Sunday, 11 May 2014

ಹಡೆದವಳು (ಭಾಗ - ೨)


                                       ತನಗೆ ಆಗಷ್ಟೇ ಬಿ. ಎಸ್ಸಿ. ಮುಗಿದಿತ್ತು. ಮುಂದೆ ಎಮ್. ಎಸ್ಸಿ. ಓದುವ ಆಸೆಯಿದ್ದರೂ ತಿಂಗಳ ಹಿಂದೆ ತಂದೆ ಹೇಳಿದ್ದ ಮಾತುಗಳು ಮತ್ತೆ ಮತ್ತೆ ನೆನಪಾಗಿ ಅದು ಅಸಾಧ್ಯವೆನ್ನುವ ವಾಸ್ತವತೆಯನ್ನು ಕಣ್ಣಮುಂದೆ ಚಿತ್ರಿಸುತ್ತಿದ್ದವು. "ಹೇಗೂ ಇನ್ನೊಂದು ತಿಂಗಳಿನಲ್ಲಿ ನಿನ್ನ ಓದು ಮುಗಿಯುವುದಲ್ಲ. ಈಗಿನಿಂದಿಲೇ ಕೆಲಸಕ್ಕೆ ಅರ್ಜಿಹಾಕಲು ಶುರುಮಾಡು" ಎಂದು ತಂದೆ ಹೇಳಿದಾಗ ತಾನು ಮುಂದೆ ಓದುವ ತನ್ನ ಮನದಿಚ್ಛೆಯನ್ನು ವ್ಯಕ್ತಪಡಿಸಿದ್ದೆ. ಅದಕ್ಕೆ ತಣ್ಣೀರೆರೆಚಿ ಕಡ್ಡಿ ತುಂಡು ಮಾಡಿದಂತೆ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು ತಂದೆ. "ಈಗಾಗಲೇ ನಿನ್ನ ಓದಿಗೆಂದು ಸಾಕಷ್ಟು ದುಡ್ಡು ಸುರಿದು ಹೈರಾಣಾಗಿ ಹೋಗಿದ್ದೇನೆ. ಇನ್ನು ಮುಂದೆಯೂ ನಿನ್ನ ಮೇಲೆಯೇ ಹಣ ಸುರಿಯುತ್ತಾ ಕುಳಿತರೆ ನಿನ್ನ ಹಿಂದೆ ಹುಟ್ಟಿದ ತಮ್ಮ-ತಂಗಿಯರನ್ನು ಹೇಗೆ ಓದಿಸಲಿ..?? ಅತ್ತ ನಿನ್ನ ಅಮ್ಮನ ಔಷಧಗಳಿಗೂ ಸಾಕಷ್ಟು ಖರ್ಚಾಗುತ್ತದೆ. ಇದೆಲ್ಲವೂ ನಿನಗೆ ತಿಳಿದೇ ಇಲ್ಲವೆನ್ನುವಂತೆ ಮಾತನಾಡುತ್ತಿದ್ದೀಯಲ್ಲ..?? ಓದು-ಗೀದು ಎಂದು ಇಲ್ಲದ ಕನಸು ಕಟ್ಟಿಕೊಳ್ಳಬೇಡ. ಸುಮ್ಮನೇ ಕೆಲಸದ ಬೇಟೆಯಲ್ಲಿ ತೊಡಗಿಸಿಕೊ ಸಾಕು."
