Monday, 7 July 2014

ಇದು ‘ಕೇಂದ್ರ’ದ ‘ವೃತ್ತಾಂತ’


                           ಸರಿಯಾಗಿ ಎರಡು ವರ್ಷಗಳ ಹಿಂದೆ ರಜಾ ದಿನಗಳಲ್ಲಿ ಶಿರಸಿಗೆ ಹೋದಾಗ ಭೇಟಿಯಾಗಿದ್ದ ಊರಿನ ಮಾವ ಒಬ್ಬರು ನನಗಿರುವ ಓದಿನ ಹುಚ್ಚನ್ನು ತಿಳಿದು ಪ್ರಶ್ನಿಸಿದ್ದರು, "ತಂಗಿ, ಕಥೆಯಾದಳು ಹುಡುಗಿ ಪುಸ್ತಕವನ್ನು ಓದಿದ್ದೀಯಾ..?? " ನನಗೆ ಯಶವಂತ ಚಿತ್ತಾಲರ ಬಗ್ಗೆಯೂ ಅವರ ಕಥೆಯಾದ ಹುಡುಗಿಯ ಬಗ್ಗೆ ಕೇಳಿ ಮಾತ್ರವೇ ಗೊತ್ತಿತ್ತು. ಅವರ ಯಾವ ಪುಸ್ತಕಗಳನ್ನೂ ನಾನು ಓದಿರಲಿಲ್ಲ. ನಾನು ನಕಾರಾತ್ಮಕವಾಗಿ ಉತ್ತರಿಸಿದಾಗ ಮಾವ ಹೇಳಿದ್ದಿಷ್ಟು, "ಕೂಸೆ, ಮೊದಲು ಆ ಪುಸ್ತಕವನ್ನು ಓದು. ಚಿತ್ತಾಲರ ಬರಹಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಸಾಣೆ ಹಿಡಿದಂತೆ." ಅಂದಿನಿಂದಲೇ ಚಿತ್ತಾಲರ ಹುಡುಗಿಗಾಗಿ ನನ್ನ ಹುಡುಕಾಟ ಪ್ರಾರಂಭವಾಯಿತು.
                         ಬರೋಬ್ಬರಿ ಎರಡು ವರ್ಷಗಳ ಕಾಲ ನಾನು ಬಿಡದೇ ಹುಡುಕಾಡಿದ್ದಷ್ಟೆ ಬಂತೇ ಹೊರತು ಹುಡುಗಿ ನನ್ನ ಕಣ್ಣಿಗೂ ಕಾಣಿಸಲಿಲ್ಲ. ಮೊನ್ನೆ ಮೊನ್ನೆ ಅಂದರೆ ಕೇವಲ ೨೦ ದಿನಗಳ ಹಿಂದೆಯಷ್ಟೆ ಹುಡುಗಿ ಕೊನೆಗೂ ನನ್ನ ಕೈ ಸೇರಿದ್ದಳು. ಅದರಲ್ಲಿನ ಒಂದೊಂದು ಕಥೆಗಳನ್ನೂ ಓದುತ್ತಾ ಹೋದಂತೆ ನಾನು ನಾನಾಗಿ ಉಳಿದಿರದೇ ನನಗೇ ಅರಿಯಲಾಗದ ಬೇರೆಯೇ ಒಂದು ಹುಡುಗಿಯಾಗುತ್ತಿದ್ದೆ. ಆ ಪುಸ್ತಕವನ್ನು ಕುರಿತು ಬರೆಯುವಷ್ಟು ಪ್ರಬುದ್ಧತೆ ನನಗಿಲ್ಲವಾದುದರಿಂದ ಇಷ್ಟು ಮಾತ್ರವೇ ಹೇಳಬಲ್ಲೆ. ಓದುಗರು ತಮ್ಮನ್ನೇ ತಾವು ಮರೆಯುವಂತೆ ಅತಿಯಾಗಿ ಗುಂಗು ಹಿಡಿಸುವ ಬರಹ ಚಿತ್ತಾಲರದ್ದು. ಅಷ್ಟು ಆಳವಾದ ಬರಹ ಸುಲಭ ಸಾಧ್ಯವಲ್ಲವೆಂದೂ, ಇದು ದೈವ ದತ್ತವಾಗಿಯೇ ಬಂದ ಪ್ರತಿಭೆಯೆನ್ನುವುದು ಯಾರಿಗಾದರೂ ಅರ್ಥವಾಗುವ ಸತ್ಯ ಸಂಗತಿ. ಶಿವರಾಂ ಕಾರಂತ, ಎಸ್. ಎಲ್. ಭೈರಪ್ಪ, ವ್ಯಾಸರಾಯ ಬಲ್ಲಾಳರ ನಂತರ ನನಗೆ ಹುಚ್ಚು ಹಿಡಿಸುವಂಥ ಬರಹ ಕಂಡಿದ್ದು ಚಿತ್ತಾಲರ ಕೃತಿಗಳಲ್ಲಿ. (ಬೇರೆ ಹಲವಾರು ಸಾಹಿತಿಗಳೂ ಈ ಸಾಲಿನಲ್ಲಿ ನಿಲ್ಲುವಂಥವರಾಗಿರಬಹುದು. ನನಗೆ ತಿಳಿದಿಲ್ಲ. ತಿಳಿದಿದ್ದವರು ದಯವಿಟ್ಟು ಹೇಳಿ.)
                         ನಂತರ ನಾನು ಕೈಗೆತ್ತಿಕೊಂಡಿದ್ದು ಅವರ ಕಾದಂಬರಿ ‘ಕೇಂದ್ರ ವೃತ್ತಾಂತ’ವನ್ನು. ಓದುತ್ತಾ ಹೋದಂತೆಯೇ ಅದರ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಮನಸ್ಸಾಯಿತು. ಓದು ಮುಗಿಸಿ ಪುಸ್ತಕವನ್ನು ಕೆಳಗಿಟ್ಟ ತಕ್ಷಣವೇ ಕೀ ಪ್ಯಾಡ್ ಒತ್ತಲು ಮುಂದಾದೆ.

