Tuesday, 20 May 2014

ನಾವೆಷ್ಟರ ಮಟ್ಟಿಗೆ ಹೊಣೆ..??


                   ಯಾವುದೋ ಒಂದು ಚಲನಚಿತ್ರ ನೋಡಿದಾಗ ನಮ್ಮೊಳಗಿನ ಭಾರತೀಯ ಎಚ್ಚೆತ್ತುಕೊಳ್ಳುತ್ತಾನೆ/ಳೆ. ಯಾರದ್ದೋ ಭಾಷಣ ಕೇಳಿದಾಗ ನಮ್ಮ ದೇಶದ ಕುರಿತು ನಮಗೆ ಅಭಿಮಾನ ಮೂಡುತ್ತದೆ. ಯಾವುದೋ ಒಂದು ಪುಸ್ತಕದಲ್ಲಿನ ನಾಲ್ಕು ಸಾಲುಗಳನ್ನು ಓದಿದಾಗ ನಾವು ಸತ್ಯವನ್ನು ಸಮಾಧಿ ಮಾಡಿ ಸುಳ್ಳನ್ನು ಆರಾಧಿಸುತ್ತಿರುವ ಕುರಿತು ಜ್ಞಾನೋದಯವಾಗುತ್ತದೆ. ಉಳಿದ ಹೊತ್ತಿನಲ್ಲಿ..?? ಕಪಟ ನಿದ್ದೆ. ಗಡಿಯಲ್ಲಿ ಯಾವುದೋ ಒಬ್ಬ ಸೈನಿಕನನ್ನು ಶತ್ರುದೇಶದ ಯೋಧನೊಬ್ಬ ಗುಂಡಿಕ್ಕಿ ಕೊಂದರೆ ಆತನ ಕುರಿತು ಸಂತಾಪ ವ್ಯಕ್ತ ಪಡಿಸುತ್ತೇವೆ, ಸರ್ಕಾರದ ಕುರಿತು ಆಕ್ರೋಶ ಉಕ್ಕುತ್ತದೆ. ಯುವತಿಯೊಬ್ಬಳನ್ನು ಅತ್ಯಾಚಾರಗೈದು ಕೊಂದರೆ ಎಲ್ಲರಿಗೂ ಮಾನವೀಯತೆ, ರಕ್ಷಣೆಯೆಂಬ ಪದಗಳು ನೆನಪಾಗುತ್ತವೆ. ವ್ಯವಸ್ಥೆ ಸರಿಯಿಲ್ಲವೆಂದು ಪ್ರತಿಭಟನೆ ಗೈಯ್ಯುತ್ತೇವೆ. ಅದೂ ಕೂಡ ಇವೆಲ್ಲ ಘಟನೆಗಳೂ ಕಣ್ಣು, ಕಿವಿಗಳ ಮೂಲಕ ಹೃದಯವನ್ನು ತಲುಪಿ ಕೊನೆಗೆ ಮಲಗಿರುವ ಮೆದುಳನ್ನು ಬಡಿದೆಬ್ಬಿಸಬೇಕು. ಹಾಗೆಂದರೆ ಮಾತ್ರವೇ ನಾವು ಏಳುವುದು. ಇಲ್ಲವೆಂದಾದರೆ..??
