Thursday, 10 July 2014

ನೀನು ಎಂದಿಗೂ ಜೀವದ ಗೆಳತಿ


ಹೃದಯದ ಗೆಳತಿ,
                             ಹೇಗಿದ್ದೀಯೇ ಎಂದು ಕೇಳುವುದು ತೀರಾ ಔಪಚಾರಿಕವಾಗುತ್ತದೆಯಲ್ಲವೇ..?? ನೀನು ನನಗೆ ಅಷ್ಟು ದೂರದವಳೇ..?? ಆದರೂ ನಿನ್ನನ್ನು ನೋಡದೆ, ಮಾತನಾಡದೆ ಎರಡು ವರ್ಷಗಳೇ ಆಯಿತಲ್ಲ. ಆ ಮಾತ್ರಕ್ಕಾದರೂ ಹೇಗಿರುವೆಯೆಂದು ಕೇಳುವುದು ತಪ್ಪಾಗಲಾರದು ಅಲ್ಲವೇ..??
                            ನಿನಗೆ ಬೇಸರವಾಗಿರಬೇಕು ಅಲ್ಲವೇನೇ..?? ಸಿಟ್ಟು ಬಂದು ಅದೆಷ್ಟು ಬಾರಿ ಮುಖ ಕೆಂಪಾಯಿತೋ ಏನೋ. ನಿನ್ನನ್ನು ಭೇಟಿಯಾಗಿಲ್ಲವೆಂಬ ಕಾರಣದಿಂದ ಮನಸ್ಸಿನಲ್ಲಿ ಎದ್ದ ಕದಡಿದ ಅಲೆಗಳೆಲ್ಲವನ್ನೂ ಮೌನವಾಗಿಯೇ ಹೊರಹಾಕಿದ್ದರೂ ಸರಿಯೇ. "ಮೂರು ವರ್ಷಗಳಷ್ಟೆ ಜೊತೆಗಿದ್ದು ಹೋದವಳು ತನ್ನನ್ನು ನೆಚ್ಚಿಕೊಂಡಾಳು ಎಂದು ಅಪೇಕ್ಷಿಸುವುದು ತನ್ನದೇ ತಪ್ಪು" ಎಂದು ನಿನಗೇ ನೀನೇ ಬೈದುಕೊಂಡಿರಲಿಕ್ಕೂ ಸಾಕು ಅಲ್ಲವಾ ಮಾರಾಯ್ತಿ. ಆದರೆ ನೀನೊಮ್ಮೆ ಸುಮ್ಮನೆ ಮೂಲೆಯಲ್ಲಿ ಗಲ್ಲಕ್ಕೆ ಕೈ ಕಟ್ಟಿ ಕುಳಿತು ಮೆಲ್ಲನೆ ಸ್ಮೃತಿಯ ಪರದೆಗಳಲ್ಲಿ ಜಾರುತ್ತಾ ಹೋಗಿದ್ದರೆ ಇವೆಲ್ಲವನ್ನು ನೀನು ಮಾಡುತ್ತಲೇ ಇರಲಿಲ್ಲವೇನೋ.
                          ನಿನ್ನ ಸಂಗಾತ ಕೇವಲ ಮೂರೇ ವರ್ಷಗಳದ್ದಾದರೂ ಅದರಿಂದ ದೊರಕಿದ್ದು ನೂರಕ್ಕಿಂತಲೂ ಹೆಚ್ಚು ವರ್ಷಗಳವರೆಗೆ ಉಸಿರಿನ ಜೊತೆಯಲ್ಲೇ ಇರುವಂಥದ್ದು ಕಣೆ ಗೆಳತಿ. ಆ ಬಂಧನದ ತೀವ್ರತೆ ಎಂಥದ್ದೆಂಬುದು ಬಹುಶಃ ಇವತ್ತಿನವರೆಗೆ ನನಗೂ ತಿಳಿದಿಲ್ಲ, ಮುಂದೆ ತಿಳಿಯುವಂತೆಯೂ ಇಲ್ಲ ಅನಿಸುತ್ತದೆ. ಆದರೆ ಅದರ ಇರುವಿಕೆಯ ಅನುಭವ ಕೊಡುವ ಸುಖದ ಮುಂದೆ ಮತ್ತೆಲ್ಲವೂ ಗೌಣವೆನಿಸುತ್ತದೆ. ಇನ್ನೊಮ್ಮೆ ಆ ದಿನಗಳೆಲ್ಲಾ ಮರಳಿ ಸಿಗಬಾರದೇ ಎಂದು ಅಂದುಕೊಳ್ಳುತ್ತಿರುವಂತೆಯೇ ಕಣ್ಣು ಮಂಜಾಗುತ್ತದೆ. ಹನಿಗಳು ಉದುರತೊಡಗಿದಂತೆಯೇ ಮನಸ್ಸು ನೆನಪಿನ ಪುಟಗಳನ್ನು ಒಂದೊಂದಾಗಿ ತೆರೆಯಲು ಅಣಿಯಾಗುತ್ತದೆ.

