Thursday, 31 July 2014

ಡೈರಿ ಪುಟ - ೪೮


                           "ಓಯ್, ಈ ಪೋಸ್ಟ್ ನೋಡೆ. ಇದು ಬೇಕಿತ್ತಾ ಸುದೀಪ್ ಗೆ..??" ರೂಮ್ ಮೇಟ್ ನನ್ನನ್ನು ಕರೆದು ಲ್ಯಾಪ್ ಟಾಪ್ ಸ್ಕ್ರೀನ್ ಕಡೆಗೆ ಕೈ ತೋರಿಸಿದಳು. ನಾನು ಏನಪಾ ಅಂತಾ ನೋಡಿದ್ರೆ ಅದು ಸುದೀಪ್ ಹೊಸ ಸಿನೆಮಾ ಬಗ್ಗೆ ಬರೆದಿದ್ದ ಪೋಸ್ಟ್. "ಈಗ ತಾನೇ ಮಾಣಿಕ್ಯ ರೀಮೇಕ್ ಸಿನೆಮಾ ಮಾಡಿದಾನೆ. ಮತ್ತೆ ಇನ್ನೊಂದು ರೀಮೇಕ್ ಬೇಕಿತ್ತಾ..?? ಅದು ಕೂಡ ಅತ್ತಾರಿಂಟಿಕಿ ದಾರೇದಿ. ಆ ಫಿಲ್ಮ್ ನಾ ಕನ್ನಡದಲ್ಲಿ ಸುಮಾರು ಎಲ್ಲರೂ ನೋಡಿರ್ತಾರೆ ಅಲ್ವಾ..??" ಅವಳು ನನ್ನ ಮುಖವನ್ನೇ ದಿಟ್ಟಿಸಿ ಕೇಳಿದಳು.
                     "ಹೌದೇ ಮಾರಾಯ್ತಿ. ಅವನಂತೂ ರೀಮೇಕ್ ರಾಜಾ ಆಗೋ ಹಾದಿಲೇ ಹೋಗ್ತಿದಾನೆ. ಅದೂ ಕೂಡ ಆ ತೆಲುಗು ಸಿನೆಮಾವನ್ನ ಕನ್ನಡಕ್ಕೆ ತರೋದಾ..?? ಅದರಲ್ಲಿ ಎಂಥ ಇದೆ ಅಂತಾ. ಒಳ್ಳೆ ಮಲಯಾಳಂ ಕ್ಲಾಸಿಕ್ ಆದ್ರೂ ರೀಮೇಕ್ ಮಾಡಿದ್ರೆ ಚೆನ್ನಾಗಿರ್ತಿತ್ತು." ನಾನು ಹೇಳಿದೆ.
                     "ಅಲ್ಲಾ ಕಣೇ, ರೀಮೇಕ್ ಯಾಕೆ ಮಾಡ್ಬೇಕು..?? ಕನ್ನಡದಲ್ಲಿ ಒಳ್ಳೆಯ ಕಥೆಗಾರರಿಲ್ವಾ..?? ಸೃಜನಶೀಲ ನಿರ್ದೇಶಕರಿಲ್ವಾ..?? ಅವರೆಲ್ಲಾ ಮಾಡಿರೋ ಫಿಲ್ಮ್ ಚೆನ್ನಾಗಿರಲ್ವಾ..?? ಸುಮ್ಮನೇ ಹಣದ ಹಿಂದೆ ಓಡೋದು ಅಷ್ಟೆ."
                       "ನಿಜ. ಈಗ ಸದ್ಯಕ್ಕಂತೂ ಕನ್ನಡದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಲೂಸಿಯಾ, ಉಗ್ರಂ, ಉಳಿದವರು ಕಂಡಂತೆ, ಗೂಗ್ಲಿ ಮೊನ್ನೆ ಮೊನ್ನೆ ತಾನೇ ಬಂದ ಬಹುಪರಾಕ್ ಎಲ್ಲವೂ ಹೊಸ ಪ್ರತಿಭಾವಂತರದ್ದೇ. ಆದರೆ ಈ ಸ್ಟಾರ್ ಪಟ್ಟದಲ್ಲಿರೋರಿಗೆ ಅಂಥವರು ಬೇಕಾಗಿಲ್ಲ. ಅವರ ಪ್ರತಿಷ್ಠೆಯಷ್ಟೆ ಮುಖ್ಯ ಅವರಿಗೆ. ಅದಕ್ಕೆ ಹೀಗಾಗ್ತಿರೋದು. ಮಾಡ್ಕೊಳ್ಲಿ ಬಿಡು." ನಾನು ಬೇಸರದಿಂದ ಉತ್ತರಿಸಿದೆ.


ಚಲನೆ ಮೂಡಿಸದ 'ಯಾನ'


                                     ಆಗ ನಾನು ಆರನೇ ತರಗತಿಯಲ್ಲಿದ್ದೆ. ದಸರಾ ರಜೆಯ ಸಮಯದಲ್ಲಿ ಒಂದು ದಿನ ಸಂಜೆಯ ಹೊತ್ತಿನಲ್ಲಿ ಓದಲು ತೆಗೆದುಕೊಂಡಿದ್ದ ನಾಯಿ ನೆರಳು ರಾತ್ರಿ ೧೨.೩೦ರ ತನಕವೂ ನನ್ನನ್ನು ನಿದ್ರಿಸಲು ಬಿಡಲಿಲ್ಲ. ನೆರಳಿನ ಗುಂಗು ಅದ್ಯಾವ ಪರಿಯಿತ್ತೆಂದರೆ ನಾನು ಮರುದಿನ ಬೆಳಿಗ್ಗೆ ೫ ಗಂಟೆಗೇ ಎದ್ದು ಕೂತು ಓದನ್ನು ಮುಂದುವರೆಸಿದ್ದೆ. ಒಂಭತ್ತನೇ ತರಗತಿಯಲ್ಲಿ ಕ್ಲಾಸಿನಲ್ಲಿ ಕೂತು ನೆಲೆ ಓದುತ್ತಿದ್ದೆ. ಮಧ್ಯಾನ್ಹ ಊಟ ಮುಗಿಸಿ ಓದಲು ಪ್ರಾರಂಭಿಸಿದ್ದೊಂದೇ ಗೊತ್ತು. ಆಮೇಲೆ ಅದ್ಯಾವಾಗಲೋ ಸ್ನೇಹಿತೆಯೊಬ್ಬಳು ಬಂದು "ಎಂಥದೇ, ಬುಕ್ ಓದ್ತಾ ಇವತ್ತೊಂದಿನ ಇಲ್ಲೇ ಉಳಿತೀಯೋ ಹೇಗೆ..??" ಎಂದಾಗಲೇ ನನಗೆ ಎಚ್ಚರ. ೪.೩೦ ಆಗಿ ಶಾಲೆಯ ಬೆಲ್ ಹೊಡೆದು ಉಳಿದವರೆಲ್ಲರೂ ಅದಾಗಲೇ ಬ್ಯಾಗ್ ಹೆಗಲಿಗೇರಿಸಿಕೊಂಡು ಹೋದರೆಂಬ ಸಂಗತಿ ಅರಿವಾದದ್ದು. ಕಾಲೇಜಿನಲ್ಲಿ ಲೈಬ್ರರಿಯ ಓವರ್ ನೈಟ್ ಕಾರ್ಡಿನಲ್ಲಿ ಎಲ್ಲರೂ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್ ಬುಕ್ಸ್ ತೆಗೆದುಕೊಂಡರೆ ನಾನು ಮಾತ್ರ ಶಿಸ್ತಾಗಿ ಭೈರಪ್ಪನವರ ಕಾದಂಬರಿಗಳನ್ನು ತರುತ್ತಿದ್ದೆ. ಕೊನೆಗೆ ನಾನೇ ಇಟ್ಟುಕೊಂಡು ಲಹರಿ ಎನ್ನುವ ಹೆಸರೂ ಕೂಡ ಅವರ ಅಂಚು ಕಾದಂಬರಿಯ ಗುಂಗಿನಲ್ಲಿ ತೇಲುತ್ತಿದ್ದಾಗ ಅತೀ ಇಷ್ಟವಾಗಿ ಇಟ್ಟುಕೊಂಡಿದ್ದು.
                         ಎಸ್. ಎಲ್. ಬಿ.ಯವರ ಅಭಿಮಾನಿಗಳೆಲ್ಲರಿಗೂ ಇಂಥ ಅನುಭವಗಳು ಆಗಿಯೇ ತೀರಿವೆ. ಅವರ ಕಾದಂಬರಿಗಳನ್ನು ಓದುತ್ತಾ ಹೋದಂತೆಲ್ಲ ಅಲ್ಲಿಯ ಪಾತ್ರಗಳೆಲ್ಲವೂ ಒಂದೊಂದು ಮಗ್ಗುಲಿನಲ್ಲಿ ನಮ್ಮನ್ನೇ ಬಿಂಬಿಸುವಂತೆ ತೋರುತ್ತವೆ. ಕೆಲವು ಸಾಲುಗಳು ಮಾತನ್ನೇ ಮರೆಯುವಷ್ಟು ಮೂಕವಾಗಿಸುತ್ತವೆ. ಘಟನೆಗಳು ನಮ್ಮ ಕಣ್ಣೆದುರಲ್ಲೇ ನಡೆದಂತೆ ಭಾಸವಾಗುತ್ತದೆ. ಕಾದಂಬರಿಯನ್ನೊಂದು ಮತ್ತೆ ಮತ್ತೆ ಓದಿದಂತೆಲ್ಲಾ ಹೊಸ ಹೊಸ ಅರ್ಥಗಳು, ವಿಚಾರಗಳು ಕಾಡತೊಡಗುತ್ತವೆ. ಕನಿಷ್ಠ ಪಕ್ಷ ಒಂದು ವಾರದ ತನಕ ಓದುಗರನ್ನು ತಮ್ಮ ಬರಹದ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಭೈರಪ್ಪನವರದ್ದು. ಹೀಗಿರುವಾಗ ಯಾನ ಹೇಗಿರಬಹುದು ಎನ್ನುವ ಕುತೂಹಲದ ಹಕ್ಕಿಯು ತಿಂಗಳುಗಳ ಹಿಂದೆಯೇ ಗರಿಗೆದರಿ ಬಿಚ್ಚಿಕೊಂಡಿತ್ತು. ಬಿಡುಗಡೆಯ ದಿನವೇ ಹದಿನೈದು ಸಾವಿರ ಪ್ರತಿಗಳು ಮಾರಾಟವಾಗಿ ಮೂರನೇ ಮುದ್ರಣಕ್ಕೆ ಅಣಿಯಾಗುತ್ತಿದೆಯೆಂಬ ಸುದ್ದಿ ಕೇಳಿದ ಮೇಲಂತೂ ನಿಲ್ಲದ ಚಡಪಡಿಕೆ.

                                   **********************************

                     ವೈಜ್ಞಾನಿಕ ಸಂಶೋಧನೆಯ ಸಲುವಾಗಿ ತಂದೆ, ತಾಯಿ, ಸಹೋದರ, ಸಹೋದರಿ, ಬಂಧು, ಬಾಂಧವರು, ಕೊನೆಯಲ್ಲಿ ಈ ಭೂಮಿಯನ್ನೇ ಬಿಟ್ಟು ಇನ್ನೆಂದೂ ಹಿಂದಿರುಗಿ ಬಾರದಂತೆ ಸುಮಾರು ಮೂವತ್ತು-ನಲವತ್ತು ಸಾವಿರ ವರ್ಷಗಳ ಯಾನಕ್ಕೆ ಒಂದು ಗಂಡು, ಒಂದು ಹೆಣ್ಣು ಹೊರಡುತ್ತಾರೆ. ಸೂರ್ಯನ ಗುರುತ್ವದ ಆಚೆ ಹೋಗಿ ಹತ್ತಿರದ ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದ ವಲಯದಲ್ಲಿ ಯಾವುದಾದರೂ ಗ್ರಹವಿದೆಯೇ, ಇದ್ದರೆ ಮನುಷ್ಯ ವಾಸಕ್ಕೆ ಯೋಗ್ಯವಾಗಿದೆಯೇ ಅನ್ನುವುದನ್ನು ಅನ್ವೇಷಿಸುವ ಈ ಯಾನದಲ್ಲಿ, ಯಾನಿಗಳು ಒಂದುಗೂಡಿ ಒಂದು ಹೆಣ್ಣು ಒಂದು ಗಂಡು ಮಗುವನ್ನು ಪಡೆದು, ಆ ಮಕ್ಕಳಿಗೆ ನೌಕೆಯ ಯಂತ್ರ ತಂತ್ರಗಳ ವಿಜ್ಞಾನ, ಖಗೋಳ ಶಾಸ್ತ್ರಗಳನ್ನೆಲ್ಲ ಕಲಿಸಿ ಅವರು ಸಂಶೋಧನೆಯನ್ನು ಮುಂದುವರೆಸುವಂತೆ ಅವರನ್ನು ತರಬೇತುಗೊಳಿಸಬೇಕು. ವಯಸ್ಸಿಗೆ ಬಂದಮೇಲೆ ಆ ಗಂಡು ಹೆಣ್ಣುಗಳು ಕೂಡಿ ಮುಂದಿನ ತಲೆಮಾರನ್ನು ಹುಟ್ಟಿಸಿ ಬೆಳೆಸಿ ಎಲ್ಲ ವಿದ್ಯೆಯನ್ನು ಕಲಿಸಿ ತರಬೇತುಗೊಳಿಸಬೇಕು. ಸಾವಿರ ತಲೆಮಾರುಗಳವರೆಗೆ ಇದೇ ಪ್ರಕ್ರಿಯೆ ನಡೆಯುತ್ತಾ ಸಂಶೋಧನೆಯನ್ನು ಕೈಗೊಳ್ಳಬೇಕು. ಈ ಯೋಜನೆಯಲ್ಲಿ ಎರಡನೇ ತಲೆಮಾರಿನ ಯಾನಿಗಳಿಗೆ ಕಾಡುವ ನೈತಿಕ ತಳಹದಿಯ ಪ್ರಶ್ನೆಗಳು, ಅವುಗಳಿಗೆ ಅವರು ಉತ್ತರ ಹುಡುಕುವುದು, ಕೊನೆಯಲ್ಲಿ ಮೊದಲು ಕಾಡಿದ ಪ್ರಶ್ನೆಗಳೇ ಗೊಂದಲದ ಗೂಡಾಗಿ ಶೂನ್ಯವೇ ಉತ್ತರವಾಗುವುದು ಯಾನದ ಕಥೆ.
                            ಈ ಕಥೆ ನಡೆಯುವುದು ಸುಮಾರು ಮೂವತ್ತೇಳು ವರ್ಷಗಳ ನಂತರದಲ್ಲಿ.ಈಗಿನ ಕಾಲದಲ್ಲೇ ನೀತಿ, ನಿಯಮಗಳು, ಮೌಲ್ಯಗಳು, ನಂಬಿಕ, ಶ್ರದ್ಧೆಗಳು ಅರ್ಥ ಕಳೆದುಕೊಳ್ಳುತ್ತಿರುವ ವಾಸ್ತವದ ಕಹಿ ಸತ್ಯದ ನಡುವೆ, ಮೂರೂವರೆ ದಶಕಗಳ ನಂತರ ಅವುಗಳ ಅಸ್ತಿತ್ವಕ್ಕೆ ಮಹತ್ವ ದೊರಕೀತೇ ಎಂಬ ಪ್ರಶ್ನೆ ಕಾದಂಬರಿ ಓದುವಾಗ ಮನಸ್ಸಿನಲ್ಲಿ ಮೂಡುತ್ತದೆ. ನನಗಂತೂ ಎರಡು ತಿಂಗಳ ಹಿಂದೆಯಷ್ಟೆ ಓದಿದ ಸಾಲುಗಳು ನೆನಪಿಗೆ ಬಂದವು. "ಮುಂದಿನ ಜನ್ಮ ನೀನು ಹುಟ್ಟೋ ಹೊತ್ತಿಗೆ ಭಾರತದಲ್ಲಿ, ಗಂಡ, ಹೆಂಡತಿ, ಅಪ್ಪ, ಅಮ್ಮ, ತಂಗಿ, ಅಣ್ಣ ಈ ಸಂಬಂಧಗಳೇ ಇರಲ್ಲ. ಯಾರು ಯಾರನ್ನ ಬೇಕಾದರೂ ಕಟ್ಟಿಕೊಳ್ಳಬಹುದು ಇಟ್ಟುಕೊಳ್ಳಬಹುದು." ಹೀಗೆ ಆಗದಿದ್ದರೆ ಒಳ್ಳೆಯದೆನ್ನುವುದು ಸತ್ಯವಾದರೂ ಹೀಗಾದರೂ ಅದರಲ್ಲಿ ಅಚ್ಚರಿಯಿಲ್ಲ.

                                *********************************

                        ಕಾದಂಬರಿ ಹೇಗಿದೆ ಎನ್ನುತ್ತಾ ಕೈಗೆತ್ತಿಕೊಂಡು ೫೦-೬೦ ಪುಟಗಳು ಓದುವಷ್ಟರಲ್ಲೇ ತೀವ್ರ ನಿರಾಶೆಯಾಗುತ್ತದೆಯೆಂದು ಹೇಳಲೂ ಬೇಸರವಾದರೂ ಒಪ್ಪಿಕೊಳ್ಳಲೇಬೇಕು. ಕೆಲವು ೪-೫ ಸಾಲುಗಳನ್ನು ಬಿಟ್ಟರೆ ಯಾನವು ಭೈರಪ್ಪನವರ ಸಾಂಪ್ರದಾಯಿಕ ಓದುಗರ ಬುದ್ಧಿ, ಭಾವಗಳ ಮೇಲೆ ಯಾವ ಬಗೆಯ ಪ್ರಯಾಣವನ್ನು ಮಾಡುವುದಿಲ್ಲ. ಕಥೆಯಲ್ಲಿ ಅಷ್ಟೇನೂ ಗಟ್ಟಿತನವಿಲ್ಲ. ಪಾತ್ರಗಳಲ್ಲಿ ಸತ್ವ ಕಾಣಿಸುವುದಿಲ್ಲ. ಎಂದಿನಂತೆ ಮನುಷ್ಯನ ಅಂತರ್ಮುಖತೆ ಪಾತ್ರಗಳಲ್ಲಿ ಕಂಡುಬಂದರೂ ಅವು ಓದುಗರನ್ನು ಅಂತರ್ಮುಖರನ್ನಾಗಿಸುವುದಿಲ್ಲ. ವಾರಗಳ ತನಕ ಬಿಡಿ, ಒಂದು ದಿನದ ಮಟ್ಟಿಗೂ ಯಾನ ಕಾಡುವುದಿಲ್ಲ.
                        ಓದುತ್ತಾ ಓದುತ್ತಾ ಹೋದಂತೆ ಇದು ಭೈರಪ್ಪನವರ ಯಾವತ್ತಿನ ಬರವಣಿಗೆಯಲ್ಲ ಎಂದು ಅರಿವಾಗಿ ಮುಂದೆ ಓದಲು ಮನಸ್ಸು ಒಪ್ಪದೇ ಇನ್ನೆಷ್ಟು ಪುಟಗಳು ಉಳಿದುಕೊಂಡಿವೆ ಎಂದು ಲೆಕ್ಕ ಹಾಕುವಂತಾಗುತ್ತದೆ. ಕೈಗೆತ್ತಿಕೊಂಡಿದ್ದರಿಂದ ಮುಗಿಸೋಣ ಎಂದು ಓದನ್ನು ಮುಂದುವರೆಯುವಂತೆ ಮನಸ್ಸಿಗೆ ಬಲವಂತದ ಮಾಘಸ್ನಾನ ಮಾಡಿಸಿದ ಹಾಗೆ ಒಂದೆರಡು ಸನ್ನಿವೇಶಗಳು ಅನಾವಶ್ಯಕವಾಗಿತ್ತಲ್ಲವೇ ಎನ್ನುವಂತಿವೆ. ವಿಜ್ಞಾನದ ಆಸಕ್ತರಿಗೆ ಸುಲಭವಾಗಿ ಓದಿಸಿಕೊಂಡು ಹೋಗಬಹುದೇನೋ. ಆದರೆ ಎಸ್. ಎಲ್. ಬಿ. ಸಾಹಿತ್ಯದ ಅಭಿಮಾನಿಗಳಿಗೆ ಮಾತ್ರ ಹಸಿವಾದವನಿಗೆ ಅರೆ ತುತ್ತು ಉಣಬಡಿಸಿ ಕಳಿಸಿದಂತಾಗುತ್ತದೆ.
                        ಆದರೆ ಕಾದಂಬರಿಯ ಸಲುವಾಗಿ ಅವರು ಮಾಡಿದ ಅಧ್ಯಯನವಿದೆಯಲ್ಲ, ಅದನ್ನು ಅರಿತುಕೊಂಡಾಗ ಮಾತ್ರ ಅವರ ಕುರಿತು ಹೆಚ್ಚಾಗಿಯೇ ಹೆಮ್ಮೆ ಮೂಡುತ್ತದೆ. ಬಿಸಿ ರಕ್ತದ ವಯಸ್ಸಿನಲ್ಲೂ ನಮಗೆ ಏನನ್ನು ಕಲಿಯುವ ತಿಳಿಯುವ ಆಸಕ್ತಿಯಿಲ್ಲ. ಪಟ್ಟು ಹಿಡಿದು ಕೂತು ಅಧ್ಯಯನ ಮಾಡುವುದು ಬಿಡಿ, ಓದಲು ಪುಸ್ತಕ ಹಿಡಿಯುವಷ್ಟು ತಾಳ್ಮೆಯೇ ಇಲ್ಲ. ಅಂಥದ್ದರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಕಾದಂಬರಿಯ ಬರಹಕ್ಕಾಗಿ ಖಗೋಳ ವಿಜ್ಞಾನದ ಕುರಿತು ಎಷ್ಟೆಲ್ಲಾ ಅಭ್ಯಸಿಸಿದರಲ್ಲ. ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ ಎನ್ನುವುದನ್ನು ಒಪ್ಪಿಕೊಳ್ಳದೆ ಇರಲಾದೀತೇ..?? ಕನ್ನಡಮ್ಮ ನಿಜಕ್ಕೂ ಧನ್ಯಳೇ, ಕನ್ನಡಿಗರು ಸತ್ಯವಾಗಲೂ ಪುಣ್ಯವಂತರೇ.


Tuesday, 29 July 2014

ಡೈರಿ - ಪುಟ ೪೭


                    "ಏಯ್, ಇಲ್ನೋಡೆ, ವಿಜಯವಾಣಿ ಮುಖಪುಟದಲ್ಲಿ. ದಾಖಲೆ ‘ಯಾನ’, ಪ್ರಕಟಣೆಯ ಮೊದಲ ದಿನವೇ ಮೂರನೇ ಮುದ್ರಣದತ್ತ, ಹದಿನೈದು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟ. ವಾಹ್, ಹೀಗೂ ಉಂಟೇ ಮಾರಾಯ್ತಿ." ರೂಮ್ ಮೇಟ್ ಜೋರಾಗಿ ನ್ಯೂಸ್ ಹೆಡಿಂಗ್ ಓದಿ ಹುಬ್ಬು ಮೇಲಕ್ಕೆತ್ತರಿಸಿಕೊಂಡು ನನ್ನನ್ನು ಕೇಳಿದಳು.
                       "ಬರೆದಿದ್ದು ಯಾರು ಹೇಳು..?? ಭೈರಪ್ಪನವರು ಕಣೇ. ಹಾಗಾಗಿ ಹೀಗೂ ಉಂಟು. ಮಂಗಳೂರಲ್ಲಿ ಬಿಡುಗಡೆ ಆದ ಒಂದು ಗಂಟೆಯಲ್ಲೇ ಎಲ್ಲಾ ಪ್ರತಿಗಳು ಮಾರಾಟ ಆಗಿ ಹೋದುವಂತೆ. ಅಂಗಡಿ ಮುಂದೆ ಒಮ್ದು ಕಿಲೋ ಮೀಟರ್ ಉದ್ದದ ಕ್ಯೂ ಇತ್ತಂತೆ. ಕಸಿನ್ ಹೇಳ್ತಿದ್ದ, ಅವನಿಗೆ ನಿನ್ನೆ ಪುಸ್ತಕ ಸಿಗಲಿಲ್ವಂತೆ. ಇವತ್ತಾದ್ರೂ ಸಿಗತ್ತೋ ನೋಡ್ಬೇಕು ಅಂತಿದ್ದ." ನಾನು ಉತ್ತರಿಸಿದೆ.
                      "ಇದೊಂಥರಾ ಖುಷಿ ವಿಷಯ ಅಲ್ವಾ..? ಇವತ್ತಿನ ದಿನ ಕನ್ನಡ ಪುಸ್ತಕಗಳನ್ನ ಓದೋರೇ ಇಲ್ಲ ಅಂತಾ ಎಷ್ಟೋ ಪುಸ್ತಕಗಳು ಪ್ರಕಟವಾಗಲ್ಲ, ಪ್ರಕಟವಾದವುಗಳಿಗೆ ಮರುಮುದ್ರಣದ ಭಾಗ್ಯವಿರಲ್ಲ. ಅಂಥಾದ್ದರಲ್ಲಿ ಒಂದೇ ದಿನ ಇಷ್ಟೊಂದು ಕಾಪಿ ಖರ್ಚಾಗಿದೆ ಅಂದರೆ, ಅದರ ಕ್ರೆಡಿಟ್ಟು ಪೂರ್ತಿ ಭೈರಪ್ಪನವರಿಗೇ, ಅವರ ಬರವಣಿಗೆಗೆ ಸಲ್ಲಬೇಕು."
                           "ಚೆನ್ನಾಗಿ ಬರೆದರೆ ಓದುಗರು ಕೊಂಡು ಓದದೇ ಇರ್ತಾರಾ..?? ಹಾಗೆ ಬರೆದರೆ ಸಿನೆಮಾ ಟಿಕೆಟ್ಟುಗಳು ಮಾತ್ರ ಅಲ್ಲ. ಪುಸ್ತಕಗಳೂ ಕೂಡ ಬಿಸಿ ಬಿಸಿ ದೋಸೆಯಂತೆ ಮಾರಾಟವಾಗುತ್ತವೆ. ಸದ್ಯ ನೀನು ನಿನ್ನ ಪಾಡಿಗೆ ಪೇಪರ್ ಓದು. ನನಗೆ ಡಿಸ್ಟರ್ಬ್ ಮಾಡ್ಬೇಡ. ನಾನು ಮೊದಲು ಯಾನ ಮುಗಿಸ್ತಿನಿ."


ಡೈರಿ - ಪುಟ ೪೬


                     "ಮೊನ್ನೆ ಮೊನ್ನೆಯಷ್ಟೇ ಫೇಸ್ ಬುಕ್ ನಲ್ಲಿ ಎಲ್ಲರ ಗೋಡೆಗಳೂ ಅಂದವಾಗಿ ಕಾಣಿಸುತ್ತಿವೆ ಅಂದಿದ್ದೆ. ನಿನ್ನೆ ಇವತ್ತು ಅನ್ನೋವಷ್ಟರಲ್ಲಿ ಬಹಳಷ್ಟು ಮಂದಿಯ ಟೈಮ್ ಲೈನ್ ಗಲೀಜಾಗಿದೆ." ರೂಮ್ ಮೇಟ್ ಮುಖ ಸಿಂಡರಿಸಿಕೊಂಡು ಹೇಳಿದಳು.
                   "ಈಗ ಅಂಥದ್ದೇನಾಯಿತೇ ಮಾರಾಯ್ತಿ..??" ನಾನು ಕೇಳಿದೆ.
                   "ಯಾರೋ ಇಬ್ಬರು ಮೂಳೆಯಿಲ್ಲದ ತಮ್ಮ ನಾಲಿಗೆಯನ್ನು ಬೇಕಾಬಿಟ್ಟಿ ಹರಿಯಬಿಟ್ಟಿದ್ದಾರೆ. ಅದರಿಂದ ಅವರ ಗುಣಾವಗುಣಗಳೆಲ್ಲ ಎಲ್ಲರಿಗೂ ಗೊತ್ತಾಗಿದೆ. ಅದನ್ನು ತಿಳಿದವರು ಸುಮ್ಮನಿದ್ದಾರೆಯೇ..?? ಅವರ ಕೊಳಕು ಮನಸ್ಥಿತಿಯನ್ನು ಬಿಂಬಿಸಲು ಹೊರಟು ತಮ್ಮ ಮನಸ್ಸೂ ಕೂಡ ಅಷ್ಟೆ ಕೊಳಕೆಂದು ತೋರಿಸಿಕೊಳ್ಳುತ್ತಿದ್ದಾರೆ. ಅವರ ಅಸಹ್ಯ ಸ್ಟೇಟಸ್ ಗಳನ್ನು ತಮ್ಮ ಗೋಡೆಯ ಮೇಲೆ ಹಂಚಿಕೊಂಡಿದ್ದಾರೆ. ತಾವೇನೋ ಸಂಪನ್ನರು ಎಂಬಂತೆ."
                     "ಅಯ್ಯೋ, ಆ ವಿಷಯವಾ..?? ಬಿಡು ಮಾರಾಯ್ತಿ. ಜನರಿಗೆ ಚಪಲ ಜಾಸ್ತಿಯಲ್ಲವೇನೇ..?? ಮಾಡಲು ಕೆಲಸವಿಲ್ಲದವರು ಹೀಗೆ ಕೆಸರಿಗೆ ಕಲ್ಲೆಸೆದು ತಮ್ಮ ಮೈಯ್ಯನ್ನೂ ಗಲೀಜು ಮಾಡಿಕೊಳ್ಳುತ್ತಾರೆ. ಬೇರೆಯವರು ಕೆಟ್ಟದ್ದನ್ನು ಆಡುವುದು, ಮಾಡುವುದು ಎಷ್ಟರ ಮಟ್ಟಿಗೆ ತಪ್ಪೋ, ಅದರ ಕುರಿತು ನಾವು ಮಾತನಾಡುವುದೂ ಕೂಡ ಅಷ್ಟೆ ತಪ್ಪು. ಒಳ್ಳೆಯ ವಿಷಯಗಳು ಎಷ್ಟೆಲ್ಲಾ ಇವೆ ಜಗತ್ತಿನಲ್ಲಿ. ಅವುಗಳನ್ನೆಲ್ಲಾ ತಿಳಿದುಕೊಳ್ಳಲು, ಅವುಗಳ ಕುರಿತು ಮಾತನಾಡಲು ಒಂದು ಜನ್ಮವಂತೂ ಸಾಕಾಗುವುದಿಲ್ಲ. ಹಾಗಿರುವಾಗ ಕೆಟ್ಟ ವಿಷಯಗಳು ನಮ್ಮ ತಲೆಯಲ್ಲಿ ಸುಳಿಯಲಿಕ್ಕೆ ಪುರಸೊತ್ತಾದರೂ ಇದೆಯೇ..?? ಅಂಥವುಗಳನ್ನು ಹಂಚಿಕೊಳ್ಳುವುದರ ಬದಲು ಸುಮ್ಮನೆ ಶುಭಮುಂಜಾನೆ, ಶುಭರಾತ್ರಿಯೆಂದು ಗೋಡೆಯ ಮೇಲೆ ಬರೆದುಕೊಂಡರಾದರೂ ನಾಲ್ಕು ಜನ ಅದನ್ನು ನೋಡಿ ಖುಷಿ ಪಟ್ಟಾರು."


ಕೃಷ್ಣ ಬರುತ್ತಿದ್ದಾನೆ


ವರುಷ ವರುಷಗಳ ನಂತರದಲ್ಲಿ
ಮನದಲ್ಲಿ ಉಲ್ಲಾಸದ ಹೂಗಳು ಅರಳಿವೆ
ಹಳೇ ಕನಸುಗಳು ಹೊಸ ಬಣ್ಣ ತಳೆದು
ತನುಮನವೆಲ್ಲಾ ಆಗಸದೆತ್ತರದಲ್ಲಿ ಹಾರಾಡುತ್ತಿವೆ
ವಿರಹದ ಬೇಗೆಯಲ್ಲಿ ಬಸವಳಿದು
ನಿರೀಕ್ಷೆಯ ಕಡಲಲ್ಲಿ ಮೀಯುತ್ತಿದ್ದ
ಕ್ಷಣಗಳಿಂದು ಕೊನೆಯಾದವು ಗೆಳತಿ
ನನ್ನ ಕೃಷ್ಣ ಬರುತ್ತಿದ್ದಾನಲ್ಲ

ಯಾವಾಗ ನಾನವನ ಕಂಡದ್ದು ಕೊನೆಯ ಬಾರಿ?
ಅಚ್ಚಳಿಯದಂತಿದೆ ಮೋಹಕ ರೂಪವು
ಕಿವಿಗಳಲ್ಲಿ ಹಿತವಾಗಿ ಮಾರ್ನುಡಿಯುವಂತಿದೆ
ವೇಣುಮಾಧವನ ಕೊಳಲ ಗಾನವು
ಬೆಳದಿಂಗಳ ರಾತ್ರಿಗಳ ಆ ರಾಸಲೀಲೆಯು
ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ
ತನ್ನನ್ನು ತಾನೇ ಕಳೆದುಕೊಂಡ ದಿನಗಳವು
ಗೋಪಾಲನ ಮೋಹದ ಬೆಂಕಿಗೆ ಕರಗಿ

ಕಾಡಲಿಲ್ಲವೇ ಗೆಳತಿ ಅವನಿಗಿಷ್ಟು ದಿನ?
ಅವನ ಪ್ರಿಯ ಪ್ರೇಯಸಿಯ ನೆನಪು
ಮರೆತುಹೋಗಿದ್ದವೇನು ಆ ರಸನಿಮಿಷಗಳು?
ನದಿ ತೀರದಲ್ಲಿ ಕಳೆದ ಸುಂದರ ಕ್ಷಣಗಳು
ಕ್ಷಣಿಕವಾಗಿತ್ತೇ ಅವನ ಮಧುರ ಪ್ರೇಮ?
ಮೀಸಲಾಗಿಲ್ಲವೇ ಅದು ನನಗೊಬ್ಬಳಿಗೆ?
ಅರಿಯಲಾರದಾದನೆ ಜಾಣ ಕೃಷ್ಣ
ಉಸಿರುಸಿರಿನಲ್ಲೂ ಒಸರುವ ಪರಿಶುದ್ಧ ಪ್ರೀತಿಯನ್ನು

ತಲೆಯಲ್ಲಿ ಸುಳಿದರೂ ನೂರಾರು ಯೋಚನೆಗಳು
ಕೃಷ್ಣನ ಕುರಿತಾದ ಸಹಸ್ರಾರು ಭಾವಗಳು
ಕರಗಿ ಹೋಗುವವೆಲ್ಲವೂ ಕ್ಷಣಮಾತ್ರದಲ್ಲಿ
ಕೃಷ್ಣನ ಆಗಮನವು ನೆನಪಾಗುವ ವೇಳೆ
ಬಣ್ಣಿಸಲಾಗದು ಅದರ ಅಂದ ಚಂದಗಳನ್ನು
ಅಳೆಯಲಾಗದು ಆಳ ತೀವ್ರತೆಗಳನ್ನು
ಯುಗಯುಗಗಳು ಕಳೆದರೂ ಸರ್ವ ಶ್ರೇಷ್ಠ
ಏಕೆಂದರೆ ಅದು ರಾಧೆಯ ಪ್ರೀತಿ


Monday, 28 July 2014

ನಿದಿರೆ


ಕಿಟಕಿಯ ಹೊರಗಿನಿಂದ ಎತ್ತಲೋ
ಗಾಳಿಯೊಂದರ ಬಿಸಿ ಸೋಕಲು
ರೆಕ್ಕೆ ಮುರಿದರೆ ಹೋಗಲಿ
ಗರಿ ಬಿಚ್ಚಿಯೇ ತೀರುವೆನೆಂಬ ಪೌರುಷ
ಇತ್ತ ಮುಖ ತಿರುಗಿಸಿದ ಕೂಡಲೇ
ಒಲೆಯ ಬೂದಿಯ ಸೇರುವುದಲ್ಲ

ರಸ್ತೆಯಲ್ಲಿನ ವಾಹನಗಳ ಭರಾಟೆ
ಕಿವಿಯಲ್ಲಿ ಬಿಡದೇ ಮೊಳಗಿದಂತೆ
ಚಪ್ಪಲಿಯ ಮೆಟ್ಟಿ ಓಡುವ ಹುಮ್ಮಸ್ಸು
ಕಾಲುಗಳು ಕೇಳುವುದಿಲ್ಲ, ಕುಸಿಯುತ್ತವೆ
ಎಲ್ಲ ಸದ್ದುಗಳೂ ಕೊನೆಗೆ ತಪ್ಪದೇ
ಹೃದಯದ ಕಾಲು ಹಾದಿಯ ಸ್ವತ್ತು

ಎತ್ತಿ ಹಾಕಿದಷ್ಟೂ ಬಂದು ಸೇರುವ
ಕಸದ ರಾಶಿಗಳಿಗೆ ಲೆಕ್ಕವಿಲ್ಲ
ತಿಳಿಯ ಆಗಸದತ್ತ ತಲೆಯೆತ್ತಿದಾಗ
ಕಸಬರಿಗೆಯ ನೆನಪಾಗುತ್ತದೆ
ಬಗ್ಗಿ ಚೊಕ್ಕ ಮಾಡಲು ಮನ ಬಾಗದೇ
ಕೊಸರಿ ಅಲ್ಲೇ ರಸ ಹುಡುಕುತ್ತೇನೆ

ಕೂತು ಮಲಗಿದ್ದು ಸಾಕಿನ್ನು
ಹೊರಡಬೇಕೆಂದುಕೊಂಡಾಗಲೆಲ್ಲಾ
ಏಳಲಾರದ ಮನಸ್ಸಿಗೆ ಏನೆನ್ನಲಿ..??
ದೊರೆಯುವುದೇ ಉತ್ತರ ನನಗೆ
ದಿಂಬಿನ ಎದೆಗೆ ಆತುಕೊಂಡು
ಮುಖ ಹುದುಗಿಸಿ ಕಣ್ಮುಚ್ಚಿದರೆ


