Thursday, 15 May 2014

ಎಲ್ಲ ಮರೆತಿರುವಾಗ (ಭಾಗ ೧)


                    ‘ಕ್ರೀಂ ಕ್ರೀಂ’ ಶಬ್ದದೊಂದಿಗೆ ಬಸ್ಸಿನ ಓಟಕ್ಕೆ ಬ್ರೇಕ್ ಬಿದ್ದು ಅದರೊಂದಿಗೆ ತಾನೂ ಮುಗ್ಗರಿಸಿದಾಗಲೇ ಮಂದಾಕಿನಿಗೆ ತಾನು ನಿದ್ದೆ ಹೋಗಿದ್ದ ವಿಷಯ ಅರಿವಿಗೆ ಬಂತು. "ಛೇ, ಅದ್ಯಾವ ಕ್ಷಣದಲ್ಲಿ ನಿದ್ದೆ ಹತ್ತಿತೋ ಏನೋ" ಎಂದು ತನ್ನನ್ನೇ ತಾನು ಶಪಿಸಿಕೊಂಡು ಸರಿಯಾಗಿ ಎದ್ದು ಕುಳಿತುಕೊಳ್ಳುತ್ತಾ ತನ್ನ ಸೀರೆ ಸರಿಯಾಗಿದೆಯೇ ಇಲ್ಲ ನಿದ್ದೆ ಮಂಪರಿನಲ್ಲಿ ಸೆರಗು ಜಾರಿದೆಯೇ ಎಂದು ಪರೀಕ್ಷಿಕೊಂಡಳು. ಬಸ್ಸೇಕೆ ಒಮ್ಮೆಗೇ ನಿಂತಿತು ಎಂಬ ಯೋಚನೆ ಮೂಡಿತು. "ಅಯ್ಯೋ, ಟ್ರಾಫಿಕ್ ಬಿತ್ತೇ..?? ಹಾಗಾದರೆ ಇನ್ನು ಮನೆ ಸೇರುವುದು ಒಂದು ಗಂಟೆ ತಡವಾಗುವುದೆಂದೇ ಲೆಕ್ಕ" ಎನ್ನುವುದು ಅರಿವಾಗುತ್ತಿದ್ದಂತೆಯೇ ಥತ್ ಎಂಬ ಮಾತು ಹೊರಬಂತು. ಇವತ್ತು ಎದ್ದ ಗಳಿಗೆಯೇ ಚೆನ್ನಾಗಿಲ್ಲ ಇರಬೇಕು. ಬೆಳಿಗ್ಗೆ ನೋಡಿದರೆ ದಾರಿ ಮಧ್ಯದಲ್ಲಿ ಬಸ್ಸು ಪಂಕ್ಚರ್ ಆಗಿ ಬೇರೆ ಬಸ್ಸು ಹಿಡಿದು ಆಫೀಸಿಗೆ ಹೋಗಬೇಕಾಯಿತು. ತಡವಾಗಿ ಹೋಗಿದ್ದಕ್ಕೆ ಮೇಲಧಿಕಾರಿಯಿಂದ ಬೈಗುಳಗಳ ಪೂಜೆಯೂ ದೊರೆಯಿತು. ಅದರ ಜೊತೆಯಲ್ಲೇ ಲಕ್ಷ್ಮೀಯ ಜೊತೆಯೂ ಸುಮ್ಮನೆ ವಿನಾಕಾರಣ ಮನಸ್ತಾಪಕ್ಕೊಳಗಾಗುವಂತಾಯಿತು. ಈಗ ನೋಡಿದರೆ ಇಲ್ಲಿ ಹೀಗೆ ವ್ಯರ್ಥವಾಗಿ ಗಂಟೆಗಳ ಕಾಲ ಬಸ್ಸಿನಲ್ಲಿ ಕೂತಿರಬೇಕು.
                             ಲಕ್ಷ್ಮೀಯ ನೆನಪು ಮೂಡುತ್ತಿದ್ದಂತೆ ಅಂದಿನ ದಿನ ಊಟದ ಬಿಡುವಿನಲ್ಲಿ ನಡೆದ ಮಾತುಕತೆಗಳೆಲ್ಲ ಮಂದಾಕಿನಿಯ ಕಣ್ಣೆದುರು ತೇಲಿ ಬರತೊಡಗಿದವು. ಈ ಮೊದಲು ಹೇಳಿದ ಮಾತುಗಳನ್ನೇ ಪುನಃ ಇಂದು ಹೇಳಿದರೂ ಲಕ್ಷ್ಮೀಯ ಮಾತುಗಳಲ್ಲಿ ತನ್ನ ಕುರಿತಾಗಿ ಸಾಕಷ್ಟು ಬೇಸರ, ಹತಾಶೆ, ಕಾಳಜಿ, ಮಮತೆಗಳೆಲ್ಲವೂ ವ್ಯಕ್ತವಾಗಿದ್ದವು. ಅವಳು ಹೇಳಿದ್ದರಲ್ಲಿ ತಪ್ಪಾದರೂ ಏನಿದೆ..?? "ನಿನಗೆಷ್ಟು ಸಲ ಹೇಳಿದರೂ ಅಷ್ಟೆ ಕಣೇ. ಹೇಳಿ ಹೇಳಿ ನನ್ನ ಗಂಟಲಿಗೆ ಒಂದಿಷ್ಟು ಶ್ರಮವಾಗುವುದೇ ಹೊರತು ನಿನ್ನ ತಲೆಗೆ ಮಾತ್ರ ಏನೂ ಅರ್ಥವಾಗುವುದಿಲ್ಲ. ನೀನು ಯಾಕೆ ಹಳೆಯ ನೆನಪುಗಳಲ್ಲೇ ಇಂದಿನ ಬದುಕನ್ನು ಕಟ್ಟಿಕೊಳ್ಳುತ್ತೀಯ ಎನ್ನುವುದು ಮಾತ್ರ ನನಗೂ ಅರ್ಥವಾಗದ ವಿಚಾರ. ಅವುಗಳಿಂದ ನಿನ್ನ ಮನಸ್ಸಿಗೆ ದೊರಕುವುದು ನೋವೇ ಹೊರತು ಸಂತಸವಲ್ಲ ಎನ್ನುವುದು ಅನುಭವದಿಂದಲೂ ನಿನಗೆ ಅರಿವಾಗುವುದಿಲ್ಲವಲ್ಲ. ಏನನ್ನೂ ವ್ಯಕ್ತಪಡಿಸದೇ ಮನಸ್ಸಿನಲ್ಲೇ ಎಲ್ಲವನ್ನೂ ಹೊತ್ತುಕೊಂಡರೆ ಮನಶ್ಶಾಂತಿಯಿಂದ ಇರಲಾಗುವುದೇ..?? ಸರಿ ತಪ್ಪು ಎನ್ನುವುದನ್ನೆಲ್ಲ ಯೋಚಿಸದೇ ಅವತ್ತಿನ ದಿನ ನೀನು ಅವನಿಗೆ ಎಲ್ಲವನ್ನೂ ಹೇಳಿ ಬಿಡಬೇಕಾಗಿತ್ತು. ಅದನ್ನೂ ನೀನು ಮಾಡಲಿಲ್ಲ. ಸರಿ, ಆಮೇಲಾದರೂ ನೀನು ಸುಖವಾಗಿ ಇರಬೇಕೆಂದೇ ಅಲ್ಲವೇ ಅವನಿಂದ ದೂರವಾದದ್ದು..?? ಈಗ ಮತ್ತೆ ಹಳೆಯದರ ನೆರಳಲ್ಲೇ ಬೆಳಕನ್ನು ಹುಡುಕಲು ಹೊರಟರೆ ಅದಾಗುವುದೇ ಮಂದಾ..?? ನೋಡು, ನಿನ್ನ ಸಮಸ್ಯೆಗಳೆಲ್ಲವೂ ವರ್ಷದ ಹಿಂದೆಯೇ ತೀರಿಹೋಗಿವೆ. ಪುಟ್ಟ ನಿಕ್ಕಿಯ ಸಂಗತಿಯೂ ಸ್ವಲ್ಪ ದಿನಗಳಲ್ಲೇ ಬಗೆಹರಿಯಲಿದೆ. ಆದರೂ ನೀನು ಮಾತ್ರ ಒಂದು ಚೂರು ಬದಲಾಗಿಲ್ಲ. ಇನ್ನೂ ಹಳೆಯ ಮಂದಾಳಂತೆಯೇ ಇದ್ದೀಯಾ. ಆದದ್ದೇನೋ ಆಗಿ ಹೋಯಿತು. ಅದೆಲ್ಲವೂ ಒಂದು ಕೆಟ್ಟ ಘಳಿಗೆ ಎಂದುಕೊಂಡು ಕೊನೆ ಪಕ್ಷ ನಿಕ್ಕಿಯ ಸಲುವಾಗಿಯಾದರೂ ನೀನು ಹೊಸ ಬದುಕನ್ನು ಶುರು ಮಾಡಬೇಕು ತಾನೇ..?? ನಾನಿದೆಲ್ಲವನ್ನೂ ನಿನಗೆ ಅದೆಷ್ಟು ಬಾರಿ ಹೇಳಿದ್ದೇನೆ. ನೀನು ದಡ್ಡಿ ಮಾತ್ರವಲ್ಲ, ಹೇಡಿಯೂ ಹೌದು. ಇಲ್ಲದಿದ್ದರೆ ಒಂದು ವರ್ಷದ ಬಳಿಕವೂ ನೀನು ಹೀಗೆ ಇರುತ್ತಿರಲಿಲ್ಲ. ಇನ್ನೂ ಎಷ್ಟು ದಿನ ಹೀಗೆ ಇರಬೇಕೆಂದು ತೀರ್ಮಾನಿಸಿದ್ದೀಯಾ ಅನ್ನೋದನ್ನಾದರೂ ಹೇಳಿ ಬಿಡು ಮಾರಾಯ್ತಿ. ನಾನು ಇನ್ನಾದರೂ ನಿನಗೆ ಬುದ್ಧಿ ಹೇಳುವ ವ್ಯರ್ಥ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡುತ್ತೇನೆ." ಅವಳು ಇಷ್ಟೆಲ್ಲಾ ಹೇಳಲು ಕಾರಣವಾದರೂ ಏನು..?? ತಾನು ಹೇಳಿದ ಒಂದೇ ಒಂದು ವಾಕ್ಯ, "ಇವತ್ತಿಗೆ ನಾನು ಕಾರ್ತಿಕ್ ನಿಂದ ಡೈವೋರ್ಸ್ ತೆಗೆದುಕೊಂಡು ಸರಿಯಾಗಿ ಒಂದು ವರುಷವಾಯಿತು ಲಕ್ಷ್ಮೀ."
                                ಅದೊಂದು ಮಾತಿಗೆ ಅವಳು ಅಷ್ಟು ಬೈದಿದ್ದಲ್ಲವೆನ್ನುವುದು ಮಂದಾಕಿನಿಗೆ ಅರ್ಥವಾಗಿತ್ತು. ಅವಳು ಹೇಳಿದಂತೆಯೇ ತಾನು ಕಾರ್ತಿಕ್ ಜೊತೆ ಸಂಸಾರ ಮಾಡುವಾಗ ಹೇಗೆ ಇದ್ದೆನೋ ಅವನಿಂದ ದೂರವಾದ ನಂತರವೂ ಹಾಗೆಯೇ ಇದ್ದೇನೆನ್ನುವುದನ್ನು ಅವಳೂ ಬಲ್ಲಳು. "ಹೌದು ತಾನು ಹೇಡಿಯೇ ಸರಿ. ಎಲ್ಲವನ್ನೂ ಮರೆತು ಹೊಸ ಹಾದಿಯಲ್ಲಿ ಸಾಗಬೇಕೆಂದು ಮನಸ್ಸು ಬಯಸುತ್ತದೆಯೇ ವಿನಃ ಆ ದಿಕ್ಕಿನಲ್ಲಿ ಹೆಜ್ಜೆಯಿಡಲು ಮುಂದಾಗುವುದಿಲ್ಲ. ಎಲ್ಲದರಿಂದಲೂ ಮುಕ್ತಿ ದೊರಕಿ ಮನ ಬಂದ ಕಡೆ ಗರಿಬಿಚ್ಚಿ ಹಾರುವ ಅವಕಾಶ ಕಣ್ಣೆದುರಿಗೆ ಕೈಗೆಟುಕುವಂತಿದ್ದರೂ ತಾನು ಹಾರಲಾರೆ. ಪಂಜರದ ಹಕ್ಕಿಯಂತೆ ಮುಖ ಬಾಡಿಸಿ ಕುಳಿತುಕೊಳ್ಳುವುದೊಂದೇ ತಿಳಿದಿರುವುದು ತನಗೆ. ವಯಸ್ಸು ಮೂವತ್ತು ದಾಟಿರುವುದು ಸುಮ್ಮನೆ ತನಗೆ. ಸರಳ ಸತ್ಯದ ಅರಿವು ಇನ್ನು ಮೂಡುತ್ತಿಲ್ಲ." ತನ್ನ ಬಗ್ಗೆ ಯೋಚಿಸಿದಷ್ಟೂ ಬೇಸರವು ಅತಿಯಾಗಿ ಮಂದಾಕಿನಿಯ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಬಸ್ಸಿನಲ್ಲಿ ಯಾರಾದರೂ ನೋಡಿದರೆ ಮುಜುಗರವಾಗುವುದೆಂದು ಬೇಗನೇ ಸೆರಗಿನ ತುದಿಯಿಂದ ಕಣ್ಣನ್ನು ಒರೆಸಿಕೊಂಡಳು. ಥಟ್ಟನೇ ಅಲ್ಲಿಯ ತನಕವೂ ಇಲ್ಲದಿದ್ದ ನಿಕ್ಕಿಯ ನೆನಪು ಬಂತು. ಇಷ್ಟೊತ್ತಿಗೆ ಸ್ಕೂಲ್ ವ್ಯಾನು ಬಂದು ಇಳಿಸಿ ಹೋಗಿರುತ್ತದೆ. ತನಗಾಗಿಯೇ ಕಾದು ಕಾದು ಸಿಟ್ಟು ಬಂದಿರುತ್ತದೆಯಷ್ಟೆ. ಸ್ಟಾಪಿನಲ್ಲಿ ಬಸ್ಸಿನಿಂದ ಇಳಿದ ಕೂಡಲೇ ಅಲ್ಲೇ ಹತ್ತಿರವಿರುವ ಶೆಟ್ಟರ ಅಂಗಡಿಯಿಂದ ಒಂದು ಲಾಲಿಪಾಪ್ ಅನ್ನು ತೆಗೆದುಕೊಂಡು ಹೋಗಬೇಕು ಎಂದುಕೊಂಡಳು. ಅಷ್ಟು ಹೊತ್ತಿಗೆ ಟ್ರಾಫಿಕ್ ಕೂಡ ತೆರವಾಗುತ್ತಾ ಬಂತು. (ಮುಂದುವರೆಯುವುದು)


No comments:

Post a Comment