Friday, 9 May 2014

ಡೈರಿ - ಪುಟ ೩೧

                                  
                            "ಇವತ್ತು ಆಕಾಶ ಶುಭ್ರವಾಗಿದೆ ನೋಡು. ನಿನ್ನೆ ಇದೇ ಹೊತ್ತಿಗೆ ನೋಡ್ಬೇಕಿತ್ತು ಮಳೆರಾಯನ ಆರ್ಭಟವನ್ನು. ನೀನೊಳ್ಳೆ ಕುಂಭಕರ್ಣಿ ಥರಾ ಮಲ್ಕೊಂಡಿದ್ದೆ. ಅಬ್ಬಬ್ಬಾ, ಅದು ಯಾವ ಪರಿಯ ಮಳೆ. ಒಳ್ಳೆ ನಮ್ಮ ಮಲೆನಾಡ ಕಡೆ ಜುಲೈ ತಿಂಗಳುಗಳಲ್ಲಿ ಬರತ್ತಲ್ಲಾ, ಆ ರೇಂಜ್ ಗೆ ಇತ್ತು. ಲಾಸ್ಟ್ ಇಯರ್ ಈ ಹೊತ್ತಿಗೆ ಇಷ್ಟು ಮಳೆ ಹೊಯ್ದಿಲ್ಲಾ ಅಲ್ವೇನೇ..??" ರೂಮ್ ಮೇಟ್ ಕಿಟಕಿಯಿಂದ ಹೊರಗಡೆ ನೋಡುತ್ತಾ ಹೇಳಿದಳು.
                      "ಕಳೆದ ವರ್ಷಕ್ಕಿಂತ ಈ ಸಲ ಹೊಯ್ದ ಬೇಸಿಗೆ ಮಳೆ ಪ್ರಮಾಣ ಹೆಚ್ಚಂತೆ. ಇದರ ಮರಿಣಾಮವಾಗಿ ಈ ವರ್ಷ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಹೊಯ್ಯೋ ಸಂಭವ ಇದೆಯಂತೆ.  ಛೇ, ನೀ ನನ್ನ ಎಬ್ಬಿಸ್ಬೇಕಿತ್ತು ಕಣೇ. ಮಳೇಲಿ ನೆನಿದೇ ಅದ್ಯಾವ ಕಾಲ ಆಯ್ತು ಗೊತ್ತಾ..?? ಖುಷಿಯಿಂದ ಆಟ ಆಡ್ಬೋದಿತ್ತು" ನಾನು ಅವಳನ್ನು ಆಕ್ಷೇಪಿಸುವಂತೆ ಹೇಳಿದೆ.
                          "ಮಾರಾಯ್ತಿ ಸಾಕು. ಮೊನ್ನೆ ಶಾಪಿಂಗ್ ಗೆಂದು ಕೊಪ್ಪಿಕರ್ ರೋಡಿನಲ್ಲಿಯೇ ಸಂಜೆ ೭ ಗಂಟೆಯ ತನಕ ಇದ್ದೆಯಲ್ಲಾ. ವಾಪಸ್ಸು ಬರುವಾಗ ಮಳೆ ಬಂದು ಪೂರ್ತಿಯಾಗಿ ಒದ್ದೆಯಾಗಿ ಬಂದಿದ್ದು ಮರೆತು ಹೋಯ್ತಾ..?? ಅವತ್ತು ನೆನೆದಿದ್ದು ಸಾಕಾಗಲಿಲ್ವಾ..?? ಅದೇನು ಮಳೇಲಿ ನೆನೆಯೋ ಹುಚ್ಚು ನಿನಗೆ ಅಂತಾ ಅರ್ಥ ಆಗಲ್ಲ."
                        "ಅವತ್ತು ಮನಃಪೂರ್ತಿ ನೆನೆಯಲಿಕ್ಕೆ ಆಗಲಿಲ್ಲ. ಅದಕ್ಕೆ ನಿನ್ನೆ ಮತ್ತೆ ಮಳೇಲಿ ಆಟ ಆಡ್ಬೇಕಿತ್ತು. ಮಳೇಲಿ ನೆನೆಯೋ ಮಜಾನೇ ಬೇರೆ. ಮೈ ಒದ್ದೆ ಆಗ್ತಾ ಹೋದಷ್ಟು ವಯಸ್ಸು ಕಮ್ಮಿ ಆಗ್ತಿದೆಯೇನೋ ಅನ್ಸತ್ತೆ. ನಾನಂತೂ ಸಣ್ಣ ಹುಡುಗಿ ಆಗ್ಬಿಡ್ತೀನಿ ನೋಡು. ಮಳೆಯಲ್ಲಿ ನೆನೆದಾಗ ತನು-ಮನಗಳಲ್ಲಿದ್ದ ಕಲ್ಮಶವೆಲ್ಲಾ ತೊಳೆದುಹೋದಂತಾಗಿ ರಿಫ್ರೆಶ್ ಆಗತ್ತೆ. ಮನಸ್ಸಿನಲ್ಲಿ ಏನೋ ಒಂದು ಬಗೆಯ ಶಾಂತತೆ, ಸಮಾಧಾನ ನೆಲೆಸತ್ತೆ. ನಿನಗೆ ಅದೆಲ್ಲ ಅರ್ಥ ಆಗಲ್ಲ. ನೆಕ್ಸ್ಟ್ ಟೈಮ್ ಮಳೆ ಬಂದಾಗ ನಾನು ನೀನು ಇಬ್ಬರು ಒಟ್ಟಾಗಿ ನೆನೆಯೋಣ. ಅವಾಗ ನೀನೇ ಅದರ ಎಫೆಕ್ಟ್ ಏನು ಅಂತ ತಿಳ್ಕೊತೀಯಾ."

              

No comments:

Post a Comment