Saturday, 10 May 2014

ಡೈರಿ - ಪುಟ ೩೨


                         "ನಮ್ಮ ಕರ್ನಾಟಕ ಸರ್ಕಾರದೋರು ಏನಾದ್ರು ಮಾಡ್ಬೇಕು ಕಣೇ. ಇಲ್ಲಾ ಅಂತಂದ್ರೆ ನಮ್ಮ ಕನ್ನಡವನ್ನು ಕೊಂದೇ ಹಾಕ್ತಾರಷ್ಟೆ." ಓದುತ್ತಿದ್ದ ನ್ಯೂಸ್ ಪೇಪರ್ ಅನ್ನು ಮಡಿಚಿ ಬದಿಗಿಡುತ್ತಾ ಹೇಳಿದಳು ನನ್ನ ರೂಮ್ ಮೇಟ್.
                           "ಇದೇನೆ ನೀನು ಇಷ್ಟು ಸೀರಿಯಸ್ಸಾಗಿ ಮಾತನಾಡ್ತಾ ಇದೀಯಾ..?? ತಡಿ, ಹೊರಗಡೆ ಹೋಗಿ ಸೂರ್ಯ ಯಾವ ದಿಕ್ಕಿನಲ್ಲಿ ಹುಟ್ಟಿದಾನೆ ಅಂತ ನೋಡ್ಕೊಂಡು ಬರ್ತೀನಿ." ನಾನು ಎದ್ದೇಳುವಂತೆ ನಾಟಕವಾಡಿದೆ.
                         "ನಿಂದು ತಮಾಷೆ ಜಾಸ್ತಿ ಆಯಿತು ನೋಡು. ಅಲ್ಲಾ, ಸುಪ್ರೀಂ ಕೋರ್ಟ್ ಇದೆಂತಹ ತೀರ್ಪಿತ್ತಿದೆ. ಪ್ರಾಥಮಿಕ ಶಿಕ್ಷಣದ ಮಾಧ್ಯಮವನ್ನು ಪಾಲಕರು ಮತ್ತು ಮಕ್ಕಳು ನಿರ್ಧರಿಸಬೇಕಂತೆ. ಪುಟ್ಟ ಪುಟ್ಟ ಮಕ್ಕಳಿಗೆ ಆ ವಯಸ್ಸಿನಲ್ಲಿ ಅದೇನು ತಿಳಿಯುತ್ತದೆಯೆಂದು ಅವರಿಗೆ ನಿರ್ಧರಿಸುವ ಹಕ್ಕನ್ನು ಕೊಡಬಹುದು ಹೇಳು..?? ಎಷ್ಟು ಜನ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಲು ಮುಂದಾಗುತ್ತಾರೆ..?? ಭಾಷೆಯ ಬೆಳವಣಿಗೆಗೆ ಬೇಕೆಂದೇ ಕೊಡಲಿ ಹಾಕುವ ಹುನ್ನಾರವಲ್ಲವೇ ಇದು..?? ಆಂಗ್ಲ ಭಾಷೆಯ ಮೇಲಿನ ಮೋಹದಿಂದಾಗಿ ಮೊದಲೇ ಈಗಿನ ಮಕ್ಕಳಿಗೆ ಕನ್ನಡವೆಂದರೆ ಕಬ್ಬಿಣದ ಕಡಲೆ ಎಂಬಂತಾಗಿದೆ. ಸರಿಯಾಗಿ ಓದಲು ಬರೆಯಲು ಬರುವುದಿಲ್ಲ. ಇನ್ನು ಸುಪ್ರೀಂನ ತೀರ್ಪೇನಾದರೂ ಜಾರಿಯಾಯಿತೋ ಕನ್ನಡ ಅನ್ನೋ ಪದದ ಅರ್ಥಾನೇ ಗೊತ್ತಿಲ್ದೇ ಇರೋ ಹಾಗಾಗತ್ತೆ ಅಷ್ಟೆ."
                        "ಪಾಪ, ಅವರಿಗೆಲ್ಲಾ ಜ್ಞಾನ ಕಡಿಮೆ ಕಣೇ. ಭಾಷೆ ಎನ್ನುವುದು ಕೇವಲ ಸಂವಹನಕೆ ಮಾಧ್ಯಮ ಎಂದಷ್ಟೇ ಗೊತ್ತು. ಆದರೆ ಭಾಷೆಯೊಂದು ಭಾವ, ಸಂಸ್ಕೃತಿ, ಸಂಪ್ರದಾಯ, ಜನಾಂಗ - ಇಂಥಹ ಹಲವಾರು ಸಂಗತಿಗಳ ಸಂಗಮವೆನ್ನುವುದು ಎಲ್ಲರಿಗೂ ಅರಿವಾಗುವ ಸಂಗತಿಯಲ್ಲ. ಭಾಷೆಯೊಂದರ ಅಳಿವು ಇವೆಲ್ಲವುಗಳ ಅಸ್ತಿತ್ವಕ್ಕೂ ಧಕ್ಕೆಯುಂಟು ಮಾಡುತ್ತದೆ ಎನ್ನುವುದು ಸುಳ್ಳಲ್ಲ. ಪಾಲಕರಿಗೆ ಇಂಗ್ಲಿಷ್ ಹುಚ್ಚು ಕಣೇ. ಕೆಲವು ಮಕ್ಕಳಿಗೆ ಕನ್ನಡದಲ್ಲಿ ಕಲಿಯುವ ಆಸೆ ಇದ್ದರೂ ಅದಕ್ಕೆ ನೀರೆರೆಚಿ ಬಲವಂತವಾಗಿ ಆಂಗ್ಲ ಮಾಧ್ಯಮಕ್ಕೆ ದೂಡುವ ಕೇಸುಗಳು ಹಲವಾರಿವೆ. ಕನ್ನಡ ನಮ್ಮ ಮಾತೃಭಾಷೆ ಎಂದು ಜನರ ಮುಂದೆ ಎದೆ ತಟ್ಟಿ ಹೇಳಿಕೊಳ್ಳುತ್ತಲೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಮ್ ಸ್ಕೂಲುಗಳಿಗೆ ಕಳುಹಿಸುವ ಪಾಲಕರು ಅದೆಷ್ಟಿಲ್ಲ..?? ಬಿಡು, ಸಾಂವಿಧಾನಿಕವಾಗಿ ರಾಷ್ಟ್ರಭಾಷೆಯಾಗಿಹ ಹಿಂದಿಯನ್ನೇ ಮೂಲೆಗುಂಪಾಗಿಸಿ ಪರಕೀಯರ ಆಳ್ವಿಕೆಯ ಕುರುಹಾದ ಇಂಗ್ಲಿಷನ್ನೇ ಹೆಚ್ಚು ಬಳಸುವ ದೇಶ ನಮ್ಮದು. ಇಲ್ಲಲ್ಲದೇ ಇನ್ನಾವ ದೇಶದಲ್ಲಿ ತಾನೇ ಕೋರ್ಟ್ ಇಂಥ ತೀರ್ಪನ್ನು ನೀಡಲು ಸಾಧ್ಯ..?? ಮೇರಾ ಭಾರತ್ ಮಹಾನ್"
                      "ಅದು ನಿಜಾನೇ. ಜೈ ಕನ್ನಡಾಂಬೆ, ಜೈ ಭಾರತಮಾತೆ" ರೂಮ್ ಮೇಟ್ ಕೈ ಮೇಲೆತ್ತಿ ಜೋರಾಗಿ ಹೇಳಿದಳು.


1 comment: