರ ದಾಸ್ಯವನ್ನು ಕಿತ್ತೆಸಿದ್ದು ಯಾರು..??
ಅಧಿಕಾರವ ಹಸ್ತಾಂತರಿಸಿ ಅತ್ತ ಹೋದರವರು
ಅಂದಿನ ಬೇರುಗಳು ಇಂದು ಮರಗಳಾಗಿಲ್ಲವೇ..??
ಎಲ್ಲ ಕಡೆಯೂ ತನ್ನ ನೆರಳನ್ನು ಹಾಯಿಸುತ್ತ
ಸ್ವಂತ ನೆಲದ ಬಿಸಿಲಿಗಿಂತ ಹೆಚ್ಚಾಯಿತಲ್ಲವೇ
ಮತ್ತೊಬ್ಬರ ಎಂಜಲಿನ ಬಾಳೆಯ ತಂಪು..??

ಯಾರಿಗಿದೆ ಸ್ವಾತಂತ್ರ್ಯ ಇಂದು..?? ಯಾವುದಕ್ಕಿದೆ..??
ಮೈ ಏಕೆ, ಮನಸ್ಸುಗಳೂ ಮೈಲಿಗೆಯ ಮೂಟೆ
ನಡೆ-ನುಡಿಗಳಿಗೆ ನೆಚ್ಚಿಕೊಂಡಿದೆ ನಂಜು
ಮುಂದುವರೆಯುವ ಓಟದಲ್ಲಿ ಬಿದ್ದು
ಆರಿಹೋಗಿದೆ ಆತ್ಮಗೌರವದ ಆದರ್ಶ ಪಂಜು
ಸ್ವೇಚ್ಛೆಯ ಮುಖವಾಡದ ಹಿಂದೆ ದಾಸ್ಯದ ಕಳೆ

ಮಾತುಗಳಲ್ಲಿ ಮಾಡು ಕಟ್ಟುವುದೊಂದೇ ಮಾತ್ರ
ಕೃತಿಯಲ್ಲಿ ಅಡಿಪಾಯ ಹಾಕುವ ಹಂಬಲವಿಲ್ಲ
ಅಡಿಯಲ್ಲಿ ಕೈ ಚಾಚಿ ದೋಚುವ ಹುನ್ನಾರ
ಹೆಜ್ಜೆಹೆಜ್ಜೆಗೂ ತುಳಿತದ ರುಚಿಯ ತಿಂದು
ಸತ್ತುಹೋಗಿದೆ ಮತಿಯ ರಸಗ್ರಂಥಿ
ಕೊಚ್ಚಿಹೋಗುತ್ತಿದ್ದರೂ ಈಜುತ್ತಲೇ ದಡ ಕಾಣಬೇಕು

ಆದರೂ ಇನ್ನೂ ಏತಕೆ ಉಸಿರಿದೆ ಉದರದಲ್ಲಿ..??
ಕಾರಣ, ಅದಕ್ಕೆ ಭಾರತೀಯನೆಂಬ ಹೆಸರಿದೆಯಲ್ಲ
ಜೀವ ಹೆಸರು ಮರೆತರೇನಂತೆ, ಒಡಲೊಳಗಿನ
ಆತ್ಮವು ತನ್ನ ರಕ್ತಗುಣವನ್ನು ಅರಿಯದೇ..??
ನೆತ್ತರು ಹೆಪ್ಪುಗಟ್ಟಿರಬಹುದಷ್ಟೆ, ಬತ್ತಿಲ್ಲ
ಬಿಸಿ ತಾಕಿತೆಂದರೆ ಹರಿವಿಗೆ ತಡೆಯೇ ಇಲ್ಲ

ನಾನಾರೆಂಬುದರ ಅರಿವು ನನಗಿಲ್ಲ, ನಿನಗೂ ಕೂಡ
ಮಿಥ್ಯೆಯ ಮಾಯೆಯಲ್ಲಿ ಭ್ರಮೆಯಲ್ಲಿ ಬದುಕು
ಸತ್ಯವೆಂಬ ಶಿವನ ಸಾಕ್ಷಾತ್ಕಾರವಿಲ್ಲದೆ
ಕಣ್ಣು ತೆರೆದು ಜಗತ್ತನ್ನಲ್ಲ, ಒಳಗೆ ನೋಡದಿದ್ದರೆ
ಮುಸುಕಿನ ಮರೆಯಲ್ಲೇ ಮಣ್ಣಾಗುವೆವು ಮೂಢರೆಲ್ಲ
ಸಾಕಿನ್ನು ಎದ್ದೇಳಬೇಕು, ಕಾಲು ಹಾಕಿ ಸಾಗಬೇಕು

ಮಾನವ ಮಾತ್ರವಲ್ಲ, ಭಾರತೀಯನಾಗು
ಅಸಾಧ್ಯವೆಂಬುದರ ಅಸ್ತಿತ್ವ ಅಲ್ಲಿಲ್ಲ
ಎಲ್ಲವೂ ಸತ್ವಸಹಿತ ಸುಲಭ ಸುಂದರ ಸತ್ಯ
ಇಳೆಯ ಕಳೆಯನ್ನೆಲ್ಲ ಹೊಳೆಯಲ್ಲಿ ತೊಳೆದು
ಸ್ವಚ್ಛ, ಶ್ರೇಷ್ಠ ನಾಡು ಕಟ್ಟುವುದು ಕನಸಲ್ಲ
ನೆನಪಿಡು, ನೀ ಮೊದಲು ಭಾರತೀಯನಾಗಿರಬೇಕು


ಡೈರಿ ಪುಟ - ೫೪


                               ಕಾಲೇಜಿನಲ್ಲಿ ಧ್ವಜಾರೋಹಣ ಮಾಡಿದ್ದನ್ನು ನೋಡಿ, ಆಮೇಲೆ ಒಂದು ರೌಂಡ್ ಕ್ಯಾಂಪಸ್ ಸುತ್ತಿಕೊಂಡು ವಾಪಸ್ಸು ಹಾಸ್ಟೆಲಿಗೆ ಬರುವಾಗ ರೂಮ್ ಮೇಟ್ ಹೇಳಿದಳು, "ನಿಜವಾದ ಸ್ವಾತಂತ್ರ್ಯ ದಿನಾಚರಣೆ ಎಂದರೆ ಶಾಲೆಗಳಲ್ಲಿ ಆಚರಿಸುತ್ತಾರಲ್ಲಾ, ಅದು ನೋಡು."
                               "ಯಾಕಮ್ಮಾ..?? ಉಳಿದ ಕಡೇ ಮಾಡೋದು ಬರೇ ತೋರಿಕೆಗೆ ಅಂತೀಯಾ..??" ನಾನು ಪ್ರಶ್ನಿಸಿದೆ.
                               "ಒಂಥರಾ ಹಾಗೆ ಅಲ್ಲವಾ ಮಾರಾಯ್ತಿ..?? ಒಮ್ಮೆ ನೆನಪು ಮಾಡಿಕೊ. ಶಾಲಾ ದಿನಗಳಲ್ಲಿ ಅಗಸ್ಟ್ ಹದಿನೈದು, ಜನವರಿ ಇಪ್ಪತ್ತಾರು ಬಂತೆಂದರೆ ಸಾಕು. ದೇಶಭಕ್ತಿ, ತ್ಯಾಗ, ಬಲಿದಾನಗಳೆಲ್ಲಾ ಏನು ಎಂದು ತಿಳಿಯದಿದ್ದರೂ ಆ ಪುಟ್ಟ ವಯಸ್ಸಿನಲ್ಲಿ ಭಾರತ ಎಂದರೆ ಅದೆಷ್ಟು ಉತ್ಸಾಹ, ಸಂಭ್ರಮ, ಹೆಮ್ಮೆ ಇರುತ್ತಿತ್ತು. ಬೋಲೋ ಭಾರತ್ ಮಾತಾ ಕೀ, ವಂದೇ ಮಾತರಂ ಎಂದು ಘೋಷಣೆ ಕೂಗುವಾಗಲಂತೂ ನಮಗಿರುವುದು ಒಂದೇ ಗಂಟಲು ಎಂಬ ಸತ್ಯ ಮರೆತೇ ಹೋಗಿರುತ್ತಿತ್ತು. ಕೈ ನೋವು ಬಂದರೂ ರಾಷ್ಟ್ರಧ್ವಜವನ್ನೂ ಮೇಲಕ್ಕೆತ್ತಿ ಹಿಡಿಯುತ್ತಿದ್ದೆವು. ಅಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಅರ್ಥಪೂರ್ಣವಾಗಿರುತ್ತಿದ್ದವು. ಸ್ವಾತಂತ್ರ್ಯ ಯೋಧರೆಲ್ಲಾ ನಮ್ಮ ನೆಂಟರಿಷ್ಟರೇನೋ ಎಂಬಂತೆ ಅವರ ಜೀವನ, ಹೋರಾಟ, ಸಾಧನೆಗಳ ಪರಿಚಯವಿರುತ್ತಿತ್ತು. ಅದೆಷ್ಟು ದೇಶಭಕ್ತಿಗೀತೆಗಳು ಕಂಠಪಾಠವಾಗಿದ್ದವು. ಇದೆಲ್ಲವೂ ಕೇವಲ ಶಾಲಾದಿನಗಳಿಗೇ ಸೀಮಿತವಾಗಿ ಹೋಯಿತು. ಈಗ ನೋಡು, ಸ್ವಾತಂತ್ರ್ಯೋತ್ಸವ ಎಂದರೆ ಸರ್ಕಾರಿ ರಜಾದಿನ ಎಂಬಂತಾಗಿದೆ. ಹ್ಯಾಪ್ಪಿ ಇಂಡಿಪೆಂಡೆನ್ಸ್ ಡೇ ಎಂದು ಎಲ್ಲರಿಗೂ ಫೇಸ್ಬುಕ್, ವ್ಯಾಟ್ಸ್ ಆಪ್ ಗಳಲ್ಲಿ ಮೆಸೇಜು ಕಳಿಸಿ ನಂತರ ಇಡೀ ದಿನ ಮಾಲ್, ಮಲ್ಟಿಪ್ಲೆಕ್ಸ್, ಶಾಪಿಂಗ್, ಔಟಿಂಗ್ ಎನ್ನುತ್ತಾ ಕಳೆದರಾಯಿತು."
                                   "ಹಿಂದೆ ದೇಶದ ಸ್ವಾತಂತ್ರ್ಯಕ್ಕೋಸ್ಕರ ಅನೇಕರು ತಮ್ಮ ಪ್ರಾಣ, ಜೀವನವನ್ನು ಬಲಿ ಕೊಟ್ಟರು. ಅದರಿಂದಾಗಿಯೇ ನಾವಿಂದು ಅರವತ್ತೆಂಟನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎನ್ನುತ್ತಿರುವುದು. ಅವರೆಲ್ಲರ ಸಾಮೂಹಿಕ ಬಲಿದಾನದಿಂದಾಗಿ ಇಂದು ಪ್ರತಿಯೊಬ್ಬನೂ ಪರತಂತ್ರದ ದಾಸ್ಯದಿಂದ ಮುಕ್ತನಾಗಿದ್ದಾನೆ. ಈಗ ನಾವೆಲ್ಲಾ ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಮ್ಮ ನಮ್ಮ ಆತ್ಮಗೌರವ, ಸ್ವಾಭಿಮಾನ, ಧೈರ್ಯ-ಸ್ಥೈರ್ಯಗಳನ್ನು ಹರಾಜಿಗೆ ಇಟ್ಟುಕೊಳ್ಳುತ್ತಿದ್ದೇವೆ. ಸ್ವಂತವಾಗಿ ಸ್ವತಂತ್ರರೂ ಎಂದು ಬೀಗಿದರೂ ಅದರಿಂದಾಗಿ ಇಡೀ ಸಮಾಜವೇ ಸಾಮೂಹಿಕವಾಗಿ ದಾಸ್ಯಕ್ಕೊಳಗಾಗುವ ದಿನಗಳೂ ದೂರವಿಲ್ಲವಷ್ಟೆ. ಹಾಗಾಗಿಯೇ ಇಂದು ನಮಗೆ ಯಾವುದಾದರೂ ದೇಶಭಕ್ತಿಯ ಕಥೆಯುಳ್ಳ ಸಿನೆಮಾ ಬಂದರೆ ಮಾತ್ರ ನಾನೂ ಭಾರತೀಯ ಎನ್ನುವ ಸಂಗತಿ ನೆನಪಾಗುತ್ತದೆ. ಅದೂ ಅಲ್ಲದೇ ಕಾಲ ಮುಂದೋಡಿದೆ ತಾನೇ..?? ಅಂದು ನಡೆದಂತೆ ಇಂದು ಇರಬೇಕೆಂದರೆ ಹೇಗೆ..?? ಅವತ್ತು ಹಾರಾಡುವ ತಿರಂಗವನ್ನು ಕಣ್ತುಂಬಾ ನೋಡಿ ಸ್ವಾತಂತ್ರ್ಯೋತ್ಸವದ ಧನ್ಯತೆಯನ್ನು ಅನುಭವಿಸಿದರೆ ಇಂದು ಮಾಲ್ ಗಳಲ್ಲಿ ಅಲಂಕಾರವಾಗಿ ಜೋಡಿಸಿರುವ ತ್ರಿವರ್ಣಗಳ ಬಲೂನುಗಳನ್ನು ನೋಡಿ ಸಾರ್ಥಕ ಭಾವ ಹೊಂದುತ್ತಾರೆ."


