Monday, 30 June 2014

ರೈಟರ್ಸ್ ಅಂದ್ರೆ ಬೋರಿಂಗಾ..???


                         ಮೊನ್ನೆ ಮೊನ್ನೆಯಷ್ಟೆ ಏಕ್ ವಿಲನ್ ನೋಡಲೆಂದು ಲಕ್ಷ್ಮೀ ಪ್ರೈಡ್ ಸಿನೆಮಾಕ್ಕೆ ಹೋದಾಗ ನಡೆದ ಘಟನೆ. ನಾನು ಟಿಕೆಟ್ ಪಡೆದು ಲಾಬಿಯ ಒಳಗಡೆ ಬಂದಾಗ ಸಮಯ ೧೧.೧೦. ಅಂದರೆ ಶೋ ಪ್ರಾರಂಭವಾಗಲು ಇನ್ನು ಇಪ್ಪತ್ತು ನಿಮಿಷಗಳಷ್ಟು ತಡವಾಗುತ್ತದೆಯೆಂದಾಯಿತು. ಹಾಗಾದರೆ ಅಷ್ಟು ಹೊತ್ತು ಏನು ಮಾಡುವುದು..?? ಕೈಗೆ ಕೆಲಸ ಕೊಡುವಂಥದ್ದು ಅಲ್ಲೇನಿರುತ್ತದೆ. ಬಾಯಿಗೆ ಕೆಲಸ ಕೊಡೋಣವೆಂದರೆ ಸ್ನೇಹಿತರಾರು ಇರಲಿಲ್ಲ, ನಾನೊಬ್ಬಳೇ ಹೋಗಿದ್ದೆ(ಬಾಯಿಗೆ ಕೆಲಸವೆಂದರೆ ಮಾತನಾಡುವುದು. ತಿನ್ನುವುದು ಎಂದು ತಪ್ಪಾಗಿ ಗ್ರಹಿಸಿಬಿಟ್ಟೀರಿ ಮತ್ತೆ). ಹಾಗಂತ ಸುಮ್ಮನೆ ಕೂರಲಿಕ್ಕೆ ನನ್ನ ಕೈಲಾದೀತೇ..?? ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗ್ ತನ್ನ ಭಾರವನ್ನು ನನ್ನ ಮೇಲೆ ಹಾಕುತ್ತಲೇ ನೆನಪಾಯಿತು. ತಲೆಗಾದರೂ ಕೆಲಸ ಕೊಡೋಣವೆಂದು ನಿರ್ಧರಿಸಿ ಆಗ ತಾನೇ ಕೆಳಗಡೆ ಸಪ್ನಾ ಬುಕ್ ಹೌಸ್ ನಿಂದ ಖರೀದಿಸಿ ತಂದಿದ್ದ ಪುಸ್ತಕಗಳಲ್ಲೊಂದಾದ ವಸುಧೇಂದ್ರರ ‘ಯುಗಾದಿ’ಯನ್ನು ಹೊರತೆಗೆದು ಓದುತ್ತಾ ಕುಳಿತೆ. ಯುಗಾದಿಯ ಬೇವು-ಬೆಲ್ಲದ ರುಚಿ ಸೊಗಸಾಗಿದ್ದುದರಿಂದ ಒಮ್ಮೆ ಕೆಳಗೆ ತಗ್ಗಿಸಿದ ತಲೆಯನ್ನು ಮೇಲಕ್ಕೆತ್ತದೆ ಓದುತ್ತಲೇ ಇದ್ದೆ. ಸುಮಾರು ಆರೇಳು ನಿಮಿಷಗಳ ನಂತರ ನನ್ನ ಪಕ್ಕದಲ್ಲಿ ಆಂಟಿಯೊಬ್ಬರು ಕುಳಿತಿರುವುದು ಕಣ್ಣಂಚಿನ ಕನ್ನಡಿಯಲ್ಲಿ ಕಾಣಿಸಿತು. ಹಾಗೆ ಒಮ್ಮೆ ಅವರತ್ತ ದೃಷ್ಟಿ ಹಾಯಿಸಿ ಹೀಗೆ ಮತ್ತೆ ಯುಗಾದಿಯನ್ನು ಸವಿಯುವ ಕೆಲಸವನ್ನು ಮುಂದುವರೆಸಿದೆ.
                                 ಆದರೂ ಮರುಕ್ಷಣದಲ್ಲಿಯೇ ಸಂದೇಹದ ಹುಳುವೊಂದು ನನ್ನ ತಲೆಯನ್ನು ಹೊಕ್ಕಿತು. ಆಂಟಿ ಒಬ್ಬರೇ ಬಂದಿರಬಹುದಾ..?? ಜೊತೆಗೆ ಯಾರಾದರೂ ಇದ್ದಿದ್ದರೆ ಹೀಗೆ ಒಂಟಿಯಾಗಿ ಕೂತಿರುವ ನನ್ನ ಪಕ್ಕದಲ್ಲಿ ಬಂದು ಕೂಡುವ ಮಾತೇ ಇಲ್ಲವಲ್ಲ. ತಲೆ ಹೊಕ್ಕಿದ ಹುಳು ನಿಧಾನವಾಗಿ ತೂತು ಕೊರೆಯಲು ಪ್ರಾರಂಭಿಸಿತು. ತೂತು ದೊಡ್ಡದಾಗಿ ಸಣ್ಣ ರಂಧ್ರವಾಗಿ ಆಮೇಲೆ ಪೈಪ್ ಲೈನ್ ಆಗಿಬಿಟ್ಟಿತು ಎನ್ನುವ ಭಯದಿಂದ ತಲೆಯನ್ನು ಮೇಲೆತ್ತಿ ಆಕೆಯತ್ತ ತಿರುಗಿಸಿ ಬಾಯಿ ತೆರೆದೆ. "ಒಬ್ಬರೇ ಬಂದಿದ್ದೀರಾ..??" ಅವರು ಮುಖದ ತುಂಬಾ ನಗೆ ತಂದುಕೊಂಡು ಮರಳಿ ನನ್ನನ್ನೇ ಪ್ರಶ್ನಿಸಿದರು. "ನೀನೂ ಒಬ್ಬಳೇ ಇದ್ದೀಯಾ ಅಪ್ಪಿ..??" ನಾನು ಹೌದೆಂದು ತಲೆ ಕುಣಿಸಿದೆ. "ಸೀಟ್ ನಂಬರ್ ಎಷ್ಟು" ಎನ್ನುತ್ತಾ ತಮ್ಮ ಟಿಕೆಟ್ ಅನ್ನು ನನ್ನ ಕೈಗಿತ್ತರು. ನಾನು ಇಬ್ಬರ ಟಿಕೆಟ್ ಅನ್ನು ಪರೀಕ್ಷಿಸಿ ನೋಡಿದೆ. ಕಾಕತಾಳೀಯವೆಂಬಂತೆ ಇಬ್ಬರದೂ ಅಕ್ಕಪಕ್ಕದ ಸೀಟಾಗಿತ್ತು. ಇನ್ನೇನು ತಾನೇ ಬೇಕು..?? ಉಭಯ ಕುಶಲೋಪರಿ ಸಾಂಪ್ರತವೂ ಮುಗಿದು ಮಾತು ಆ ಕೇರಿ ಈ ಕೇರಿ ಎಲ್ಲಾ ಸುತ್ತುತ್ತಿರುವಂತೆಯೇ ಆಂಟಿ ನನ್ನನ್ನು ಕೇಳಿದರು, "ನಿನ್ನ ಹಾಬೀಸ್ ಏನು ಪುಟ್ಟಿ..??" ನಾನು ಕೈಯ್ಯಲ್ಲಿದ್ದ ಯುಗಾದಿಯನ್ನು ಎತ್ತಿ ತೋರಿಸುತ್ತಾ ಮುಗುಳ್ನಗೆಯೊಂದಿಗೆ "ರೀಡಿಂಗ್ ಮತ್ತೆ ರೈಟಿಂಗ್" ಎಂದುತ್ತರಿಸಿದೆ. ಆಕೆ ಕೂಡಲೇ "ಓಹ್, ರೈಟರ್ಸ್ ಆರ್ ವೆರಿ ಬೋರಿಂಗ್" ಎಂದು ಬಿಡಬೇಕಾ..?? ಅರ್ಧ ಚಂದ್ರಕೃತಿಯಲ್ಲಿದ್ದ ನನ್ನ ತುಟಿ ಈಗ ಉಲ್ಟಾ ಅರ್ಧ ಚಂದ್ರನಾಗಿ ಮಲಗಿಕೊಂಡು ಮುಖ ಅಮಾವಾಸ್ಯೆಯನ್ನು ತೋರಿಸಿತು. ಕೈಯ್ಯಲ್ಲಿ ಎತ್ತಿ ಹಿಡಿದಿದ್ದ ಪುಸ್ತಕ ಕೂಡಲೇ ಕೆಳಗೆ ಸರಿಯಿತು. ಒಳಗೆ ಮನಸ್ಸಿನ ಮೂಲೆಯಲ್ಲೆಲ್ಲೋ ಅಯ್ಯೋ ಎಂದು ಕೂಗಿದ ಶಬ್ದ ಮಾರ್ದನಿಸಿತು. "ಹಾಗೇನಿಲ್ಲ ಆಂಟಿ" ಎನ್ನುತ್ತಾ ಬಾರದ ನಗು ತಂದುಕೊಂಡು ನನ್ನನ್ನು ನಾನೇ ಸಮಾಧಾನಿಸುತ್ತಾ ಸಮರ್ಥಿಸಿಕೊಂಡೆ. ಇಷ್ಟೂ ಹೇಳದೆ ಹೋದರೆ ಮರ್ಯಾದೆ ಪ್ರಶ್ನೆ ಅಲ್ವಾ ಮಾರಾಯ್ರೇ.

                                  *********************************************


                          "ಹೋಗ್ ಲೇ ಪಾ, ಆಕಿನ ಭಾಳ ಬೋರಿಂಗ್ ಇದ್ದಿರ್ತಾಳ ತಗೊ" ಗೆಳೆಯನೊಬ್ಬ ಪ್ರತಿಕ್ರಿಯಿಸಿದ.
                        ಅವತ್ತು ಬ್ರೇಕ್ ಹೊತ್ತಿನಲ್ಲಿ ಕಾಂಟೀನ್ ನಲ್ಲಿ ಕೂತಾಗ ನಾನು ಏಕ್ ವಿಲನ್ ಸಿನೆಮಾ ನೋಡಲಿಕ್ಕೆ ಹೋದಾಗ ನಡೆದ ಪ್ರಸಂಗವನ್ನು ವಿವರಿಸಿದ ನಂತರ ಎಲ್ಲರಿಗೂ ಚರ್ಚೆಗೆ ರೈಟರ್ಸ್ ಅಂದ್ರೆ ಬೋರಿಂಗಾ ಅನ್ನೋ ವಿಷಯ ಸಿಕ್ಕಿತ್ತು. ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಲು ತೊಡಗಿದ್ದರು. "ಅದ್ಯಾವ ಆಂಟಿನೆ ಹಂಗೆ ಹೇಳಿದ್ದು..?? ನೀವ್ ಹೇಳಿದ್ದನ್ನ ಪ್ರೂವ್ ಮಾಡಿ ಹೇಳಕಾಗಿತ್ತು ನೀನು.." ಶಿರಸಿಯ ಗೆಳತಿಯೊಬ್ಬಳ ಸಜೇಷನ್. "ಮತ್ತೆಂತಾ ಅಲ್ದಾ..??" ನಾನು ಅವಳಿಗೆ ಕೇಳಿದೆ.                            
                             ಇನ್ನೊಬ್ಬ ಸ್ನೇಹಿತ ಕುಮಟಾದವನು ಹೇಳಿದ, "ಆ ಆಂಟಿಗೆ ಯಾರಾದ್ರು ಬರಹಗಾರನೋ ಇಲ್ಲಾ ಬರಹಗಾರ್ತಿಯೋ ಯಾವಾಗಲೋ ಒಮ್ಮೆ ಸರಿಯಾಗಿ ಬೋರು ಹೊಡೆಸಿರ್ಬೇಕು ಮಾರಾಯ್ತಿ. ಅದ್ಕೆ ಅವ್ರು ಹಂಗೆ ಮಿಸ್ ಅಂಡರ್ ಸ್ಟ್ಯಾಂಡ್ ಮಾಡ್ಕೊಂಡಿದಾರೆ ಬಿಡು." ಇವನು ಹೇಳಿದ್ದು ನಿಜ ಆಗಿರಲೂಬಹುದು ಎಂದು ಮನಸ್ಸು ಯೋಚಿಸಿತು. "ಅದೇನಾರ ಇರ್ಲಿ, ಆಕಿ ಹಂಗ ಮುಖಕ್ಕ್ ಹೊಡದ್ ಹಾಂಗ ಹೇಳೋದ್ ತಪ್ಪ್ ನೋಡ. ಅದೂ ನಿನ್ನ ಜೋಡಿ ಹಂಗ ಹೇಳ್ಬಾರ್ದಿತ್ತ್ ಲೇ" ಧಾರವಾಡದ ಗೆಳತಿಯೊಬ್ಬಳು ಹುಬ್ಬು ಸಂಕುಚಿತಗೊಳಿಸಿಕೊಂಡು ಹೇಳಿದಳು. ಇವಳದ್ದೊಂದು ಅನುಕಂಪ ಬೇರೆ ಎನ್ನುತ್ತಾ ನಾನು ಒಳಗೊಳಗೆ ಬೈದುಕೊಂಡೆ. ಅಲ್ಲಿಗೆ ಬ್ರೇಕ್ ಟೈಮ್ ಮುಗಿದಿತ್ತು.