Sunday, 27 July 2014

ಪ್ರೀತಿಗೆ ಸಾವಿರ ಮುಖಗಳುಪ್ರಿಯ ಮನಸ್ವೀ,
                             ಎಲ್ಲವೂ ಕ್ಷೇಮವಷ್ಟೆ. ನಿನಗೊಂದು ಪತ್ರ ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದರೂ ಸರಿಯಾದ ವಿಷಯ ದೊರಕದ ಕಾರಣವೋ, ಸಮಯ ದೊರೆಯಲಿಲ್ಲವೆಂಬ ನೆಪವೋ, ಬರೆಯಲು ಮನಸ್ಸಿಲ್ಲ ಎಂಬ ಮೊಂಡಿತನವೋ - ಬರೆಯ ಹೊರಟಾಗಲೆಲ್ಲ ಏನೋ ಒಂದು ಬಗೆಯ ತಡೆಯ ಬಂಡೆ ಅಡ್ಡ ಬಂದು ನಿಲ್ಲುತ್ತಿತ್ತು. ಅಂತೂ ಇಂತೂ ಕೊನೆಗೂ ಇಂದು ಆ ಬಂಡೆಯನ್ನು ಶಾಶ್ವತವಾಗಿ ಬದಿಗೆ ಸರಿಸಿ ಬರವಣಿಗೆಯ ನಡೆಯನ್ನು ಮತ್ತೆ ಆರಂಭಿಸಿದ್ದೇನೆ. ಇನ್ನು ಪೀಠಿಕೆಯೆಲ್ಲ ಸಾಕು, ವಿಷಯಕ್ಕೆ ಬಾ ಅನ್ನುತ್ತಿರುವೆಯಾ..??
                            ಮೊನ್ನೆ ಮೊನ್ನೆ ಸ್ನೇಹಿತನೊಬ್ಬನ ಕತೆ ಕೇಳಿ ಬೇಸರವಾಯಿತು, ಪಿಚ್ಚೆನೆಸಿತು, ನಗು ಬಂತು, ಕೋಪವೂ ಬಂತು. ಆತನದು ಪ್ರೇಮ ವೈಫಲ್ಯವಂತೆ. ಮೊದಲು ಟೈಟಲ್ ಕಾರ್ಡ್ ನೋಡಿದಾಗ ಬೇಸರವೆನಿಸಿತು. ಆದರೆ ಆತನ ಪ್ರೇಮ ಕಥನ ಅನಾವರಣಗೊಳ್ಳುತ್ತಾ ಹೋದಂತೆ ಇದು ಸಾಮಾನ್ಯದಲ್ಲಿ ಸಾಮಾನ್ಯವೆನಿಸಿದ ಕತೆ, ಏನೂ ಸ್ವಾರಸ್ಯವಿಲ್ಲವೆನಿಸಿ ಪಿಚ್ಚೆನಿಸಿತು. ಆಮೇಲೆ ಅವನು ಯಾವಾಗ ಪ್ರೀತಿಯಲ್ಲಿ ಸೋತಿದ್ದಕ್ಕಾಗಿ ಬದುಕನ್ನೇ ಕೊನೆಗಾಣಿಸಿ ‘ದಿ ಎಂಡ್’ ಎನ್ನಲು ಹೊರಟಿದ್ದನೆನ್ನುವ ವಿಷಯ ತಿಳಿಯಿತೋ ಬಾಲಿಶತನ ಎನಿಸಿ ನಗು ಬಂತು. ವಯಸ್ಸು ಇನ್ನು ನೆಟ್ಟಗೆ ಇಪ್ಪತ್ತಾಗಿಲ್ಲ, ಆಗಲೇ ಸಾಯುವ ವಿಚಾರ ಮಾಡಿದ್ದನಲ್ಲ ಎಂದು ಜೊತೆಯಾಗಿ ಒಮ್ಮೆಲೇ ಸಿಟ್ಟು ಒದ್ದುಕೊಂಡು ಬಂತು.
                         ಅಲ್ಲ ಗೆಳತಿ, ಯಾರೋ ಒಬ್ಬನು/ಒಬ್ಬಳು ನಮ್ಮ ಪ್ರೀತಿಯನ್ನು ತಿರಸ್ಕರಿದ ಮಾತ್ರಕ್ಕೆ ನಮ್ಮ ಜೀವನವನ್ನೇ ಬಲಿಕೊಡುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತವಾದದ್ದು..?? ಅದು ಅರ್ಥಹೀನವಲ್ಲವೇ..?? ಹೌದು, ಪ್ರೀತಿಸಿದ ಹುಡುಗನೋ/ಹುಡುಗಿಯೋ ನಮ್ಮ ಒಲವನ್ನು ಅಪ್ಪಿಕೊಂಡು ನಮಗೆ ಒಲಿಯದೇ ಹೋದಾಗ ಆಗುವ ದುಃಖ, ನೋವು, ಹತಾಶೆ ಕಡಿಮೆಯೇನಲ್ಲ. ಇಷ್ಟು ದಿನಗಳ ಕಾಲ ಆಗಸದಲ್ಲಿನ ಗಾಳಿಪಟದಂತೆ ಹಾರಾಡುತ್ತಿದ್ದ ಮನಸು ಅವನು/ಅವಳು ಒಲ್ಲೆಯೆಂದ ಮರುಕ್ಷಣವೇ ರೆಕ್ಕೆ ಮುರಿದ ಹಕ್ಕಿಯಂತೆ ಕೆಳಗೆ ಬಿದ್ದು ವಿಲವಿಲನೆ ಒದ್ದಾಡತೊಡಗುತ್ತದೆ. ಕಂಡ ಬಣ್ಣಬಣ್ಣದ ಕನಸುಗಳೆಲ್ಲ ಕ್ಷಣಮಾತ್ರದಲ್ಲಿ ಕಪ್ಪು-ಬಿಳುಪಿನ ನೆನಪುಗಳಾಗಿ ಕಾಡಲು ಪ್ರಾರಂಭಿಸುತ್ತವೆ. ನಿಜವೇ, ಯಾವುದೋ ಒಂದು ಅಂಗಿಯೋ ಅಥವಾ ಇನ್ನೇನಾದರೂ ವಸ್ತುವೊಂದು ಸಿಗದೇ ಹೋದಾಗ ಇಲ್ಲವೇ ಕಳೆದು ಹೋದಾಗಲೂ ಅಷ್ಟೊಂದು ವ್ಯಥೆಯಾಗುವುದಿಲ್ಲ. ಆದರೆ, ಬಯಸಿದ ವ್ಯಕ್ತಿಯ ಪ್ರೀತಿ ತಮ್ಮ ಪಾಲಿನದಲ್ಲವೆಂದು ವಾಸ್ತವ ಅರಿತಾಗ ಮಾತ್ರ ಪ್ರತಿ ನಿಮಿಷವೂ ಯಾಕಾದರೂ ಇನ್ನು ಬದುಕಿರಬೇಕು ಎನಿಸತೊಡಗುತ್ತದೆ.
                        ಹಾಗಂತ, ಇಷ್ಟು ದಿನಗಳ ಕಾಲ ಸಾಗಿದ ಬಾಳಿನ ಹಾದಿಗೆ ತೀಲಾಂಜಲಿಯನ್ನು ಇಡಲಾದೀತೇ..?? ನಾವು ಹುಟ್ಟಿದಾರಭ್ಯ ಬದುಕಿನ ಪಯಣದಲ್ಲಿ ಸಾಗುತ್ತಲೇ ಇದ್ದೇವೆ. ಅವನೋ/ಅವಳೋ ಮೊನ್ನೆ ಮೊನ್ನೆಯಷ್ಟೇ ಸಹ ಪ್ರಯಾಣಿಕರಾಗಿ ಜೊತೆಯಾದವರಲ್ಲವೇ..?? ಕೊನೆಯವರೆಗೂ ನಮ್ಮೊಂದಿಗೆ ಹೆಜ್ಜೆ ಹಾಕಲಿ ಎಂಬುದು ನಮ್ಮ ಅಪೇಕ್ಷೆಯೇನೋ ಆಗಿತ್ತು ಸರಿ, ಆದರೆ ಅವರು ಅದನ್ನು ಮಾನ್ಯ ಮಾಡಲಿಲ್ಲ. ಅಷ್ಟಕ್ಕೆಯೇ ನಮ್ಮ ಪ್ರಯಾಣವನ್ನು ಕೊನೆಗೊಳಿಸಿಕೊಳ್ಳುವುದೇ..?? ಅದರಿಂದ ನಮಗೆ ಲಭಿಸುವುದಾದರೂ ಏನು..?? ಶೂನ್ಯವೇ ತಾನೇ..?? ಅಕಸ್ಮಾತ್ ನಮ್ಮ ಜೊತೆಯಲ್ಲೇ ಹೆಜ್ಜೆ ಹಾಕಬಲ್ಲವರು ಪಯಣದ ಮುಂದಿನ ಹಾದಿಗಳಲ್ಲಿ ದೊರಕಿದರೆ..?? ಈ ರಹಸ್ಯದ ಅರಿವಾಗಬೇಕೆಂದರೆ ಸಾಗುತ್ತಲೇ ಇರಬೇಕು.
                            ಪ್ರೀತಿ ಒಂಟಿಕಣ್ಣಿನ ಒಕ್ಕಣ್ಣನಲ್ಲ. ಅದಕ್ಕೆ ಸಾವಿರ ಮುಖಗಳಿವೆ. ಒಂದು ಕಡೆ ಕಣ್ಣೆದುರಲ್ಲೇ ಅದೃಶ್ಯವಾಗುವ ಪ್ರೀತಿ ಮತ್ತೊಂದೆಡೆಯಲ್ಲಿ ಅನಿರೀಕ್ಷಿತವಾಗಿ ದರ್ಶನ ನೀಡುತ್ತದೆ. ಪ್ರೀತಿ ಕಿಚ್ಚಿನಂತೆ, ಸುಡುವುದಿಲ್ಲ ಬೆಳಗುತ್ತದೆ. ಪ್ರೀತಿ ನೀರಿನಂತೆ, ನಿಲ್ಲುವುದಿಲ್ಲ ಹರಿಯುತ್ತಲೇ ಇರುತ್ತದೆ. ಪ್ರೀತಿಯ ಚಕ್ರ ನಿಲ್ಲುವುದೇ ಇಲ್ಲ. ಭೂಮಿಯ ಪರಿಭ್ರಮಣದಂತೆ ಅದು ಎಂದೆಂದೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರ ಗತಿಯನ್ನು ಅರ್ಥೈಸಿಕೊಳ್ಳದೇ ಬೆಪ್ಪಾಗುವುದು ನಾವು ಮಾತ್ರವೇ. ಅಂತೆಯೇ, ಕೆಲವೊಬ್ಬರ ಪ್ರೀತಿ ನಮಗೆ ತಕ್ಕುದಾಗಿಲ್ಲದಿರಬಹುದಲ್ಲವೇ..?? ಅಂದ ಮಾತ್ರಕ್ಕೆ ನಮಗೆ ಪ್ರೀತಿಯ ಸಿಹಿಯನ್ನು ಈ ಜನ್ಮದಲ್ಲಿ ಸವಿಯುವ ಭಾಗ್ಯವಿಲ್ಲವೆಂದುಕೊಂಡು ನಿರಾಶರಾಗುವುದೇ..??  ಸರಿಯಾದ ಪ್ರೀತಿ ಸರಿಯಾದ ಸಮಯದಲ್ಲಿ ನಮಗೆ ದೊರಕದೇ ಹೊದೀತೇ..?? ಅದಕ್ಕಾಗಿ ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಅಷ್ಟೆ. ನೆನಪಿರಲಿ, ಪ್ರೀತಿ ಎಂದಿಗೂ ಯಾರನ್ನೂ ವಂಚಿತರನ್ನಾಗಿಸುವುದಿಲ್ಲ. ನೀನು ಏನು ಹೇಳುತ್ತಿಯಾ ಗೆಳತಿ..??
                           ಮತ್ತೊಮ್ಮೆ ಸಿಗೋಣ, ಬರಲೇ..??
                                                                                                                   ಸದಾ ನಿನ್ನ ಗೆಳತಿ,
                                                                                                                          ಲಹರಿ


Saturday, 26 July 2014

ಡೈರಿ - ಪುಟ ೪೫                     "ಇವತ್ತೊಂದಿನ ಫೇಸ್ ಬುಕ್ ನೋಡೋ ಹಾಗಿತ್ತು." ರೂಮ್ ಮೇಟ್ ಲ್ಯಾಪ್ ಟಾಪ್ ಸ್ಕ್ರೀನ್ ನೊಳಗೆ ಹುದುಗಿಸಿದ್ದ ತನ್ನ ತಲೆಯನ್ನು ಮೇಲಕ್ಕೆತ್ತದೇ ಹೇಳಿದಳು.
                    "ಹೆವಿ ಕಾಮೆಂಟು ಮಾರಾಯ್ತಿ. ಆದರೆ ಯಾಕೆ ಅಂತಾ ಗೊತ್ತಾಗ್ಲಿಲ್ಲ ತಾಯಿ." ನಾನು ನಾಟಕೀಯವಾಗಿ ಹೇಳಿದೆ.
                   "ಇವತ್ತು ಕಾರ್ಗಿಲ್ ವಿಜಯ ದಿವಸ ಅಲ್ವಾ..?? ಅದ್ಕೆ ಎಲ್ಲರ ಟೈಮ್ ಲೈನ್ ಮೇಲೂ ಅದರ ಕುರಿತಾಗಿ ಪೋಸ್ಟ್ ಕಾಣ್ತಿದೆ. ಇದೊಂದು ದಿನಾ ಆದ್ರೂ ಅವರ ಬಗ್ಗೆ ನೆನಪು ಮಾಡ್ಕೊತಾರಲ್ಲಾ ಎಲ್ಲಾರೂ. ಅದೇ ಖುಷಿ ವಿಚಾರ. ಇಲ್ಲಾ ಅಂದ್ರೆ ಬೇಡದೇ ಇರೋ ವಿಷಯಗಳೇ ಇರ್ತಿದ್ವು."
                   "ಅರೆರೆರೆ. ನೀನಾ ಈ ಮಾತನ್ನು ಹೇಳ್ತಾ ಇರೋದು...?? ನಂಬಕೆ ಆಗ್ತಿಲ್ಲಾ ಕಣೇ. ಫಾರ್ ಯುವರ್ ಕೈಂಡ್ ಇನ್ಫಾರ್ಮೇಷನ್, ನಿನ್ನ ಟೈಮ್ ಲೈನ್ ಮೇಲೂ ಹೆಚ್ಚಾಗಿ ಬೇಡದ ವಿಷಯಗಳೇ ಇರತ್ವೆ. ಈಗ ಇದ್ದಕ್ಕಿದ್ದಂತೆ ಇದೇನು ಬದಲಾವಣೆ..?? ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ನಾ ಹೇಗೆ..??" ನಾನು ತುಸು ಜಾಸ್ತಿಯೇ ಕೆಣಕಿದೆ.
                   "ಸುಮ್ನಿರೇ ಮಾರಾಯ್ತಿ. ನಾನೇನು ಚಿಕ್ಕ ಹುಡುಗಿನಾ..?? ಇಪ್ಪತ್ತು ದಾಟಿ ಅದಾಗಲೇ ಎರಡು ವರ್ಷಗಳಾಗ್ತಾ ಬಂತು. ಇನ್ನು ಎಷ್ಟು ದಿನ ಸಿಲ್ಲಿಯಾಗಿ ಬೀಹೇವ್ ಮಾಡೋದು..?? ಲಾಸ್ಟ್ ವೀಕ್ ಕಾರ್ಗಿಲ್ ವಾರ್ ಬಗ್ಗೆ ಓದಿದೆ. ಬಹಳ ಫೀಲ್ ಆಯ್ತು. ಎಷ್ಟೊಂದು ಮಂದಿ ಯುವ ಸೈನಿಕರೆಲ್ಲಾ ತಮ್ಮ ಪ್ರಾಣನಾ ಬಲಿಕೊಟ್ರು ಪಾಪ. ಅವರು ಅಷ್ಟು ಮಾಡಿದ್ದಕ್ಕೆ ಅಲ್ವಾ ನಾವು ಇವತ್ತು ಇಷ್ಟು ಹಾಯಾಗಿರೋದು ಅನ್ನೋ ಸತ್ಯ ತಿಳೀತು. ನಮಗೂ ಈಗ ಅವರದೇ ವಯಸ್ಸು. ಆದರೂ ಇನ್ನು ಸೀರಿಯಸ್ ನೆಸ್ ಬಂದೇ ಇಲ್ಲ ಅಂತ ನಾಚಿಕೆ ಆಯ್ತು. ಅದಕ್ಕೆ ಡಿಸೈಡ್ ಮಾಡಿದೆ. ಇನ್ನಾದರೂ ಸ್ವಲ್ಪ ಗಂಭೀರವಾಗಿರಬೇಕು ಅಂತಾ."
                       "ಅಂದ್ರೆ ನೀನು ಉದ್ಧಾರ ಆಗೋ ಹಾದೀಲಿ ಇದೀಯಾ ಅಂತಾಯ್ತು. ಒಳ್ಳೇದೇ ಬಿಡು. ಆದರೂ ನಂಗೆ ಹೆದರಿಕೆ ಕಣೇ. ಪ್ರಳಯ ಗಿಳಯ ಆದ್ರೆ ಅಂತಾ." ನಾನು ಮತ್ತೆ ಕೆಣಕಿದೆ.
                     " ಮೊದಲು ನಿನ್ನ ನೀರಲ್ಲಿ ಮುಳುಗಿಸಿ ಆಮೇಲೆ ಬೇಕಾದ್ರೆ ನಾನು ಸಾಯೋ ಯೋಚ್ನೆ ಮಾಡ್ತೀನಿ. ಹೋಗೆ" ಅವಳು ಬೈದುಕೊಂಡಳು.


Friday, 25 July 2014

ದ್ವಂದ್ವ


ತೀರ ಕಾಣದ ಕಡಲಿನಲ್ಲಿ
ಹುಟ್ಟು ಇಲ್ಲದೇ ನಾವಿಕನಾಗುವ
ಭಾವವೇಕೆ ಕಾಡುತಿಹುದು ಮತ್ತೆ ಮತ್ತೆ
ಅಲೆಗಳು ಹುಚ್ಚೆದ್ದು ಕುಣಿದಷ್ಟೂ
ತಳದಲ್ಲಿ ಕಂಪನವು ಹೆಚ್ಚಾಗುತಿದೆ
ಬುಡದಲ್ಲಿ ಬೇರು ಗಟ್ಟಿಯಾಗುತಿದೆ

ಸುಳಿಯ ಆಳದ ಅರಿವಿದ್ದರೂ
ನಡುಮಧ್ಯದತ್ತ ಸಾಗುತಿದೆ ಹೆಜ್ಜೆ
ಸೆಳೆಯುವ ಆ ಶಕ್ತಿಯ ಮುಂದೆ
ದನಿ ಕಳೆದುಕೊಂಡಿಹುದು ಗೆಜ್ಜೆ
ಮಣಿಯೂ ಒಂದೊಂದಾಗಿ ಉದುರುತಿದೆ
ಹಿಮ್ಮಡಿಯಿಂದ ಜಾರುತ್ತಲಿದೆ

ರಭಸದ ಹರಿವಿಗೆ ಕಟ್ಟೆ ಕಟ್ಟುವ
ಆ ಮೂಲಕ ತಾನೇ ಬಂಧಿಯಾಗುವ
ವ್ಯರ್ಥ ಕಾಲಹರಣ, ಹುಸಿ ಯತ್ನ
ಚಂಡಮಾರುತವನ್ನು ರೊಚ್ಚಿಗೆಬ್ಬಿಸುವಂತೆ
ಕ್ಷಣವೂ ಬಿಡದೇ ಏರಿಳಿತದ ಉಬ್ಬರ
ಶಾಂತವಾಗುವಂತಿಲ್ಲ ಸಂಧಾನವಿಲ್ಲದೇ

ಮುಗಿಲಿನಿಂದ ಚಂದಿರ ನಗುತ್ತಾನೆ
ನಾವೆಗೆ ದಿಕ್ಕು ಕಾಣದಂತಾದಾಗ
ಮಲಗಿದ್ದ ಅಲೆಗಳು ಮತ್ತೆ ಏಳುತ್ತವೆ
ಕೊನೆಯೇ ಇಲ್ಲದಂತೆ ನರ್ತಿಸಲು
ರಾಗತಾಳಗಳೇ ಮೌನತಳೆದರೂ
ತಟ್ಟುಮೆಟ್ಟುಗಳಿಗೆ ಸಾವೆಂಬುದಿಲ್ಲ


Thursday, 24 July 2014

ಡೈರಿ ಪುಟ - ೪೪


                ನಾನು ಆಗ ತಾನೇ ರೂಮಿನ ಕಸ ಗುಡಿಸಿ ಸ್ನಾನಕ್ಕೆ ಹೋಗಲು ತಯಾರಿ ನಡೆಸಿದ್ದೆ. ಬಡಬಡ ಬಾಗಿಲು ಬಡಿದ ಸದ್ದು. ‘ಇದ್ಯಾರಪ್ಪಾ ಈ ಥರ ಬಡಿತಾ ಇರೋರು’ ಅಂತಾ ನಾನು ಬಾಗಿಲು ತೆರೆದರೆ ಏನಾಶ್ಚರ್ಯ.!!! "ಹಾಯ್....." ಅಂತಾ ಇಡೀ ಕಾರಿಡಾರ್‍ ಗೆ ಕೇಳುವಷ್ಟು ಜೋರಾಗಿ ಕೂಗುತ್ತಾ ಒಳಗೆ ಬಂದಳು ನನ್ನ ರೂಮ್ ಮೇಟ್ ಮಹಾರಾಣಿ.
                    ಯಾವಾಗಲೋ ಕಾಲೇಜು ರೀಒಪನ್ ಆಗಿ ಮೂರು-ನಾಲ್ಕು ದಿನಗಳ ನಂತರ ಬರುವವಳು ಈ ಸಲ ಯಾಕೆ ಇಷ್ಟು ಬೇಗ ಅವತರಿಸಿದಳು ಎಂದು ನನಗೆ ಅಚ್ಚರಿ. "ಕಾಲೇಜು ಶುರುವಾಗಲಿಕ್ಕೆ ಇನ್ನು ಒಂದು ವಾರ ಇದೆ ಕಣೇ. ಕನ್ ಫ್ಯೂಸ್ ಮಾಡ್ಕೊಂಡು ಹೊರಟು ಬಂದೆಯೋ ಹೇಗೆ..?? ಮತ್ತೆ ಕ್ಯಾಂಪಸ್ ಕ್ಲೀನ್ ಮಾಡೋ ಕೆಲ್ಸಾ ಏನಾದ್ರು ನಿಂದೇನಾ..??" ನಾನು ಪ್ರಶ್ನಿಸಿದೆ. ಅವಳು ಮುಖ ಊದಿಸಿಕೊಂಡಳು.
                     "ನಿಂಗೆಲ್ಲಾ ಬರೀ ಇಂಥ ಯಡವಟ್ಟು ಆಲೋಚನೆಗಳೇ ಬರೋದು ಮಾರಾಯ್ತಿ. ಮನೇಲಿ ಕೂತು ಬೇಜಾರಾಯ್ತು ಕಣೇ. ಅಲ್ಲಿ ಎಲ್ಲಾರಿಗೂ ಸ್ಕೂಲ್, ಕಾಲೇಜ್. ಬಿಎಸ್ಸಿ, ಬಿಕಾಮ್ ಓದಿದೋರೆಲ್ಲಾ ಜಾಬ್, ಮಾಸ್ಟರ್ ಡಿಗ್ರೀ ಅಂತಾ ಬ್ಯುಸಿ ಇದಾರೆ. ಜೊತೆಗೆ ಈಗೀಗಾ ಮಳೆ ಬೇರೆ ಚೆನ್ನಾಗಿ ಬೀಳ್ತಾ ಇದೆ. ಎಲ್ಲೂ ಹೋಗೋ ಹಾಗೆ ಇಲ್ಲ. ಮಲಗೋದು, ತಿಂಡಿ ತಿನ್ನೋದು, ಟಿವಿ ನೋಡೋದು - ಇವಿಷ್ಟನ್ನೇ ಮಾಡಿ ಮಾಡಿ ಬೋರಾಯ್ತು. ಅದೂ ಅಲ್ದೇ, ಈ ವರ್ಷ ನಮ್ದು ಫೈನಲ್ ಅಲ್ವಾ..?? ಇದೊಂದು ವರ್ಷದ ನಂತ್ರ ಮತ್ತೆ ಭೇಟಿ ಆಗ್ತೀವೋ ಇಲ್ವೋ. ಸೋ, ಫ್ರೆಂಡ್ಸ್ ಜೊತೆ ಜಾಸ್ತಿ ಟೈಮ್ ಕಳೆಯೋಣ ಅನ್ನಿಸ್ತು. ಹೊರಟು ಬಂದೆ."
                    "ನೀ ಹೇಳಿದ್ದು ನಿಜ. ತುಂಬಾ ಜನ ಫ್ರೆಂಡ್ಸ್ ಜೊತೆ ದಿನ ಕಳೆಯೋಣ ಅಂತಾನೇ ಬೇಗ ಬಂದಿದಾರೆ. ಇನ್ನೊಂದು ವರ್ಷ ಅಂತ ಅಂದ್ಕೊಂಡ್ರು ದಿನಗಳೆಲ್ಲಾ ಕ್ಷಣಗಳ ಹಾಗೆ ಕಳೆದು ಹೋಗತ್ವೆ. ಆಮೇಲೆ ಬೇಕು ಅಂದ್ರೂ ಕಾಲೇಜು ದಿನಗಳು ವಾಪಸ್ಸು ಸಿಗಲ್ಲಾ."
                   "ಈಗ್ಲೇ ಇಷ್ಟು ಫೀಲ್ ಮಾಡ್ಕೊಳೋದು ಬೇಡಾ ಬಿಡು. ನಂಗೆ ತಿನ್ನಲಿಕ್ಕೆ ಏನಾದ್ರು ಕೊಡು ಮಾರಾಯ್ತಿ. ಸುಸ್ತಾಗಿ ಹಸಿವಾಗಿದೆ."
                       "ಅಲ್ಲಿ ಕಬೋರ್ಡ್ ಮೇಲಿನ ಡಬ್ಬಿಲಿ ಇದೆ ತಗೊ. ನಾನು ಸ್ನಾನ ಮುಗಿಸಿ ಬರ್ತೀನಿ. ಮಾತಾಡ್ಲಿಕ್ಕೆ ಭಾಳ ವಿಷಯಗಳಿವೆ." ನಾನು ಟವೆಲ್ ಹಿಡಿದು ಬಾತ್ ರೂಮ್ ಕಡೆ ಹೆಜ್ಜೆ ಹಾಕುತ್ತಾ ಹೇಳಿದೆ.


ಹುಚ್ಚು ಹುಡುಗ


ನಿಜಕ್ಕೂ ಹುಚ್ಚು ಹುಡುಗ ಆತ
ಸುಖಾಸುಮ್ಮನೆ ಅನಿಸಿದ್ದಲ್ಲ
ನನ್ನ ನಗಿಸಲು ಅವ ಹನಿಗೂಡಿಸಿದಾಗ
ನಾ ಹೆಣೆವ ಕಥೆಗೆ ವಸ್ತುವಾಗಲು
ಅವ ಪುಟ್ಟ ಕವಿತೆ ಗೀಚಿದಾಗ
ಮನಸ್ಸಿನಲ್ಲಿಯೇ ಬೈದುಕೊಂಡಿದ್ದೆ
"ಹಸಿ ಹುಚ್ಚು ಹುಡುಗ ನಿನಗೆ"

ನಿಜವಾದ ಹುಚ್ಚು ಬೇರೆಲ್ಲೋ ಹೆಚ್ಚಿತ್ತು
ನನ್ನರಿವಿಗೆ ಬಾರದಂತೆ ಆತ ಮಾಯವಾದಾಗ
ಬಿಸಿ ಉಸಿರಿಗೂ ತಿಳಿವಿನ ತಂಪು ತಾಕಿತ್ತು
ಸಾಲುಗಳನ್ನೇನೋ ಗೀಚಿದ್ದ
ಅವುಗಳ ಭಾವಗಳನ್ನೇ ಕದ್ದೊಯ್ದಿದ್ದ
ನಾ ಇನ್ನೆಂದೂ ಹನಿಗೂಡಿಸಲಾಗದಂತೆ
ರಸಗಳನ್ನೇ ದೋಚಿಹೋಗಿದ್ದ

ಪದೇ ಪದೇ ನಾ ಬೈದಿದ್ದರ ನೆನಪು
"ಹಸಿ ಹುಚ್ಚು ಹುಡುಗ ನಿನಗೆ"
ತೆರೆ ಸರಿದು ರಂಗ ಖಾಲಿಯಾದಾಗ
ಮೂಲೆಯಿಂದೊಂದು ದನಿ ಕೇಳಿತು
ವಿಷಾದದ ನಗೆ ಮಿಂಚಿ ಮಸುಕಾಯಿತು
ತೆರೆಯ ಹಿಂದೆ ಸಣ್ಣ ಬೆಳಕು
ಹುಚ್ಚು ಆತನಿಗಿದ್ದರೂ ಪೆಚ್ಚಾದವಳು ನಾನು


Wednesday, 16 July 2014

ಕಣ್ ಪನಿ


ಮುಖವನ್ನು ಮಾತ್ರವಲ್ಲ
ಎದೆಯನ್ನೂ ತೋಯಿಸಿತ್ತು
ಹಿಂಗಾಲಿನ ತುದಿಯಲ್ಲೂ
ಹನಿಯ ಬಿಂದುಗಳು ಮೂಡಿತ್ತು
ಮಳೆಯೂ ಕ್ಷಣ ನಿಂತು ನೋಡುವಂತೆ
ಒಡಲೊಳಗೆ ಗುಡುಗು ಸಿಡಿಲು
ಬೆಳಕು ಇಲ್ಲದಿದ್ದರೂ ಮಿಂಚು

ಕಪ್ಪುಗಟ್ಟಿದ್ದ ಭಾವಗಳಷ್ಟೆ ಅಲ್ಲ
ಕಾಮನಬಿಲ್ಲಿನ ಬಣ್ಣಗಳೂ ಸಹ
ಧಾರೆಧಾರೆಯಾಗಿ ಹರಿದವು
ಮೊಂಡು ಹಠ ಮಾಡುತ್ತ
ಕೆಲವು ಹೆಪ್ಪುಗಟ್ಟಿ ಸೆಟೆದವು
ಅತ್ತ ಜಾರದಂತೆ ಇತ್ತ ಕೂರದಂತೆ
ಅಂಟಿಕೊಂಡು ಅಪರಂಜಿಗಳಾದವು

ತೇಲುತ್ತಿದ್ದ ಕಾಗದದ ದೋಣಿಗಳಿಗೆ
ನಿನ್ನೆಯ ಹುಟ್ಟು ಜೊತೆಯಾಗಿತ್ತು
ಸೂರ್ಯ ಕಾಣುವ ಮೊದಲೇ
ತಳ ಕಂಡ ನೌಕೆಗಳೆಷ್ಟೋ ನೂರು
ಹರಿತಕ್ಕೆ ಸಿಕ್ಕು ಕೊಚ್ಚಿಹೋದುವಲ್ಲ
ತಡೆ ಹಾಕುವವರಿಲ್ಲದೇ ಎಲ್ಲವೂ

ಬಿಡುವಿಲ್ಲದೇ ಹರಿದಿದೆ, ಹರಿಯುತ್ತಿದೆ
ಅರ್ಥವಿಲ್ಲದ ಅಶ್ರುವಿಗೂ ಅಭಿಮಾನ
ಹಂಗಿಲ್ಲದ ಹನಿಗಳಿನ್ನೂ ಹಸಿಯಾಗಿಯೇ
ಹೊಸ ಗಾಳಿಗಾಗಿ ಕಾದು ಕೂತಿವೆ
ಕಲೆಯಿಲ್ಲದಂತೆ ಹೆಜ್ಜೆಗಳನ್ನು ಅಳಿಸಿ
ಮತ್ತೊಂದು ಹರಿವಿಗೆ ದಾರಿಯಾಗಬೇಕು


Monday, 14 July 2014

ಇರುವುದೆಲ್ಲವ ಬಿಟ್ಟು (ಭಾಗ - ೬)


                          ಮುಂದಿನ ಪುಟಗಳೆಲ್ಲ ಖಾಲಿ ಖಾಲಿಯಾಗಿದ್ದವು. ಮನೆಯಿಂದ ಹೊರಡುವಾಗ ಅಪ್ಪ ಡೈರಿ ಬಿಟ್ಟು ಹೋಗಿರಬೇಕೆಂದುಕೊಂಡೆ. ಎಲ್ಲವನ್ನೂ ಓದಿ ಮುಗಿಸಿ ಕೂತ ಮೇಲೆ ನನ್ನೊಳಗೆ ಚಡಪಡಿಕೆ ಶುರುವಾಯಿತು. ಎಷ್ಟು ಹೊತ್ತಿನಲ್ಲಿ ಮನೆ ಸೇರುತ್ತೇನೋ, ಯಾವಾಗ ಅಪ್ಪನನ್ನು ಕಾಣುತ್ತೇನೋ ಎನ್ನುವ ಯೋಚನೆಗಳೆಲ್ಲಾ ಅಸಹ್ಯ ಹುಟ್ಟಿಸುವಷ್ಟು ಕಾಡತೊಡಗಿದವು. ಮಾವನ ಹತ್ತಿರ ಏನನ್ನಾದರೂ ಮಾತನಾಡಲೂ ಸಹ ಭಯ. ತಾಳ್ಮೆಗೆಟ್ಟಿದ್ದರೂ ಬೇರೆ ದಾರಿಯಿಲ್ಲದೆ ಸುಮ್ಮನೆ ಕುಳಿತೆ.

                                    *********************************

                        ಮನೆಗೆ ಬಂದಾಗ ನನ್ನನ್ನು ಸ್ವಾಗತಿಸಿದ್ದು ಅಪ್ಪನ ಹೆಣ. ಯಾವಾಗಲೂ "ಬಂದೆಯಾ ಕೂಸೆ..??" ಎನ್ನುತ್ತಾ ನನ್ನ ಲಗೇಜುಗಳನ್ನು ತೆಗೆದುಕೊಳ್ಳಲು ಓಡಿ ಬರುತ್ತಿದ್ದ ಅಪ್ಪ ಅಂದು ನಿಶ್ಚಲವಾಗಿ ಮಲಗಿದ್ದ. ಯಾಂತ್ರಿಕವಾಗಿ ನಾನು ಹೋಗಿ ಶವದ ಬಳಿ ಕುಳಿತೆ. ಗರಬಡಿದವರಂತೆ ಶವವನ್ನೇ ನಿಟ್ಟಿಸಿ ನೋಡುತ್ತಾ ಕುಳಿತಿದ್ದ ನನ್ನ ಭಂಗಿ ಕಂಡು ಹೆದರಿ ಮಾವ "ಏಯ್, ಕೂಸೆ" ಎಂದು ಮೈ ತಡವಿದಾಗ ವಾಸ್ತವಕ್ಕೆ ಮರಳಿದವಳಂತೆ ಅಳಲು ಮೊದಲು ಮಾಡಿದೆ. ಹಾಗೆ ಅತ್ತು ಅತ್ತು ಎಚ್ಚರ ತಪ್ಪಿ ಬಿದ್ದಿದ್ದೆನಂತೆ. ಮತ್ತೆ ಕಣ್ಣು ತೆರೆದಾಗ ಸೂತಕದ ಮನೆಯ ವಾತಾವರಣ ಹೆಪ್ಪುಗಟ್ಟಿದ್ದು ಕಂಡು ಮನಸ್ಸಿಗೆ ಕಿರಿಕಿರಿಯಾಗಿ ಮಹಡಿ ಹತ್ತು ಕುಳಿತಿದ್ದೆ. ಮತ್ತೆ ಕೆಳಗಿಳಿದು ಬಂದು ಮರಗಟ್ಟಿದ್ದ ಅಪ್ಪನ ಕಾಲ ಬಳಿ ಕುಳಿತು ಕಣ್ಣೀರು ಸುರಿಸುತ್ತಾ ಇದ್ದವಳು ಪುನಃ ಅದ್ಯಾವಾಗ ಎಚ್ಚರ ತಪ್ಪಿದೆನೋ ಏನೋ.

                                  *************************************

                           ಅಪ್ಪನ ಕ್ರಿಯೆಯೆಲ್ಲವನ್ನೂ ಮಾಡಿದ್ದು ನನಗಿಂತ ಮೂರು ವರ್ಷಕ್ಕೆ ದೊಡ್ಡವನಾದ ಅಪ್ಪನ ಅಣ್ಣನ ಮಗ. ಅವನಿಗೆ ಅದೇನೆನಿಸಿತೋ, ಕೊಳ್ಳಿ ಇಡುವ ಕೆಲಸಕ್ಕೆ ನನ್ನನ್ನೇ ಕರೆದ. ಕ್ರಿಯೆ ಮಾಡಿಸುತ್ತಿದ್ದ ವೈದಿಕ ಭಟ್ಟರೂ ವಿರೋಧ ವ್ಯಕ್ತಪಡಿಸಲಿಲ್ಲ. ಸೇರಿದ ಜನರಲ್ಲೆಲ್ಲ ಒಂದೇ ಮಾತು. "ಅಯ್ಯೋ, ಹೀಗೇಕೆ ಮಾಡಿಕೊಂಡರೋ..?? ಎಷ್ಟು ಸಣ್ಣ ವಯಸ್ಸು.?? ಮಗಳೆಂದರೆ ಅದೆಷ್ಟು ಪ್ರೀತಿಯಿತ್ತು." ಇವರೂ ಕೂಡ ನನ್ನತ್ತಲೇ ಬೊಟ್ಟು ತೋರಿಸುತ್ತಿದ್ದಾರೆಯೇ ಎಂಬ ಸಂದೇಹದ ಹುಳು ತಲೆಯ ಮೇಲೆ ಹರಿಯಹತ್ತಿತು. ಹಳೆಯ ನೆನಪುಗಳೆಲ್ಲ ಮರುಕಳಿಸಿ ಮತ್ತೆ ಹುಚ್ಚು ಹಿಡಿಯುವ ಭಯವಾಗಿ ತಲೆಯೊಳಗೆ ಇಳಿಯುವ ಮುನ್ನವೇ ಹುಳುವನ್ನು ಹೊಸಕಿ ಹಾಕಿದೆ. ಆ ಒಂದು ದಿನ ನಾನು ಮಾತೇ ಆಡದೇ ಉಳಿದಿದ್ದೆ. ಅಮ್ಮನ ಜೊತೆಯೂ ಕೂಡ. ಅವಳ ಮುಖವನ್ನು ನೋಡುವ ಧೈರ್ಯವೂ ನನಗಾಗಲಿಲ್ಲ.
                         ನಂತರದ ಹದಿನೈದು ದಿನಗಳು ಒಂದೊಂದು ಯುಗಗಳಂತೆ ಕಳೆದಿದ್ದವು. ಪ್ರತಿ ನಿಮಿಷ ಅಪ್ಪ ನೆನಪಾಗುತ್ತಿದ್ದ. ಮನೆಯ ಮೂಲೆಗಳೆಲ್ಲವೂ ಅಪ್ಪನನ್ನೇ ಕಾಣಿಸುತ್ತಿದ್ದವು. ಭಟ್ಟರೂ ಪಠಿಸುತಿದ್ದ ಮಂತ್ರಗಳು ಕಿವಿಗೆ ಬಂದು ತಾಕಿದಾಗಲೆಲ್ಲ ಅಲ್ಲಿ ಅಪ್ಪನೇ ಮಡಿ ಉಟ್ಟು ಕುಳಿತು ಪೂಜೆ ಮಾಡಿಸುತ್ತಿರುವಂತೆ ಭಾಸವಾಗುತ್ತಿತ್ತು. ಜೊತೆಯಲ್ಲಿ ಇನ್ನೊಂದು ವಿಷಯವೂ ಬಿಡದೇ ಕಾಡುತ್ತಿತ್ತು. ಮುಂದೇನು..?? ಎನ್ನುವ ಪ್ರಶ್ನೆ ವಾಸ್ತವದ ಪಾಯದ ಮೇಲೆ ನಿಂತು ಕುಣಿಯುತ್ತಿತ್ತು. ತಿರುಗಿ ಪುಣೆಗೆ ಹೋಗುವುದಂತೂ ಸಾಧ್ಯವಾಗದ ಮಾತು. ಮತ್ತೆ ಮಾಡುವುದಾದರೂ ಏನನ್ನು..?? ಎಷ್ಟು ಯೋಚಿಸಿದರೂ ಉತ್ತರ ದೊರಕುತ್ತಿರಲಿಲ್ಲ.
                          ಅಪರಕ್ರಿಯೆಗಳೆಲ್ಲ ಮುಗಿದು ನೆಂಟರಿಷ್ಟರು, ಊರ ಹಿತೈಷಿಗಳೆಲ್ಲ ಮನೆಗೆ ಹೋಗಿಯಾಗಿತ್ತು. ಮನೆಯಲ್ಲಿ ಉಳಿದವರೆಂದರೆ ನಾನು, ಅಮ್ಮ, ಸೋದರ ಮಾವ ಮತ್ತು ಅತ್ತೆ. ನಾನು ಅಮ್ಮನ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡಿಯೇ ಇರಲಿಲ್ಲ. ಅಂದು ಸಂಜೆ ಮೊದಲ ಬಾರಿಗೆ ನಾವಿಬ್ಬರೂ ಅಕ್ಕ ಪಕ್ಕ ಕೂತು ಮನಸು ಬಿಚ್ಚಿ ಮಾತನಾಡಿದೆವು. ನಾನು ಬಾಯಿ ತೆರೆದಿದ್ದಕ್ಕಿಂತ ಬಿಕ್ಕಳಿಸಿದ್ದೇ ಜಾಸ್ತಿ. ಅಮ್ಮ ತನ್ನನ್ನು ಸಂತೈಸಿಕೊಳ್ಳುತ್ತಲೇ ನನ್ನನ್ನು ಸಮಾಧಾನ ಪಡಿಸುತ್ತ ತೀರಾ ಕೆಳದನಿಯಲ್ಲಿ ಮಾತನಾಡುತ್ತಿದ್ದರು. ಅವರು ಹೇಳಿದ್ದೆಲ್ಲವೂ ನನ್ನ ತಲೆಯೊಳಗೆ ಇಳಿಯುವಂತಿರಲಿಲ್ಲ. ಆದರೆ ಒಂದು ಮಾತು ಹೃದಯವನ್ನು ತಟ್ಟದೇ ಹೋಗಲಿಲ್ಲ. "ಕೂಸೆ, ನಿಮ್ಮಪ್ಪ ನೀನು ಇಷ್ಟ ಪಟ್ಟ ಹಾಗೆಯೇ ನಿನ್ನನ್ನು ಬೆಳೆಸಿದ್ದರು. ನಿನ್ನ ಇಷ್ಟದಂತೆಯೇ ಎಲ್ಲವನ್ನೂ ಮಾಡಿದ್ದರು. ಹಾಗಿದ್ದರೂ ನೀನು ಅರ್ಧದಲ್ಲಿಯೇ ಓದು ಬಿಟ್ಟಿದ್ದು ಸರಿಯೇ..? ಇದರಿಂದ ಅಪ್ಪ ಎಷ್ಟು ನೊಂದುಕೊಂಡರು ಗೊತ್ತೇ..?? ಆಗ ಅವರು ಜೀವ ಹಿಡಿದುಕೊಂಡು ಇದ್ದದ್ದೇ ದೊಡ್ಡದು." ರಾತ್ರಿ ಹಾಸಿಗೆಯಲ್ಲಿ ಅಡ್ಡಾದ ಮೇಲೂ ಆ ಮಾತುಗಳು ಬೆನ್ನು ಹಿಡಿದು ಕಾಡಿದವು. ಮುಂದೇನು ಎನ್ನುವುದರ ಕುರಿತು ಒಂದು ಗಟ್ಟಿ ನಿರ್ಧಾರಕ್ಕೆ ಬರುವವರೆಗೂ ನಿದ್ದೆ ನನ್ನ ಬಳಿ ಸುಳಿಯಲೇ ಇಲ್ಲ. ಎಲ್ಲವೂ ಸ್ಪಷ್ಟವಾದ ಮೇಲೆ ಮನಸ್ಸು ನಿರಾಳವಾಗಿತ್ತು. ಅಲ್ಪಕಾಲವಾದರೂ ಪ್ರಶಾಂತವಾದ ನಿದ್ದೆಯೂ ಬಂತು.

                                   ************************************

                             ಆಫೀಸ್ ರೂಮಿನೊಳಗೆ ಫೈಲ್ ಹಿಡಿದುಕೊಂಡು ನಾನೊಬ್ಬಳೇ ನಿಂತಿದ್ದೆ. ಅಮ್ಮ, ಮಾವ ಹೊರಗಡೆ ಕುಳಿತಿದ್ದರು. ನನ್ನ ಸರತಿ ಬಂದ ಕೂಡಲೇ ಎಲ್ಲಾ ದಾಖಲೆ ಪತ್ರಗಳನ್ನು ಮುಂದೆ ಹಿಡಿದೆ. ಅದನ್ನು ತೆಗೆದುಕೊಂಡ ಅಟೆಂಡರ್ ಕೇಳಿದರು. "ಐದು ಸೆಮಿಸ್ಟರ್ ಮುಗಿಸಿ ಮತ್ತೆ ಬಿಟ್ಟಿದ್ದೇಕೆ..?? ಏನಾಯಿತು..??"
                             "ಆರೋಗ್ಯ ಕೈ ಕೊಟ್ಟಿತು ಸರ್." ನಾನು ಸಾಮಾನ್ಯವಾದ ಸುಳ್ಳನ್ನೇ ಹೇಳಿದೆ.
                             "ಇಷ್ಟು ವರ್ಷ ಬಿಟ್ಟು ಪುನಃ ಮರಳಿ ಸೇರುತ್ತಿರುವುದೇಕೆ..?? "
                               ಏನು ಉತ್ತರಿಸುವುದೆಂದು ತಿಳಿಯದೇ ನಾನು ಸುಮ್ಮನೆ ನಿಂತಿರುವಂತೆಯೇ ಅವರೇ ಮುಂದುವರೆದರು. "ಹೋಗಲಿ ಬಿಡು. ಇನ್ನುಳಿದ ಮೂರು ಸೆಮಿಸ್ಟರ್ ಗಳನ್ನು ಯಾವುದೇ ತೊಂದರೆಗಳಾಗದಂತೆ ಆರಾಮಾಗಿ ಮುಗಿಸು." ನಾನು ಬರೇ ಹ್ಞೂಂಗುಟ್ಟಿದೆ.
                             ದಾಖಲೆಗಳೆಲ್ಲವನ್ನೂ ಪರಿಶೀಲಿಸಿಯಾದ ಮೇಲೆ ಕೊನೆಯ ಕೌಂಟರ್ ನತ್ತ ಕೈ ತೋರಿಸಿ ಹೇಳಿದರು. "ಅಲ್ಲಿ ಹೋಗಿ ಫೀ ತುಂಬುವ ಚಲನ್ ಇಸ್ಕೊ ಹೋಗಮ್ಮಾ".
                            ನಾನು ಅತ್ತ ಸಾಗಿ ಸರ್ ಚಲನ್ ಎಂದ ಕೂಡಲೇ ಕೌಂಟರಿನಲ್ಲಿ ಕುಳಿತಿದ್ದ ಅಟೆಂಡರ್ ಕೇಳಿದರು. "ಹೆಸರೇನಮ್ಮಾ..??"
                             "ಜೀವನಾ" (ಮುಗಿಯಿತು)


Sunday, 13 July 2014

ಯಾಕಾಗಿ ನಿದ್ದೆ..??


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ಹಾಡುತ್ತ ಬಿದ್ದುಕೊಂಡಿದ್ದೆ ಹೊದ್ದು ಮಲಗಿದ್ದೆ
‘ಕುಂಭಕರ್ಣಿ ಕಣೇ’ ಕೆಲವರ ಹುಸಿ ಟೀಕೆ
‘ನಿದ್ದೆಯ ಲಹರಿಯೋ’ ಇನ್ನೊಬ್ಬರ ವ್ಯಾಖ್ಯೆ
ಯಾಕಾಗಿ ಮಾರಾಯ್ತಿ ಈ ಪಾಟೀ ನಿದ್ದೆ
ಇದೊಂದು ಪ್ರಶ್ನೆ ಎಸೆಯಲಿಲ್ಲ ಯಾರೊಬ್ಬರೂ

ಅರ್ಥವಿಲ್ಲದ ಮಾತುಗಳನ್ನು ಮೌನವಾಗಿಸಲು
ಸತ್ತು ಹೋದ ಭಾವಗಳನ್ನು ಸಮಾಧಿಯಾಗಿಸಲು
ಬಿದ್ದು ಹೋಗದ ನಿದ್ದೆ ಮಾಡಿದ್ದೆ ಬಿಡದೇ
ತಡೆಯಿಲ್ಲದೇ ಓಡುವ ನೆನಪುಗಳಿಗಾಗಿ
ಜೊತೆಯಲ್ಲೇ ಹಿಂಬಾಲಿಸುವ ಕನಸುಗಳಿಗಾಗಿ
ನಿದ್ದೆಗೈಯ್ಯುತ್ತಾ ಸಾಗಿದೆ ಸಾಗುತ್ತಲೇ ನಿದ್ದೆಗೈದೆ

ತೆರೆಯದ ಪುಟಗಳಿಗೆ ಬೀಗದ ಭದ್ರತೆಯಿತ್ತು
ಗೆರೆಮೂಡಿಸಿದ್ದ ಚಿತ್ತಾರಗಳನ್ನು ಅಳಿಸಲು ನಿಂತೆ
ನಿದ್ದೆಯ ಮಂಪರಿನಲ್ಲೇ ಮನಸ್ಸನ್ನು ಹಿಡಿದಿಟ್ಟೆ
ಭೂತವನ್ನೆಲ್ಲ ಬರಿದಾಗಿಸಿ  ಭವಿಷ್ಯವನ್ನು ಬದಿಗೊತ್ತಿ
ವರ್ತಮಾನದ ಹಂಗಿಲ್ಲವೆಂಬಂತೆ ಕಣ್ಣುಮುಚ್ಚಿ
ನನ್ನನ್ನೇ ನಾ ಮರೆಯುವಂತೆ ನಿದ್ದೆ ಮಾಡಿದೆ

ಕಾಲರಾಯನಿಗೇ ಸವಾಲೆಸೆಯುವ ಹುಂಬತನ
ಎಲ್ಲವನ್ನೂ ಮೀರಿ ನಿಲ್ಲುವ ವ್ಯರ್ಥ ಪ್ರಯತ್ನ
ನಿದ್ದೆಯ ಹೆಸರಲ್ಲಿ ಇದ್ದುದನ್ನು ಇಲ್ಲವಾಗಿಸಿ
ಸತ್ಯವನ್ನು ಸುಟ್ಟುಹಾಕಿ ವಾಸ್ತವದತ್ತ ವಾಲುತ್ತ
ಹಳೆ ಹಾದಿಯಲ್ಲಿನ ಹೊಸ ಹೆಜ್ಜೆಗಾಗಿ ತಯಾರಿ
ನಿದ್ದೆ ಮುಗಿದ ಮೇಲೆ ನನಗೇ ನಾನೇ ಆಭಾರಿ


ಬೀಳದ ಕನಸುಗಳು


ಇಂದೇಕೋ ಬೀಳಲಿಲ್ಲ ನನಗೆ ಕನಸುಗಳು
ಹೀಗೇಕಾಯಿತು..?? ಮೊದಲ ಬಾರಿ ತಾನೇ
ಇನ್ನೆಲ್ಲಿ ಹಾರಿಹೋದವು ಆ ಕನಸುಗಳು..??
ಮುದ್ದೆಯಾಗಿ ನಿದ್ದೆ ಮಾಡಿದ್ದೆನಲ್ಲ ಹಾಯಾಗಿ
ಬಳಿಗೆ ಸುಳಿಯಲೇ ಇಲ್ಲವೇನೋ ಇಂದು
ಮನಸ್ಸಿನ ಮೇಲೇನಾದರೂ ಮುನಿಸಿಕೊಂಡಿಹರೇ..??

ದಿನವೂ ಎಷ್ಟೆಷ್ಟು..?? ಒಂದಲ್ಲ, ಎರಡಲ್ಲ, ಹತ್ತಾರು
ಇಂದು ಲೆಕ್ಕ ಸಿಗದೇ ಸೊನ್ನೆ ಸುತ್ತಬೇಕಾಯಿತು
ಹೇಳಕೇಳದೇ ರಜಾ ಹಾಕಿ ಹೋದವೇ..??
ಕೆಲವೊಮ್ಮೆ ದಿನದ ಹೊತ್ತಲ್ಲೂ ಹರಟೆ
ಮನಸ್ಸಿನೊಂದಿಗೆ ಕೆಲಸವಿಲ್ಲದ ಮಾತು ಕತೆ
ಈಗ ರಾತ್ರಿಯ ಸಮಯದಲ್ಲೇಕೆ ರಜಾ ಹಾಕಿದವು..??

ವಿಷಯಗಳಿರಲಿಲ್ಲವೇ ಕನಸುಗಳಿಗೆ..??
ಅದೆಷ್ಟು ಮಂದಿ ಬಂದು ಹೋಗಿದ್ದರು
ನಿಂತು ಕೂತು ಮಾತನಾಡಿ ಮಾತನಾಡಿಸಿದ್ದರು
ಅದ ನನಗೆ ಅರುಹುದನ್ನು ಮರೆತರೇಕೆ..??
ನನ್ನ ಮರೆತು ಅದ್ಯಾರ ಬಳಿ ಹೋದರು..??
ಕನಸುಗಳಿಲ್ಲದೆ ನಾನೀಗ ಒಂಟಿಯಾದೆನಲ್ಲ

ಮರಳಿ ಎಂದು ಬರುವರೋ ನನ್ನ ಬಳಿಗೆ
ಹಗಲಿಗೂ ರಾತ್ರಿಗೂ ಕನಸುಗಳೇ ಸೇತುವೆ
ಅಲ್ಲಿಯ ತನಕವೂ ಪ್ರತಿ ಕ್ಷಣವೂ ಉಪವಾಸವೇ
ಕನಸುಗಳಿಲ್ಲದೆ ಮನಸು ಅರಳಿತು ಹೇಗೆ..??
ಕನಸುಗಳಿಲ್ಲದೆ ಉಸಿರು ಹರಿದೀತು ಹೇಗೆ..??
ಇದ ತಿಳಿದೂ ಕೂಡ ಎಲ್ಲಿ ಹೋದವೋ


Saturday, 12 July 2014

ಚಂದಿರ ನಗುತ್ತಿದ್ದ


ಚಂದಿರ ಬಹಳವೇ ನಗುತ್ತಿದ್ದನಲ್ಲ ಅಂದು
ಆ ದಿನ ಹುಣ್ಣಿಮೆಯಾಗಿತ್ತೆ..?? ಇಲ್ಲ
ಇನ್ನೂ ದಿನಗಳೆರಡು ಕಾಯುತ್ತಿದ್ದವು
ಉತ್ತರ ಸಿಗದೇ ಜೋಂಪು ಹತ್ತಿಕೊಂಡರೂ
ನಿದ್ದೆ ಬರುವ ಮುನ್ನವೇ ಎದ್ದು ಕುಳಿತೆ
ಚಂದಿರನ ನಗುವಿನ ಅಬ್ಬರಕ್ಕೆ

ಕಿಟಕಿಯ ಸರಳುಗಳ ಪಕ್ಕ ಆತ ನಿಂತಿದ್ದ
ಕಣ್ಣುಗಳಲ್ಲಿ ನನಗಾಗಿ ವಿಲಕ್ಷಣ ನಗು
ಅರ್ಥವಾಗದೇ ತಲೆಕೆರೆದುಕೊಳ್ಳುವಂತಾಗಿ
ಬಿದ್ದುಕೊಂಡರೆ ರೆಪ್ಪೆಗಳು ಸತಾಯಿಸುತ್ತಿದ್ದವು
ಆತ ಇನ್ನೂ ಹತ್ತಿರಕ್ಕೆ ಬಂದ
ನನ್ನ ಹೊರಳಾಟಕ್ಕೆ ಸಮನಾಗಿ ನಗು ಕೇಳಿಸುತ್ತಿತ್ತು

ಆ ವಿಚಿತ್ರ ನಗುವಿಗೆ ಹೆದರಿಯೋ ಏನೋ
ನಿದ್ರಾದೇವತೆ ಕೃಪೆ ತೋರದೇ ಹೋದಳು
ಚಳಿರಾಯ ಮಾತ್ರ ಕರ್ತವ್ಯವನ್ನು ನಿಲ್ಲಿಸಲಿಲ್ಲ
ನಾನು ಹೊದಿಕೆಯೊಳಗೆ ಮುದುಡಿಕೊಂಡಷ್ಟೂ
ಚಂದಿರನ ಕೇಕೆ ಮತ್ತೂ ಜೋರಾಗುತ್ತಿತ್ತು
ನನ್ನೊಳಗೆನೇ ಪ್ರತಿಧ್ವನಿಸುವಂತೆ ಭಾಸ

ಆ ರಾತ್ರಿ ಜಾಗರಣೆಯೇ ಜೊತೆಯಾಯಿತು
ಗೆಳೆಯ ಗಾಳಿಯನ್ನು ಕಳಿಸುತ್ತಿದ್ದ ಚಂದಿರ
ಮುಚ್ಚಿಕೊಂಡ ಕಿಟಕಿಯನ್ನು ತೆರೆಯಲು
ಮುಸುಕು ಹಾಕಿಕೊಂಡರೂ ಬೆಳದಿಂಗಳಿನಿಂದ
ಜೋಂಪು ಬಾರದಂತೆ ಕಾವಲು ಕಾಯುತ್ತ
ನನ್ನ ನೋಡಿ ನಗುತ್ತಲೇ ಉಳಿದ

ನಸುಕು ಹರಿದು ನಕ್ಷತ್ರಗಳೆಲ್ಲ ಮಲಗಿಕೊಂಡರೂ
ಆತ ಮಾತ್ರ ಹೋಗಲೇ ಇಲ್ಲ
ಸಮಯ ಕಳೆದಂತೆ ರವಿಯೆದ್ದು ಬಂದ
ಎತ್ತಲೂ ಬೆಳಕು ಲಾಸ್ಯವಾಡತೊಡಗಿತು
ಊಹ್ಞೂಂ, ಚಂದಿರ ನನ್ನ ಪಕ್ಕದಲ್ಲೇ ಇದ್ದ
ವಿಲಕ್ಷಣವಾಗಿ ನಗುತ್ತಲೇ ಇದ್ದ


Friday, 11 July 2014

ಶೇಷ


ಸಪ್ಪಳವಾಗದಂತೆ ಸುಮ್ಮನೇ
ನೀ ಹೊರಟುಹೋದೆ
ಆದರೆ ಕೇಳಿಲ್ಲಿ ಒಮ್ಮೆ
ನೀ ನನ್ನಲ್ಲಿಯೇ ಉಳಿಸಿ
ಹೋದವುಗಳೊಂದಿಗೆ ನಾ
ತಾನೇ ಏನು ಮಾಡಲಿ ಹೇಳು

ಮೊನ್ನೆ ಮುಂಜಾನೆಯವರೆಗೂ
ಬಣ್ಣಬಣ್ಣದ ಕನಸುಗಳಾಗಿದ್ದವೆಲ್ಲ
ಇಂದು ಸಂಜೆಯ ತಂಪಿನಲ್ಲಿ
ಕಡುಗಪ್ಪು ನೆನಪುಗಳಾಗಿಹವು
ಅಂದು ನೀನಿತ್ತ ಸಿಹಿಮುತ್ತುಗಳೇ
ಈಗ ಹನಿಗಳಾಗಿ ಕಣ್ಣಂಚು ಸೇರಿಹವು

ತಾನಾಗಿಯೇ ಕುಸಿಯುತ್ತಿಲ್ಲ
ಬಲವಂತವಾಗಿ ಕೆಡವಬೇಕಾಗಿದೆ
ನಿನ್ನ ಮೇಲಿನ ನಂಬಿಕೆಯ ಸೌಧವನ್ನು
ಬಿದ್ದ ಒಲವಿನ ಗಾಳಿಪಟವನ್ನು
ಹರಿದ ದಾರದೊಂದಿಗೆ ಹೆಕ್ಕುವಾಗ
ಉಸಿರನ್ನೇ ಕತ್ತರಿಸಿ ಎಸೆದ ನೋವು


ಮೌನದ ಮನೆಹೊಕ್ಕು ಕೂತರೂ
ಸಂಭಾಷಿಸುವ ನಿನ್ನ ದನಿಯು
ರೆಪ್ಪೆಗಳು ಕತ್ತಲನ್ನು ತಾರದಂತೆ
ಕಣ್ಣುಗಳಲ್ಲೇ ನಿನ್ನ ನೋಟದ ಬೆಳಕು
ಹಸಿಯಾಗಿ ಹಿಪ್ಪೆಯಾದ ಮೈಯ್ಯನ್ನು
ಬಿಸಿಯಾಗಿಸುವ ಸ್ಪರ್ಶದ ಕಂಪು

ಏನು ಮಾಡಲಿ ಇವುಗಳೊಂದಿಗೆ
ಮನಸ್ಸಲ್ಲೇ ಮಣ್ಣು ಮಾಡಲು
ಅದು ಯಾವಾಗಿಂದಲೋ ನಿನ್ನ ಖೈದಿ
ಹೃದಯವೂ ಹೆಸರಿಲ್ಲದಂತಾಗಿದೆ
ಹಳೆಯ ಕಸಗಳನ್ನೆಲ್ಲ ಕೂಡಿಹಾಕಿ
ಹೊಸ ನೆಲಮಾಳಿಗೆಯೊಂದನ್ನು ಕಟ್ಟಿ
ಸುಣ್ಣ ಬಳಿಯದೇ ಸಮಾಧಿ ಮಾಡಲೇ

ಆದರೂ ಕೊನೆಯಲ್ಲಿ ಶೇಷವಿಲ್ಲವಾದೀತೇ
ಸಮಾಧಿಯಲ್ಲಿನ ಶ್ವಾಸಗಳು ನಾಳೆ
ನನ್ನ ನೆರಳಿಗಿಂತಲೂ ಹತ್ತಿರವಾಗಿ
ಹೆಜ್ಜೆಯನ್ನು ಹಿಂಬಾಲಿಸಲಾರವೇ
ನಾನೆಂಬ ಮಾಂಸದ ಮೂಲೆಯಲ್ಲೆಲ್ಲೋ
ನೀನು ಮಾಸದೇ ಉಳಿಯುವವನಲ್ಲವೇThursday, 10 July 2014

ನೀನು ಎಂದಿಗೂ ಜೀವದ ಗೆಳತಿ


ಹೃದಯದ ಗೆಳತಿ,
                             ಹೇಗಿದ್ದೀಯೇ ಎಂದು ಕೇಳುವುದು ತೀರಾ ಔಪಚಾರಿಕವಾಗುತ್ತದೆಯಲ್ಲವೇ..?? ನೀನು ನನಗೆ ಅಷ್ಟು ದೂರದವಳೇ..?? ಆದರೂ ನಿನ್ನನ್ನು ನೋಡದೆ, ಮಾತನಾಡದೆ ಎರಡು ವರ್ಷಗಳೇ ಆಯಿತಲ್ಲ. ಆ ಮಾತ್ರಕ್ಕಾದರೂ ಹೇಗಿರುವೆಯೆಂದು ಕೇಳುವುದು ತಪ್ಪಾಗಲಾರದು ಅಲ್ಲವೇ..??
                            ನಿನಗೆ ಬೇಸರವಾಗಿರಬೇಕು ಅಲ್ಲವೇನೇ..?? ಸಿಟ್ಟು ಬಂದು ಅದೆಷ್ಟು ಬಾರಿ ಮುಖ ಕೆಂಪಾಯಿತೋ ಏನೋ. ನಿನ್ನನ್ನು ಭೇಟಿಯಾಗಿಲ್ಲವೆಂಬ ಕಾರಣದಿಂದ ಮನಸ್ಸಿನಲ್ಲಿ ಎದ್ದ ಕದಡಿದ ಅಲೆಗಳೆಲ್ಲವನ್ನೂ ಮೌನವಾಗಿಯೇ ಹೊರಹಾಕಿದ್ದರೂ ಸರಿಯೇ. "ಮೂರು ವರ್ಷಗಳಷ್ಟೆ ಜೊತೆಗಿದ್ದು ಹೋದವಳು ತನ್ನನ್ನು ನೆಚ್ಚಿಕೊಂಡಾಳು ಎಂದು ಅಪೇಕ್ಷಿಸುವುದು ತನ್ನದೇ ತಪ್ಪು" ಎಂದು ನಿನಗೇ ನೀನೇ ಬೈದುಕೊಂಡಿರಲಿಕ್ಕೂ ಸಾಕು ಅಲ್ಲವಾ ಮಾರಾಯ್ತಿ. ಆದರೆ ನೀನೊಮ್ಮೆ ಸುಮ್ಮನೆ ಮೂಲೆಯಲ್ಲಿ ಗಲ್ಲಕ್ಕೆ ಕೈ ಕಟ್ಟಿ ಕುಳಿತು ಮೆಲ್ಲನೆ ಸ್ಮೃತಿಯ ಪರದೆಗಳಲ್ಲಿ ಜಾರುತ್ತಾ ಹೋಗಿದ್ದರೆ ಇವೆಲ್ಲವನ್ನು ನೀನು ಮಾಡುತ್ತಲೇ ಇರಲಿಲ್ಲವೇನೋ.
                          ನಿನ್ನ ಸಂಗಾತ ಕೇವಲ ಮೂರೇ ವರ್ಷಗಳದ್ದಾದರೂ ಅದರಿಂದ ದೊರಕಿದ್ದು ನೂರಕ್ಕಿಂತಲೂ ಹೆಚ್ಚು ವರ್ಷಗಳವರೆಗೆ ಉಸಿರಿನ ಜೊತೆಯಲ್ಲೇ ಇರುವಂಥದ್ದು ಕಣೆ ಗೆಳತಿ. ಆ ಬಂಧನದ ತೀವ್ರತೆ ಎಂಥದ್ದೆಂಬುದು ಬಹುಶಃ ಇವತ್ತಿನವರೆಗೆ ನನಗೂ ತಿಳಿದಿಲ್ಲ, ಮುಂದೆ ತಿಳಿಯುವಂತೆಯೂ ಇಲ್ಲ ಅನಿಸುತ್ತದೆ. ಆದರೆ ಅದರ ಇರುವಿಕೆಯ ಅನುಭವ ಕೊಡುವ ಸುಖದ ಮುಂದೆ ಮತ್ತೆಲ್ಲವೂ ಗೌಣವೆನಿಸುತ್ತದೆ. ಇನ್ನೊಮ್ಮೆ ಆ ದಿನಗಳೆಲ್ಲಾ ಮರಳಿ ಸಿಗಬಾರದೇ ಎಂದು ಅಂದುಕೊಳ್ಳುತ್ತಿರುವಂತೆಯೇ ಕಣ್ಣು ಮಂಜಾಗುತ್ತದೆ. ಹನಿಗಳು ಉದುರತೊಡಗಿದಂತೆಯೇ ಮನಸ್ಸು ನೆನಪಿನ ಪುಟಗಳನ್ನು ಒಂದೊಂದಾಗಿ ತೆರೆಯಲು ಅಣಿಯಾಗುತ್ತದೆ.

                                   ********************************


                                ನಮ್ಮನೆ ಮಗಳು ಈ ವರ್ಷ ಹಾಯ್ ಸ್ಕೂಲ್ ಗೆ ಹೋಗುವವಳು ಎಂಬ ಹೆಮ್ಮೆಯಿಂದ ಪಾಲಕರೇನೋ ನನ್ನನ್ನು ನಿನ್ನ ಮಡಿಲಿಗೆ ಹಾಕಿ ಹೋದರು. ಅವರಿಗೇನೂ ಗೊತ್ತು, ನನ್ನ ಒಳಗಾಗುತ್ತಿದ್ದ ತಳಮಳ. ಅಲ್ಲಿಯವರೆಗೆ ಹಳ್ಳಿಯ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಒಮ್ಮೆಗೆ ಪೇಟೆಯ ಸ್ಕೂಲು ಅದೂ ಕೂಡಾ ಇಂಗ್ಲಿಷ್ ಮೀಡಿಯಮ್ ಆಗಿದ್ದರಿಂದ ನಿನ್ನಡೆಗೆ ಬರುವಾಗ ಕೊಂಚ ಭಯ, ಆತಂಕಗಳನ್ನೆಲ್ಲಾ ಮನದ ಕೋಣೆಯಲ್ಲಿ ಮಾತ್ರವಲ್ಲ, ನನ್ನ ಸ್ಕೂಲ್ ಬ್ಯಾಗಿನಲ್ಲಿಯೂ ಹೊತ್ತುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದ್ದೆ. ಸದಾ ವಟ ವಟ ಎನ್ನುತ್ತಲೇ ಇರುವ ನಾನು ನಿನ್ನ ತೆಕ್ಕೆಗೆ ಬಂದು ಬಿದ್ದ ಮೊದಲಿನ ಒಂದು ಹತ್ತು ದಿನಗಳವರೆಗೆ ಕ್ಲಾಸಿನಲ್ಲಿ ಯಾರೊಂದಿಗೂ ಮಾತನಾಡಿದ್ದಿಲ್ಲ. ಹೊಸ ಹೊಸ ಮುಖಗಳು, ಮಾತುಗಳು, ನೋಟಗಳು, ಹಾವ-ಭಾವಗಳು. ಇದು ನನ್ನ ಪ್ರಪಂಚವೇ ಅಲ್ಲ, ಬೇರೆಯೇ ಒಂದು ಅಪರಿಚಿತ ಲೋಕವೆಂದು ಕಸಿವಿಸಿಯನ್ನು ಅನುಭವಿಸಿದ್ದರೂ ಅದು ಕೇವಲ ಇಪ್ಪತ್ತು ದಿನಗಳ ತನಕವಷ್ಟೆ. ಆಮೇಲೆ ಅದು ಹೇಗೋ ಏನೋ ನನಗರಿವಿಲ್ಲದಂತೆಯೇ ಆ ಪ್ರಪಂಚ ನನಗೆ ಚಿರಪರಿಚಿತವೆಂಬಂತಾಗಿತ್ತು. ಕಾರಣ ನಿನ್ನ ಅಂಗಳದ ಮಣ್ಣಿನ ಗುಣ ಹಾಗಿತ್ತು ಗೆಳತಿ. (ನನ್ನ ಸ್ನೇಹಿತರು ಇವತ್ತಿಗೂ ಹೇಳುತ್ತಾರೆ. ನಾನು ಮೊದಲಿನ ಹತ್ತು ದಿನ ಬಾಯಿಗೆ ಬೀಗ ಹಾಕಿಕೊಂಡು ಇದ್ದುದನ್ನು ನೋಡಿ ಅವರೆಲ್ಲರೂ ಇವಳು ಭಾಳ ಸೈಲೆಂಟ್ ಹುಡುಗಿಯೆಂದು ತಮ್ಮತಮ್ಮಲ್ಲೇ ತೀರ್ಪು ಕೊಟ್ಟುಕೊಂಡಿದ್ದರಂತೆ. ಪಾಪ, ಆಮೇಲೆ ತಮಗೆ ಟೊಪ್ಪಿ ಬಿತ್ತೆಂದು ಅರಿವಾಗಿ ಬೇಸರವಾಗಿರಬೇಕು.. :P )
                           ನಂತರದ ಆ ಮೂರು ಸುಂದರ ಸಂವತ್ಸರಗಳು ಅದೆಷ್ಟು ಬೇಗನೇ ಸರಿದು ಹೋದುವಲ್ಲ. ಆದರೂ ಪ್ರತಿಯೊಂದು ದಿನವೂ ಪ್ರತಿಯೊಂದು ಕ್ಷಣವೂ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಒಂದೇ ಕ್ಲಾಸ್ ಆದರೂ ನಮ್ಮ ನಮ್ಮಲ್ಲೇ ಜಗಳವಾಡಿದ್ದು, ಒಬ್ಬರ ಬಗ್ಗೆ ಇನ್ನೊಬ್ಬರ ಹತ್ತಿರ ಚಾಡಿ ಹೇಳಿದ್ದು, ಅವಳಿಗೊ/ಅವನಿಗೊ ಜಾಸ್ತಿ ಮಾರ್ಕ್ಸ್ ಬರಬಾರದೆಂದು ನೋಟ್ಸ್ ಕೊಡದೇ ಹೋದದ್ದು, ಸ್ನೇಹಿತನ ಬರ್ತ್ ಡೇಗೆಂದು ಗಿಫ್ಟ್ ತಂದದ್ದು, ನಮ್ಮ ಗೆಳೆಯರ ಗುಂಪನ್ನು ನೋಡಿ ಉಳಿದವರು ಉರಿದುಕೊಂಡಿದ್ದು, ಬಯಾಲಜಿ ಚಿತ್ರಗಳನ್ನು ಬೇರೆಯವರ ಹತ್ತಿರ ಬಿಡಿಸಿಕೊಂಡಿದ್ದು, ಗ್ರೂಪ್ ಡಿಸ್ಕಷನ್ ಸಮಯದಲ್ಲಿ ಸೀರಿಯಲ್, ಫಿಲ್ಮ್ ಸುದ್ದಿ ಹೇಳುತ್ತಾ ಕೂರುತ್ತಿದ್ದುದು, ಕ್ಲಾಸಿನೊಳಗೆ ಕ್ರಿಕೆಟ್, ಶಟಲ್ ಆಡುತ್ತಿದ್ದುದು, ಪಾಠಗಳು ನಡೆಯುವ ಹೊತ್ತಿನಲ್ಲೇ ನೆಲ್ಲಿಕಾಯಿ, ವಟಾಣಿ, ಚಾಕ್ಲೇಟುಗಳನ್ನು ತಿನ್ನುತ್ತಿದ್ದುದು, ಕಣ್ಸನ್ನೆ ಬಾಯಿಸನ್ನೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದುದು - ಒಂದೇ ಎರಡೇ. ಪಟ್ಟಿ ಮಾಡುತ್ತಾ ಹೋದಂತೆ ಹನುಮಂತನ ಬಾಲವಾದೀತು ಅಲ್ಲವೇನೇ..?? ಇಲ್ಲಿ ಬರೆಯಲಾಗದ ಕೆಲವು ವಿಷಯಗಳೂ ಇವೆ. ಅವೆಲ್ಲವೂ ನಮ್ಮ ನೆನಪಿನ ಪುಟಗಳಲ್ಲೇ ಉಳಿಯಲಿ ಬಿಡು. ಹೇಗಿದ್ದರೂ ನಿನಗೆ ಅವೆಲ್ಲ ಸಂಗತಿಗಳೂ ಗೊತ್ತು ತಾನೇ. ( ೨೦೦೯ ಬ್ಯಾಚ್ ಅಂದ್ರೆ ಅದು ನ ಭೂತೋ ನ ಭವಿಷ್ಯತಿ ಅಂತ ನಮ್ಮ ಸಂಸ್ಕೃತ ಸರ್ ಇಂದಿಗೂ ಹೇಳುತ್ತಾರೆ. ಬಹುಶಃ ಇದೇ ಕಾರಣವೇನೋ. :) )


                                 ನಿನ್ನ ಮಡಿಲಲ್ಲಿ ಆಡುತ್ತಾ ನಲಿಯುತ್ತಾ ಓದಿದವರು ಮರೆಯಲೇ ಆಗದಂತಹ ವಿಷಯಗಳು ಹಲವಾರಿವೆ ಅಲ್ಲವಾ ಮಾರಾಯ್ತಿ...?? ಅವುಗಳೆಂದರೆ ಸ್ಕೂಲ್ ಅಲ್ಲಿರುವ ಲಯನ್ಸ್ ಭವನ, ಅದರ ಪಕ್ಕದಲ್ಲೇ ಇರುವ ಬೇಸಿನ ಮತ್ತು ನಲ್ಲಿ, ಗ್ರೌಂಡ್ ನಲ್ಲಿರುವ ಜೋಕಾಲಿ, ಶ್ರೀಕೃಷ್ಣ ಮೆಸ್, ಸಮೃದ್ಧಿ ಶಾಪ್, ಗಜೇಂದ್ರ ಸಿಡಿ ಲೈಬ್ರರಿ, ಬಳಕೂರ್ ಶಾಪ್, ಭಟ್ಸ್ ಬೇಕರಿ, ರವಿರಾಜ್ ಸ್ಟುಡಿಯೋ, ಬಾಪೂಜಿ ನಗರ ಗ್ರೌಂಡ್, ಎಂ.ಇ.ಎಸ್. ಜೊತೆ ನಡೆಯಿತ್ತಿದ್ದ ಫ್ರೆಂಡ್ ಶಿಪ್ ಮ್ಯಾಚ್ ಗಳು, ಶಿರಸಿ ಸ್ಟೇಡಿಯಮ್ - ಇನ್ನೂ ಹತ್ತು ಹಲವು. ಆಟೋದಲ್ಲಿ ಪ್ರಯಾಣಿಸುವವರಿಗೆ ಆಟೋ ಮಾಮಾ, ಜೊತೆಯಲ್ಲಿ ಬರುವ ಜೂನಿಯರ್ಸು ಸೀನಿಯರ್ಸು, ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ರಗಳೆ ಕಂಡಕ್ಟರುಗಳು, ಲೇಟ್ ಆಗಿ ಬರುವ, ಮಳೆಗಾಲದಲ್ಲಿ ಸೋರುವ ಬಸ್ಸುಗಳೂ ಸಹ ತಮ್ಮ ಜೀವನಾಡಿಗಳಲ್ಲಿ ಒಂದಾಗಿ ಹೋಗುತ್ತಿದ್ದವು. ( ನಮ್ಮದು ಯಲ್ಲಾಪುರ್ ಬಸ್ ಗೆ ಓಡಾಡುವವರದ್ದೇ ಒಂದು ತಂಡವಿತ್ತು. ಅದೆಷ್ಟು ದಿನ ಬಸ್ಸಿಗಾಗಿ ಕಾದು ಕಾದು ಸುಸ್ತಾಗಿದ್ದೆವೊ, ಅದೆಷ್ಟು ಬಾರಿ ಬಸ್ಸು ಲೇಟ್ ಆಗಿ ಪ್ರೇಯರ್ ತಪ್ಪಿಸಿಕೊಂಡಿದ್ದೆವೊ, ಕಂಡಕ್ಟರುಗಳ ಜೊತೆ ಜಗಳವಾಡುವಾಗ ಅದೇನೆಲ್ಲಾ ಬೈದಿದ್ದೆವೊ. ನೆನದರೆ ಈಗ ನಗು ಬರುತ್ತದೆ. =D )
                              ಇನ್ನು ನಿನ್ನ ಮಂದಿರವನ್ನು ಸದಾ ಕಾಲ ಪವಿತ್ರವಾಗಿರಿಸುತ್ತಿದ್ದ ಕೆಲವು ಅಧ್ಯಾಪಕ ರತ್ನಗಳನ್ನು ನೆನೆಯದೇ ಹೋದರೆ ಹೇಗೆ..?? ನಿನ್ನ ಉಳಿದ ಸ್ನೇಹಿತರ ಬಗ್ಗೆ ಗೊತ್ತಿಲ್ಲ. ನಮ್ಮ ಬ್ಯಾಚ್ ನ ಮಟ್ಟಿಗೆ ಲಯನ್ಸ್ ಸ್ಕೂಲ್ ಟೀಚರ್ಸ್ ಎಂದಾಗ ಮೊದಲು ನೆನಪಾಗುವವರೇ ಪ್ರಶಾಂತ್ ಹೆಗಡೆ ಸರ್. ‘ಈಸ್ ಇಟ್ ಕರೆಕ್ಟ್..??’ ಎಂದು ಅವರು ಪಾಠ ಮಾಡುವಾಗ ಹೇಳುತ್ತಿದ್ದುದನ್ನು ಮರೆಯಲಾದೀತೇ..?? ಅವರ ಮೆದುಳಿನ್ನು ಮ್ಯೂಸಿಯಂ ನಲ್ಲಿ ಇಡಬೇಕು ಎಂದು ನಾವೆದೆಷ್ಟು ಬಾರಿ ಅಂದುಕೊಂಡಿದ್ದೆವೊ. ನಂತರದ ಸ್ಥಾನ ನಮ್ಮ ಹೆಡ್ ಮಾಸ್ಟರ್ ಶಶಿಧರ್ ಅಬ್ಬಿ ಅವರದ್ದು. ಆ ಗಾಂಭಿರ್ಯ, ಶಿಸ್ತು, ನೇರ ಮಾತು, ಜವಾಬ್ದಾರಿತನ, ಸ್ವಾಭಿಮಾನ - ಅಬ್ಬಿ ಸರ್ ಇಂದಾನೇ ನಿನ್ನ ಹೆಸರಿಗೂ ಒಂದು ಕಳೆ ಇತ್ತು ನೋಡು. ಕನ್ನಡವೆಂದರೆ ಸಾಕು ಸೀತಕ್ಕೋರು ನೆನಪಾಗುತ್ತಾರೆ. ಕೆನ್ನೆಯ ಎರಡು ಗುಳಿಗಳಲ್ಲಿ ಅರಿಶಿನ-ಕುಂಕುಮವನ್ನು ಹಚ್ಚಿಕೊಂಡು ಬರುವ ಅವರು ನಗುವುದನ್ನು ನೋಡುವುದೇ ಒಂದು ಸೊಗಸು. ಅವರು ಸಿಟ್ಟಿನಿಂದ ಬೈದರೂ ಅದು ಮನಸ್ಸಿಗೆ ಹಿತವಾಗುವಂತಿರುತ್ತದೆ. ಮತ್ತೆ ನಮ್ಮ ನಾಗರಾಜ್ ಸರ್. ‘ಸತ್ತ್ ಹೆಣಾ ನಿಂತಂಗೆ ನಿಂತಿದ್ದೆ’ ಅಂತಾ ಅವರು ಬಯ್ಯುವುದನ್ನು ಯಾರು ತಾನೇ ಮರೆಯಲು ಸಾಧ್ಯ..?? ಸೀಟಿ ಸಿಳ್ಳೆಯೊಂದೇ ಸಾಕು ಅವರ ನೆನಪನ್ನು ಹೊತ್ತು ತರಲು. ಮತ್ತೆ ‘ಏನಾದ್ರೂ ಪ್ರಾಬ್ಲಮ್ ಉಂಟೋ..??’ ಅಂತ ರಾಗದ ಸ್ವರ ಗೀತಾ ಟೀಚರ್ ಅನ್ನು ನೆನಪಿಗೆ ತರುತ್ತದೆ. ಅವರ ಇಂಗ್ಲಿಷ್ ಕ್ಲಾಸಿನಲ್ಲಿ ಪಾಠ ಕೇಳದೇ ಮಾತನಾಡುತ್ತ ಕುಳಿತಿರುತ್ತಿದ್ದ ಕಾರಣ ನಾವೆಲ್ಲ ಅದೆಷ್ಟು ಬಾರಿ ಬೈಸಿಕೊಂಡಿದ್ದೇವೆಂಬುದಕ್ಕೆ ಲೆಕ್ಕವಿಲ್ಲ. ಮತ್ತೆ ಸೀತಾರಾಮ್ ಸರ್, ಲಕ್ಷ್ಮೀ ಟೀಚರ್, ಸುಶೀಲಾ ಟೀಚರ್, ಲೀಲಾವತಿ ಟೀಚರ್, ರಜಿಯಾ ಟೀಚರ್, ಶಾಂತಲಾ ಟೀಚರ್, ಕುಮುದಾ ಟೀಚರ್, ರೇಶ್ಮಾ ಟೀಚರ್, ಪ್ರಶಾಂತ್ ಭಟ್ ಸರ್ - ಇನ್ನೂ ಅದೆಷ್ಟು ಉತ್ತಮ ಶಿಕ್ಷಕರು ಬೇಕು ಹೇಳು. ಇವರೆಲ್ಲಾ ಕೇವಲ ಪಠ್ಯದಲ್ಲಿದ್ದುದನ್ನು ಕಲಿಸಿ ಹೋಗಲಿಲ್ಲ. ಜೀವನದಲ್ಲಿ ಹೇಗೆ ಸಾಗಬೇಕೆಂಬುದನ್ನು ಹೇಳಿಕೊಟ್ಟರು. ಒಳ್ಳೆಯದನ್ನು ಮಾಡಿದಾಗ ಬೆನ್ನು ತಟ್ಟುತ್ತ, ತಪ್ಪು ಮಾಡಿದಾಗ ತಿದ್ದುತ್ತ ನಮ್ಮನ್ನು ಕೈ ಹಿಡಿದು ಮುನ್ನಡೆಸಿದರು. ಇದೊಂದು ವಿಷಯದಲ್ಲಿ ನಿನಗೆ ಎಷ್ಟು ಋಣಿಯಾಗಿದ್ದರೂ ಸಾಲದು ಗೆಳತಿ. ( ಇಂದಿಗೂ ಕೆಲವು ಟೀಚರ್ಸ್ ನಮ್ಮ ಸಂಪರ್ಕದಲ್ಲಿದ್ದಾರೆ. ನಮಗೇನಾದರೂ೦ ಸಮಸ್ಯೆ, ಕಷ್ಟಗಳು ಎದುರಾದಾಗ ಸರಿಯಾದ ಪರಿಹಾರ ಹೇಳಿ ಸಮಾಧಾನ ಮಾಡುವವರು ನಮ್ಮ ಲಯನ್ಸ್ ಸ್ಕೂಲ್ ಶಿಕ್ಷಕರೇ. )

                                *************************************


                           ಇನ್ನೊಮ್ಮೆ ನಾನು ನಿನ್ನ ಮನೆಯಲ್ಲೇ ಎಂಟನೇ ತರಗತಿಯನ್ನು ಓದುವಂತಾಗಿದ್ದರೆ..?? ಈ ಯೋಚನೆ ಅದೆಷ್ಟು ಬಾರಿ ಬರುತ್ತದೆ ಗೊತ್ತಾ ಗೆಳತಿ..?? ಅಂದು ಎಷ್ಟೊಂದು ಹೇಳಲಾರದ ಮಾತುಗಳೆಲ್ಲಾ ಮನಸ್ಸಿನಲ್ಲೇ ಉಳಿದು ಹೋದವು. ಅದೆಷ್ಟು ನಗುವಿನ ಕ್ಷಣಗಳು ಬಂದರೂ ಅರಳದೇ ಹೋದವು. ಅದೆಷ್ಟು ಮನಸ್ಸುಗಳಿಗೆ ವಿನಾಕಾರಣ ಘಾಸಿ ಉಂಟು ಮಾಡಿದೆವು. ಅದೆಷ್ಟು ಸುಂದರ ಭಾವಗಳನ್ನು ಅರ್ಥೈಸಲಾರದೇ ಹೋದೆವು. ಹೀಗೆಲ್ಲಾ ಯಾವಾಗ ಅನಿಸುತ್ತದೆ ಗೊತ್ತಾ ಮಾರಾಯ್ತಿ..?? ಫೇಸ್ ಬುಕ್ಕಿನಲ್ಲೋ, ವ್ಯಾಟ್ಸ್ ಆಪ್ ನಲ್ಲೋ ಗೆಳೆಯ-ಗೆಳತಿಯರ ಸ್ಟೇಟಸ್ ಕಂಡಾಗ, ರಜಾ ದಿನಗಳಲ್ಲಿ ಶಿರಸಿಯ ಬೀದಿಗಳಲ್ಲಿ ಅಡ್ಡಾಡುತ್ತಿರುವ ಹೊತ್ತಿನಲ್ಲಿ ಅವರ ಸಹೋದರನೋ, ಸಹೋದರಿಯೋ, ಅಪ್ಪನೋ, ಅಮ್ಮಳೋ ನಮ್ಮನ್ನು ಕಂಡು ಮಾತನಾಡಿಸಿದಾಗ, ಇಲ್ಲವೇ ಮುಗುಳ್ನಕ್ಕು ಹೋದಾಗ, ಸಂಪರ್ಕದಲ್ಲಿರುವ ಗೆಳೆಯ/ಗೆಳತಿ ಇನ್ನೊಬ್ಬ ಗೆಳೆಯ/ಗೆಳತಿ ಸಿಕ್ಕಿದ್ದನೆಂ/ಳೆಂದು ಅವನ/ಳ ಬಗ್ಗೆ ಮಾತನಾಡಿದಾಗ, ಟೀಚರ್ಸ್ ಯಾರಾದರೂ ‘ಮತ್ತೆ ಅವನು/ಅವಳು ಎಲ್ಲಿದ್ದಾರೆ..?? ಏನು ಮಾಡುತ್ತಿದ್ದಾರೆ..?’ ಎಂದು ಕೇಳಿದಾಗ - ಇನ್ನು ಬೇಕಾದಷ್ಟು ಸಂದರ್ಭಗಳಲ್ಲಿ ಅನಿಸುತ್ತದೆ. ಆಗೆಲ್ಲಾ ಏನು ತಾನೇ ಮಾಡಲು ಸಾಧ್ಯ..?? ಮೌನ ತಾಳುವುದೊಂದನ್ನು ಬಿಟ್ಟು.
                             ಬದುಕನ್ನೇ ರೂಪಿಸಿದ ತಾಣ ಅದು, ಲಯನ್ಸ್ ಸ್ಕೂಲ್. ಎಲ್ಲಿಗೇ ಹೋಗಲಿ, ಏನೇ ಮಾಡುತ್ತಿರಲಿ. ಅದರ ಜೊತೆಯಲ್ಲಿ ನಿನ್ನ ನಂಟುತನ ಇದ್ದೇ ಇರುತ್ತದೆ ಗೆಳತಿ. ನಿನ್ನನ್ನು ಭೇಟಿ ಮಾಡಲಿಕ್ಕೆ ಬರಲಿಲ್ಲವೆಂದು ನೀನು ವ್ಯಥಾ ಮನಸ್ಸು ಕೆಡಿಸಿಕೊಳ್ಳುವುದು ಬೇಡ ತಿಳೀತಾ. ನಾನು ನನ್ನ ಪುರಾಣದ ಕುರಿತು ಗೀಚಿದ್ದೇ ಆಯಿತು. ನಿನ್ನ ಬಗ್ಗೆ ಏನು ಕೇಳಲಿಲ್ಲ. ನಿನ್ನ ಮಡಿಲಲ್ಲಿ ಈಗ ಓದುತ್ತಿರುವ ಮಕ್ಕಳೆಲ್ಲಾ ಹೇಗಿದ್ದಾರೆ..?? ನಮ್ಮ ಶಿಕ್ಷಕ ವೃಂದದವರೆಲ್ಲಾ ಚೆನ್ನಾಗಿದ್ದಾರೆ ತಾನೇ..?? ಮತ್ತೆ ನಿನ್ನ ಮನೆಯಲ್ಲಿ ಏನೇನು ವಿಶೇಷವಿದೆ..?? ಇದೆಲ್ಲದರ ಬಗ್ಗೆಯೂ ನನಗೆ ಉತ್ತರ ಬರೆದು ತಿಳಿಸಬೇಕು. ನಿನ್ನ ಪತ್ರಕ್ಕಾಗಿ ಕಾಯುವವರು ಬಹಳ ಜನರಿದ್ದಾರೆ. ಕೊನೆಯಲ್ಲಿ ಸಾಧ್ಯವಾದರೆ ಶೀಘ್ರದಲ್ಲೇ ಭೇಟಿಯಾಗೋಣ. ಮತ್ತೆ ಸಿಗಲೇ..?

                                                                                                                           ಇತಿ ನಿನ್ನ ಪ್ರೀತಿಯ,
                                                                                                                                    ಲಹರಿ


Wednesday, 9 July 2014

ಆತ ಬಂದಿದ್ದ


ಆತ ಮತ್ತೆ ಬಂದಿದ್ದ
ಬೆಚ್ಚಗೆ ಹೊದ್ದು
ನಾನು ಮುಚ್ಚಟೆ ಮಲಗಿದ್ದಾಗ
ಗುಮ್ಮನಂತೆ ಸುಮ್ಮನೆ ಬಂದ
ಕನಸುಗಳಿಗೆ ಕಚಗುಳಿಯಿಟ್ಟು
ಮನಸನ್ನೇ ಮುದ್ದಾಡಿ ಹೋಗುವಂತೆ
ನೀಲಿ ಕಂಗಳ ಹುಡುಗ
ಮೊನ್ನೆ ಮತ್ತೆ ಬಂದಿದ್ದ

ತಂಪಾದ ಗಾಳಿಯಲ್ಲಿ
ಪರಿಚಿತ ಕಂಪು ಸೋಕಿದಾಗ
ಚುಮುಚುಮು ಚಳಿಯಲ್ಲೂ
ಮೈ ಬಿಸಿಯಾಗಿತ್ತು
ಸಿಹಿಯಾದ ನಿದ್ದೆಯ ಮಧ್ಯದಲ್ಲೂ
ಪೆದ್ದು ಯೋಚನೆಗಳು ಕಾಡಿದ್ದವು
ಅದ್ಯಾವಾಗಲೋ ನನಗರಿವಿಲ್ಲದಂತೆ
ಹತ್ತು ಬಾರಿ ಮಗ್ಗುಲು ಬದಲಾಗಿತ್ತು

ಆತ ಬರುವ ಬಗ್ಗೆ ಸುಳಿವಿತ್ತೇ..??
ಹೊದಿಕೆಯೊಳಗೇ ಉತ್ತರ ಹುಡುಕಿದೆ
ಚಾದರದ ಚಿತ್ತಾರಗಳಲ್ಲೆಲ್ಲೋ
ಕಳೆದು ಹೋಗಿರಬೇಕು, ದೊರಕಲಿಲ್ಲ
ಕ್ಷಣ ಕೂಡ ಕಳೆಯುವ ಮುನ್ನವೇ
ಆತ ನನ್ನೆದುರಲ್ಲಿ ಕುಳಿತಿದ್ದ
ನೀಲಿ ಕಂಗಳ ಹುಡುಗ
ಕಣ್ಣಲ್ಲೇ ಕಥೆ ಹೇಳುವಂತಿದ್ದ

"ಈಗೇಕೆ ಬಂದೆ?" ನನ್ನ ಪ್ರಶ್ನೆ
ಪದಗಳಾಗುವ ಶಾಸ್ತ್ರಕ್ಕೊಳಪಡದೆ
ತುಟಿಯಂಚಿನ ನಗುವಿನಲ್ಲೇ ಮೂಡಿತ್ತು
ಆತ ಮಾತನಾಡಲಿಲ್ಲ, ಕಣ್ಣು ಮಿಟುಕಿಸಿದ
ಹಾಗೆಯೇ ನಸುಕಿನ ಬೆಳಕಲ್ಲಿ
ನಡೆದು ಸಾಗಿ ಹೋದ
ಉತ್ತರ ದೊರಕಿತೆಂಬ ತೃಪ್ತಿಯಲ್ಲಿ
ನಾನು ಮುಸುಕೆಳೆದುಕೊಂಡೆ


Monday, 7 July 2014

ಅಯ್ಯೋ ನೆಗಡಿ


ಅಯ್ಯೋ, ಯಾಕಾದರೂ ಬಂತೋ ಈ ನೆಗಡಿ
ಇದರ ದೆಸೆಯಿಂದ ಅದೆಂಥ ಕಿರಿಕಿರಿ ನೋಡಿ
ಎತ್ತಲೂ ಹೋಗುವಂತಿಲ್ಲ, ಕೈ ಕಟ್ಟಿ ಕೂರುವಂತೆಯೂ ಇಲ್ಲ
ಕರವಸ್ತ್ರ ಹಿಡಿದು ಮೂಗು ಒರೆಸುವುದೇ ಕೆಲಸವಾಯಿತಲ್ಲ

ದಿನವಿಡೀ ಆಕ್ಷೀ ಎನ್ನುವುದೀಗ ಹೊಸ ಜಪ
ಕೆಲಸಗಳಿಂದ ತಪ್ಪಿಸಿಕೊಳ್ಳಲು ಇದೊಂದು ಒಣಾ ನೆಪ
ಅತ್ತ ಮೇಲೆ ತಲೆ ಹಿಡಿದುಕೊಂಡು ಭಾರವಾದರೆ
ಇತ್ತ ಕೆಳಗೆ ಗಂಟಲು ಒಡೆದು ಮಾತು ಬಾರದಾಗುವುದಲ್ಲ

ಕ್ರೋಸಿನ್, ಸಿರಪ್ಪುಗಳಿಗೆಲ್ಲ ಇದು ರಮ್ಯ ಚೈತ್ರ ಕಾಲ
ಏನೆಲ್ಲಾ ಕುಡಿದರೇನು ಎಷ್ಟು ಮಾತ್ರೆಗಳನ್ನು ನುಂಗಿದರೇನು
ಔಷಧಿ ತೆಗೆದುಕೊಂಡರೆ ಕನಿಷ್ಠವಾದರೂ ಒಂದು ವಾರ
ಇಲ್ಲವೆಂದರೆ ಏಳು ದಿನಗಳ ತನಕ ತಪ್ಪದು ರಾಹುಕಾಲ

ತಂಪು ಅತಿಯಾಗಿ ಕೆಂಪಾಗಿಹುದು ಮುಖಾರವಿಂದವು
ಉರಿದುರಿದು ಕಪ್ಪಗಾಗಿದೆ ಕಣ್ಣುಗಳಲ್ಲಿನ ಹೊಳಪು
ಅದು ಖಾರ, ಇದು ಆಯಿಲು ಎನ್ನುವ ಪಥ್ಯದ ಪಾಠ
ಹೊಟ್ಟೆಯ ಭಾಗ್ಯಕ್ಕೂ ಕೊಕ್ಕೆ ಹಾಕುವ ಕಳ್ಳ ಆಟ

ಎಷ್ಟಾದರೂ ಪುಟ್ಟ ಮೂಗು ನಮ್ಮದೆ ತಾನೇ
ಸಹಿಸಿಕೊಳ್ಳುವುದರ ಹೊರತು ಬೇರೆ ದಾರಿ ನಾ ಕಾಣೆ
ಶೀತವಾಗಿಹ ಉಸಿರನ್ನು ಕೊಂಚ ಬೆಚ್ಚಗೆ ಮಾಡಿ
ಬೇರೇನೂ ಬೇಡ, ಸುಮ್ಮನೆ ಹೊದ್ದು ಮಲಗಿಬಿಡಿ


ಇದು ‘ಕೇಂದ್ರ’ದ ‘ವೃತ್ತಾಂತ’


                           ಸರಿಯಾಗಿ ಎರಡು ವರ್ಷಗಳ ಹಿಂದೆ ರಜಾ ದಿನಗಳಲ್ಲಿ ಶಿರಸಿಗೆ ಹೋದಾಗ ಭೇಟಿಯಾಗಿದ್ದ ಊರಿನ ಮಾವ ಒಬ್ಬರು ನನಗಿರುವ ಓದಿನ ಹುಚ್ಚನ್ನು ತಿಳಿದು ಪ್ರಶ್ನಿಸಿದ್ದರು, "ತಂಗಿ, ಕಥೆಯಾದಳು ಹುಡುಗಿ ಪುಸ್ತಕವನ್ನು ಓದಿದ್ದೀಯಾ..?? " ನನಗೆ ಯಶವಂತ ಚಿತ್ತಾಲರ ಬಗ್ಗೆಯೂ ಅವರ ಕಥೆಯಾದ ಹುಡುಗಿಯ ಬಗ್ಗೆ ಕೇಳಿ ಮಾತ್ರವೇ ಗೊತ್ತಿತ್ತು. ಅವರ ಯಾವ ಪುಸ್ತಕಗಳನ್ನೂ ನಾನು ಓದಿರಲಿಲ್ಲ. ನಾನು ನಕಾರಾತ್ಮಕವಾಗಿ ಉತ್ತರಿಸಿದಾಗ ಮಾವ ಹೇಳಿದ್ದಿಷ್ಟು, "ಕೂಸೆ, ಮೊದಲು ಆ ಪುಸ್ತಕವನ್ನು ಓದು. ಚಿತ್ತಾಲರ ಬರಹಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಸಾಣೆ ಹಿಡಿದಂತೆ." ಅಂದಿನಿಂದಲೇ ಚಿತ್ತಾಲರ ಹುಡುಗಿಗಾಗಿ ನನ್ನ ಹುಡುಕಾಟ ಪ್ರಾರಂಭವಾಯಿತು.
                         ಬರೋಬ್ಬರಿ ಎರಡು ವರ್ಷಗಳ ಕಾಲ ನಾನು ಬಿಡದೇ ಹುಡುಕಾಡಿದ್ದಷ್ಟೆ ಬಂತೇ ಹೊರತು ಹುಡುಗಿ ನನ್ನ ಕಣ್ಣಿಗೂ ಕಾಣಿಸಲಿಲ್ಲ. ಮೊನ್ನೆ ಮೊನ್ನೆ ಅಂದರೆ ಕೇವಲ ೨೦ ದಿನಗಳ ಹಿಂದೆಯಷ್ಟೆ ಹುಡುಗಿ ಕೊನೆಗೂ ನನ್ನ ಕೈ ಸೇರಿದ್ದಳು. ಅದರಲ್ಲಿನ ಒಂದೊಂದು ಕಥೆಗಳನ್ನೂ ಓದುತ್ತಾ ಹೋದಂತೆ ನಾನು ನಾನಾಗಿ ಉಳಿದಿರದೇ ನನಗೇ ಅರಿಯಲಾಗದ ಬೇರೆಯೇ ಒಂದು ಹುಡುಗಿಯಾಗುತ್ತಿದ್ದೆ. ಆ ಪುಸ್ತಕವನ್ನು ಕುರಿತು ಬರೆಯುವಷ್ಟು ಪ್ರಬುದ್ಧತೆ ನನಗಿಲ್ಲವಾದುದರಿಂದ ಇಷ್ಟು ಮಾತ್ರವೇ ಹೇಳಬಲ್ಲೆ. ಓದುಗರು ತಮ್ಮನ್ನೇ ತಾವು ಮರೆಯುವಂತೆ ಅತಿಯಾಗಿ ಗುಂಗು ಹಿಡಿಸುವ ಬರಹ ಚಿತ್ತಾಲರದ್ದು. ಅಷ್ಟು ಆಳವಾದ ಬರಹ ಸುಲಭ ಸಾಧ್ಯವಲ್ಲವೆಂದೂ, ಇದು ದೈವ ದತ್ತವಾಗಿಯೇ ಬಂದ ಪ್ರತಿಭೆಯೆನ್ನುವುದು ಯಾರಿಗಾದರೂ ಅರ್ಥವಾಗುವ ಸತ್ಯ ಸಂಗತಿ. ಶಿವರಾಂ ಕಾರಂತ, ಎಸ್. ಎಲ್. ಭೈರಪ್ಪ, ವ್ಯಾಸರಾಯ ಬಲ್ಲಾಳರ ನಂತರ ನನಗೆ ಹುಚ್ಚು ಹಿಡಿಸುವಂಥ ಬರಹ ಕಂಡಿದ್ದು ಚಿತ್ತಾಲರ ಕೃತಿಗಳಲ್ಲಿ. (ಬೇರೆ ಹಲವಾರು ಸಾಹಿತಿಗಳೂ ಈ ಸಾಲಿನಲ್ಲಿ ನಿಲ್ಲುವಂಥವರಾಗಿರಬಹುದು. ನನಗೆ ತಿಳಿದಿಲ್ಲ. ತಿಳಿದಿದ್ದವರು ದಯವಿಟ್ಟು ಹೇಳಿ.)
                         ನಂತರ ನಾನು ಕೈಗೆತ್ತಿಕೊಂಡಿದ್ದು ಅವರ ಕಾದಂಬರಿ ‘ಕೇಂದ್ರ ವೃತ್ತಾಂತ’ವನ್ನು. ಓದುತ್ತಾ ಹೋದಂತೆಯೇ ಅದರ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಮನಸ್ಸಾಯಿತು. ಓದು ಮುಗಿಸಿ ಪುಸ್ತಕವನ್ನು ಕೆಳಗಿಟ್ಟ ತಕ್ಷಣವೇ ಕೀ ಪ್ಯಾಡ್ ಒತ್ತಲು ಮುಂದಾದೆ.

                                     *******************************

                       ನೆರೆಮನೆಯ ಹುಡುಗಿಯೊಬ್ಬಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಅವಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಅನುಕಂಪದ ದೃಷ್ಟಿಯಿಂದ ಆಸ್ಥೆ ತೋರಿಸಿದ ಯುವಕನೊಬ್ಬನ ಬಾಳಿನಲ್ಲಿ ತದನಂತರ ನಡೆಯುವ ಘಟನೆಗಳೆಲ್ಲವೂ ಆ ದುರಂತ ಪ್ರಕರಣದೊಂದಿಗೆ ಥಳುಕು ಹಾಕಿಕೊಂಡು ಕೊನೆಯಲ್ಲಿ ಎಲ್ಲರೂ ಆತನನ್ನೇ ಇಡೀ ಪ್ರಕರಣದ ಕೇಂದ್ರವೆನ್ನುವಂತೆ ಭಾವಿಸುವುದು ಕಾದಂಬರಿಯ ಒಂದು ಮಗ್ಗುಲಾದರೆ, ತೆರೆಯ ಹಿಂದೆ ಇದ್ದುಕೊಂಡು ಕೇವಲ ಊಹೆಗಳ ಆಧಾರದ ಮೇಲೆ ಆ ಯುವಕ ಬರೆಯುವ ಮೂಕ ಪತ್ರವೊಂದು ಹೇಗೆ ಭೂತದೊಂದಿಗೆ ನಂಟು ಹೊಂದಿ ರಾಜಕೀಯ ಬಣ್ಣ ತಳೆದು ಇಲ್ಲಸಲ್ಲದ ಉಪದ್ಯಾಪಗಳಿಗೆ ಕಾರಣವಾಗುವುದು ಇನ್ನೊಂದು ಮಜಲು. ಕಥೆ ಸಾಮಾನ್ಯವಾಗಿದ್ದು ಯಾರ ಬದುಕಿನಲ್ಲಾದರೂ ನಡೆಯುವಂಥದ್ದಾದರೂ ಅದರ ನಿರೂಪಣಾ ಶೈಲಿ ಭಿನ್ನವಾಗಿದ್ದು ಪುಟದಿಂದ ಪುಟಕ್ಕೆ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಾ ಓದಿಸಿಕೊಂಡು ಹೋಗುತ್ತದೆ. ಓದಿ ಮುಗಿಸಿದ ನಂತರ ನಾನು ಅರ್ಥೈಸಿಕೊಂಡ ಸಾರಾಂಶವಿಷ್ಟೆ:
                              "ಮನುಷ್ಯನ ಜೀವನವೊಂದು ವೃತ್ತವಾದರೆ ಅದರ ಕೇಂದ್ರದಲ್ಲಿರುವುದು ವಾಸ್ತವ. ಆದರೆ ಮನುಷ್ಯ ಜೀವಿಸುವುದು ತನ್ನದೇ ಆದ ಕಲ್ಪನೆ, ಊಹಾ-ಪೋಹಗಳಿಂದ ರಚಿತವಾದ ವೃತ್ತದ ಪರಿಧಿಯ ಮೇಲೆ. ತಾನೇ ಸೃಷ್ಟಿಸಿಕೊಳ್ಳುವ ಎಲ್ಲ ಬಗೆಯ ಕಲ್ಪನೆಗಳು, ಊಹೆಗಳು ಭೂತದ ಕೆಲವು ಪುಟಗಳಲ್ಲಿ ದಾಖಲಾಗಿರಬಹುದು, ಇಲ್ಲವೇ ಭವಿಷ್ಯದ ಸಾಲುಗಳಲ್ಲಿ ರೂಪುಗೊಳ್ಳುತ್ತಿರಬಹುದು. ಹಾಗಾದಾಗ ಅವು ಇನ್ನೊಬ್ಬರ ಬದುಕಿನ ವೃತ್ತದ ಕೇಂದ್ರಗಳಾಗುತ್ತವೆ. ಇದರಿಂದಾಗಿಯೇ ಮನುಷ್ಯ ತೊಂದರೆ, ತಾಪತ್ರಯಗಳನ್ನು ಅನುಭವಿಸಬೇಕಾಗುತ್ತದೆ. ಎಲ್ಲಿಯವರೆಗೆ ನಮ್ಮ ಬದುಕಿನ ವಾಸ್ತವದ ಕೇಂದ್ರದಲ್ಲಿ ನಾವು ಜೀವಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮ ತೊಳಲಾಟ, ಪರದಾಟ ತಪ್ಪಿದ್ದಲ್ಲ."

                                  *********************************

                              ನಾನು ಬಹಳ ತಡವಾಗಿ ಚಿತ್ತಾಲರ ಬರಹಗಳನ್ನು ಓದಲು ಪ್ರಾರಂಭಿಸಿದೆನೆಂದು ಬೇಸರವಾಗುತ್ತಿದೆ. ಇನ್ನು ಮತ್ತೆ ಸಮಯ ವ್ಯರ್ಥ ಮಾಡುವ ಪ್ರಶ್ನೆಯೇ ಇಲ್ಲ. ಅವರ ಎಲ್ಲ ಕೃತಿಗಳನ್ನು ಸಾಧ್ಯವಾದಷ್ಟು ಬೇಗ ಓದಿ ಮುಗಿಸಿ ಅವರ ಬರಹಗಳು ನನಗೆ ಹಿಡಿಸಿರುವ ಹುಚ್ಚನ್ನು ಶಮನಮಾಡಿಕೊಳ್ಳಬೇಕು. ಚಿತ್ತಾಲರ ಬರವಣಿಗೆಯನ್ನು ಈಗಾಗಲೇ ಉಂಡು ತೇಗಿರುವವರು ನಿಜಕ್ಕೂ ಪುಣ್ಯವಂತರು. ಇಲ್ಲವೆಂದರೆ ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ. ಅವರ ಬರವಣಿಗೆಯ ಅದ್ಭುತ ಲೋಕದಲ್ಲಿ ಕಳೆದುಹೋಗಲು ಸಿದ್ಧರಾಗಿ.


Sunday, 6 July 2014

ನನ್ನವಲ್ಲ ನಾ ಬರೆದ ಸಾಲುಗಳು


ಖಂಡಿತ ನನ್ನವಲ್ಲ ಈ ಎಲ್ಲ ಸಾಲುಗಳು
ಕೈಯ್ಯಲ್ಲಿ ಹಿಡಿದ ಲೇಖನಿಯೊಂದೇ ಸ್ವಂತದ್ದು
ಅದರಲ್ಲಿ ತುಂಬಿದ್ದ ಶಾಯಿ ಯಾರದೋ
ಹಾಳೆಗಳ ಮೇಲೆ ಇಳಿಸಿದ ಪದಗಳು ನನ್ನವು
ಅಡಗಿ ಕುಳಿತಿಹ ಭಾವಗಳು ಯಾರವೋ

ದಾರಿ ಬದಿಯಲ್ಲಿ ಕಂಡ ಆತನವಿರಬಹುದು
ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಆಕೆಯದೋ
ಗಿಡದ ಮೂಲೆಯಲ್ಲಿ ಅರಳಿ ನಿಂತಿದ್ದ ಹೂವಿಗೂ
ಆಗಸದ ಅಂಗಳವಿಡೀ ಹರಡಿದ್ದ ಕಪ್ಪು ಮೋಡಕ್ಕೊ
ನಂಜಿಲ್ಲದ ನಂಟು ನನ್ನ ನಾಲ್ಕು ಸಾಲುಗಳೊಂದಿಗೆ

ನನ್ನ ಸಾಲುಗಳಲ್ಲಿ ನಗುವ ಹುಡುಗನಾರು..??
ನೆರೆಮನೆಯ ಹುಡುಗಿಯ ಮನಸು ಕದ್ದವನೇನೋ
ಎರಡೇ ಸಾಲುಗಳಲ್ಲಿ ಕಥೆ ಹೆಣೆಯುವ ಜಾಣೆ ಯಾರೋ
ಚಿಕ್ಕಂದಿನಲ್ಲಿ ಇಲ್ಲಿಯೇ ಆಟವಾಡುತ್ತಿದ್ದವಳಲ್ಲವೇ
ಹಾಡುವ ಆ ಹಕ್ಕಿಯೂ ಎದುರಿನ ಮರದಲ್ಲಿರುವುದೇ


ಗೀಚುವಾಗ ಸಾಲುಗಳಿಗೆ ನಾನೊಬ್ಬಳೇ ಗೆಳತಿ
ನಾಮಕರಣವಾಗಿ ತೊಟ್ಟಿಲಿಗೆ ಹಾಕಿದೆನೆಂದೆರೆ
ಅವನ್ನು ಅಪ್ಪಿ ಮುದ್ದಾಡುವವರೆಷ್ಟೋ
ದೃಷ್ಟಿ ತೆಗೆದು ನಿವಾಳಿಸುವವರೆಷ್ಟು ಮಂದಿಯೋ
ಅವಕ್ಕೆಷ್ಟೆಲ್ಲ ಪೋಷಕರು, ನೆಂಟರು, ಮಿತ್ರರು

ತಮ್ಮ ನಗುವಿನ ಬಿಂಬವನ್ನೇ ಕಂಡು ನಕ್ಕವರಿಲ್ಲವೇ
ಅಳುವಿನ ದನಿಯನ್ನೇ ಕೇಳಿ ಹನಿಗೂಡಿಸಿದವರೂ
ಕತ್ತಲನ್ನು ಹೊಡೆದೋಡಿಸುವ ಬೆಳಕು ಕಂಡವರು
ಮೌನವನ್ನೂ ಮಾತಾಡಿಸುವ ಸ್ವರಗಳ ಹುಡುಕಿದವರು
ನನ್ನದೊಂದೇ ಆಸ್ತಿ ಹೇಗಾದಾವು ಆ ಸಾಲುಗಳು

ಎಲ್ಲ ಸಾಲುಗಳಿಗೆ ಜೀವ ನೀಡುವವಳು ಮಾತ್ರವೇ
ಕೈ ಹಿಡಿದು ಮುನ್ನಡೆಸಿ ಬಾಳಿಸುವರು ನೂರಾರು
ಹಕ್ಕು ಕೇವಲ ನನ್ನೊಬ್ಬಳದೇ ಹೇಗಾದೀತು
ಬರೆದು ತೀರಿಸಲಿಕ್ಕೆ ನಿಮಿತ್ತವಾಗಿಹೆನು ನಾನು
ಆದರೆ ಕೇವಲ ನನ್ನವಲ್ಲ ಈ ಎಲ್ಲ ಸಾಲುಗಳು


Thursday, 3 July 2014

ತಲ್ಲಣ


ಅದೆಷ್ಟು ಸಾರಿ ಹೇಳಿದ್ದೇನೆ ನಿನಗೆ
ನಲ್ಲ, ನೀ ಕಳ್ಳನಾಗದಿರು
ಕನಸಿನಲ್ಲಿ ಬಂದು ನಿದಿರೆಯನ್ನು ಮುರಿದು
ಹೃದಯಕ್ಕೆ ಲಗ್ಗೆ ಇಟ್ಟು ನನ್ನ ಚಿತ್ತವ ಕದ್ದೊಯ್ಯದಿರು
ನನ್ನ ಮಾತನ್ನು ನೀ ಕೇಳಲೊಲ್ಲೆ

ನೀ ಕಾಡಿದರೆ ನಾನು ಮೋಹಿತಳಾಗುತ್ತೇನೆ
ನಿನ್ನದೇ ಧ್ಯಾನದಲ್ಲಿ ನನ್ನನ್ನೇ ಮರೆಯುತ್ತೇನೆ
ಕೊನೆಗೆ ನನ್ನ ನಾ ಹುಡುಕಿ ಕೈ ಚೆಲ್ಲುತ್ತೇನೆ
ಅದಕ್ಕಾಗಿ ನಿನ್ನನ್ನು ಕಳ್ಳನಾಗಬೇಡ ಎನ್ನುತ್ತಿರುವೆನೇ..??
ಊಹ್ಞೂಂ, ಇವ್ಯಾವವೂ ಕಾರಣಗಳಲ್ಲ

ನಿಜ ಹೇಳಲೇ ಹುಡುಗಾ..??
ಏಕೋ ಏನೋ ನಾನರಿಯೆ ನನ್ನಾಣೆ
ನೀ ಕನಸಲ್ಲಿ ಬಂದಾಗಲೆಲ್ಲ ಹುಚ್ಚು ಭಯ
ಭಾವ ತರಂಗಳಲ್ಲಿ ತಿಳಿಯದ ತಲ್ಲಣದ ಗಾನ
ಬೆಚ್ಚನೆಯ ನಿದ್ದೆಯಲ್ಲಿಯೂ ಬೆಚ್ಚಿ ಬೀಳುವಂತೆ


ಇಲ್ಲಸಲ್ಲದ ಯೋಚನೆಗಳು ಒಂದೇ ಎರಡೇ..??
ನಿನ್ನಲ್ಲೇ ಒಂದಾಗಿದ್ದರೂ ನೀ ನನಗೆ ತಿಳಿದವನಲ್ಲ
ನನ್ನೆಡೆಗೆ ಬರುತ್ತಿದ್ದರೂ ದೂರ ಸಾಗುತಿಹೆ ನೀನು
ನೀ ಮಾತನಾಡಿದಷ್ಟೂ ಮೌನವಿದು ಮೂಕವಾಗುತಿದೆ
ನೀ ನಕ್ಕಷ್ಟೂ ನನ್ನ ದುಃಖ ಹೆಚ್ಚುತ್ತಿಹುದು

ಚಿತ್ರಗಳು ಸರಿದಂತೆ ನಾ ಮುದುಡಿಕೊಳ್ಳುತಿಹೆ
ರೆಕ್ಕೆ ಮುರಿದು ಗೂಡು ಸೇರಿದ ಗುಬ್ಬಚ್ಚಿಯಂತೆ
ಕಣ್ಣುಗಳು ತೆರೆದಿದ್ದರೂ ಏನೂ ಕಾಣಿಸದು
ಕಿವಿಗಳಿಗೂ ಸ್ವರಗಳಿಗೂ ನಂಟೇ ಮರೆತು ಹೋದಂತೆ
ಇತ್ತ ಗಾಳಿಯೂ ಸಹ ನನ್ನತ್ತ ಸುಳಿಯದಲ್ಲ

ಬೇಡ ಈ ಭಯದ ಬಂಧ ನನಗೆ
ಇನ್ನಾದರೂ ನಿಲ್ಲಿಸು ನಿನ್ನ ಕಳ್ಳ ನಡಿಗೆ
ಎದುರಿನಲ್ಲಿ ಬಂದು ನಿಲ್ಲು, ಕಣ್ಣಲ್ಲೇ ಕಥೆ ಹೇಳುವೆ
ಪಕ್ಕದಲ್ಲಿ ಬಂದು ಕೂರು, ಕೈ ಹಿಡಿದು ಕವಿತೆ ಬರೆಯುವೆ
ಕನಸಿನ ಕಣ್ಣಾಮುಚ್ಚಾಲೆಯಾಟ ಬೇಡ ಮಾರಾಯಾ