Thursday, 31 July 2014

ಚಲನೆ ಮೂಡಿಸದ 'ಯಾನ'


                                     ಆಗ ನಾನು ಆರನೇ ತರಗತಿಯಲ್ಲಿದ್ದೆ. ದಸರಾ ರಜೆಯ ಸಮಯದಲ್ಲಿ ಒಂದು ದಿನ ಸಂಜೆಯ ಹೊತ್ತಿನಲ್ಲಿ ಓದಲು ತೆಗೆದುಕೊಂಡಿದ್ದ ನಾಯಿ ನೆರಳು ರಾತ್ರಿ ೧೨.೩೦ರ ತನಕವೂ ನನ್ನನ್ನು ನಿದ್ರಿಸಲು ಬಿಡಲಿಲ್ಲ. ನೆರಳಿನ ಗುಂಗು ಅದ್ಯಾವ ಪರಿಯಿತ್ತೆಂದರೆ ನಾನು ಮರುದಿನ ಬೆಳಿಗ್ಗೆ ೫ ಗಂಟೆಗೇ ಎದ್ದು ಕೂತು ಓದನ್ನು ಮುಂದುವರೆಸಿದ್ದೆ. ಒಂಭತ್ತನೇ ತರಗತಿಯಲ್ಲಿ ಕ್ಲಾಸಿನಲ್ಲಿ ಕೂತು ನೆಲೆ ಓದುತ್ತಿದ್ದೆ. ಮಧ್ಯಾನ್ಹ ಊಟ ಮುಗಿಸಿ ಓದಲು ಪ್ರಾರಂಭಿಸಿದ್ದೊಂದೇ ಗೊತ್ತು. ಆಮೇಲೆ ಅದ್ಯಾವಾಗಲೋ ಸ್ನೇಹಿತೆಯೊಬ್ಬಳು ಬಂದು "ಎಂಥದೇ, ಬುಕ್ ಓದ್ತಾ ಇವತ್ತೊಂದಿನ ಇಲ್ಲೇ ಉಳಿತೀಯೋ ಹೇಗೆ..??" ಎಂದಾಗಲೇ ನನಗೆ ಎಚ್ಚರ. ೪.೩೦ ಆಗಿ ಶಾಲೆಯ ಬೆಲ್ ಹೊಡೆದು ಉಳಿದವರೆಲ್ಲರೂ ಅದಾಗಲೇ ಬ್ಯಾಗ್ ಹೆಗಲಿಗೇರಿಸಿಕೊಂಡು ಹೋದರೆಂಬ ಸಂಗತಿ ಅರಿವಾದದ್ದು. ಕಾಲೇಜಿನಲ್ಲಿ ಲೈಬ್ರರಿಯ ಓವರ್ ನೈಟ್ ಕಾರ್ಡಿನಲ್ಲಿ ಎಲ್ಲರೂ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್ ಬುಕ್ಸ್ ತೆಗೆದುಕೊಂಡರೆ ನಾನು ಮಾತ್ರ ಶಿಸ್ತಾಗಿ ಭೈರಪ್ಪನವರ ಕಾದಂಬರಿಗಳನ್ನು ತರುತ್ತಿದ್ದೆ. ಕೊನೆಗೆ ನಾನೇ ಇಟ್ಟುಕೊಂಡು ಲಹರಿ ಎನ್ನುವ ಹೆಸರೂ ಕೂಡ ಅವರ ಅಂಚು ಕಾದಂಬರಿಯ ಗುಂಗಿನಲ್ಲಿ ತೇಲುತ್ತಿದ್ದಾಗ ಅತೀ ಇಷ್ಟವಾಗಿ ಇಟ್ಟುಕೊಂಡಿದ್ದು.
                         ಎಸ್. ಎಲ್. ಬಿ.ಯವರ ಅಭಿಮಾನಿಗಳೆಲ್ಲರಿಗೂ ಇಂಥ ಅನುಭವಗಳು ಆಗಿಯೇ ತೀರಿವೆ. ಅವರ ಕಾದಂಬರಿಗಳನ್ನು ಓದುತ್ತಾ ಹೋದಂತೆಲ್ಲ ಅಲ್ಲಿಯ ಪಾತ್ರಗಳೆಲ್ಲವೂ ಒಂದೊಂದು ಮಗ್ಗುಲಿನಲ್ಲಿ ನಮ್ಮನ್ನೇ ಬಿಂಬಿಸುವಂತೆ ತೋರುತ್ತವೆ. ಕೆಲವು ಸಾಲುಗಳು ಮಾತನ್ನೇ ಮರೆಯುವಷ್ಟು ಮೂಕವಾಗಿಸುತ್ತವೆ. ಘಟನೆಗಳು ನಮ್ಮ ಕಣ್ಣೆದುರಲ್ಲೇ ನಡೆದಂತೆ ಭಾಸವಾಗುತ್ತದೆ. ಕಾದಂಬರಿಯನ್ನೊಂದು ಮತ್ತೆ ಮತ್ತೆ ಓದಿದಂತೆಲ್ಲಾ ಹೊಸ ಹೊಸ ಅರ್ಥಗಳು, ವಿಚಾರಗಳು ಕಾಡತೊಡಗುತ್ತವೆ. ಕನಿಷ್ಠ ಪಕ್ಷ ಒಂದು ವಾರದ ತನಕ ಓದುಗರನ್ನು ತಮ್ಮ ಬರಹದ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಭೈರಪ್ಪನವರದ್ದು. ಹೀಗಿರುವಾಗ ಯಾನ ಹೇಗಿರಬಹುದು ಎನ್ನುವ ಕುತೂಹಲದ ಹಕ್ಕಿಯು ತಿಂಗಳುಗಳ ಹಿಂದೆಯೇ ಗರಿಗೆದರಿ ಬಿಚ್ಚಿಕೊಂಡಿತ್ತು. ಬಿಡುಗಡೆಯ ದಿನವೇ ಹದಿನೈದು ಸಾವಿರ ಪ್ರತಿಗಳು ಮಾರಾಟವಾಗಿ ಮೂರನೇ ಮುದ್ರಣಕ್ಕೆ ಅಣಿಯಾಗುತ್ತಿದೆಯೆಂಬ ಸುದ್ದಿ ಕೇಳಿದ ಮೇಲಂತೂ ನಿಲ್ಲದ ಚಡಪಡಿಕೆ.