Thursday, 14 August 2014

ಡೈರಿ ಪುಟ - ೫೩


                        "ಗುಡ್ ಮಾರ್ನಿಂಗ್, ಹ್ಯಾಪ್ಪಿ ಇಂಡಿಪೆಂಡೆನ್ಸ್ ಡೇ. ಆಆಆಆಆಆsssssss" ರೂಮ್ ಮೇಟ್ ಆಕಳಿಸುತ್ತಾ ಎದ್ದು ಕೂತಳು. ನಾನು ವಿಜಯವಾಣಿ ಓದುತ್ತಾ ಕುಳಿತಿದ್ದವಳು ತಲೆ ಎತ್ತಿದೆ. ಅವಳು ಒಮ್ಮೆಲೇ ಕಣ್ಣುಗಳನ್ನು ಅಗಲಿಸಿ ಕೇಳಿದಳು, "ಓಯ್, ಧ್ವಜಾರೋಹಣ ಕಾರ್ಯಕ್ರಮಕ್ಕೆ ಹೋಗಲ್ವಾ..??"
                         "ಗಂಟೆ ಎಷ್ಟಾಯಿತು ನೋಡು ಒಂದ್ಸಲ. ಎಂಟೂವರೆಯಾಯಿತು. ಏಳೂವರೆಗೆ ಧ್ವಜ ಹಾರಿಸಿ ಜನಗಣಮನ ಹಾಡಿಯೂ ಆಯಿತು." ನಾನು ಉತ್ತರಿಸಿದೆ.
                         "ಅಯ್ಯೋ ಹೌದಾ..?? ಎಂತಾ ಮಾರಾಯ್ತಿ ನೀನು. ನನ್ನ ಎಬ್ಬಿಸ್ಬೇಕಿತ್ತು." ಅವಳು ಮುಖ ಸಣ್ಣದು ಮಾಡಿಕೊಂಡಳು.
                         "ನಾನು ಐದಾರು ಸಲ ನಿನ್ನನ್ನು ಎಬ್ಬಿಸಿದೆ. ಕುಂಭಕರ್ಣನ ವಂಶದವಳಿಗೆ ಎಚ್ಚರ ಆದರಲ್ಲವೇ..?? ಆಮೇಲೆ ನಾನೊಬ್ಬಳೇ ಹೋಗಿ ಬಂದೆ."
                        "ಛೇ, ಈ ಸಲವೂ ಮಿಸ್ ಆಯ್ತು. ಏನೇನು ಮಾಡಿದ್ರು ಧ್ವಜಾರೋಹಣದಲ್ಲಿ..?? ಯಾರ್ಯಾರೆಲ್ಲಾ ಬಂದಿದ್ರು..??"
                         "ಹಾಸ್ಟೆಲಿನ ಹುಡುಗಿಯರೆಲ್ಲಾ ಇದ್ರು. ಧ್ವಜ ಹಾರಿಸಲು ಯಾರೋ ಬಂದಿದ್ರು. ಧ್ವಜಾರೋಹಣದ ನಂತರ ಅವರೊಂದು ಸಣ್ಣ ಭಾಷಣ ಮಾಡಿದರು. ಆಮೇಲೆ ಸಿಹಿ ಹಂಚಿದರು. ತಿರಂಗಾ ನೋಡಲಿಕ್ಕೆ ಭಾಳ ಖುಷಿ ಅನಸ್ತಿತ್ತು ಗೊತ್ತಾ..?? ನೀನು ಮಳ್ಳಿ, ಬರಲೇ ಇಲ್ಲ."
                         "ನಿನ್ನೆ ರಾತ್ರಿ ಕೊರಿಯನ್ ಸೀರಿಯಲ್ ನೋಡ್ತಾ ಇದ್ದೆನಲ್ಲ, ಅದ್ಕೆ ಮಲಗಿದ್ದು ಲೇಟ್ ಆಗಿ ಎಚ್ಚರಾನೇ ಆಗ್ಲಿಲ್ಲ."
                         "ನಾಳೆ ಹಾಲಿಡೇ ಅನ್ನೋದನ್ನ ತಲೆಯಲ್ಲಿ ಇಟ್ಕೊಂಡು ಮಲಗಿರ್ತೀಯಾ. ಅದ್ಕೆ ಎಚ್ಚರ ಆಗ್ಲಿಲ್ಲ. ಅದೇ ನಾಳೆ ಸ್ವಾತಂತ್ರ್ಯೋತ್ಸವ ಅನ್ನೋದನ್ನ ಜ್ಞಾಪಕದಲ್ಲಿ ಇಟ್ಕೊಂಡಿದ್ರೆ ನೆಟ್ಟಗೆ ಎದ್ದೆಳ್ತಿದ್ದೆ. ನಡಿ, ಬೇಗ ರೆಡಿ ಆಗು. ಕಾಲೇಜಿನಲ್ಲಿ ಏನು ಮಾಡಿದಾರೆ ನೋಡ್ಕೊಂಡು ಬರೋಣ. ಹಾಗೆ ಆಮೇಲೆ ಕೆಂಪು ಕೋಟೆಯಿಂದ ಮೋದಿ ಭಾಷಣನೂ ಮುಗೀತು. ಅದನ್ನಾದ್ರೂ ಕೇಳು."


Wednesday, 13 August 2014

ಡೈರಿ ಪುಟ - ೫೨


                                  "ಸಾವಲ್ಲೂ ಸಾರ್ಥಕತೆ ಕಾಣಬೇಕೆ..?? ಇಂದು ಅಂಗದಾನ ದಿನ." ವಿಜಯವಾಣಿಯನ್ನು ಕೈಯ್ಯಲ್ಲಿ ಹಿಡಿದಿದ್ದ ನನ್ನ ರೂಮ್ ಮೇಟ್ ದೊಡ್ಡದಾಗಿ ಸುದ್ದಿಯನ್ನು ಓದುತ್ತಿದ್ದಳು. ಶೀರ್ಷಿಕೆ ಹೇಳಿ ಸುಮ್ಮನಾದವಳು ತಲೆ ತಗ್ಗಿಸಿ ಕುಳಿತಳು. ಪೂರ್ತಿ ಸುದ್ದಿಯನ್ನು ಓದಿ ಮುಗಿಸಿದ ಮೇಲೆ ತಲೆ ಎತ್ತಿದಳು ಹೇಳಿದಳು, "ಆರ್ಟಿಕಲ್ ಚೆನ್ನಾಗಿದೆ ಮಾರಾಯ್ತಿ. ನಂಗೂ ಆಸೆಯಾಗ್ತಿದೆ ಅಂಗದಾನ ಮಾಡೋಣ ಅಂತ."
                                 "ಮನೆಯಲ್ಲಿ ನಿನ್ನ ಆಸೆಯನ್ನು ಹೇಳಿ ನೋಡು. ಒಪ್ತಾರೋ ಇಲ್ವೋ ನೋಡೋಣ." ನಾನು ಹೇಳಿದೆ.
                                 "ಒಳ್ಳೆಯ ಕೆಲಸವೇ ತಾನೇ..?? ಒಪ್ಪದೇ ಇರ್ತಾರಾ..??"
                                 "ಆರ್ಟಿಕಲ್ ಓದಿದ್ಯಲ್ವಾ..?? ಅಲ್ಲೇ ಕೊಟ್ಟಿದಾರಲ್ಲಾ, ಸಂಪೂರ್ಣ ದೇಹಕ್ಕೆ ಅಪರಕ್ರಿಯೆಗಳನ್ನು ಮಾಡದ ಹೊರತು ಮೋಕ್ಷ ಸಿಗುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.ಹಾಗಾಗಿ ದೇಹದಾನಕ್ಕಾಗಲಿ ಅಂಗದಾನಕ್ಕಾಗಲಿ ಮುಂದಾಗುವವರು ಕಡಿಮೆ."
                         "ಬೇರೆಯವರ ಜೀವ ಉಳಿಸುವಂತಹ ಪವಿತ್ರ ಕಾರ್ಯಕ್ಕಿಂತ ಸತ್ತ ನಂತರ ಮೋಕ್ಷ ಸಿಗುವುದೇ ಹೆಚ್ಚೇ..?"
                               "ಮನಷಾವಸ್ಥೆ ಶರೀರ ಅಂತ ಸುಮ್ಮನೆ ಹೇಳಿದಾರಾ..?? ಬದುಕಿರುವಾಗ ಸಾಲದ್ದೆಂದು ಜೀವ ಹೋದ ನಂತರವೂ ಸ್ವಾರ್ಥ. ಇಲ್ಲಿ ಹೇಗೆ ಜೀವನ ಸಾಗಿಸಿದ್ದರೂ ಸರಿ, ಸತ್ತ ಮೇಲೆ ಮಾತ್ರ ಮೋಕ್ಷ ಸಿಗಲೇಬೇಕು. ಈ ಆಸೆ ಯಾರಿಗೆ ತಾನೇ ಇಲ್ಲ ಹೇಳು..?? ಅಕಸ್ಮಾತ್ ವ್ಯಕ್ತಿಯೊಬ್ಬ ಸ್ವ ಇಚ್ಛೆಯಿಂದ ಅಂಗದಾನಕ್ಕೆ ಮುಂದಾದರೂ ಅವನ ಕುಟುಂಬದವರು, ನೆಂಟರು, ಸ್ನೇಹಿತರು ಎಲ್ಲರೂ ಅದನ್ನು ಆಕ್ಷೇಪಿಸುತ್ತಾರೆ. ಅವನ ಉಸಿರಿದ್ದಾಗ ಚೆನ್ನಾಗಿ ನೋಡಿಕೊಂಡರೋ ಇಲ್ಲವೋ ಸತ್ತ ಮೇಲೆ ಆತನಿಗೆ ಸದ್ಗತಿ ಪ್ರಾಪ್ತವಾಗದಿದ್ದಲ್ಲಿ ತಮಗೇನಾದರೂ ಕೇಡುಂಟಾದರೆ ಎಂಬ ಭಯ, ಚಿಂತೆ. ಯಾರೋ ಒಬ್ಬರು ಯಾವುದೋ ಅಂಗದ ವೈಫಲ್ಯದಿಂದ ನರಳಾಡಿದರೆ ನಮಗೇನಾಗಬೇಕು ಎನ್ನುವ ಅಮಾನವೀಯ ಮನಸ್ಥಿತಿ. ಅಂಗದಾನ ನಿಜವಾಗಲೂ ಪುಣ್ಯದ ಕೆಲಸ. ನಾವು ಬದುಕಿದ್ದಾಗ ಯಾರಿಗೆ ಎಷ್ಟು ಸಹಾಯ ಮಾಡುತ್ತೇವೆಯೋ ಏನೋ. ಆದರೆ ಕೊನೆಪಕ್ಷ ಸತ್ತ ಮೇಲಾದರೂ ನಮ್ಮಿಂದಾಗಿ ಒಂದು ಜೀವ ಆರೋಗ್ಯವಂತ ಜೀವನ ಸಾಗಿಸುವುದಾದರೆ ಅದಕ್ಕಿಂತ ಬೇರಿನ್ನೇನು ಸಾರ್ಥಕತೆ ಬೇಕು ನಮಗೆ..?? ಇದನ್ನು ಅದೆಷ್ಟು ಜನ ಅರ್ಥ ಮಾಡಿಕೊಳ್ಳುತ್ತಾರೆ ಬಿಡು."
                                      "ಯಾರು ಅರ್ಥ ಮಾಡಿಕೊಳ್ಳಲಿ ಬಿಡಲಿ, ನನಗಂತೂ ಅಂಗದಾನ ಮಾಡಲೇಬೇಕಂತ ಮನಸ್ಸಿಗೆ ಬಂದಿದೆ. ನೀನು ಮಾಡುವವಳೇ ಅಂತ ಗೊತ್ತು ನನಗೆ. ಆದಷ್ಟು ಬೇಗನೇ ನಾವಿಬ್ಬರೂ ನೋಂದಣಿ ಮಾಡಿಸೋಣ ಆಯ್ತಾ..??" ಅವಳು ಮುಗುಳ್ನಗುತ್ತಾ ಹೇಳಿದಳು.


ಚಂಚಲೆ


ಸಂಜೆಯ ಸಂಧ್ಯೆಯ ಸೆರಗಿನಲ್ಲಿ
ಚಂಚಲೆ ಸುಮ್ಮನೇ ಕುಳಿತಿದ್ದಳು
ಗದ್ದವು ಮೊಳಕಾಲಿನ ಗಂಟಿಗೆ
ಕೈ ಬೆರಳು ಕಾಲ್ಗೆಜ್ಜೆಯ ನಂಟಿಗೆ
ಮೆಲ್ಲಗೆ ಮಲಗೇಳುವ ರೆಪ್ಪೆಗಳು
ಕಥೆ ಹೇಳದೇ ಕಪ್ಪಾಗಿರುವ ಕಂಗಳು

ಗಾಳಿಯೂ ಹೊಸದಾಗಿ ಗಂಧವೂ ಹಿತವಾಗಿ
ಗೂಡಿಗೆ ಮರಳುವ ಕಲರವವೂ ಹೆಚ್ಚಾಗಿ
ಮೌನದಲ್ಲೂ ಮರೆಯಲ್ಲಿ ಮಾತುಕತೆ
ಚಂಚಲೆಯದೇಕೋ ಅಚಲ ನಿಲುವು
ಭಂಗಿಯಲ್ಲೂ ಬಾರದ ಬದಲಾವಣೆ
ಇದ್ಯಾವ ಬಗೆಯ ಲಹರಿಯೋ ಕಾಣೆ

ಏನಾಯಿತು ಕೂಸೆ..?? ಹೀಗೆ ಕುಳಿತಿಹೆ
ಚಿಗರೆಯಂತೆ ಚಿಮ್ಮುವ ನಡೆಯಿಲ್ಲ
ಅರಳು ಹುರಿದಂತೆ ಹರಿಯುವ ನುಡಿಗಳಿಲ್ಲ
ಬಣ್ಣ ಹಚ್ಚಿಕೊಂಡು ರಂಗಕೆ ಬಾರದೇ
ತೆರೆಯ ಹಿಂದೆ ಮೂಎಗೆ ಸರಿದೆಯೇಕೆ..??
ಮನದ ಮನಸ್ಸಿಗೂ ಆರದ ಅಚ್ಚರಿ

ಹೀಗೆ ತಾನೇ ಹೇಳಿಯಾಳು ಚಂಚಲೆ..??
ಹೂವು ಅರಳಿ ನಿಂತಿದೆ ಎಂದೋ
ಸೌರಭ ಬೀರಲೂ ಚಿತ್ತ ಮೂಡದೇ, ಮಾಗದೇ
ರೆಕ್ಕೆಗಳೆಲ್ಲವೂ ಗರಿಗೆದರಿ ಸಿದ್ಧವಾಗಿವೆ
ಹಾರುವ ಉತ್ಸಾಹಕ್ಕೆ ಉಸಿರಿಲ್ಲದೇ
ಚಂಚಲಕ್ಕೊಳಗಾಗಿದ್ದಳು ಚೆಂದದ ಚಂಚಲೆ


Monday, 11 August 2014

ಚಂದಮಾಮ

                    
ಅಮ್ಮ ಹೇಳಿದ್ದದೆಷ್ಟು ಬಾರಿ
ಇದೊಂದೇ ಒಂದು ತುತ್ತು ತಿನ್ನು ಮರಿ
ಚಂದಮಾಮನನ್ನು ಕರೆತರುತ್ತೇನೆ
ನೋಡಲ್ಲಿ, ಎಷ್ಟು ಚಂದ ಅವನ ನಗು
ಅವ ಸದಾ ನಿನ್ನೊಡನೆ ಆಟವಾಡುವ
ಹಾಡು ಹಾಡುತ, ಕಥೆ ಕೇಳಿಸುತ ನಗಿಸುವ

ಒಂದಲ್ಲ, ಹತ್ತಲ್ಲ, ಹತ್ತು ನೂರುಗಳು
ನುಂಗಿ ಹೋದವು ಅದೆಷ್ಟು ತುತ್ತುಗಳು
ಒಂದಿಂಚೂ ಕದಲಿಕೆಯಿಲ್ಲ ಅಲ್ಲಿ ಚಂದಿರನಲ್ಲಿ
ಅವನ ನಗುವಿನಲ್ಲಿ, ಮರೆಸುವ ಮೋಹದಲ್ಲಿ
ಅಂಬೆಗಾಲಿನಿಂದ ಎದ್ದು ಬಿದ್ದು ನಡೆದರೂ
ಊಹ್ಞೂಂ ಚಂದಮಾಮ ಬರಲೇ ಇಲ್ಲ

ನಾ ಹೆಚ್ಚು ಹೆಚ್ಚು ಎತ್ತರಳಾದಂತೆಲ್ಲ
ಮೇಲೇರಿದ ಆತ ಮತ್ತೆ ಮತ್ತೆ
ಇಂದು ನಾನೊಬ್ಬಳೇ ತಿನ್ನುತಿಹೆ
ಅಮ್ಮನ ಕೈಗಳಿಲ್ಲ ತುತ್ತಿಡಲು
ಚಂದಿರ ಅದೇ ರೀತಿ ನಗುತ್ತಿದ್ದಾನೆ
ನಾ ನಿನ್ನ ಬಳಿ ಬರಲೇ ಎನ್ನುವಂತೆ
  

Sunday, 10 August 2014

ಮಳೆ ನಿಂತು ಹೋದ ಮೇಲೆ


ಮಳೆಯೆಂದೋ ಮೂಕವಾಗಿ ಮಾಯವಾಗಿದೆ
ಕರಿಮೋಡಗಳೂ ಕರಗಿ ಚದುರಿವೆ
ತಿಳಿಯಾಗಿದ್ದರೂ ಅದೇಕೋ ಹುಳಿಯಾಗುವಂತೆ
ಅಲ್ಲಲ್ಲಿ ಹನಿಗಳು ಮತ್ತೆ ಹೆಪ್ಪುಗಟ್ಟುತಲಿ
ಅಳಿದ ಪರದೆಯ ಮೇಲೆ ಅರಳುವಂತಿದೆ
ಮಸುಕಾದ ಚಿತ್ರಗಳು ಮನದ ಮೂಸೆಯಲ್ಲಿ

ಒಳಗೆ ಹೊದ್ದು ಮಲಗಿದ್ದ ಏಕಾಂತ
ಸಂಗಾತಿಯ ಸ್ಮೃತಿಯ ಸೆರೆಯಲ್ಲಿ ಎದ್ದು
ಎತ್ತೆತ್ತಲೋ ಹುಡುಕಿದೆ ಸುತ್ತಲಿಲ್ಲದ ಸುಪ್ತವನ್ನು
ಒಂದು ಹೆಜ್ಜೆ ಹಿಂದೆಯೂ ಒಂದು ನಡೆ ಮುಂದೆಯೂ
ಹಾದಿ ಯಾವುದಾದರೇನಂತೆ ಈ ಹೃದಯಕೆ
ಬಾಡಿದ ಹೂವಿನಿಂದ ಸೌರಭವಿಲ್ಲವೆಂಬಂತೆ

ಸನಿಹದಲ್ಲಿ ಕಾಡುತಿಹುದು ಅರಿಯಲಾಗದ ವಿರಹ
ಉತ್ತರಗಳ ಉತ್ತರದಲ್ಲೂ ಪ್ರಶ್ನೆಗಳದೇ ಸಮರ
ಬಿಡಿಸಲು ಇಲ್ಲವಲ್ಲ ಯಾವ ಕಗ್ಗಂಟು
ಮೌನಕ್ಕೂ ಕಿವುಡಿಗೂ ಬಗೆಹರಿಯದ ನಂಟು
ಹೊಸ ದಾರಿಯಲ್ಲಿ ಧೂಳೆಬ್ಬಿಸಲೇ ಎಂಬಂತೆ
ಸಾಗಿ ಹೋಯಿತೊಮ್ಮೆ ನೆನಪುಗಳ ತೇರು

ಮತ್ತೊಮ್ಮೆ ಬಾರದಿರಲಿ ಒಲವಿನ ಮಳೆ
ಅದ ತಾಳುವಷ್ಟು ಶಕ್ತಳಲ್ಲ ಮೃದು ಇಳೆ
ಹನಿಗಳಾಗಿ ತೊಟ್ಟಿಕ್ಕಲಿ ಮಾತ್ರವೇ ಆದರೆ
ಸುರಿದು ಮೈ ಮನಗಳ ತೊಳೆಯುವುದ ನಾನೊಲ್ಲೆ
ಒಣಗಿಕೊಂಡೆ ಇರಲಿ ಒಳಗಿನ ಒಲೆ
ಹಸಿಯಾಗಿ ಹೊತ್ತಿಕೊಳ್ಳದಿರಲಿ ಹೊರಗಿನ ಹಾಳೆ


Saturday, 9 August 2014

ರಕ್ಷಾಬಂಧನದ ಶುಭಾಶಯಗಳು


ಪ್ರೀತಿಯ ಅಣ್ಣಾ,
                                 ಪ್ರೀತಿಯ ಎನ್ನುವುದಕ್ಕಿಂತ ಶ್ರೇಷ್ಥವಾದ ಸಂಬೋಧನೆ ಬೇರೆ ಯಾವುದೂ ನೆನಪಾಗುತ್ತಿಲ್ಲ. ಅಣ್ಣನೆಂದರೆ ಅಲ್ಲಿ ಕಾಣಸಿಗುವುದು ಪ್ರೀತಿಯೇ ತಾನೇ..?? ಅಣ್ಣನ ಜೊತೆ ಜಗಳವಾಗಲಿ, ಹೊಡಪಡೆಯಾಗಲಿ, ಮುನಿಸಾಗಲಿ, ಅಣ್ಣ ಸಿಟ್ಟಿನಿಂದ ಬಯ್ಯಲಿ, ಪಕ್ಕದಲ್ಲಿ ಕೂರಿಸಿಕೊಂಡು ಕಿವಿ ಹಿಂಡಲಿ, ಒಂದಿಷ್ಟು ಕರಾರು-ಕಟ್ಟಳೆಗಳನ್ನು ಹಾಕಲಿ - ಇವೆಲ್ಲದರಲ್ಲೂ ಮೂಲತಃ ಇರುವುದು ಪ್ರೀತಿಯೇ ಅಲ್ಲವೇ..?? ಅದಕ್ಕೆ ಇರಬೇಕು, ಯಾವ ತಂಗಿಗೆ ಆದರೂ ಪ್ರತಿ ಸಲ "ಅಣ್ಣಾ" ಎನ್ನುವಾಗ ಮುಖದ ತುಂಬೆಲ್ಲಾ ನೂರು ವೋಲ್ಟಿನ ಬಲ್ಬು ಹೊತ್ತಿಕೊಂಡಿರುತ್ತದೆ. ಆ ಬೆಳಕಿನ ಪ್ರಕಾಶ ಬೇರೆ ಯಾರನ್ನಾದರೂ ಕರೆಯುವಾಗ ಇರುವುದಕ್ಕಿಂತ ಸಾವಿರ ಪ್ರತಿಶತ ಹೆಚ್ಚು. ಕೊರೆತ ಸಾಕು, ಬೇಗ ವಿಷಯಕ್ಕೆ ಬಾ ಮಾರಾಯ್ತಿ ಅಂತಿದೀಯಾ..?? ಸ್ವಲ್ಪ ತಾಳು ಮಾರಾಯಾ. ನೀನಿನ್ನು ಹಾಸಿಗೆ ಬಿಟ್ಟು ಎದ್ದಿರುವುದೇ ಇಲ್ಲ. ಆಗಲೇ ಅದೆಂತಾ ಅರ್ಜೆಂಟು ನಿನಗೆ..??
                                 ಇವತ್ತು ನೂಲು ಹುಣ್ಣಿಮೆ ಅಲ್ಲವಾ..?? ಅದೇ ರಕ್ಷಾ ಬಂಧನ ಮಾರಾಯಾ. ನಿನಗೆಲ್ಲಿ ನೆನಪಿರುತ್ತದೆ ಹೇಳು..?? ತಂಗಿ ರಾಖಿ ಕಟ್ಟಲಿಕ್ಕೆ ಬರುತ್ತಾಳೆ ಎಂದು ಇವತ್ತೊಂದಿನ ಆದ್ರೂ ಬೇಗ ಎದ್ದು ಸ್ನಾನ-ಗೀನ ಎಲ್ಲ ಮಾಡಿ ಚೆಂದವಾಗಿ ತಯಾರಾಗಿ ಕಾಯುತ್ತಾ ಕೂರಬಾರದಾ...?? ಊಹ್ಞೂಂ, ರಾಖಿ ಕಟ್ಟಬೇಕು ಅಂತಿದ್ರೆ ನಾನೇ ನಿನ್ನ ಎಬ್ಬಿಸಬೇಕು. ಹೋಗಲಿ ಬಿಡು, ತಂಗಿಯಾಗಿದ್ದಕ್ಕೆ ಅಷ್ಟಾದರೂ ಮಾಡದೆ ಇದ್ದರೆ ಹೇಗೆ..?? ಈಗಲಾದರೂ ಬೇಗ ಏಳು ಮಾರಾಯಾ. ಆಗಲೆ ಗಂಟೆ ಒಂಭತ್ತಾಯಿತು. ನಿನ್ನ ಹತ್ತಿರ ಒಂದಿಷ್ಟು ಮಾತನಾಡಲಿಕ್ಕಿದೆ ನಂಗೆ. ತಲೆ ತಿನ್ನಲಿಕ್ಕಿದೆ ಅಂದರೂ ಸರಿಯೇ. ಅಣ್ಣಂದಿರನ್ನು ಗೋಳು ಹೊಯ್ದುಕೊಳ್ಳಲು ತಂಗಿಯರಿಗೆ ಅಧಿಕೃತವಾಗಿ ದೊರೆಯುವುದು ಇದೊಂದು ದಿನ ಮಾತ್ರ ತಾನೇ..?? ಸುಮ್ಮನೇ ಇರಲಿಕ್ಕಾಗುತ್ತದೆಯೇ..??
                                   ಎಲ್ಲ ಹುಡುಗಿಯರ ಬದುಕಿನಲ್ಲೂ ಅಣ್ಣನಿಗೆ ವಿಶೇಷ ಸ್ಥಾನವಿದೆ. ಅಪ್ಪನೆಂದರೆ ಪ್ರೀತಿ, ಸ್ನೇಹಗಳಿಗಿಂತ ಭಯ ಭಕ್ತಿಗಳೇ ಜಾಸ್ತಿ. ಹಾಗಾಗಿ ಅಮ್ಮನ ಸೆರಗು ಬಿಟ್ಟರೆ ಹೆಚ್ಚು ಸಲಿಗೆಯೆನ್ನುವುದು ಅಣ್ಣನ ಬಳಿಯೇ ತಾನೇ..?? ಅದೂ ಅಲ್ಲದೇ ಅಣ್ಣ ತನಗಿಂತ ಮೊದಲೇ ಹುಟ್ಟಿದವನು, ತನಗಿಂತ ತಿಳಿದವನು ಎಂದು ಏನೋ ಒಂದು ಬಗೆಯ ಸಂತೋಷದ ಹೆಮ್ಮೆ. ಅಣ್ಣನ ಮಾತೆಂದರೇ ಅದು ವೇದ ವಾಕ್ಯದಂತೆ. ಅಪ್ಪ-ಅಮ್ಮನ ಮಾತಿಗಿಂತ ಅದು ಕೇಳಲು ಹಿತ, ಪಾಲಿಸಲು ಮುದ. ಬೇಜಾರಾದರೆ ನಗಿಸುವವನು ಅಣ್ಣ, ಖುಷಿಯನ್ನು ಹಂಚಿಕೊಳ್ಳಲು ಅಣ್ಣ, ಸಿಟ್ಟು ಬಂದರೆ ಬೆನ್ನಿಗೆ ಗುದ್ದಲು ಅಣ್ಣ, ತಮಾಷೆ ಮಾಡಲು ಅಣ್ಣ, ಏನೂ ತೋಚದೇ ಕುಳಿತಾಗ ಹೀಗೆ ಮಾಡು ಕೂಸೆ ಎಂದು ದಾರಿ ತೋರುವವನು ಅಣ್ಣ, ಅಸಹಾಯಕರಾದಾಗ ಸಹಾಯ ಹಸ್ತ ಚಾಚುವವನು ಅಣ್ಣ, ತಪ್ಪು ಮಾಡಿದಾಗ ತಿದ್ದುವವನು ಅಣ್ಣ - ಹೀಗೆ ಪಾಲಕ, ಸೋದರ, ಸ್ನೇಹಿತ, ಗುರು, ಹಿತೈಷಿ ಎಲ್ಲ ಸ್ಥಾನದಲ್ಲೂ ಅಣ್ಣನೇ ವಿರಾಜಮಾನನಾಗಿರುತ್ತಾನೆ. ಚಿಕ್ಕಂದಿನಿಂದಲೂ ಎಂದರೆ ರಕ್ಷಾಬಂಧನದ ಆಚರಣೆಯ ತಲೆ ಬುಡ ಅರ್ಥವಾಗಿರದ ಮುಂಚಿನಿಂದಲೂ ಅಣ್ಣನೆಂದರೆ ಒಂಥರಾ ಸುರಕ್ಷತೆಯ ಭಾವ.  ಅಣ್ಣನೊಬ್ಬ ಇದ್ದರೆ ಸಾಕು ಎಂಬ ಗಟ್ಟಿ ಧೈರ್ಯ-ಸ್ಥೈರ್ಯ.
                                ಈಗ ದೊಡ್ಡವರಾದ ಮೇಲೂ ಅಷ್ಟೆ ತಾನೇ..?? ಎಲ್ಲದಕ್ಕೂ ಅಣ್ಣನೇ ಮೊದಲು. ಮೊದಮೊದಲು ಕಾಲೇಜಿಗೆ ಹೋಗಲು ಏನೋ ಒಂದು ಬಗೆಯ ಅಳುಕೆಂದು ಕೆಲವು ದಿನಗಳ ತನಕ ಡ್ರಾಪ್ ಮಾಡುವವನು ಅಣ್ಣ, ಸಿಲೇಬಸ್ ಅರ್ಥವಾಗದಿದ್ದಾಗ ಪಾಠ ಮಾಡುವವನು ಅಣ್ಣ. ಎಕ್ಸಾಮ್ ನಲ್ಲಿ ಒಂದೆರಡು ವಿಷಯಗಳು ಹೊಗೆ ಹಾಕಿಕೊಂಡಾಗ ಮೊದಲು ಹೇಳುವುದು ಅಣ್ಣನ ಬಳಿಯೇ. ಕಾಲೇಜಿನಲ್ಲಿ ಯಾರಾದರೂ ಚುಡಾಯಿಸಿದಾಗ ಅವರ ಕಪಾಳಕ್ಕೆ ಬಾರಿಸುವವನು ಅಣ್ಣನೇ, ಪ್ರೀತಿಸಿದ ಹುಡುಗ ಕೈಕೊಟ್ಟಾಗ ಕಣ್ಣೀರು ಒರೆಸಿ ಸಮಾಧಾನ ಮಾಡುವವನೂ ಅಣ್ಣನೇ. ಉಸ್ಸಪ್ಪಾ, ಅಣ್ಣನೆಂದರೆ ತಂಗಿಯ ವಿಷಯದಲ್ಲಿ ಅದೆಷ್ಟು ಜವಾಬ್ದಾರಿಗಳು. ಅದು ಎಂದಿಗೂ ಮುಗಿಯುವುದೇ ಇಲ್ಲ. ಥೋ ಮಾರಾಯಾ, ನನ್ನ ಕೊರೆತ ಕೇಳಿ ನೀನು ಮತ್ತೆ ನಿದ್ರೆ ಮಾಡಿದೆಯೋ ಹೇಗೆ..?
                                 ಈ ರಕ್ಷಾಬಂಧನದ ಹಿಂದೆ ಏನಾದರೂ ಕಥೆ ಇರಬೇಕಲ್ವಾ..?? ನಿಂಗೆ ಗೊತ್ತಿದೆಯಾ..?? ಹೇಳ್ತೀನಿ ಕೇಳು. ಬಲಿ ಚಕ್ರವರ್ತಿ ಯಾರಂತ ಗೊತ್ತಲ್ವಾ..?? ಅದೇ ಮಾರಾಯಾ, ವಿಷ್ಣು ವಾಮನ ಅವತಾರದಲ್ಲಿ ಹೋಗಿ ಮೂರು ಅಡಿ ಭೂಮಿ ಕೇಳಿದಾಗ ತನ್ನ ತಲೆಯನ್ನೇ ದಾನ ಮಾಡಿದವನು. ನೆನಪಾಯಿತಾ..?? ಇಲ್ಲದಿದ್ದರೂ ಮುಂದೆ ಕೇಳು. ಆಮೇಲೆ ಬಲಿಯ ಭಕ್ತಿಗೆ ಮೆಚ್ಚಿ ವಿಷ್ಣು ಆತನ ಮನೆಯ ಬಾಗಿಲು ಕಾಯಲು ಒಪ್ಪಿಕೊಂಡು ಪಾತಾಳ ಸೇರಿದಾಗ ವೈಕುಂಠದಲ್ಲಿರೋ ಲಕ್ಷ್ಮೀ ದೇವಿಗೆ ಗಾಬರಿಯಾಯಿತಂತೆ. ಗಂಡ ಪಾತಾಳ ಸೇರಿಕೊಂಡರೆ ಇಲ್ಲಿ ವೈಕುಂಠದಲ್ಲಿ ತನ್ನ ಗತಿಯೇನು ಎಂದು ಚಿಂತಿತಳಾಗಿ ಬಲಿಯ ಚಕ್ರವರ್ತಿಯನ್ನು ಸಮೀಪಿಸಿ ಸೋದರಿ ಸ್ನೇಹದಿಂದ ಅವನ ಕೈಗೆ ರಾಖಿಯನ್ನು ಕಟ್ಟಿದಳಂತೆ. ಆಗ ಬಲಿ ವರ ಕೇಳುವಂತೆ ಕೋರಿದಾಗ ಪಾತಾಳದಲ್ಲಿರುವ ತನ್ನ ಗಂಡನನ್ನು ಬಿಟ್ಟು ಕೊಡುವಂತೆ ಕೇಳಿದಳಂತೆ. ಹಾಗೆ ಇನ್ನೊಂದು ಕಥೆಯೂ ಪ್ರಚಲಿತದಲ್ಲಿದೆ. ಶಿಶುಪಾಲನನ್ನು ವಧಿಸುವಾಗ ಸುದರ್ಶನ ಚಕ್ರದ ತುದಿ ತಾಕಿ ಕೃಷ್ಣನಿಗೆ ರಕ್ತಸ್ರಾವವಾಯಿತಂತೆ. ಅಲ್ಲೇ ಇದ್ದ ದ್ರೌಪದಿ ಒಡನೆಯೇ ಧಾವಿಸಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಕಟ್ಟಿ ಶುಶ್ರೂಷೆ ಮಾಡಿದಳಂತೆ. ಆಗ ಕೃಷ್ಣನೂ ಅವಳಿಗೆ ಆಜನ್ಮ ರಕ್ಷಣೆ ನೀಡುವುದಾಗಿ ಭರವಸೆ ಇತ್ತನಂತೆ. ತನ್ನ ಮಾತಿನಂತೆ ಮುಂದೆ ಕುರುಸಭೆಯಲ್ಲಿ ಅವಳ ಮಾನ ಸಂರಕ್ಷಿಸಿದ. ಹಿಂದಿನ ವಾರವಷ್ಟೇ ನ್ಯೂಸ್ ಪೇಪರ್ ನಲ್ಲಿ ನಾನು ಓದಿದ್ದು ಇದು.
                                ರಕ್ಷಾಬಂಧನ ರಕ್ಷೆಯ ದ್ಯೋತಕ. ಸೋದರ-ಸೋದರಿಯರ ಪ್ರೀತಿಯ ಪ್ರತೀಕ. ಅಣ್ಣನ ಅಥವಾ ತಮ್ಮನ ಕೈಹಿಡಿದು ರಾಖಿ ಕಟ್ಟುವಾಗ ಅದೆಂಥ ಬೆಚ್ಚನೆಯ ಭಾವ. ಕಟ್ಟಿಸಿಕೊಂಡವನಿಗೂ ತನ್ನ ಹೆಗಲು ಇನ್ನಷ್ಟು ಭಾರವಾದಂತೆ ಅನುಭವ. ಎಷ್ಟು ಸುಂದರ ಅಲ್ವಾ ಅಣ್ಣಾ..?? ಈಗ ಮಾತು ಸಾಕು. ನೀನು ತಯಾರಾದೆಯಾ..?? ನಾನಂತೂ ರಾಖಿ ಹಿಡಿದು ಕಟ್ಟಲು ರೆಡಿಯಾಗಿ ಕುಳಿತಿದ್ದೇನೆ. ಬೇಗ ಹೇಳು, ನೀನು ನನಗೇನು ವರ ಕೊಡ್ತೀಯಾ..??
                                                ಪ್ರೀತಿಯೊಂದಿಗೆ,

