Saturday, 10 May 2014

ಇರುವುದೆಲ್ಲವ ಬಿಟ್ಟು (ಭಾಗ - ೫)


                                " ನಾಲ್ಕು ವರ್ಷಗಳ ಹಿಂದೆ ಹೇಳದೇ ಕೇಳದೇ ನೀನು ಓಡಿ ಹೋದೆ. ಈಗ ನಿನ್ನ ಅಪ್ಪ ಕಳೆದೊಂದು ವಾರದಿಂದ ಕಾಣಿಸುತ್ತಿಲ್ಲ. ಹಿಂದಿನ ಶನಿವಾರ ಬ್ಯಾಂಕಿಗೆ ಹೋದವನು ವಾಪಸ್ಸು ಮನೆಗೆ ಬಂದೆ ಇಲ್ಲ. ಎತ್ತ ಹೋದನೋ, ಏನಾದನೋ ಇಲ್ಲಿಯವರೆಗೆ ತಿಳಿದಿಲ್ಲ. ಅಲ್ಲಿ ನಿನ್ನ ಅಮ್ಮ ಒಬ್ಬಳೇ ನೋವುಣ್ಣುತ್ತಿದ್ದರೆ ನೀನು ಇಲ್ಲಿ ಇದ್ದುಕೊಂಡು ಏನು ದನ ಕಾಯುತ್ತಾ ಇರುವೆಯಾ..?? ನಡಿ, ಮನೆಗೆ. ಎಲ್ಲರ ಕಥೆಯೂ ಮನೆಬಿಟ್ಟು ಓಡುವುದೇ ಆಯಿತು. ಥತ್"
                       ನನಗಂತೂ ಸೋದರಮಾವನನ್ನು ಕಂಡ ಕೂಡಲೇ ಉಸಿರು ನಿಂತಂತಾಗಿತ್ತು. ಇವರೇಕೆ ಇಲ್ಲಿಗೆ ಬಂದರು..?? ನಾನು ಇಲ್ಲಿ ಇರುವ ವಿಷಯ ಗೊತ್ತಾಗಿದ್ದಾದರೂ ಹೇಗೆ..?? ಸಾವಿರ ಪ್ರಶ್ನೆಗಳು ಒಮ್ಮೆಗೇ ತಲೆಯಲ್ಲಿ ಸುತ್ತತೊಡಗಿದರೂ ಏನೂ ಹೊಳೆಯುತ್ತಲೇ ಇರಲಿಲ್ಲ. ರವಿ ಮಾವ ಏನನ್ನು ಹೇಳುತ್ತಿದ್ದಾರೆನ್ನುವುದನ್ನು ಅರ್ಥೈಸಿಕೊಳ್ಳಲು ನನಗೆ ನಿಮಿಷಗಳೇ ಹಿಡಿದವು. ಅಪ್ಪ ಮನೆ ಬಿಟ್ಟು ಹೋದರಾ..?? ಅಯ್ಯೋ, ಅವರೇಕೆ ಹಾಗೆ ಮಾಡಿದರು..??
                            "ಮಾವ, ಅಪ್ಪ ಏಕೆ ಮನೆ ಬಿಟ್ಟು..." ನಾನು ಮಾತು ಪೂರ್ತಿಗೊಳಿಸುವ ಮುನ್ನವೇ ರಪ್ಪಂತ ನನ್ನ ಕೆನ್ನೆಗೆ ಏಟು ಬಿತ್ತು.
                             "ಬೇಡದ ಮಾತು ಬೇಡ. ಸುಮ್ಮನೆ ಗಂಟು ಮೂಟೆ ಕಟ್ಟಿ ಹೊರಡು ನನ್ನ ಜೊತೆ." ಮಾವನ ದನಿ ಹರಿತವಾದ ಕತ್ತಿಯಂತೆ ತೂರಿ ಬಂತು.