                                   **********************************

                     ವೈಜ್ಞಾನಿಕ ಸಂಶೋಧನೆಯ ಸಲುವಾಗಿ ತಂದೆ, ತಾಯಿ, ಸಹೋದರ, ಸಹೋದರಿ, ಬಂಧು, ಬಾಂಧವರು, ಕೊನೆಯಲ್ಲಿ ಈ ಭೂಮಿಯನ್ನೇ ಬಿಟ್ಟು ಇನ್ನೆಂದೂ ಹಿಂದಿರುಗಿ ಬಾರದಂತೆ ಸುಮಾರು ಮೂವತ್ತು-ನಲವತ್ತು ಸಾವಿರ ವರ್ಷಗಳ ಯಾನಕ್ಕೆ ಒಂದು ಗಂಡು, ಒಂದು ಹೆಣ್ಣು ಹೊರಡುತ್ತಾರೆ. ಸೂರ್ಯನ ಗುರುತ್ವದ ಆಚೆ ಹೋಗಿ ಹತ್ತಿರದ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದ ವಲಯದಲ್ಲಿ ಯಾವುದಾದರೂ ಗ್ರಹವಿದೆಯೇ, ಇದ್ದರೆ ಮನುಷ್ಯ ವಾಸಕ್ಕೆ ಯೋಗ್ಯವಾಗಿದೆಯೇ ಅನ್ನುವುದನ್ನು ಅನ್ವೇಷಿಸುವ ಈ ಯಾನದಲ್ಲಿ, ಯಾನಿಗಳು ಒಂದುಗೂಡಿ ಒಂದು ಹೆಣ್ಣು ಒಂದು ಗಂಡು ಮಗುವನ್ನು ಪಡೆದು, ಆ ಮಕ್ಕಳಿಗೆ ನೌಕೆಯ ಯಂತ್ರ ತಂತ್ರಗಳ ವಿಜ್ಞಾನ, ಖಗೋಳ ಶಾಸ್ತ್ರಗಳನ್ನೆಲ್ಲ ಕಲಿಸಿ ಅವರು ಸಂಶೋಧನೆಯನ್ನು ಮುಂದುವರೆಸುವಂತೆ ಅವರನ್ನು ತರಬೇತುಗೊಳಿಸಬೇಕು. ವಯಸ್ಸಿಗೆ ಬಂದಮೇಲೆ ಆ ಗಂಡು ಹೆಣ್ಣುಗಳು ಕೂಡಿ ಮುಂದಿನ ತಲೆಮಾರನ್ನು ಹುಟ್ಟಿಸಿ ಬೆಳೆಸಿ ಎಲ್ಲ ವಿದ್ಯೆಯನ್ನು ಕಲಿಸಿ ತರಬೇತುಗೊಳಿಸಬೇಕು. ಸಾವಿರ ತಲೆಮಾರುಗಳವರೆಗೆ ಇದೇ ಪ್ರಕ್ರಿಯೆ ನಡೆಯುತ್ತಾ ಸಂಶೋಧನೆಯನ್ನು ಕೈಗೊಳ್ಳಬೇಕು. ಈ ಯೋಜನೆಯಲ್ಲಿ ಎರಡನೇ ತಲೆಮಾರಿನ ಯಾನಿಗಳಿಗೆ ಕಾಡುವ ನೈತಿಕ ತಳಹದಿಯ ಪ್ರಶ್ನೆಗಳು, ಅವುಗಳಿಗೆ ಅವರು ಉತ್ತರ ಹುಡುಕುವುದು, ಕೊನೆಯಲ್ಲಿ ಮೊದಲು ಕಾಡಿದ ಪ್ರಶ್ನೆಗಳೇ ಗೊಂದಲದ ಗೂಡಾಗಿ ಶೂನ್ಯವೇ ಉತ್ತರವಾಗುವುದು ಯಾನದ ಕಥೆ.
                            ಈ ಕಥೆ ನಡೆಯುವುದು ಸುಮಾರು ಮೂವತ್ತೇಳು ವರ್ಷಗಳ ನಂತರದಲ್ಲಿ.ಈಗಿನ ಕಾಲದಲ್ಲೇ ನೀತಿ, ನಿಯಮಗಳು, ಮೌಲ್ಯಗಳು, ನಂಬಿಕ, ಶ್ರದ್ಧೆಗಳು ಅರ್ಥ ಕಳೆದುಕೊಳ್ಳುತ್ತಿರುವ ವಾಸ್ತವದ ಕಹಿ ಸತ್ಯದ ನಡುವೆ, ಮೂರೂವರೆ ದಶಕಗಳ ನಂತರ ಅವುಗಳ ಅಸ್ತಿತ್ವಕ್ಕೆ ಮಹತ್ವ ದೊರಕೀತೇ ಎಂಬ ಪ್ರಶ್ನೆ ಕಾದಂಬರಿ ಓದುವಾಗ ಮನಸ್ಸಿನಲ್ಲಿ ಮೂಡುತ್ತದೆ. ನನಗಂತೂ ಎರಡು ತಿಂಗಳ ಹಿಂದೆಯಷ್ಟೆ ಓದಿದ ಸಾಲುಗಳು ನೆನಪಿಗೆ ಬಂದವು. "ಮುಂದಿನ ಜನ್ಮ ನೀನು ಹುಟ್ಟೋ ಹೊತ್ತಿಗೆ ಭಾರತದಲ್ಲಿ, ಗಂಡ, ಹೆಂಡತಿ, ಅಪ್ಪ, ಅಮ್ಮ, ತಂಗಿ, ಅಣ್ಣ ಈ ಸಂಬಂಧಗಳೇ ಇರಲ್ಲ. ಯಾರು ಯಾರನ್ನ ಬೇಕಾದರೂ ಕಟ್ಟಿಕೊಳ್ಳಬಹುದು ಇಟ್ಟುಕೊಳ್ಳಬಹುದು." ಹೀಗೆ ಆಗದಿದ್ದರೆ ಒಳ್ಳೆಯದೆನ್ನುವುದು ಸತ್ಯವಾದರೂ ಹೀಗಾದರೂ ಅದರಲ್ಲಿ ಅಚ್ಚರಿಯಿಲ್ಲ.

