Wednesday, 2 July 2014

ಶ್, ನಿಮ್ಮನ್ನು ಗಮನಿಸಲಾಗುತ್ತಿದೆ


                                   ಕನಕದಾಸರು ಮತ್ತು ಇತರ ಶಿಷ್ಯರಿಗೆ ಅವರ ಗುರು ವ್ಯಾಸರಾಜರು ಒಂದೊಂದು ಬಾಳೆಹಣ್ಣು ಕೊಟ್ಟು ಯಾರ ಕಣ್ಣಿಗೂ ಬೀಳದಂತೆ ಇದನ್ನು ತಿಂದು ಬನ್ನಿ ಎಂದು ಹೇಳಿದ್ದೂ, ಉಳಿದ ಶಿಷ್ಯರೆಲ್ಲರೂ ಒಂದಲ್ಲ ಒಂದು ಕಡೆ ಅಡಗಿ ಕುಳಿತು ಯಾರಿಗೂ ಕಾಣದಂತೆ ಅದನ್ನು ತಿಂದು ಬಂದರೂ, ದಾಸರು ಅದನ್ನು ತಿನ್ನದೇ ವಾಪಸ್ಸಾಗಿ "ದೇವರು ಎಲ್ಲಿಲ್ಲಿಯೂ ಇದ್ದಾನಲ್ಲ  ಗುರುಗಳೇ. ಆತನ ಕಣ್ಣು ತಪ್ಪಿಸಿ ನಾನಿದನ್ನು ತಿನ್ನಲಾರದೇ ಹೋದೆ." ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುವ ಕಥೆಯೊಂದನ್ನು ನಾವೆಲ್ಲರೂ ಚಿಕ್ಕಂದಿನಲ್ಲಿ ಕೇಳಿದ್ದೇವೆಯಷ್ಟೆ. ಅದೇ ಕಥೆ ಇಂದೇನಾದರೂ ಘಟಿಸಿದ್ದರೆ ಹೀಗಿರುತ್ತಿತ್ತೇನೋ ಎಂದೊಂದು ಸಣ್ಣ ಕಲ್ಪನೆಯಲ್ಲಿ ಬರೆದಿದ್ದು. ಅನ್ಯಥಾ ಭಾವಿಸುವುದು ಬೇಡ.

                                          ***********************************

                          ಅದೊಂದು ದಿನ ಗುರು ವ್ಯಾಸರಾಜರು ತಮ್ಮ ಶಿಷ್ಯರನ್ನೆಲ್ಲಾ ಕರೆದು ಒಬ್ಬೊಬ್ಬರ ಕೈಗೂ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಹೇಳಿದರು. "ಯಾರಿಗೂ ಕಾಣದಂತೆ ಹಣ್ಣನ್ನು ತಿಂದು ಬನ್ನಿ". ಕೂಡಲೇ ಯಾರ ಕಣ್ಣಿಗೂ ಬೀಳದಂತೆ ಗುರುಗಳಿತ್ತ ಬಾಳೆಹಣ್ಣು ತಿನ್ನಲು ಎಲ್ಲರೂ ಅಲ್ಲಿಂದ ಓಡಿದರು.                          
                          ತುಂಬಾ ಹೊತ್ತಾದರೂ ಯಾರೊಬ್ಬನೂ ವಾಪಸ್ಸು ಬರಲಿಲ್ಲ. ಗುರು ವ್ಯಾಸರಾಜರಿಗೆ ಚಿಂತೆಗಿಟ್ಟುಕೊಂಡಿತು. ಅರೇ, ಇವರೆಲ್ಲ ಎಲ್ಲಿ ಹೋದರೂ ಎನ್ನುತ್ತಾ ಕಳವಳಗೊಂಡರು. ಅಷ್ಟೊತ್ತಿಗೆ ದೂರದಲ್ಲಿ ಕನಕದಾಸರು ಬಾಡಿದ ಮುಖ ಹೊತ್ತುಕೊಂಡು ನಡೆದು ಬರುತ್ತಿರುವುದು ಕಾಣಿಸಿತು. ಅವರ ಹಿಂದೆಯೇ ಉಳಿದ ಶಿಷ್ಯರೆಲ್ಲರೂ ಕೂಡ ತಲೆ ತಗ್ಗಿಸಿಕೊಂಡು ಬರುತ್ತಿದ್ದರು. ತಮ್ಮ ಬಳಿಗೆ ಬಂದ ಕೂಡಲೇ ಕನಕದಾಸರನ್ನು ಗುರುಗಳು ಪ್ರಶ್ನಿಸಿದರು.
                                  "ಕನಕ, ನಿನ್ನ ಮುಖವೇಕೆ ಬಾಡಿದೆ..?? ಏನಾಯಿತು..??"
                                  ಭಾರವಾದ ದನಿಯಲ್ಲಿ ಕನಕದಾಸರು ಉತ್ತರಿಸಿದರು. "ಗುರುಗಳೇ ಯಾರಿಗೂ ಕಾಣದಂತೆ ಹಣ್ಣು ತಿಂದು ಬರಬೇಕೆಂದು ನೀವು ಹೇಳಿದ್ದಿರಿ. ಆದರೆ ದೇವರು ಸರ್ವಾಂತರ್ಯಾಮಿ ಅಲ್ಲವೇ..?? ಆತನ ಕಣ್ಣು ತಪ್ಪಿಸಿ ಈ ಹಣ್ಣನ್ನು ತಿನ್ನಲಾರದೇ ಹೋದೆ."
                                   ಗುರುಗಳ ಮುಖವರಳಿತು. "ಭೇಷ್ ಕನಕ. ನಿನ್ನ ಬುದ್ಧಿಮತ್ತೆಯನ್ನು ಮೆಚ್ಚಿದೆ." ಎಂದು ಹೊಗಳಿದರು. ತದ ನಂತರ ಉಳಿದ ಶಿಷ್ಯರತ್ತ ತಿರುಗಿ ಕೇಳಿದರು. "ನೀವೇಕೆ ತಲೆ ತಗ್ಗಿಸಿಕೊಂಡು ನಿಂತಿದ್ದೀರಿ..?? ನಿಮಗೂ ಹಣ್ಣನ್ನು ತಿನ್ನಲಾಗಲಿಲ್ಲವೇ..?? ಕಾರಣವೇನು..??"
                                 "ಗುರುಗಳೇ, ನೀವು ಹೇಳಿದಂತೆಯೇ ಯಾರ ಕಣ್ಣಿಗೂ ಕಾಣದ ಹಾಗೆ ಈ ಹಣ್ಣನ್ನು ತಿನ್ನಬೇಕೆಂದು ಜಾಗಗಳನ್ನು ಅರಸುತ್ತಾ ಹೋದೆವು. ಎಲ್ಲಿ ಹೋದರೂ ಅಲ್ಲೊಂದು ಬೋರ್ಡ್ ಕಾಣಿಸುತ್ತಿತ್ತು. ‘ನಿಮ್ಮನ್ನು ಆಬ್ಸರ್ವ್ ಮಾಡಲಾಗುತ್ತಿದೆ’ ಎಂದು ಅದರಲ್ಲಿ ಬರೆದಿರುತ್ತಿತ್ತು. ಎಲ್ಲಿ ಹೋದರೂ ಇದೇ ಗೋಳು. ಕೊನೆಯಲ್ಲಿ ನಾವು ದೇವರಿಗೆ ಮೊರೆ ಇಟ್ಟೆವು. "ಹೇ ದೇವಾ, ಇದ್ಯಾರು ನಮ್ಮನ್ನು ಆಬ್ಸರ್ವ್ ಮಾಡುತ್ತಿರುವುದು...?? ಯಾರೂ ನಮ್ಮನ್ನು ನೋಡದ ಜಾಗವೊಂದು ಎಲ್ಲಿದೆ..??" ಅದಕ್ಕೆ ದೇವರು ಏನೆಂದು ಹೇಳಿದ ಗೊತ್ತೆ ಗುರುಗಳೇ..?? "ಭಕ್ತರೇ, ನಿಮ್ಮನ್ನು ಆಬ್ಸರ್ವ್ ಮಾಡುತ್ತಿರುವುದು ಸಿಸಿ ಕ್ಯಾಮೆರಾ. ಅದು ನಿಮ್ಮನ್ನು ಮಾತ್ರವಲ್ಲ, ನನ್ನನ್ನೂ ಸದಾ ಗಮನಿಸುತ್ತಲೇ ಇರುತ್ತದೆ. ಅದರ ಕಣ್ಣು ತಪ್ಪಿಸಿ ಯಾರೂ ಏನನ್ನೂ ಮಾಡಲಾರರು. ನಾನೂ ಕೂಡ ನಿಸ್ಸಹಾಯಕನಾಗಿದ್ದೇನೆ." ಹಾಗಾಗಿ ನಾವೂ ಸಹ ಹಣ್ಣನ್ನು ತಿನ್ನಲಾರದೇ ಹೋದೆವು."
                         ಶಿಷ್ಯನೊಬ್ಬ ಹೇಳಿದ ಈ ಉತ್ತರವನ್ನು ಕೇಳಿ ಗುರುಗಳು ಶಾಕ್ ಗೆ ಒಳಗಾದರು.


