Thursday, 8 May 2014

ಇರುವುದೆಲ್ಲವ ಬಿಟ್ಟು (ಭಾಗ - ೪)


                     ಪುಣೆಯ ಜಂಕ್ಷನ್ ತಲುಪಿದಾಗ ಸಂಜೆ ೭.೧೦. ಹಿಂದಿನ ಸತಾರಾ ಸ್ಟೇಷನ್ ನಿಂದಲೇ ಮಳೆರಾಯ ಗುಡುಗು ಮಿಂಚುಗಳ ಸಹಿತ ತನ್ನ ಪ್ರತಾಪವನ್ನು ತೋರಲು ಪ್ರಾರಂಭಿಸಿದ್ದ. ಪುಣೆ ಹತ್ತಿರವಾಗುತ್ತಿರುವಂತೆಯೇ ಆತನ ಗತಿ ಇನ್ನೂ ತೀವ್ರವಾಯಿತು. ಒಂದು ಕೈಯ್ಯಲ್ಲಿ ಸೂಟ್ ಕೇಸ್, ಇನ್ನೊಂದು ಕೈಯ್ಯಲ್ಲಿ ದೊಡ್ಡದೊಂದು ಲಗೇಜ್ ಬ್ಯಾಗುಗಳನ್ನು ಹೊತ್ತುಕೊಂಡು ಟ್ರೈನ್ ನಿಂದ ಪ್ಲಾಟ್ ಫಾರ್ಮ್ ಮೇಲೆ ಇಳಿಯುವಷ್ಟರಲ್ಲಿ ನನ್ನ ಮೈ ಪೂರಾ ತೊಯ್ದು ತೊಪ್ಪೆಯಾಗಿತ್ತು. ಸ್ಟೇಷನ್ ನಿಂದ ಹೊರಗೆ ಬಂದವಳೇ ಸೀದಾ ಆಟೋ ಒಂದನ್ನು ಹತ್ತಿ ಹೊಟೆಲ್ ಸಪ್ನಾಗೆ ಕರೆದೊಯ್ಯುವಂತೆ ಡ್ರೈವರ್ ಗೆ ನಿರ್ದೇಶಿಸಿದೆ. ಕಳೆದ ವರ್ಷ ಕುಟುಂಬದ ತೀರ ಹತ್ತಿರದ ಸ್ನೇಹಿತರ ಮನೆಯ ಮದುವೆ ಸಮಾರಂಭಕ್ಕೆಂದು ನಮ್ಮೊಂದಿಗೆ ಅಪ್ಪನ ಬ್ಯಾಂಕಿನ ಕೆಲವು ಸಹೋದ್ಯೋಗಿಗಳ ಕುಟುಂಬವು ಸೇರಿ ಸುಮಾರು ೨೦-೨೫ ಜನ ಕೂಡಿ ಬಂದಿದ್ದಾಗ ಎಲ್ಲರೂ ಮೂರು-ನಾಲ್ಕು ದಿನಗಳ ಕಾಲ ಅದೇ ಹೊಟೆಲ್ಲಿನಲ್ಲಿ ಉಳಿದುಕೊಂಡಿದ್ದೆವು. ಪುಣೆ ತಲುಪಿದ ನಂತರ ಇರುವುದಾದರೂ ಎಲ್ಲಿ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಸಪ್ನಾ ನನ್ನ ತಲೆಯಲ್ಲಿ ತನ್ನ ಬಿಂಬ ಮೂಡಿಸಿದ್ದಳು. ಕಳೆದೆರಡು ದಿನದಿಂದ ಅನುಭವಿಸಿದ ಮಾನಸಿಕ ತೊಳಲಾಟ, ನಿದ್ದೆಗೆಟ್ಟು ಕೆಂಪಾದ ಕಣ್ಣುಗಳು, ಭಾರವಾದ ತಲೆ, ಏನೂ ತಿನ್ನದೇ ತಾಳ ಹಾಕುತ್ತಿದ್ದ ಖಾಲಿ ಹೊಟ್ಟೆ, ಸತತ ೧೨ ಗಂಟೆಗಳ ಪ್ರಯಾಣದ ಆಯಾಸ - ಇವೆಲ್ಲವೂ ಒಟ್ಟಾಗಿ ಸೇರಿ ಹೊಟೆಲ್ ರೂಮಿನೊಳಗೆ ಕಾಲಿರಿಸಿದ ಕೂಡಲೇ ಮೆತ್ತನೆಯ ಹಾಸಿಗೆಯ ಮೇಲೆ ನಿದ್ರೆಗೆ ದೂಡಿದವು.