                                *********************************

                        ಕಾದಂಬರಿ ಹೇಗಿದೆ ಎನ್ನುತ್ತಾ ಕೈಗೆತ್ತಿಕೊಂಡು ೫೦-೬೦ ಪುಟಗಳು ಓದುವಷ್ಟರಲ್ಲೇ ತೀವ್ರ ನಿರಾಶೆಯಾಗುತ್ತದೆಯೆಂದು ಹೇಳಲೂ ಬೇಸರವಾದರೂ ಒಪ್ಪಿಕೊಳ್ಳಲೇಬೇಕು. ಕೆಲವು ೪-೫ ಸಾಲುಗಳನ್ನು ಬಿಟ್ಟರೆ ಯಾನವು ಭೈರಪ್ಪನವರ ಸಾಂಪ್ರದಾಯಿಕ ಓದುಗರ ಬುದ್ಧಿ, ಭಾವಗಳ ಮೇಲೆ ಯಾವ ಬಗೆಯ ಪ್ರಯಾಣವನ್ನು ಮಾಡುವುದಿಲ್ಲ. ಕಥೆಯಲ್ಲಿ ಅಷ್ಟೇನೂ ಗಟ್ಟಿತನವಿಲ್ಲ. ಪಾತ್ರಗಳಲ್ಲಿ ಸತ್ವ ಕಾಣಿಸುವುದಿಲ್ಲ. ಎಂದಿನಂತೆ ಮನುಷ್ಯನ ಅಂತರ್ಮುಖತೆ ಪಾತ್ರಗಳಲ್ಲಿ ಕಂಡುಬಂದರೂ ಅವು ಓದುಗರನ್ನು ಅಂತರ್ಮುಖರನ್ನಾಗಿಸುವುದಿಲ್ಲ. ವಾರಗಳ ತನಕ ಬಿಡಿ, ಒಂದು ದಿನದ ಮಟ್ಟಿಗೂ ಯಾನ ಕಾಡುವುದಿಲ್ಲ.
                        ಓದುತ್ತಾ ಓದುತ್ತಾ ಹೋದಂತೆ ಇದು ಭೈರಪ್ಪನವರ ಯಾವತ್ತಿನ ಬರವಣಿಗೆಯಲ್ಲ ಎಂದು ಅರಿವಾಗಿ ಮುಂದೆ ಓದಲು ಮನಸ್ಸು ಒಪ್ಪದೇ ಇನ್ನೆಷ್ಟು ಪುಟಗಳು ಉಳಿದುಕೊಂಡಿವೆ ಎಂದು ಲೆಕ್ಕ ಹಾಕುವಂತಾಗುತ್ತದೆ. ಕೈಗೆತ್ತಿಕೊಂಡಿದ್ದರಿಂದ ಮುಗಿಸೋಣ ಎಂದು ಓದನ್ನು ಮುಂದುವರೆಯುವಂತೆ ಮನಸ್ಸಿಗೆ ಬಲವಂತದ ಮಾಘಸ್ನಾನ ಮಾಡಿಸಿದ ಹಾಗೆ ಒಂದೆರಡು ಸನ್ನಿವೇಶಗಳು ಅನಾವಶ್ಯಕವಾಗಿತ್ತಲ್ಲವೇ ಎನ್ನುವಂತಿವೆ. ವಿಜ್ಞಾನದ ಆಸಕ್ತರಿಗೆ ಸುಲಭವಾಗಿ ಓದಿಸಿಕೊಂಡು ಹೋಗಬಹುದೇನೋ. ಆದರೆ ಎಸ್. ಎಲ್. ಬಿ. ಸಾಹಿತ್ಯದ ಅಭಿಮಾನಿಗಳಿಗೆ ಮಾತ್ರ ಹಸಿವಾದವನಿಗೆ ಅರೆ ತುತ್ತು ಉಣಬಡಿಸಿ ಕಳಿಸಿದಂತಾಗುತ್ತದೆ.
                        ಆದರೆ ಕಾದಂಬರಿಯ ಸಲುವಾಗಿ ಅವರು ಮಾಡಿದ ಅಧ್ಯಯನವಿದೆಯಲ್ಲ, ಅದನ್ನು ಅರಿತುಕೊಂಡಾಗ ಮಾತ್ರ ಅವರ ಕುರಿತು ಹೆಚ್ಚಾಗಿಯೇ ಹೆಮ್ಮೆ ಮೂಡುತ್ತದೆ. ಬಿಸಿ ರಕ್ತದ ವಯಸ್ಸಿನಲ್ಲೂ ನಮಗೆ ಏನನ್ನು ಕಲಿಯುವ ತಿಳಿಯುವ ಆಸಕ್ತಿಯಿಲ್ಲ. ಪಟ್ಟು ಹಿಡಿದು ಕೂತು ಅಧ್ಯಯನ ಮಾಡುವುದು ಬಿಡಿ, ಓದಲು ಪುಸ್ತಕ ಹಿಡಿಯುವಷ್ಟು ತಾಳ್ಮೆಯೇ ಇಲ್ಲ. ಅಂಥದ್ದರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಕಾದಂಬರಿಯ ಬರಹಕ್ಕಾಗಿ ಖಗೋಳ ವಿಜ್ಞಾನದ ಕುರಿತು ಎಷ್ಟೆಲ್ಲಾ ಅಭ್ಯಸಿಸಿದರಲ್ಲ. ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ ಎನ್ನುವುದನ್ನು ಒಪ್ಪಿಕೊಳ್ಳದೆ ಇರಲಾದೀತೇ..?? ಕನ್ನಡಮ್ಮ ನಿಜಕ್ಕೂ ಧನ್ಯಳೇ, ಕನ್ನಡಿಗರು ಸತ್ಯವಾಗಲೂ ಪುಣ್ಯವಂತರೇ.


