Monday, 7 July 2014

ಅಯ್ಯೋ ನೆಗಡಿ


ಅಯ್ಯೋ, ಯಾಕಾದರೂ ಬಂತೋ ಈ ನೆಗಡಿ
ಇದರ ದೆಸೆಯಿಂದ ಅದೆಂಥ ಕಿರಿಕಿರಿ ನೋಡಿ
ಎತ್ತಲೂ ಹೋಗುವಂತಿಲ್ಲ, ಕೈ ಕಟ್ಟಿ ಕೂರುವಂತೆಯೂ ಇಲ್ಲ
ಕರವಸ್ತ್ರ ಹಿಡಿದು ಮೂಗು ಒರೆಸುವುದೇ ಕೆಲಸವಾಯಿತಲ್ಲ

ದಿನವಿಡೀ ಆಕ್ಷೀ ಎನ್ನುವುದೀಗ ಹೊಸ ಜಪ
ಕೆಲಸಗಳಿಂದ ತಪ್ಪಿಸಿಕೊಳ್ಳಲು ಇದೊಂದು ಒಣಾ ನೆಪ
ಅತ್ತ ಮೇಲೆ ತಲೆ ಹಿಡಿದುಕೊಂಡು ಭಾರವಾದರೆ
ಇತ್ತ ಕೆಳಗೆ ಗಂಟಲು ಒಡೆದು ಮಾತು ಬಾರದಾಗುವುದಲ್ಲ

ಕ್ರೋಸಿನ್, ಸಿರಪ್ಪುಗಳಿಗೆಲ್ಲ ಇದು ರಮ್ಯ ಚೈತ್ರ ಕಾಲ
ಏನೆಲ್ಲಾ ಕುಡಿದರೇನು ಎಷ್ಟು ಮಾತ್ರೆಗಳನ್ನು ನುಂಗಿದರೇನು
ಔಷಧಿ ತೆಗೆದುಕೊಂಡರೆ ಕನಿಷ್ಠವಾದರೂ ಒಂದು ವಾರ
ಇಲ್ಲವೆಂದರೆ ಏಳು ದಿನಗಳ ತನಕ ತಪ್ಪದು ರಾಹುಕಾಲ

ತಂಪು ಅತಿಯಾಗಿ ಕೆಂಪಾಗಿಹುದು ಮುಖಾರವಿಂದವು
ಉರಿದುರಿದು ಕಪ್ಪಗಾಗಿದೆ ಕಣ್ಣುಗಳಲ್ಲಿನ ಹೊಳಪು
ಅದು ಖಾರ, ಇದು ಆಯಿಲು ಎನ್ನುವ ಪಥ್ಯದ ಪಾಠ
ಹೊಟ್ಟೆಯ ಭಾಗ್ಯಕ್ಕೂ ಕೊಕ್ಕೆ ಹಾಕುವ ಕಳ್ಳ ಆಟ

ಎಷ್ಟಾದರೂ ಪುಟ್ಟ ಮೂಗು ನಮ್ಮದೆ ತಾನೇ
ಸಹಿಸಿಕೊಳ್ಳುವುದರ ಹೊರತು ಬೇರೆ ದಾರಿ ನಾ ಕಾಣೆ
ಶೀತವಾಗಿಹ ಉಸಿರನ್ನು ಕೊಂಚ ಬೆಚ್ಚಗೆ ಮಾಡಿ
ಬೇರೇನೂ ಬೇಡ, ಸುಮ್ಮನೆ ಹೊದ್ದು ಮಲಗಿಬಿಡಿ


2 comments:

  1. ಪದ್ಯವಾಗಗಲು ವಿಷಯ ಯಾವುದಾದರೇನು ಅಲ್ಲವೇ??
    ನೆಗಡಿಯ ಮೇಲೊಂದು ಪದ್ಯ, ಗರಿಗರಿ ದೋಸೆಯ ಮೇಲೊಂದು ಪದ್ಯ.
    ಒಮ್ಮೆ ಸಿ ಸಿ ಟಿ ವಿ ಮೇಲಾದರೆ, ಮಗದೊಮ್ಮೆ ರೈಟರ್ಸ್ ಮೇಲೆ ಪದ್ಯ.

    ReplyDelete
  2. ನೆಗಡಿಯಂಥ ಖಾಯಿಲೆ ಇಲ್ಲ
    ಬುಗಡಿಯಂಥ ವಾಲೆ ಇಲ್ಲ.

    ReplyDelete