Thursday, 3 July 2014

ತಲ್ಲಣ


ಅದೆಷ್ಟು ಸಾರಿ ಹೇಳಿದ್ದೇನೆ ನಿನಗೆ
ನಲ್ಲ, ನೀ ಕಳ್ಳನಾಗದಿರು
ಕನಸಿನಲ್ಲಿ ಬಂದು ನಿದಿರೆಯನ್ನು ಮುರಿದು
ಹೃದಯಕ್ಕೆ ಲಗ್ಗೆ ಇಟ್ಟು ನನ್ನ ಚಿತ್ತವ ಕದ್ದೊಯ್ಯದಿರು
ನನ್ನ ಮಾತನ್ನು ನೀ ಕೇಳಲೊಲ್ಲೆ

ನೀ ಕಾಡಿದರೆ ನಾನು ಮೋಹಿತಳಾಗುತ್ತೇನೆ
ನಿನ್ನದೇ ಧ್ಯಾನದಲ್ಲಿ ನನ್ನನ್ನೇ ಮರೆಯುತ್ತೇನೆ
ಕೊನೆಗೆ ನನ್ನ ನಾ ಹುಡುಕಿ ಕೈ ಚೆಲ್ಲುತ್ತೇನೆ
ಅದಕ್ಕಾಗಿ ನಿನ್ನನ್ನು ಕಳ್ಳನಾಗಬೇಡ ಎನ್ನುತ್ತಿರುವೆನೇ..??
ಊಹ್ಞೂಂ, ಇವ್ಯಾವವೂ ಕಾರಣಗಳಲ್ಲ

ನಿಜ ಹೇಳಲೇ ಹುಡುಗಾ..??
ಏಕೋ ಏನೋ ನಾನರಿಯೆ ನನ್ನಾಣೆ
ನೀ ಕನಸಲ್ಲಿ ಬಂದಾಗಲೆಲ್ಲ ಹುಚ್ಚು ಭಯ
ಭಾವ ತರಂಗಳಲ್ಲಿ ತಿಳಿಯದ ತಲ್ಲಣದ ಗಾನ
ಬೆಚ್ಚನೆಯ ನಿದ್ದೆಯಲ್ಲಿಯೂ ಬೆಚ್ಚಿ ಬೀಳುವಂತೆ


ಇಲ್ಲಸಲ್ಲದ ಯೋಚನೆಗಳು ಒಂದೇ ಎರಡೇ..??
ನಿನ್ನಲ್ಲೇ ಒಂದಾಗಿದ್ದರೂ ನೀ ನನಗೆ ತಿಳಿದವನಲ್ಲ
ನನ್ನೆಡೆಗೆ ಬರುತ್ತಿದ್ದರೂ ದೂರ ಸಾಗುತಿಹೆ ನೀನು
ನೀ ಮಾತನಾಡಿದಷ್ಟೂ ಮೌನವಿದು ಮೂಕವಾಗುತಿದೆ
ನೀ ನಕ್ಕಷ್ಟೂ ನನ್ನ ದುಃಖ ಹೆಚ್ಚುತ್ತಿಹುದು

ಚಿತ್ರಗಳು ಸರಿದಂತೆ ನಾ ಮುದುಡಿಕೊಳ್ಳುತಿಹೆ
ರೆಕ್ಕೆ ಮುರಿದು ಗೂಡು ಸೇರಿದ ಗುಬ್ಬಚ್ಚಿಯಂತೆ
ಕಣ್ಣುಗಳು ತೆರೆದಿದ್ದರೂ ಏನೂ ಕಾಣಿಸದು
ಕಿವಿಗಳಿಗೂ ಸ್ವರಗಳಿಗೂ ನಂಟೇ ಮರೆತು ಹೋದಂತೆ
ಇತ್ತ ಗಾಳಿಯೂ ಸಹ ನನ್ನತ್ತ ಸುಳಿಯದಲ್ಲ

ಬೇಡ ಈ ಭಯದ ಬಂಧ ನನಗೆ
ಇನ್ನಾದರೂ ನಿಲ್ಲಿಸು ನಿನ್ನ ಕಳ್ಳ ನಡಿಗೆ
ಎದುರಿನಲ್ಲಿ ಬಂದು ನಿಲ್ಲು, ಕಣ್ಣಲ್ಲೇ ಕಥೆ ಹೇಳುವೆ
ಪಕ್ಕದಲ್ಲಿ ಬಂದು ಕೂರು, ಕೈ ಹಿಡಿದು ಕವಿತೆ ಬರೆಯುವೆ
ಕನಸಿನ ಕಣ್ಣಾಮುಚ್ಚಾಲೆಯಾಟ ಬೇಡ ಮಾರಾಯಾ


2 comments:

  1. Wow Superb..
    ಕಣ್ಣಲ್ಲೇ ಕಥೆ ಹೇಳುವೆ .. ಕೈ ಹಿಡಿದು ಕವಿತೆ ಬರೆಯುವೆ ... ಇದು ಕನಸಿಗೆ ಸಾಕ್ಷಿ ನಾ .. ಲಹರಿ ...

    ಚೆನ್ನಾಗಿದೆ ...

    ಕವಿ ಕನಸು ... ಮನಸಾಗಲಿ ..ಎಲ್ಲರ ಮನ- ಮನೆಸೆರಲಿ .

    ReplyDelete