Thursday, 19 June 2014

ನಾನು ಬರೆಯುತ್ತೇನೆ


ನಾನು ಕವಯಿತ್ರಿಯಲ್ಲ
ಆದರೂ ಗೀಚುವೆನು ಪುಟ್ಟ ಕವಿತೆಯನ್ನು
ನಾನು ಕಥೆಗಾರಳಲ್ಲ
ಇಳಿಸುವೆ ಪಾತ್ರಗಳನ್ನು ಹಾಳೆಗಳಲ್ಲಿ
ನಾನು ಬರಹಗಾರ್ತಿಯೂ ಅಲ್ಲ
ಆದರೂ ಲೇಖನಿಯ ಹಿಡಿದು ಕೂರುವೆ

ನನ್ನ ಬರಹಗಳಿಗೆ ಬಂಧಗಳಿಲ್ಲ
ಶಾಸ್ತ್ರದ ಶಸ್ತ್ರಕ್ರಿಯೆ ಬೇಕಾಗಿಲ್ಲ
ಪ್ರಾಸಗಳ ಪರಿಹಾಸ್ಯದ ಪ್ರಸಂಗಗಳಿಲ್ಲ
ಭಾಷೆಯೆಂಬ ಬ್ರಹ್ಮಗಂಟಿನ ನಂಟಿಲ್ಲ
ನಾ ಸಿಕ್ಕು ತೊಳಲಾಡುತಿಹೆ ನೂರು ಬಂಧನಗಳಲ್ಲಿ
ಬರೆಯುವ ಅಕ್ಷರಗಳಾದರೂ ಮುಕ್ತವಾಗಿರಲಿ

ನನ್ನ ಕನಸುಗಳ ಹಸಿವು ತಣಿಯುವವರೆಗೂ
ಹೆಣೆಯುವೆ ಕಲ್ಪನೆಗಳನ್ನು ಪದಗಳಾಗಿ
ಭಾವಗಳ ಬಿಸಿ ಆರುವ ತನಕವೂ
ಬೇಲಿಯಿಲ್ಲದೆ ಬಂಧಿಯಾಗುವೆ ಬರವಣಿಗೆಯಲ್ಲಿ
ಯೋಚನೆಗಳ ಯಜ್ಞ ಸಮಾಪ್ತಿಯಾಗುವವರೆಗೆ
ಕೊನೆಯಾಗವು ನನ್ನ ಸಾಲುಗಳು


3 comments:

  1. ನಾನಲ್ಲ ಎನ್ನುತ್ತ ತನ್ನೆದೆಯನ್ನು ತೋರ್ಪಡಿಸುತ್ತಿರುವ ಸ್ವಗತದ ಸಾಲುಗಳು,,ಮನೋ ಲಹರಿಯ ನಿವೇದನೆ..ಸುಂದರವಾಗಿದೆ

    ReplyDelete
  2. This comment has been removed by the author.

    ReplyDelete