                                    ****************************************

                                ರೈಟರ್ಸ್ ಅಂದ್ರೆ ಬೋರಿಂಗ್ ಹೆಂಗೆ ಮಾರಾಯ್ರೇ..?? ನನಗೆ ತಿಳಿದಿರುವಂತೆ ಹೇಗೆ ಆಡು ಮುಟ್ಟಿದ ಸೊಪ್ಪಿಲ್ಲವೋ ಹಾಗೆಯೇ ರೈಟರ್ಸ್ ಗಳಿಗೆ ಗೊತ್ತಿಲ್ಲದ ವಿಷಯಗಳೇ ಇಲ್ಲ. ದಿನನಿತ್ಯದ ಸಾಮಾನ್ಯ ಸಂಗತಿಗಳಿಂದ ಹಿಡಿದು ರಾಜಕೀಯ, ಕಲೆ, ವಿಜ್ಞಾನ, ಕ್ರೀಡೆ, ನಾಟ್ಯ, ನಟನೆಗಳಂತಹ ಇನ್ನಿತರ ಕ್ಷೇತ್ರಗಳ ಬಗ್ಗೆಯೂ ತಿಳಿದುಕೊಂಡಿರುತ್ತಾರೆ. ಕಸ ಗುಡಿಸುವವರ ಕಷ್ಟಗಳಿಂದ ದೇಶವನ್ನಾಳುವವರ ತಾಪತ್ರಯಗಳವರೆಗಿನ ಮೇಲ್ನೋಟಕ್ಕೆ ಅರ್ಥವಾಗದಂತಹ ಸೂಕ್ಷ್ಮ ಸಂಗತಿಗಳ ಕುರಿತೂ ಅರಿವಿರುತ್ತದೆ. ಅವರೇನು ಸುಮ್ಮ ಸುಮ್ಮನೆ ಬರೆಯುತ್ತಾರೆಯೇ..?? ಎಷ್ಟೆಲ್ಲಾ ಓದಿ ತಿಳಿದುಕೊಂಡು, ನೋಡಿ ಕಲಿತುಕೊಂಡು, ಸಾಕಷ್ಟು ಶ್ರಮ ವಹಿಸಿ ಒಂದೊಂದು ಸಾಲನ್ನು ಬರೆಯುತ್ತಾರೆ. ಇಷ್ಟೆಲ್ಲಾ ಗೊತ್ತಿರುವ ವ್ಯಕ್ತಿ ಬೋರಿಂಗ್ ಅನ್ನಿಸಲು ಹೇಗೆ ಸಾಧ್ಯ..?? ರೈಟರ್ಸ್ ಜೊತೆ ಮಾತನಾಡುತ್ತಾ ಕುಳಿತರೆ ಹೊತ್ತು ಹೋಗಿದ್ದೇ ತಿಳಿಯುವುದಿಲ್ಲವೆಂಬುದು ನನ್ನ ಅಭಿಪ್ರಾಯ. ನೀವೇನಂತೀರಿ..??


Thursday, 26 June 2014

ಪುಸ್ತಕ ಎಂದರೆ ಪ್ರಪಂಚ


                              ಅವತ್ತು ಮೊದಲೇ ನಿರ್ಣಯಿಸಿಕೊಂಡು ಹೋಗಿದ್ದೆ. ಕಳೆದ ವಾರವಷ್ಟೆ ಎರಡು ಕಾದಂಬರಿಗಳು ಪುಸ್ತಕಾಲಯದಿಂದ ನನ್ನ ಶೆಲ್ಫಿಗೆ ಕೂತಿವೆ. ಹಾಗಾಗಿ ಇವತ್ತು ಸಪ್ನಾ ಬುಕ್ ಹೌಸ್ ನತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎಂದು. ಪ್ರತಿ ಸಲ ಮಾರ್ಕೆಟ್ ನತ್ತ ಹೊರಡುವಾಗಲೂ ಈ ಪ್ರತಿಜ್ಞೆ ಗೈದ ನಂತರವೇ ರೂಮಿನಿಂದ ಹೊರಬೀಳುವುದು. ಅವಾಗೆಲ್ಲಾ ನನ್ನ ರೂಮ್ ಮೇಟ್ ವಿಜಯೀಭವ ಎಂದು ವ್ಯಂಗ್ಯವಾಗಿ ಹಾರೈಸುತ್ತಾಳೆ. ಏಕೆಂದರೆ ಅವಳಿಗೆ ಖಚಿತವಾಗಿ ಗೊತ್ತು, ಪುಸ್ತಕವನ್ನು ಖರೀದಿಸದೇ ನಾನು ವಾಪಸ್ಸು ಬರುವವಳಲ್ಲವೆಂದು. ಆದರೆ ಅವತ್ತು ಮಾತ್ರ ಅವಳಿಗೆ ಟಾಟಾ ಹೇಳಿ ಮಾರ್ಕೆಟ್ ಕಡೆಗೆ ಹೊರಡುವಾಗ ಎಂದಿಗಿಂತ ಸ್ವಲ್ಪ ಅತಿ ಎನ್ನಿಸುವಂತೆ ಡೈಲಾಗ್ ಹೊಡೆದಿದ್ದೆ, " ನೋಡೇ, ಇವತ್ತು ಖಾಲಿ ಕೈಯ್ಯಲ್ಲಿ ವಾಪಸ್ಸು ಬರ್ತೀನಿ. ಬಸ್ ಟಿಕೆಟ್ ಬಿಟ್ಟರೆ ಸಿನೆಮಾ ಟಿಕೆಟ್ ಗೆ ಮಾತ್ರ ಪರ್ಸ್ ತೆಗೆಯುತ್ತೇನೆ." ಅವಳು ಹುಬ್ಬು ಕುಣಿಸಿ ನಗುತ್ತಾ ಹೇಳಿದ್ದಳು. "ಮೊದಲು ಹೊರಡು. ಆಮೇಲೆ ನೋಡೋಣ ಕೈ ಖಾಲಿಯೋ ಇಲ್ಲ ಪರ್ಸ್ ಖಾಲಿಯೋ ಎಂದು."
                         ಬಸ್ಸು ಹತ್ತಿ ಕಾರ್ಪೋರೇಷನ್ ಸ್ಟಾಪಿನಲ್ಲಿ ಇಳಿದ ಮೇಲೂ ಮತ್ತೊಮ್ಮೆ ನನ್ನ ಪ್ರತಿಜ್ಞೆಯನ್ನು ನೆನಪಿಗೆ ತಂದುಕೊಂಡೆ. ಮಾಲ್ ನ ಎದುರು ಬಂದಾಗ ಸಪ್ನಾ ನನ್ನನ್ನು ನೋಡಿ ನಗುತ್ತಾ ಕೈ ಬೀಸಿದಂತಾಯಿತು. ಆದರೂ ತಲೆ ಕೊಡವುತ್ತ ಮುಂದೆ ಸಾಗಿದೆ. ಸಪ್ನಾದ ಬಾಗಿಲಿನ ಎದುರು ಬಂದು ನಿಂತ ಕೂಡಲೇ ವಾಚ್ ನ ಕಡೆ ಕಣ್ಣು ಹಾಯಿಸಿದೆ. ಸಮಯ ೧೧.೩೦. ಅಂದರೆ ಸಿನೆಮಾ ಪ್ರಾರಂಭವಾಗಲು ಇನ್ನು ಮುಕ್ಕಾಲು ಗಂಟೆ ಇದೆ. ಜೊತೆಗಿದ್ದ ಸ್ನೇಹಿತರೆಲ್ಲಾ ಸಪ್ನಾಗೆ ಹೋಗೋಣವೆಂಬ ಯೋಚನೆ ಎಲ್ಲರ ತಲೆಯಲ್ಲೂ ಹೊಳೆಯಿತು. ಅದಕ್ಕೆ ಸರ್ವರ ಅನುಮೋದನೆಯೂ ದೊರೆತ ಮೇಲೆ ನಾನೊಬ್ಬಳೇ ಹೊರಗುಳಿಯುವುದರಲ್ಲಿ ಅರ್ಥವಿಲ್ಲವೆಂದು ಸಪ್ನಾದ ಒಳಗಡೆ ಕಾಲಿರಿಸಿದೆ. ಸುಮ್ಮನೆ ಸ್ನೇಹಿತರ ಜೊತೆ ಸೇರಿ ಅತ್ತಿಂದಿತ್ತ ಓಡಾಡುತ್ತಿದ್ದೆ. ಗೆಳತಿಯೊಬ್ಬಳು ಕೇಳಿದಳು, "ನೀ ಏನು ತಗೊಳಾಂಗಿಲ್ಲ ಏನ್..??" ನಾನು ತಲೆಯನ್ನು ಅಡ್ಡಡ್ಡ ಅಲ್ಲಾಡಿಸಿ ಮೌನವಾಗಿಯೇ ಉತ್ತರವಿತ್ತೆ. ಮತ್ತೊಬ್ಬ ಗೆಳೆಯ "ಹೇಯ್, ನೀ ಹಂಗ ಖಾಲಿ ಕೈನಾಗ ಹೋದ್ರ ನಿನ್ನ ರೈಟರ್ಸ್ ಫ್ರೆಂಡ್ಸ್ ಎಲ್ಲಾರು ಬ್ಯಾಸರ ಮಾಡ್ಕೊಂತಾರ ನೋಡ." ಎಂದು ಛೇಡಿಸಿದ. "ಸಪ್ನಾ ಬೆಳೆಯುದ ನಿಮ್ಮಂಥ ಮಂದಿಯಿಂದ ಪಾ." ಅಂತಾನೂ ಮಾತುಗಳು ಬಂದವು. ಅಷ್ಟಾದರೂ ನನಗೇ ಆಶ್ಚರ್ಯವಾಗುವಂತೆ ನನ್ನ ಮನಸ್ಸು ತಾನು ಮಾಡಿದ ಪ್ರತಿಜ್ಞೆಗೆ ಬದ್ಧವಾಗಿತ್ತು.

 

                              ಹಾಗೆಯೇ ಸಾಗುತ್ತ ಕನ್ನಡ ಪುಸ್ತಕಗಳ ವಿಭಾಗಕ್ಕೆ ಬಂದೆ. ಅಲ್ಲಿ ಇಬ್ಬರು ಹೆಂಗಸರು ಯಾವುದೋ ಕನ್ನಡ ಕಾದಂಬರಿಯ ಪುಟಗಳನ್ನು ತಿರುವಿ ಹಾಕುತ್ತಿದ್ದರು. ಯಾವ ಕಾದಂಬರಿಯೆಂದು ನೋಡುವ ಕುತೂಹಲವುಂಟಾಗಿ ಅವರ ಬಳಿ ಸರಿದು ನಿಂತೆ. ಅವರು ನೋಡುತ್ತಿದ್ದಿದು ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿ. ನಾನು ಹಾಗೆಯೇ ಶೆಲ್ಫಿನತ್ತ ಕಣ್ಣು ಹಾಯಿಸಿದೆ. ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಅಲ್ಲಿ ಜೋಡಿಸಿಡಲಾಗಿತ್ತು. ಆವಾಗ ನನ್ನ ಕಣ್ಣಿಗೆ ಬಿದ್ದಳು, ಚಿತ್ತಾಲರ ‘ಕಥೆಯಾದಳು ಹುಡುಗಿ’. ನನಗೆ ಒಮ್ಮೆಲೆ ಅತಿಯಾದ ಆನಂದ ಉಂಟಾಯಿತು. ಕಾರಣ ಆ ಪುಸ್ತಕದ ಸಲುವಾಗಿ ಕಳೆದ ಎರಡು ವರ್ಷಗಳಿಂದ ಪರಿಚಿತರ ಹತ್ತಿರ ವಿಚಾರಿಸಿದ್ದೆ. ಎಡತಾಕದ ಪುಸ್ತಕದ ಅಂಗಡಿಗಳಿರಲಿಲ್ಲ. ಹುಡುಕಾಡದ ಗ್ರಂಥಾಲಯಗಳ ಕಪಾಟುಗಳಿರಲಿಲ್ಲ. ಆದರೂ ಆ ಹುಡುಗಿ ನನಗೆ ದೊರಕಿರಲಿಲ್ಲ. ಆ ಕ್ಷಣದಲ್ಲಿಯೇ ಎಲ್ಲ ಪ್ರತಿಜ್ಞೆಗಳೂ ಸಪ್ನಾದ ಎ.ಸಿ. ಗಾಳಿಗೆ ತೂರಿ ಹೋದವು ಎನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಿಲ್ಲವಷ್ಟೆ. ‘ಕಥೆಯಾದಳು ಹುಡುಗಿ’ಯ ಜೊತೆಯಾಗಿ ಜಯಂತ್ ಕಾಯ್ಕಿಣಿ ಅವರ ‘ಬೊಗಸೆಯಲ್ಲಿ ಮಳೆ’ಯನ್ನೂ ಹಿಡಿದು ತಂದದ್ದಾಯಿತು. ಕೊನೆಗೂ ನನ್ನ ರೂಮ್ ಮೇಟ್ ಮಾತಿನಂತೆ ಕೈ ಖಾಲಿ ಹೊತ್ತು ಬರುವ ಬದಲು ಪರ್ಸ್ ಖಾಲಿ ಮಾಡಿಕೊಂಡು ಬಂದದ್ದಾಯಿತು.
                             ಖುಷಿಯ ಜೊತೆಯಲ್ಲೆ ಎಲ್ಲೋ ಮೂಲೆಯಲ್ಲಿ ಪುಸ್ತಕ ಖರೀದಿಯ ಕುರಿತು ಬೇಸರವಿತ್ತು. ಈ ತಿಂಗಳಿನ ಅರ್ಧ ಬಜೆಟ್ ಈಗಲೇ ಖಾಲಿಯಾಯಿತಲ್ಲ ಎಂದು. ಆದರೂ ಒಳ ಮನಸ್ಸು ಸಮಾಧಾನ ಹೇಳಿತು. "ಮಗಳೇ, ದೇವಸ್ಥಾನಕ್ಕೆ ಬಂದವರು ದೇವರ ದರ್ಶನ ಮಾಡದೇ ಹೋಗುತ್ತಾರೆಯೇ..?? ದೇವರಿಗೆ ಅಡ್ಡಬಿದ್ದ ನಂತರ ಕಾಣಿಕೆ ಹಾಕದೇ, ಅರ್ಚನೆ ಮಾಡಿಸದೇ ಹಿಂದಿರುಗಲು ಮನಸ್ಸಾದೀತೇ..?? ಹಾಗೆ ಮಾಡಿದರೆ ಆ ದೇವರು ಮೆಚ್ಚುವನೇ..?? ನಿನ್ನ ಪಾಲಿಗೆ ಪುಸ್ತಕಾಲಯಗಳೇ ದೇವಾಲಯ, ಗ್ರಂಥಗಳೇ ದೇವರು. ಯಾವುದೇ ಬೇಸರ ಬೇಡ. ನಿನ್ನ ನಡೆ ಸರಿಯಾದದ್ದೇ." ಇನ್ನೇನು ಹೇಳುವುದು ಉಳಿದಿಲ್ಲ ಎಂದುಕೊಳ್ಳುತ್ತೇನೆ.

                              *******************************

                            ಪುಸ್ತಕಗಳು ನನ್ನ ನೆಚ್ಚಿನ ಸಂಗಾತಿಗಳು. ಅವುಗಳು ನನ್ನನ್ನು ನಗಿಸುತ್ತವೆ, ಅಳಿಸುತ್ತವೆ, ನಿಬ್ಬೆರಗಾಗಿಸುತ್ತವೆ, ಕುತೂಹಲ ಮೂಡಿಸುತ್ತವೆ, ವಿಷಾದ ಹೊಮ್ಮಿಸುತ್ತವೆ, ದಿಕ್ಕೆಟ್ಟು ಓಡುವಂತೆ ಮಾಡುತ್ತವೆ, ಕೈ ಹಿಡಿದು ನಡೆಸುತ್ತವೆ, ಚಿಂತನೆಗೆ ಹಚ್ಚಿ ಕೂರಿಸುತ್ತವೆ. ಕೊನೆಗೆ ತಾವೇ ನಾನಾಗುತ್ತವೆ. ಪುಸ್ತಕಗಳಿಂದಾಗಿ ನಾನು ಹೊಸ ಹೊಸ ಊರುಗಳಿಗೆ, ಕೇರಿಗಳಿಗೆ ಭೇಟಿ ನೀಡಿದ್ದೇನೆ. ಬಗೆಬಗೆಯ ಜನರನ್ನು ನೋಡಿದ್ದೇನೆ, ಅವರೆಲ್ಲರೊಡನೆ ಬೆರೆತು ಕಲೆತಿದ್ದೇನೆ. ಥರಥರದ ಘಟನೆಗಳಿಗೆ ಸಾಕ್ಷಿಯಾಗಿದ್ದೇನೆ. ಇವೆಲ್ಲವುಗಳಿಂದಾಗಿ ಬಹಳಷ್ಟನ್ನು ಗಳಿಸಿಕೊಂಡಿದ್ದೇನೆ, ಉಳಿಸಿಕೊಂಡಿದ್ದೇನೆ, ಬೆಳೆಸಿಕೊಂಡಿದ್ದೇನೆ. ಹಾಗಾಗಿ ಪುಸ್ತಕಗಳೆಂದರೆ ನನ್ನ ಪಾಲಿಗೆ ಹೊಸ ಪ್ರಪಂಚವೊಂದು ತೆರೆದುಕೊಂಡಂತೆ.


Wednesday, 25 June 2014

ಎಲ್ಲಿ ಮಾಯವಾದರೋ..??


ಎತ್ತ ನೋಡಲಿ ಯಾರನ್ನೇ ಕಾಣಲಿ
ಕಾಣಸಿಗುವುದಿಲ್ಲ ಗೆಳೆಯ ನೀಳವೇಣಿಯರು
ಗುಂಗುರು ಕೂದಲನ್ನು ಉಂಗುರದಂತೆ ಸುತ್ತುತ್ತ
ಹಾವಿನಂಥ ಜಡೆಯನ್ನು ತಿರುಗಿಸುತ್ತಾ
ವೈಯ್ಯಾರದಿ ಸೊಂಟವ ಬಳುಕಿಸುತ್ತಾ
ಮುಡಿದ ಮಲ್ಲಿಗೆಯ ಕಂಪನ್ನು ಸೂಸುತ್ತಾ
ಹೆಜ್ಜೆಯ ಸದ್ದಿಗೆ ನಮ್ಮ ಹುಡುಗರ ಮನದಲ್ಲಿ
ಘಲ್ಲೆಂಬ ಗೆಜ್ಜೆ ನಾದವ ಹೊರಡಿಸುವ ಬೆಡಗಿಯರು

ಜಡೆಯೆಂದರೆ ಅದೇನೆಂದು ಕೇಳುತ್ತಾರಣ್ಣಾ
ಫ್ರೆಂಚ್, ಸ್ಟೆಪ್ ಕಟ್ಟುಗಳೆಂದರೆ ಕಣ್ಣು ಮಿಟುಕಿಸುತ್ತಾರೆ
ಜರತಾರಿ ಸೀರೆಯನುಟ್ಟು ಭರಪೂರ ಸಿಂಗರಿಸಿಕೊಂಡು
ಮಾರಮ್ಮನ ಹಾಗೆ ಕೂದಲನ್ನು ಇಳಿ ಬಿಡುವರಲ್ಲ
ದಿಲ್ಲಿಯವರು ಮಾತ್ರವಲ್ಲ ಹಳ್ಳಿಯವರೂ ಕೂಡ
ಬ್ಯಾಂಡು, ಕ್ಲಿಪ್ಪುಗಳನ್ನೆಲ್ಲ ಆಚೆ ಎಸೆದಿದ್ದಾರಂತೆ
ಗಾಳಿಗೆ ಕೂದಲು ಹಾರಾಡಿದಷ್ಟೂ ಸಂತೃಪ್ತಿಯಂತೆ

ಇಂದು ನಲ್ಲೆಗೆ, ಹೆಂಡತಿಗೆ ಹೂ ಕೊಡುವಂತಿಲ್ಲ
ಮುಡಿಯಲು ಜಡೆಯ ಹೆಡೆಯೇ ಇಲ್ಲ
ಎರಡು ನಿಮಿಷಗಳಲ್ಲೇ ಕೂದಲು ಅಲಂಕಾರಮಯ
ಉಳಿದ ಎರಡು ತಾಸು ಮುಖಕ್ಕೆ ಮೆತ್ತಿಕೊಳ್ಳಲು
ಇಲ್ಲದ ಹುಬ್ಬನ್ನು ಮತ್ತೆ ಮತ್ತೆ ತೀಡುವರು
ಇರುವ ಕೂದಲಿಗೆ ಕತ್ತರಿಯ ಪ್ರಯೋಗಿಸುವರು
ತರಳೆಯರ ಮರುಳಿಗೆ ತಿಳಿಹೇಳುವುದೆಂತು

ಫ್ಯಾಷನ್ನಿನ ಹೆಸರಿನಲ್ಲಿ ಹಗಲು ವೇಷದ ಕುಣಿತ
ಸ್ಟೈಲಿನ ಸ್ಮೆಲ್ಲುಗಳಲ್ಲಿ ಸ್ಮೈಲೇ ಇಲ್ಲವಾಗಿದೆ
ಆಡಂಬರದ ಮುಂದೆ ಅಂದಕಿಲ್ಲ ಆದ್ಯತೆ
ಇಂದು ಬಾಬ್ ಕಟ್ ನಾಳೆ ಬಾಯ್ ಕಟ್
ಬಿಟ್ಟರೆ ಗಾಂಧಿ ಕಟ್ಟನ್ನು ಮಾಡಿಸಿಯಾರು
ಕೊನೆಗೆ ಹೆಂಡತಿಯನ್ನೂ ಜಡೆ ಹಿಡಿದೆಳೆಯುವಂತಿಲ್ಲ
ಹುಡುಗರೇ ಜಡೆ ಹಾಕಿಕೊಳ್ಳುವಂತಾಗಬಹುದಲ್ಲ


ಹುಳು


ಅದ್ಯಾವಾಗ ನನಗೂ ಅರಿವಾಗದಂತೆ ಹೊಕ್ಕಿತೋ
ಶಾಂತವಾಗಿ ಹೃದಯವನ್ನು ಕೊರೆಯುತಿದೆ
ಮನಸ್ಸೆಂಬ ಕೋಟೆಯನ್ನು ಭೇದಿಸಿ
ಕಳ್ಳ ಹೆಜ್ಜೆ ಇಟ್ಟು ಲಗ್ಗೆ ಹಾಕಿತೋ
ಕಹಳೆ ಊದದೇ ಕದನಕ್ಕೆ ಸಜ್ಜಾಗಿದೆ

ನಾನದರ ಗೋಜಿಗೆ ಹೋಗಿಲ್ಲ
ಕೈ ಬೀಸಿ ಕರೆಯಲೂ ಇಲ್ಲ
ಮೈ ಸೋಕಿ ಮನ ತಣಿಸಲೂ ಇಲ್ಲ
ತಾನಾಗಿಯೇ ಬಯಸಿ ಹುಡುಕೊಂಡು ಬಂದಿಹುದಲ್ಲ
ಇದೀಗ ದೇಹವನ್ನು ಕುಟುಕುತ್ತಾ
ಭಾವಗಳನ್ನು ಕೈಗೆಟುವಂತೆ ಬೆಸೆಯುತ್ತ ಸಾಗಿದೆ

ಬೆಚ್ಚನೆಯ ಬೇಗುದಿಯಲ್ಲಿ ಮುಚ್ಚಟೆ ಮಲಗಿ
ಎಚ್ಚರದ ಹೊತ್ತಲ್ಲಿ ಹುಚ್ಚನಂತೆ ಕಚ್ಚುವುದು
ಹಸಿ ಉಸಿರಿನ ಬಿಸಿ ರಕ್ತವನ್ನು ಹೀರಿ
ಕನಸಿನಲ್ಲಿ ನವರಸಗಳನ್ನು ಒಸರುವುದು
ಮೈತುಂಬಾ ಪಾದರಸದಂತೆ ಹರಿದಾಡಿದಾಗ
ಎಲ್ಲ ಕಳೆದುಕೊಂಡರೂ ಏನೋ ಪಡೆದುಕೊಂಡಂತೆ

ಯಾರ ಅಣತಿಯಂತೆ ಬಂದು ಸೇರಿಕೊಂಡಿಹುದೋ
ಅವ ಮಹರಾಯ ಎಲ್ಲಿ ಅಡಗಿ ಕೂತಿಹನೋ
ತೆರೆ ಸರಿದು ಒಡೆಯನ ದರ್ಶನವಾದ ಹೊರತು
ಹುಳದ ಕೊರೆತಕ್ಕೆ ಕಲ್ಲು ಬೀಳುವಂತಿಲ್ಲ
ಗೀಚಿದರೂ ತೊಳಲಾಟದ ಆಟಕ್ಕೆ ಕೊನೆಯಿಲ್ಲ


Friday, 20 June 2014

ತೆಳ್ಳೇವುಗರಿಗರಿಯಾದ ರುಚಿಯಾದ ತಿಂಡಿ ಇದು
ಹವ್ಯಕರ ಮನೆಯ ತೆಳ್ಳನೆಯ ತೆಳ್ಳೇವು
ಹೀಗೆ ಮಡಿಚಿ ಬಾಯಲಿಟ್ಟು ಹಾಗೆ ಜಗಿದು ನುಂಗಿದರೆ
ಚಳಿಯ ಮಳೆಯಲ್ಲೂ ಬೆಚ್ಚನೆಯ ಕಾವು

ಬಿಸಿ ಬಿಸಿ ಕಾವಲಿಯ ಮೇಲೆ ಜರಿ ಜರಿ ಹಿಟ್ಟು
ಚೊರ್‍ರ್ ಎನ್ನುತ್ತಾ ನೃತ್ಯಗೈಯ್ಯುವ ಸೊಗಸು
ತಾಳ ಹಾಕಿದಂತೆ ಕುಣಿಯುವ ಘಮ್ಮ್ ಎನ್ನುವ ಕಂಪು
ಮೂಗಿಗೆ ಬಡಿದಾಗ ಓಡುವುದು ನಿನ್ನೆಯ ಮುನಿಸು

ಹೊರಗೊಂದು ಸುತ್ತು ಒಳಗೊಂದು ಸುತ್ತು
ಹಿಟ್ಟನ್ನು ಹರವಿದಾಗ ಬಂತು ಚೆಂದದ ವೃತ್ತ
ನಿಮಿಷಗಳ ನಂತರ ಎತ್ತಿಕೊಳ್ಳುವಂತೆ ಕೈ ಚಾಚಿದರೆ
ನಿದ್ದೆಯ ಕೊಡವಿ ಏಳುವುದು ಹಸಿವಿನ ಚಿತ್ತ

ಬೆಲ್ಲ-ತುಪ್ಪದ ಜುಗಲ್ ಬಂದಿಯ ಜೊತೆ
ತೆಳ್ಳೇವಿನ ರುಚಿ ಸವಿದವನಿಗೇ ಗೊತ್ತು ಗಮ್ಮತ್ತು
ಎರಡು ಖಾಲಿಯಾಗಿ ಮೂರನೆಯದನ್ನು ಬಾಯಿಗಿಟ್ಟಾಗ
ನಾಲಿಗೆಯೂ ತನ್ನಿರುವ ಮರೆಯುವ ಹೊತ್ತು

ಬೆಳ್ಳಂಬೆಳಿಗ್ಗೆ ಖಾಲಿ ಹೊಟ್ಟೆಯ ಖಾತೆ ತೆರೆಯಲು
ಇದಕ್ಕಿಂತ ಬೇರ್‍ಯಾವ ತಿಂಡಿಯಿಲ್ಲ ಯೋಗ್ಯ
ಆದರೂ ನೆನದವರ ಮನದಲ್ಲಿ ಅನ್ನುವಂತಿಲ್ಲ
ತೆಳ್ಳೇವು ಸವಿಯಲೂ ಪಡೆದು ಬಂದಿರಬೇಕು ಭಾಗ್ಯ


Thursday, 19 June 2014

ನಾನು ಬರೆಯುತ್ತೇನೆ


ನಾನು ಕವಯಿತ್ರಿಯಲ್ಲ
ಆದರೂ ಗೀಚುವೆನು ಪುಟ್ಟ ಕವಿತೆಯನ್ನು
ನಾನು ಕಥೆಗಾರಳಲ್ಲ
ಇಳಿಸುವೆ ಪಾತ್ರಗಳನ್ನು ಹಾಳೆಗಳಲ್ಲಿ
ನಾನು ಬರಹಗಾರ್ತಿಯೂ ಅಲ್ಲ
ಆದರೂ ಲೇಖನಿಯ ಹಿಡಿದು ಕೂರುವೆ

ನನ್ನ ಬರಹಗಳಿಗೆ ಬಂಧಗಳಿಲ್ಲ
ಶಾಸ್ತ್ರದ ಶಸ್ತ್ರಕ್ರಿಯೆ ಬೇಕಾಗಿಲ್ಲ
ಪ್ರಾಸಗಳ ಪರಿಹಾಸ್ಯದ ಪ್ರಸಂಗಗಳಿಲ್ಲ
ಭಾಷೆಯೆಂಬ ಬ್ರಹ್ಮಗಂಟಿನ ನಂಟಿಲ್ಲ
ನಾ ಸಿಕ್ಕು ತೊಳಲಾಡುತಿಹೆ ನೂರು ಬಂಧನಗಳಲ್ಲಿ
ಬರೆಯುವ ಅಕ್ಷರಗಳಾದರೂ ಮುಕ್ತವಾಗಿರಲಿ

ನನ್ನ ಕನಸುಗಳ ಹಸಿವು ತಣಿಯುವವರೆಗೂ
ಹೆಣೆಯುವೆ ಕಲ್ಪನೆಗಳನ್ನು ಪದಗಳಾಗಿ
ಭಾವಗಳ ಬಿಸಿ ಆರುವ ತನಕವೂ
ಬೇಲಿಯಿಲ್ಲದೆ ಬಂಧಿಯಾಗುವೆ ಬರವಣಿಗೆಯಲ್ಲಿ
ಯೋಚನೆಗಳ ಯಜ್ಞ ಸಮಾಪ್ತಿಯಾಗುವವರೆಗೆ
ಕೊನೆಯಾಗವು ನನ್ನ ಸಾಲುಗಳು


Monday, 16 June 2014

ನನ್ನ ಮನೆ


ಹಂಚಿನ ಮಾಡೇ ಬೇಕೆಂದಿಲ್ಲ
ಸೋಗೆಯ ಹೊದಿಕೆಯೇ ಸಾಕು
ಇಟ್ಟಿಗೆ ಸಿಮೆಂಟೇ ಎದ್ದು ನಿಲ್ಲಬೇಕಿಲ್ಲ
ಬಿದಿರಿನ ತಡಿಕೆಯು ತಡವಿದರೂ ಸರಿಯೇ
ನೆಲದಲ್ಲಿ ಹಸಿ ಮಣ್ಣು ಮೆತ್ತಿಕೊಳ್ಳಲಿ
ಎಷ್ಟಾದರೂ ಅದು ನನ್ನ ಮನೆ ತಾನೇ

ನಾ ಕಣ್ಣರಳಿಸಿ ಕೈ ತಟ್ಟಿದ
ಅಂಬೆಗಾಲಿಕ್ಕುತ ತೊದಲು ನುಡಿದ
ಪುಟ್ಟ ಹೆಜ್ಜೆಯಿಡುವಾಗ ಎಡವಿ ಬಿದ್ದ
ಕಥೆಯ ಕೇಳುತ್ತಾ ಕೈ ತುತ್ತು ತಿಂದ
ಗುಮ್ಮ ಬರುವನೆಂದು ಹೆದರಿ ಮಲಗಿದ
ಅತ್ತು ಕರೆದು ರಂಪ ಮಾಡಿದ ತಾವು
ಅದು ನಾನಾಡಿ ಬೆಳೆದ ಮನೆ

ಮನಸಿನಲ್ಲಿ ಕಪ್ಪು ಮೋಡಗಳಿದ್ದರೂ
ಮನೆಯಂಗಳದಲ್ಲಿ ಸುರಿಯುವವು ಮಳೆಯಾಗಿ
ಹೃದಯ ಚುಚ್ಚುವ ಮುಳ್ಳುಗಳೆಲ್ಲ
ಮನೆಯ ಹಿಂದೆ ಹೂವಾಗಿ ಅರಳುವವು
ಕಣ್ಣಂಚಿನ್ನು ತೋಯಿಸುವ ಹನಿಗಳೆಲ್ಲ
ಮನೆಯೊಳಗಡೆ ಕನಸಾಗಿ ಕೂರುವವು
ಯಾಕೆಂದರೆ ಅದು ನನ್ನ ಮನೆ

ಆ ಹಚ್ಚ ಹಸಿರಿಗೆ ಉಸಿರನ್ನು ತಾಕಿಸುತ್ತ
ನೀರಿನ ಹರಿವಿಗೆ ನನ್ನಿರುವನ್ನು ತಿಳಿಸುತ್ತ
ಹಕ್ಕಿಗಳ ನಾದಕ್ಕೆ ದನಿಗೂಡಿಸುತ್ತ
ಹೂವುಗಳ ಚಂದಕ್ಕೆ ಬಣ್ಣ ಹಚ್ಚುತ್ತ
ಸೂರ್ಯನ ಕಿರಣಗಳಲ್ಲಿ ಚಂದ್ರನ ಬೆಳದಿಂಗಳಿನಲ್ಲಿ
ನನ್ನ ನಾ ಮರೆಯುವ ತಾಣ, ಅದು ನನ್ನ ಮನೆ

ತನ್ನದೆಂಬ ಸೂರು ಒಂದಿದ್ದರೆ
ಮನೆಯ ಮಗಳಿಗೆ ಅದೇ ಅರಮನೆಯಂತೆ
ಮೆಟ್ಟಿಲು ಹತ್ತುವ ಮೊದಲೇ
ಹೊಸ್ತಿಲ ದೀಪದಂತೆ ಬೆಳಗುವುದು ಜೀವವು
ಎಲ್ಲಿದ್ದರೇನು ಹೇಗಿದ್ದರೇನು
ಮನೆಗಿಂತ ಹಿರಿದಾದ ಸ್ವರ್ಗ ಬೇರುಂಟೇ..??


Friday, 13 June 2014

‘ಕರ್ಮ’ - ನಾ ಕಂಡಂತೆ


                       ‘ಕರ್ಮ’ದ ಕುರಿತಾಗಿ ಪ್ರಥಮ ಬಾರಿಗೆ ನಾನು ಓದಿದ್ದು ಶತಾವಧಾನಿ ಡಾ. ಆರ್. ಗಣೇಶ್ ಲಿಸನರ್ಸ್ ಆಂಡ್ ಸ್ಟೂಡೆಂಟ್ಸ್ ಕ್ಲಬ್ ಎಂಬ ಫೇಸ್ ಬುಕ್ಕಿನ ಗುಂಪೊಂದರಲ್ಲಿ. ಸತತವಾಗಿ ೩-೪ ದಿನಗಳು ಅಲ್ಲಿ ‘ಕರ್ಮ’ದ ಕುರಿತಾಗಿ ಪೋಸ್ಟ್ ಹಾಕುತ್ತಿರುವುದನ್ನು ಕಂಡು ಇದ್ಯಾವ ಹೊಸ ಕಾದಂಬರಿಯೆಂದು ಸ್ವಲ್ಪ ಕಣ್ಣಿನ ಜೊತೆ ತಲೆಯನ್ನು ಹಾಯಿಸಿ ಅಲ್ಲಿನ ವಿಮರ್ಶೆಗಳನ್ನು ಓದಿದಾಗ ಈ ಕಾದಂಬರಿಯನ್ನು ಮಿಸ್ ಮಾಡುವಂತಿಲ್ಲ ಎಂದು ಮನಸ್ಸು ನಿರ್ಧರಿಸಿತ್ತು. ಒಮ್ಮೆ ಯಾವುದಾದರೂ ಬುಕ್ ಓದಬೇಕೆಂದು ಮನಸ್ಸು ಪಟ್ಟು ಹಿಡಿಯಿತೆಂದರೆ ನಾವು ತಡಮಾಡುವವರೇ ಅಲ್ಲ. ಮೊದಲು ಬುಕ್ ಸ್ಟಾಲ್ ಗೆ ಹೋಗಿ ಅದನ್ನು ಖರೀದಿಸಿ ತರಬೇಕು. ಅಲ್ಲಿಯ ತನಕ ಚಡಪಡಿಕೆ ನಿಲ್ಲುವುದಿಲ್ಲ. ಆದರೆ ಆಗ ಸೆಮಿಸ್ಟರ್ ಎಕ್ಸಾಮ್ಸ್ ಪ್ರಾರಂಭವಾಗಿದ್ದವು. ಹೇಗಾದರೂ ಮಾಡಿ ಇನ್ನೊಂದು ವಾರ ತಡೆದು ತದನಂತರ ಕೊಪ್ಪಿಕರ್ ರೋಡ್ ಗೆ ಓಡಬೇಕು ಎಂದುಕೊಳ್ಳುತ್ತಲೇ ಚಡಪಡಿಕೆಯನ್ನು ಸಹಿಸಿಕೊಂಡದ್ದಾಯಿತು. ಆಮೇಲೆ ನೋಡಿದರೆ ಹುಬ್ಬಳ್ಳಿಯ ಯಾವ ಪುಸ್ತಕದ ಮಳಿಗೆಗೂ ‘ಕರ್ಮ’ದ ಸವಾರಿ ಬಂದೇ ಇಲ್ಲ. ಆನ್ ಲೈನ್ ಮೂಲಕ ಖರೀದಿಸಲು ಅಕೌಂಟಿನಲ್ಲಿ ಹಣವಿಲ್ಲ. ಬೆಂಗಳೂರಿನಿಂದ ತರಿಸಿಕೊಡಿರೆಂದು ರಿಕ್ವೆಸ್ಟ್ ಮಾಡಿಕೊಂಡು ಹುಬ್ಬಳ್ಳಿಯ ಸಪ್ನಾ ಬುಕ್ ಹೌಸ್ ಗೆ ಮೂರು ಬಾರಿ ಎಡ ತಾಕಿ ಬಂದದ್ದಾಯಿತು. ಎಲ್ಲ ಪ್ರತಿಗಳೂ ಆನ್ ಲೈನ್ ನಲ್ಲಿ ಸೇಲ್ ಆಗುತ್ತಿವೆ ಎನ್ನುತ್ತಾ ಅವರು ಕೈ ಚೆಲ್ಲಿದರು. ಥೋ, ಈಗ ಆನ್ ಲೈನ್ ನಲ್ಲಿಯೇ ಖರೀದಿಸಬೇಕೆಂದು ಸಪ್ನಾ ಆನ್ ಲೈನ್ ಮಳಿಗೆಯಲ್ಲಿ ತಡಕಾಡಿದರೆ ಅಲ್ಲಿ ‘ಔಟ್ ಆಫ್ ಸ್ಟಾಕ್’ ಎಂದು ತೋರಿಸುತ್ತಿತ್ತು. "ಒಂದು ಬುಕ್ ಸಲುವಾಗಿ ಇನ್ನು ಎಷ್ಟು ದಿನಗಳ ಕಾಲ ಕಾಯಲಿಕ್ಕಿದೆಯೋ. ಎಲ್ಲಾ ನನ್ನ ಕರ್ಮ" ಎಂದು ದಿನಕ್ಕೆ ಇಪ್ಪತ್ತು ಬಾರಿ ಹಳಿದುಕೊಂಡಿದ್ದೂ ಆಯಿತು. ಎರಡು ದಿನಗಳು ಕಳೆದ ನಂತರ ಸಪ್ನಾದಲ್ಲಿಯೇ ಆರ್ಡರ್ ಮಾಡಿದರೂ ‘ಕರ್ಮ’ ನನ್ನ ಕೈ ಸೇರಿದ್ದು ಐದು ದಿನಗಳ ನಂತರ. ಕೈಗೆ ಸಿಕ್ಕ ತಕ್ಷಣವೇ ಓದಲು ಕುಳಿತುಕೊಂಡೆ.

                                   ***************************************

                           "ನಂಬಿಕೆ ಸುಳ್ಳಾಗಬಹುದು ಶ್ರದ್ಧೆ ಸುಳ್ಳಾಗುವುದಿಲ್ಲ. ಇಂದಿಗೂ ಹೇಳ್ತೀನಿ ಯಾವತ್ತಿಗೂ ಹೇಳ್ತೀನಿ. ನಂಬಿಕೆ ಚಂಚಲ ಶ್ರದ್ಧೆ ಅಚಲವಾದದ್ದು. ಅರ್ಥ ಮಾಡಿಕೊಳ್ಳೊ ಮನಸ್ಥಿತಿ ಇಲ್ಲದವನಿಗೆ ನೂರು ತತ್ವ ಹೇಳಿದರೂ ಅಷ್ಟೇ."
                             ಕರ್ಮ ಕಾದಂಬರಿಯ ಪಾತ್ರಗಳಲ್ಲೊಂದಾದ ವೆಂಕಟೇಶ ಭಟ್ಟರ ಈ ಮಾತು ಕೇವಲ ಸುರೇಂದ್ರನನ್ನು ಮಾತ್ರವಲ್ಲ, ಓದುಗರನ್ನೂ ಕೂಡ ನಂಬಿಕೆ-ಶ್ರದ್ಧೆಗಳ ನೆಲೆಗಟ್ಟಿನಲ್ಲಿ ತಮ್ಮನ್ನು ತಾವೇ ಒಮ್ಮೆ ವಿಮರ್ಶಿಸಿಕೊಳ್ಳುವಂತೆ ಮಾಡುತ್ತದೆ. ಅಪ್ಪನ ಅಪರಕ್ರಿಯೆಗಳನ್ನು ನಡೆಸಲು ನಗರದಲ್ಲಿ ನೆಲೆಸಿದ್ದ ಹಿರಿಯ ಮಗ ಮನೆಗೆ ಬರುವುದರೊಂದಿಗೆ ಆರಂಭವಾಗುವ ಕಾದಂಬರಿ ಕೊನೆಯ ತನಕವೂ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೂತಕದ ಹದಿನೈದು ದಿನಗಳಲ್ಲಿ ನಡೆಯುವ ಘಟನೆಗಳು ನಿನ್ನೆ ಮೊನ್ನೆ ನಮ್ಮ ಮನೆಯಲ್ಲೇ ನಡೆದಿವೆಯೇನೋ ಎನ್ನುವಷ್ಟರ ಮಟ್ಟಿಗೆ ಕಾದಂಬರಿಯ ಕಥಾಹಂದರ ಮನಸ್ಸನ್ನು ಆವರಿಸಿಕೊಂಡು ಸುರೇಂದ್ರನೊಟ್ಟಿಗೆ ಓದುಗರೂ ತೊಳಲಾಡುವಂತಾಗುತ್ತದೆ. ಇನ್ನು ಕಾದಂಬರಿಯಲ್ಲಿನ ಒಂದೊಂದು ಪಾತ್ರಗಳು ಒಂದೊಂದು ಕಥೆ ಹೇಳುತ್ತವೆ. ಒಂದೊಂದು ಜೀವನ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ. ವಾಸ್ತವ ಬದುಕಿನ ಘೋರವನ್ನು ಕಣ್ಣ ಮುಂದೆ ತೆರೆದಿಡುತ್ತವೆ. ಕಥೆಯಲ್ಲಿ ಬರುವ ಸ್ಥಳಗಳು, ಪರಿಸರಗಳು ಕೂಡ ಜೀವಂತ ಪಾತ್ರವಾಗಿ ನಿಲ್ಲುತ್ತವೆ. ಒಮ್ಮೆ ಕೈಗೆತ್ತಿಕೊಂಡರೆ ಕೊನೆಯ ಪುಟ ಬರುವ ತನಕವೂ ಕೆಳಗಿಡಲು ಸಾಧ್ಯವಿಲ್ಲ. ಓದಿ ಪುಸ್ತಕವನ್ನು ಮಡಿಸಿಟ್ಟ ಬಹಳ ದಿನಗಳವರೆಗೆ ‘ಕರ್ಮ’ ಕಾಡುತ್ತಲಿರುತ್ತದೆ.
                         ಕನ್ನಡದಲ್ಲಿ ಬಹಳ ದಿನಗಳ ನಂತರ ಒಂದು ಉತ್ತಮವಾದ ಕಾದಂಬರಿ ಬಂದಿದೆ. ಕನ್ನಡದ ಯುವ ಬರಹಗಾರರಲ್ಲಿ ಉತ್ತಮ ಕಾದಂಬರಿಕಾರರೇ ಇಲ್ಲ ಎಂದು ಬೇಸರ ಪಟ್ಟುಕೊಳ್ಳುವವರಿಗೆ ‘ಕರ್ಮ’ ಆಶಾ ಕಿರಣವಾಗಿ ಗೋಚರಿಸುವುದರಲ್ಲಿ ಸಂಶಯವೇ ಇಲ್ಲ. ಪ್ರೀತಿ, ಪ್ರೇಮ, ಕಾಲೇಜಿನ ಮೋಜು, ಐಟಿ ಲೈಫ್, ಕ್ಲಬ್ಬು, ರೆಸಾರ್ಟ್ - ಇವುಗಳನ್ನೇ ತಿರುಗಾ ಮುರುಗಾ ಚಿತ್ರಿಸಿ ದೊಡ್ಡ ಬರಹಗಾರರಂತೆ ಪೋಸು ಕೊಡುವ ಲೆಕ್ಕವಿಲ್ಲದಷ್ಟು ಜನರಿದ್ದಾರೆ. ‘ಕರ್ಮ’ ಓದಿ ಮುಗಿಸುವ ಹೊತ್ತಿಗೆ ಅವರನ್ನೆಲ್ಲ ಬರಹಗಾರರೆಂದುಕೊಂಡಿದ್ದು ನಮ್ಮದೇ ತಪ್ಪು ಎನ್ನುವ ಅರಿವು ಪ್ರತಿಯೊಬ್ಬನಲ್ಲೂ ಮೂಡುತ್ತದೆ. ಪ್ರಥಮ ಕಾದಂಬರಿಯಲ್ಲೇ ಇಂತಹ ಒಂದು ಮೌಲ್ಯಯುತವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಮೂಲ ಅರ್ಥಕ್ಕೆ ಎಲ್ಲೂ ಚ್ಯುತಿ ಬರದಂತೆ ತೂಕವುಳ್ಳ ಕಥೆ ಹೆಣೆದಿರುವುದಕ್ಕೆ ಪವನ್ ಪ್ರಸಾದ್ ರಿಗೆ ಸಲಾಂ ಹಾಕಲೇಬೇಕು. ಹಳ್ಳಿಯ ಜನರ ಸಂಪ್ರದಾಯ, ಸಂಸ್ಕಾರವನ್ನು ಇಂಚು ಇಂಚಾಗಿ ಹೇಳಿರುವ ಲೇಖಕರು ನಗರ ಜೀವನದ ವಾಸ್ತವಕ್ಕೆ ಕನ್ನಡಿ ಹಿಡಿದಂತೆ ಕೊಂಚವೂ ಉತ್ಪ್ರೇಕ್ಷೆಯ ಲೇಪನ ಇಲ್ಲದಂತೆ ಚಿತ್ರಿಸಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಅವರಿಗೆ ಎಲ್ಲ ವಿಮರ್ಶಕರೂ ಫೈರ್ ಬ್ರ್ಯಾಂಡ್ ಲೇಖಕ ಎಂದಿದ್ದಿರಬೇಕು. ಕೆಲವು ಸಾಲುಗಳಂತೂ ಎಲ್ಲ ಓದುಗರಿಗೆ ಸುಲಭವಾಗಿ ಕಲ್ಪನೆಗೆ ನಿಲುಕುವಂತಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳಲು ಅನುಭವಿ ಓದುಗರಿಗೆ ಮಾತ್ರವೇ ಸಾಧ್ಯ. ಮೇಲ್ನೋಟಕ್ಕೆ ಅವುಗಳಲ್ಲಿನ ಭಾವಗಳ ತೀವ್ರತೆ ಮನಸ್ಸಿಗೆ ನಾಟುವುದಿಲ್ಲ. ಉದಾಹರಣೆಗೆ,
            "ತನ್ನ ಎಂಜಲು ಮೇಲಕ್ಕೆ ಉಗುಳಿ ತನ್ನ ಮುಖದ ಮೇಲೆ ಬಿದ್ದಂತಾಯಿತು."
            "ಸುಳ್ಳನ್ನು ಸತ್ಯವೇ ಎಂದು ಮನಸ್ಸಿಗೆ ತಪ್ಪು ಹೇಳಿ ಕೊಟ್ಟೆ."
            "ಅಸ್ತಿಯನ್ನು ಒಮ್ಮೆ ಗಮನಿಸಿದ. ಕಂಠದ ಭಾಗದಲ್ಲಿ ಅಪ್ಪ ಎನ್ನುವ ಮೆಲುದನಿಯಿತ್ತು."
                   ಕರಣಂ ಸರ್, ನಿಜವಾಗಲೂ ನಿಮ್ಮ ಬರವಣಿಗೆಗೆ ಒಂದು ಹ್ಯಾಟ್ಸ್ ಆಫ್.

                                     *************************************

                         ‘ಈ ಹಿರಿಯರ ಸಂಪ್ರದಾಯ, ಆಚರಣೆಗಳೆಲ್ಲಾ ತೀರಾ ಗೊಡ್ಡು, ಅರ್ಥವಿಲ್ಲದ್ದು, ಆಧಾರವಿಲ್ಲದ್ದು’ ಎನ್ನುತ್ತಾ ಹೀಯಾಳಿಸುವ ಕಿರಿಯ ತಲೆಮಾರಿನವರೂ, ‘ನಮ್ಮ ಮಗ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್’, ‘ನಮ್ಮ ಮಗಳು-ಅಳಿಯ ಇಬ್ಬರೂ ಐಟಿ ಕಂಪೆನಿಯಲ್ಲಿದ್ದಾರೆ’ ಎಂದೆಲ್ಲಾ ಬೀಗುವ ಹಿರಿಯ ಜೀವಗಳೂ, ‘ಇಂದಿನ ತಾಂತ್ರಿಕ ಯುಗದಲ್ಲಿ ಹಳ್ಳಿಯ ಜೀವನಕ್ಕೆ ಬೆಲೆಯೇನಿದೆ..?? ಬದುಕೆಂದರೆ ಅದು ಪಟ್ಟಣದಲ್ಲಿ ಇರುವವರದ್ದು’ ಎನ್ನುತ್ತಾ ನಗರವಾಸದ ಕನಸು ಹೊತ್ತವರೂ, ಕನ್ನಡದಲ್ಲಿ ಉತ್ತಮ ಕಾದಂಬರಿಗಳ ಕಾಲ ಮುಗಿದೇ ಹೋಯಿತು ಎಂದೆಲ್ಲಾ ಅಲವತ್ತುಕೊಳ್ಳುವವರೂ, ಇಂಗ್ಲಿಷ್ ನವರೊ ಬರೆದದ್ದೇ ಕಾದಂಬರಿ ಎಂದುಕೊಂಡಿರುವ ಕನ್ನಡವೆಂದರೆ ಮೂಗುಮುರಿಯುವ ಕನ್ನಡಿಗರೂ, ಕೊನೆಯಲ್ಲಿ ಪ್ರತಿಯೊಬ್ಬರೂ ಒಮ್ಮೆ ‘ಕರ್ಮ’ವನ್ನು ಓದಲೇಬೇಕು. ಈಗಾಗಲೇ ಕಾದಂಬರಿ ಓದಿ ಮುಗಿಸಿರುವವರು ನಿಮ್ಮ ಸ್ನೇಹಿತರು, ಪರಿಚಯದವರು, ಬಂಧು-ಬಳಗದವರಿಗೆಲ್ಲಾ ತಪ್ಪದೇ ಓದುವಂತೆ ಹೇಳಿ. ಓದದೇ ಇರುವವರು, ಥೋ ಮಾರಾಯ್ರೆ ಬೇಗನೇ ಪುಸ್ತಕವನ್ನು ಖರೀದಿಸಿ ಓದಲು ಕುಳಿತುಕೊಳ್ಳಿ.

Monday, 9 June 2014

ಮೌನಿ ನಾನು


ಉಸಿರು ಬಿಸಿಯಾಗುವ ಪೂರ್ವದಲ್ಲೇ
ಶ್ವಾಸವಾಡದೇ ನಿಶ್ಶಬ್ದವಾಗುತಿಹೆ
ಸ್ವಪ್ನಗಳು ನೋಟಗಳನ್ನು ತುಂಬಿಕೊಳ್ಳದಂತೆ
ರೆಪ್ಪೆಗಳ ಬಾಗಿಲಿಗೆ ಬೀಗ ಜಡಿಯುತಿಹೆ
ಹೆಜ್ಜೆಗಳ ಅಚ್ಚು ಮೂಡುವ ಮೊದಲೇ
ನಡೆಯಿಲ್ಲದೇ ಸುಮ್ಮನೆ ನಿಲ್ಲುತಿಹೆ

ಮಾತುಗಳು ಪದಗಳಾಗುವ ಮುನ್ನವೇ
ಬಾಯಿತೆರೆಯದೇ ಮೂಕವಾಗುತಿಹೆ
ಭಾವಗಳು ಧ್ವನಿಯ ರೂಪ ತಾಳಬಾರದೆಂದು
ಕಪ್ಪುಬಿಳುಪಿನಲ್ಲೇ ಕರಗಿಹೋಗುತಿಹೆ
ಬಯಕೆಗಳು ಬಲಿತುಕೊಳ್ಳದಂತೆ ಜಾಗ್ರತೆಯಿಂದ
ಸಭ್ಯತೆಯ ಬೇಲಿಯಲ್ಲಿ ಬಂಧಿಸಿಹೆ

ಮಳೆಗಾಲದ ಮುಸ್ಸಂಜೆಯ ತಂಪಿನಲ್ಲೂ
ಕಡು ಬೇಸಿಗೆಯ ಕೆಂಪನ್ನು ಕಾಣುತಿಹೆ
ಅರಳಿನಿಂತ ಸುಮಗಳ ಘಮಘಮವೂ
ಘಾಟಿನಂತೆ ಮೂಗಿಗೆ ಬಡಿಯುತಿದೆ
ಅಲ್ಲೆಲ್ಲೋ ಇಂಪಾಗಿ ಹಾಡುವ ಹಕ್ಕಿಯ ಗಾನ
ಇಲ್ಲಿ ಕರ್ಣ ಕಠೋರವಾಗಿ ಕೇಳುತಿದೆ

ನಾನೆಲ್ಲವನ್ನೂ ನೋಡುತಿಹೆ ಎಲ್ಲರನ್ನೂ ಕೇಳುತಿಹೆ
ಹಗಲು ರಾತ್ರಿಗೆ ಸಾಕ್ಷಿಯಾಗಿ ಸಾಗುತಿಹೆ
ನನ್ನೊಳಗಿನ ಜೀವೆ ಸೆಲೆಗೆ ಮಾತ್ರ
ಸ್ಪಂದಿಸದೇ ಕಲ್ಲು ಬಂಡೆಯಾಗಿಹೆ
ಆದರೂ ಮೂಕವಾಗಿ ಮಾತುಗಳ ಮನೆ ಕಟ್ಟುತಿಹೆ
ಯಾಕೆಂದರೆ ಮೌನಿ ನಾನು

Saturday, 7 June 2014

ಶುಭೋದಯ


ನಿಶೆಯ ಪಾಳಿ ಮುಗಿದು ತೆರೆಗೆ ಸರಿದಿರಲು
ನಕ್ಷತ್ರಗಳ ನರ್ತನಕ್ಕೆ ಮಂಗಳವ ಹಾಡುತಲಿ
ನೇಸರನ ಕೇಸರವು ಕೆಂಬಣ್ಣ ಹೊಮ್ಮಿಸುತ
ರೆಕ್ಕೆಗಳನ್ನು ಬಿಚ್ಚಿ ಹಾರುವ ರಸಘಳಿಗೆಗೆ
ಸಾಕ್ಷಿಯಾಗಿಹ ಮನವೂ ಕೂಡ ನಲಿದಿದೆ
ನಿದ್ರಾದೇವತೆಗೆ ಸುಪ್ರಭಾತ ಹಾಡುವಂತಿಹ
ಹಕ್ಕಿಗಳ ಚಿಲಿಪಿಲಿಯ ಆ ಇಂಪು ರಾಗಕ್ಕೆ
ಅರಿವಿಲ್ಲದೇ ಬೆರಳುಗಳು ತಾಳವ ಹಾಕುತ್ತಿವೆ

ಅರಳಿ ನಿಂತ ಸುಂದರ ಸುಮಗಳ ಸೌರಭದಲ್ಲಿಹ
ಮತ್ತೇರಿಸುವ ಕಂಪಿನ ತಂಪಿನಲ್ಲಿ ಮೈಮರೆತು
ಬಿಸಿಯುಸಿರು ಹಸಿಯಾಗಿ ತೇಲಾಡುವಂತಾಗಿದೆ
ಮೈ ಸೋಕುವ ಗಾಳಿಯ ತರಂಗಕ್ಕೆ
ಝಲ್ಲೆಂದು ಕಂಪಿಸಿದೆ ರೋಮರೋಮವೂ
ಇದಲ್ಲವೇ ಸತ್ಯವಾದ ಸ್ವರ್ಗ ಸುಖವೆಂದರೆ..??

ಆಲಸ್ಯದ ಆಕಳಿಕೆ ಆರಿ ಹೋಗಿ
ಉತ್ಸಾಹದ ಉಸಿರೇ ಉಸಿರಾಟವಾಗಿ
ದಿನದ ಪ್ರತಿ ಕ್ಷಣವೂ ಆಹ್ಲಾದಕರವಾಗಿರಲಿ
ಶುಭೋದಯವು ಶುಭದಿನವಾಗಿ
ಎಲ್ಲರಿಗೂ ಶುಭ ತರಲಿ


ಡೈರಿ - ಪುಟ ೪೩

 

                        ಮಾರ್ಕೆಟ್ ಗೆ ಹೋಗಿದ್ದ ನಾನು ವಾಪಸ್ಸು ಬರುವುದನ್ನೇ ಕಾಯುತ್ತಿದ್ದಳೇನೋ ಎನ್ನುವಂತೆ ನಾನು ರೂಮ್ ಗೆ ಕಾಲಿಡುತ್ತಲೇ ಮೊದಲು ಮಾಡಿದಳು. "ಈ ಹೊತ್ತಲ್ಲಿ ಮನೇಲಿ ಇರ್ಬೇಕಿತ್ತು ಕಣೇ. ಶಿರಸಿಯಲ್ಲಿ ಇದ್ಕೊಂಡು ಮಳೆಗಾಲವನ್ನು ಎಂಜಾಯ್ ಮಾಡ್ಬೇಕು. ಅದರ ಮಜಾನೇ ಬೇರೆ. ಮಳೇಲಿ ಮೈ ನೆನೆಸ್ಕೊಳ್ಳೊದರ ಜೊತೆಗೆ ಆಮೇಲೆ ಹಲಸಿನ ಸಂಡಿಗೆ ತಿನ್ನೋದೆಲ್ಲಾ ಮಿಸ್ ಆಗ್ತಿದೆ ನೋಡು. ಇನ್ನು ಮಾವಿನ ಹಣ್ಣು, ಹಲಸಿನ ಹಣ್ಣು, ಬಕ್ಕೆ ಹಣ್ಣು, ಕೌಳಿ ಹಣ್ಣು, ಚಳ್ಳೆ ಹಣ್ಣು, ನೇರಳೆ, ಜಂಬುನೇರಳೆ - ಇನ್ನು ಎಷ್ಟೆಷ್ಟೆಲ್ಲಾ ಮಿಸ್ ಆಗ್ತಿದಾವೆ ನೋಡು." ಅವಳು ಮುಖ ಊದಿಸಿಕೊಂಡಳು.
                    "ಉಳಿದ ಹಣ್ಣಿನ ಕತೆ ಗೊತ್ತಿಲ್ಲ ನನಗೆ. ಆದರೆ ನೇರಳೆ ಹಣ್ಣು ಮಿಸ್ ಆಗುವುದಿಲ್ಲ. ಇಲ್ಲಿ ನೋಡು." ನಾನು ನನ್ನ ಬಲಗೈಲಿದ್ದ ಚೀಲದಿಂದ ಸಣ್ಣ ಪ್ಲಾಸ್ಟಿಕ್ ಕವರ್ ಒಂದನ್ನು ಹೊರತೆಗೆದು ಅವಳಿಗೆ ಕೊಟ್ಟೆ. ಅದರ ತುಂಬಾ ನೇರಳೆ ಹಣ್ಣುಗಳಿದ್ದವು.
                   "ವಾಹ್, ಇದೆಲ್ಲಿ ಸಿಕ್ಕಿತೇ ಮಾರಾಯ್ತಿ..??" ಅವಳು ಹಣ್ಣೊಂದನ್ನು ಬಾಯಿಗೆ ಹಾಕಿಕೊಳ್ಳುತ್ತಾ ಕೇಳಿದಳು.
                         "ಅಪ್ಸರಾ ಥಿಯೇಟರ್ ಮುಂದೆ ಹೆಂಗಸೊಬ್ಬಳು ಮಾರಾಟ ಮಾಡ್ತಾ ಇದ್ದಳು. ಕಾಲು ಕಿಲೋಗೆ ಇಪ್ಪತ್ತೈದು ರೂಪಾಯಿಗಳು." ನಾನೂ ಹಣ್ಣು ತಿನ್ನುತ್ತಾ ಉತ್ತರಿಸಿದೆ.
                     "ಚಿಕ್ಕಂದಿನಲ್ಲಿ ನೇರಳೆ ಹಣ್ಣು ಕೆಳಗೆ ಬಿದ್ದಿದ್ದು ಕಂಡರೆ ಸಾಕು, ಥಟ್ಟನೇ ಮರ ಎಷ್ಟು ಎತ್ತರವಿದೆ ಅಂತಾ ತಲೆ ಎತ್ತಿ ನೋಡ್ತಿದ್ವಿ. ಹತ್ತುವಂತಿದ್ದರೆ ಮರುಕ್ಷಣವೇ ನಾವು ನೆಲವ ಬಿಟ್ಟಿರುತ್ತಿದ್ದೆವು. ಎತ್ತರದ ಮರವಾದರೆ ಮನೆಯವರಿಗೋ, ಕೆಲಸದವರಿಗೋ ದಂಬಾಲು ಬೀಳುವುದು, ಹತ್ತಿ ಹಣ್ಣು ಕೊಯ್ದು ಕೊಡಿ ಅಂತ. ಎಲ್ಲ ಮಕ್ಕಳೂ ಒಟ್ಟಾಗಿ ಕುಳಿತು ತಿನ್ನುವುದಾಗಿತ್ತು. ಆಮೇಲೆ ಯಾರ ನಾಲಿಗೆ ಜಾಸ್ತಿ ನೀಲಿಯಾಯಿತೆಂದು ಒಬ್ಬರ ನಾಲಿಗೆಯನ್ನು ಇನ್ನೊಬ್ಬರು ಪರೀಕ್ಷಿಸುವುದು. ಇದನ್ನೆಲ್ಲಾ ಮಾಡಿ ಅದೆಷ್ಟು ವರ್ಷವಾಯಿತೋ. ಮನೇಲಿದ್ದಿದ್ರೆ ಮರ ಹತ್ತಿ ಕುಳಿತು ಬೇಜಾರು ಬರೋವಷ್ಟು ತಿನ್ನಲಿಕ್ಕೆ ಆಗ್ತಿತ್ತು. ಈಗ ನೋಡು, ದುಡ್ಡು ಕೊಟ್ಟು ಕೊಂಡುಕೊಳ್ಳೊ ಹಾಗಾಯ್ತು."
                  "ಬಿಡು, ಈಗ ನಾವಿಬ್ಬರೂ ಒಬ್ಬರ ನಾಲಿಗೆಯನ್ನು ಒಬ್ಬರ ಪರೀಕ್ಷಿಕೊಂಡು ಯಾರ ನಾಲಿಗೆ ಜಾಸ್ತಿ ನೀಲಿಯಾಗಿದೆಯೆಂದು ನೋಡೋಣ. ಬೇಗ ಬೇಗ ತಿನ್ನು."


Friday, 6 June 2014

ಮತ್ತೊಮ್ಮೆ ಮಗುವಾಗಬೇಕಿದೆ


ಮತ್ತೊಮ್ಮೆ ಹುಟ್ಟಬೇಕೆನಿಸಿದೆ ಕಂದಮ್ಮನಾಗಿ
ಕೈಕಾಲು ಆಡಿಸುತ್ತ ಪಿಳಿ ಪಿಳಿ ನೋಡುತ್ತ
ಬೊಚ್ಚು ಬಾಯಿ ಅರಳಿಸಿ ನಗಬೇಕಿದೆ
ತೊದಲು ಮಾತಿನಲ್ಲಿ ಎಲ್ಲರನೂ ನಗಿಸುತ್ತ
ಅಂಬೆಗಾಲಿಕ್ಕುತ ಎಲ್ಲ ಕಡೆ ಸವಾರಿ ಗೈಯ್ಯುತ್ತ
ಮನೆಯಲ್ಲಿ ಮನಸಲ್ಲಿ ನೆಲೆಗೊಳ್ಳಬೇಕಿದೆ


ಅಮ್ಮನ ಕೈತುತ್ತನ್ನು ತಿಂದು ತೇಗಬೇಕಿದೆ
ಅವಳ ಮಡಿಲಲ್ಲಿ ಮಲಗಿ ಜೋಗುಳವ ಕೇಳಬೇಕು
ಅಪ್ಪನಿಂದ ಬಾರುಕೋಲಿನ ಪೆಟ್ಟು ತಿನ್ನಬೇಕು
ಅಜ್ಜನ ದೊಣ್ಣೆಯನ್ನು ಕುದುರೆ ಮಾಡಬೇಕಿದೆ
ಅಜ್ಜಿಯ ಕಥೆಗಳಲ್ಲಿ ನಾ ಕಳೆದುಹೋಗಬೇಕಿದೆ
ಮತ್ತೊಮ್ಮೆ ಆ ಮುಗ್ಧತೆಯನ್ನು ಸವಿಯಬೇಕಿದೆಪಾಟಿ ಕಡ್ಡಿ ಹಿಡಿದು ಅ ಆ ಇ ಈ ಬರೆಯಬೇಕು
ಚೀಲ ಹೊತ್ತು ಶಾಲೆಯ ಕಡೆ ಸಾಗಬೇಕು
ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಡಬೇಕಿದೆ
ಬೆಟ್ಟ ಗುಡ್ಡಗಳ ತಿರುಗಿ ಹೂವು ಹಣ್ಣು ಕೊಯ್ಯಬೇಕು
ಮಾವಿನಕಾಯಿ ಕದ್ದು ಬೇಲಿ ಹಾರಿ ಓಡಬೇಕು
ಮರಕೋತಿ ಆಡುವಾಗ ಬಿದ್ದು ಗಾಯ ಮಾಡಿಕೊಳ್ಳಬೇಕು


ಆಲೋಚನೆಗಳು ಅರಳಿರದ ಭಾವನೆಗಳು ಬಲಿತಿರದ
ಬಾಲ್ಯವದು ಜೀವನದ ಅತಿ ಸುಂದರ ಕಾವ್ಯ
ಹೊಳಪು ಕಣ್ಣುಗಳಿಂದ ಸುತ್ತಲೂ ಬೆಳಕನ್ನೇ ಕಾಣುತ
ಸ್ವಚ್ಛಂದ ಚಿತ್ತದೊಂದಿಗೆ ನಲಿದಾಡುವ ಕವಿತೆ
ಇಪ್ಪತ್ತರ ಈ ಬದುಕು ಸಾಕಾಗಿಹೋಗಿದೆ
ಮತ್ತೊಮ್ಮೆ ನಾನು ಮಗುವಾಗಿ ಹೆಜ್ಜೆಯಿಡಬೇಕಿದೆ


Thursday, 5 June 2014

ನನ್ನನ್ನು ಉಳಿಸು


ನನ್ನ ಮಡಿಲಲ್ಲಿಟ್ಟುಕೊಂಡು ನಿನ್ನ ಪೋಷಿಸಿದೆ
ಸವಿ ತುತ್ತು ತಿನಿಸಿದೆ, ಸಿಹಿ ನೀರ ಕುಡಿಸಿದೆ
ನನ್ನ ಎದೆಯ ಮೇಲೆ ನೀ ಹೆಜ್ಜೆ ಇಟ್ಟಾಗ
ನೋವಾದರೂ ಕಂದನೆಂದು ಕರುಳು ಕೂಗಿತ್ತು
ಆದರೆ ಈಗ ನನ್ನ ಹೃದಯಕ್ಕೆ ಬೆಂಕಿ ಬಿದ್ದಿದೆ
ತಾಯಿಯನ್ನೇ ಕತ್ತರಿಸ ಹೊರಟಿಹೆ ನೀನು
ಸ್ವಾರ್ಥದ ಪರಮಾವಧಿಯಲ್ಲಿ ವಿವೇಕವು ಸತ್ತಿದೆ

ನನ್ನ ಸೆರಗಿಲ್ಲದೆ ನಿನ್ನ ನಿದ್ರೆಗೆ ಹಾಸಿಗೆಯಿಲ್ಲ
ನನ್ನ ಆಸರೆಯಿಲ್ಲದೆ ನಿನ್ನ ತಲೆಯ ಮೇಲೆ ಸೂರಿಲ್ಲ
ಹಸಿರಿನ ನೆರಳಿಲ್ಲದೇ ಉಸಿರು ನಿಂತೀತು ಹೇಗೆ..??
ಸೃಷ್ಟಿಯ ಸಮಷ್ಟಿಯೂ ನನ್ನ ಕುಡಿಗಳು
ಹೆಣೆದುಕೊಂಡಿದೆ ಬಂಧದ ಬಳ್ಳಿ ಎಲ್ಲರನ್ನು ಬಿಗಿದು
ಕೊಂಡಿಯೊಂದು ಕಳಚಿದರೆ ಪಾಶವೇ ಹರಿದಂತೆ
ಅರಿತುಕೊ ಹೇ ಮನುಜ ಈ ಸರಳ ಸತ್ಯವನ್ನು

ಹಸಿ ಮಣ್ಣನ್ನು ಕಾಂಕ್ರೀಟು ತಿಂದು ಹಾಕಿದೆ
ಮರಗಳ ತಂಪನ್ನು ಕಟ್ಟಡಗಳು ಬಿಸಿಯಾಗಿಸಿವೆ
ಸೂರ್ಯ ಇನ್ನಷ್ಟು ಕೆಂಪಾಗುತ್ತ ಸುಡುತಿಹನು
ನೀರು ಮತ್ತಷ್ಟು ಮರುಗುತ್ತ ಕರಗುತ್ತ ಸಾಗಿದೆ
ಅಬ್ಬರಿಸಿದೆ ಕಡಲು, ನಡುಗುತಿಹುದು ಒಡಲು
ಅತ್ಯಾಚಾರಕ್ಕೊಳಗಾಗಿದೆ ಈ ತಾಯಿಯ ಮಡಿಲು
ಇನ್ನೇನು ಉಳಿದಿಲ್ಲ ಸರ್ವನಾಶದ ಹೊರತು

ಇನ್ನಾದರೂ ಕಣ್ತೆರೆದು ನನ್ನತ್ತ ನೋಡು
ಸುತ್ತಲೂ ಚೆಲ್ಲಿಹ ಕೆಂಪು ವರ್ಣವನ್ನು ಹಸಿರಾಗಿ ಮಾಡು
ಬೆಂಗಾಡಿನಲ್ಲಿ ಭರವಸೆಯ ಹೂ ಅರಳಬೇಕು
ಏದುಸಿರಿನಲ್ಲಿ ಹೊಸ ಕನಸಿನ ಬಿಸಿ ಮೂಡಬೇಕು
ಅದಾಗಲೇ ಸಮಯ ಸಂದಿದೆ ಕಾಲ ಬಹುದೂರ ಸಾಗಿದೆ
ವಿನಾಶಕ್ಕೆ ಮಂಗಳ ಹಾಡು ನನ್ನನ್ನು ಉಳಿಸು


ಡೈರಿ - ಪುಟ ೪೨


                      "ಮನಂ ಮೂವಿ ಸಖತ್ತಾಗಿದೆ ಕಣೇ. ನೀನು ಮಿಸ್ ಮಾಡ್ಕೊಂಡೆ. ಒಂದೇ ಕುಟುಂಬದ ಮೂರು ತಲೆಮಾರಿನ ಮುಖಗಳನ್ನು ಒಟ್ಟಿಗೇ ಸ್ಕ್ರೀನ್ ನಲ್ಲಿ ನೋಡೋದಕ್ಕೆ ಖುಷಿ ಆಗತ್ತೆ." ನಾನು ರೂಮಿನೊಳಗೆ ಕಾಲಿರಿಸುತ್ತಲೇ ಜೋರು ದನಿಯಲ್ಲಿ ಹೇಳಿದೆ.
                      "ಏನು ಮಾಡಲಿ ಮಾರಾಯ್ತಿ..?? ಹಾಳು ಕಾಲೇಜಿನವರು ರಜೆಯಲ್ಲೇ ಪ್ರೊಜೆಕ್ಟ್ ಕೆಲಸವನ್ನು ಮಾಡಬೇಕೆಂದಿದ್ದಾರಲ್ಲಾ. ಇಲ್ಲದೇ ಹೋಗಿದ್ದರೆ ನಾನು ಖಂಡಿತ ಬರುತ್ತಿದ್ದೆ." ರೂಮ್ ಬೇಸರ ಪಟ್ಟುಕೊಂಡು ಹೇಳಿದಳು.
                    "ಅಯ್ಯೋ, ನೀನು ಬೇಜಾರು ಮಾಡ್ಕೊಳೋದು ಯಾಕೆ..?? ಹೇಗಿದ್ದರೂ ರವಿವಾರ ಪ್ರೊಜೆಕ್ಟ್ ಕೆಲಸವಿರುವುದಿಲ್ಲವಲ್ಲಾ. ಆ ದಿನ ನಿಮ್ಮ ಕ್ಲಾಸ್ ಗ್ರೂಪ್ ಜೊತೆ ಹೋಗಿ ಬಂದರಾಯಿತು ಅಷ್ಟೆ." ಅವಳ ಸಮಸ್ಯೆಗೆ ನಾನು ಪರಿಹಾರ ಮಾರ್ಗವನ್ನು ಹೇಳಿದೆ.
                    "ಹಾಗೆಯೇ ಮಾಡೋಣ ಬಿಡು. ಈಗ ಫಿಲ್ಮ್ ಬಗ್ಗೆ ಹೇಳು."
                    "ಫಿಲ್ಮ್ ಸೂಪರ್ ಕಣೇ. ಜನ್ಮ ಜನ್ಮದ ಕಥೆಯಾದರೂ ಹೊಸ ಬಗೆಯದ್ದಾಗಿದೆ. ಅನಾವಶ್ಯಕ ಸೀನ್ ಗಳು, ಸಾಂಗುಗಳೆಲ್ಲಾ ಇಲ್ಲ. ಕಥೆಗೆ ಪೂರಕವಲ್ಲದ ಪಾತ್ರಗಳಿಲ್ಲ. ಕಾಸ್ಟ್ಯೂಮ್ ನಿಂದ ಹಿಡಿದು ಆಕ್ಟಿಂಗ್ ವರೆಗೂ ಎಲ್ಲವೂ ಸಂಪೂರ್ಣ ಕ್ಲಾಸ್. ಅಪ್ಪಟ ಕೌಟುಂಬಿಕ ಚಿತ್ರ ಎಂದರೆ ಹೀಗಿರಬೇಕು. ಅತಿಯಾದ ಸೆಂಟಿಮೆಂಟ್ ಇಲ್ಲ, ಆದರೂ ಮನ ಕರಗುವಂತಿದೆ. ನವಿರಾದ ಹಾಸ್ಯದ ಲೇಪನವಿದೆ. ಆದರೂ ಹೊಟ್ಟೆ ಹುಣ್ಣಾಗುವಂತೆ ನಗುವಂತಾಗುತ್ತದೆ. ಚಿತ್ರಕಥೆಯಲ್ಲಿ ಸೃಜನಶೀಲತೆಯಿರುವುದು ಕಂಡು ಬರುತ್ತದೆ. ಅಪ್ಪ-ಮಗ-ಮೊಮ್ಮಗನ ಕಾಂಬಿನೇಷನ್ ಚೆನ್ನಾಗಿ ಮೂಡಿ ಬಂದಿದೆ. ಕ್ಲೈಮಾಕ್ಸ್ ನಲ್ಲಿ ಅಕ್ಕಿನೇನಿ ಕುಟುಂಬದ ಇನ್ನೊಂದು ಮುಖ ಅಖಿಲ್ ನ ರಂಗ ಪ್ರವೇಶವೂ ಇದೆ. ಅಮಲಾ ಕೂಡ ಒಮ್ಮೆ ಮುಖ ತೋರಿಸಿ ಹೋಗುತ್ತಾರೆ. ನಾಗರ್ಜುನ್ ಗೆ ಮಾತ್ರ ವಯಸ್ಸು ಜಾಸ್ತಿಯೇ ಆಗುವುದಿಲ್ಲವೇನೋ. ನಾಗೇಶ್ವರ್ ರಾವ್ ಕೂಡ ಎಷ್ಟು ಲವಲವಿಕೆಯಿಂದ ನಟಿಸಿದ್ದಾರೆ. ನಿಜಕ್ಕೂ ಒಂದು ಡಿಫರೆಂಟ್ ಮೂವಿ. ಬಹಳ ದಿನದ ನಂತರ ಇಂತಹ ಒಂದು ಉತ್ತಮ ಸಿನೆಮಾ ಬಂದಿದೆ. ಮನಂ ಬಗ್ಗೆ ಕೆಮ್ಮಂಗಿಲ್ಲಾ ನೋಡು. ಆದರೆ ತಮ್ಮ ಕುಟುಂಬದ ಚಿತ್ರವನ್ನು ನೋಡುವ ಭಾಗ್ಯವನ್ನು ನಾಗೇಶ್ವರ್ ರಾವ್ ಪಡೆದಿರಲಿಲ್ಲ ಇರಬೇಕು. ಬಿಡುಗಡೆಯ ಮುನ್ನವೇ ಇಹಲೋಕ ತ್ಯಜಿಸಿದರಲ್ಲಾ ಪಾಪ. ಏನೇ ಆಗಲಿ, ಇಂಥ ಸದಭಿರುಚಿ ಚಿತ್ರವನ್ನು ನೀಡಿದ ನಿರ್ಮಾಪಕರಾದ ಅಕ್ಕಿನೇನಿ ಕುಟುಂಬಕ್ಕೂ, ಸಿನೆಮಾ ನಿರ್ದೇಶಕ ವಿಕ್ರಮ್ ಅವರಿಗೂ ನಾವು ಥ್ಯಾಂಕ್ಸ್ ಹೇಳಬೇಕು."

Wednesday, 4 June 2014

ಅರಳುತಿರು


ಮುದುಡಬೇಡ ಉಸಿರೇ ಎಂದಿಗೂ
ಅರಳುತಿರು ನೀ ಸದಾ
ನೋವೇ ಬರಲಿ ಗೆಲುವೇ ಸಿಗಲಿ
ನಗುವು ಮೂಡುತಿರಲಿ ಸದಾ

ಕೆನ್ನೆ ಮೇಲಿನ ಕಣ್ಣೀರಿನ ಹನಿಗಳಲ್ಲೂ
ಬಣ್ಣದ ಬೆಳಕಿನ ಪ್ರತಿಫಲನವಿದೆ
ಬಾಡಿ ಬೆಂಡಾದ ಗಲ್ಲದ ಬದಿಯಲ್ಲಿ
ಚಿಗುರಿ ಬಲಿಯುವ ನೆರಿಗೆಗಳಿವೆ
ಕಿವಿಯೋಲೆಯಲ್ಲಿ ಭರವಸೆಯ ಹೊಳಪಿದೆ
ಮೂಗಿನ ನತ್ತಿನಲ್ಲೂ ಆಶಯದ ಸೊಗಸಿದೆ
ಮುದುಡಬೇಡ, ಅರಳುತಿರು ನೀ ಸದಾ

ಕತ್ತಲಕೋಣೆಯಲ್ಲಿ ನೀ ಬಂಧಿಯಾದರೆ
ಸುಮವಾಗಿ ಸೌರಭವ ಹೊರ ಚೆಲ್ಲು
ಬೆಂಕಿಯ ಕಿಡಿ ನಿನ್ನ ಬಿಡದೇ ಸುಡುತ್ತಿದ್ದರೆ
ಜ್ವಾಲೆಯಾಗಿ ಬಾಹುಗಳನ್ನು ಹೊರಚಾಚು
ಮರುಭೂಮಿಯಲ್ಲಿ ಕಾಲು ಸವೆಸುತ್ತಿದ್ದರೆ
ಓಯಸಿಸ್ ನಂತೆ ಸೆಲೆಯಾಗಿ ನೆಲೆಯಾಗಿ ನಿಲ್ಲು
ಮುದುಡಬೇಡ, ಅರಳುತಿರು ನೀ ಸದಾ

ತಿರಸ್ಕಾರ, ಅವಮಾನಗಳೆಂಬ ಪದಗಳೇ
ಗಮ್ಯದ ಪಯಣಕ್ಕೆ ನಾಂದಿ ಹಾಡಬೇಕು
ಇಂದು ನಿನ್ನತ್ತ ಪರರೆಸೆವ ಕಲ್ಲುಗಳೇ
ನಾಳೆ ಯಶಸ್ಸಿಗೆ ಮೆಟ್ಟಿಲಾಗಿ ಕೂರಬೇಕು
ಕುಸಿದು ಕೂರದೇ ಸೆಟೆದು ಮುನ್ನಡೆ
ಇಟ್ಟ ಹೆಜ್ಜೆಗಳು ದಾರಿ ದೀಪವಾಗಿ ಬೆಳಗಬೇಕು
ಮುದುಡಬೇಡ, ಅರಳುತಿರು ನೀ ಸದಾ


ಕೊಂಡಿ


                     ಎಷ್ಟಾದರೂ ಅದು ತಾನು ಹುಟ್ಟಿ ಬೆಳೆದ ಮನೆ. ಆ ಮನೆಗೆ ಇನ್ನು ಕಾಲಿಡುವುದಿಲ್ಲವೆಂದು ನಿರ್ಧರಿಸುವಾಗ ತನಗದೆಷ್ಟು ಸಂಕಟವಾಗಿರಬೇಡ..?? ಮಗಳೆಂಬ ಪ್ರೀತಿ, ಕರುಣೆ ಹೆತ್ತವರಿಗೇ ಇಲ್ಲವೆನ್ನುವ ಘೋರ ಸತ್ಯ ಅರಿವಾದಾಗ ತನ್ನೊಡಲು ಹೊತ್ತಿ ಉರಿದಿತ್ತು. ಆಗ ಭರವಸೆ ಮೂಡಿಸಿದ್ದು "ಇನ್ನು ಮುಂದೆ ನಿನಗೆ ಎಲ್ಲವೂ ನಾನೇ" ಎಂದ ತನ್ನ ಕೈ ಹಿಡಿದವನ ಕಣ್ಣುಗಳಲ್ಲಿದ್ದ ಸ್ನೇಹ, ಪ್ರೇಮ. ಮನೆಯ ಮೇಲಿನ ಮೋಹವನ್ನು ಮನದಿನಿಯನ ಮಮತೆ ಮರೆಸಿ ಹಾಕಿತ್ತು. ಎಲ್ಲವನ್ನೂ ಬಿಟ್ಟು ಆತನ ಹಿಂದೆ ಸಾಗಿದ್ದೆ. ಅಂದಿನಿಂದ ಇಂದಿನವರೆಗೂ ಗಂಡನ ಮನೆಯೇ ತವರು ಮನೆಯೂ ಆಗಿದೆ. ಈಗ ಗಂಡನ ಮನೆಗೆ ಹೋಗಲು ಅಣಿಯಾಗಿ ನಿಂತಿರುವ ತನ್ನ ಮಗಳು ಅಮ್ಮಾ ಎಂದು ತನ್ನನ್ನು ತಬ್ಬಿ ಅಳುತ್ತಿರುವಾಗ ತನ್ನ ಕಣ್ಣಂಚಿನಲ್ಲೂ ನೀರು ಬಂದು ಹನಿಗಳಲ್ಲಿ ಒಂದು ಕ್ಷಣ ಹಳೆಯ ನೆನಪುಗಳ ಪ್ರತಿಬಿಂಬ ಮೂಡಿತ್ತು.


Monday, 2 June 2014

ಅನಾಥೆ


ಕೈತುತ್ತು ತಿನಿಸುವವರಿಲ್ಲ
ಕೈ ಹಿಡಿದು ನಡೆಸುವವರಿಲ್ಲ
ನಾ ನಡೆಯುವ ಹಾದಿಯಲ್ಲಿ
ದಟ್ಟೈಸಿಹ ಕತ್ತಲೆಯೇ ಸುತ್ತೆಲ್ಲ
ಹೆಜ್ಜೆ ಹೆಜ್ಜೆಗೂ ಒಂಟಿತನವು ಬಿಗಿದಪ್ಪುತಿದೆ
ನೆನಪಿಸುತ್ತ ನನಗೆ, ನಾನೊಬ್ಬಳು ಅನಾಥೆ

ದಣಿದು ಕುಳಿತರೆ ನೀರು ನೀಡುವವರಿಲ್ಲ
ಕುಸಿದು ಬಿದ್ದರೆ ಉಸಿರು ನೋಡುವವರಿಲ್ಲ
ಮೆಟ್ಟಿ ತುಳಿಯುವ ಕಾಲುಗಳೇ ಹೊರತು
ಎತ್ತಿ ಕೂರಿಸುವ ಹೆಗಲುಗಳಿಗೆ ಜೊತೆಯಿಲ್ಲ
ಕೂಗಳತೆಯಲ್ಲಿ ಕರೆ ಕೇಳಿದರೂ
ಕಿವುಡರಂತೆ ನಟಿಸುವ ನಟರೇ ಎಲ್ಲ

ಹೃದಯದಲ್ಲಿ ಹುಸಿ ಆಸೆ ಮೂಡಿಸಿ
ಭರವಸೆಯಲ್ಲಿ ಉಳಿದ ಉಳಿವ ಮಾತುಗಳು
ಕೃತಿಯ ಕೈಯ್ಯಲ್ಲಿ ಕಾಣಲಾಗದವು
ಎಲ್ಲ ಇದ್ದೂ ನನಗೆ ಏನು ಇಲ್ಲ
ಇದೊಂದು ಬಯಸದೇ ಬಂದ ಏಕಾಂತ
ಬದುಕೆಂಬ ಬೆಂಗಾಡಿನಲ್ಲಿ ಇದರದೇ ಸಿದ್ಧಾಂತ

ಅನಾಥೆಯೆಂದರೆ ಒಂಟಿಯಾಗಿ ಬಂದವಳಲ್ಲ
ಬೆಂಕಿ ಹಚ್ಚುವವರಿಲ್ಲದೇ ಬೂದಿಯಾಗುವವಳಲ್ಲ
ಅವಳು ಎಲ್ಲರೊಡನಿದ್ದೂ ಯಾರೂ ಇಲ್ಲದವಳು
ಕಣ್ಣಿದ್ದೂ ರೆಪ್ಪೆಯ ಕಾವಲು ಇಲ್ಲದಂತೆ
ಮನಸಿದ್ದೂ ಕನಸಿನ ಸಿಂಗಾರ ಇಲ್ಲದಂತೆ
ಜೀವನವಿದ್ದೂ ಜೀವವಿಲ್ಲದಂತೆ ಜೀವಿಸುವವಳು