                                 ತಂದೆ ಹಾಗೆ ಹೇಳಿದ್ದರೂ ಪರೀಕ್ಷೆಗಳು ಮುಗಿದ ನಂತರ ಉದ್ಯೋಗದ ಬೇಟೆಗೆ ಹೊರಡಲು ಸರ್ವಥಾ ಮನಸ್ಸಿಲ್ಲದೆ ತಾನು ಮುಂದೇನು ಮಾಡುವುದೆಂದು ಯೋಚಿಸುತ್ತಲೇ ೪-೫ ದಿನಗಳನ್ನು ದೂಡಿದ್ದೆ. ಆಗ ಕಣ್ಣಿಗೆ ಬಿದ್ದಿತ್ತು ಪತ್ರಿಕೆಯೊಂದರಲ್ಲಿ ಆ ಜಾಹೀರಾತು. "ಸಂತಾನ ಭಾಗ್ಯವಿಲ್ಲದ ನಗರದ ಪ್ರತಿಷ್ಠಿತ ಶ್ರೀಮಂತ ದಂಪತಿಗಳೊಬ್ಬರಿಗೆ ಬಾಡಿಗೆ ತಾಯಿಯೊಬ್ಬರು ಬೇಕಾಗಿದ್ದು, ಆಸಕ್ತಿಯಿರುವ ೨೫-೩೦ ವರ್ಷ ವಯಸ್ಸಿನ ಆರೋಗ್ಯವಂತ ಹೆಣ್ಣುಮಕ್ಕಳು ಸಂಪರ್ಕಿಸಬಹುದು. ಬಡ ಹೆಣ್ಣುಮಕ್ಕಳಿಗೆ ಆದ್ಯತೆಯಿದ್ದು, ಉತ್ತಮ ಹಣಕಾಸಿನ ನೆರವು ನೀಡಲಾಗುವುದು." ಕೆಳಗೆ ಮನೆಯ ವಿಳಾಸ ಮತ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ. ಬಾಡಿಗೆ ತಾಯಿಯ ಕುರಿತು ತಾನು ಸಾಕಷ್ಟು ತಿಳಿದಿದ್ದೆನಾದರೂ ಹೀಗೆ ಜಾಹೀರಾತನ್ನೂ ನೀಡುತ್ತಾರೆನ್ನುವುದು ತನಗೆ ಗೊತ್ತಿರಲಿಲ್ಲ. ತನಗೇ ತಿಳಿಯದ ಒಂದು ವಿಚಿತ್ರ ನಗು ತುಟಿಯಲ್ಲೊಮ್ಮೆ ಮಿಂಚಿ ಮರೆಯಾಗಿತ್ತು.
                              ಮುಂದಿನ ಎರಡು ದಿನಗಳ ಕಾಲ ಆ ಜಾಹೀರಾತು ಪದೇ ಪದೇ ತನ್ನ ಕಣ್ಣೆದುರಿಗೆ ಬಂದು ನಿಲ್ಲುತ್ತಿತ್ತು. ನಾನೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು ಎಂಬ ಹುಚ್ಚು ಆಸೆ ಬಲವಾಗುತ್ತಿತ್ತು. ಇನ್ನೊಂದು ಮನಸ್ಸು ತಾಯಿಯಾಗುವ ಕೆಲಸವೆಂದರೆ ಸುಲಭದ ಮಾತಲ್ಲ ಎಂದು ಎಚ್ಚರಿಸುತ್ತಾ ಆಸೆಗೆ ತಡೆ ಹಾಕುತ್ತಿತ್ತು. ದ್ವಂದ್ವ ಮನಸ್ಸನ್ನು ಎಷ್ಟು ದಿನಗಳ ಕಾಲ ತಾನೇ ಪೋಷಿಸಬಹುದು..?? ಕೊನೆಗೂ ಆಸೆಯೇ ಗೆದ್ದಿತು. ಹಣಕಾಸಿನ ಸಹಾಯ ದೊರೆಯುವುದೆಂಬ ಆಲೋಚನೆಯ ಮುಂದೆ ಉಳಿದೆಲ್ಲ ಸಂಗತಿಗಳು ಗೌಣವಾದವು. ಒಂದು ಕ್ಷಣವೂ ತಡಮಾಡದೇ ದಂಪತಿಗಳನ್ನು ಸಂಪರ್ಕಿಸಿದ್ದೆ. ಮರುದಿನವೇ ಬಂದು ಭೇಟಿಯಾಗುವಂತೆ ಹೇಳಿದ್ದರು.