                                                                                                                    ಎಂದೆಂದೂ ನಿನ್ನ ತಂಗಿ,
                                                                                                                             ಲಹರಿ

ಡೈರಿ - ಪುಟ ೫೧


                          "ಎಲ್ಲಿಗೆ ಹೋಗಿದ್ದೆ ಮಾರಾಯ್ತಿ..?? ಊಟ ಮುಗಿಸಿದವಳು ಈಗ ರೂಮಿಗೆ ಬರ್ತಾ ಇದೀಯಲ್ಲಾ. ಹಾಗೆ ಶಿರಸಿ ಬಸ್ಸು ಹತ್ತಿಕೊಂಡು ಮನೆಗೆ ಹೋದ್ಯೆನೋ ಅಂದ್ಕೊಂಡೆ ನಾನು." ಎರಡು ಗಂಟೆಯ ಹೊತ್ತಿಗೆ ಊಟ ಮುಗಿಸಿ ಮೆಸ್ ಇಂದ ಹೊರಗೆ ಬಂದಾಗ ಹಾಗೆಯೇ ಸ್ನೇಹಿತೆಯ ರೂಮಿಗೆ ಹೋಗಿ ಬರುತ್ತೇನೆಂದು ನನ್ನ ಬಳಿ ಹೇಳಿ ಮಾಯವಾದ ರೂಮ್ ಮೇಟ್ ಬರೋಬ್ಬರಿ ಎರಡು ತಾಸು ಕಳೆದ ನಂತರ ತಿರುಗಿ ರೂಮಿಗೆ ಬಂದಳು.
                             ಶಿರಸಿಯ ಬಸ್ಸು ಹತ್ತಿ ಹೊರಟೇ ಹೋಗುತ್ತೇವೆಂಬಂತೆ ಮಾತನಾಡುತ್ತಿದ್ದಾರಲ್ಲಾ, ಅವರಿಗೆಲ್ಲ ಸಮಾಧಾನ ಮಾಡಿ ಬಂದೆ ಮಾರಾಯ್ತಿ. ಸಾಕಾಗಿ ಹೋಯಿತು ನೋಡು." ಅವಳು ಉತ್ತರಿಸಿದಳು.
                               "ನೀನು ಸಮಾಧಾನ ಮಾಡಿದ್ಯಾ..?? ಅದ್ಯಾರು ಅಂಥಾ ದುರದೃಷ್ಟವಂತರು..??" ನಾನು ಬೇಕಂತಲೇ ಕೆಣಕಿದೆ. ಅವಳು ಉತ್ತರಿಸದೇ ಮುಖ ದುಮ್ಮಿಸಿಕೊಂಡು ಕುಳಿತಳು. "ಅಯ್ಯೋ ಮಾರಾಯ್ತಿ, ಅದೆಂತಾ ಕಥೆ ಅಂತಾ ಹೇಳು ಬೇಗನೇ." ನಾನು ಸಂತೈಸಿದೆ.
                               "ಭವ್ಯಾ ಇಲ್ಲವೇನೆ..?? ಅವಳು ಫುಲ್ ಬೇಜಾರುಮಾಡಿಕೊಂಡಿದ್ದಾಳೆ. ಮೊನ್ನೆ ರಾಬರ್ಟ್ ಬಾಷ್ ನಲ್ಲಿ ಅವಳದ್ದು ಟೆಕ್ನಿಕಲ್ ರೌಂಡಿನಲ್ಲಿ  ಹೋಯಿತಲ್ಲ. ಅದ್ಕೆ ಅವಳು ಅವತ್ತಿಡೀ ದಿನ ಅತ್ತಿದ್ದು ಸಾಲದ್ದೆಂದು ಇವತ್ತು ಮತ್ತೆ ಕಣ್ಣು ಕೆಂಪು ಮಾಡಿಕೊಂಡೇ ಇದ್ದಾಳೆ. ಅವಳ ರೂಮ್ ಮೇಟ್ಸ್ ಶಾಪಿಂಗಿಗೆ ಹೋಗಲು ಕರೆದರೆ ಬರುದಿಲ್ಲವೆಂದು ಬೇಜಾರು ಮಾಡಿಕೊಂಡು ಕೂತಿದ್ದಳಂತೆ. ಅದಕ್ಕೆ ನಾನು ಹೋಗಿ ಮಾತನಾಡಿಸಿ ಬಂದೆ. ಕಾಲೇಜಿಗೆ ಹೋಗಲು ಮನಸ್ಸಾಗುವುದಿಲ್ಲವೆಂದು ಹೇಳ್ತಿದಾಳೆ."
                                "ಅಯ್ಯೋ, ನಮ್ಮ ಕ್ಲಾಸಿನಲ್ಲೂ ಬಹಳ ಜನ ತೀರಾ ಮಾನಸಿಕ ಆಗಿದಾರೆ. ಅಲ್ಲಾ, ಇಲ್ಲಿಯ ತನಕ ಬಂದಿದ್ದು ಕೇವಲ ಮೂರೇ ಕಂಪನಿಗಳು. ಅಲ್ಲಿ ಸೆಲೆಕ್ಟ್ ಆಗಲಿಲ್ಲವೆಂದರೆ ಎಲ್ಲಾ ಮುಗಿದೇ ಹೋಯಿತೆಂದು ಅರ್ಥವಾ..?? ಎಷ್ಟೆಲ್ಲಾ ಕಂಪನಿಗಳಿವೆ, ಅಲ್ಲಿ ಎಷ್ಟೆಲ್ಲಾ ಜಾಬ್ ಗಳಿವೆ. ಕಾಲೇಜಿಗೆ ಬರುವ ಕಂಪನಿಗಳು ಮಾತ್ರವೇ ಕಂಪನಿಗಳೇ.?? ಆಫ್ ಕ್ಯಾಂಪಸ್ಸಿನಲ್ಲೂ ಎಷ್ಟೆಲ್ಲಾ ಅವಕಾಶಗಳಿವೆ ತಾನೇ.?? ಇನ್ನು ಅದೆಷ್ಟು ಕಂಪನಿಗಳು ಬರಲಿವೆ. ಸುಮ್ಮನೇ ಅವುಗಳಿಗೆಲ್ಲಾ ಓದುವುದು ಬಿಟ್ಟು ಹೀಗೆ ಬೇಜಾರು ಮಾಡಿಕೊಂಡರೆ ಹೇಗೆ..?? ಅಲ್ಲಾ, ಎಂಥೆಂಥವರೇ ಮೊದಲ ಬಾರಿಗೆ ಯಶಸ್ಸಿನ ರುಚಿ ಕಾಣದೇ ಸೋಲುಂಡಿದ್ದಾರೆ. ಎಷ್ಟು ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ಅವರೆಲ್ಲಾ ಹೀಗೆ ಭರವಸೆ ಕಳೆದುಕೊಂಡು ಹತಾಶರಾಗಿ ಅಲ್ಲಿಯೇ ತಮ್ಮ ಪ್ರಯತ್ನವನ್ನು ಕೈ ಬಿಟ್ಟಿದ್ದರೆ ಇಂದು ಅವರೆಲ್ಲ ಉನ್ನತ ಸ್ಥಾನದಲ್ಲಿದರಲು ಸಾಧ್ಯವಾಗುತ್ತಿತ್ತೇ..?? ಇದೆಲ್ಲವನ್ನೂ ನಾವು ಓದಿ ತಿಳಿದುಕೊಂಡಿದ್ದೇಕೆ..?? ಇಪ್ಪತ್ತು ವರ್ಷ ಕಳೆದವರೂ ಸಣ್ಣ ಮಕ್ಕಳ ಹಾಗೆ ಆಡಿದರೆ ಹೇಗೆ..?? ಛೇ."
                                   "ಬಿಡು, ಕೆಲವರು ಸ್ವಲ್ಪ ಲೇಟ್ ಆಗಿ ದೊಡ್ಡೋರಾಗ್ತಾರೆ. ಅಲ್ಲಿಯ ತನಕ ಏನು ಮಾಡಲಿಕ್ಕೂ ಆಗುವುದಿಲ್ಲ."


Thursday, 7 August 2014

ಇಟ್ ಡೆಪೆಂಡ್ಸ್!!!                                          ಇವತ್ತು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ ನಮ್ಮ ಸರ್ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟರ್ ಬಗ್ಗೆ ನಮಗೊಂದು ಪ್ರಶ್ನೆ ಎಸೆದರು. ಅದು ಮುಂಜಾನೆ ಒಂಭತ್ತೂಕಾಲರ ಸಮಯ. ಎಂಟಕ್ಕೊ ಎಂಟು ಕಾಲಿಗೋ ಮನಸ್ಸಿಲ್ಲದ ಮನಸ್ಸಿನಿಂದ ಹಾಸಿಗೆಯಿಂದೆದ್ದು ಶಾಸ್ತ್ರಕ್ಕೆ ಸ್ನಾನ, ತಿಂಡಿ-ತೀರ್ಥಗಳನ್ನು ಮುಗಿಸಿ ಕೈಗೆ ಸಿಕ್ಕ ಬುಕ್ಸ್ ಗಳನ್ನು ಬ್ಯಾಗೆಂಬ ಗೋಣಿಚೀಲದೊಳಕ್ಕೆ ತುರಿಕಿಕೊಂಡು ನಾವೆಲ್ಲಾ ಕ್ಲಾಸಿಗೆ ಬಂದಿದ್ದೆವು. ಫೈನಲ್ ಇಯರ್ ಎಂದರೆ ಸುಮ್ಮನೆ ಎಲ್ಲರ ಕ್ಷೇಮ ಸಮಾಚಾರ ವಿಚಾರಿಸಲು ಕಾಲೇಜಿಗೆ ಹೋಗಿ ಬರುವುದು, ಇಲ್ಲವೇ ಕ್ಯಾಂಟೀನ್ ನಲ್ಲಿ ಕೂತು ಗೆಳೆಯ-ಗೆಳತಿಯರೊಂದಿಗೆ ಹರಟೆ ಕೊಚ್ಚುವುದು, ಅದೂ ಇಲ್ಲವೆಂದರೆ ಇಲ್ಲಿಯ ತನಕ ಎದ್ದು ಕೂತು ಮಾಡಿರದ ಕ್ಯಾಂಪಸ್ಸಿನ ಎಲ್ಲಾ ಜಾಗಗಳಿಗೂ ಹತ್ತತ್ತು ಸಲ ಭೇಟಿ ನೀಡುವುದೇ ಹೊರತು ಕ್ಲಾಸ್ ಅಟೆಂಡ್ ಆಗೋದಾ..?? ಕೇಳಿದವರು ನಕ್ಕಾರು ಎಂಬಂತಹ ಮನೋಭಾವ. ಇಂತಿದ್ದರೂ ಇವತ್ತು ಬೆಳ್ಳಂಬೆಳಿಗ್ಗೆ ಕ್ಲಾಸಿಗೆ ಹೋಗಿ ಕೂರಲು ಕಾರಣವೂ ಇತ್ತು. ಯಾಕೆಂದರೆ ಅದು ಡಿಸ್ಟ್ರಿಬ್ಯೂಟೆಡ್ ಆಂಡ್ ಕ್ಲೌಡ್ ಕಂಪ್ಯೂಟಿಂಗ್ ವಿಷಯದ ಮೊದಲನೇ ತರಗತಿಯಾಗಿತ್ತು. ಅದಕ್ಕೆ ಹೋಗಿ ನಿದ್ದೆಗಣ್ಣುಗಳನ್ನು ಅರೆತೆರೆದು ಕೂತಿದ್ದೆವು. ಹೀಗಿರುವಾಗ ಅವರು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸುವುದು ಇರಲಿ ಅವರೇನು ಕೇಳುತ್ತಿದ್ದಾರೆನ್ನುವುದೇ ತಲೆಬುಡ ಹರಿಯಲಿಲ್ಲ.
                                 ಒಂದೆರಡು ನಿಮಿಷಗಳ ನಂತರ ಅವರೇ ಉತ್ತರ ಹೇಳಿದರು. "ಆಕ್ಚುವಲಿ, ಇಟ್ ಡೆಪೆಂಡ್ಸ್." ನಾವೆಲ್ಲಾ ನಿದ್ದೆಯ ಮಂಪರಿನಲ್ಲಿದ್ದರೂ ಗೊಳ್ಳೆಂದು ನಕ್ಕೆವು. "ನೋ ನೋ. ಯು ಶುಡ್ ಟೆಲ್ ಲೈಕ್ ದಟ್ ಓನ್ಲಿ. ಯಾಕೆಂದರೆ ಹಾಗೆ ಹೇಳಿದರೆ ನಿಮಗೆ ವಿಷಯದ ಕುರಿತು ಹೆಚ್ಚು ತಿಳಿದಿದೆಯೆಂದು ಅರ್ಥ. ಏನೂ ಗೊತ್ತಿಲ್ಲದಿದ್ದಾಗ ಹೇಳಲು ಏನೂ ಇರುವುದಿಲ್ಲವಲ್ಲ, ಹಾಗಾಗಿ ಇಟ್ ಡೆಪೆಂಡ್ಸ್. ಎಲ್ಲ ತಿಳಿದಿರುವಾಗಲೂ ಎಲ್ಲವನ್ನೂ ಹೇಳಿಬಿಟ್ಟರೆ ನಿಮಗೇ ನಷ್ಟ ತಾನೇ..?? ಹಾಗಾಗಿ ಆಗಲೂ ಇಟ್ ಡೆಪೆಂಡ್ಸ್." ಎನ್ನುತ್ತಾ ತಾವು ಹೇಳಿದ್ದನ್ನು ಸಮರ್ಥಿಸಿಕೊಂಡರು. ಅವರು ಕಲಿಸಿದ ಪಾಠ ಅರ್ಥವಾಗದೇ ಹೋದರೂ ಇಟ್ ಡೆಪೆಂಡ್ಸ್ ಕುರಿತಾಗಿ ಜೊತೆಗೆ ಅದನ್ನು ದಿನನಿತ್ಯದಲ್ಲಿ ನಾವು ಬಳಸುವ ಸನ್ನಿವೇಶಗಳು ನನ್ನ ತಲೆಯಲ್ಲಿ ಪಾತ್ರಗಳಾಗಿ ನರ್ತನಗೈಯ್ಯತೊಡಗಿದವು. ಕಾಲೇಜಿನಿಂದ ವಾಪಸ್ಸು ಬಂದಕೂಡಲೇ ಮನದ ಪರದೆಯನ್ನು ಸರಿಸಿ ಲ್ಯಾಪ್ ಟಾಪ್ ನ ಮುಂದೆ ಕುಳಿತುಕೊಂಡೆ.