                                     *******************************

                       ನೆರೆಮನೆಯ ಹುಡುಗಿಯೊಬ್ಬಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಅವಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಅನುಕಂಪದ ದೃಷ್ಟಿಯಿಂದ ಆಸ್ಥೆ ತೋರಿಸಿದ ಯುವಕನೊಬ್ಬನ ಬಾಳಿನಲ್ಲಿ ತದನಂತರ ನಡೆಯುವ ಘಟನೆಗಳೆಲ್ಲವೂ ಆ ದುರಂತ ಪ್ರಕರಣದೊಂದಿಗೆ ಥಳುಕು ಹಾಕಿಕೊಂಡು ಕೊನೆಯಲ್ಲಿ ಎಲ್ಲರೂ ಆತನನ್ನೇ ಇಡೀ ಪ್ರಕರಣದ ಕೇಂದ್ರವೆನ್ನುವಂತೆ ಭಾವಿಸುವುದು ಕಾದಂಬರಿಯ ಒಂದು ಮಗ್ಗುಲಾದರೆ, ತೆರೆಯ ಹಿಂದೆ ಇದ್ದುಕೊಂಡು ಕೇವಲ ಊಹೆಗಳ ಆಧಾರದ ಮೇಲೆ ಆ ಯುವಕ ಬರೆಯುವ ಮೂಕ ಪತ್ರವೊಂದು ಹೇಗೆ ಭೂತದೊಂದಿಗೆ ನಂಟು ಹೊಂದಿ ರಾಜಕೀಯ ಬಣ್ಣ ತಳೆದು ಇಲ್ಲಸಲ್ಲದ ಉಪದ್ಯಾಪಗಳಿಗೆ ಕಾರಣವಾಗುವುದು ಇನ್ನೊಂದು ಮಜಲು. ಕಥೆ ಸಾಮಾನ್ಯವಾಗಿದ್ದು ಯಾರ ಬದುಕಿನಲ್ಲಾದರೂ ನಡೆಯುವಂಥದ್ದಾದರೂ ಅದರ ನಿರೂಪಣಾ ಶೈಲಿ ಭಿನ್ನವಾಗಿದ್ದು ಪುಟದಿಂದ ಪುಟಕ್ಕೆ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಾ ಓದಿಸಿಕೊಂಡು ಹೋಗುತ್ತದೆ. ಓದಿ ಮುಗಿಸಿದ ನಂತರ ನಾನು ಅರ್ಥೈಸಿಕೊಂಡ ಸಾರಾಂಶವಿಷ್ಟೆ:
                              "ಮನುಷ್ಯನ ಜೀವನವೊಂದು ವೃತ್ತವಾದರೆ ಅದರ ಕೇಂದ್ರದಲ್ಲಿರುವುದು ವಾಸ್ತವ. ಆದರೆ ಮನುಷ್ಯ ಜೀವಿಸುವುದು ತನ್ನದೇ ಆದ ಕಲ್ಪನೆ, ಊಹಾ-ಪೋಹಗಳಿಂದ ರಚಿತವಾದ ವೃತ್ತದ ಪರಿಧಿಯ ಮೇಲೆ. ತಾನೇ ಸೃಷ್ಟಿಸಿಕೊಳ್ಳುವ ಎಲ್ಲ ಬಗೆಯ ಕಲ್ಪನೆಗಳು, ಊಹೆಗಳು ಭೂತದ ಕೆಲವು ಪುಟಗಳಲ್ಲಿ ದಾಖಲಾಗಿರಬಹುದು, ಇಲ್ಲವೇ ಭವಿಷ್ಯದ ಸಾಲುಗಳಲ್ಲಿ ರೂಪುಗೊಳ್ಳುತ್ತಿರಬಹುದು. ಹಾಗಾದಾಗ ಅವು ಇನ್ನೊಬ್ಬರ ಬದುಕಿನ ವೃತ್ತದ ಕೇಂದ್ರಗಳಾಗುತ್ತವೆ. ಇದರಿಂದಾಗಿಯೇ ಮನುಷ್ಯ ತೊಂದರೆ, ತಾಪತ್ರಯಗಳನ್ನು ಅನುಭವಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ಬದುಕಿನ ವಾಸ್ತವದ ಕೇಂದ್ರದಲ್ಲಿ ನಾವು ಜೀವಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮ ತೊಳಲಾಟ, ಪರದಾಟ ತಪ್ಪಿದ್ದಲ್ಲ."

                                  *********************************

                              ನಾನು ಬಹಳ ತಡವಾಗಿ ಚಿತ್ತಾಲರ ಬರಹಗಳನ್ನು ಓದಲು ಪ್ರಾರಂಭಿಸಿದೆನೆಂದು ಬೇಸರವಾಗುತ್ತಿದೆ. ಇನ್ನು ಮತ್ತೆ ಸಮಯ ವ್ಯರ್ಥ ಮಾಡುವ ಪ್ರಶ್ನೆಯೇ ಇಲ್ಲ. ಅವರ ಎಲ್ಲ ಕೃತಿಗಳನ್ನು ಸಾಧ್ಯವಾದಷ್ಟು ಬೇಗ ಓದಿ ಮುಗಿಸಿ ಅವರ ಬರಹಗಳು ನನಗೆ ಹಿಡಿಸಿರುವ ಹುಚ್ಚನ್ನು ಶಮನಮಾಡಿಕೊಳ್ಳಬೇಕು. ಚಿತ್ತಾಲರ ಬರವಣಿಗೆಯನ್ನು ಈಗಾಗಲೇ ಉಂಡು ತೇಗಿರುವವರು ನಿಜಕ್ಕೂ ಪುಣ್ಯವಂತರು. ಇಲ್ಲವೆಂದರೆ ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ. ಅವರ ಬರವಣಿಗೆಯ ಅದ್ಭುತ ಲೋಕದಲ್ಲಿ ಕಳೆದುಹೋಗಲು ಸಿದ್ಧರಾಗಿ.


No comments:

Post a Comment