Tuesday, 6 May 2014

ಅಭಿಸಾರಿಕೆ


ನೀಲಾಕಾಶದ ಬಿಳಿಯ ಮೋಡಗಳಿಗೂ
ರವಿಯ ಸ್ವರ್ಣ ಕಿರಣಗಳ ಹೊಳಪಿದೆ
ನಿಶೆಯ ಕಪ್ಪಂಚಿನ ಸೀರೆಯ ಸೆರಗಿಗೂ
ಚಂದ್ರಮನ ಬೆಳದಿಂಗಳ ಚಿತ್ತಾರವಿದೆ
ನಿನ್ನ ಸ್ವಾಗತಿಸಿ ದೃಷ್ಟಿ ನಿವಾಳಿಸಲು
ಹುಚ್ಚೆದ್ದು ಹಚ್ಚಿಸಿಕೊಂಡ ಅಂಗೈ ಮೇಲಿನ
ಮದರಂಗಿಯ ಕೆಂಪಿನಲ್ಲಿ ಕಂಪಿಲ್ಲ
ಕಾದ ಕ್ಷಣಗಳಲ್ಲಿ ಬೀಸಿದ ಗಾಳಿಯು
ಹೊತ್ತು ಎತ್ತಲೋಕೊಂಡೊಯ್ದಿತಲ್ಲ

ಹಸಿ ಕನಸುಗಳು ಸವಿ ನಿದ್ದೆಯ ಕೆಡಿಸಲು
ಹಣೆಯ ಸೂರ್ಯನ ರೂಪವ ನೆನೆಯುತ
ಮೋಹದ ಬಿಸಿನೀರಿನಲಿ ಮಿಂದು
ಮನದ ಪರದೆಯ ತೆರೆಯ ಹಿಂದೆ
ಶೃಂಗಾರದ ಪ್ರಸಂಗವನ್ನು ನಡೆಸಿ
ಇದೀಗ ರಂಗದ ಎದುರಲ್ಲಿ ನಡುಮಧ್ಯ
ನಿನ್ನ ಬರುವಿಕೆಗಾಗಿ ಕಾದುಕುಳಿತಿಹೆ
ಮಂಗಳವ ಹಾಡುವ ಕ್ಷಣ ಹತ್ತಿರವಾಗಿದೆ
ನೀನೇಕೆ ಇನ್ನೂ ದೂರವೇ ಉಳಿದಿಹೆ..??

ಕೈ ಬಳೆಗಳೂ ಮಾತು ನಿಲ್ಲಿಸಿವೆ
ಕಾಲ್ಗೆಜ್ಜೆಗೂ ನೃತ್ಯಗೈದು ದಣಿವಾಗಿದೆ
ಕಿವಿಯ ಮುತ್ತಿನ ಝುಮಕಿಯೂ ಮೌನವಾಗಿದೆ
ನಿನ್ನ ಹೆಜ್ಜೆ ಸಪ್ಪಳದ ಗುಂಗಿನಲ್ಲಿ
ಕಣ್ಣಂಚಿನ ಕಾಡಿಗೆಯೂ ಬಿಳುಪಾಗುತಿದೆ
ತೀಡಿದ ಹುಬ್ಬುಗಳೂ ಬಾಡುತಲಿವೆ
ರೆಪ್ಪೆಗಳು ಮೆಲ್ಲನೆ ಮಲಗಲು ಹವಣಿಸುತ್ತಿವೆ
ನಿನ್ನ ನೋಡುವ ನಿರೀಕ್ಷೆಯಲ್ಲಿ ಮಾಗಿ
ಉಸಿರುಸಿರು ಬಸಿರಾಗಿ ಕಾಯುತಿದೆ

ಮನದೊಳಗಿನ ಒಲವು ಹೊಲಬಾಗುವ ಮುನ್ನ
ತನುವೊಳಗಿನ ಲಜ್ಜೆಯು ಆರಿಹೋಗುವ ಮುನ್ನ
ಒಡಲೊಳಗಿನ ಬಯಕೆಯು ಬತ್ತುವ ಮುನ್ನ
ಬೇಗ ಬಂದು ಸೇರು ನನ್ನ ಇನಿಯ
ಕುಡಿಯಾಗಿ ಚಿಗುರಿದ ಕನಸಿನ ಹೂವು
ಕಾಯಾಗಿ ಬೆಳೆದು ಇಂದು ಹಣ್ಣಾಗಿ ತೂಗಿದೆ
ಹೃದಯದ ಪ್ರತಿ ಮಿಡಿತವೂ ಬೆರೆತಿರುವಾಗ
ಈ ದೂರ, ಈ ವಿರಹ ಇನ್ನೇತಕ್ಕೆ..??
ಬಂದು ಸೇರು ಈ ಕ್ಷಣವೇ ಕಾದಿಹಳಿಲ್ಲಿ ಅಭಿಸಾರಿಕೆ


3 comments:

  1. "ಅಭಿಸಾರಿಕೆ" ಉತ್ತಮ ಪದದ ಅನ್ವೇಷಣೆ. ಅಭಿಸಾರಿಕೆಯ ವಿರಹ ವೇದನೆ ತುಂಬಾ ಸುಂದರವಾಗಿ ಅಭಿವ್ಯಕ್ತವಾಗಿದೆ. ಚೆನ್ನಾಗಿದೆ. "ಕಾಲ್ಗೆಜ್ಜೆಗೂ ನೃತ್ಯಗೈದು ಸುಸ್ತಾಗಿದೆ" ಇಲ್ಲಿ ಸುಸ್ತಾಗಿದೆ ಬದಲು ದಣಿವಾಗಿದೆ ಅಂತಿದ್ದರೆ ಇನ್ನೂ ಚೆನ್ನಾಗಿತ್ತು ಅಂತ ನನ್ನ ಅನಿಸಿಕೆ.
    ತಪ್ಪುಗಳು: ಕೊಂಡಿಯ್ದಿತಲ್ಲ=ಕೊಂಡೊಯ್ದಿತಲ್ಲ. ಪರಎಯ=ಪರದೆಯ.
    ಶುಭವಾಗಲಿ.

    ReplyDelete
  2. ಕನ್ನಡದ "ಬಾ ಮಳೆಯೇ ಬಾ" ಹಾಡಿನಲ್ಲಿ ಅಭಿಸಾರಿಕೆ ಪದವನ್ನು ಕೇಳಿದ್ದೆ. ಆಗೆಲೆ ಅದು ನನ್ನನು ಆಕರ್ಷಿಸಿತ್ತು. ಆದರೆ ಸರಿಯಾದ ಅರ್ಥ ದೊರೆಯುತ್ತಿಲ್ಲ. ತಿಳಿದಿದ್ದರೆ ನನಗು ತಪ್ಪದೆ ತಿಳಿಸಿ.

    ಕವನವು ತುಂಬ ಚೆನ್ನಾಗಿದೆ.

    ReplyDelete
  3. ತುಂಬ ಚೆನ್ನಾಗಿದೆ ಕವಿತೆ. ಅಭಿಸಾರಿಕೆ = ಅಪಿ + ಸಾರಿಕೆ = ಬಳಿ ಸಾಗುವವಳು. ತನ್ನ ಇನಿಯನ ಕೂಡಲು ಕಾತರದಿಂದ ಸಾಗುವವಳು ಎಂಬ ಅರ್ಥ. ಅಷ್ಟನಾಯಿಕೆ ಪಟ್ಟಿಯಲ್ಲಿ ಬರುವಂಥಹದ್ದು

    ReplyDelete