Monday, 14 July 2014

ಇರುವುದೆಲ್ಲವ ಬಿಟ್ಟು (ಭಾಗ - ೬)


                          ಮುಂದಿನ ಪುಟಗಳೆಲ್ಲ ಖಾಲಿ ಖಾಲಿಯಾಗಿದ್ದವು. ಮನೆಯಿಂದ ಹೊರಡುವಾಗ ಅಪ್ಪ ಡೈರಿ ಬಿಟ್ಟು ಹೋಗಿರಬೇಕೆಂದುಕೊಂಡೆ. ಎಲ್ಲವನ್ನೂ ಓದಿ ಮುಗಿಸಿ ಕೂತ ಮೇಲೆ ನನ್ನೊಳಗೆ ಚಡಪಡಿಕೆ ಶುರುವಾಯಿತು. ಎಷ್ಟು ಹೊತ್ತಿನಲ್ಲಿ ಮನೆ ಸೇರುತ್ತೇನೋ, ಯಾವಾಗ ಅಪ್ಪನನ್ನು ಕಾಣುತ್ತೇನೋ ಎನ್ನುವ ಯೋಚನೆಗಳೆಲ್ಲಾ ಅಸಹ್ಯ ಹುಟ್ಟಿಸುವಷ್ಟು ಕಾಡತೊಡಗಿದವು. ಮಾವನ ಹತ್ತಿರ ಏನನ್ನಾದರೂ ಮಾತನಾಡಲೂ ಸಹ ಭಯ. ತಾಳ್ಮೆಗೆಟ್ಟಿದ್ದರೂ ಬೇರೆ ದಾರಿಯಿಲ್ಲದೆ ಸುಮ್ಮನೆ ಕುಳಿತೆ.

                                    *********************************

                        ಮನೆಗೆ ಬಂದಾಗ ನನ್ನನ್ನು ಸ್ವಾಗತಿಸಿದ್ದು ಅಪ್ಪನ ಹೆಣ. ಯಾವಾಗಲೂ "ಬಂದೆಯಾ ಕೂಸೆ..??" ಎನ್ನುತ್ತಾ ನನ್ನ ಲಗೇಜುಗಳನ್ನು ತೆಗೆದುಕೊಳ್ಳಲು ಓಡಿ ಬರುತ್ತಿದ್ದ ಅಪ್ಪ ಅಂದು ನಿಶ್ಚಲವಾಗಿ ಮಲಗಿದ್ದ. ಯಾಂತ್ರಿಕವಾಗಿ ನಾನು ಹೋಗಿ ಶವದ ಬಳಿ ಕುಳಿತೆ. ಗರಬಡಿದವರಂತೆ ಶವವನ್ನೇ ನಿಟ್ಟಿಸಿ ನೋಡುತ್ತಾ ಕುಳಿತಿದ್ದ ನನ್ನ ಭಂಗಿ ಕಂಡು ಹೆದರಿ ಮಾವ "ಏಯ್, ಕೂಸೆ" ಎಂದು ಮೈ ತಡವಿದಾಗ ವಾಸ್ತವಕ್ಕೆ ಮರಳಿದವಳಂತೆ ಅಳಲು ಮೊದಲು ಮಾಡಿದೆ. ಹಾಗೆ ಅತ್ತು ಅತ್ತು ಎಚ್ಚರ ತಪ್ಪಿ ಬಿದ್ದಿದ್ದೆನಂತೆ. ಮತ್ತೆ ಕಣ್ಣು ತೆರೆದಾಗ ಸೂತಕದ ಮನೆಯ ವಾತಾವರಣ ಹೆಪ್ಪುಗಟ್ಟಿದ್ದು ಕಂಡು ಮನಸ್ಸಿಗೆ ಕಿರಿಕಿರಿಯಾಗಿ ಮಹಡಿ ಹತ್ತು ಕುಳಿತಿದ್ದೆ. ಮತ್ತೆ ಕೆಳಗಿಳಿದು ಬಂದು ಮರಗಟ್ಟಿದ್ದ ಅಪ್ಪನ ಕಾಲ ಬಳಿ ಕುಳಿತು ಕಣ್ಣೀರು ಸುರಿಸುತ್ತಾ ಇದ್ದವಳು ಪುನಃ ಅದ್ಯಾವಾಗ ಎಚ್ಚರ ತಪ್ಪಿದೆನೋ ಏನೋ.

                                  *************************************

                           ಅಪ್ಪನ ಕ್ರಿಯೆಯೆಲ್ಲವನ್ನೂ ಮಾಡಿದ್ದು ನನಗಿಂತ ಮೂರು ವರ್ಷಕ್ಕೆ ದೊಡ್ಡವನಾದ ಅಪ್ಪನ ಅಣ್ಣನ ಮಗ. ಅವನಿಗೆ ಅದೇನೆನಿಸಿತೋ, ಕೊಳ್ಳಿ ಇಡುವ ಕೆಲಸಕ್ಕೆ ನನ್ನನ್ನೇ ಕರೆದ. ಕ್ರಿಯೆ ಮಾಡಿಸುತ್ತಿದ್ದ ವೈದಿಕ ಭಟ್ಟರೂ ವಿರೋಧ ವ್ಯಕ್ತಪಡಿಸಲಿಲ್ಲ. ಸೇರಿದ ಜನರಲ್ಲೆಲ್ಲ ಒಂದೇ ಮಾತು. "ಅಯ್ಯೋ, ಹೀಗೇಕೆ ಮಾಡಿಕೊಂಡರೋ..?? ಎಷ್ಟು ಸಣ್ಣ ವಯಸ್ಸು.?? ಮಗಳೆಂದರೆ ಅದೆಷ್ಟು ಪ್ರೀತಿಯಿತ್ತು." ಇವರೂ ಕೂಡ ನನ್ನತ್ತಲೇ ಬೊಟ್ಟು ತೋರಿಸುತ್ತಿದ್ದಾರೆಯೇ ಎಂಬ ಸಂದೇಹದ ಹುಳು ತಲೆಯ ಮೇಲೆ ಹರಿಯಹತ್ತಿತು. ಹಳೆಯ ನೆನಪುಗಳೆಲ್ಲ ಮರುಕಳಿಸಿ ಮತ್ತೆ ಹುಚ್ಚು ಹಿಡಿಯುವ ಭಯವಾಗಿ ತಲೆಯೊಳಗೆ ಇಳಿಯುವ ಮುನ್ನವೇ ಹುಳುವನ್ನು ಹೊಸಕಿ ಹಾಕಿದೆ. ಆ ಒಂದು ದಿನ ನಾನು ಮಾತೇ ಆಡದೇ ಉಳಿದಿದ್ದೆ. ಅಮ್ಮನ ಜೊತೆಯೂ ಕೂಡ. ಅವಳ ಮುಖವನ್ನು ನೋಡುವ ಧೈರ್ಯವೂ ನನಗಾಗಲಿಲ್ಲ.
                         ನಂತರದ ಹದಿನೈದು ದಿನಗಳು ಒಂದೊಂದು ಯುಗಗಳಂತೆ ಕಳೆದಿದ್ದವು. ಪ್ರತಿ ನಿಮಿಷ ಅಪ್ಪ ನೆನಪಾಗುತ್ತಿದ್ದ. ಮನೆಯ ಮೂಲೆಗಳೆಲ್ಲವೂ ಅಪ್ಪನನ್ನೇ ಕಾಣಿಸುತ್ತಿದ್ದವು. ಭಟ್ಟರೂ ಪಠಿಸುತಿದ್ದ ಮಂತ್ರಗಳು ಕಿವಿಗೆ ಬಂದು ತಾಕಿದಾಗಲೆಲ್ಲ ಅಲ್ಲಿ ಅಪ್ಪನೇ ಮಡಿ ಉಟ್ಟು ಕುಳಿತು ಪೂಜೆ ಮಾಡಿಸುತ್ತಿರುವಂತೆ ಭಾಸವಾಗುತ್ತಿತ್ತು. ಜೊತೆಯಲ್ಲಿ ಇನ್ನೊಂದು ವಿಷಯವೂ ಬಿಡದೇ ಕಾಡುತ್ತಿತ್ತು. ಮುಂದೇನು..?? ಎನ್ನುವ ಪ್ರಶ್ನೆ ವಾಸ್ತವದ ಪಾಯದ ಮೇಲೆ ನಿಂತು ಕುಣಿಯುತ್ತಿತ್ತು. ತಿರುಗಿ ಪುಣೆಗೆ ಹೋಗುವುದಂತೂ ಸಾಧ್ಯವಾಗದ ಮಾತು. ಮತ್ತೆ ಮಾಡುವುದಾದರೂ ಏನನ್ನು..?? ಎಷ್ಟು ಯೋಚಿಸಿದರೂ ಉತ್ತರ ದೊರಕುತ್ತಿರಲಿಲ್ಲ.
