Monday, 30 June 2014

ರೈಟರ್ಸ್ ಅಂದ್ರೆ ಬೋರಿಂಗಾ..???


                         ಮೊನ್ನೆ ಮೊನ್ನೆಯಷ್ಟೆ ಏಕ್ ವಿಲನ್ ನೋಡಲೆಂದು ಲಕ್ಷ್ಮೀ ಪ್ರೈಡ್ ಸಿನೆಮಾಕ್ಕೆ ಹೋದಾಗ ನಡೆದ ಘಟನೆ. ನಾನು ಟಿಕೆಟ್ ಪಡೆದು ಲಾಬಿಯ ಒಳಗಡೆ ಬಂದಾಗ ಸಮಯ ೧೧.೧೦. ಅಂದರೆ ಶೋ ಪ್ರಾರಂಭವಾಗಲು ಇನ್ನು ಇಪ್ಪತ್ತು ನಿಮಿಷಗಳಷ್ಟು ತಡವಾಗುತ್ತದೆಯೆಂದಾಯಿತು. ಹಾಗಾದರೆ ಅಷ್ಟು ಹೊತ್ತು ಏನು ಮಾಡುವುದು..?? ಕೈಗೆ ಕೆಲಸ ಕೊಡುವಂಥದ್ದು ಅಲ್ಲೇನಿರುತ್ತದೆ. ಬಾಯಿಗೆ ಕೆಲಸ ಕೊಡೋಣವೆಂದರೆ ಸ್ನೇಹಿತರಾರು ಇರಲಿಲ್ಲ, ನಾನೊಬ್ಬಳೇ ಹೋಗಿದ್ದೆ(ಬಾಯಿಗೆ ಕೆಲಸವೆಂದರೆ ಮಾತನಾಡುವುದು. ತಿನ್ನುವುದು ಎಂದು ತಪ್ಪಾಗಿ ಗ್ರಹಿಸಿಬಿಟ್ಟೀರಿ ಮತ್ತೆ). ಹಾಗಂತ ಸುಮ್ಮನೆ ಕೂರಲಿಕ್ಕೆ ನನ್ನ ಕೈಲಾದೀತೇ..?? ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗ್ ತನ್ನ ಭಾರವನ್ನು ನನ್ನ ಮೇಲೆ ಹಾಕುತ್ತಲೇ ನೆನಪಾಯಿತು. ತಲೆಗಾದರೂ ಕೆಲಸ ಕೊಡೋಣವೆಂದು ನಿರ್ಧರಿಸಿ ಆಗ ತಾನೇ ಕೆಳಗಡೆ ಸಪ್ನಾ ಬುಕ್ ಹೌಸ್ ನಿಂದ ಖರೀದಿಸಿ ತಂದಿದ್ದ ಪುಸ್ತಕಗಳಲ್ಲೊಂದಾದ ವಸುಧೇಂದ್ರರ ‘ಯುಗಾದಿ’ಯನ್ನು ಹೊರತೆಗೆದು ಓದುತ್ತಾ ಕುಳಿತೆ. ಯುಗಾದಿಯ ಬೇವು-ಬೆಲ್ಲದ ರುಚಿ ಸೊಗಸಾಗಿದ್ದುದರಿಂದ ಒಮ್ಮೆ ಕೆಳಗೆ ತಗ್ಗಿಸಿದ ತಲೆಯನ್ನು ಮೇಲಕ್ಕೆತ್ತದೆ ಓದುತ್ತಲೇ ಇದ್ದೆ. ಸುಮಾರು ಆರೇಳು ನಿಮಿಷಗಳ ನಂತರ ನನ್ನ ಪಕ್ಕದಲ್ಲಿ ಆಂಟಿಯೊಬ್ಬರು ಕುಳಿತಿರುವುದು ಕಣ್ಣಂಚಿನ ಕನ್ನಡಿಯಲ್ಲಿ ಕಾಣಿಸಿತು. ಹಾಗೆ ಒಮ್ಮೆ ಅವರತ್ತ ದೃಷ್ಟಿ ಹಾಯಿಸಿ ಹೀಗೆ ಮತ್ತೆ ಯುಗಾದಿಯನ್ನು ಸವಿಯುವ ಕೆಲಸವನ್ನು ಮುಂದುವರೆಸಿದೆ.
                                 ಆದರೂ ಮರುಕ್ಷಣದಲ್ಲಿಯೇ ಸಂದೇಹದ ಹುಳುವೊಂದು ನನ್ನ ತಲೆಯನ್ನು ಹೊಕ್ಕಿತು. ಆಂಟಿ ಒಬ್ಬರೇ ಬಂದಿರಬಹುದಾ..?? ಜೊತೆಗೆ ಯಾರಾದರೂ ಇದ್ದಿದ್ದರೆ ಹೀಗೆ ಒಂಟಿಯಾಗಿ ಕೂತಿರುವ ನನ್ನ ಪಕ್ಕದಲ್ಲಿ ಬಂದು ಕೂಡುವ ಮಾತೇ ಇಲ್ಲವಲ್ಲ. ತಲೆ ಹೊಕ್ಕಿದ ಹುಳು ನಿಧಾನವಾಗಿ ತೂತು ಕೊರೆಯಲು ಪ್ರಾರಂಭಿಸಿತು. ತೂತು ದೊಡ್ಡದಾಗಿ ಸಣ್ಣ ರಂಧ್ರವಾಗಿ ಆಮೇಲೆ ಪೈಪ್ ಲೈನ್ ಆಗಿಬಿಟ್ಟಿತು ಎನ್ನುವ ಭಯದಿಂದ ತಲೆಯನ್ನು ಮೇಲೆತ್ತಿ ಆಕೆಯತ್ತ ತಿರುಗಿಸಿ ಬಾಯಿ ತೆರೆದೆ. "ಒಬ್ಬರೇ ಬಂದಿದ್ದೀರಾ..??" ಅವರು ಮುಖದ ತುಂಬಾ ನಗೆ ತಂದುಕೊಂಡು ಮರಳಿ ನನ್ನನ್ನೇ ಪ್ರಶ್ನಿಸಿದರು. "ನೀನೂ ಒಬ್ಬಳೇ ಇದ್ದೀಯಾ ಅಪ್ಪಿ..??" ನಾನು ಹೌದೆಂದು ತಲೆ ಕುಣಿಸಿದೆ. "ಸೀಟ್ ನಂಬರ್ ಎಷ್ಟು" ಎನ್ನುತ್ತಾ ತಮ್ಮ ಟಿಕೆಟ್ ಅನ್ನು ನನ್ನ ಕೈಗಿತ್ತರು. ನಾನು ಇಬ್ಬರ ಟಿಕೆಟ್ ಅನ್ನು ಪರೀಕ್ಷಿಸಿ ನೋಡಿದೆ. ಕಾಕತಾಳೀಯವೆಂಬಂತೆ ಇಬ್ಬರದೂ ಅಕ್ಕಪಕ್ಕದ ಸೀಟಾಗಿತ್ತು. ಇನ್ನೇನು ತಾನೇ ಬೇಕು..?? ಉಭಯ ಕುಶಲೋಪರಿ ಸಾಂಪ್ರತವೂ ಮುಗಿದು ಮಾತು ಆ ಕೇರಿ ಈ ಕೇರಿ ಎಲ್ಲಾ ಸುತ್ತುತ್ತಿರುವಂತೆಯೇ ಆಂಟಿ ನನ್ನನ್ನು ಕೇಳಿದರು, "ನಿನ್ನ ಹಾಬೀಸ್ ಏನು ಪುಟ್ಟಿ..??" ನಾನು ಕೈಯ್ಯಲ್ಲಿದ್ದ ಯುಗಾದಿಯನ್ನು ಎತ್ತಿ ತೋರಿಸುತ್ತಾ ಮುಗುಳ್ನಗೆಯೊಂದಿಗೆ "ರೀಡಿಂಗ್ ಮತ್ತೆ ರೈಟಿಂಗ್" ಎಂದುತ್ತರಿಸಿದೆ. ಆಕೆ ಕೂಡಲೇ "ಓಹ್, ರೈಟರ್ಸ್ ಆರ್ ವೆರಿ ಬೋರಿಂಗ್" ಎಂದು ಬಿಡಬೇಕಾ..?? ಅರ್ಧ ಚಂದ್ರಕೃತಿಯಲ್ಲಿದ್ದ ನನ್ನ ತುಟಿ ಈಗ ಉಲ್ಟಾ ಅರ್ಧ ಚಂದ್ರನಾಗಿ ಮಲಗಿಕೊಂಡು ಮುಖ ಅಮಾವಾಸ್ಯೆಯನ್ನು ತೋರಿಸಿತು. ಕೈಯ್ಯಲ್ಲಿ ಎತ್ತಿ ಹಿಡಿದಿದ್ದ ಪುಸ್ತಕ ಕೂಡಲೇ ಕೆಳಗೆ ಸರಿಯಿತು. ಒಳಗೆ ಮನಸ್ಸಿನ ಮೂಲೆಯಲ್ಲೆಲ್ಲೋ ಅಯ್ಯೋ ಎಂದು ಕೂಗಿದ ಶಬ್ದ ಮಾರ್ದನಿಸಿತು. "ಹಾಗೇನಿಲ್ಲ ಆಂಟಿ" ಎನ್ನುತ್ತಾ ಬಾರದ ನಗು ತಂದುಕೊಂಡು ನನ್ನನ್ನು ನಾನೇ ಸಮಾಧಾನಿಸುತ್ತಾ ಸಮರ್ಥಿಸಿಕೊಂಡೆ. ಇಷ್ಟೂ ಹೇಳದೆ ಹೋದರೆ ಮರ್ಯಾದೆ ಪ್ರಶ್ನೆ ಅಲ್ವಾ ಮಾರಾಯ್ರೇ.

                                  *********************************************


                          "ಹೋಗ್ ಲೇ ಪಾ, ಆಕಿನ ಭಾಳ ಬೋರಿಂಗ್ ಇದ್ದಿರ್ತಾಳ ತಗೊ" ಗೆಳೆಯನೊಬ್ಬ ಪ್ರತಿಕ್ರಿಯಿಸಿದ.
                        ಅವತ್ತು ಬ್ರೇಕ್ ಹೊತ್ತಿನಲ್ಲಿ ಕಾಂಟೀನ್ ನಲ್ಲಿ ಕೂತಾಗ ನಾನು ಏಕ್ ವಿಲನ್ ಸಿನೆಮಾ ನೋಡಲಿಕ್ಕೆ ಹೋದಾಗ ನಡೆದ ಪ್ರಸಂಗವನ್ನು ವಿವರಿಸಿದ ನಂತರ ಎಲ್ಲರಿಗೂ ಚರ್ಚೆಗೆ ರೈಟರ್ಸ್ ಅಂದ್ರೆ ಬೋರಿಂಗಾ ಅನ್ನೋ ವಿಷಯ ಸಿಕ್ಕಿತ್ತು. ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಲು ತೊಡಗಿದ್ದರು. "ಅದ್ಯಾವ ಆಂಟಿನೆ ಹಂಗೆ ಹೇಳಿದ್ದು..?? ನೀವ್ ಹೇಳಿದ್ದನ್ನ ಪ್ರೂವ್ ಮಾಡಿ ಹೇಳಕಾಗಿತ್ತು ನೀನು.." ಶಿರಸಿಯ ಗೆಳತಿಯೊಬ್ಬಳ ಸಜೇಷನ್. "ಮತ್ತೆಂತಾ ಅಲ್ದಾ..??" ನಾನು ಅವಳಿಗೆ ಕೇಳಿದೆ.                            
                             ಇನ್ನೊಬ್ಬ ಸ್ನೇಹಿತ ಕುಮಟಾದವನು ಹೇಳಿದ, "ಆ ಆಂಟಿಗೆ ಯಾರಾದ್ರು ಬರಹಗಾರನೋ ಇಲ್ಲಾ ಬರಹಗಾರ್ತಿಯೋ ಯಾವಾಗಲೋ ಒಮ್ಮೆ ಸರಿಯಾಗಿ ಬೋರು ಹೊಡೆಸಿರ್ಬೇಕು ಮಾರಾಯ್ತಿ. ಅದ್ಕೆ ಅವ್ರು ಹಂಗೆ ಮಿಸ್ ಅಂಡರ್ ಸ್ಟ್ಯಾಂಡ್ ಮಾಡ್ಕೊಂಡಿದಾರೆ ಬಿಡು." ಇವನು ಹೇಳಿದ್ದು ನಿಜ ಆಗಿರಲೂಬಹುದು ಎಂದು ಮನಸ್ಸು ಯೋಚಿಸಿತು. "ಅದೇನಾರ ಇರ್ಲಿ, ಆಕಿ ಹಂಗ ಮುಖಕ್ಕ್ ಹೊಡದ್ ಹಾಂಗ ಹೇಳೋದ್ ತಪ್ಪ್ ನೋಡ. ಅದೂ ನಿನ್ನ ಜೋಡಿ ಹಂಗ ಹೇಳ್ಬಾರ್ದಿತ್ತ್ ಲೇ" ಧಾರವಾಡದ ಗೆಳತಿಯೊಬ್ಬಳು ಹುಬ್ಬು ಸಂಕುಚಿತಗೊಳಿಸಿಕೊಂಡು ಹೇಳಿದಳು. ಇವಳದ್ದೊಂದು ಅನುಕಂಪ ಬೇರೆ ಎನ್ನುತ್ತಾ ನಾನು ಒಳಗೊಳಗೆ ಬೈದುಕೊಂಡೆ. ಅಲ್ಲಿಗೆ ಬ್ರೇಕ್ ಟೈಮ್ ಮುಗಿದಿತ್ತು.

                                    ****************************************

                                ರೈಟರ್ಸ್ ಅಂದ್ರೆ ಬೋರಿಂಗ್ ಹೆಂಗೆ ಮಾರಾಯ್ರೇ..?? ನನಗೆ ತಿಳಿದಿರುವಂತೆ ಹೇಗೆ ಆಡು ಮುಟ್ಟಿದ ಸೊಪ್ಪಿಲ್ಲವೋ ಹಾಗೆಯೇ ರೈಟರ್ಸ್ ಗಳಿಗೆ ಗೊತ್ತಿಲ್ಲದ ವಿಷಯಗಳೇ ಇಲ್ಲ. ದಿನನಿತ್ಯದ ಸಾಮಾನ್ಯ ಸಂಗತಿಗಳಿಂದ ಹಿಡಿದು ರಾಜಕೀಯ, ಕಲೆ, ವಿಜ್ಞಾನ, ಕ್ರೀಡೆ, ನಾಟ್ಯ, ನಟನೆಗಳಂತಹ ಇನ್ನಿತರ ಕ್ಷೇತ್ರಗಳ ಬಗ್ಗೆಯೂ ತಿಳಿದುಕೊಂಡಿರುತ್ತಾರೆ. ಕಸ ಗುಡಿಸುವವರ ಕಷ್ಟಗಳಿಂದ ದೇಶವನ್ನಾಳುವವರ ತಾಪತ್ರಯಗಳವರೆಗಿನ ಮೇಲ್ನೋಟಕ್ಕೆ ಅರ್ಥವಾಗದಂತಹ ಸೂಕ್ಷ್ಮ ಸಂಗತಿಗಳ ಕುರಿತೂ ಅರಿವಿರುತ್ತದೆ. ಅವರೇನು ಸುಮ್ಮ ಸುಮ್ಮನೆ ಬರೆಯುತ್ತಾರೆಯೇ..?? ಎಷ್ಟೆಲ್ಲಾ ಓದಿ ತಿಳಿದುಕೊಂಡು, ನೋಡಿ ಕಲಿತುಕೊಂಡು, ಸಾಕಷ್ಟು ಶ್ರಮ ವಹಿಸಿ ಒಂದೊಂದು ಸಾಲನ್ನು ಬರೆಯುತ್ತಾರೆ. ಇಷ್ಟೆಲ್ಲಾ ಗೊತ್ತಿರುವ ವ್ಯಕ್ತಿ ಬೋರಿಂಗ್ ಅನ್ನಿಸಲು ಹೇಗೆ ಸಾಧ್ಯ..?? ರೈಟರ್ಸ್ ಜೊತೆ ಮಾತನಾಡುತ್ತಾ ಕುಳಿತರೆ ಹೊತ್ತು ಹೋಗಿದ್ದೇ ತಿಳಿಯುವುದಿಲ್ಲವೆಂಬುದು ನನ್ನ ಅಭಿಪ್ರಾಯ. ನೀವೇನಂತೀರಿ..??


5 comments:

 1. are writers really like that (ME TOO) i just wonder..

  ReplyDelete
 2. ರೈಟರ್ಸ್ ಬೋರಿಂಗೋ ಇಲ್ವೋ ಗೊತ್ತಿಲ್ಲ . ಅದು ಅವರವರ ವ್ಯಕ್ತಿತ್ವದ ಮೇಲೆ ಆಧಾರಿತ. ಆದ್ರೆ ಏಕ್ ವಿಲನ್ ನಂತಹ ಸಿನೆಮಾ ನೋಡಕ್ಕೆ ಹೋಗಿದ್ದೀರ ಅಂದ್ರೆ ನೀವಂತೂ ಬೋರಿಂಗೇ ಹೌದು ಅನ್ನಿಸುತ್ತಿದೆ !

  ReplyDelete
 3. ಕವಿಗಳು ಕೆಲವೊಮ್ಮೆ ವಿಪರೀತ ಬೋರಿಂಗ್ ಅನ್ನಿಸುವುದು ನಿಜ ಲಹರಿ.. ಎದುರಿಗೆ ನಿಂತ ವ್ಯಕ್ತಿಯ ಅಭಿರುಚಿಯನ್ನ ಅರಿಯದೆ ತಮ್ಮ ಕಾವ್ಯ ಶರಗಳನ್ನು ಎಸೆಯುವ ಅನೇಕ ಕವಿಗಳನ್ನು ನಾನು ಕಂಡಿದ್ದೆ. ಹಾಗಂತ ಲೇಖಕರೆಲ್ಲ ಬೇಸರ ಹುಟ್ಟಿಸುತ್ತಾರೆಂದರೆ ಅದನ್ನು ನಂಬಲು ಸಾದ್ಯವಿಲ್ಲ.. ಹಾಗೆಯೆ ಶಿವ ಎಂಬವರೊಬ್ಬರು ಪ್ರತಿಕ್ರಿಯಿಸಿದಂತೆ ಅದ್ಯಾವುದೊ ಸಿನೇಮಾ ನೋಡಲು ಹೋದ ಕಾರಣಕ್ಕೆ ನೀವಂತು ಬೋರಿಂಗು ಎನ್ನುತ್ತಿದ್ದಾರಲ್ಲ ಅದು ಹೇಗೆ ಎಂಬುದೇ ತಿಳಿಯುತ್ತಿಲ್ಲ.. ಸಿನೇಮಾ ಚನ್ನಾಗಿಲ್ಲ ಎಂಬುದು ಅದನ್ನು ನೋಡಿದ ಮೇಲೆಯೇ ಹೊರತು ಮೊದಲು ತಿಳಿವುದು ಕಷ್ಟ. ಹಾಗಂತ ಸಿನೇಮಾದ ಬಗ್ಗೆ ಬಂದಿರುವ ವಿಮರ್ಷೆಯನ್ನೇ ನೋಡಿಕೊಂಡು ಸಿನೇಮಾ ನೋಡಲು ಹೋಗದೆ ಇರುವುದೂ ಸರಿಯಲ್ಲ. ಸಾದ್ಯವಾದರೆ ಶಿವ ಇದಕ್ಕೆ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ನನಗಿದೆ.. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

  ReplyDelete
 4. ನಾನು ಹೇಳೋದು ಇಷ್ಟೇ ,"ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ". (ಸ್ವಲ್ಪ ಖಾರ ಆಯ್ತು , ಆದ್ರೆ ಪ್ರಸ್ತುತ ಇದ್ದು .)

  ReplyDelete