                           ಕಶ್ಯಪ್ ದಂಪತಿಗಳಿಗೆ ಮದುವೆಯಾಗಿ ಕೇವಲ ಒಂದು ಸಂವತ್ಸರವಷ್ಟೇ ಕಳೆದಿತ್ತು. ವೈದ್ಯಕೀಯ ತಪಾಸಣೆಯಿಂದ ತಮಗೆ ಮಕ್ಕಳಾಗುವ ಸಂಭವವಿಲ್ಲವೆಂದು ಖಚಿತವಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿತ್ತು. ದತ್ತು ತೆಗೆದುಕೊಳ್ಳುವ ಯೋಚನೆ ಮೂಡಿತಾದರೂ ಯಾರದ್ದೋ ಮಗುವನ್ನು ತಮ್ಮ ವಂಶದ ಕುಡಿಯೆಂದು ಒಪ್ಪಲು ಮನಸ್ಸು ತಯಾರಿರಲಿಲ್ಲ. ಕೊನೆಗೆ ಅವರ ಫ್ಯಾಮಿಲಿ ವೈದ್ಯರೇ ಬಾಡಿಗೆ ತಾಯಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಅದರ ಪರಿಣಾಮವೇ ದಿನ ಪತ್ರಿಕೆಯಲ್ಲಿನ ಜಾಹೀರಾತು. ಮೊದಲ ಬಾರಿಗೆ ತಾನವರ ಮನೆಗೆ ಹೋದಾಗ ತನ್ನನ್ನು ಬಹಳವೇ ಪ್ರೀತಿ, ಮಮತೆ, ಗೌರವಗಳಿಂದ ಆದರಿಸಿದ್ದರು. ಪರಕೀಯರೆಂಬ ಭಾವನೆ ತನ್ನ ಮನಸ್ಸಿನಲ್ಲಿ ಮೂಡಿರಲೇ ಇಲ್ಲ. ತನ್ನ ಕೌಟುಂಬಿಕ ಪರಿಸ್ಥಿತಿ, ಹಣಕಾಸಿನ ತೊಂದರೆ, ಉನ್ನತ ವ್ಯಾಸಂಗದ ಕನಸು - ಎಲ್ಲವನ್ನೂ ಕೇಳಿ ತಿಳಿದ ಮೇಲೆ ಹಿಂದೆ ಮುಂದೆ ನೋಡದೇ ತನ್ನನ್ನೇ ಅವರ ವಂಶದ ಕುಡಿಯನ್ನು ಹಡೆಯಲು ಆಯ್ಕೆ ಮಾಡಿಕೊಂಡಿದ್ದರು. ತನ್ನ ಉನ್ನತ ವ್ಯಾಸಂಗದ ಎಲ್ಲ ಖರ್ಚುವೆಚ್ಚಗಳ ಹೊಣೆ ಹೊತ್ತಿಕೊಳ್ಳುವುದರ ಜೊತೆಗೆ ಊಟ ವಸತಿಗಳ ವ್ಯವಸ್ಥೆಯನ್ನೂ ಮಾಡುವ ಭರವಸೆ ನೀಡಿದರು. ಎಮ್. ಎಸ್ಸಿ.ಯ ಕನಸು ನನಸಾಗಬೇಕೆಂದರೆ ಇದೊಂದೇ ತನ್ನ ಮುಂದಿರುವ ಆಯ್ಕೆಯೆಂದು ತನಗೆ ತೋರಿತು. ಕೊನೆಗೂ ತಾಯಿಯಾಗುವ ಕೆಲಸಕ್ಕೆ ತಾನು ತಲೆಬಾಗಿದ್ದೆ.
