Tuesday, 6 May 2014

ಡೈರಿ - ಪುಟ ೨೯


                      "ಇವತ್ತು ಎಷ್ಟು ಗಂಟೆಗಿದೆ ನಿಮ್ಮ ಫೇರ್ ವೆಲ್ ಫಂಕ್ಷನ್..??" ಪ್ರತಿ ಬುಧವಾರವೂ ಏಳೂವರೆಗೆ ರೂಮಿನಿಂದ ಕಾಲು ಕೀಳುತ್ತಿದ್ದ ನಾನು ಇಂದು ಒಂಭತ್ತಾದರೂ ಇನ್ನು ಮಲಗೇ ಇದ್ದುದನ್ನು ನೋಡಿ ರೂಮ್ ಮೇಟ್ ಪ್ರಶ್ನಿಸಿದಳು.
                    "ಯಾವನಿಗೊತ್ತು ಮಾರಾಯ್ತಿ..?? ಮಧ್ಯಾಹ್ನ ಎಲ್ಲರಿಗೂ ಫ್ರೀ ಆಗಿ ಒಳ್ಳೆ ಊಟ ಹಾಕ್ತಾರಂತೆ. ಫಂಕ್ಷನ್ ಗೆ ಹೋಗ್ತೀವೋ ಇಲ್ವೋ ಗೊತ್ತಿಲ್ಲ. ಆದರೆ ಊಟ ಅಂತೂ ಮಿಸ್ ಮಾಡಲ್ಲ. ಹಾಗಂತ ನಾವೆಲ್ಲಾ ಫ್ರೆಂಡ್ಸ್ ಡಿಸೈಡ್ ಮಾಡಿದೀವಿ." ನಾನು ಆಕಳಿಸುತ್ತಲೇ ಉತ್ತರ ಕೊಟ್ಟೆ.
                       "ಅದ್ಭುತ ಯೋಜನೆ. ನಿಮಗೆ ಊಟದ ಚಿಂತೆ. ಪಾಪ, ಸೀನಿಯರ್ಸ್ ಗೆಲ್ಲಾ ಎಲ್ಲರನ್ನೂ ಬಿಟ್ಟು ಹೋಗ್ಬೇಕಲಾ ಅನ್ನೋ ಬೇಜಾರು".
                      "ಅದು ಇದ್ದದ್ದೇ. ಮೂರು ವರ್ಷಗಳ ಕಾಲ ಒಟ್ಟಾಗಿ ಇದ್ದವರಿಗೆ ಬಿಟ್ಟು ಹೋಗಲು ಬೇಸರವಾಗದೇ ಇರುತ್ತದಾ..?? ಎಷ್ಟೊಂದು ಸಂತಸ, ಸಂಭ್ರಮ, ದುಃಖ, ನೋವು, ಜಗಳಗಳ ಕ್ಷಣಗಳು ನೆನಪಿನ ಆಟೋಗ್ರಾಫ್ ನಲ್ಲಿ ದಾಖಲಾಗಿರುತ್ತವೆ. ಒಟ್ಟಾಗಿ ಬಂಕ್ ಮಾಡಿ ಬೈಸಿಕೊಂಡಿದ್ದು, ಎಕ್ಸಾಮ್ ಹಿಂದಿನ ದಿನ ಎದ್ದು ಬಿದ್ದು ಓದಿದ್ದು, ರೀವ್ಯೂ ಚೆನ್ನಾಗಿ ಆಗಿಲ್ಲವೆಂದು ಚಿಕ್ಕಮಕ್ಕಳಂತೆ ಅತ್ತಿದ್ದು, ಬೆಳಿಗ್ಗೆ ಹಾಸ್ಟೆಲಿನಲ್ಲಿ ತಿಂಡಿ ತಿನ್ನದೇ ಕ್ಲಾಸಿಗೆ ಹೋದಾಗ ಗೆಳತಿ/ಯ ತನ್ನ ಬಾಕ್ಸ್ ಅನ್ನು ಕೊಟ್ಟಿದ್ದು, ಸೀನಿಯರ್ಸ್ ಇಂದ ರ್‍ಯಾಗಿಂಗ್ ಮಾಡಿಸಿಕೊಂಡಿದ್ದು, ಜ್ಯೂನಿಯರ್ಸ್ ಗೆ ರ್‍ಯಾಗ್ ಮಾಡಿದ್ದು, ಪ್ರೊಜೆಕ್ಟ್ ಕೆಲಸದ ಸಮಯದಲ್ಲಿ ಗ್ರುಪ್ ಮೆಂಬರ್ಸುಗಳಲ್ಲೇ ಶೀತಲ ಸಮರ ನಡೆದಿದ್ದು, ಬರ್ತ್ ಡೇ ದಿನ ಅವನೋ/ಳೋ ಗಿಫ್ಟು ಕೊಟ್ಟಿದ್ದು, ಕ್ಲಾಸಿನ ಮಂದಿಯೆಲ್ಲಾ ಸೇರಿ ಫಿಲ್ಮ್ ಗೆ ಹೋದಾಗ ಇಡೀ ಟಾಕೀಸ್ ನಮ್ಮದೇ ಎಂಬಂತೆ ಎಂಜಾಯ್ ಮಾಡಿದ್ದು - ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ ಬಿಡು. ಅದರಲ್ಲೂ ಪದವಿಯ ಕಾಲವೆಂದರೆ ವಿದ್ಯಾರ್ಥಿ ಜೀವನದ ಒಂದು ಘಟ್ಟ ಮುಗಿದ ಹಾಗೆ. ಮುಂದೆ ಹೈಯರ್ ಸ್ಟಡೀಸ್ ಗೆ ಎಷ್ಟು ಜನ ತಾನೇ ಹೋಗ್ತಾರೆ..?? ಇಷ್ಟು ದಿನಗಳ ಕಾಲ ಸ್ನೇಹಿತರು, ಟ್ರಿಪ್ಪು, ಫೆಸ್ಟು - ಅದೂ ಇದೂ ಅಂತಾ ಯಾವುದೇ ಟೆನ್ಷನ್ ಇಲ್ದೇ ಹಾಯಾಗಿರ್ತಾರೆ. ಈಗ ಇವುಗಳಿಗೆಲ್ಲಾ ಟಾಟಾ ಹೇಳಿ ಜವಾಬ್ದಾರಿಯುತ ಜೀವನಕ್ಕೆ ಎಂಟ್ರಿ ಹೊಡಿಬೇಕು. ಯಾರಿಗೆ ತಾನೇ ಬೇಜಾರಾಗಲ್ಲ..??"
                            "ಅದು ನಿಜಾನೇ ಕಣೇ. ಮುಂದಿನ ವರುಷ ಇದೇ ಹೊತ್ತಿಗೆ ನಮಗೂ ಟಾಟಾ ಹೇಳಲಿಕ್ಕೆ ತಯಾರಿ ನಡೆದಿರತ್ತೆ. ನೀನು ಈಗ ಹಾಸಿಗೆ ಬಿಟ್ಟೇಳು ಮಾರಾಯ್ತಿ. ಹೊಟ್ಟೆ ಆಗಿನಿಂದ ತಾಳ ಹಾಕ್ತಾ ಇದೆ. ಬಹುಶಃ ಇವತ್ತು ಸೆಟ್ ದೋಸೆ ಮಾಡಿರ್ತಾರೆ. ಬೇಕಾದಷ್ಟು ತಿನ್ನಬಹುದು."


No comments:

Post a Comment