                                   ********************************


                                ನಮ್ಮನೆ ಮಗಳು ಈ ವರ್ಷ ಹಾಯ್ ಸ್ಕೂಲ್ ಗೆ ಹೋಗುವವಳು ಎಂಬ ಹೆಮ್ಮೆಯಿಂದ ಪಾಲಕರೇನೋ ನನ್ನನ್ನು ನಿನ್ನ ಮಡಿಲಿಗೆ ಹಾಕಿ ಹೋದರು. ಅವರಿಗೇನೂ ಗೊತ್ತು, ನನ್ನ ಒಳಗಾಗುತ್ತಿದ್ದ ತಳಮಳ. ಅಲ್ಲಿಯವರೆಗೆ ಹಳ್ಳಿಯ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಒಮ್ಮೆಗೆ ಪೇಟೆಯ ಸ್ಕೂಲು ಅದೂ ಕೂಡಾ ಇಂಗ್ಲಿಷ್ ಮೀಡಿಯಮ್ ಆಗಿದ್ದರಿಂದ ನಿನ್ನಡೆಗೆ ಬರುವಾಗ ಕೊಂಚ ಭಯ, ಆತಂಕಗಳನ್ನೆಲ್ಲಾ ಮನದ ಕೋಣೆಯಲ್ಲಿ ಮಾತ್ರವಲ್ಲ, ನನ್ನ ಸ್ಕೂಲ್ ಬ್ಯಾಗಿನಲ್ಲಿಯೂ ಹೊತ್ತುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದ್ದೆ. ಸದಾ ವಟ ವಟ ಎನ್ನುತ್ತಲೇ ಇರುವ ನಾನು ನಿನ್ನ ತೆಕ್ಕೆಗೆ ಬಂದು ಬಿದ್ದ ಮೊದಲಿನ ಒಂದು ಹತ್ತು ದಿನಗಳವರೆಗೆ ಕ್ಲಾಸಿನಲ್ಲಿ ಯಾರೊಂದಿಗೂ ಮಾತನಾಡಿದ್ದಿಲ್ಲ. ಹೊಸ ಹೊಸ ಮುಖಗಳು, ಮಾತುಗಳು, ನೋಟಗಳು, ಹಾವ-ಭಾವಗಳು. ಇದು ನನ್ನ ಪ್ರಪಂಚವೇ ಅಲ್ಲ, ಬೇರೆಯೇ ಒಂದು ಅಪರಿಚಿತ ಲೋಕವೆಂದು ಕಸಿವಿಸಿಯನ್ನು ಅನುಭವಿಸಿದ್ದರೂ ಅದು ಕೇವಲ ಇಪ್ಪತ್ತು ದಿನಗಳ ತನಕವಷ್ಟೆ. ಆಮೇಲೆ ಅದು ಹೇಗೋ ಏನೋ ನನಗರಿವಿಲ್ಲದಂತೆಯೇ ಆ ಪ್ರಪಂಚ ನನಗೆ ಚಿರಪರಿಚಿತವೆಂಬಂತಾಗಿತ್ತು. ಕಾರಣ ನಿನ್ನ ಅಂಗಳದ ಮಣ್ಣಿನ ಗುಣ ಹಾಗಿತ್ತು ಗೆಳತಿ. (ನನ್ನ ಸ್ನೇಹಿತರು ಇವತ್ತಿಗೂ ಹೇಳುತ್ತಾರೆ. ನಾನು ಮೊದಲಿನ ಹತ್ತು ದಿನ ಬಾಯಿಗೆ ಬೀಗ ಹಾಕಿಕೊಂಡು ಇದ್ದುದನ್ನು ನೋಡಿ ಅವರೆಲ್ಲರೂ ಇವಳು ಭಾಳ ಸೈಲೆಂಟ್ ಹುಡುಗಿಯೆಂದು ತಮ್ಮತಮ್ಮಲ್ಲೇ ತೀರ್ಪು ಕೊಟ್ಟುಕೊಂಡಿದ್ದರಂತೆ. ಪಾಪ, ಆಮೇಲೆ ತಮಗೆ ಟೊಪ್ಪಿ ಬಿತ್ತೆಂದು ಅರಿವಾಗಿ ಬೇಸರವಾಗಿರಬೇಕು.. :P )
                           ನಂತರದ ಆ ಮೂರು ಸುಂದರ ಸಂವತ್ಸರಗಳು ಅದೆಷ್ಟು ಬೇಗನೇ ಸರಿದು ಹೋದುವಲ್ಲ. ಆದರೂ ಪ್ರತಿಯೊಂದು ದಿನವೂ ಪ್ರತಿಯೊಂದು ಕ್ಷಣವೂ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಒಂದೇ ಕ್ಲಾಸ್ ಆದರೂ ನಮ್ಮ ನಮ್ಮಲ್ಲೇ ಜಗಳವಾಡಿದ್ದು, ಒಬ್ಬರ ಬಗ್ಗೆ ಇನ್ನೊಬ್ಬರ ಹತ್ತಿರ ಚಾಡಿ ಹೇಳಿದ್ದು, ಅವಳಿಗೊ/ಅವನಿಗೊ ಜಾಸ್ತಿ ಮಾರ್ಕ್ಸ್ ಬರಬಾರದೆಂದು ನೋಟ್ಸ್ ಕೊಡದೇ ಹೋದದ್ದು, ಸ್ನೇಹಿತನ ಬರ್ತ್ ಡೇಗೆಂದು ಗಿಫ್ಟ್ ತಂದದ್ದು, ನಮ್ಮ ಗೆಳೆಯರ ಗುಂಪನ್ನು ನೋಡಿ ಉಳಿದವರು ಉರಿದುಕೊಂಡಿದ್ದು, ಬಯಾಲಜಿ ಚಿತ್ರಗಳನ್ನು ಬೇರೆಯವರ ಹತ್ತಿರ ಬಿಡಿಸಿಕೊಂಡಿದ್ದು, ಗ್ರೂಪ್ ಡಿಸ್ಕಷನ್ ಸಮಯದಲ್ಲಿ ಸೀರಿಯಲ್, ಫಿಲ್ಮ್ ಸುದ್ದಿ ಹೇಳುತ್ತಾ ಕೂರುತ್ತಿದ್ದುದು, ಕ್ಲಾಸಿನೊಳಗೆ ಕ್ರಿಕೆಟ್, ಶಟಲ್ ಆಡುತ್ತಿದ್ದುದು, ಪಾಠಗಳು ನಡೆಯುವ ಹೊತ್ತಿನಲ್ಲೇ ನೆಲ್ಲಿಕಾಯಿ, ವಟಾಣಿ, ಚಾಕ್ಲೇಟುಗಳನ್ನು ತಿನ್ನುತ್ತಿದ್ದುದು, ಕಣ್ಸನ್ನೆ ಬಾಯಿಸನ್ನೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದುದು - ಒಂದೇ ಎರಡೇ. ಪಟ್ಟಿ ಮಾಡುತ್ತಾ ಹೋದಂತೆ ಹನುಮಂತನ ಬಾಲವಾದೀತು ಅಲ್ಲವೇನೇ..?? ಇಲ್ಲಿ ಬರೆಯಲಾಗದ ಕೆಲವು ವಿಷಯಗಳೂ ಇವೆ. ಅವೆಲ್ಲವೂ ನಮ್ಮ ನೆನಪಿನ ಪುಟಗಳಲ್ಲೇ ಉಳಿಯಲಿ ಬಿಡು. ಹೇಗಿದ್ದರೂ ನಿನಗೆ ಅವೆಲ್ಲ ಸಂಗತಿಗಳೂ ಗೊತ್ತು ತಾನೇ. ( ೨೦೦೯ ಬ್ಯಾಚ್ ಅಂದ್ರೆ ಅದು ನ ಭೂತೋ ನ ಭವಿಷ್ಯತಿ ಅಂತ ನಮ್ಮ ಸಂಸ್ಕೃತ ಸರ್ ಇಂದಿಗೂ ಹೇಳುತ್ತಾರೆ. ಬಹುಶಃ ಇದೇ ಕಾರಣವೇನೋ. :) )