                                       ***********************************
                  
                               ನನ್ನ ಗೆಳತಿಯೊಬ್ಬಳು ಅವತ್ತು ಹೇಳಿದಳು. "ಇತ್ತೀಚೆಗೆ ಮನೆ ಬಿಟ್ಟು ಹೊರಗಡೆ ಹೋಗಲಿಕ್ಕೆ ಮನಸ್ಸೇ ಆಗುತ್ತಿಲ್ಲ ನೋಡು." ನನಗೆ ಆಶ್ಚರ್ಯವಾಯಿತು. ಯಾವಾಗಲೂ ಶಾಪಿಂಗ್, ಫಿಲ್ಮ್, ಪಾರ್ಟಿ ಅಂತೆಲ್ಲಾ ಹೊರಗಡೆ ಸುತ್ತುವ ಇವಳಿಗೆ ಇದೀಗ ಒಂದೇ ಸಲ ಏನಾಯಿತಪ್ಪ ಎಂದುಕೊಂಡು ಕೇಳಿದೆ. "ಯಾಕೆ ಮಾರಾಯ್ತಿ..?? ಅಂಥದ್ದೇನಾಯಿತು..??"
                              "ಇನ್ನೇನು ಆಗಬೇಕು..?? ಎಲ್ಲಿಯೂ ಹೋಗುವಂತಿಲ್ಲ ಬರುವಂತಿಲ್ಲ ನಿಲ್ಲಿವಂತಿಲ್ಲ ಕುಳಿತುಕೊಳ್ಳುವಂತಿಲ್ಲ. 'ಯೂ ಆರ್ ಅಂಡರ್ ಸಿಸಿ ಕ್ಯಾಮೆರಾ ಆಬ್ಸರ್ವೇಷನ್' ಅಂತಾ ನೇತು ಹಾಕಿರ್ತಾರೆ. ಮೊನ್ನೆ ಮಾಲ್ ಗೆ ಹೋದಾಗ ಚೂಡಿ ಹಾಕಿದ್ದೆ. ದುಪಟ್ಟಾ ಸ್ವಲ್ಪ ಅತ್ತ ಸರಿದಿತ್ತು. ನಿಂತ ಕಾಲಲ್ಲೆ ಸರಿಮಾಡಿಕೊಳ್ಳೊಕಾಗತ್ತಾ..?? ಸುತ್ತ ಮುತ್ತ ಇರುವವರು ನೋಡಿದರೆ ಮುಜುಗರವಾಗುತ್ತದೆಯೆಂದು ಲೇಡೀಸ್ ರೂಮ್ ಗೆ ಹೋದೆ. ಅಲ್ಲಿ ನೋಡಿದರೆ ಮೂಲೆಯಲ್ಲಿ ಮತ್ತೆ ಇದೇ ಬೋರ್ಡ್ ನೇತಾಡುತ್ತಾ ಇತ್ತು. ನನಗೆ ಒಮ್ಮೆಲೆ ಕಿರಿಕಿರಿಯೆನ್ನಿಸಿತು. ಸಿಸಿ ಕ್ಯಾಮೆರಾದ ಆ ಕಡೆ ಕುಳಿತವರಿಗೆ ವ್ಯಕ್ತಿಯೊಬ್ಬನ ತೀರಾ ವೈಯಕ್ತಿಯ ಎನ್ನಿಸುವ ಸಂಗತಿಗಳೂ ಗೊತ್ತಾಗಬೇಕಾ ಮಾರಾಯ್ತಿ..?? ೬-೭ ದಿನಗಳ ಹಿಂದೆ ಟಿಇಟಿ ಪೇಪರ್ಸ್ ಲೀಕ್ ಆಗಿದ್ವು ನೋಡು. ಅಂತಹ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳನ್ನು ಕಾಯ್ದಿರಿಸುವ ಬಿಲ್ಡಿಂಗ್ ಗಳಿಗೆ ಯಾವ ಬಗೆಯ ಕಣ್ಗಾವಲೂ ಇಲ್ಲ. ಇವರ್‍ಯಾರಿಗೂ  ಸಿಸಿ ಕ್ಯಾಮೆರಾಗಳನ್ನು ಎಲ್ಲಿ ಅಳವಡಿಸಬೇಕು, ಎಲ್ಲಿ ಅಗತ್ಯವಿದೆ, ಎಲ್ಲಿ ಅನಾವಶ್ಯಕ ಎನ್ನುವಷ್ಟು ಸಾಮಾನ್ಯ ಜ್ಞಾನವೂ ಇಲ್ಲವಲ್ಲ. ಛೇ." ಅವಳು ಬಹಳ ಬೇಸರಿಸಿಕೊಂಡು ಹೇಳಿದಳು.
                          ಇದನ್ನು ಕೇಳಿ ನನಗೆ ನಮ್ಮ ಕಾಲೇಜಿನಿಂದ ಹಾಸ್ಟೆಲ್ ಗೆ ಬರುವ ರಸ್ತೆಯುದ್ದಕ್ಕೂ ಜೋಡಿಸಿಹ ೩-೪ ಕ್ಯಾಮೆರಾಗಳೆಲ್ಲವೂ ಸೇರಿ ಒಟ್ಟಾಗಿ ಕಣ್ಣು ಹೊಡೆದಂತಾಯಿತು.                                                 ********************************