                             ನನಗೇನೂ ಮಾಡಬೇಕೆಂದೇ ತೋಚಲಿಲ್ಲ. ಇನ್ನು ಅಲ್ಲಿಯೇ ನಿಂತಿದ್ದರೆ ಮತ್ತೊಂದು ಕೆನ್ನೆಗೂ ಏಟು ಬೀಳಬಹುದೆಂಬ ಹೆದರಿಕೆಯಿಂದ ಓಡುತ್ತಾ ನನ್ನ ಕೋಣೆ ಸೇರಿದೆ. ಉಕ್ಕಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಲೇ ಬಟ್ಟೆಗಳನ್ನು ಬ್ಯಾಗಿಗೆ ತುರುಕತೊಡಗಿದೆ. ಆಫೀಸು ಗೆಳತಿಯೊಬ್ಬಳಿಗೆ ಫೋನ್ ಮಾಡಿ ಅರ್ಜೆಂಟಾಗಿ ನನಗೆ ಊರಿಗೆ ಹೋಗಬೇಕಾಗಿದೆಯೆಂದು ತಿಳಿಸಿ ಐದು ನಿಮಿಷಗಳಲ್ಲಿ ತಯಾರಾಗಿ ಹೊರಟು ನಿಂತೆ. ಯಾವ ಟ್ರೈನ್ ಹಿಡಿದು ಪುಣೆಗೆ ಓಡಿ ಬಂದಿದ್ದೆನೋ ಅದೇ ಗರೀಬ್-ನವಾಜ್ ನನ್ನನ್ನು ಮನೆಯತ್ತ ಕರೆದೊಯ್ಯಲು ಸಿದ್ಧವಾಗಿ ನಿಂತಿತ್ತು.
                      ಟ್ರೈನ್ ಹೊರಟ ಒಂದೈದು ನಿಮಿಷಗಳ ನಂತರ ಮಾವ ಡೈರಿಯೊಂದನ್ನು ತೆಗೆದು ನನ್ನ ಕೈಲಿಡುತ್ತಾ ಹೇಳಿದ, "ಇದು ನಿನ್ನ ಅಪ್ಪನದು. ನಿನಗೇ ಕೊಡಬೇಕೆಂದು ಮೊದಲಿನ ಪುಟದಲ್ಲೇ ಬರೆದಿಟ್ಟಿದ್ದರಿಂದ ನಾವ್ಯಾರೂ ಇದನ್ನು ಓದಿಲ್ಲ." ನನಗೆ ಆಶ್ಚರ್ಯವಾಯಿತು. ಅಪ್ಪ ಎಂದಿಗೂ ಡೈರಿ ಬರೆಯುವ ಹವ್ಯಾಸವನ್ನು ಇಟ್ಟುಕೊಂಡವರಲ್ಲ. ಹೊಸತಾಗಿ ಎಂದಿನಿಂದ ಶುರು ಹಚ್ಚಿಕೊಂಡರು ಎಂದು ಅರ್ಥವಾಗದೇ ಮಾವನನ್ನು ಕೇಳಿದೆ, "ಅಪ್ಪನಿಗೆ ಡೈರಿ ಬರೆಯುವ ಅಭ್ಯಾಸ ಇಲ್ಲವಲ್ಲ."
                   "ನೀನೂ ದೇಶಾಂತರ ಹೊರಟು ಹೋದರೆ ಹೆತ್ತಪ್ಪನಿಗೆ ಎಲ್ಲ ಅಭ್ಯಾಸವೂ ಹೊಸತಾಗಿ ಶುರುವಾಗುತ್ತದೆ" ಮಾವ ಗದರಿಸುವ ಸ್ವರದಲ್ಲಿ ಹೇಳಿದ.
                     ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣನೆಂಬಂತೆ ನಾನು ಓಡಿ ಬಂದ ದಿನದಿಂದ ನಮ್ಮ ಮನೆಯಲ್ಲಿ ಏನೇನೆಲ್ಲಾ ಆಯಿತೋ ಅದಕ್ಕೆಲ್ಲಾ ನಾನೇ ಕಾರಣಳು ಎಂಬಂತೆ ಮಾತನಾಡುತ್ತಿದ್ದ ಮಾವನೊಂದಿಗೆ ಮಾತನಾಡಿದರೆ ಅವರ ಕೋಪ ಇನ್ನೂ ಹೆಚ್ಚುವುದೆಂದು ಅರಿವಾಯಿತು. ಜೊತೆಗೆ ಅವರಿಂದ ಏಟು ತಿಂದ ಬಲಗೆನ್ನೆ ಕೆಂಪಗಾಗಿ ಚುರುಗೆಡುತ್ತಿತ್ತು. ನಾನು ಮರು ನುಡಿಯದೇ ಡೈರಿಯ ಪುಟವನ್ನು ತೆಗೆದೆ.
                                  ***********************************
ಪುಟ ೧:
                        "ಡೈರಿಯನ್ನು ಕೇವಲ ಬ್ಯಾಂಕಿನ ವ್ಯವಹಾರಕ್ಕೆ ಉಪಯೋಗಿಸುತ್ತಿದ್ದ ನಾನು ಮೊದಲ ಬಾರಿಗೆ ಇದರಲ್ಲಿ ನನ್ನ ಮನದ ಮಾತುಗಳನ್ನು ಬರೆಯುತ್ತಿದ್ದೇನೆ. ಮಗಳ ರೂಮ್ ಮೇಟ್ ಇತ್ತ ಕಾಗದದಲ್ಲಿ ಬರೆದಿದ್ದ ವಾಕ್ಯಗಳನ್ನು ಓದಿದ ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ನನ್ನ ಮಗಳೇ..?? ನಾನು ಎತ್ತಾಡಿಸಿ ಬೆಳೆಸಿದ ಮಗಳೇ ಹೀಗೆ ಬರೆದಿಟ್ಟು ಹೋಗಿದ್ದು..?? ಬೆಳಂಬೆಳಿಗ್ಗೆ ೬ ಗಂಟೆಗೆ ಫೋನ್ ಮಾಡಿ ಈ ಹುಡುಗಿ ಒಂದೇ ಸಮನೆ ಅಳತೊಡಗಿದಾಗ ಮಗಳ ಪ್ರಾಣಕ್ಕೆ ಏನಾದರೂ ಸಂಚಕಾರ ಬಂತೇ ಎಂದು ಹೆದರಿ ಹೃದಯವನ್ನು ಅಂಗೈಯಲ್ಲಿ ಹಿಡಿದು ಉಟ್ಟ ಬಟ್ಟೆಯಲ್ಲಿ ಹೊರಟು ಬಂದವನಿಗೆ ಅಲ್ಲಿ ಕಾದಿದ್ದ ವಿಷಯವೇ ಬೇರೆ. ನನ್ನ ಮಗಳು ನನಗೂ ಹೇಳದೇ ಓಡಿ ಹೋದಳೆಂಬ ಸತ್ಯವನ್ನೇ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಕಾಲೇಜು ಮತ್ತು ಹಾಸ್ಟೆಲು ಮುಖ್ಯಸ್ಥರೊಂದಿಗೆ ಮಾತನಾಡಿ ಅವಳ ಎಲ್ಲಾ ಸಮಾನುಗಳನ್ನು ಮನೆಗೆ ತೆಗೆದುಕೊಂಡು ಬಂದದ್ದಾಯಿತು. ದೇವರೇ, ಇದೇನಾಗಿ ಹೋಯಿತು..?? ಅವಳು ಓಡಿ ಹೋಗುವಂಥದ್ದೇನಾಯಿತು..?? ಅವಳು ಜೀವಕ್ಕೇನೂ ಅಪಾಯ ತಂದುಕೊಳ್ಳದಿದ್ದರೆ ಸಾಕು. ಇವಳ ಅಮ್ಮನಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ನನಗಂತೂ ದಿನವಿಡೀ ಕೈ ಕಾಲು ಆಡಲಿಲ್ಲ. ಯಾರೋ ಮಂಕು ಬೂದಿ ಎರಚಿದ್ದಾರೆನ್ನುವಂತೆ ತಲೆಗೆ ಕೈ ಹೊತ್ತು ಸುಮ್ಮನೆ ಕುಳಿತುಬಿಟ್ಟೆ."
ಪುಟ ೨:
                          "ಎರಡು ತಿಂಗಳು ಕಳೆಯಿತು. ಮಗಳೆಲ್ಲಿ ಹೋದಳೋ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಪರಿಚಿತರು, ನೆಂಟರಿಷ್ಟರು, ಅವಳ ಗೆಳೆಯ-ಗೆಳತಿಯರು - ಎಲ್ಲರ ಹತ್ತಿರವೂ ಸಾಕಷ್ಟು ವಿಚಾರಿಸಿದ್ದಾಯಿತು. ಕೊನೆಗೆ ನಾನೇ ಸ್ವತಃ ಒಂದು ದಿನ ಅವಳ ಕಾಲೇಜಿನ ಎಲ್ಲ ಸ್ನೇಹಿತರನ್ನೂ ಭೇಟಿ ಮಾಡಿ ಓಡಿ ಹೋಗುವಂಥದ್ದೇನಾಯಿತೆಂದು ತಿಳಿಯಲೆತ್ನಿಸಿದೆ. ಆದರೆ ಯಾವ ವಿಷಯವೂ ಗೊತ್ತಾಗಲಿಲ್ಲ. ಪೋಲಿಸ್ ಕಂಪ್ಲೇಂಟ್ ಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆ ಪಕ್ಷ ಅವಳು ಜೀವಂತವಾಗಿಯೇ ಇದ್ದಾಳೋ ಇಲ್ಲವೋ ಎನ್ನುವ ಮಾಹಿತಿಯೂ ದೊರೆಯಲಿಲ್ಲ. ಇದ್ದೊಬ್ಬ ಮಗಳ ಕಥೆಯೇಕೆ ಹೀಗಾಯಿತು ದೇವರೇ..??"
ಪುಟ ೩:
                        "ಇವಳಂತೂ ಹರಕೆ ಹೊತ್ತವಳಂತೆ ದಿನಕ್ಕೆರಡು ತಾಸು ಒಂದೇ ಸಮನೆ ಅಳುತ್ತಾ ಕೂರುತ್ತಾಳೆ. ನನಗೂ ಅಳಬೇಕೆನ್ನಿಸುತ್ತದೆ. ಆದರೆ ನಾನು ಗಂಡಸು, ಅಳಲಾರೆ. ಬ್ಯಾಂಕಿನ ಕೆಲಸದಲ್ಲಿ ಮುಳುಗಿರುವಷ್ಟು ಹೊತ್ತು ಹೇಗೋ ಸರಿದುಹೋದರೂ ಉಳಿದೆಲ್ಲ ಸಮಯ ಮಗಳೇ ಕಾಡುತ್ತಿರುತ್ತಾಳೆ. ಇತ್ತೀಚೆಗೆ ಊಟವೂ ಸರಿಯಾಗಿ ಸೇರುತ್ತಿಲ್ಲ. ಮಾಡಬೇಕೆನ್ನುವ ಶಾಸ್ತ್ರಕ್ಕೆ ಮಾಡುತ್ತಿದ್ದೇನೆ. ನಿದ್ರೆ ದೂರವಾಗಿ ಅದೆಷ್ಟು ದಿನಗಳಾದವೋ ಏನೋ. ಇವಳ ಆರೋಗ್ಯವು ಸ್ವಲ್ಪ ಮಟ್ಟಿಗೆ ಹದಗೆಟ್ಟಿದೆ. ನನಗೆ ಈ ಥರ ಡೈರಿಯಲ್ಲಿ ಬರೆದಿಡುವುದರಲ್ಲಿ ಏನೂ ಸ್ವಾರಸ್ಯ ಕಾಣಿಸುತ್ತಿಲ್ಲ. ಅದರಿಂದ ಮನಸ್ಸಿನ ನೋವು ಒಂಚೂರು ಕಡಿಮೆಯಾದಂತೆನಿಸುವುದಿಲ್ಲ."
ಪುಟ ೪:
                     "ನಾನು ಈ ಡೈರಿಯನ್ನು ಮುಚ್ಚಿಟ್ಟು ಮೂರು ವರ್ಷಗಳು ಕಳೆದವು. ಈ ಮೂರು ವರುಷಗಳು ಹೇಗೆ ಕಳೆದವೆಂದೇ ಅರ್ಥವಾಗುತ್ತಿಲ್ಲ. ಮಗಳ ವಯಸ್ಸಿನ ಹುಡುಗ-ಹುಡುಗಿಯರೆಲ್ಲಾ ಓದು ಮುಗಿಸಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ ನನ್ನ ಮಗಳೂ ಈ ಹೊತ್ತಿಗೆ ಇಂಜಿನಿಯರ್ ಆಗಿರುತ್ತಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ನೆಂಟರಿಷ್ಟರ ತೋರಿಕೆಯ ಅನುಕಂಪ, ಸಹಾನುಭೂತಿ ನನ್ನನ್ನು ಒಳಗೊಳಗೆ ಕೊಲ್ಲುತ್ತಿವೆ. ನನಗೇಕೋ ಇತ್ತೀಚೆಗೆ ಅವಳು ಜೀವಂತವಾಗಿ ಇರುವ ಕುರಿತೇ ಅನುಮಾನವಾಗಿದೆ. ಇಲ್ಲದಿದ್ದರೆ ಮೂರು ವರುಷಗಳ ನಂತರವೂ ಮನೆಗೆ ಬರದೇ ಇರುತ್ತಿದ್ದಳೇ..?? ಏನಾಗಿದೆಯೋ ಏನೋ."
ಪುಟ ೫:
                      "ಇರುವ ಸಮಸ್ಯೆಗಳು ಸಾಲದೆಂಬಂತೆ ಇದೀಗ ಹೊಸತೊಂದು ತೊಂದರೆ ಶುರುವಾಗಿದೆ. ಬ್ಯಾಂಕಿನ ಹಣಕಾಸಿನ ವಹಿವಾಟಿನಲ್ಲಿ ಕೆಲವು ಅವ್ಯವಹಾರಗಳು ನಡೆದಿವೆಯಂತೆ. ನನಗೆ ಇದರ ಕುರಿತು ಸುಳಿವೇ ಇರಲಿಲ್ಲ. ಇವತ್ತು ಮ್ಯಾನೇಜರ್ ತಮ್ಮ ಛೇಂಬರಿಗೆ ನನ್ನನ್ನು ಕರೆಸಿಕೊಂಡು ಹೇಳಿದಾಗಲೇ ಎಲ್ಲ ವಿಷಯ ತಿಳಿದದ್ದು. ಅವರೇನೋ ನನಗೆ ಛೀಮಾರಿ ಹಾಕಿದಂತೆ ಮಾತನಾಡಿದರು. ಇನ್ನೊಂದು ವಾರದೊಳಗೆ ಹಣಕಾಸಿನ ಯಾವತ್ತೂ ವ್ಯವಹಾರಗಳ ಕುರಿತಾದ ಒಂದು ರಿಪೋರ್ಟ್ ತಯಾರಿಸಿ ಕೊಡಲು ಹೇಳಿದ್ದಾರೆ."
ಪುಟ ೬:
                         "ಇದೇನಿದು..?? ಅವ್ಯವಹಾರಗಳಿಗೆಲ್ಲ ನಾನೇ ಹೊಣೆಯೆನ್ನುವಂತೆ ನನ್ನನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿದ್ದಾರಲ್ಲಾ..?? ಸಹೋದ್ಯೋಗಿಗಳ ಕೊಂಕು ಮಾತು, ತಿರಸ್ಕಾರ ತುಂಬಿದ ನೋಟಗಳು ದಿನೇ ದಿನೇ ಹೆಚ್ಚುತ್ತಿವೆ. ಮ್ಯಾನೇಜರಿಗೆ ನನ್ನ ಮೇಲೆ ಯಾವುದೇ ಸಂಶಯವಿಲ್ಲವಾದರೂ ಎಲ್ಲರ ಜೊತೆ ಸೇರಿ ಕೆಲಸ ಮಾಡಲು ನನ್ನಿಂದಾಗುತ್ತಿಲ್ಲ. ಏನೋ ಒಂದು ಬಗೆಯ ಕಿರಿಕಿರಿ, ಹಿಂಸೆಯಾಗುತ್ತಿದೆ."
ಪುಟ ೭:
                       "ಇವಳು ಒಂದು ಮಾತು ಹೇಳಿಬಿಟ್ಟಳು. ’ಅತ್ತ ಮಗಳ ವಿಷಯದಲ್ಲಿ ಕಾಳಜಿಯಿಲ್ಲ, ಇತ್ತ ಬ್ಯಾಂಕಿನ ಕೆಲಸದಲ್ಲೂ ಯಡವಟ್ಟು ಮಾಡಿಕೊಂಡಿರಿ’ ಎಂದು. ಅಂದರೆ ನನ್ನ ಹೆಂಡತಿಗೆ ನನ್ನಲ್ಲಿ ನಂಬಿಕೆಯಿಲ್ಲ. ಮನಸ್ಸಿಗೆ ಬಹಳವೇ ಘಾಸಿಯಾಯಿತು. ನಾನು ಬದುಕಿದ್ದು ಏನು ಪ್ರಯೋಜನವೆಂಬ ಆಲೋಚನೆಯೂ ಬಂತು. ಮರುಕ್ಷಣವೇ ಇನ್ನೊಂದು ಯೋಚನೆ ಹೊಳೆಯಿತು. ಮನೆಯಲ್ಲೇ ಕುಳಿತು ಮಗಳ ಬಗ್ಗೆ ಚಿಂತಿಸಿದರೆ ಓಡಿ ಹೋದ ಮಗಳು ವಾಪಸ್ಸು ಬರುವಳೇ..?? ದೇಶ ಸುತ್ತಾಡಿಯಾದರೂ ಅವಳನ್ನು ಹುಡುಕಿ ತರುತ್ತೇನೆ. ನಾಳೆಯೇ ಹೊರಡುವುದು ಒಳ್ಳೆಯದು."
                                    **************************************
(ಮುಂದುವರೆಯುವುದು)


1 comment:

  1. ಮೇಡಮ್ ತುಂಬಾ ಚನ್ನಾಗಿದೆ. ಮುಂದಿನ ಭಾಗ ಓದಲು ಕೂತುಹಲವಾಗುತ್ತಿದೆ.

    ReplyDelete