Sunday, 11 May 2014

ಅಮ್ಮ


ಮೊದಲ ತೊದಲ ನುಡಿಯು ಅಮ್ಮ
ಮೊದಲ ಹೆಜ್ಜೆಯ ಅಂಬೆಗಾಲು ಅಮ್ಮ
ಮೊದಲ ಕಣ್ಣಂಚಿನ ಹನಿಯು ಅಮ್ಮ
ಮೊದಲ ತುಟಿಯಂಚಿನ ನಗುವು ಅಮ್ಮ
ಮೊದಲ ಮನಸಿನ ಕನಸು ಅಮ್ಮ

ಹಸಿದಾಗ ತುತ್ತು ತಿನಿಸುವ ಕೈ ಅಮ್ಮ
ಕಣ್ಣೀರ ಒರೆಸುವ ಬೆರಳು ಅಮ್ಮ
ಸದಾ ಬೆನ್ನೆಲುಬಾಗಿಹ ಹೆಗಲು ಅಮ್ಮ
ಅವ್ಯಕ್ತ ಭಾವಗಳಿಗೆ ದನಿ ಅಮ್ಮ
ಒಡಲೊಳಗಿನ ಕರೆಗಳಿಗೆ ಕಿವಿಯು ಅಮ್ಮ

ಅಮ್ಮನೆಂದರೆ,
ಮರಳುಗಾಡಿನ ನೀರಿನ ಸೆಲೆಯಂತೆ
ಕತ್ತಲ ಕೋಣೆಯ ಪುಟ್ಟ ಹಣತೆಯಂತೆ
ಹಾದಿಬದಿಯ ಆಲದ ಮರದಂತೆ
ಬೋಳು ಮರದಲ್ಲಿನ ಹಸಿರಿನ ಚಿಗುರಿನಂತೆ
ಕಾಡು ಹಾದಿಯಲ್ಲಿನ ಸುಮಗಳಂತೆ

ಅಮ್ಮನ ನೆನೆದಾಗ
ಕೆಂಡವೂ ಬೂದಿಯಾಗಿ ತಣ್ಣಗಾಗುವುದು
ಕಲ್ಲುಗಳೂ ಕರಗಿ ನೀರಾಗುವವು
ಬೆಂಗಾಡಿನಲ್ಲೂ ಮಣ್ಣು ಹಸಿಯಾಗುವುದು
ಭೋರ್ಗರೆವ ಕಡಲೂ ಶಾಂತವಾಗುವುದು
ಕಹಿ ಬೇವಿನಲ್ಲೂ ಬೆಲ್ಲದ ಸಿಹಿ ಮೂಡುವುದು

ಅಮ್ಮಾ,
ಸೃಷ್ಟಿಯ ಮೂಲ ಬೇರು ನೀನು
ಪ್ರೀತಿ, ತ್ಯಾಗಗಳಿಗೆ ಹೊಸ ಭಾಷ್ಯವು
ಯಾರು ಮೀರಿಸಬಲ್ಲರು ನಿನ್ನ ಪಾತ್ರವನ್ನು..??
ದೇವರಿಗಿಂತಲೂ ತೂಕ ಹೆಚ್ಚು ನಿನ್ನ ವ್ಯಕ್ತಿತ್ವಕ್ಕೆ
ನಿನಗಿದೋ ಕೋಟಿ ನಮನ


No comments:

Post a Comment