                        ಇಂದು ಎಲ್ಲಿ ನೋಡಿದರಲ್ಲಿ ಸಿಸಿ ಕ್ಯಾಮೆರಾಗಳು ಕಣ್ಣಿಗೆ ಬೀಳುತ್ತವೆ. ಭದ್ರತೆ ಹಾಗೂ ಸುರಕ್ಷತೆಯ ಸಲುವಾಗಿ ಅವುಗಳನ್ನು ಅಳವಡಿಸಲಾಗಿದೆ ಎಂಬುದು ನಿಜವೇ ಆದರೂ ಕೆಲವೊಮ್ಮೆ ಇವುಗಳಿಂದಾಗಿ ಸಾರ್ವಜನಿಕರು ವಿನಾಕಾರಣ ಕಿರಿಕಿರಿ ಅನುಭವಿಸುತ್ತಾರೆ. ಕೆಲವೊಮ್ಮೆ ಬಹಳ ತೊಂದರೆಗೊಳಗಾದ ನಿದರ್ಶನಗಳೂ ಇವೆ. ಕ್ಯಾಮೆರಾಗಳನ್ನು ಯಾವ ಉದ್ದೇಶಗಳಿಂದ ಅಳವಡಿಸಲಾಗಿದೆಯೋ ಆ ಕೆಲಸಗಳಿಗೆ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎನ್ನುವ ಮಾತನ್ನೂ ತಳ್ಳಿ ಹಾಕುವಂತಿಲ್ಲ. ಅಂತೆಯೇ ಅವಶ್ಯಕತೆ ಇರುವ ಕಡೆಗಿಂತ ಹೆಚ್ಚಾಗಿ ಅಗತ್ಯವಿಲ್ಲದ ಸ್ಥಳಗಳಲ್ಲೇ ಹೆಚ್ಚಿನ ಸಂಖ್ಯೆಯ ಕ್ಯಾಮೆರಾಗಳಿವೆ. ಭದ್ರತೆ ಮತ್ತು ಸುರಕ್ಷತೆಯ ಉಸ್ತುವಾರಿ ವಹಿಸಿರುವವರು ಮೇಲಿನ ಸಂಗತಿಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ವಾಸ್ತವವನ್ನು ಖುದ್ದು ಪರಿಶೀಲಿಸಿ ಅವಲೋಕಿಸಿ ಸಮಸ್ಯೆಗಳನ್ನೆಲ್ಲಾ ನಿವಾರಿಸಿದರೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಉದ್ಧೇಶಕ್ಕೊಂದು ನಿಜ ಅರ್ಥ ದೊರೆಯುವುದು.


1 comment:

  1. WE ARE WHAT OUR THOUGHTS MADE US. HENCE WE HAVE TO THINK TWICE AND TO TAKE CARE WHAT WE THINK.

    ReplyDelete