14 comments:

 1. ನಮ್ಮಲ್ಲಿ ನಿರೀಕ್ಷೆ ಅತಿಯಾದಾಗ, ಭ್ರಮನಿರಶನ ಜಾಸ್ತಿ. ಮತ್ತೆ ನಾವು ನಮ್ಮಷ್ಟಕ್ಕೆ ನಾವೇ ಪೂರ್ವಗ್ರಹ ಪೀಡಿತರಾಗಿ ವಿಷಯಗಳನ್ನು ಅಪೇಕ್ಷಿಸಲು ಶುರು ಮಾಡಿದರೆ, ಯಾವ ವಿಷಯವೂ ನಮ್ಮನ್ನು ತೃಪ್ತಿಗೊಳಿಸುವುದಿಲ್ಲ. ಆಫ್-ಬೀಟ್ ವಿಷಯಗಳು ಜನರನ್ನು ಉತ್ತೆಜನಗೊಳಿಸುವುದಿಲ್ಲ, ಅದರಲ್ಲೂ ಮಡಿವಂತಿಯನ್ನು ಪ್ರಶ್ನಿಸಿಬಿಟ್ಟರೆ ದೇವರೇ ಗತಿ...

  ReplyDelete
  Replies
  1. ಪೂರ್ವಾಗ್ರಹ ಪೀಡಿತ, ಅತಿ ನಿರೀಕ್ಷೆ - ಇವುಗಳಿಂದ ನಾನು ಹೊರತಾಗಿಯೇ ಯಾನವನ್ನು ಓದಿದ್ದೇನೆ. ಆದರೆ ಅದನ್ನು ಓದುವಾಗ ಇದು ಭೈರಪ್ಪನವರು ಬರೆದದ್ದು ಎನ್ನುವ ಸಂಗತಿ ಮಾತ್ರ ತಲೆಯಲ್ಲಿದ್ದದ್ದು. ಅವರ ಎಲ್ಲಾ ಕಾದಂಬರಿಗಳನ್ನು ನೀವು ಓದಿದ್ದೀರೆಂದಾದರೆ ಮಾತ್ರ ಯಾನದಿಂದಾಗುವ ನಿರಾಶೆ ಎಂಥದ್ದು ಎಂಬ ಸೂಕ್ಷ್ಮ ಅರ್ಥವಾದೀತು.

   Delete
  2. Lahari,
   I totally agree with u. I purchased first copy at Ankita Book stall and by keeping aside all my official and personal works, I read 'Yaana'. I read almost all his books, and I am a die-hard fan of SLB. But, neevu helidante 'Yaana' kaaduvudilla, tripti sigalilla.. antha gattitana illa anta nanagoo annisitu.

   Delete
  3. Lahariyavare.. Nanagantoo yaana tumbaa ishtavaayitu. varshada magu ide. belagininda sanjeya biduvirada naukariyide. aadaroo tanda mooru dinagalalli mugisiddene. neeve annuva haage, naanu vignyaanaasaktalu. nammellara necchina bhairappanavaru ishtu vaignaanikavaagi hosatondu kshetravannu bareyalu aarisikondu, ee pustaka kottiddakke naanantoo dhanya :) innomme odi.. vignaanvoo aasakti tarabahudu.. tatvavantoo himaalayadettarave, ade tookave! tumbaa khushiyaagide..

   Delete
  4. ನಾನೂ ಕೂಡ ವಿಜ್ಞಾನದ ವಿದ್ಯಾರ್ಥಿನಿಯೇ. ಹಾಗೆ ಐದನೇ ತರಗತಿಯಲ್ಲಿದ್ದಾಗಿನಿಂದ ಅವರ ಬರಹಗಳನ್ನು ಓದುತ್ತಿದ್ದೇನೆ. ಅವರ ಎಲ್ಲಾ ಕಾದಂಬರಿಗಳು ಬಹಳವಾಗಿ ಕಾಡಿವೆ, ಯಾನ ಒಂದನ್ನು ಬಿಟ್ಟು. ನನ್ನ ಅಭಿಪ್ರಾಯವೇ ಎಲ್ಲರದ್ದೂ ಆಗಬೇಕಿಲ್ಲ. ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನಾನು ಮನದ ಪರದೆ ಸರಿಸಿ ಬ್ಲಾಗಿನಲ್ಲಿ ಹಾಕಿಕೊಂಡಿದ್ದೇನೆಯಷ್ಟೆ. ಅದನ್ನು ಎಲ್ಲರೂ ಪುರಸ್ಕರಿಸಬೇಕೆಂದು ಯಾರ ಮೇಲೂ ಒತ್ತಡ ಹೇರಿಲ್ಲ, ಹೇರುವುದೂ ನನಗೆ ಸೇರುವುದೂ ಇಲ್ಲ. ಒಂದು ಕೃತಿಯು ಇಷ್ಟವಾಗಲಿಕ್ಕೆ ಹೇಗೆ ಕಾರಣಗಳಿರುತ್ತವೋ, ಅಂತೆಯೇ ಅದನ್ನು ಇಷ್ಟ ಪಡದೇ ಇರಲಿಕ್ಕೂ ಹಲವಾರು ಕಾರಣಗಳು ಇರುತ್ತವೆ ತಾನೇ..?? ಎಲ್ಲರದ್ದೂ ಭಿನ್ನ ಆಸಕ್ತಿ, ಅಭಿಪ್ರಾಯಗಳು. ಧನ್ಯವಾದಗಳು.

   Delete
 2. ನಿಮ್ಮ ಮಾತು ನಿಜ. ನಿರೀಕ್ಷೆ ಬಲೂನಿನಂತೆ ಉಬ್ಬಿದಾಗ ನಿರಾಶೆಯ ಸೂಜಿ ಚುಚ್ಚುವುದೂ ಸಹಜ

  ReplyDelete
 3. Guna ಅವರ ಮಾತು ನಿಜ. 'ಯಾನ'ದ ವಿಷಯದಲ್ಲೂ ಹೀಗೇ ಆಗಿರಬಹುದು. ನಾನು ಓದಿಲ್ಲ ಇನ್ನೂ. ಭೈರಪ್ಪನವರು ತಮ್ಮ ಅಧ್ಯಯನಶೀಲತೆಗೆ ಮೊದಲಿಂದಲೂ ಹೆಸರುವಾಸಿ. ಹಾಗಾಗಿಯೇ ಅವರ ಕಾದಂಬರಿಗಳ ವಿಷಯಗಳ ಆಳ ಹಾಗಿರುತ್ತದೆ.

  ReplyDelete
  Replies
  1. ದಯವಿಟ್ಟು ಮೊದಲು ಯಾನವನ್ನು ಓದಿ. ಜೊತೆಗೆ ಅವರ ಉಳಿದೆಲ್ಲ ಕಾದಂಬರಿಗಳನ್ನೂ ಓದಿ. ಆಮೇಲೆ ಕಮೆಂಟ್ ಮಾಡಿ. ನಾನು ಸುಮ್ಮನೇ ಹೀಗೆ ಹೇಳ್ತಿಲ್ಲ. ಅವರ ಬರಹಗಳನ್ನು ತೀರಾ ಹತ್ತಿರದಿಂದ, ಅಧ್ಯಯನದ ದೃಷ್ಟಿಯಿಂದ ಓದಿದಾಗ ಮಾತ್ರ ಯಾನ ಯಾಕೆ ನಿರಾಸೆಯುಂಟು ಮಾಡುತ್ತದೆ ಎಂಬುದು ಅರ್ಥವಾಗುತ್ತದೆ. ಅವರ ಬಗ್ಗೆ ನನಗೆ ಬಹಳವೇ ಗೌರವವಿದೆ, ಅದನ್ನು ಮೇಲೆ ಹೇಳಿದ್ದೇನೆ ಕೂಡ. ನನ್ನ ಮೇಲಿನ ಲೇಖನ ಓದಿಯೇ ಈ ಕಮೆಂಟ್ ಹಾಕಿದ್ದೀರೆಂದುಕೊಳ್ಳುತ್ತೇನೆ.