                                    ಅಂದಿನಿಂದ ತನ್ನ ಬದುಕಿನ ಹೊಸದೊಂದು ಅಧ್ಯಾಯ ಆರಂಭವಾಗಿತ್ತು. ವಾರದೊಳಗೆ ತಾನು ಅವರ ಮನೆಯಲ್ಲಿ ಉಳಿಯಲು ಪ್ರಾರಂಭಿಸಿದ್ದೆ. ಮನೆಯಲ್ಲಿ ಈ ಸಂಗತಿಯನ್ನು ಮುಚ್ಚಿಟ್ಟು ತನಗೆ ಉತ್ತಮ ಸಂಬಳದ ಒಳ್ಳೆಯ ಕೆಲಸವೇ ದೊರಕಿದ್ದು, ಇನ್ನು ಮುಂದೆ ಹಣಕಾಸಿನ ವಿಚಾರವಾಗಿ ಚಿಂತೆ ಹಚ್ಚಿಕೊಳ್ಳುವ ಪ್ರಮೇಯವಿಲ್ಲವೆಂದೂ ತಿಳಿಸಿದಾಗ ಅಪ್ಪ ಎಷ್ಟೊಂದು ಸಮಾಧಾನ ಪಟ್ಟುಕೊಂಡಿದ್ದರು. ಅದನ್ನು ಕಂಡು ಒಂದು ಕ್ಷಣ ನೈತಿಕತೆಯ ವಿಚಾರ ತಲೆಯಲ್ಲಿ ಸುಳಿದು ತಾನು ಇಡುತ್ತಿರುವ ಹೆಜ್ಜೆ ಸರಿಯಾದುದೇ ಎಂಬ ಸಂದೇಹ ತಲೆಯಲ್ಲಿ ಇಣುಕು ಹಾಕಿತ್ತು. ಮನೆಯವರೆಲ್ಲರ ಒಳಿತಿಗಾಗಿಯೇ ಅಲ್ಲವೇ ತಾನು ಈ ಹಾದಿಯನ್ನು ಆಯ್ದುಕೊಂಡಿರುವುದು ಎಂಬ ಅರಿವು ಸಂದೇಹವನ್ನು ಇನ್ನೆಂದೂ ಹತ್ತಿರ ಸುಳಿಯದಂತೆ ದೂರ ಓಡಿಸಿತ್ತು. ತಿಂಗಳು ಕಳೆಯುವಷ್ಟರಲ್ಲಿಯೇ ತಾನು ಗರ್ಭಿಣಿಯಾಗಿದ್ದೆ. ತನಗೆ ಆ ಮನೆಯಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ತನ್ನ ಸೇವೆಗೆ ಒಬ್ಬರಲ್ಲ ಒಬ್ಬರು ಕಾದು ನಿಂತಿರುತ್ತಿದ್ದರು. ವತ್ಸಲಾ ಅವರಂತೂ ತನ್ನನ್ನು ಹೆತ್ತ ಮಗಳಂತೆ ಆರೈಕೆ ಮಾಡುತ್ತಿದ್ದರು.
                            ತಿಂಗಳುಗಳು ಕಳೆದಂತೆ ತನ್ನಲ್ಲಿ ದೈಹಿಕ ಬದಲಾವಣೆಯ ಜೊತೆಗೆ ಮಾನಸಿಕ ಬದಲಾವಣೆಯೂ ಆಗತೊಡಗಿತ್ತು. ಉಬ್ಬಿದ ಹೊಟ್ಟೆಯನ್ನು ನೋಡಿದಷ್ಟು, ಮುಟ್ಟಿಕೊಂಡಷ್ಟು ಏನೋ ಒಂದು ಬಗೆಯ ರೋಮಾಂಚನವಾಗುತ್ತಿತ್ತು. ತನ್ನ ರಕ್ತ, ಮಾಂಸಗಳನ್ನು ಹಂಚಿಕೊಂಡು ಬೆಳೆಯುತ್ತಿರುವ ಕಂದಮ್ಮನ ಕುರಿತು ಇನ್ನಿಲ್ಲದ ಪ್ರೀತಿ, ಮಮಕಾರ ಮೂಡತೊಡಗಿದ್ದವು. ಒಡಲೊಳಗೆ ಕಂದನ ಚಲನೆಯ ಅನುಭೂತಿಯಾದಾಗಲೆಲ್ಲ ತಾನು ಅನಿರ್ವಚನೀಯ ಸುಖವನ್ನು ಅನುಭವಿಸುತ್ತಿದ್ದೆ. ಆದರೆ ಸಂತಸದಿಂದ ಮನಸ್ಸು ಅರಳುವಾಗಲೆಲ್ಲ ವಿವೇಕ ತನ್ನನ್ನು ಎಚ್ಚರಿಸುತ್ತಿತ್ತು. ಗರ್ಭದೊಳಗಿನ ಕೂಸಿನ ಕುರಿತು ಭಾವನಾತ್ಮಕವಾಗಿ ತಾನು ಸೋಲುತ್ತಿರುವುದು ಸರಿಯಾದುದಲ್ಲ. ಏಕೆಂದರೆ, ಅದು ತನ್ನ ಕೈತುತ್ತು ಉಂಡು ಬೆಳೆಯುವ ಮಗುವಲ್ಲ, ಬೇರೆ ವಂಶದ ಕುಡಿ. ಆದರೆ ಮನಸ್ಸಿಗೆ ಬೇಲಿ ಹಾಕುವ ಬಗೆ ಹೇಗೆ..?? ಜೊತೆಯಲ್ಲೇ ಮತ್ತೊಂದು ಹೊಸದಾದ ಕಷ್ಟ ತಲೆದೋರಿತು. ವಿನಯ್ ಕಶ್ಯಪ್ ರ ಎದುರು ತಲೆ ಎತ್ತಿ ನಿಲ್ಲಲು ತನ್ನಿಂದಾಗುತ್ತಿರಲಿಲ್ಲ. ಅರ್ಥವಾಗದ ವಿಚಿತ್ರ ಭಾವನೆ ಮನಸ್ಸಿನಲ್ಲಿ ಮೂಡುತ್ತಿತ್ತು. ಅವರ ಕಣ್ಣಿಗೆ ಬೀಳದಂತೆ ತಾನು ಸದಾ ಎಚ್ಚರಿಕೆ ವಹಿಸುತ್ತಿದ್ದೆ.
                             ನವಮಾಸಗಳು ಕಳೆದ ನಂತರ ಯಾವುದೇ ತೊಂದರೆಯಿಲ್ಲದೇ ತಾನೊಂದು ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದ್ದೆ. ಹೆತ್ತಮ್ಮನೊಟ್ಟಿಗೆ ಬಾಳುವ ಭಾಗ್ಯವಿಲ್ಲವೆಂದು ಆ ಕಂದನಿಗೆ ಮೊದಲೇ ತಿಳಿದಿತ್ತೇನೋ ಎಂಬಂತೆ ಹೆರಿಗೆಯ ಸಮಯದಲ್ಲಿ ಅಂಥ ಪ್ರಸವ ವೇದನೆ ಉಂಟಾಗಿರಲೇ ಇಲ್ಲ. ಮೊದಲೇ ಕಂದನನ್ನು ಅಗಲಬೇಕಾದ ನೋವನ್ನು ಎದೆಯೊಳಗೆ ಹೊತ್ತುಕೊಂಡಿರುವ ತನಗೆ ಹೆರಿಗೆಯ ಸಮಯದಲ್ಲೂ ನೋವು ಕೊಡಬಾರದೆಂದು ಆ ಕಂದನಿಗೆ ದೇವರೇ ಹೇಳಿಕೊಟ್ಟಿದ್ದನೇನೋ. ಮಗುವನ್ನು ತಾನು ಒಮ್ಮೆಯಷ್ಟೇ ನೋಡಿದ್ದು. ಅದು ತನ್ನಿಂದ ದೂರವಾಗುತ್ತಿರುವ ಕ್ಷಣಗಳಲ್ಲಿ ತಾನು ಅದೆಷ್ಟು ಸಂಕಟ ಪಟ್ಟಿದ್ದೆ. ಹಸಿ ಬಾಣಂತಿ ಹೀಗೆಲ್ಲ ದುಃಖ ಪಡಬಾರದೆಂದು ನರ್ಸು ಹೇಳುತ್ತಲೇ ಇದ್ದರೂ  ಆ ಒಂದು ದಿನ ಪೂರ್ತಿ ಅತ್ತೇ ಕಳೆದಿದ್ದೆ.