                             ಮರುದಿನ ಎದ್ದು ಸ್ನಾನ, ಉಪಹಾರವನ್ನು ಮುಗಿಸಿದವಳೇ ಹೊರಗೆ ಹೋಗಿ ಹೊಸದೊಂದು ಸಿಮ್ ಕಾರ್ಡ್ ಅನ್ನು ಖರೀದಿಸಿ ತಂದೆ. ಟ್ರೈನ್ ಹತ್ತುವ ಮೊದಲೇ ಹಳೆಯ ಸಿಮ್ ಅನ್ನು ಹಳಿಗಳ ಮೇಲೆ ಬಿಸಾಡಿಯಾಗಿತ್ತು. ಪರಿಚಿತರೆನ್ನುವ ಯಾರೊಬ್ಬರದೂ ಸಂಪರ್ಕ ನನಗೆ ಬೇಕಾಗಿರಲಿಲ್ಲ. ಇನ್ನು ಈಗ ತಾನೇ ತಂದಿದ್ದ ಹೊಸ ಸಿಮ್ ಆಕ್ಟಿವೇಟ್ ಆಗಲಿಕ್ಕೆ ೨೪ ಗಂಟೆಗಳಾದರೂ ಬೇಕು. ಅಲ್ಲಿಯ ತನಕ ಸುಮ್ಮನೇ ಕೂರುವುದೇ..?? ಯಾವುದಾದರೊಂದು ನೆಟ್ ಕಫೆ ಸಿಗುವುದೋ ಎಂದು ಹುಡುಕಿ ಹೊರಟೆ. ನಾನುಳಿದುಕೊಂಡಿದ್ದ ಸಪ್ನಾದಿಂದ ೧ ಕಿ. ಮೀ. ಅಂತರದಲ್ಲಿ ಸಿಕ್ಕಿತು ‘ಗ್ಲೋಬಲ್ ನೆಟ್ ಬ್ರೌಸಿಂಗ್’. ದಿನನಿತ್ಯದ ಅಗತ್ಯಗಳಿಗೆ ಸಾಕಾಗುವಷ್ಟು ಹಣವನ್ನಾದರೂ ನಾನು ಸಂಪಾದಿಸಿ ತೀರಲೇಬೇಕಿತ್ತು. ಎಷ್ಟು ದಿನವೆಂದು ಅಕೌಂಟಿನಲ್ಲಿದ್ದ ಹಣವನ್ನು ಉಪಯೋಗಿಸಿಕೊಳ್ಳುವುದು..?? ಹಾಗಂತ ಉದ್ಯೋಗವನ್ನರಸಿ ಹೊರಡಲು ನನಗಿರುವ ಅರ್ಹತೆಯಾದರೂ ಏನು..?? ಪದವಿ ಶಿಕ್ಷಣವನ್ನು ಅರ್ಧದಲ್ಲಿಯೇ ಬಿಟ್ಟು ಓಡಿ ಬಂದವಳಿಗೆ ಯಾರು ತಾನೇ ಕೆಲಸ ಕೊಡಲು ಮುಂದೆ ಬರುತ್ತಾರೆ..?? ಆಗ ನನ್ನ ತಲೆಗೆ ನೆನಪಾದದ್ದು ಎನ್ ಜಿ ಓ ಗಳು. ಅಲ್ಲಿ ಕೆಲಸ ಮಾಡಲು ಆಸಕ್ತಿ, ಶ್ರದ್ಧೆ, ಕರ್ತವ್ಯನಿಷ್ಠೆಗಳು ಬೇಕೆ ಹೊರತು ಪದವಿಯ ಸರ್ಟಿಫಿಕೇಟ್ ನ ಅಗತ್ಯವಿರುವುದಿಲ್ಲ. ಇಂಟರ್ ನೆಟ್ ನಲ್ಲಿ ತಡಕಾಡಿದಾಗ ಇಂಥ ನೂರಾರು ಎನ್ ಜಿ ಓ ಗಳ ಕುರಿತಾಗಿನ ಮಾಹಿತಿ ದೊರಕಿತು. ಅವುಗಳನ್ನೆಲ್ಲಾ ನೋಟ್ ಬುಕ್ ಒಂದರಲ್ಲಿ ಬರೆದಿಟ್ಟುಕೊಂಡು ರೂಮಿಗೆ ವಾಪಸ್ಸಾದೆ.
                              ಮುಂದಿನ ಎರಡು-ಮೂರು ದಿನಗಳು ಸಪ್ನಾದ ಹತ್ತಿರದಲ್ಲಿಯೇ ಇದ್ದ ೬-೮ ಎನ್ ಜಿ ಓ ಗಳಿಗೆ ಭೇಟಿ ನೀಡಿ, ಅಲ್ಲಿಯ ಮುಖ್ಯಸ್ಥರನ್ನು ಕಂಡು ಕೆಲಸಕ್ಕೆ ಸೇರುವ ನನ್ನ ಆಸಕ್ತಿಯನ್ನು ತಿಳಿಸಿ, ಅವರು ಇದರ ಕುರಿತು ಯೋಚಿಸಿ ಹೇಳುತ್ತೇವೆ ಎನ್ನುವ ಪ್ರಸಂಗಗಳಲ್ಲಿಯೇ ಕಳೆಯಿತು. ಅದೊಂದು ಕೆಲಸಕ್ಕೆ ಹೊರ ಹೋಗುವುದು ಬಿಟ್ಟರೆ ದಿನವಿಡೀ ಸದಾ ರೂಮಿನಲ್ಲಿ ನಾಲ್ಕು ಗೋಡೆಗಳ ಮಧ್ಯ ಕಾಲ ಕಳೆಯುವುದರಿಂದ ಆಲಸ್ಯವು ಉಂಟಾಗಿತ್ತು. ಸಂಪರ್ಕ ಕಡಿದುಕೊಂಡು ಕುಳಿತಿದ್ದರಿಂದ ಯಾರನ್ನೂ ನೋಡುವಂತಿಲ್ಲ, ಯಾರನೊಡನೆಯೂ ಮಾತನಾಡುವಂತಿಲ್ಲ. ಬೇಸರ, ಆಲಸ್ಯ, ಒಂಟಿತನ ಇದೆಲ್ಲವೂ ಸೇರಿ ನನ್ನನ್ನು ಪೂರ್ತಿ ಮಂಕಾಗಿಸಿತು. ಅದೊಂದು ದಿನ ಮಧ್ಯಾನ್ಹ ಧೋ ಎಂದು ಮಳೆ ಸುರಿಯುತ್ತಿರುವಾಗ ಮನದೊಳಗೆ ಮನೆ ಮಾಡಿದ್ದ ಮಂಕುತನವೆಲ್ಲವೂ ಕಣ್ಣೀರಿನ ರೂಪದಲ್ಲಿ ಹೊರಬಂದಿತು. ಒಂದರ್ಧ ಗಂಟೆ ಬಿಡದೇ ಅತ್ತೆ. "ನಾನು ಇಲ್ಲಿಗೆ ಬಂದಿದ್ದಾದರೂ ಏಕೆ..?? ಇಲ್ಲಿದ್ದು ಈಗ ಮಾಡುತ್ತಿರುವುದಾದರೂ ಏನು..?? ಎಲ್ಲರನ್ನೂ ದೂರವಾಗಿಸಿಕೊಂಡು ನಾನಿಲ್ಲಿ ಏನನ್ನು ಸಾಧಿಸಬೇಕಾಗಿದೆ..??" ಏನೇನೋ ವಿಚಾರಗಳು ತಲೆಯಲ್ಲಿ ಸುಳಿದು ನನ್ನ ಧೈರ್ಯವನ್ನು, ಆತ್ಮವಿಶ್ವಾಸವನ್ನು ಕಸಿದುಕೊಳ್ಳತೊಡಗಿದವು. ಹತ್ತು ನಿಮಿಷಗಳ ನಂತರ ಒಮ್ಮೆಲೇ ಅಳು ನಿಂತಿತು. ಅಲ್ಲಿದ್ದರೆ ಏನು ಸಾಧಿಸಲಾಗುವುದಿಲ್ಲ ಎಂದಲ್ಲವೇ ನಾನು ಓಡಿ ಬಂದಿದ್ದು..?? ಇಲ್ಲಿಯೂ ಅದೇ ಕಥೆಯಾದರೆ ಹೇಗೆ..?? ಕಳೆದುಕೊಂಡೆನೆಂದುಕೊಂಡಿದ್ದ ಧೈರ್ಯ, ಸ್ಥೈರ್ಯಗಳೆಲ್ಲವೂ ವಾಪಸ್ಸು ಮನಸ್ಸಿನ ಅಂಗಳಕ್ಕೆ ಹೆಜ್ಜೆ ಇಟ್ಟವು. ಕಣ್ಣೀರು ಒರೆಸಿಕೊಳ್ಳುತ್ತಲೇ ಇನ್ನೆಂದೂ ಮತ್ತೆ ಅಳಲಾರೆನೆಂದು ಧೃಢ ನಿಶ್ಚಯ ಮಾಡಿದೆ.
                             ಮರುದಿನ ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಒಂದು ಎನ್ ಜಿ ಓ ದಿಂದ ಆಫೀಸಿಗೆ ಬರುವಂತೆ ಕರೆ ಬಂತು. ಸಂದರ್ಶನವೇನೂ ಇಲ್ಲದೇ ಸುಲಭದಲ್ಲಿ ನನಗೆ ಕೆಲಸ ದೊರೆಯಿತು. ಅದು ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಹುಟ್ಟು ಹಾಕಿದ ‘ವಿ - ದ ಯೂತ್’ ಎನ್ನುವ ಸರ್ಕಾರೇತರ ಸಂಸ್ಥೆ. ಕ್ಯಾಂಪುಗಳು, ತರಗತಿಗಳು, ಆಟ-ಪಾಠಗಳು, ಸಣ್ಣ ಪುಟ್ಟ ಸಾಮಾಜಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ತಮ್ಮ ಪ್ರತಿಭೆ, ಸಾಮರ್ಥಗಳ ಬಗ್ಗೆ ಅರಿವು ಮೂಡಿಸುವುದಲ್ಲದೇ ಹಕ್ಕು, ಕರ್ತವ್ಯಗಳ ಕುರಿತು ತಿಳಿಹೇಳಿ ಅವರನ್ನು ಹಂತ ಹಂತವಾಗಿ ನಾಯಕತ್ವವೆಂಬ ಮುಖ್ಯವಾಹಿನಿಗೆ ಕರೆದೊಯ್ಯುತ್ತಿದ್ದರು. ಸಂಸ್ಥೆಯು ಅಂಗವಿಕಲರ ಶಾಲೆಯೊಂದಕ್ಕೆ ಸಹ ತಮ್ಮಿಂದಾದ ಸಹಾಯವನ್ನು ನೀಡುತ್ತಿತ್ತು. ನನಗೆ ಮಕ್ಕಳೊಂದಿಗೆ ಕೆಲಸ ಮಾಡುವುದೆಂದರೆ ಯಾವಾಗಲೂ ಇಷ್ಟವಾದ ಸಂಗತಿಯೇ. ತಕ್ಕಮಟ್ಟಿಗೆ ಉತ್ತಮವಾದ ಸಂಬಳ ನೀಡುವ ಜೊತೆಗೆ ನನ್ನ ಊಟ, ವಸತಿಗಳಿಗೆಲ್ಲ ಸಂಸ್ಥೆಯೇ ವ್ಯವಸ್ಥೆ ಮಾಡಿಕೊಟ್ಟಿತು. ಇದಕ್ಕಿಂತ ಉತ್ತಮ ಅವಕಾಶ ಬೇರೆಡೆ ಸಿಗಲಾರದೆಂದು ನನಗೆ ಮನವರಿಕೆಯಾಗಿದ್ದರಿಂದ ಸಂತಸ, ಸಮಾಧಾನಗಳಿಂದಲೇ ಕೆಲಸಕ್ಕೆ ಸೇರಿಕೊಂಡೆ.
                          ಮುಂದಿನ ನಾಲ್ಕು ವರುಷಗಳು ಹೇಗೆ ಕಳೆದವೆಂದೇ ತಿಳಿಯದಷ್ಟು ನಾನು ಪೂರ್ತಿಯಾಗಿ ನನ್ನನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಕಾರ್ಯದಲ್ಲಿ ನನಗೆ ಅರಿವಿಲ್ಲದಂತೆ ನಾನೂ ತರಬೇತಿಗೊಳಗಾದೆ. ನನ್ನ ಮೈಮನಗಳನ್ನು ಕವಿದಿದ್ದ ಕಪ್ಪು ಮೋಡಗಳು ನಿಧಾನವಾಗಿ ಚದುರಿ ಸೂರ್ಯರಶ್ಮಿಯ ಕಿರಣಗಳು ಮೂಡತೊಡಗಿದವು. ಆಗಾಗ ಹಳೆಯ ದಿನಗಳ ನೆನಪು ಕಾಡುತ್ತಿದ್ದರೂ ಅದೇಕೋ ಮತ್ತೆ ಅಲ್ಲಿಗೆ ಮರಳಲು ಮನಸ್ಸಾಗುತ್ತಿರಲಿಲ್ಲ. ಎಲ್ಲವೂ ಸರಿಯಾಗಿ ಸಾಗುತ್ತಿರುವಾಗ ಹೊಸದೊಂದು ಸಮಸ್ಯೆ ಪ್ರಾರಂಭವಾಯಿತು. ತಿಂಗಳ ಹಿಂದಷ್ಟೇ ಹೊಸದಾಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದ. ದಿನ ಕಳೆದಂತೆ ಆತನ ಕಾಟ ವಿಪರೀತವಾಯಿತು. ಕೊನೆಗೆ ನಾನು ತಾಳಲಾರದೇ ನಾನು ಆತನ ಕುರಿತು ದೂರು ನೀಡಿ, ಆತ ಅಸಭ್ಯವಾಗಿ ವರ್ತಿಸುವುದು ನಿಜವೆಂದು ಸಾಬೀತಾಗಿ, ಆತನನ್ನು ಕೆಲಸದಿಂದ ಕಿತ್ತೆಸೆದದ್ದೂ ಆಯಿತು. ಈ ಘಟನೆ ನನ್ನ ಮನಸ್ಸಿನಲ್ಲಿ ಏನೋ ಒಂದು ಅವ್ಯಕ್ತ ಭಯವನ್ನು ಮೂಡಿಸಿತು. ಇದ್ದ ಒಂದು ತಲೆಬಿಸಿಯೂ ದೂರವಾಯಿತೆಂದುಕೊಳ್ಳುವಷ್ಟರಲ್ಲಿ ಅನಿರೀಕ್ಷಿತವಾದ ಪ್ರಸಂಗವೊಂದು ಎದುರಾಯಿತು. ಅದೊಂದು ದಿನ ನಾನು ನನ್ನ ಸಹೋದ್ಯೋಗಿಯೊಬ್ಬಳ ಜೊತೆ ವ್ಯಕ್ತಿತ್ವ ವಿಕಸನದ ಕುರಿತಾದ ಕೆಲವು ಅವಶ್ಯ ಪುಸ್ತಕಗಳನ್ನು ಖರೀದಿಸಲೆಂದು ಪುಸ್ತಕಾಲಯವೊಂದರತ್ತ ಹೆಜ್ಜೆ ಹಾಕುತ್ತಿದ್ದಾಗ ಒಮ್ಮೆಗೇ ಯಾರೋ ನನ್ನನ್ನು ಬಲವಾಗಿ ಕೈಹಿಡಿದು ಎಳೆದರು. ಯಾರೆಂದು ನೋಡಲು ಹಿಂತಿರುಗಿದ ನಾನು ಗಕ್ಕನೇ ನಿಂತುಬಿಟ್ಟೆ. (ಮುಂದುವರೆಯುವುದು)


No comments:

Post a Comment