Wednesday, 7 May 2014

ಡೈರಿ - ಪುಟ ೩೦

                              
                           "ಇವತ್ತು ಸೆಕೆಂಡ್ ಪಿಯುಸಿ ರಿಸಲ್ಟ್ ಕಣೇ. ಬೆಳಿಗ್ಗೆ ೮.೩೦ಗೆ ನೆಟ್ ಅಲ್ಲಿ ನೋಡ್ಬೋದು ಅಂತಾ ನಿನ್ನೆ ಮನೆಗೆ ಫೋನ್ ಮಾಡಿದಾಗ ತಮ್ಮ ಹೇಳ್ತಿದ್ದ." ಮೆಸ್ ಗೆ ತಿಂಡಿ ತಿನ್ನಲು ಹೋಗಿದ್ದ ನನ್ನ ರೂಮ್ ಮೇಟ್ ವಾಪಸ್ಸು ರೂಮಿಗೆ ಬಂದ ಕೂಡಲೇ ನಾನು ನಿದ್ದೆಯಿಂದ ಎದ್ದಿರುವುದನ್ನು ಕಂಡು ಉತ್ಸಾಹದಿಂದ ಹೇಳಿದಳು.
                        "ನಿಂದೇ ರಿಸಲ್ಟ್ ಬರತ್ತೆ ಅನ್ನೋ ಥರ ಹಾರಾಡ್ತಾ ಇದೀಯಲ್ಲ ಮಾರಾಯ್ತಿ. ನನ್ನ ಕಸಿನ್ ಒಬ್ಬಳಿಗೆ ಸೆಕೆಂಡ್ ಪಿಯುಸಿ ಮುಗೀತು. ಅವಳದ್ದು ಏನಾಯ್ತು ರಿಸಲ್ಟ್ ಅಂತಾ ನೋಡ್ಬೇಕು. ಎಲ್ಲಿ, ನ್ಯೂಸ್ ಪೇಪರ್ ನಲ್ಲಿ ಏನಿದೆ ನೋಡು." ನಾನು ಹಾಸಿಗೆಯನ್ನು ಮಡಿಸುತ್ತಾ ಹೇಳಿದೆ.
                             "ಇಂದು ದ್ವಿತೀಯ ಪಿಯುಸಿ ಫಲಿತಾಂಶ: ಎಸ್ಸೆಮ್ಮೆಸ್, ವೆಬ್ ಸೈಟ್ ನಲ್ಲೂ ರಿಸಲ್ಟ್ ನೋಡಿ, ೬.೧೫ ಲಕ್ಷ ವಿದ್ಯಾರ್ಥಿಗಳ ಹಣೆಬರಹ ನಿರ್ಧಾರ. ನೋಡು, ಪಾಲಕರಿಗೆ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಎನ್ನುತ್ತಾ ಪುಟಗಟ್ಟಲೇ ಬರೆಯುವ ಪೇಪರಿನವರೇ ಈ ಥರ ಹಣೆಬರಹ ನಿರ್ಧಾರ ಅಂತೆಲ್ಲಾ ಬರೆಯೋದಾ..?? ಒಳ್ಳೆ ಪಿಯುಸಿ ಮಕ್ಕಳ ಭವಿಷ್ಯವೆಲ್ಲಾ ಆರು ಉತ್ತರ ಪತ್ರಿಕೆಗಳಲ್ಲಿ ಈಗಾಗಲೇ ಬರೆದಿಡಲಾಗಿದೆ ಅನ್ನೋ ಥರ. ಮೊದಲೇ ಪಾಪ ಪಿಯುಸಿ ರಿಸಲ್ಟ್ ಏನಾದ್ರೂ ಚೆನ್ನಾಗಿ ಆಗಿಲ್ಲ ಅಂತಂದ್ರೆ ಜೀವನ ಮುಗಿದೇ ಹೋಯ್ತು ಅಂದ್ಕೊಂಡು ಪ್ರಾಣ ಕಳೆದುಕೊಳ್ಳೋರು, ಬೇರೆ ಏನಾದ್ರು ಅನಾಹುತ ಮಾಡಿಕೊಳ್ಳೋರು ಬೇಕಾದಷ್ಟು ಮಂದಿ ಇದ್ದಾರೆ. ಅಂಥದ್ದರಲ್ಲಿ ಇವರು ಬೇರೆ ಈ ಥರ ಶೀರ್ಷಿಕೆ ನೀಡೋದಾ..??" ಸ್ವಲ್ಪ ಸಿಟ್ಟಿನಿಂದ ಹೇಳಿದಳಾಕೆ.
                         "ದ್ವಿತೀಯ ಪಿಯುಸಿ ಅನ್ನೋದು ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಹಂತವೇ ಹೊರತು ಅದೇ ಜೀವನವಲ್ಲ. ಆ ಹಂತದಲ್ಲಿ ಅಕಸ್ಮಾತ್ ಆಗಿ ನಮ್ಮ ಹೆಜ್ಜೆ ಎಡವಿತೆಂದರೆ ಬದುಕಿನ ಪ್ರಯಾಣವನ್ನೇ ಕೊನೆಗೊಳಿಸಿಕೊಳ್ಳುವುದು ತೀರಾ ಮೂರ್ಖತನದ ಕೆಲಸ. ಯಾರಿಗೆ ಗೊತ್ತು ಅಂದು ಎಡವಿದ ಹೆಜ್ಜೆಯೇ ಮತ್ತೊಂದು ಹಂತದಲ್ಲಿ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು. ಸೋಲು ಗೆಲುವಿಗೆ ಸೋಪಾನ ಆಗಬೇಕೆ ಹೊರತು ಸೋತು ಹೋದಾಗ ಮತ್ತೆ ಮೇಲೇಳದೇ ಕೂರುವುದು ಸರಿಯಾದುದಲ್ಲ. ಇದನ್ನೆಲ್ಲಾ ಪದೇ ಪದೇ ಹೇಳುತ್ತಾ ಕೌನ್ಸೆಲಿಂಗ್ ಸಂಸ್ಥೆಗಳು ದುಡ್ಡು ಮಾಡಿಕೊಂಡಿದ್ದಷ್ಟೆ ಬಂತು. ನಮ್ಮ ಪಿಯುಸಿ ಜೊತೆಗೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾತ್ರ ಈ ಸರಳ ಸತ್ಯದ ಅರಿವಾಗುವುದು ಇನ್ಯಾವ ಕಾಲಕ್ಕೋ. ರಿಸಲ್ಟ್ ಅನೌನ್ಸ್ ಆಗತ್ತೆ ಅಂದ್ರೆ ಇದೊಂದು ಹೆದರಿಕೆ ನೋಡು. ಮಾರನೇ ದಿನ ಇನ್ನೆಷ್ಟು ಮಂದಿಯ ಆತ್ಮಹತ್ಯೆಯ ಸುದ್ದಿ ಓದಬೇಕೆನ್ನುವುದು."
                       "ಅಯ್ಯೋ, ಇದರಲ್ಲಿ ವಿದ್ಯಾರ್ಥಿಗಳದೊಂದೇ ತಪ್ಪಿಲ್ಲ. ಪಾಲಕರು, ಸ್ನೇಹಿತರು, ನೆಂಟರಿಷ್ಟರು - ಎಲ್ಲರೂ ಆತನೋ/ಅವಳೋ ಫೇಲ್ ಆದರೆ ಏನೋ ದೊಡ್ಡ ಪಾಪ ಮಾಡಿದಂತೆ ವರ್ತಿಸುತ್ತಾರಲ್ಲಾ. ಅದನ್ನು ಬಿಟ್ಟು ಮಕ್ಕಳಿಗೆ ಸಮಾಧಾನ, ಧೈರ್ಯ ಹೇಳಬೇಕು ತಾನೇ..?? ಆಗಲಾದರೂ ಆತ್ಮಹತ್ಯೆಯ ಕೇಸುಗಳು ಕಡಿಮೆಯಾಗಬಹುದು."
                         "ಅದು ಕೂಡ ನಿಜ ಬಿಡು" ನಾನು ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಲು ಅಣಿಯಾಗುತ್ತಾ ನುಡಿದೆ.


1 comment:

  1. "ಯಾರಿಗೆ ಗೊತ್ತು...ಇಂದು ಎಡವಿದೆ ಹೆಜ್ಜೆ ಮುಂದೊಂದು ದಿನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು" <----- ಇದಕ್ಕೆ ನಾನೆ ಉದಾಹರಣೆ.. ನಾ ಎಡವಿದಿದೆ ಈಗ ಚೊಲೋ ಕಂಪನೀಲಿ ಕೆಲಸ ಮಾಡ್ಕಂಡು ಸುಖವಾಗಿ ಇದ್ದೆ...

    ReplyDelete