Friday, 2 May 2014

ಜಲಪಾತ - ೧


ಹನಿಗಳ ಸಿಂಚನದ ಸಂಗೀತಕ್ಕೆ
ಮೈ ಸೋಕುವ ಸೌರಭವು ಜೊತೆಗೂಡಿ
ಗಾಳಿ ನೀರಿನ ಮಿಲನದಲ್ಲಿ ಜನ್ಮ ತಾಳಿ
ಕ್ಷಣಮಾತ್ರದಲ್ಲಿ ತೆರೆಯ ಹಿಂದೆ ಸರಿದು
ಸೌಂದರ್ಯ ರಾಶಿಯನ್ನು ಅನಾವರಣಗೊಳಿಸುವ
ಆ ಮಂಜಿನ ಮುಸುಕಲ್ಲವೇ
ಜಲಪಾತದ ಸಹಜ ಚೆಲುವಿಗೆ ಪ್ರಸಾಧನಗೈದದ್ದು

ಶಾಂತವಾಗಿ ನಡೆದು ಬಂದರೂ
ಕೊನೆ ತಲುಪಿದಂತೆ ಗತಿಯು ಹೆಚ್ಚಿ
ಕಿವಿಗಡಚಿಕ್ಕುವ ಮೂಕ ಆರ್ಭಟದ ಹಿನ್ನೆಲೆಯಲ್ಲಿ
ಭೋರ್ಗರೆಯುತ ಧುಮ್ಮಿಕ್ಕುವ ಪರಿಯನ್ನು
ಪದಗಳಲ್ಲಿ ವರ್ಣಿಸಿ ಬೇಲಿ ಹಾಕಲಿಕ್ಕುಂಟೇ..??
ಕ್ಷೀರವರ್ಣದ ಒಡಲೊಳಗಿನ ಸಾವಿರ ಬಣ್ಣ
ಕಲೆತು ಮೂಡಿಸುವ ಕಲಾಕೃತಿಯ ಮರ್ಮ

ಅಬ್ಬರ ಇಳಿದು ನೆಲ ತಲುಪಿದ ಮೇಲಲ್ಲವೇ..??
ಪ್ರತಿ ಉಸಿರಿನ ಹರಿವಿಗೆ ಮೆರಗು
ಆಳ ಮುಟ್ಟಿದಷ್ಟೂ ಭಾವ ಏರುವುದು
ರಾಗ ತಾಳಗಳೆಲ್ಲ ಮರಳಿ ವಿಜೃಂಭಿಸಿದಂತೆ
ಬೇಲಿಯೇ ಇಲ್ಲದ ಬಾನಿನಾಚೆ ತೇಲುವುದು
ಕಣಕಣವೂ ತಾನೊಂದು ಭಾಜ್ಯವಾಗಿ ನಿಂತು
ಓಟದಲ್ಲಿ ಎಲ್ಲರೊಳಗೊಂದಾಗುವ ಆಟ


No comments:

Post a Comment