Thursday, 26 June 2014

ಪುಸ್ತಕ ಎಂದರೆ ಪ್ರಪಂಚ


                              ಅವತ್ತು ಮೊದಲೇ ನಿರ್ಣಯಿಸಿಕೊಂಡು ಹೋಗಿದ್ದೆ. ಕಳೆದ ವಾರವಷ್ಟೆ ಎರಡು ಕಾದಂಬರಿಗಳು ಪುಸ್ತಕಾಲಯದಿಂದ ನನ್ನ ಶೆಲ್ಫಿಗೆ ಕೂತಿವೆ. ಹಾಗಾಗಿ ಇವತ್ತು ಸಪ್ನಾ ಬುಕ್ ಹೌಸ್ ನತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎಂದು. ಪ್ರತಿ ಸಲ ಮಾರ್ಕೆಟ್ ನತ್ತ ಹೊರಡುವಾಗಲೂ ಈ ಪ್ರತಿಜ್ಞೆ ಗೈದ ನಂತರವೇ ರೂಮಿನಿಂದ ಹೊರಬೀಳುವುದು. ಅವಾಗೆಲ್ಲಾ ನನ್ನ ರೂಮ್ ಮೇಟ್ ವಿಜಯೀಭವ ಎಂದು ವ್ಯಂಗ್ಯವಾಗಿ ಹಾರೈಸುತ್ತಾಳೆ. ಏಕೆಂದರೆ ಅವಳಿಗೆ ಖಚಿತವಾಗಿ ಗೊತ್ತು, ಪುಸ್ತಕವನ್ನು ಖರೀದಿಸದೇ ನಾನು ವಾಪಸ್ಸು ಬರುವವಳಲ್ಲವೆಂದು. ಆದರೆ ಅವತ್ತು ಮಾತ್ರ ಅವಳಿಗೆ ಟಾಟಾ ಹೇಳಿ ಮಾರ್ಕೆಟ್ ಕಡೆಗೆ ಹೊರಡುವಾಗ ಎಂದಿಗಿಂತ ಸ್ವಲ್ಪ ಅತಿ ಎನ್ನಿಸುವಂತೆ ಡೈಲಾಗ್ ಹೊಡೆದಿದ್ದೆ, " ನೋಡೇ, ಇವತ್ತು ಖಾಲಿ ಕೈಯ್ಯಲ್ಲಿ ವಾಪಸ್ಸು ಬರ್ತೀನಿ. ಬಸ್ ಟಿಕೆಟ್ ಬಿಟ್ಟರೆ ಸಿನೆಮಾ ಟಿಕೆಟ್ ಗೆ ಮಾತ್ರ ಪರ್ಸ್ ತೆಗೆಯುತ್ತೇನೆ." ಅವಳು ಹುಬ್ಬು ಕುಣಿಸಿ ನಗುತ್ತಾ ಹೇಳಿದ್ದಳು. "ಮೊದಲು ಹೊರಡು. ಆಮೇಲೆ ನೋಡೋಣ ಕೈ ಖಾಲಿಯೋ ಇಲ್ಲ ಪರ್ಸ್ ಖಾಲಿಯೋ ಎಂದು."