   Delete
  2. ಹುಂ.. ಮೇಲಿನ ಲೇಖನ ಮತ್ತು ಮೇಲಿನ ಕಮೆಂಟು ಎರಡನ್ನೂ ಓದಿಯೇ ಕಮೆಂಟು ಹಾಕಿದ್ದು. ನಾನು ಯಾನ ಓದಿಲ್ಲ ಅಂತಲೂ ಹೇಳಿದ್ದೇನೆ. ಮತ್ತು ಅವರ ಉಳಿದೆಲ್ಲಾ ಪುಸ್ತಕಗಳನ್ನೂ ಓದಿದ್ದೇನೆ . ನಿರೀಕ್ಷೆ ಹೆಚ್ಚಾಗಿದ್ದಾಗ ಕೆಲವೊಮ್ಮೆ ನಿರಾಶೆ ಸಹಜ ಎನ್ನುವುದು ಸರ್ವವಿದಿತ. ಅದು ಯಾನದ ವಿಷಯದಲ್ಲೂ 'ಆಗಿರಬಹುದು' ಅಂದೆ ಅಷ್ಟೆ. ಬರವಣಿಗೆ ಒಮ್ಮೊಮ್ಮೆ ನಿರಾಶೆ ಎನಿಸಿದರೂ ಅವರ ಅಧ್ಯಯನಶೀಲತೆ ಪೂರ್ವತಯಾರಿ ಬಗ್ಗೆ ಎರಡು ಮಾತಿಲ್ಲ ಎನ್ನುವುದು ನನ್ನ ಕಮೆಂಟಿನ ಆಶಯವಾಗಿತ್ತಷ್ಟೆ.

   Delete
  3. ಒಂದು ಕೃತಿಯನ್ನು ಓದದೇ ಇನ್ನೊಬ್ಬರ ಅಭಿಪ್ರಾಯವನ್ನು ಸಮರ್ಥಿಸುವುದು ಸರ್ವಥಾ ಸರಿಯಲ್ಲ. ಹಾಗಂತ ನೀವು ನನ್ನ ಅಭಿಪ್ರಾಯವನ್ನೇ ಪುರಸ್ಕರಿಸಬೇಕೆಂದೂ ನಾನು ಹೇಳುವುದಿಲ್ಲ. ಯಾನವನ್ನು ಓದಿ. ನಂತರ ಅದರ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ.

   Delete
 4. ಅತಿಯಾದ ನಿರೀಕ್ಷೆ ಭ್ರಮನಿರಸನಕ್ಕೆ ಕಾರಣ. 'ಸಾರ್ಥ' ಓದಿದಾಗಲೂ ಹೀಗೇ ಆಗಿತ್ತು, ಮೊದಲ ಓದಿಗೆ ನಿಲುಕಲಿಲ್ಲ. ಕಥಾವಸ್ತು ಕೂಡಾ ಪ್ರಭಾವ ಬೀರಿದೆ.

  ReplyDelete
  Replies
  1. ಸ್ವಾಮಿ, ನಿಮ್ಮ ಪ್ರಕಾರ ಅತಿಯಾದ ನಿರೀಕ್ಷೆ ಎಂದರೇನು..?? ಭೈರಪ್ಪನವರು ಹೀಗೆ ಬರೆಯಲಿ, ಹಾಗೆ ಬರೆಯಲಿ ಎಂದು ಯಾರೂ ಎಂದಿಗೂ ಆಶಿಸುವುದಿಲ್ಲ. ಆದರೆ ಓದುತ್ತಿರುವಾಗ ಮಾತ್ರ ಇದು ಎಸ್. ಎಲ್ ಬಿ. ಬರೆದಿದ್ದು ಎನ್ನುವ ಸತ್ಯ ಸಂಗತಿ ಎಲ್ಲರ ಸುಪ್ತ ಪ್ರಜ್ಞೆಗೂ ತಿಳಿದಿರುತ್ತದೆ. ಓದಿನಲ್ಲಿ ಯಾವತ್ತಿನ ರಸ ದೊರಕದೇ ಹೋದಾಗ ನಿರಾಶೆಯಾಗುತ್ತದೆ ಅಷ್ಟೆ. ಎಲ್ಲರಿಗೂ ಎಲ್ಲ ಕೃತಿಯೂ ಮೊದಲನೇ ಓದಿಗೆ ನಿಲುಕುವುದಿಲ್ಲ ಎನ್ನುವುದು ಎಷ್ಟು ಸತ್ಯವೋ ಕೆಲವರ ಬುದ್ಧಿಗಾದರೂ ಕೃತಿಯ ಒಳಗೇನಿದೆ ಎನ್ನುವುದು ನಿಲುಕದೇ ಹೋಗಲಾರದು ಎನ್ನುವುದೂ ಕೂಡ ಅಷ್ಟೆ ಸತ್ಯ.