                          ಅಪರಕ್ರಿಯೆಗಳೆಲ್ಲ ಮುಗಿದು ನೆಂಟರಿಷ್ಟರು, ಊರ ಹಿತೈಷಿಗಳೆಲ್ಲ ಮನೆಗೆ ಹೋಗಿಯಾಗಿತ್ತು. ಮನೆಯಲ್ಲಿ ಉಳಿದವರೆಂದರೆ ನಾನು, ಅಮ್ಮ, ಸೋದರ ಮಾವ ಮತ್ತು ಅತ್ತೆ. ನಾನು ಅಮ್ಮನ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡಿಯೇ ಇರಲಿಲ್ಲ. ಅಂದು ಸಂಜೆ ಮೊದಲ ಬಾರಿಗೆ ನಾವಿಬ್ಬರೂ ಅಕ್ಕ ಪಕ್ಕ ಕೂತು ಮನಸು ಬಿಚ್ಚಿ ಮಾತನಾಡಿದೆವು. ನಾನು ಬಾಯಿ ತೆರೆದಿದ್ದಕ್ಕಿಂತ ಬಿಕ್ಕಳಿಸಿದ್ದೇ ಜಾಸ್ತಿ. ಅಮ್ಮ ತನ್ನನ್ನು ಸಂತೈಸಿಕೊಳ್ಳುತ್ತಲೇ ನನ್ನನ್ನು ಸಮಾಧಾನ ಪಡಿಸುತ್ತ ತೀರಾ ಕೆಳದನಿಯಲ್ಲಿ ಮಾತನಾಡುತ್ತಿದ್ದರು. ಅವರು ಹೇಳಿದ್ದೆಲ್ಲವೂ ನನ್ನ ತಲೆಯೊಳಗೆ ಇಳಿಯುವಂತಿರಲಿಲ್ಲ. ಆದರೆ ಒಂದು ಮಾತು ಹೃದಯವನ್ನು ತಟ್ಟದೇ ಹೋಗಲಿಲ್ಲ. "ಕೂಸೆ, ನಿಮ್ಮಪ್ಪ ನೀನು ಇಷ್ಟ ಪಟ್ಟ ಹಾಗೆಯೇ ನಿನ್ನನ್ನು ಬೆಳೆಸಿದ್ದರು. ನಿನ್ನ ಇಷ್ಟದಂತೆಯೇ ಎಲ್ಲವನ್ನೂ ಮಾಡಿದ್ದರು. ಹಾಗಿದ್ದರೂ ನೀನು ಅರ್ಧದಲ್ಲಿಯೇ ಓದು ಬಿಟ್ಟಿದ್ದು ಸರಿಯೇ..? ಇದರಿಂದ ಅಪ್ಪ ಎಷ್ಟು ನೊಂದುಕೊಂಡರು ಗೊತ್ತೇ..?? ಆಗ ಅವರು ಜೀವ ಹಿಡಿದುಕೊಂಡು ಇದ್ದದ್ದೇ ದೊಡ್ಡದು." ರಾತ್ರಿ ಹಾಸಿಗೆಯಲ್ಲಿ ಅಡ್ಡಾದ ಮೇಲೂ ಆ ಮಾತುಗಳು ಬೆನ್ನು ಹಿಡಿದು ಕಾಡಿದವು. ಮುಂದೇನು ಎನ್ನುವುದರ ಕುರಿತು ಒಂದು ಗಟ್ಟಿ ನಿರ್ಧಾರಕ್ಕೆ ಬರುವವರೆಗೂ ನಿದ್ದೆ ನನ್ನ ಬಳಿ ಸುಳಿಯಲೇ ಇಲ್ಲ. ಎಲ್ಲವೂ ಸ್ಪಷ್ಟವಾದ ಮೇಲೆ ಮನಸ್ಸು ನಿರಾಳವಾಗಿತ್ತು. ಅಲ್ಪಕಾಲವಾದರೂ ಪ್ರಶಾಂತವಾದ ನಿದ್ದೆಯೂ ಬಂತು.

                                   ************************************

                             ಆಫೀಸ್ ರೂಮಿನೊಳಗೆ ಫೈಲ್ ಹಿಡಿದುಕೊಂಡು ನಾನೊಬ್ಬಳೇ ನಿಂತಿದ್ದೆ. ಅಮ್ಮ, ಮಾವ ಹೊರಗಡೆ ಕುಳಿತಿದ್ದರು. ನನ್ನ ಸರತಿ ಬಂದ ಕೂಡಲೇ ಎಲ್ಲಾ ದಾಖಲೆ ಪತ್ರಗಳನ್ನು ಮುಂದೆ ಹಿಡಿದೆ. ಅದನ್ನು ತೆಗೆದುಕೊಂಡ ಅಟೆಂಡರ್ ಕೇಳಿದರು. "ಐದು ಸೆಮಿಸ್ಟರ್ ಮುಗಿಸಿ ಮತ್ತೆ ಬಿಟ್ಟಿದ್ದೇಕೆ..?? ಏನಾಯಿತು..??"
                             "ಆರೋಗ್ಯ ಕೈ ಕೊಟ್ಟಿತು ಸರ್." ನಾನು ಸಾಮಾನ್ಯವಾದ ಸುಳ್ಳನ್ನೇ ಹೇಳಿದೆ.
                             "ಇಷ್ಟು ವರ್ಷ ಬಿಟ್ಟು ಪುನಃ ಮರಳಿ ಸೇರುತ್ತಿರುವುದೇಕೆ..?? "
                               ಏನು ಉತ್ತರಿಸುವುದೆಂದು ತಿಳಿಯದೇ ನಾನು ಸುಮ್ಮನೆ ನಿಂತಿರುವಂತೆಯೇ ಅವರೇ ಮುಂದುವರೆದರು. "ಹೋಗಲಿ ಬಿಡು. ಇನ್ನುಳಿದ ಮೂರು ಸೆಮಿಸ್ಟರ್ ಗಳನ್ನು ಯಾವುದೇ ತೊಂದರೆಗಳಾಗದಂತೆ ಆರಾಮಾಗಿ ಮುಗಿಸು." ನಾನು ಬರೇ ಹ್ಞೂಂಗುಟ್ಟಿದೆ.
                             ದಾಖಲೆಗಳೆಲ್ಲವನ್ನೂ ಪರಿಶೀಲಿಸಿಯಾದ ಮೇಲೆ ಕೊನೆಯ ಕೌಂಟರ್ ನತ್ತ ಕೈ ತೋರಿಸಿ ಹೇಳಿದರು. "ಅಲ್ಲಿ ಹೋಗಿ ಫೀ ತುಂಬುವ ಚಲನ್ ಇಸ್ಕೊ ಹೋಗಮ್ಮಾ".
                            ನಾನು ಅತ್ತ ಸಾಗಿ ಸರ್ ಚಲನ್ ಎಂದ ಕೂಡಲೇ ಕೌಂಟರಿನಲ್ಲಿ ಕುಳಿತಿದ್ದ ಅಟೆಂಡರ್ ಕೇಳಿದರು. "ಹೆಸರೇನಮ್ಮಾ..??"
                             "ಜೀವನಾ" (ಮುಗಿಯಿತು)


2 comments:

  1. bahala feel agutte...
    channagide...

    ReplyDelete
  2. Baravanigeyalli begi ide.. Rasapooritavagedi. Abhinandanegalu.

    ReplyDelete