                                                    ***********************************************

                               "ನನ್ನ ಮಗಳಿಗೆ ನಿಮ್ಮ ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ. ಹೇಗಿದೆ ನಿಮ್ಮ ಕಾಲೇಜು..?? ಲೆಕ್ಚರರ್ಸ್ ಎಲ್ಲಾ ಚೆನ್ನಾಗಿ ಕಲಿಸ್ತಾರಾ..??" ಎಂದು ನಿಮ್ಮ ಜ್ಯೂನಿಯರ್ ಅಥವಾ ಸಂಬಂಧಿ ಅಥವಾ ಪರಿಚಯದ ಹುಡುಗ-ಹುಡುಗಿಯ ಪಾಲಕರು ನಿಮ್ಮ ಬಳಿ ಕೇಳಿದಾಗ ನೀವು ಏನಂತ ಹೇಳುತ್ತೀರಿ..?? ಅಕಸ್ಮಾತ್ ಆ ಹುಡುಗ ಅಥವಾ ಹುಡುಗಿಯೇ ಖುದ್ದು ನಿಮ್ಮ ಹತ್ತಿರ ಕಾಲೇಜಿನ ಬಗ್ಗೆ ವಿಚಾರಿಸಿದರೆ ಹೇಳಬಹುದಿತ್ತೇನೋ. "ಯಾಕೆ ಸುಮ್ನೆ ನೀನಾಗೇ ಬಂದು ನರಕಕ್ಕೆ ಬೀಳ್ತೀಯಾ..?? ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಅಟೆಂಡನ್ಸ್, ಮಾರ್ಕ್, ಡಿಸಿಪ್ಲಿನ್ ಅದೂ ಇದೂ ಅಂತಾ ನೂರಾರು ರೂಲ್ಸ್ ಆಂಡ್ ರೆಗ್ಯುಲೇಷನ್ಸ್. ಏನೂ ಎಂಜಾಯ್ ಮಾಡಕೆ ಆಗಲ್ಲ. ಸುಮ್ಮನೇ ಬೇರೆ ಯಾವ್ದಾದ್ರೂ ಕಾಲೇಜಿಗೆ ಸೇರ್ಕೊ. ಮೊನ್ನೆ ಅಷ್ಟೆ ಅವನೂ/ಅವಳೂ ಸಹ ಹೀಗೆ ಕೇಳ್ದಾಗ ಇದೇ ಉತ್ರ ಕೊಟ್ಟಿದೀನಿ. ನಿಂಗೂ ಮತ್ತೆ ಹೇಳ್ತಿದೀನಿ. ನಮ್ಮ ಕಾಲೇಜಿಗೆ ಮಾತ್ರ ಬರಬೇಡಾ." ಅಂತಾ ಇಷ್ಟುದ್ದ ಭಾಷಣಾನೇ ಬಿಗಿಯಬಹುದಿತ್ತು. ಆದರೆ ದೊಡ್ಡವರ ಹತ್ತಿರ ಹೀಗೆಲ್ಲಾ ಹೇಳಲಿಕ್ಕಾಗುವುದೇ..?? ಸಂದಿಗ್ಧ ಪರಿಸ್ಥಿತಿ. ಆದರೂ ತಲೆ ಕೆಡಿಸಿಕೊಳ್ಳುದೇನೂ ಅಗತ್ಯವಿಲ್ಲ. "ಅಂಕಲ್/ಆಂಟಿ, ಹೀಗೇ ಅಂತಾ ಹೇಳಕಾಗಲ್ಲ. ಇಟ್ ಡೆಪೆಂಡ್ಸ್." ಎಂದು ಬಿಟ್ಟರೆ ಮುಗಿಯಿತು.
                              ಹುಶಾರಿಲ್ಲವೆಂದು ಡಾಕ್ಟರ್ ಹತ್ತಿರ ಹೋಗಿದ್ದೀರಿ. ಯಾವ ಕಾರಣಕ್ಕಾಗಿ ಹುಷಾರು ತಪ್ಪಿತು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ. ಎಲ್ಲವನ್ನೂ ತಪಾಸಣೆ ನಡೆಸಿ ಔಷಧಗಳನ್ನು ಬರೆದುಕೊಟ್ಟ ನಂತರ ಡಾಕ್ಟರ್ ಹತ್ತಿರ ಕೇಳುತ್ತೀರಿ. ಅವರು ವಯಸ್ಸಿನಲ್ಲಿ ಹಿರಿಯರಾಗಿದ್ದು ಅನುಭವಿಯಾಗಿದ್ದರೆ, ಅಥವಾ ಆಗ ತಾನೇ ವೈದ್ಯ ವೃತ್ತಿಗೆ ಬಂದಿದ್ದರೂ ಉತ್ತಮರಾಗಿದ್ದರೆ ಇಂಥದ್ದರಿಂದಾಗಿಯೇ ಹೀಗೀಗೆ ಆಯಿತೆಂದು ನಿಖರವಾಗಿ ಹೇಳಬಲ್ಲರು. ಇಲ್ಲವೆಂದಾದರೆ ಒಂದೇ ಮಾತಿನಲ್ಲಿ ಉತ್ತರಿಸುತ್ತಾರೆ. "ಇಟ್ ಡೆಪೆಂಡ್ಸ್."
                             ಸ್ನೇಹಿತೆ/ಸ್ನೇಹಿತ ಮದುವೆಯಾಗಬಯಸಿದ್ದಾಳೆ/ನೆ. ಜೀವನ ಸಂಗಾತಿ ಹೀಗಿದ್ದರೆ ತಾವಿಬ್ಬರೂ ಪರಸ್ಪರ ಹೊಂದಿಕೊಂಡು ಸ್ವರ್ಗಕ್ಕೆ ಸಮನಾಗಿ ಸಂಸಾರ ನಡೆಸಬಹುದು ಎನ್ನುವ ಗೊಂದಲ ಅವಳಿ/ನಿಗೆ. ಇಂತಹ ಸಮಯದಲ್ಲಿ ಸ್ನೇಹಿತರಲ್ಲದೇ ಇನ್ನಾರು ತಾನೇ ಜೊತೆಗಿದ್ದು ಸಲಹೆ-ಸೂಚನೆಗಳನ್ನು ನೀಡಬೇಕು...?? ಹಾಗಾಗಿ ನಿಮ್ಮ ಹತ್ತಿರ ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ನಿಮಗಾದರೋ ಅವಳಿ/ನಿಗಿಂತ ಹೆಚ್ಚು ಗೊಂದಲವಾಗುತ್ತದೆ. ತನಗೇ ಎಂತಹ ಸಂಗಾತಿ ಬೇಕೆಂಬುದು ಇಲ್ಲಿಯ ತನಕ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ, ಇನ್ನು ಸ್ನೇಹಿತೆ/ತಗೆ ಏನೆಂದು ಹೇಳುವುದು ಎಂದು ತಲೆ ಕೆರೆದುಕೊಳ್ಳುತ್ತೀರಿ. ಆಗಲೇ ಒಂದು ತಪ್ಪಿಸಿಕೊಳ್ಳುವ ಉತ್ತರ ಹೊಳೆಯುತ್ತದೆ. "ಕರೆಕ್ಟಾಗಿ ಹೀಗೆಯೇ ಇದ್ದರೆ ಚೆನ್ನ ಎಂದು ಹೇಗೆ ಹೇಳೋದು ಮಾರಾಯ್ತಿ/ಮಾರಾಯಾ..?? ಇಟ್ ಡೆಪೆಂಡ್ಸ್." ಆ ಸ್ನೇಹಿತೆ/ತನಿಗೆ ನಿಮ್ಮ ಮಾತಿನಿಂದ ಅದೆಷ್ಟು ಸಮಾಧಾನವಾಗುವುದೋ. ಆದರೂ ಅಹುದಹುದು ಎಂದು ನಿಮ್ಮನ್ನು ಒಪ್ಪಿಕೊಳ್ಳುತ್ತಾಳೆ/ನೆ.

                                                      **********************************************

                            ಇಂತಹ ಹಲವಾರು ಸಂದರ್ಭಗಳಲ್ಲಿ ನಾವು ಇನ್ನೊಬ್ಬರಿಗೆ, ಇನ್ನೊಬ್ಬರು ನಮಗೆ "ಇಟ್ ಡೆಪೆಂಡ್ಸ್" ಎಂದು ಹೇಳುವುದು ಇತ್ತೀಚೆಗೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಏನೂ ಗೊತ್ತಿಲ್ಲವೆಂದರೆ ಇಟ್ ಡೆಪೆಂಡ್ಸ್. ಎಲ್ಲವೂ ಗೊತ್ತಿದ್ದು ಹೇಳಲು ಮನಸ್ಸಾಗುವುದಿಲ್ಲವೆಂದರೆ ಇಟ್ ಡೆಪೆಂಡ್ಸ್. ಯಾವುದೋ ಒಂದು ವಿಷಯದಿಂದ ತಪ್ಪಿಸಿಕೊಳ್ಳಬೇಕಾದರೂ ಇಟ್ ಡೆಪೆಂಡ್ಸ್. ಮಾತು ಬೇಡವಾಗಿರುವಾಗ ಇಟ್ ಡೆಪೆಂಡ್ಸ್. ಕೊನೆಗೆ ಮಾತು ಮುಂದುವರೆಯಬೇಕೆಂದಿದ್ದರೂ ಇಟ್ ಡೆಪೆಂಡ್ಸ್. ಈಗೀಗಲಂತೂ ದಿನನಿತ್ಯದ ಕೆಲಸಕಾರ್ಯಗಳ ವಿಷಯದಲ್ಲೂ ಇಟ್ ಡೆಪೆಂಡ್ಸ್. "ನಾಳೆ ಬೆಳಿಗ್ಗೆ ಎಷ್ಟು ಗಂಟೆಗೆ ಏಳ್ತೀಯಾ..??" "ಗೊತ್ತಿಲ್ಲ ಕಣೇ, ಇಟ್ ಡೆಪೆಂಡ್ಸ್."
                             ಅಂದ ಹಾಗೆ ನೀವು ಈ ಲೇಖನವನ್ನು ಓದುತ್ತಿದ್ದೀರಾ..?? ಯಾರಿಗೆ ಗೊತ್ತು, ‘ಇಟ್ ಡೆಪೆಂಡ್ಸ್’ ತಾನೇ..??

Wednesday, 6 August 2014

ಉಳಿದವರು ಕಂಡಂತೆ


ಯಾರೋ ಒಬ್ಬರು ನಮಗೆ ಮೆಚ್ಚುಗೆಯಾಗುವಂತೆ ಒಂದೆರಡು ಒಳ್ಳೆಯ ಮಾತುಗಳನ್ನಾಡಿದರೆ ಅವರು ಅಪ್ಪಟ ಚಿನ್ನವೆಂದರ್ಥವೇ..?? ಗೊತ್ತಿಲ್ಲ. ಆದರೆ ನಮಗೆ ಹಾಗೆನಿಸುತ್ತಾರಷ್ಟೆ. ಯಾಕೆಂದರೆ ಅವರು ನಮಗೆ ಕೇಳಲು ಹಿತವೆನಿಸುವಂಥ ಮಾತುಗಳನ್ನಾಡಿದರಲ್ಲ. ಅದೇ ಅವರೇನಾದರೂ ನಮಗೆ ಒಪ್ಪಿಗೆಯಾಗದ ಮಾತುಗಳನ್ನಾಡಿದ್ದರೆ..?? "ಈ ಮನುಷ್ಯ ಸರಿ ಇಲ್ಲ ಬಿಡಿ" ಎಂದು ಅಸಹನೆ, ಕೋಪವನ್ನು ತೋರಿಸದೇ ಬಿಟ್ಟೆವೆಯೇ..?? ಅಕಸ್ಮಾತ್ ಬೇರೆ ಯಾರೋ ಒಬ್ಬರು ಈ ಮೊದಲಿನವರನ್ನು ಬೆಂಬಲಿಸಿದ್ದರೆ (ನಾವು ಅವರು ಬೆಂಬಲಿಗರೆಂದಿಟ್ಟುಕೊಳ್ಳೋಣ) ನಮಗೂ ಪ್ರಿಯರು. ಇಲ್ಲವಾದರೆ ಅವರಿಗೂ ನಮಗೂ ಬೇಳೆ ಬೇಯುವುದಿಲ್ಲ. ಇಲ್ಲಿ ಅ ವ್ಯಕ್ತಿ ಹೇಗೆಂಬುದು ಯಾರಿಗೂ ತಿಳಿದಿಲ್ಲ. ಅವರ ಗುಣಾವಗುಣಗಳನ್ನು ನಾವು ಪರಾಮರ್ಶಿಸಿ ತೀರ್ಪು ಕೊಡುವುದು ನಮ್ಮ ಗುಣಾವಗುಣಗಳನ್ನು ಅವಲಂಬಿಸಿದೆಯೇ ಹೊರತು ಅವರ ನಿಜವಾದ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದು ನೋಡಿ ಹೇಳುವುದಲ್ಲ.

ನಮಗೆ ತೀರ ಹತ್ತಿರದ ಸ್ನೇಹಿತ/ತೆ ಒಬ್ಬನು/ಳು ಇರುತ್ತಾನೆ/ಳೆ ಎಂದಿಟ್ಟಿಕೊಳ್ಳಿ. ಯಾವುದೋ ಒಂದು ದಿನ ಯಾವುದೂ ಒಂದು ವಿಷಯದ ಸಲುವಾಗಿ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡುತ್ತದೆ. ವಾದ-ವಾಗ್ವಾದಗಳು ತಾರಕಕ್ಕೇರಿ ಕೊನೆಯಲ್ಲಿ ಸ್ನೇಹವನ್ನೇ ಕಳೆದುಕೊಳ್ಳುವಂತಾಗುತ್ತದೆ. ಅಷ್ಟು ಅಪ್ಯಾಯವಾದ ಸ್ನೇಹವೊಂದು ಕೇವಲ ಒಂದು ಭಿನ್ನಾಭಿಪ್ರಾಯದಿಂದಾಗಿ ಕಡಿದುಹೋಗಬೇಕೆ..?? ವ್ಯಕ್ತಿಗಿಂತ ವಿಷಯವನ್ನೇ ಮುಖ್ಯವೆಂದು ನಾವು ಪರಿಗಣಿಸುವುದೇಕೆ..?? ನಿಜವಾಗಿಯೂ ನಮಗೆ ವಿಷಯ ಮುಖ್ಯವಾಗಿರುತ್ತದೆಯೇ..?? ಅಥವಾ ಎಲ್ಲಿ ತನ್ನ ಹಮ್ಮು-ಬಿಮ್ಮುಗಳಿಗೆ ಧಕ್ಕೆಯಾಗುವುದೋ ಎಂಬ ಆತಂಕವೇ..?? ಉತ್ತರ ಕರ್ನಾಟಕ ಭಾಷೆಯಲ್ಲಿ ಹೇಳುವಂತೆ ನಮಗೆ ‘ಮೈಯ್ಯಾಗಿನ್ ಸೊಕ್ಕ್ ಏನ್’..??

ಸಾಹಿತ್ಯ, ಸಿನೆಮಾ, ನಾಟಕ, ನೃತ್ಯ, ಸಂಗೀತ - ಯಾವುದೋ ಒಂದು ಬಗೆಯ ಕಲಾ ಪ್ರಕಾರವನ್ನೇ ತೆಗೆದುಕೊಳ್ಳಿ. ಒಂದು ಕಲಾಕೃತಿಯನ್ನು ಒಬ್ಬ ವ್ಯಕ್ತಿಯೂ ಮೆಚ್ಚಿದ ಮಾತ್ರಕ್ಕೆ ಅದು ಎಲ್ಲರ ಅಭಿಪ್ರಾಯವೂ ಆಗಬೇಕೆ..?? ಅಥವಾ ಅವನು ಅದನ್ನು ಕೆಟ್ಟದ್ದೆಂದು ಹೇಳಿದರೆ ಅದು ನಿಜವಾಗಿಯೂ ಕೆಟ್ಟದ್ದಾಗುವುದೇ..?? ಅವರ ಭಾವಶಕ್ತಿಗೆ, ಯೋಚನಾಯುಕ್ತಿಗೆ ತಕ್ಕಂತೆ ಕಲಾಕೃತಿಯು ಅವರಿಗೆ ನಿಲುಕುತ್ತದೆ. ಒಬ್ಬನಿಗೆ ಅರ್ಥವಾಗಿದ್ದು ಮತ್ತೊಬ್ಬನಿಗೆ ಹೊಲಬಾಗದಿರಬಹುದು. ಒಬ್ಬನಿಗೆ ಉಚ್ಛವೆಂದು ತೋರಿದ್ದು ಮತ್ತೊಬ್ಬನಿಗೆ ಬಹಳವೇ ನೀಚಗುಣದ್ದೆಂದು ಕಾಣಬಹುದು. ತನ್ನ ಅಭಿಪ್ರಾಯವೇ ಶ್ರೇಷ್ಠವೆಂದು ಬೀಗುತ್ತಾ ಮತ್ತೊಬ್ಬರು ಹೇಳಿದ್ದು ಕನಿಷ್ಠವೆನ್ನುವುದು ಸಮಂಜಸವೇ..?? ಇಲ್ಲಿ ಶ್ರೇಷ್ಠ-ಕನಿಷ್ಠವೆನ್ನಲು ಒಂದು ಸ್ಥಿತ ಮಾನದಂಡವೆನ್ನುವುದು ಇದೆಯೇ..?? ಇಲ್ಲ, ಕೇವಲ ನಮ್ಮ ನಮ್ಮ ಗುಣಾವಗುಣಗಳಿಗೆ ಸಂಬಂಧಿಯೇ ಅಳೆಯುವುದು ತಾನೇ..??

                                   *********************************************

PERSPECTIVES....!!!!!

ದೃಷ್ಟಿಕೋನ ಅನ್ನುತ್ತಾರಲ್ಲಾ ಅದು. ಒಂದು ವಸ್ತು, ಘಟನೆ, ವ್ಯಕ್ತಿ, ಭಾವ, ಮಾತು, ನಡೆ - ಇವೆಲ್ಲವುಗಳ ಕುರಿತಾಗಿ ಒಬ್ಬೊಬ್ಬರದು ಒಂದೊಂದು ಬಗೆಯ ದೃಷ್ಟಿ, ದೃಷ್ಟಿಕೋನ. ಅವರವರ ಹುಟ್ಟು-ಬೆಳವಣಿಗೆಗಳ ಹಿನ್ನೆಲೆ, ಜೀವನ ವಿಧಾನ, ಸುತ್ತಮುತ್ತಲಿನ ವಸ್ತು, ವಿಷಯ, ವ್ಯಕ್ತಿಗಳ ಪ್ರಭಾವಗಳಿಗೆ ತಕ್ಕಂತೆ ಎಲ್ಲರದೂ ಭಿನ್ನ ಆಸಕ್ತಿ, ರುಚಿ, ವಿಚಾರಶೈಲಿ. ಹಾಗಾಗಿ ಎಲ್ಲರ ದೃಷ್ಟಿಕೋನವೂ ಸಮಾನವಾಗಿರಲು ಸಾಧ್ಯವಿದೆಯೇ..?? ನೂರಕ್ಕೆ ನೂರಾ ಒಂದು ಪ್ರತಿಶತದಷ್ಟೂ ಸಾಧ್ಯವಿಲ್ಲ. ಐದೂ ಬೆರಳುಗಳೂ ಸಮಾನವಾಗಿಲ್ಲ ಎಂಬ ವಿಷಯ ಬುದ್ಧಿ ಬೆಳೆದಾಗಿನಿಂದ ಎಲ್ಲರಿಗೂ ತಿಳಿದ ವಿಷಯವೇ ತಾನೇ..??

ಆದರೂ ಬೇರೆಯವರ ದೃಷ್ಟಿಕೋನವು ನಮ್ಮದಕ್ಕಿಂತ ಕೊಂಚ ಭಿನ್ನವಾಗಿದ್ದರೂ ನಮಗೆ ಅದನ್ನು ಒಪ್ಪಿಕೊಳ್ಳುವುದು ಬಿಡಿ, ಕನಿಷ್ಠಪಕ್ಷ ಗೌರವಿಸಲಿಕ್ಕೂ ಕೂಡ ಮನಸ್ಸಿಗೆ ಇಷ್ಟವಾಗುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ನಮ್ಮ ನಮ್ಮ ಮೂಗಿನ ನೇರಕ್ಕೇ ನೋಡಿ ಪರಾಮರ್ಶಿಸಿ ತೀರ್ಪುನೀಡುವ ಅಪ್ರಬುದ್ಧ ಮನೋಭಾವವನ್ನು ನಾವು ಬಿಡುವುದಾದರೂ ಯಾವಾಗ..?? ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶ್ರೇಷ್ಠರೂ ಹೌದು, ಅಂತೆಯೇ ಕನಿಷ್ಠರೂ ಕೂಡ. ಹಾಗಾಗಿ ಎಲ್ಲರಿಗೂ ಅವರದ್ದೇ ಆದ ಮಹತ್ವವಿದ್ದೇ ಇದೆ. ವ್ಯಕ್ತಿಯೊಬ್ಬನನ್ನು ಮನುಷ್ಯನೆಂದು ಪರಿಗಣಿಸಿ ಪ್ರೀತಿಸುವುದು, ಗೌರವಿಸುವುದು, ಸ್ಪಂದಿಸುವುದು ಉತ್ತಮ ಮಾನವೀಯತೆಯಲ್ಲವೇ..?? ಅದು ಬಿಟ್ಟು ಬೇರೆ ಎಲ್ಲ ಬಾಹ್ಯ ವಿಷಯ, ವಿಚಾರಗಳಿಗೆ ಮಹತ್ವ ಕೊಟ್ಟು ನಾವೂ ಮಾನವ ಅಂಶವನ್ನು ಬಿಟ್ಟು ಹೆಜ್ಜೆ ಹಾಕುತ್ತಿಲ್ಲವೇ..?? ಅಷ್ಟಕ್ಕೂ ಎಲ್ಲವೂ, ಎಲ್ಲರೂ ‘ಉಳಿದವರು ಕಂಡಂತೆ’ ತಾನೇ..??