   Delete
 5. ಶಿವಾನಂದ26 August 2014 at 01:30

  ಫೇಸ್ಬುಕ್ಕಿನಲ್ಲೆಲ್ಲೋ ಸಿಕ್ಕ ಕೊಂಡಿ ಮೂಲಕ ಇಲ್ಲಿಗೆ ಬಂದೆ. ಆದರೆ ನೀವು ಅನಿಸಿಕೆಗಳಿಗೆ ಉತ್ತರ ಬರೆದಿದ್ದನ್ನು ನೋಡಿದಾಗ ಅನ್ನಿಸಿದ್ದಿಷ್ಟು: ನೀವು ಭೈರಪ್ಪನವರ ಕಟ್ಟಾ ಅಭಿಮಾನಿ ಇರಬಹುದು. ಆದರೆ ಈ ವಯಸ್ಸಿಗೇ ಎಲ್ಲಾ ಅರೆದು ಕುಡಿದಿದ್ದೇನೆ, ಭಾರೀ ಅಧ್ಯಯನ ಮಾಡಿದ್ದೇನೆ ಎಂಬ ದುರಹಂಕಾರ ನಿಮ್ಮ ಮಾತುಗಳಲ್ಲಿ ಇಣುಕುತ್ತಿದೆ. ಹೆಚ್ಚು ತಿಳಿದುಕೊಳ್ಳಲು ನಮ್ರತೆ ಯಾವತ್ತೂ ಸಹಾಯಕಾರಿ. ಯಾನದ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ. ಏಕಂದರೆ ಅದನ್ನು ಸ್ವೀಕರಿಸುವ ಮನಸ್ಸು ನಿಮ್ಮಲ್ಲಿಲ್ಲ ಎಂಬುದು ಮೇಲಿನ ಉತ್ತರಗಳಿಂದ ಕಾಣುತ್ತಿದೆ.

  ReplyDelete
  Replies
  1. ನನ್ನ ಪ್ರಾಮಾಣಿಕ ಅಭಿಪ್ರಾಯವನ್ನೂ, ನೇರ ಮಾತುಗಳನ್ನೂ ನೀವು ದುರಹಂಕಾರವೆಂದು ಬಗೆದರೆ ಅದು ನನ್ನ ತಪ್ಪಲ್ಲ. ನಾನು ಕೇವಲ ನನ್ನ ಅಭಿಪ್ರಾಯವನ್ನು ಬರೆದುಕೊಂಡಿದ್ದೇನೆಯೇ ಹೊರತು ಅದನ್ನೇ ಒಪ್ಪಬೇಕೆಂದು ಯಾರ ಮೇಲೂ ಒತ್ತಡ ಹೇರಿಲ್ಲ. ನಾನು ಹೇಳಿದ್ದೇ ಸರ್ವ ಸತ್ಯವೆಂದು ಕೂಡಾ ಘೋಷಿಸಿಲ್ಲ. ನಾನೇನು ಅರೆದು ಕುಡಿದಿಲ್ಲ, ಅಧ್ಯಯನವನ್ನಂತೂ ಖಂಡಿತವಾಗಿಯೂ ಮಾಡಿಲ್ಲ. ಹಾಗೆ ವರ್ತಿಸಿಯೂ ಇಲ್ಲ. ಯಾನದ ಬಗ್ಗೆ ಕಾಮೆಂಟ್ ಸ್ವೀಕರಿಸುವ ಮನಸ್ಸಿಲ್ಲದಿದ್ದರೆ ನಿಮ್ಮ ಕಮೆಂಟ್ ಇಲ್ಲಿ ಪಬ್ಲಿಶ್ ಆಗುವ ಅವಕಾಶವೇ ಇರುತ್ತಿರಲ್ಲಿಲ್ಲ ಎಂಬುದು ನೆನಪಿರಲಿ. ನಿಮ್ಮ ವಿಮರ್ಶೆಗೆ ಧನ್ಯವಾದಗಳು.

   Delete