                     ಇದು ಇಂದು ನಿನ್ನೆಯ ಕಥೆಯಲ್ಲ. ಸುಮಾರು ಶತಮಾನಗಳಿಂದಲೂ ನಾವೆಲ್ಲರೂ ಮಲಗಿಯೇ ಇದ್ದೇವೆ. ನಿದ್ದೆಗಣ್ಣಿನಲ್ಲಿರುವ ನಮಗೆ ನಾವೇನು ಮಾಡುತ್ತಿದ್ದೇವೆ ಎನ್ನುವುದೇ ಅರ್ಥವಾಗುತ್ತಿಲ್ಲ. ಎಚ್ಚೆತ್ತು ಅದನ್ನು ಅರ್ಥ ಮಾಡಿಕೊಳ್ಳುವುದು ಬೇಕಾಗೂ ಇಲ್ಲ. ಸ್ವಾತಂತ್ರ್ಯ ಬರುವ ಮೊದಲೂ, ಬಂದ ನಂತರದಲ್ಲೂ ನಮ್ಮದು ಅದೇ ಕತೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸುಖ ಸಂತೋಷವನ್ನು ತ್ಯಾಗಮಾಡಿ ಪ್ರಾಣವನ್ನೇ ಬಲಿದಾನಗೈದ ವೀರ ಸೇನಾನಿಗಳನ್ನು ಮೂಲೆಗಟ್ಟಿದ್ದೇವೆ. ಅವರ ಹೋರಾಟದ ಕೀರ್ತಿಯನ್ನು ಪುಕ್ಕಟೆಯಾಗಿ ತಮ್ಮದಾಗಿಸಿಕೊಂಡವರನ್ನು ನಾಯಕರೆಂದು ಹೊಗಳಿ ಅಟ್ಟಕ್ಕೇರಿಸಿದ್ದೇವೆ. ಈಗಲೂ ಸಹ ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇವೆ. ಹೊಗಳಲೂ ನಮಗೆ ಅವರೇ ಬೇಕು. ಉಳಿದವರ ಕೊಡುಗೆ ಇದ್ದರೂ ಅದು ಕಾಣಿಸುವುದಿಲ್ಲ. ಆಮೇಲೆ ಏನಾದರೂ ತಪ್ಪಾದರೆ ತೆಗಳುವುದೂ ಅವರನ್ನೇ. ಅದರಲ್ಲಿ ನಮ್ಮದು ಪಾತ್ರವಿದೆಯೆಂಬುದನ್ನು ನಾವು ಯೋಚಿಸುವ ಗೋಜಿಗೇ ಹೋಗುವುದಿಲ್ಲ.
                                 ಬಹಳ ಹಿಂದಿನ ಕಥೆಯೇಕೆ, ಕಳೆದ ಐದು ವರ್ಷಗಳನ್ನೇ ತೆಗೆದುಕೊಳ್ಳೋಣ. ದೇಶ ಹಲವಾರು ಸಮಸ್ಯೆಗಳ ಸುಳಿಗೆ ಸಿಲುಕಿದಾಗ ನಾವೆಲ್ಲಾ ಬೈದು ತೆಗಳಿದ್ದು ನಮ್ಮ ಸರ್ಕಾರವನ್ನು, ನಮ್ಮ ವ್ಯವಸ್ಥೆಯನ್ನು. ಆದರೆ ಸರ್ಕಾರ ಎಂದರೇನು..?? ಅದನ್ನು ರಚಿಸಿದವರು ಯಾರು..?? ನಾವೇ ಅಲ್ಲವೇ..?? "ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿಯೇ, ಪ್ರಜೆಗಳಿಗೋಸ್ಕರ ರಚಿತವಾದ ಒಂದು ವ್ಯವಸ್ಥೆ." ಎನ್ನುವುದನ್ನು ಐದು-ಆರನೇ ತರಗತಿಗಳಲ್ಲಿದ್ದಾಗ ಅದೆಷ್ಟು ಸಲ ಕಂಠಪಾಠ ಮಾಡಿರುವುದಿಲ್ಲ..?? ವಯಸ್ಕರಾದ ಕೂಡಲೇ ಅದೆಲ್ಲವೂ ಮರೆತು ಹೋಗುವುದೇಕೆ..?? ಎಲ್ಲದಕ್ಕೂ ಬೇರೆಯವರನ್ನು ಹೊಣೆಗಾರರನ್ನಾಗಿಸಿ ನಾವು ಜಾರಿಕೊಳ್ಳುವ ಮನಸ್ಥಿತಿಯೇಕೆ..?? ಇದನ್ನು ಹೇಡಿತನ ಎಂದಲ್ಲದೇ ಮತ್ತೇನೆನ್ನಬೇಕು..?? ಯಾರೋ ಒಬ್ಬ ಮಹಾನ್ ವ್ಯಕ್ತಿಯೇ ಬಂದು ಇದನ್ನೆಲ್ಲಾ ಸರಿಪಡಿಸಬೇಕೆನ್ನುತ್ತೇವೆ. ನಾವೇ ಏಕೆ ಸ್ವಚ್ಛಗೊಳಿಸಲು ಮುಂದಾಗುವುದಿಲ್ಲ..?? ಇಲ್ಲಿಯೇ ಹುಟ್ಟಿ, ಇಲ್ಲಿಯ ಗಾಳಿ, ನೀರುಗಳನ್ನೇ ಸೇವಿಸಿ, ಇಲ್ಲಿಯ ಸಕಲ ಸಂಪನ್ಮೂಲ, ಸೌಕರ್ಯ, ಸವಲತ್ತುಗಳನ್ನೆಲ್ಲಾ ಪಡೆದುಕೊಂಡು ಕೊನೆಗೆ ಇಲ್ಲಿ ಏನು ಸರಿಯಿಲ್ಲವೆಂದು ಹೇಳುತ್ತಾ ವಿದೇಶಕ್ಕೆ ಹಾರಲು ತಯಾರಾಗುತ್ತೇವೆ. ಎಲ್ಲರೂ ಹೀಗೆಯೇ ಹಾರಿ ಹೋದರೆ ಇಲ್ಲಿದ್ದುಕೊಂಡು ಕೊಳೆಯನ್ನು ಚೊಕ್ಕಟಮಾಡುವವರಾರು..?? ತೆಗೆದುಕೊಳ್ಳುವುದೊಂದೇ ನಮ್ಮ ಹಕ್ಕೇ..?? ತಿರುಗಿ ನೀಡುವ ಕರ್ತವ್ಯವೂ ನಮಗಿಲ್ಲವೇ..?? ಇದೆಲ್ಲವೂ ನಮಗೆ ತಿಳಿಯದ ವಿಷಯಗಳೇ..?? ಚೆನ್ನಾಗಿ ತಿಳಿದಿರುವಂಥವುಗಳೇ. ಅದಕ್ಕೆ ಹೇಳಿದ್ದು ನಮ್ಮದು ಕಪಟ ನಿದ್ದೆಯೆಂದು.


                            ನಮ್ಮ ನಮ್ಮ ಮನೆಗಳಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಅದನ್ನು ಎಲ್ಲರೂ ಒಟ್ಟಾಗಿ ಬಗೆಹರಿಸಲು ಮುಂದಾಗುತ್ತೇವೆಯೇ ಹೊರತು ಯಾರೊಬ್ಬರೂ ಕೂಡ ಸಮಸ್ಯೆಯ ನೆಪ ಹೇಳಿ ಮನೆ ಬಿಟ್ಟು ಹೋಗುವುದಿಲ್ಲ. ಇದು ನಮ್ಮ ದೇಶಕ್ಕೂ, ಸಮಾಜಕ್ಕೂ ಅನ್ವಯಿಸುತ್ತದೆ. ಮೊದಲು ನಾವು ಸದಾ ಎಚ್ಚೆತ್ತುಕೊಂಡಿರಬೇಕು. ಯಾವುದೋ ಒಂದು ವ್ಯಕ್ತಿ, ವಿಷಯ, ಘಟನೆ ನಮ್ಮನ್ನು ಎಬ್ಬಿಸುತ್ತಿರಬೇಕಾದಂತಹ ಸೋಮಾರಿಗಳಾಗಬಾರದು. ಆವಾಗ ನಮ್ಮ ನಮ್ಮ ಹಕ್ಕು, ಕರ್ತವ್ಯ, ಜವಾಬ್ದಾರಿಗಳ ಸಂಪೂರ್ಣ ಅರಿವು ನಮಗಾಗುತ್ತದೆ. ಏನೇ ಆದರೂ ಅದಕ್ಕೆ ಬೇರೆಯವರನ್ನು ದೂರುವ ಮೊದಲು ಒಮ್ಮೆ ನಮ್ಮೊಳಗೆ ಕಣ್ಣು ಹಾಯಿಸಬೇಕು. ಏಕೆಂದರೆ ನಾವು ನಮ್ಮ ತೋರು ಬೆರಳನ್ನು ಮುಂದೆ ಮಾಡಿದಾಗ ಉಳಿದ ನಾಲ್ಕು ಬೆರಳುಗಳು ನಮ್ಮತ್ತಲೇ ಮುಖ ಮಾಡಿರುತ್ತವೆ.
                            ಮೊನ್ನೆಯಷ್ಟೆ ಚುನಾವಣಾ ಫಲಿತಾಂಶ ಬಂದಿದೆ. ಹೊಸ ಆಶಯವನ್ನು ಹೊತ್ತು ಹೊಸ ಭರವಸೆಗಳೊಂದಿಗೆ ಹೊಸ ಜನರ ಕೈಗೆ ದೇಶದ ಆಡಳಿತದ ಚುಕ್ಕಾಣಿಯನ್ನು ಒಪ್ಪಿಸಿದ್ದಾಗಿದೆ. ಹಾಗಂತ ಇಷ್ಟಕ್ಕೇ ನಮ್ಮೆಲ್ಲರ ಪಾತ್ರ ಮುಗಿದು ಹೋಯಿತೆಂದರ್ಥವಲ್ಲ. ಅಸಲಿ ಪಾತ್ರ ಆರಂಭವಾಗುವುದೇ ಈಗ. ಆಡಳಿತ ನಡೆಸುವವರು ಹಾಗೆ ಮಾಡಲಿ ಹೀಗೆ ಮಾಡಲಿ ಎನ್ನುತ್ತಾ ಎಲ್ಲವನ್ನೂ ಅವರ ಕೈಗೊಪ್ಪಿಸಿ ನಾವು ಸುಮ್ಮನೆ ಕಣ್ಮುಚ್ಚಿ ಕೂರುವಂತಿಲ್ಲ. ನಮ್ಮ ಮೇಲೂ ಹಲವಾರು ಗುರುತರವಾದ ಜವಾಬ್ದಾರಿಗಳಿವೆ. ಸ್ವತಃ ನಾವೇ ಮುಂದಾಗಿ ಮಾಡಬೇಕಾದ ಕರ್ತವ್ಯಗಳಿವೆ. ಅದನ್ನೆಲ್ಲ ನಾವು ಅರಿತು ನಡೆಯಬೇಕು. ಇನ್ನಾದರೂ ಸತ್ಯದ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ನಿಲ್ಲಿಸಬೇಕು. ಹಾಗಾದಾಗ ಮುಂದೊಂದು ದಿನ ಬೇರೆಯವರನ್ನು ದೂರಬೇಕಾದ ಸಂದರ್ಭವೇ ಬರುವುದಿಲ್ಲ. ನಮ್ಮ ದೇಶ, ವ್ಯವಸ್ಥೆಗಳ ಕುರಿತು ಬೇಸರಪಟ್ಟುಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ. ಆಗಲೇ ೬೬ ವರ್ಷಗಳು ಕಳೆದವು ಭಾರತ ಸ್ವಾತಂತ್ರ್ಯ ರಾಷ್ಟ್ರವಾಗಿ. ಇನ್ನೂ ಎಲ್ಲಿಯ ತನಕ ಈ ಕಪಟ ನಿದ್ದೆ..?? ಸಾಕು, ಇನ್ನಾದರೂ ಎಲ್ಲರೂ ಎದ್ದೇಳೋಣ.


2 comments:

  1. ಉತ್ತಮ ಬರಹ. ನಿಜಕ್ಕೂ ಈ ದೇಶಕ್ಕಾಗಿ ನಮ್ಮ ಕರ್ತವ್ಯ ತುಂಬಾ ಇದೆ, ಇದನ್ನೆಲ್ಲ ನಾವು ಮರೆತಿದ್ದೇವೆ. ನಮ್ಮದಿನನಿತ್ಯದಲ್ಲಿನ ಎಷ್ಟೋ ವಿಷಯಗಳನ್ನ ಗಮನಿಸಿದಾಗ ನಾವು ಎಷ್ಟು ನಿರ್ಲಕ್ಷತನದಿಂದ ವರ್ತಿಸುತ್ತಿದ್ದೇವೆ ಅನ್ನುವುದು ತಿಳಿಯುತ್ತದೆ. ರಸ್ತೆಯಲ್ಲಿನ ನಮ್ಮ ವರ್ತನೆ, ಸಿಗ್ನಲನ್ನು ಮುರಿಯುವುದು, ಸರಕಾರಿ ನಿಯಮಗಳನ್ನು ಮುರಿಯುವುದು. ಹೀಗೆ ಹೇಳಹೋದರೆ ತುಂಬಾ ಇದೆ ಅಲ್ಲವೇ...? ರಾಮರಾಜ್ಯದ ಕನಸು ನನಸಾಗುವ ಸಮಯ ಬಂದಿದೆ. ಬನ್ನಿ ಉತ್ತಮ ನಾಯಕರ ಜೋತೆಗೂಡೋಣ, ಅವರ ಜೋತೆ ಕೈ ಜೋಡಿಸೋಣ. ಈ ದೇಶದ ಸಲುವಾಗಿ ನಮ್ಮ ಕೈಲಾದ ಸಹಾಯ ಮಾಡೋಣ. ಒಗ್ಗಟ್ಟಿನಲ್ಲಿ ಬಲವಿದೆ.
    ಜೈ ಹಿಂದ್.

    ReplyDelete