                                 ನಿನ್ನ ಮಡಿಲಲ್ಲಿ ಆಡುತ್ತಾ ನಲಿಯುತ್ತಾ ಓದಿದವರು ಮರೆಯಲೇ ಆಗದಂತಹ ವಿಷಯಗಳು ಹಲವಾರಿವೆ ಅಲ್ಲವಾ ಮಾರಾಯ್ತಿ...?? ಅವುಗಳೆಂದರೆ ಸ್ಕೂಲ್ ಅಲ್ಲಿರುವ ಲಯನ್ಸ್ ಭವನ, ಅದರ ಪಕ್ಕದಲ್ಲೇ ಇರುವ ಬೇಸಿನ ಮತ್ತು ನಲ್ಲಿ, ಗ್ರೌಂಡ್ ನಲ್ಲಿರುವ ಜೋಕಾಲಿ, ಶ್ರೀಕೃಷ್ಣ ಮೆಸ್, ಸಮೃದ್ಧಿ ಶಾಪ್, ಗಜೇಂದ್ರ ಸಿಡಿ ಲೈಬ್ರರಿ, ಬಳಕೂರ್ ಶಾಪ್, ಭಟ್ಸ್ ಬೇಕರಿ, ರವಿರಾಜ್ ಸ್ಟುಡಿಯೋ, ಬಾಪೂಜಿ ನಗರ ಗ್ರೌಂಡ್, ಎಂ.ಇ.ಎಸ್. ಜೊತೆ ನಡೆಯಿತ್ತಿದ್ದ ಫ್ರೆಂಡ್ ಶಿಪ್ ಮ್ಯಾಚ್ ಗಳು, ಶಿರಸಿ ಸ್ಟೇಡಿಯಮ್ - ಇನ್ನೂ ಹತ್ತು ಹಲವು. ಆಟೋದಲ್ಲಿ ಪ್ರಯಾಣಿಸುವವರಿಗೆ ಆಟೋ ಮಾಮಾ, ಜೊತೆಯಲ್ಲಿ ಬರುವ ಜೂನಿಯರ್ಸು ಸೀನಿಯರ್ಸು, ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ರಗಳೆ ಕಂಡಕ್ಟರುಗಳು, ಲೇಟ್ ಆಗಿ ಬರುವ, ಮಳೆಗಾಲದಲ್ಲಿ ಸೋರುವ ಬಸ್ಸುಗಳೂ ಸಹ ತಮ್ಮ ಜೀವನಾಡಿಗಳಲ್ಲಿ ಒಂದಾಗಿ ಹೋಗುತ್ತಿದ್ದವು. ( ನಮ್ಮದು ಯಲ್ಲಾಪುರ್ ಬಸ್ ಗೆ ಓಡಾಡುವವರದ್ದೇ ಒಂದು ತಂಡವಿತ್ತು. ಅದೆಷ್ಟು ದಿನ ಬಸ್ಸಿಗಾಗಿ ಕಾದು ಕಾದು ಸುಸ್ತಾಗಿದ್ದೆವೊ, ಅದೆಷ್ಟು ಬಾರಿ ಬಸ್ಸು ಲೇಟ್ ಆಗಿ ಪ್ರೇಯರ್ ತಪ್ಪಿಸಿಕೊಂಡಿದ್ದೆವೊ, ಕಂಡಕ್ಟರುಗಳ ಜೊತೆ ಜಗಳವಾಡುವಾಗ ಅದೇನೆಲ್ಲಾ ಬೈದಿದ್ದೆವೊ. ನೆನದರೆ ಈಗ ನಗು ಬರುತ್ತದೆ. =D )
                              ಇನ್ನು ನಿನ್ನ ಮಂದಿರವನ್ನು ಸದಾ ಕಾಲ ಪವಿತ್ರವಾಗಿರಿಸುತ್ತಿದ್ದ ಕೆಲವು ಅಧ್ಯಾಪಕ ರತ್ನಗಳನ್ನು ನೆನೆಯದೇ ಹೋದರೆ ಹೇಗೆ..?? ನಿನ್ನ ಉಳಿದ ಸ್ನೇಹಿತರ ಬಗ್ಗೆ ಗೊತ್ತಿಲ್ಲ. ನಮ್ಮ ಬ್ಯಾಚ್ ನ ಮಟ್ಟಿಗೆ ಲಯನ್ಸ್ ಸ್ಕೂಲ್ ಟೀಚರ್ಸ್ ಎಂದಾಗ ಮೊದಲು ನೆನಪಾಗುವವರೇ ಪ್ರಶಾಂತ್ ಹೆಗಡೆ ಸರ್. ‘ಈಸ್ ಇಟ್ ಕರೆಕ್ಟ್..??’ ಎಂದು ಅವರು ಪಾಠ ಮಾಡುವಾಗ ಹೇಳುತ್ತಿದ್ದುದನ್ನು ಮರೆಯಲಾದೀತೇ..?? ಅವರ ಮೆದುಳಿನ್ನು ಮ್ಯೂಸಿಯಂ ನಲ್ಲಿ ಇಡಬೇಕು ಎಂದು ನಾವೆದೆಷ್ಟು ಬಾರಿ ಅಂದುಕೊಂಡಿದ್ದೆವೊ. ನಂತರದ ಸ್ಥಾನ ನಮ್ಮ ಹೆಡ್ ಮಾಸ್ಟರ್ ಶಶಿಧರ್ ಅಬ್ಬಿ ಅವರದ್ದು. ಆ ಗಾಂಭಿರ್ಯ, ಶಿಸ್ತು, ನೇರ ಮಾತು, ಜವಾಬ್ದಾರಿತನ, ಸ್ವಾಭಿಮಾನ - ಅಬ್ಬಿ ಸರ್ ಇಂದಾನೇ ನಿನ್ನ ಹೆಸರಿಗೂ ಒಂದು ಕಳೆ ಇತ್ತು ನೋಡು. ಕನ್ನಡವೆಂದರೆ ಸಾಕು ಸೀತಕ್ಕೋರು ನೆನಪಾಗುತ್ತಾರೆ. ಕೆನ್ನೆಯ ಎರಡು ಗುಳಿಗಳಲ್ಲಿ ಅರಿಶಿನ-ಕುಂಕುಮವನ್ನು ಹಚ್ಚಿಕೊಂಡು ಬರುವ ಅವರು ನಗುವುದನ್ನು ನೋಡುವುದೇ ಒಂದು ಸೊಗಸು. ಅವರು ಸಿಟ್ಟಿನಿಂದ ಬೈದರೂ ಅದು ಮನಸ್ಸಿಗೆ ಹಿತವಾಗುವಂತಿರುತ್ತದೆ. ಮತ್ತೆ ನಮ್ಮ ನಾಗರಾಜ್ ಸರ್. ‘ಸತ್ತ್ ಹೆಣಾ ನಿಂತಂಗೆ ನಿಂತಿದ್ದೆ’ ಅಂತಾ ಅವರು ಬಯ್ಯುವುದನ್ನು ಯಾರು ತಾನೇ ಮರೆಯಲು ಸಾಧ್ಯ..?? ಸೀಟಿ ಸಿಳ್ಳೆಯೊಂದೇ ಸಾಕು ಅವರ ನೆನಪನ್ನು ಹೊತ್ತು ತರಲು. ಮತ್ತೆ ‘ಏನಾದ್ರೂ ಪ್ರಾಬ್ಲಮ್ ಉಂಟೋ..??’ ಅಂತ ರಾಗದ ಸ್ವರ ಗೀತಾ ಟೀಚರ್ ಅನ್ನು ನೆನಪಿಗೆ ತರುತ್ತದೆ. ಅವರ ಇಂಗ್ಲಿಷ್ ಕ್ಲಾಸಿನಲ್ಲಿ ಪಾಠ ಕೇಳದೇ ಮಾತನಾಡುತ್ತ ಕುಳಿತಿರುತ್ತಿದ್ದ ಕಾರಣ ನಾವೆಲ್ಲ ಅದೆಷ್ಟು ಬಾರಿ ಬೈಸಿಕೊಂಡಿದ್ದೇವೆಂಬುದಕ್ಕೆ ಲೆಕ್ಕವಿಲ್ಲ. ಮತ್ತೆ ಸೀತಾರಾಮ್ ಸರ್, ಲಕ್ಷ್ಮೀ ಟೀಚರ್, ಸುಶೀಲಾ ಟೀಚರ್, ಲೀಲಾವತಿ ಟೀಚರ್, ರಜಿಯಾ ಟೀಚರ್, ಶಾಂತಲಾ ಟೀಚರ್, ಕುಮುದಾ ಟೀಚರ್, ರೇಶ್ಮಾ ಟೀಚರ್, ಪ್ರಶಾಂತ್ ಭಟ್ ಸರ್ - ಇನ್ನೂ ಅದೆಷ್ಟು ಉತ್ತಮ ಶಿಕ್ಷಕರು ಬೇಕು ಹೇಳು. ಇವರೆಲ್ಲಾ ಕೇವಲ ಪಠ್ಯದಲ್ಲಿದ್ದುದನ್ನು ಕಲಿಸಿ ಹೋಗಲಿಲ್ಲ. ಜೀವನದಲ್ಲಿ ಹೇಗೆ ಸಾಗಬೇಕೆಂಬುದನ್ನು ಹೇಳಿಕೊಟ್ಟರು. ಒಳ್ಳೆಯದನ್ನು ಮಾಡಿದಾಗ ಬೆನ್ನು ತಟ್ಟುತ್ತ, ತಪ್ಪು ಮಾಡಿದಾಗ ತಿದ್ದುತ್ತ ನಮ್ಮನ್ನು ಕೈ ಹಿಡಿದು ಮುನ್ನಡೆಸಿದರು. ಇದೊಂದು ವಿಷಯದಲ್ಲಿ ನಿನಗೆ ಎಷ್ಟು ಋಣಿಯಾಗಿದ್ದರೂ ಸಾಲದು ಗೆಳತಿ. ( ಇಂದಿಗೂ ಕೆಲವು ಟೀಚರ್ಸ್ ನಮ್ಮ ಸಂಪರ್ಕದಲ್ಲಿದ್ದಾರೆ. ನಮಗೇನಾದರೂ೦ ಸಮಸ್ಯೆ, ಕಷ್ಟಗಳು ಎದುರಾದಾಗ ಸರಿಯಾದ ಪರಿಹಾರ ಹೇಳಿ ಸಮಾಧಾನ ಮಾಡುವವರು ನಮ್ಮ ಲಯನ್ಸ್ ಸ್ಕೂಲ್ ಶಿಕ್ಷಕರೇ. )

                                *************************************


                           ಇನ್ನೊಮ್ಮೆ ನಾನು ನಿನ್ನ ಮನೆಯಲ್ಲೇ ಎಂಟನೇ ತರಗತಿಯನ್ನು ಓದುವಂತಾಗಿದ್ದರೆ..?? ಈ ಯೋಚನೆ ಅದೆಷ್ಟು ಬಾರಿ ಬರುತ್ತದೆ ಗೊತ್ತಾ ಗೆಳತಿ..?? ಅಂದು ಎಷ್ಟೊಂದು ಹೇಳಲಾರದ ಮಾತುಗಳೆಲ್ಲಾ ಮನಸ್ಸಿನಲ್ಲೇ ಉಳಿದು ಹೋದವು. ಅದೆಷ್ಟು ನಗುವಿನ ಕ್ಷಣಗಳು ಬಂದರೂ ಅರಳದೇ ಹೋದವು. ಅದೆಷ್ಟು ಮನಸ್ಸುಗಳಿಗೆ ವಿನಾಕಾರಣ ಘಾಸಿ ಉಂಟು ಮಾಡಿದೆವು. ಅದೆಷ್ಟು ಸುಂದರ ಭಾವಗಳನ್ನು ಅರ್ಥೈಸಲಾರದೇ ಹೋದೆವು. ಹೀಗೆಲ್ಲಾ ಯಾವಾಗ ಅನಿಸುತ್ತದೆ ಗೊತ್ತಾ ಮಾರಾಯ್ತಿ..?? ಫೇಸ್ ಬುಕ್ಕಿನಲ್ಲೋ, ವ್ಯಾಟ್ಸ್ ಆಪ್ ನಲ್ಲೋ ಗೆಳೆಯ-ಗೆಳತಿಯರ ಸ್ಟೇಟಸ್ ಕಂಡಾಗ, ರಜಾ ದಿನಗಳಲ್ಲಿ ಶಿರಸಿಯ ಬೀದಿಗಳಲ್ಲಿ ಅಡ್ಡಾಡುತ್ತಿರುವ ಹೊತ್ತಿನಲ್ಲಿ ಅವರ ಸಹೋದರನೋ, ಸಹೋದರಿಯೋ, ಅಪ್ಪನೋ, ಅಮ್ಮಳೋ ನಮ್ಮನ್ನು ಕಂಡು ಮಾತನಾಡಿಸಿದಾಗ, ಇಲ್ಲವೇ ಮುಗುಳ್ನಕ್ಕು ಹೋದಾಗ, ಸಂಪರ್ಕದಲ್ಲಿರುವ ಗೆಳೆಯ/ಗೆಳತಿ ಇನ್ನೊಬ್ಬ ಗೆಳೆಯ/ಗೆಳತಿ ಸಿಕ್ಕಿದ್ದನೆಂ/ಳೆಂದು ಅವನ/ಳ ಬಗ್ಗೆ ಮಾತನಾಡಿದಾಗ, ಟೀಚರ್ಸ್ ಯಾರಾದರೂ ‘ಮತ್ತೆ ಅವನು/ಅವಳು ಎಲ್ಲಿದ್ದಾರೆ..?? ಏನು ಮಾಡುತ್ತಿದ್ದಾರೆ..?’ ಎಂದು ಕೇಳಿದಾಗ - ಇನ್ನು ಬೇಕಾದಷ್ಟು ಸಂದರ್ಭಗಳಲ್ಲಿ ಅನಿಸುತ್ತದೆ. ಆಗೆಲ್ಲಾ ಏನು ತಾನೇ ಮಾಡಲು ಸಾಧ್ಯ..?? ಮೌನ ತಾಳುವುದೊಂದನ್ನು ಬಿಟ್ಟು.
                             ಬದುಕನ್ನೇ ರೂಪಿಸಿದ ತಾಣ ಅದು, ಲಯನ್ಸ್ ಸ್ಕೂಲ್. ಎಲ್ಲಿಗೇ ಹೋಗಲಿ, ಏನೇ ಮಾಡುತ್ತಿರಲಿ. ಅದರ ಜೊತೆಯಲ್ಲಿ ನಿನ್ನ ನಂಟುತನ ಇದ್ದೇ ಇರುತ್ತದೆ ಗೆಳತಿ. ನಿನ್ನನ್ನು ಭೇಟಿ ಮಾಡಲಿಕ್ಕೆ ಬರಲಿಲ್ಲವೆಂದು ನೀನು ವ್ಯಥಾ ಮನಸ್ಸು ಕೆಡಿಸಿಕೊಳ್ಳುವುದು ಬೇಡ ತಿಳೀತಾ. ನಾನು ನನ್ನ ಪುರಾಣದ ಕುರಿತು ಗೀಚಿದ್ದೇ ಆಯಿತು. ನಿನ್ನ ಬಗ್ಗೆ ಏನು ಕೇಳಲಿಲ್ಲ. ನಿನ್ನ ಮಡಿಲಲ್ಲಿ ಈಗ ಓದುತ್ತಿರುವ ಮಕ್ಕಳೆಲ್ಲಾ ಹೇಗಿದ್ದಾರೆ..?? ನಮ್ಮ ಶಿಕ್ಷಕ ವೃಂದದವರೆಲ್ಲಾ ಚೆನ್ನಾಗಿದ್ದಾರೆ ತಾನೇ..?? ಮತ್ತೆ ನಿನ್ನ ಮನೆಯಲ್ಲಿ ಏನೇನು ವಿಶೇಷವಿದೆ..?? ಇದೆಲ್ಲದರ ಬಗ್ಗೆಯೂ ನನಗೆ ಉತ್ತರ ಬರೆದು ತಿಳಿಸಬೇಕು. ನಿನ್ನ ಪತ್ರಕ್ಕಾಗಿ ಕಾಯುವವರು ಬಹಳ ಜನರಿದ್ದಾರೆ. ಕೊನೆಯಲ್ಲಿ ಸಾಧ್ಯವಾದರೆ ಶೀಘ್ರದಲ್ಲೇ ಭೇಟಿಯಾಗೋಣ. ಮತ್ತೆ ಸಿಗಲೇ..?

                                                                                                                           ಇತಿ ನಿನ್ನ ಪ್ರೀತಿಯ,
                                                                                                                                    ಲಹರಿ


1 comment: