Saturday, 10 May 2014

ಹಡೆದವಳು (ಭಾಗ - ೧)


                      "ಆತ ಬಹಳ ಒಳ್ಳೆಯ ಹುಡುಗನಮ್ಮಾ. ಕಳೆದ ಐದು ವರುಷಗಳಿಂದ ನಾನು ಆತನನ್ನು ಬಲ್ಲೆ. ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾಳೆ ಮದುವೆಯಾದರೆ ಚೆನ್ನಾಗಿ ಬಾಳಿ ಬದುಕುತ್ತೇವೆಯೆಂಬ ನಂಬಿಕೆ, ಭರವಸೆ ನಮಗಿದೆ. ಒಮ್ಮೆ ನೀನು ಅವನನ್ನು ಭೇಟಿ ಮಾಡು. ನಾನು ಹೇಳಿದ್ದರಲ್ಲಿ ಸುಳ್ಳಿಲ್ಲವೆಂದು ನಿನಗೇ ಮನವರಿಕೆಯಾಗುತ್ತದೆ. ನೀನು ಆತನನ್ನು ಅಳಿಯನಾಗಿ ಸ್ವೀಕರಿಸುವುದರಲ್ಲಿ ಸಂಶಯವೇ ಇಲ್ಲ." ಮಗಳು ಜ್ಯೋತಿಯ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿದ್ದವು. ಆತ ನಿನಗೆ ತಕ್ಕವನಲ್ಲವೆಂದು ಮಗಳಿಗೆ ಹೇಗೆ ತಿಳಿಸಿ ಹೇಳುವುದೆಂದೇ ತೋಚುತ್ತಿರಲಿಲ್ಲ. ಮಗಳೇನಾದರೂ ಆತನೇಕೆ ಬೇಡವೆಂದು ಪ್ರಶ್ನಿಸಿದರೆ ಅದಕ್ಕೆ ಉತ್ತರಿಸಲು ಖಂಡಿತವಾಗಿಯೂ ತನ್ನಿಂದಾಗುವುದಿಲ್ಲ. ಹಾಗಂತ ಸುಮ್ಮನೇ ಇರಲು ಸಾಧ್ಯವೇ..?? ನಾಳೆಯೇನಾದರೂ ಅವರಿಬ್ಬರ ಮದುವೆಯಾದರೆ ಘೋರ ಪ್ರಮಾದವಾದೀತು. ಅಯ್ಯೋ ಶ್ರೀಹರಿ, ಇದೆಂಥ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿದೆಯೆಂದು ಒಳಗೊಳಗೆ ತಳಮಳಿಸಿದಳು ಜನನಿ.
                        ಕಳೆದೊಂದು ವರ್ಷದ ಹಿಂದೆ ಜ್ಯೋತಿಯ ಬಾಯಿಯಿಂದ ಕಿರಣ್ ಎಂಬ ಹೆಸರನ್ನು ಕೇಳಿದಾಗಲೇ ಈತ ಅವನೇ ಇರಬಹುದೇ ಎನ್ನುವ ಶಂಕೆಯ ಹುಳವೊಂದು ತಲೆಯನ್ನು ಹೊಕ್ಕಿತ್ತಾದರೂ ಆ ಹೆಸರಿನವರು ಅದೆಷ್ಟು ಜನ ಯುವಕರಿರುವುದಿಲ್ಲ ಎಂದುಕೊಳ್ಳುತ್ತಾ ಪ್ರಯತ್ನಪೂರ್ವಕವಾಗಿ ಹೊರಗೆತ್ತಿ ಹಾಕಿದ್ದಳು. ಆದರೂ ಗರಿಗೆದರಿದ ಕುತೂಹಲವನ್ನು ಹತ್ತಿಕ್ಕಲಾಗದೇ ಮಗಳ ಬಾಯಿಂದಲೇ ಆತನ ಕುರಿತಾಗಿ ಕೇಳಿ ತಿಳಿದ ವಿಷಯಗಳನ್ನಾಧರಿಸಿ ತಾನೇ ಗುಟ್ಟಾಗಿ ನಡೆಸಿದ ಪತ್ತೆದಾರಿಕೆ ಕೆಲಸದಿಂದಾಗಿ ಕೊನೆಗೂ ಆತ ಮತ್ತು ಆತನ ಕುಟುಂಬದ ಹಿನ್ನೆಲೆಯ ಬಗ್ಗೆಯೆಲ್ಲಾ ತಿಳಿದಾಗ ಒಂದು ಕ್ಷಣ ಎದೆ ಧಸಕ್ಕೆಂದಿತ್ತು. ಯಾವುದು ತನ್ನ ಬದುಕಿನಲ್ಲಿ ಮುಗಿದ ಅಧ್ಯಾಯ ಎಂದುಕೊಂಡಿದ್ದಳೋ ಅದು ಈಗ ಹೊಸ ಮಜಲಿನಲ್ಲಿ ಶುರುವಾಗುವ ಸೂಚನೆಯನ್ನು ತೋರುತ್ತಿತ್ತು. ಇಲ್ಲ, ಮುಚ್ಚಿ ಹೋದ ಆ ಪುಟ ಮತ್ತೆ ತೆರೆದುಕೊಳ್ಳಬಾರದು. ಆದರೆ ತಾನಾದರೂ ಏನು ಮಾಡಬಲ್ಲೆ..?? "ಮಗಳಿಗೆ ಕೇವಲ ಸ್ನೇಹಿತ ತಾನೇ. ಅದರಿಂದಾಗುವ ದೊಡ್ಡ ಅನಾಹುತವೇನಿದೆ..??" ಎಂದುಕೊಂಡು ಕಲ್ಲೆಸೆದ ಕೊಳದಂತಾಗಿದ್ದ ಮನಸ್ಸನ್ನು ತಹಬದಿಗೆ ತರಲು ಯತ್ನಿಸಿದ್ದಳು. ಈಗ ನೋಡಿದರೆ ಮಗಳು ಆತನನ್ನೇ ಮದುವೆಯಾಗುತ್ತೇನೆ ಎನ್ನುತ್ತಿದ್ದಾಳಲ್ಲಾ..?? ಜನನಿಯ ಹೃದಯದಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿತ್ತು.
                             ತನ್ನ ಮನಸ್ಸು ಶಾಂತವಾಗಿಲ್ಲ. ತಾನು ಯಾವುದೋ ಚಿಂತೆಯಲ್ಲಿ ತೊಳಲಾಡುತ್ತಿದ್ದೇನೆ ಎಂಬುದು ತನ್ನವರ ಗಮನಕ್ಕೆ ಬಂದಿತ್ತು. ಮಗಳ ಮದುವೆಯ ವಿಷಯವೇ ತನ್ನ ಮನಶ್ಶಾಂತಿ ಕದಡಲು ಕಾರಣವಿರಬೇಕೆಂದು ಅಂದಾಜಿಸಿದ ಅವರು ಹೇಳಿರಲಿಲ್ಲವೇ..?? "ಆ ವಿಷಯವನ್ನು ಅಷ್ಟೇಕೆ ತಲೆಗೆ ಹಚ್ಚಿಕೊಳ್ಳುತ್ತೀಯಾ ಜನನಿ..?? ಜ್ಯೋತಿ ಹೇಳಿದ ಹುಡುಗನ ಕುರಿತು ನಮ್ಮ ಪರಿಚಿತರು ಮತ್ತು ನೆಂಟರಿಷ್ಟರ ವಲಯದಲ್ಲಿ ವಿಚಾರಿಸಿದರೆ ಬೇಕಾದಷ್ಟು ಮಾಹಿತಿ ದೊರಕುವುದಿಲ್ಲವೇ..?? ಅದೂ ಸಾಲದಿದ್ದಲ್ಲಿ ಬೇಕೆಂದರೆ ನಾವಿಬ್ಬರೇ ಆತನನ್ನು ಭೇಟಿಯಾಗೋಣ. ನಮ್ಮ ಮಗಳಿಗೆ ಆತ ಸೂಕ್ತನೆಂದು ತೋರಿದರಷ್ಟೇ ಆತನಿಗೆ ಕೊಟ್ಟು ಮದುವೆ ಮಾಡೋಣ. ಇಲ್ಲವೆಂದರೆ ಬೇರೆ ಉತ್ತಮ ಸಂಬಂಧವನ್ನು ನೋಡಿದರಾಯಿತು." ಅವನ ಕುರಿತು ತನಗಲ್ಲದೇ ಬೇರೆ ಇನ್ನಾರಿಗೆ ಚೆನ್ನಾಗಿ ತಿಳಿದೀತು..?? ಹಾಗಂತ ತಾನದನ್ನು ಬಾಯಿಬಿಟ್ಟು ಹೇಳಲಾದೀತೇ..??  ಅದೊಂದು ವಿಷಯ ಸುಳ್ಳಾಗಿದ್ದರೆ ಕಿರಣ್ ನಿಜಕ್ಕೂ ಜ್ಯೋತಿಗೆ ತಕ್ಕವನೇ ಆಗಿದ್ದ. ಆದರೆ ಸತ್ಯ ಯಾವಾಗಲೂ ಸತ್ಯವೇ ತಾನೇ..?? ಹೊರಜಗತ್ತಿನೆದುರು ಮರೆಮಾಚಿಟ್ಟ ಮಾತ್ರಕ್ಕೆ ಅದು ಸುಳ್ಳಾಗಿ ಬದಲಾದೀತೇ..??
                             ಈಗೇನು ಮಾಡುವುದು ಎಂದು ಪ್ರತಿ ದಿನ ಪ್ರತಿ ಕ್ಷಣ ಯೋಚಿಸುತ್ತಿದ್ದ ಜನನಿಗೆ ಕಿರಣ್ ತಾಯಿಯನ್ನು ಭೇಟಿಯಾಗುವುದೊಂದೇ ತನ್ನೆದುರಿಗಿರುವ ದಾರಿಯೆಂದು ತೋರಿತು. ಒಬ್ಬ ತಾಯಿಯ ಮನಸ್ಸಿನ ತಳಮಳವನ್ನು ಇನ್ನೊಬ್ಬ ತಾಯಿ ಮಾತ್ರವೇ ಸರಿಯಾಗಿ ಅರ್ಥೈಸಿಕೊಳ್ಳಬಲ್ಲಳು. ತಡಮಾಡದೇ ಟೆಲಿಫೋನ್ ಡೈರಕ್ಟರಿಯಿಂದ ‘ಕಶ್ಯಪ್ ಇಂಡಸ್ಟ್ರೀಸ್’ನ ಮಾಲೀಕರ ಮನೆಯ ನಂಬರನ್ನು ಹುಡುಕಿ ತೆಗೆದಳು. ಕರೆ ಮಾಡಿದಾಗ ಯಾರೋ ಕೆಲಸದ ಹುಡುಗಿ "ಅಮ್ಮಾವ್ರು ಮನೆಯಲ್ಲಿಲ್ಲ, ಹೊರಗಡೆ ಹೋಗಿದಾರೆ. ಸಂಜೆ ಆರು ಗಂಟೆಯ ಹೊತ್ತಿಗೆ ಬರ್ತಾರೆ." ಎಂದು ಉತ್ತರಿಸಿದಳು. ಸಂಜೆಯ ತನಕ ಕಾಯುವಷ್ಟರಲ್ಲಿ ಹಣ್ಣಾಗಿ ಹೋದಳು ಜನನಿ. ಮತ್ತೆ ಫೋನ್ ಮಾಡಿದಳು. "ಹಲೋ, ಯಾರು..??" ಅತ್ತ ಕಡೆಯಿಂದ ಕೇಳಿಬಂತು. ಇದು ವತ್ಸಲಾ ಅವರದೇ ಧ್ವನಿ ಎಂದು ಜನನಿಗೆ ಮನವರಿಕೆಯಾಯಿತು. "ನಮಸ್ತೇ, ನಾನು ಜನನಿ ಮಾತನಾಡ್ತಾ ಇರೋದು." ಒಂದು ನಿಮಿಷಗಳ ಕಾಲ ಆ ಕಡೆ ಮೌನ ಆವರಿಸಿತ್ತು. ತಾನು ಹೇಳಿದ್ದು ಕೇಳಿಸಲಿಲ್ಲವೋ ಅಥವಾ ಸಂಪರ್ಕ ಕಟ್ಟಾಯಿತೋ ಎಂದು ಜನನಿಗೆ ಅರ್ಥವಾಗಲಿಲ್ಲ. "ನಾನು ಜನನಿ ಮಾತನಾಡ್ತಾ ಇರೋದು. ಯಾರು ಅಂತಾ ನೆನಪಾಗಲಿಲ್ವಾ ಮ್ಯಾಡಮ್..?? ನಾನು..." ಮಾತನ್ನು ಅರ್ಧದಲ್ಲಿಯೇ ತುಂಡರಿಸಿಕೊಂಡು ಅತ್ತ ಕಡೆಯ ಧ್ವನಿ ಹೇಳಿತು. "ನಿನ್ನನ್ನು ಮರೆಯುವುದುಂಟೇ ಜನನಿ..?? ಇಷ್ಟು ವರ್ಷಗಳ ನಂತರ ನಮ್ಮ ನೆನಪಾಯಿತಾ..?? ಹೇಗಿದ್ದೀಯಾ..??" ಇಪ್ಪತ್ತೇಳು ವರ್ಷಗಳ ನಂತರವು ಅದೇ ಆತ್ಮೀಯತೆ, ಮಮತೆ.
                        "ನಾನು ಚೆನ್ನಾಗಿದ್ದೇನೆ ಮ್ಯಾಡಮ್. ನೀವೆಲ್ಲಾ ಹೇಗಿದ್ದೀರಾ..?? ನನಗೆ ಅರ್ಜೆಂಟಾಗಿ ನಿಮ್ಮನ್ನು ಒಮ್ಮೆ ಭೇಟಿಯಾಗಬೇಕಿತ್ತು."
                      "ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಅವಶ್ಯ ಭೇಟಿಯಾಗೋಣ. ಎರಡೂವರೆ ದಶಕಗಳ ಕೆಳಗೆ ನಿನ್ನನ್ನು ನೋಡಿದ್ದು. ಆ ನಂತರ ಪುನಃ ನಾವು ಭೇಟಿಯಾಗಲಿಲ್ಲ. ನಾಳೆ ಮಧ್ಯಾನ್ಹದ ಊಟಕ್ಕೆ ನಮ್ಮ ಮನೆಗೇ ಬಂದು ಬಿಡು."
                          "ಇಲ್ಲ, ಮ್ಯಾಡಮ್. ಮನೆಗೆ ಬರಲಾಗುವುದಿಲ್ಲ. ನಿಮಗೊಂದು ವಿಷಯವನ್ನು ಹೇಳಬೇಕು ನಾನು. ಹೊರಗಡೆ ಯಾವುದಾದರೂ ರೆಸ್ಟೊರೆಂಟ್ ನಲ್ಲಿ ಭೇಟಿಯಾಗುವುದೊಳಿತು. ದಯವಿಟ್ಟು ಇಲ್ಲ ಅನ್ಬೇಡಿ" ಬೇಡಿಕೊಳ್ಳುವ ಸ್ವರದಲ್ಲಿ ಹೇಳಿದಳು ಜನನಿ.
                           "ಅಯ್ಯೋ, ನೀನು ಇಷ್ಟೊಂದು ಕೇಳಿಕೊಳ್ಳಬೇಕಾ..?? ಆಯಿತು, ನೀನು ಹೇಳಿದಂತೆ ಆಗಲಿ. ನಾಳೆ ಮುಂಜಾನೆಯೇ ಭೇಟಿಯಾಗೋಣ. ಹತ್ತು ಗಂಟೆಯ ಹೊತ್ತಿಗೆ ಕೋರ್ಟ್ ಸರ್ಕಲ್ ಹತ್ತಿರದ ಪರಿವಾರ್ ರೆಸ್ಟೊರೆಂಟ್ ನಲ್ಲಿ ಸಿಗೋಣ ಸರೀನಾ..??"
                            "ಖಂಡಿತ. ತುಂಬಾ ಥ್ಯಾಂಕ್ಸ್ ಮ್ಯಾಡಮ್." ಎನ್ನುತ್ತಾ ರಿಸೀವರ್ ಕೆಳಗಿಟ್ಟಳು ಜನನಿ. ಮನಸ್ಸಿಗೆ ತುಸುವೇ ಸಮಾಧಾನವಾದಂತೆನಿಸಿತು.
                             ಮರುದಿನ ಬೇಗಬೇಗನೆ ಮನೆಗೆಲಸಗಳನ್ನು ಮುಗಿಸಿ ಒಂಭತ್ತು ಗಂಟೆಗೇ ಕೋರ್ಟ್ ಸರ್ಕಲ್ ಗೆ ಹೊರಟು ನಿಂತಳು. ಅಲ್ಲಿ ಅರ್ಧ ಗಂಟೆ ಕಾದ ಬಳಿಕ ಸರಿಯಾಗಿ ಹತ್ತು ಗಂಟೆಗೆ ಕಪ್ಪು ಹುಂಡೈ ಕಾರಿನಿಂದ ವತ್ಸಲಾ ಅವರು ಇಳಿದದ್ದು ಕಾಣಿಸಿತು. ಅದೇ ಬಟ್ಟಲು ಮುಖ, ಅಗಲವಾದ ಹಣೆ, ಹೊಳೆಯುವ ಕಣ್ಣುಗಳು, ಸದಾ ನಗು ಸೂಸುತ್ತಿರುವ ತುಟಿಗಳು, ಈ ವಯಸ್ಸಿನಲ್ಲೂ ಎಷ್ಟೊಂದು ಚೆಂದದ ಮೈಕಟ್ಟು. ಅವರು ಕೊಂಚವೂ ಬದಲಾಗಿಲ್ಲವೆನಿಸಿತು ಜನನಿಗೆ. ಅವರಿಗೆ ತನ್ನ ಗುರುತು ಸಿಕ್ಕಿತೆಂದು ಕಾಣುತ್ತದೆ. ನಗುನಗುತ್ತಾ ತಾನಿದ್ದಲ್ಲಿಗೇ ಬಂದರು.
                            "ನೀನು ಅಂದು ಹೇಗಿದ್ದೀಯೋ ಇಂದು ಕೂಡಾ ಹಾಗೆಯೇ ಇದ್ದೀಯಾ ಜನನಿ. ಅದಕ್ಕೆ ಗುರುತು ಹಿಡಿಯಲು ಕಷ್ಟವಾಗಲಿಲ್ಲ ನೋಡು." ಮತ್ತೆ ಅದೇ ಮಂದಹಾಸ.
                               ಜನನಿ ಸುಮ್ಮನೇ ನಕ್ಕಳಷ್ಟೆ. ಇಬ್ಬರೂ ರೆಸ್ಟೊರೆಂಟ್ ನ ಒಳಗಡೆ ಟೇಬಲ್ ಒಂದನ್ನು ಹಿಡಿದು ಕುಳಿತರು. ಅದೂ ಇದೂ ಎನ್ನುತ್ತಾ ಒಂದಿಷ್ಟು ಲೋಕಾಭಿರಾಮದ ಮಾತುಕತೆಯಾದ ಬಳಿಕ ಕೇಳಿದರು ವತ್ಸಲಾ. "ನಿನ್ನೆ ಏನೋ ಒಂದು ವಿಷಯವನ್ನು ಹೇಳಬೇಕೆಂದಿದ್ದೆಯಲ್ಲಾ, ಏನದು..??"
                              ಜನನಿಗೆ ಹೇಗೆ ಹೇಳಬೇಕೆಂಬುದೇ ತೋಚದಾಯಿತು. ಅವರೇ ಮತ್ತೆ ಹೇಳಿದರು, " ನನ್ನ ಬಳಿ ಸಂಕೋಚವೇಕೆ..?? ಅದೇನೆ ವಿಷಯ ಇರಲಿ, ಹೇಳು."
                              ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಕೊನೆಗೆ ಎಲ್ಲವನ್ನೂ ಹೇಳಿದಳು ಜನನಿ. ವಿಷಯವನ್ನು ತಿಳಿದುಕೊಂಡ ವತ್ಸಲಾರಿಗೂ ಕೆಲ ನಿಮಿಷಗಳ ಕಾಲ ಏನು ಹೇಳಬೇಕೆಂದು ತೋಚದೇ ಸುಮ್ಮನೆ ಕುಳಿತಿದ್ದರು. ಆಮೇಲೆ ಹೇಳಿದರು, "ಇದು ಹೀಗಾಗಬಹುದೆಂದು ನಾನು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ ಜನನಿ. ಈ ಸಮಸ್ಯೆಗೆ ಏನಾದರೂ ಒಂದು ಪರಿಹಾರವಿದ್ದೇ ಇರುತ್ತದೆ. ನಾನು ಯೋಚಿಸಿ ಎಲ್ಲವನ್ನೂ ಸರಿ ಮಾಡುತ್ತೇನೆ. ನೀನು ಇನ್ನು ನಿಶ್ಚಿಂತೆಯಿಂದಿರು."
                           ಇದಾದ ಎರಡು ವಾರಗಳಲ್ಲೇ ಕಿರಣ್ ಮತ್ತು ಜ್ಯೋತಿ ಇಬ್ಬರ ಜಾತಕಗಳನ್ನು ಪ್ರಸಿದ್ಧ ಜ್ಯೋತಿಷಿಯೊಬ್ಬರಿಗೆ ತೋರಿಸಲು ಅವರು ಅವೆರಡೂ ಹೊಂದುವುದಿಲ್ಲವೆಂದೂ, ಈ ಸಂಬಂಧದಿಂದ ಹುಡುಗನ ಪ್ರಾಣಕ್ಕೆ ಕಂಟಕ ಎದುರಾಗಬಹುದೆಂದು ಹೇಳಿದ್ದರಿಂದ ಮದುವೆಯ ಸಂಬಂಧ ಅಲ್ಲಿಯೇ ಮುರಿದುಬಿತ್ತು. ಅವರಿಬ್ಬರು ಬಹಳವೇ ವ್ಯಥೆಪಟ್ಟುಕೊಂಡರಾದರೂ, ತಂದೆ ತಾಯಿಯರ ಮಾತಿಗೆ ವಿರುದ್ಧವಾಗಿ ಮದುವೆಯಾಗುವ ಹೆಜ್ಜೆ ಇಡಲಿಲ್ಲ. ನನ್ನ ಮನಸ್ಸು ವತ್ಸಲಾರನ್ನು ನೆನೆದು ಧನ್ಯವಾದ ಹೇಳುತ್ತಿತ್ತು. ಜೊತೆಯಲ್ಲೇ ಇಪ್ಪತ್ತೇಳು ವರ್ಷಗಳ ಹಿಂದಿನ ಪುಟ ಸ್ಮೃತಿಯ ಪಟಲದಲ್ಲಿ ತೆರೆದುಕೊಂಡಿತು. (ಮುಂದುವರೆಯುವುದು)


No comments:

Post a Comment