                         ಬಸ್ಸು ಹತ್ತಿ ಕಾರ್ಪೋರೇಷನ್ ಸ್ಟಾಪಿನಲ್ಲಿ ಇಳಿದ ಮೇಲೂ ಮತ್ತೊಮ್ಮೆ ನನ್ನ ಪ್ರತಿಜ್ಞೆಯನ್ನು ನೆನಪಿಗೆ ತಂದುಕೊಂಡೆ. ಮಾಲ್ ನ ಎದುರು ಬಂದಾಗ ಸಪ್ನಾ ನನ್ನನ್ನು ನೋಡಿ ನಗುತ್ತಾ ಕೈ ಬೀಸಿದಂತಾಯಿತು. ಆದರೂ ತಲೆ ಕೊಡವುತ್ತ ಮುಂದೆ ಸಾಗಿದೆ. ಸಪ್ನಾದ ಬಾಗಿಲಿನ ಎದುರು ಬಂದು ನಿಂತ ಕೂಡಲೇ ವಾಚ್ ನ ಕಡೆ ಕಣ್ಣು ಹಾಯಿಸಿದೆ. ಸಮಯ ೧೧.೩೦. ಅಂದರೆ ಸಿನೆಮಾ ಪ್ರಾರಂಭವಾಗಲು ಇನ್ನು ಮುಕ್ಕಾಲು ಗಂಟೆ ಇದೆ. ಜೊತೆಗಿದ್ದ ಸ್ನೇಹಿತರೆಲ್ಲಾ ಸಪ್ನಾಗೆ ಹೋಗೋಣವೆಂಬ ಯೋಚನೆ ಎಲ್ಲರ ತಲೆಯಲ್ಲೂ ಹೊಳೆಯಿತು. ಅದಕ್ಕೆ ಸರ್ವರ ಅನುಮೋದನೆಯೂ ದೊರೆತ ಮೇಲೆ ನಾನೊಬ್ಬಳೇ ಹೊರಗುಳಿಯುವುದರಲ್ಲಿ ಅರ್ಥವಿಲ್ಲವೆಂದು ಸಪ್ನಾದ ಒಳಗಡೆ ಕಾಲಿರಿಸಿದೆ. ಸುಮ್ಮನೆ ಸ್ನೇಹಿತರ ಜೊತೆ ಸೇರಿ ಅತ್ತಿಂದಿತ್ತ ಓಡಾಡುತ್ತಿದ್ದೆ. ಗೆಳತಿಯೊಬ್ಬಳು ಕೇಳಿದಳು, "ನೀ ಏನು ತಗೊಳಾಂಗಿಲ್ಲ ಏನ್..??" ನಾನು ತಲೆಯನ್ನು ಅಡ್ಡಡ್ಡ ಅಲ್ಲಾಡಿಸಿ ಮೌನವಾಗಿಯೇ ಉತ್ತರವಿತ್ತೆ. ಮತ್ತೊಬ್ಬ ಗೆಳೆಯ "ಹೇಯ್, ನೀ ಹಂಗ ಖಾಲಿ ಕೈನಾಗ ಹೋದ್ರ ನಿನ್ನ ರೈಟರ್ಸ್ ಫ್ರೆಂಡ್ಸ್ ಎಲ್ಲಾರು ಬ್ಯಾಸರ ಮಾಡ್ಕೊಂತಾರ ನೋಡ." ಎಂದು ಛೇಡಿಸಿದ. "ಸಪ್ನಾ ಬೆಳೆಯುದ ನಿಮ್ಮಂಥ ಮಂದಿಯಿಂದ ಪಾ." ಅಂತಾನೂ ಮಾತುಗಳು ಬಂದವು. ಅಷ್ಟಾದರೂ ನನಗೇ ಆಶ್ಚರ್ಯವಾಗುವಂತೆ ನನ್ನ ಮನಸ್ಸು ತಾನು ಮಾಡಿದ ಪ್ರತಿಜ್ಞೆಗೆ ಬದ್ಧವಾಗಿತ್ತು.

 

                              ಹಾಗೆಯೇ ಸಾಗುತ್ತ ಕನ್ನಡ ಪುಸ್ತಕಗಳ ವಿಭಾಗಕ್ಕೆ ಬಂದೆ. ಅಲ್ಲಿ ಇಬ್ಬರು ಹೆಂಗಸರು ಯಾವುದೋ ಕನ್ನಡ ಕಾದಂಬರಿಯ ಪುಟಗಳನ್ನು ತಿರುವಿ ಹಾಕುತ್ತಿದ್ದರು. ಯಾವ ಕಾದಂಬರಿಯೆಂದು ನೋಡುವ ಕುತೂಹಲವುಂಟಾಗಿ ಅವರ ಬಳಿ ಸರಿದು ನಿಂತೆ. ಅವರು ನೋಡುತ್ತಿದ್ದಿದು ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿ. ನಾನು ಹಾಗೆಯೇ ಶೆಲ್ಫಿನತ್ತ ಕಣ್ಣು ಹಾಯಿಸಿದೆ. ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಅಲ್ಲಿ ಜೋಡಿಸಿಡಲಾಗಿತ್ತು. ಆವಾಗ ನನ್ನ ಕಣ್ಣಿಗೆ ಬಿದ್ದಳು, ಚಿತ್ತಾಲರ ‘ಕಥೆಯಾದಳು ಹುಡುಗಿ’. ನನಗೆ ಒಮ್ಮೆಲೆ ಅತಿಯಾದ ಆನಂದ ಉಂಟಾಯಿತು. ಕಾರಣ ಆ ಪುಸ್ತಕದ ಸಲುವಾಗಿ ಕಳೆದ ಎರಡು ವರ್ಷಗಳಿಂದ ಪರಿಚಿತರ ಹತ್ತಿರ ವಿಚಾರಿಸಿದ್ದೆ. ಎಡತಾಕದ ಪುಸ್ತಕದ ಅಂಗಡಿಗಳಿರಲಿಲ್ಲ. ಹುಡುಕಾಡದ ಗ್ರಂಥಾಲಯಗಳ ಕಪಾಟುಗಳಿರಲಿಲ್ಲ. ಆದರೂ ಆ ಹುಡುಗಿ ನನಗೆ ದೊರಕಿರಲಿಲ್ಲ. ಆ ಕ್ಷಣದಲ್ಲಿಯೇ ಎಲ್ಲ ಪ್ರತಿಜ್ಞೆಗಳೂ ಸಪ್ನಾದ ಎ.ಸಿ. ಗಾಳಿಗೆ ತೂರಿ ಹೋದವು ಎನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಿಲ್ಲವಷ್ಟೆ. ‘ಕಥೆಯಾದಳು ಹುಡುಗಿ’ಯ ಜೊತೆಯಾಗಿ ಜಯಂತ್ ಕಾಯ್ಕಿಣಿ ಅವರ ‘ಬೊಗಸೆಯಲ್ಲಿ ಮಳೆ’ಯನ್ನೂ ಹಿಡಿದು ತಂದದ್ದಾಯಿತು. ಕೊನೆಗೂ ನನ್ನ ರೂಮ್ ಮೇಟ್ ಮಾತಿನಂತೆ ಕೈ ಖಾಲಿ ಹೊತ್ತು ಬರುವ ಬದಲು ಪರ್ಸ್ ಖಾಲಿ ಮಾಡಿಕೊಂಡು ಬಂದದ್ದಾಯಿತು.
                             ಖುಷಿಯ ಜೊತೆಯಲ್ಲೆ ಎಲ್ಲೋ ಮೂಲೆಯಲ್ಲಿ ಪುಸ್ತಕ ಖರೀದಿಯ ಕುರಿತು ಬೇಸರವಿತ್ತು. ಈ ತಿಂಗಳಿನ ಅರ್ಧ ಬಜೆಟ್ ಈಗಲೇ ಖಾಲಿಯಾಯಿತಲ್ಲ ಎಂದು. ಆದರೂ ಒಳ ಮನಸ್ಸು ಸಮಾಧಾನ ಹೇಳಿತು. "ಮಗಳೇ, ದೇವಸ್ಥಾನಕ್ಕೆ ಬಂದವರು ದೇವರ ದರ್ಶನ ಮಾಡದೇ ಹೋಗುತ್ತಾರೆಯೇ..?? ದೇವರಿಗೆ ಅಡ್ಡಬಿದ್ದ ನಂತರ ಕಾಣಿಕೆ ಹಾಕದೇ, ಅರ್ಚನೆ ಮಾಡಿಸದೇ ಹಿಂದಿರುಗಲು ಮನಸ್ಸಾದೀತೇ..?? ಹಾಗೆ ಮಾಡಿದರೆ ಆ ದೇವರು ಮೆಚ್ಚುವನೇ..?? ನಿನ್ನ ಪಾಲಿಗೆ ಪುಸ್ತಕಾಲಯಗಳೇ ದೇವಾಲಯ, ಗ್ರಂಥಗಳೇ ದೇವರು. ಯಾವುದೇ ಬೇಸರ ಬೇಡ. ನಿನ್ನ ನಡೆ ಸರಿಯಾದದ್ದೇ." ಇನ್ನೇನು ಹೇಳುವುದು ಉಳಿದಿಲ್ಲ ಎಂದುಕೊಳ್ಳುತ್ತೇನೆ.

                              *******************************

                            ಪುಸ್ತಕಗಳು ನನ್ನ ನೆಚ್ಚಿನ ಸಂಗಾತಿಗಳು. ಅವುಗಳು ನನ್ನನ್ನು ನಗಿಸುತ್ತವೆ, ಅಳಿಸುತ್ತವೆ, ನಿಬ್ಬೆರಗಾಗಿಸುತ್ತವೆ, ಕುತೂಹಲ ಮೂಡಿಸುತ್ತವೆ, ವಿಷಾದ ಹೊಮ್ಮಿಸುತ್ತವೆ, ದಿಕ್ಕೆಟ್ಟು ಓಡುವಂತೆ ಮಾಡುತ್ತವೆ, ಕೈ ಹಿಡಿದು ನಡೆಸುತ್ತವೆ, ಚಿಂತನೆಗೆ ಹಚ್ಚಿ ಕೂರಿಸುತ್ತವೆ. ಕೊನೆಗೆ ತಾವೇ ನಾನಾಗುತ್ತವೆ. ಪುಸ್ತಕಗಳಿಂದಾಗಿ ನಾನು ಹೊಸ ಹೊಸ ಊರುಗಳಿಗೆ, ಕೇರಿಗಳಿಗೆ ಭೇಟಿ ನೀಡಿದ್ದೇನೆ. ಬಗೆಬಗೆಯ ಜನರನ್ನು ನೋಡಿದ್ದೇನೆ, ಅವರೆಲ್ಲರೊಡನೆ ಬೆರೆತು ಕಲೆತಿದ್ದೇನೆ. ಥರಥರದ ಘಟನೆಗಳಿಗೆ ಸಾಕ್ಷಿಯಾಗಿದ್ದೇನೆ. ಇವೆಲ್ಲವುಗಳಿಂದಾಗಿ ಬಹಳಷ್ಟನ್ನು ಗಳಿಸಿಕೊಂಡಿದ್ದೇನೆ, ಉಳಿಸಿಕೊಂಡಿದ್ದೇನೆ, ಬೆಳೆಸಿಕೊಂಡಿದ್ದೇನೆ. ಹಾಗಾಗಿ ಪುಸ್ತಕಗಳೆಂದರೆ ನನ್ನ ಪಾಲಿಗೆ ಹೊಸ ಪ್ರಪಂಚವೊಂದು ತೆರೆದುಕೊಂಡಂತೆ.


4 comments:

 1. ನಿಜ. ಪುಸ್ತಕಗಳು ಯಾವತ್ತಿಗೂ ಅತ್ಯಾಪ್ತ ಅನುಭೂತಿ ಒದಗಿಸುವ ಸಂಗಾತಿಗಳು. ಓದಿನ ಹವ್ಯಾಸ ಎಂದೆಂದಿಗೂ ಇರಲಿ.

  ReplyDelete
 2. good to see someone of same habits

  ReplyDelete
 3. ತುಂಬಾ ಚನ್ನಾಗಿ ಹೇಳಿದ್ದೀರಿ.. ಹೌದು ಪುಸ್ತಕಗಳು ನಮ್ಮ ಪ್ರಪಂಚವಾಗಬೇಕು.. ಅದರಿಂದ ಸಿಗುವ ಸುಖ ಮತ್ತಿನ್ನಾವುದರಲ್ಲಿ ಸಿಕ್ಕೀತು? ನಾಜೂಕು ಶೈಲಿಯ ನಿಮ್ಮ ಬರವಣಿಗೆ ಹಿಡಿಸಿತು.. ಹೀಗೆ ಬರೆಯುತ್ತಲೇ ಇರಿ..

  ReplyDelete
 4. ಹೌದು ಪುಸ್ತಕಗಳೆಂದರೆ ಜ್ಞಾನ, ಧ್ಯಾನ, ಅಂತರಂಗದ ಅಭ್ಯುತ್ಥಾನ...
  ಓದುತ್ತಿರಿ, ಓದಿ ಬರೆಯುತ್ತಿರಿ...
  ಓದು ಬೆಳೆಸಲಿ ಬದುಕು - ಭಾವವ...

  ReplyDelete