Wednesday, 25 June 2014

ಎಲ್ಲಿ ಮಾಯವಾದರೋ..??


ಎತ್ತ ನೋಡಲಿ ಯಾರನ್ನೇ ಕಾಣಲಿ
ಕಾಣಸಿಗುವುದಿಲ್ಲ ಗೆಳೆಯ ನೀಳವೇಣಿಯರು
ಗುಂಗುರು ಕೂದಲನ್ನು ಉಂಗುರದಂತೆ ಸುತ್ತುತ್ತ
ಹಾವಿನಂಥ ಜಡೆಯನ್ನು ತಿರುಗಿಸುತ್ತಾ
ವೈಯ್ಯಾರದಿ ಸೊಂಟವ ಬಳುಕಿಸುತ್ತಾ
ಮುಡಿದ ಮಲ್ಲಿಗೆಯ ಕಂಪನ್ನು ಸೂಸುತ್ತಾ
ಹೆಜ್ಜೆಯ ಸದ್ದಿಗೆ ನಮ್ಮ ಹುಡುಗರ ಮನದಲ್ಲಿ
ಘಲ್ಲೆಂಬ ಗೆಜ್ಜೆ ನಾದವ ಹೊರಡಿಸುವ ಬೆಡಗಿಯರು

ಜಡೆಯೆಂದರೆ ಅದೇನೆಂದು ಕೇಳುತ್ತಾರಣ್ಣಾ
ಫ್ರೆಂಚ್, ಸ್ಟೆಪ್ ಕಟ್ಟುಗಳೆಂದರೆ ಕಣ್ಣು ಮಿಟುಕಿಸುತ್ತಾರೆ
ಜರತಾರಿ ಸೀರೆಯನುಟ್ಟು ಭರಪೂರ ಸಿಂಗರಿಸಿಕೊಂಡು
ಮಾರಮ್ಮನ ಹಾಗೆ ಕೂದಲನ್ನು ಇಳಿ ಬಿಡುವರಲ್ಲ
ದಿಲ್ಲಿಯವರು ಮಾತ್ರವಲ್ಲ ಹಳ್ಳಿಯವರೂ ಕೂಡ
ಬ್ಯಾಂಡು, ಕ್ಲಿಪ್ಪುಗಳನ್ನೆಲ್ಲ ಆಚೆ ಎಸೆದಿದ್ದಾರಂತೆ
ಗಾಳಿಗೆ ಕೂದಲು ಹಾರಾಡಿದಷ್ಟೂ ಸಂತೃಪ್ತಿಯಂತೆ

ಇಂದು ನಲ್ಲೆಗೆ, ಹೆಂಡತಿಗೆ ಹೂ ಕೊಡುವಂತಿಲ್ಲ
ಮುಡಿಯಲು ಜಡೆಯ ಹೆಡೆಯೇ ಇಲ್ಲ
ಎರಡು ನಿಮಿಷಗಳಲ್ಲೇ ಕೂದಲು ಅಲಂಕಾರಮಯ
ಉಳಿದ ಎರಡು ತಾಸು ಮುಖಕ್ಕೆ ಮೆತ್ತಿಕೊಳ್ಳಲು
ಇಲ್ಲದ ಹುಬ್ಬನ್ನು ಮತ್ತೆ ಮತ್ತೆ ತೀಡುವರು
ಇರುವ ಕೂದಲಿಗೆ ಕತ್ತರಿಯ ಪ್ರಯೋಗಿಸುವರು
ತರಳೆಯರ ಮರುಳಿಗೆ ತಿಳಿಹೇಳುವುದೆಂತು

ಫ್ಯಾಷನ್ನಿನ ಹೆಸರಿನಲ್ಲಿ ಹಗಲು ವೇಷದ ಕುಣಿತ
ಸ್ಟೈಲಿನ ಸ್ಮೆಲ್ಲುಗಳಲ್ಲಿ ಸ್ಮೈಲೇ ಇಲ್ಲವಾಗಿದೆ
ಆಡಂಬರದ ಮುಂದೆ ಅಂದಕಿಲ್ಲ ಆದ್ಯತೆ
ಇಂದು ಬಾಬ್ ಕಟ್ ನಾಳೆ ಬಾಯ್ ಕಟ್
ಬಿಟ್ಟರೆ ಗಾಂಧಿ ಕಟ್ಟನ್ನು ಮಾಡಿಸಿಯಾರು
ಕೊನೆಗೆ ಹೆಂಡತಿಯನ್ನೂ ಜಡೆ ಹಿಡಿದೆಳೆಯುವಂತಿಲ್ಲ
ಹುಡುಗರೇ ಜಡೆ ಹಾಕಿಕೊಳ್ಳುವಂತಾಗಬಹುದಲ್ಲ


5 comments:

 1. hahehehhoo :D :D nicely written :)

  ReplyDelete
 2. ಕವನ ಚೊಲೊ ಇದ್ದು (y). ಈಗಿನ್ ಕಾಲದಲ್ಲಿ ಹುಡುಗ್ರೇಯ ಉದ್ದುದ್ದ ಜಡೆ ಬಿಡ್ತ, ಹುಡ್ಗೀರೆಲ್ಲ ಬಾಬ್-ಕಟ್ ಮಾಡ್ಸ್ಕತ್ತ, ಅಂದ್ಹಾಗೆ ಮೇಲಿಪ್ಪ ಚಿತ್ರದಲ್ಲಿಪ್ಪುದು ನೀನೇಯಾ??

  ReplyDelete
 3. ಇದನ್ನು ಓದಿದಾಗ ನಾಭನೆಂಬ ಋಷಿಯ ಗಣಿತಾತ್ಮಕ ಪದ್ಯ ಜ್ಞಾಪಕಕ್ಕೆ ಬರುತ್ತದೆ:

  ನಾಗವೇಣಿಯರೆಲ್ಲ ಜಡೆಯ ಕಡೆಯಲಿ ಗೊಂಡೆ ಇಕ್ಕುತ ತಮ್ಮ
  ನಾಗವನು ತಡೆಹಿಡಿಯಲಾಗದೆ ಕೊರಳ ಕೊಂಕಿಸಿ ಹರಿಣ ದೃಷ್ಟಿಯಲಿ
  ಬೇಗದೊಳು ಕಡೆಗಣ್ಣ ಕಿರುನೋಟದಿಂದಲೇ ಲೋಕವಡೆಯುವ ಶಕುತ ಬಲವಿಂದ್ರನಲಿಹುದು ಎಂದು |
  ಜಾಗವಿದಲ್ಲ ನಿರುತಿಗೆ ಭೋಗವತಿ ಸೋಮನಿಗೆ ಅಮರಾವತಿಯಲಿ
  ಬೇಗದಲಿ ಸಭೆ ಕರೆದ ಸುರಪತಿ ಏನು ಇದು ವಿಧಿಯಾಟ ಎನಗೊಂದು ಲೆಕ್ಕ
  ಈಗ ಬೇಕಿತ್ತೆ ಎಂದು ದವಡೆಯ ಮಸೆಯೆ ಬಾಯ್ಕಿಸಿದ ಜಂಭೂಕವೊಂದು ಊಳಿಟ್ಟಿತಾಗ ಇಳೆಯಲ್ಲೀ ||

  ... ಹೆಣ್ಣು ಮಕ್ಕಳು ಮಾತ್ರ ಈ ಜಡೆಯ ಮಹಿಮೆ ಸಾರುವ ಸಾಂಖ್ಯ ಗಣಿತವನ್ನು ಅರಿಯಲು ಸಾಧ್ಯವೆನೋ.. ಆದರೆ ಜಡೆಯೇ ಇಲ್ಲದಿದೆ ಜಗದ ಜಂಜಡ ಸರಿದೂಗುವುದೇ..?

  ReplyDelete
 4. ನಿಜ ರೀ... ನೀವು ವಿವರಿಸಿದ ಲಲನೆಯರು ಬರೀ ಕಾಲ್ಪನಿಕ ಅನ್ನೋ ಸ್ಥಿತಿ ನಿರ್ಮಾಣ ಆಗಿದ್ದು . ಆ ಕಟ್ಟು , ಈ ಕಟ್ಟು ಮಾಡಿಸ್ಕೊಂಡ ಹುಡುಗಿ, ಹುಡುಗಿಥರ ಕಾಣಿಸೋದೆ ಇಲ್ಲ .

  ReplyDelete