ಎಷ್ಟಾದರೂ ಒಂಭತ್ತು ತಿಂಗಳು ಅದನ್ನು ಹೊತ್ತು ಹಡೆದವಳು ತಾನಲ್ಲವೇ..??
                             ಮೂರು ತಿಂಗಳ ಬಾಣಂತನದ ಆರೈಕೆಯ ತರುವಾಯ ತನ್ನ ತಲೆಯಲ್ಲಿ ಎಮ್. ಎಸ್ಸಿ.ಯ ಕನಸು ಮತ್ತೆ ಬೇರು ಬಿಟ್ಟಿತು. ಕಶ್ಯಪ್ ದಂಪತಿಗಳು ತಮ್ಮ ಮಾತಿನಂತೆ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ತನ್ನ ವ್ಯಾಸಂಗಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿ ಮುಗಿಸಿದ್ದರು. ತಾನು ಕಾಲೇಜಿಗೆ ಹೋಗಿ ಕ್ಲಾಸುಗಳಿಗೆ ಕೂರುವುದೊಂದೇ ಬಾಕಿ ಉಳಿದಿತ್ತು. ಹೆರಿಗೆಯ ನಂತರ ತಾನವರನ್ನು ನೋಡಿರಲೇ ಇಲ್ಲ. ಅಷ್ಟು ಮಾನಸಿಕ ಧೈರ್ಯ ತನ್ನಲ್ಲಿ ಇರಲಿಲ್ಲ. ಒಮ್ಮೆ ವತ್ಸಲಾ ಅವರು ತಾವಾಗಿಯೇ ಫೋನ್ ಮಾಡಿ ಮಗುವಿಗೆ ಕಿರಣ್ ಎಂದು ಹೆಸರಿಟ್ಟಿರುವರೆಂದು ತಿಳಿಸಿದ್ದರಷ್ಟೆ. ಕಾಲೇಜಿನ ದಿನಗಳಲ್ಲೂ ಆಗಾಗ ಮಗುವಿನ ನೆನಪು ಅತಿಯಾಗಿ ಕಾಡುತ್ತಿತ್ತು. ಆದರೆ ಓದಿನಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವ ಮೂಲಕ ಅದನ್ನು ಮರೆಯಲು ಪ್ರಯತ್ನಪಡುತ್ತಿದ್ದೆ. ಮುಂದಿನ ಎರಡು ವರುಷಗಳಲ್ಲಿ ತನ್ನ ಎಮ್. ಎಸ್ಸಿ. ಮುಗಿದಿತ್ತು. ವಿದ್ಯಾರ್ಹತೆಗೆ ತಕ್ಕನಾದ ಉದ್ಯೋಗವು ದೊರಕಿತ್ತು. ಆ ನಂತರ ತನ್ನ ಮದುವೆ, ಮತ್ತೆ ಎರಡೇ ವರ್ಷಗಳಲ್ಲಿ ಜ್ಯೋತಿಯ ಜನನ.
                              ಹಳೆಯ ನೆನಪುಗಳಿಂದ ಜನನಿಯ ಕಣ್ಣು ಮಂಜಾಯಿತು. "ಇಲ್ಲಿ ಕೇಳೆ, ನಮ್ಮ ಜ್ಯೋತಿಗೆ ಒಂದು ಒಳ್ಳೆಯ ಸಂಬಂಧ ಸಿಕ್ಕಿದೆ ಕಣೇ." ಎಂದು ತನ್ನವರು ಕರೆದದ್ದು ಕೇಳಿಸಿ ಸೆರಗಿನಿಂದ ಕಣ್ಣೀರು ಒರೆಸಿಕೊಂಡು ಸಾವಧಾನ ಚಿತ್ತದಿಂದ ಮುಗುಳ್ನಗುತ್ತಾ ಅತ್ತ ಕಡೆ ಹೋದಳು. (ಮುಗಿಯಿತು)


1 comment: