Saturday, 31 May 2014

ಹೆಣ್ಣೆಂದರೆ...


ನಾನೂ ಕೂಡ
ನಿಮಗೆ ಜನ್ಮವಿತ್ತ ತಾಯಿಯಂತೆ
ನಿಮ್ಮೊಡನೆ ಆಡಿ ಬೆಳೆದ ಅಕ್ಕತಂಗಿಯರಂತೆ
ಕೈ ತುತ್ತು ಉಣ್ಣಿಸಿ ಬೆಳೆಸುವವಳು ನಾನೇ
ಕೈ ಹಿಡಿದು ಬಾಳು ಬೆಳಗುವವಳು ನಾನೇ
ಒಡಲೊಳಗೆ ಹೊತ್ತು ಪೋಷಿಸುವವಳು
ಮಡಿಲಲ್ಲಿ ಮಲಗಿಸಿಕೊಂಡು ಸಂತೈಸುವವಳು

ನನ್ನ ಕಣ್ಣುಗಳಲ್ಲಿ
ಕುಡಿನೋಟದ ಹೊರತಾಗಿಯೂ ಭಾವ ಲೋಕವಿದೆ
ಅದುರುವ ಅಧರಗಳಲ್ಲಿ
ಜೇನಿಗಿಂತಲೂ ಸಿಹಿಯಾದ ಜೀವನಾಮೃತವಿದೆ
ಸುಂದರ ತನುವಿನಲ್ಲಿ
ಬಾಹ್ಯಕ್ಕಿಂತಲೂ ಚೆಲುವಿನ ಆತ್ಮವೊಂದಿದೆ
ನನಗೂ ಒಂದು ಉಸಿರಿದೆ
ಆ ಉಸಿರಿಗೆ ಜೀವನ ಸಾಗಿಸುವ ಹಸಿವಿದೆ

ನಾನು ಆಟದ ವಸ್ತುವಲ್ಲ ಆಡಿಕೊಳ್ಳಲು
ತಿಂಡಿಯ ತುಂಡಲ್ಲ ತೃಷೆಯ ನೀಗಿಸಲು
ಕೊರಡು ಕಟ್ಟಿಗೆಯಲ್ಲ ಉರಿದುಹೋಗಲು
ಹೂವಿನ ಮೃದು ಎಳಸು ನಾನು
ಬೀಳಲಿನ ನೆರಳಿನಂಚಿನ ತಂಪು ನಾನು
ಹರಿಯುವ ತೀರದಲ್ಲಿನ ನೀರಿನ ಹನಿಯು ನಾನು
ಇದ ಅರಿತು ಬೆರೆತು ನೀ ನಡೆ
ಏಕೆಂದರೆ ನಾನು ಒಂದು ಹೆಣ್ಣು


Friday, 30 May 2014

ಹ್ಯಾಪಿ ಬರ್ತ್ ಡೇ ಸರ್ :)


ಅದ್ಯಾವ ಜನ್ಮದ ಪುಣ್ಯದ ಫಲವೋ
ಆ ದೇವರೇ ನೀಡಿದ ವರವೋ
ವಿಧಿಯೂ ಒಮ್ಮೆ ಒಳ್ಳೆಯವನಾಗಿ
ತನ್ನ ಆಟದಲ್ಲಿ ನಮ್ಮ ಕಡೆಗಿತ್ತು
ಈ ಒಂದು ಶುಭದಿನ ನಿಜಕ್ಕೂ
ಮೂಡಿತ್ತೊಂದು ಕಿರಣ ‘ಪ್ರಕಾಶ’ಮಾನವಾಗಿ

ಕೇವಲ ಗುರುವಾಗಲಿಲ್ಲ ನೀವು ನಮಗೆ
ಅಕ್ಕರೆಯ ಅಣ್ಣನಾದಿರಿ
ಜೊತೆಸಾಗುವ ಸ್ನೇಹಿತರಾದಿರಿ
ಕೈ ಹಿಡಿದು ಮುನ್ನಡೆಸುವ ಹಿರಿಯರಾದಿರಿ
ಸದಾ ಶುಭ ಹಾರೈಸುವ ಹಿತೈಷಿಯಾದಿರಿ
ಕತ್ತಲಿನ ಹಾದಿಯಲ್ಲಿ ತಡಕಾಡುತ್ತಿದ್ದಾಗ
ಬೆಳಕು ತೋರಿದ ದಾರಿ ದೀಪವಾದಿರಿ

ನಾಲ್ಕು ಅಲ್ಲ, ನಾನೂರು ಸಾಲುಗಳು ಕಡಿಮೆಯೇ
ನಿಮ್ಮ ಬಣ್ಣಿಸಲು, ಚರಣಕ್ಕೆ ನಮಿಸಲು
ಎಷ್ಟು ಜನ್ಮವೆತ್ತಿದರೂ ಸಾಲದು
ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರಲು
ನಿಮ್ಮ ಶಿಷ್ಯರಾಗುವುದಕ್ಕಿಂತ ಬೇರೆ ಭಾಗ್ಯ
ಈ ಜೀವನದಲ್ಲಿ ಇನ್ನೊಂದಿದೆಯೇ..??

ಜ್ಞಾನದ ಸಾಗರವು ಬತ್ತಿ ಹೋಗದಿರಲಿ
ಹಸಿದವರೆಲ್ಲರಿಗೂ ನೀರುಣಿಸುತ್ತಿರಲಿ
ಮೋಹಕ ನಗುವು ಎಂದಿಗೂ ಮಾಸದಿರಲಿ
ಹೆಜ್ಜೆ ಹೆಜ್ಜೆಗೂ ಯಶಸ್ಸಿನ ಹೂ ಅರಳಲಿ
ಸುಖ ಸಮೃದ್ಧಿಯ ಜೀವನ ನಿಮ್ಮದಾಗಲಿ

ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು..:)


ಡೈರಿ -ಪುಟ ೪೧


                      "ಅಲ್ಲಾ ಕಣೇ, ಇಲ್ಲಿಯ ತನಕ ಇಲ್ಲಗಿದ್ದ ಹೊಸ ವಿವಾದ ಈಗ ಶುರುವಾಗಿದೆಯಲ್ಲ. ಎಲೆಕ್ಷನ್ನಿಗಿಂತ ಮುಂಚೆ, ಎಲೆಕ್ಷನ್ ನಡೆಯುವಾಗ, ಎಲೆಕ್ಷನ್ ರಿಸಲ್ಟ್ ಬಂದ ಮೇಲೂ ಯಾವುದೇ ಜನಪ್ರತಿನಿಧಿಗಳ ವಿದ್ಯಾರ್ಹತೆ ಒಂದು ವಿಷಯವೇ ಆಗಿರಲಿಲ್ಲ. ಈಗ ಕೇಂದ್ರ ಮಾನವ ಸಂಪನ್ಮೂಲ ಸಚಿವೆಯಾಗಿ ಸ್ಮೃತಿ ಇರಾನಿ ಅವರು ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಇದೊಂದು ವಿವಾದವಾಗಿ ಮೇಲೆದ್ದಿದೆ. ಅವರು ಯಾರೋ ವಿವೇಕವಿಲ್ಲದ ಕಾಂಗ್ರೆಸ್ ನಾಯಕರು ಕಿಡಿ ಹೊತ್ತಿಸಿದರು. ಅದನ್ನು ಜನರೆಲ್ಲಾ ಸೇರಿ ಆರಿಸುವುದನ್ನು ಬಿಟ್ಟು ಇನ್ನೂ ಹತ್ತಿಕೊಂಡು ಉರಿಯುವಂತೆ ಮಾಡುತ್ತಿದ್ದಾರೆ." ರೂಮ್ ಮೇಟ್ ಊಟ ಮಾಡುತ್ತಿದ್ದಾಗ ಮಾತು ಮೊದಲು ಮಾಡಿದಳು.
                      "ವಿವಾದವಿಲ್ಲದಿದ್ದರೆ ಜನರಿಗೆ ನಾಲಿಗೆ ತಣಿಸಲು ವಿಷಯ ಬೇಡವಾ ಮಾರಾಯ್ತಿ..?? ಅದಕ್ಕೆ ಕಿಡಿಯಾರಿಸುವ ಗೋಜಿಗೆ ಹೋಗುವುದಿಲ್ಲವಷ್ಟೆ. ಜನಪ್ರತಿನಿಧಿಗಳ ವಿದ್ಯಾರ್ಹತೆ ಬಗ್ಗೆ ಇಷ್ಟೆಲ್ಲಾ ಯೋಚಿಸುವವರು ಅವರು ಚುನಾವಣೆಗೆ ಸ್ಪರ್ಧಿಸುವ ಮೊದಲೇ ಬಾಯಿ ತೆಗೆಯಬೇಕಿತ್ತು. ಆಗ ಸುಮ್ಮನೇ ಇದ್ದಿದ್ದೇಕೆ..?? ಹಾಗೇನಾದರೂ ರೂಲ್ಸ್ ಇದ್ದಿದ್ರೆ ಅರ್ಧ ಮಂದಿಗೆ ಚುನಾವಣೆಗೆ ನಿಲ್ಲಲಿಕ್ಕೆ ಅವಕಾಶವೇ ಸಿಗ್ತಾ ಇರ್ಲಿಲ್ಲ. ಈಗ ಸ್ಮೃತಿ ಇರಾನಿಗೆ ಅಂಥ ದೊಡ್ಡ ಹುದ್ದೆ ಸಿಕ್ಕಿರೋದು ಹಲವರಿಗೆ ಹೊಟ್ಟೆ ಉರಿ ಉಂಟು ಮಾಡಿದೆ. ಅದಕ್ಕೆ ಅವರೆಲ್ಲರದೂ ನಾಲಿಗೆ ಸಡಿಲವಾಗಿದೆಯಷ್ಟೆ." ನಾನು ಉತ್ತರಿಸಿದೆ.
                    "ಎಜುಕೇಷನ್ ಕ್ವಾಲಿಫಿಕೇಷನ್ ಅನ್ನೋದು ಅಷ್ಟೊಂದು ಇಂಪಾರ್ಟೆಂಟಾ..??"
                    "ಇಂಪಾರ್ಟೆಂಟೇ. ಆದರೆ ಯಾವುದೇ ವ್ಯಕ್ತಿಯ ಪ್ರತಿಭೆ, ಶಕ್ತಿ ಸಾಮರ್ಥ್ಯಗಳನ್ನು ಅಳೆಯಲು ವಿದ್ಯಾರ್ಹತೆ ಮಾನದಂಡವಲ್ಲ. ಆತನ/ಆಕೆಯ ಕೃತಿ ಅವುಗಳ ಕುರಿತು ಸರ್ಟಿಫಿಕೇಟ್ ನೀಡುತ್ತದೆ. ಯಾವುದೇ ಮರ್ಯಾದೆ, ಗೌರವಗಳಿಗೆ ವ್ಯಕ್ತಿಯೊಬ್ಬ ಅರ್ಹನೆನ್ನಲು ಆತನ/ಅಕೆಯ ಕೆಲಸ ಕಾರ್ಯಗಳನ್ನು ತಾನೇ ಪರಿಗಣಿಸಲಾಗುತ್ತದೆ. ಈಗ ನಮ್ಮ ದೇಶದಲ್ಲಿರುವ ಶಿಕ್ಷಣ ವ್ಯವಸ್ಥೆಯಿಂದ ಜ್ಞಾನ, ಪ್ರತಿಭೆ, ಸಾಮರ್ಥ್ಯ - ಯಾವುದೊಂದನ್ನೂ ಅರಿಯಲಾಗುವುದಿಲ್ಲ. ಅಷ್ಟು ಅವ್ಯವಸ್ಥಿತವಾಗಿದೆ. ಹಾಗಿರುವಾಗ ಸ್ಮೃತಿ ಇರಾನಿ ಅವರಿಗೆ ಮಾನವ ಸಂಪನ್ಮೂಲ ಸಚಿವೆ ಹುದ್ದೆ ನೀಡಿರುವುದರಲ್ಲಿ ತಪ್ಪೇನಿದೆ..?? ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ಯೆ ಪಡೆದವರೂ ಸಚಿವರಾಗಿದ್ದರಲ್ಲ. ಅವರೇನು ದೇಶವನ್ನು ಉದ್ಧಾರ ಮಾಡಿದ್ದಾರೆಯೇ..?? ನಟನೆಯಲ್ಲಿ ಮಾತ್ರವಲ್ಲದೇ ರಾಜಕೀಯ ಬದುಕಿನಲ್ಲೂ ಒಳ್ಳೆಯ ಅಂಕಗಳನ್ನೇ ಗಿಟ್ಟಿಸಿರುವ ಸ್ಮೃತಿಗೆ ಆ ಹುದ್ದೆಯನ್ನು ನಿಭಾಯಿಸುವ ಅರ್ಹತೆಯಿದೆಯೆಂದು ಪರಿಗಣಿಸಿಯೇ ನೀಡಿದ್ದಾರಲ್ಲವೇ...?? ತನ್ನ ಪ್ರತಿಭೆ, ಸಾಮರ್ಥ್ಯಗಳನ್ನು ಸಾಧಿಸಿ ತೋರಿಸಲು ಇದೊಂದು ಒಳ್ಳೆಯ ಅವಕಾಶವಷ್ಟೆ. ಅಕಸ್ಮಾತ್ ಅದರಲ್ಲಿ ಆಕೆ ವಿಫಲವಾದರೆ ಆಕೆಗೆ ನೀಡಿರುವ ಹುದ್ದೆಯನ್ನು ಕಸಿದುಕೊಳ್ಳುವ ಹಕ್ಕು ಎಲ್ಲ ಭಾರತೀಯನಿಗೂ ಇದ್ದೇ ಇದೆ. ಕಾದು ನೋಡೋಣ ಅಷ್ಟೆ."


Tuesday, 27 May 2014

ಇದೀಗ ಕಾಲ ಬಂದಿದೆ


ಸಾಕು ಮಲಗಿದ್ದು ಇನ್ನಾದರೂ ಏಳೋಣ
ನಿದ್ದೆಯ ನಟನೆಗೆ ಬೀಳಲಿ ಪೂರ್ಣ ವಿರಾಮ
ರೆಪ್ಪೆಗಳು ತೆರೆಯಲು ಯತ್ನಿಸಿದರೂ
ಕಣ್ಣೆವೆಗಳು ಬಲವಂತವಾಗಿ ಮುಚ್ಚಿಕೊಳ್ಳುತ್ತಿವೆ
ಮೂಡಣದಲ್ಲಿ ನಗುತಿಹನು ರವಿಯು
ಪಡುವಣಕ್ಕೆ ಮುಖ ಮಾಡಿ ಮಲಗಿ
ವ್ಯರ್ಥ ಕಾಲ ಹರಣ ಮಾಡಿದ್ದು ಸಾಕು
ತಪ್ಪದು ಎದ್ದು ಹೆಜ್ಜೆ ಹಾಕಲೇ ಬೇಕು
ಎದ್ದೇಳಿ, ಇದೀಗ ಕಾಲ ಬಂದಿದೆ

ಹೊಸ ಕ್ಷಣಗಳಾಗಲೇ ಇತಿಹಾಸವ ಸೇರಿವೆ
ಹೊಸ ದಾರಿಯಲ್ಲಿ ವರ್ತವು ಸವಾರಿ ಹೊರಟಿದೆ
ನಾವಿನ್ನೂ ಭೂತದ ಹಿಂಬಾಗಿನಲ್ಲೇ ನಿಂತು
ನಿದ್ದೆಗಣ್ಣಿನಲ್ಲಿ ತೂಕಡಿಸುತ್ತಿಹೆವು
ಇನ್ನೆಷ್ಟು ದಿನಗಳನ್ನು ದೂಡಬೇಕಿದೆ ಎಚ್ಚರಗೊಳ್ಳಲು..??
ಯಾತಕ್ಕಾಗಿ ಬೇಕು ನಿದ್ದೆಯ ನೆಪವು..??
ಸತ್ಯದ ಬೆಳಕಲ್ಲಿ ಕತ್ತಲೆಯನ್ನು ಹೊಡೆದೋಡಿಸಲು
ಎದ್ದೇಳಿ, ಇದೀಗ ಕಾಲ ಬಂದಿದೆ

ಆಟ, ಹುಡುಗಾಟಗಳ ನಿನ್ನೆ ಸಂದಿದೆ
ಪಾಠ ಕಲಿಯುತ್ತ ಕಲಿಸುವ ನಾಳೆ ಮುಂದಿದೆ
ಎಳೆಯ ಮನಸ್ಸು ಪಕ್ವವಾಗಿ ಬಾಗುವಾಗ
ಕರ್ತವ್ಯದ ಸೊಗಸಿನಲ್ಲಿ ಅರಳಿ ನಿಂತರೆಷ್ಟು ಅಂದ
ಮುದುಡಿ ಕೂರುವ ಘಳಿಗೆಗಳಿಗಿಂದು ವಿದಾಯ
ಹಾಡೋಣ ಬಣ್ಣಬಣ್ಣದ ಭವಿಷ್ಯಕ್ಕೆ ಶುಭಾಷಯ
ಎಲ್ಲರೂ ಜೊತೆಯಾಗಿ ನಡೆಯಬೇಕಿದೆ
ಎದ್ದೇಳಿ, ಇದೀಗ ಕಾಲ ಬಂದಿದೆ

ಭರವಸೆಯ ಭಾವಗಳೇ ಪಯಣದ ಬುನಾದಿ
ಪ್ರೀತಿ, ಸ್ನೇಹಗಳ ಜೀವಗಳೇ ಅದರ ಹಾದಿ ಬೀದಿ
ಅರಿವೆಂಬ ಹಣತೆಯೇ ನಮ್ಮ ದಾರಿ ದೀಪ
ಶಕ್ತಿ ಸಾಮರ್ಥ್ಯಗಳಿಗೆ ಅನ್ವರ್ಥಕ ರೂಪ
ಧ್ಯೇಯವೇ ಹಗಲಾಗಿ ಗುರಿಯೇ ಇರುಳಾಗಿ
ಕರ್ತವ್ಯವನ್ನೇ ಉಸಿರಾಗಿಸಿಕೊಂಡ ಜೀವನವಾಗಬೇಕು
ಎಲ್ಲದಕ್ಕೂ ನಾಂದಿಯಾಗುವ ಕ್ಷಣವು ಕಾಯುತಿದೆ
ಎದ್ದೇಳಿ, ಇದೀಗ ಕಾಲ ಬಂದಿದೆ


Monday, 26 May 2014

ದ್ವೀಪ


ಅಲ್ಲಿ ಬೇರೆ ಯಾರಿಲ್ಲ ನಾನೊಬ್ಬಳೇ
ನನ್ನ ಮನಸನ್ನೂ ದೇಶಾಂತರ ಕಳಿಸಿಹೆ
ಕನಸುಗಳನ್ನೂ ಕಟ್ಟಿ ಹಾಕಿ ಮೂಲೆಗೆಸೆದಿಹೆ
ಉಸಿರು ಒಂದಿದೆ, ಜೊತೆಗೆ ಬಸಿರಿನ ಹಸಿವಿದೆ
ಹೆಜ್ಜೆಯಿಡಲು ಸಾಕಾಗುವಷ್ಟು ಕಸುವಿದೆ
ಬೇರೆ ಯಾರಿಲ್ಲ, ಅದು ನನ್ನದೇ ದ್ವೀಪ

ದಿನ ಬೆಳಗಾಗುತ್ತದೆ ಸೂರ್ಯನ ಕಿರಣಗಳಿಗೆ
ಹಕ್ಕಿಗಳ ಇಂಚರವು ನನ್ನನ್ನು ಎಬ್ಬಿಸುತ್ತದೆ
ಹಸಿರಿನ ಸೆರಗು ನನ್ನ ಮೈ ಮನ ತೊಳೆಯುತ್ತದೆ
ಹರಿಯುವ ನೀರು ಜೀವಂತಿಕೆಯ ಹುಟ್ಟಿಸಿ
ಬೀಸುವ ಗಾಳಿ ಬೇಗುದಿಯನ್ನು ಹೋಗಲಾಡಿಸಿ
ನನ್ನನ್ನು ಮುನ್ನಡೆಯಲು ಪ್ರೇರೇಪಿಸುತ್ತವೆ

ಮಾತುಗಳ ಮೇರೆ ಇಲ್ಲ, ಮೌನದ್ದೇ ರಾಜ್ಯಭಾರ
ಭಾವಗಳ ಬೇಲಿಯಿಲ್ಲ, ನಿರ್ಲಿಪ್ತತೆಯೇ ಅಲಂಕಾರ
ಅವಮಾನ, ಅಭಿಮಾನಗಳೆಲ್ಲವೂ ಸಮಾನ ಆಭರಣ
ಚಿತ್ತದಲ್ಲಿ ಮನೆಮಾಡಿಹ ಶಾಂತತೆಯೇ ಭೂಷಣ
ಆಳಕ್ಕೆ ಇಳಿಯಬೇಕು ಇನ್ನೂ ಹೆಚ್ಚು
ನನಗೆ ಇದೊಂದು ತೀರದ ಹುಚ್ಚು

ಕೊನೆಯಿಲ್ಲದ ಏಕಾಂತವೇ ನನ್ನ ಅಧಿಪತಿ
ಅಲ್ಲಿಹುದು ಯೋಚನೆ, ಯೋಜನೆಗಳ ಬುತ್ತಿ
ಕಾರ್ಯ ಕೆಲಸವೊಂದೇ ಅರ್ಥಸಹಿತ ವೃತ್ತಿ
ಎಲ್ಲರೊಳಗೊಂದಾಗಿ ಬದುಕುವ ಪರಿಹಾಸ್ಯಕ್ಕಿಂತ
ಹೊರ ಬಂದು ಬಾಳುವ ಸಾಹಸವೇ ಮೇಲು
ಅದಕ್ಕೆ ನಾನೊಬ್ಬಳೇ ಅಲ್ಲಿ, ನನ್ನ ದ್ವೀಪದಲ್ಲಿ


Sunday, 25 May 2014

ಆಲಾಪನೆ


ಅದು ಕೇವಲ ದನಿಯ ಹನಿಯೋ
ಅಲೆಗಳ ತೆರೆಮರೆಯಲ್ಲಿ ಮೂಡಿದ ಸ್ವರವೋ
ಸುಳಿಸುಳಿಯಾಗಿ ರಾಗ ಹೊಮ್ಮಿಸುತ್ತಾ ಮೇಲೆದ್ದು
ಉತ್ತುಂಗದ ಶಿಖರವ ಮೆಟ್ಟಿ ನಿಲ್ಲುವಂತೆ ಹೊರಟರೂ
ಕೊನೆಗೆ ಮಂದ್ರದ ಮನೆಯಲ್ಲಿ ಮೂಕ ಮೌನ
ಪದ್ಯವಾಗಿ ಹೊರಗೆ ಬರುವುದೇ ಇಲ್ಲ
ಗರ್ಭದಲ್ಲಿನ ಆಲಾಪನೆಯೇ ಎಲ್ಲ

ಒಮ್ಮೆ ಆಲಿಸಿ ಹಾಗೆಯೇ ಮರೆತುಬಿಡಲೇ..??
ರಾಗ ತಾಳಗಳಿಗೆ ಪದಗಳ ಜೋಡಿಸಿ ಹಾಡಿಬಿಡಲೇ..??
ಜಾಡು ಹಿಡಿದು ಹೊರಟರೆ ಇಳಿಯುವುದೊಂದೇ
ಆಳಕ್ಕೆ, ತಳವೇ ಇಲ್ಲದಂತೆ ಮತ್ತೂ ಆಳಕ್ಕೆ
ಸ್ವರ ಹೊರಡಿಸುವ ಮುನ್ನವೇ ಕ್ಷೀಣ
ತಂತಿ ಹರಿದ ತಂಬೂರಿಯ ಮೀಟಿದಂತೆ
ಮತ್ತೆ ವ್ಯರ್ಥ ಆಲಾಪನೆಯೇ ಎಲ್ಲ

ಇದೇತಕ್ಕೆ ಹುಚ್ಚು ಹಂಬಲ ಮನಕೆ..??
ಏನೆನ್ನಲ್ಲಿ ಮಗುವಿನಂತೆ ರಚ್ಚೆ ಹಿಡಿಯುವ ಗುಣಕೆ..??
ಶ್ರುತಿಯನ್ನೇ ಹಿಡಿಯಲಾರೆನೆನ್ನುವ ಕೊರಳಿನ ಸುತ್ತ
ನಾದ ಮಾಧುರ್ಯದ ಉರುಳು ಬಿಗಿಯುವ ತಮಾಷೆ
ಉಸಿರು ಬಿಗಿದರೂ ದನಿ ಎತ್ತಿ ಹಾಡುವ ಬಯಕೆ
ಕೊನೆಗೂ ಹೊಮ್ಮಲಾರದು ಸ್ವರವು ಒಡಲೊಳಗಿಂದ
ಮತ್ತೆ ಅದೇ ಹಳೆಯ ಆಲಾಪನೆಯೇ ಎಲ್ಲ


Friday, 23 May 2014

ಭಾವ ಗೀತ


ಪದಗಳಿಗೆ ಅರ್ಥಗಳ ಬೇಲಿಯಿಲ್ಲ
ಸಾಲುಗಳಿಗೆ ಸಲ್ಲದ ಕೊನೆಯಿಲ್ಲ
ಅಂದ ಚಂದಗಳ ಬಂಡೆಗಳಿಗೆ
ಅಂತೆ ಕಂತೆಯೆಂದು ಬಣ್ಣ ಬಳಿಯುವ ಗೋಜಿಲ್ಲ
ಅತಿಯಾಗಿ ಭಾವವು ಒರಸುತ್ತಿರುವಾಗ
ಮಿತಿಯ ಗೋಡೆಯನ್ನು ಕಟ್ಟುವುದು ಬೇಕಿಲ್ಲ
ಹರಿಯಲಿ ಸರಾಗವಾಗಿ ನನ್ನ ಭಾವಗೀತ

ಕೇಳುವ ಶ್ರೋತ್ರಿಗಳ ಹಂಗಿಲ್ಲ
ನೋಡುವ ನಯನಗಳಿಗೆ ಬರವಿಲ್ಲ
ಕಾರಣವಿಲ್ಲದೇ ಕರುಣಿಸುವ ಕೆತ್ತನೆಗಳಿಗೆ
ಮೂರ್ತಿಪೂಜೆಯ ಭಯ ಭಕ್ತಿಯ ಆಡಂಬರ ಸಲ್ಲ
ಮನದೊಳಗೆ ಗೆಜ್ಜೆಗಳು ನರ್ತಿಸುತ್ತಿರಲು
ಹೆಜ್ಜೆಗಳಿಗೆ ಹೊರೆಯಾಗುವುದೆಂಬ ನೆಪ ಬೇಕಿಲ್ಲ
ದಣಿವಿಲ್ಲದೇ ಲಾಸ್ಯವಾಡಲಿ ನನ್ನ ಭಾವಗೀತ

ಹೊತ್ತು ಗೊತ್ತಿನ ಪರಿವೆಯಿಲ್ಲ
ಸುತ್ತ ಮುತ್ತಲಿನ ಪರಿಚಯವಿಲ್ಲ
ಎಲ್ಲ ಮೇರೆಗಳ ಮೀರಿ ಹಾರುವಾಗ
ರೆಕ್ಕೆ ಬಡಿಯುವುದರ ಹೊರತಾಗಿ ಬೇರೆ ತಪಸ್ಸಿಲ್ಲ
ಉಸಿರುಸಿರೂ ಬಿಸಿ ಬಿಸಿಯಾಗಿ ಬೇಯುತಿರಲು
ಬೆಚ್ಚನೆಯ ಬೇಗೆಯ ಬೆಂಗಾವಲಿನ ಬಂಧ ಬೇಕಿಲ್ಲ
ಆರದೇ ಹೊತ್ತಿ ಉರಿಯಲಿ ನನ್ನ ಭಾವಗೀತ

ಅಳು ನಗು ಎಂಬ ಬೇಧವಿಲ್ಲ
ಏರಿಳಿತಗಳೆಂಬ ತಡೆಯ ಬಾಧವಿಲ್ಲ
ಮುಕ್ತ ಮಾರ್ಗಕ್ಕೆ ಮನಸ್ಸು ತೆರೆದುಕೊಂಡಾಗ
ಮುಂದೆ ಸಾಗದೇ ಹಿಂದೆ ತಿರುಗಿ ನಿಲ್ಲುವ ಮಾತಿಲ್ಲ
ಕಣ್ಣಂಚಿನಲ್ಲಿ ಕಾವ್ಯವು ಹೊಮ್ಮುತ್ತಿರಲು
ರೆಪ್ಪೆಯಿಂದ ಮುಚ್ಚಿ ಮಲಗಿಸುವುದು ಬೇಕಿಲ್ಲ
ಕೊನೆಯಿಲ್ಲದೇ ಹಾಡಲಿ ನನ್ನ ಭಾವಗೀತ


Thursday, 22 May 2014

ಎಕ್ಸಾಮುಹೀಗೆ ಸುಮ್ಮನೆ ಕೈಯ್ಯಲ್ಲಿ ಹಿಡಿದಿರೋದು ಬುಕ್ಕು
ಕಣ್ಣು, ಬ್ರೈನಿನದು ಎತ್ತಲೋ ಇದೆ ಲುಕ್ಕು
ಗಂಟೆಗಳಾದರೂ ನಾನೋದುತ್ತಿರುವೆ ಅದೇ ಪುಟ
ಸಮಯ ಮಾತ್ರ ನಿಲ್ಲದೇ ಓಡಿದೆ ಓಟ

ಚಾಪ್ಟರುಗಳ ಹೆಸರು ಗೊತ್ತಿಲ್ಲ, ಕಂಟೆಂಟು ಕೇಳಿಲ್ಲ
ಆನ್ಸರ್‍ರು ಬಿಡಿ, ಕೊಶ್ಚನ್ನೇ ಅರ್ಥವಾಗುವುದಿಲ್ಲವಲ್ಲ
ಮೂರು ತಿಂಗಳ ಪಾಠವನ್ನು ಮೂರು ಗಂಟೆಗಳಲ್ಲಿ ಓದಿ
ಶೀಟಿನಲ್ಲಿ ನಮ್ಮದೇ ಕತೆಯನ್ನು ಬರೆಯುವೆವು ನೋಡಿ

ಇನ್ನು ಬಹಳ ದಿನವಿದೆ ಎಂಬ ಮಾತು ಮೊದಲು
ಇವತ್ತೇಕೋ ಮನಸ್ಸಿಲ್ಲ ನಾಳೆ ಓದೋಣವೆಂಬ ತೊದಲು
ಸಿಲೇಬಸ್ ಅಷ್ಟೇನು ಇಲ್ಲವೆಂಬ ತರ್ಕದಲ್ಲಿ ನಾವಿದ್ದರೆ
ಅತ್ತ ಎಕ್ಸಾಮು ವೇಗವಾಗಿ ಪಕ್ಕದಲ್ಲಿಯೇ ಬಂದು ನಿಂತಿರೆ


ನೆಂಟರಿಷ್ಟರ ಮನೆಯಲ್ಲಿ ಮದುವೆ-ಮುಂಜಿಯ ಸಂಭ್ರಮ
ನಮಗೆ ಮಾತ್ರ ಪುಸ್ತಕಗಳ ಎದುರಲ್ಲಿ ಸಮರ ಸಂಗ್ರಾಮ
ಎಲ್ಲ ಸೂಪರ್ ಫಿಲ್ಮುಗಳಿಗೂ ಈಗಲೇ ಬಿಡುಗಡೆಯ ಭಾಗ್ಯ
ನಾವು ಹಾದಿ ಬೀದಿಯಲ್ಲಿನ ಪೋಸ್ಟರ್ ನೋಡುವುದಕ್ಕಷ್ಟೇ ಯೋಗ್ಯ

ಓದಲು ಕುಳಿತಾಗಲೇ ನೂರಾರು ವಿಘ್ನಗಳು ಅಣ್ಣ
ಮನಸ್ಸಿನಲ್ಲಿ ಹೊಸ ಚಿತ್ತಾರ, ಹೊಸ ಹೊಸ ಬಣ್ಣ
ಹಿಂದಿನ ನೆನಪುಗಳು, ಮುಂದಿನ ಕನಸುಗಳ ಜೊತೆಯಲ್ಲಿ
ನಿದ್ರಾದೇವಿಯೂ ಬಂದು ಮುಚ್ಚಿಸುವಳು ಕಣ್ಣು ರೆಪ್ಪೆಯನ್ನ

ಪುಸ್ತಕ ತೆರೆದ ಕೂಡಲೇ ಕರೆಂಟು ಹೋಗಬೇಕೆ..??
ಅತ್ತ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಸ್ನೇಹಿತರು ಸಿಗಬೇಕೆ..??
ತಲೆ ತುಂಬಿಸಿಕೊಳ್ಳಲು ಹೊರಟಾಗಲೇ ಹೊಟ್ಟೆ ಖಾಲಿಯಾಗುವುದು
ಓದುವ ಪ್ರಹಸನಕ್ಕೆ ಅಲ್ಲಿಯೇ ತೆರೆಯೊಂದು ಬೀಳುವುದು


Wednesday, 21 May 2014

ಡೈರಿ - ಪುಟ ೪೦


                         "ಆ ಶೇಂಗಾ ಅಂಗಡಿಯವನು ಈಗ ಬರುವುದೇ ಇಲ್ಲಾ ಕಣೇ. ಎಲ್ಲಿ ನಾಪತ್ತೆಯಾಗಿ ಹೋದನೋ ಏನೋ. ಸಂಜೆ ಹೊತ್ತಿನಲ್ಲಿ ಐದು ರೂಪಾಯಿ ಪೊಟ್ಟಣದ ಕಡಲೆ, ವಟಾಣಿ, ಶೇಂಗಾ ತಿನ್ನುತ್ತಾ ಕುಳಿತಿರಲಿಕ್ಕೆ ಮಜಾ ಬರುತ್ತಿತ್ತು. ಒಂದು ತಿಂಗಳ ಮೇಲಾಯಿತು ಅವನು ಕಾಣೆಯಾಗಿ." ರೂಮ್ ಮೇಟ್ ಸಂಜೆ ನಾವು ಸ್ನ್ಯಾಕ್ಸ್ ಗೆಂದು ಮೆಸ್ ಗೆ ಹೊರಟಾಗ ಹೇಳಿದಳು.
                        "ಈಗ ಆ ಸ್ಕೂಲ್ ಮಕ್ಕಳಿಗೆ ರಜಾ ಅಲ್ವೇನೆ. ಅವರಿಲ್ಲದಿದ್ದರೆ ಅವನಿಗೆ ಅಷ್ಟೇನೂ ವ್ಯಾಪಾರವಾಗುವುದಿಲ್ಲ. ಅದಕ್ಕೆ ಆತ ಈ ಕಡೆ ಬರುವುದಿಲ್ಲ. ಇನ್ನು ಹತ್ತು ದಿನಗಳು ತಾಳು. ಸ್ಕೂಲ್ ಪ್ರಾರಂಭವಾಗುತ್ತದಲ್ಲ. ಮತ್ತೆ ಶೇಂಗಾ ತಿನ್ನಬಹುದು." ನಾನು ಪ್ಲೇಟ್ ತೊಳೆಯುತ್ತಾ ಹೇಳಿದೆ.
                     "ಹೌದಲ್ವಾ, ಶಾಲಾ ಮಕ್ಕಳಿಗೆ ಈಗ ಬೇಸಿಗೆ ರಜಾ. ಅದಕ್ಕೆ ಅವರ ಪಟಾಲಮ್ ನಮ್ಮ ಹಾಸ್ಟೆಲ್ ಕಡೆ ಕಾಣಿಸುವುದಿಲ್ಲ. ಆ ಪುಟ್ಟ ಪುಟ್ಟ ಮಕ್ಕಳನ್ನು ನೋಡುವಾಗ ಖುಷಿಯಾಗುತ್ತದೆ ಕಣೇ. ಯಾವಾಗಲೂ ಅದೆಷ್ಟು ಸಂತಸ, ಉತ್ಸಾಹದಿಂದ ಜಿಗಿಯುತ್ತಾ, ಕುಣಿಯುತ್ತಾ ಇರುತ್ತವೆ. ನಾವು ಇದ್ದೇವೆ ನೋಡು. ಕಾಲೇಜು ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ಮುಖ ಸಿಂಡರಿಸಿಕೊಳ್ಳುತ್ತೇವೆ."
                      "ಅದು ಬಾಲ್ಯ ಕಣೇ. ಅಲ್ಲಿ ಎಲ್ಲವೂ ಸಂತಸದ ವಿಷಯಗಳೇ. ಬೇಸರ, ದುಃಖ ಎಂಬುದಕ್ಕೆಲ್ಲಾ ಅಲ್ಲಿ ಜಾಗವೇ ಇಲ್ಲ. ಕ್ಲಾಸಿನಲ್ಲಿ ಟೀಚರ್ ಹೊಗಳಿದರೂ ಸಂತಸವೇ, ಕೈ ಮೇಲೆ ಕೋಲಿನಿಂದ ಬಾರಿಸಿದರೂ ಸಂತಸವೇ. ಮನಸ್ಸು ತಿಳಿಯಾಗಿರುವಂಥ ವಯಸ್ಸು ಅದು. ಅದಕ್ಕೆ ಯಾವುದೇ ಬಗೆಯ ಬೇಲಿಯಿರುವುದಿಲ್ಲ, ಕಟ್ಟುಪಾಡುಗಳಿರುವುದಿಲ್ಲ, ಯಾರಿಗೂ ಹೆದರಬೇಕಾದ, ಬಗ್ಗಬೇಕಾದ ಅಗತ್ಯವಿರುವುದಿಲ್ಲ. ಹಾಯಾಗಿ ಗರಿ ಬಿಚ್ಚಿ ಹಾರುವ ದಿನಗಳು ಬಾಲ್ಯವೆಂದರೆ. ದೊಡ್ಡವರಾದಂತೆ ಇಲ್ಲಸಲ್ಲದ ವಿಷಯಗಳೆಲ್ಲ ಮನಸ್ಸನ್ನು ತುಂಬಿಕೊಂಡಿರುತ್ತವೆ. ಹಾಗಾಗಿ ಸಂತಸಕ್ಕಿಂತ ಸಿಂಡರಿಸಿಕೊಳ್ಳುವ ಸಂದರ್ಭಗಳೇ ಹೆಚ್ಚು. ಆ ಮಕ್ಕಳನ್ನು ನೋಡಿದಾಗಲೆಲ್ಲಾ ನನಗೂ ಮತ್ತೊಮ್ಮೆ ಬಾಲ್ಯ ಮರಳಿ ದೊರೆಯಬಾರದೇ ಅನ್ನಿಸುತ್ತದೆ."
                      "ನಡಿ, ಮುಂದಿನ ವರ್ಷ ಹೋಗಿ ಒಂದನೇ ತರಗತಿಗೆ ಸೇರಿಕೊಂಡು ಬಿಡೋಣ. ಇಂಜಿನಿಯರಿಂಗೂ ಬೇಡ, ಏನೂ ಬೇಡ. ಝಣ್ ಝಣಾ ಝಣಾ ಹಾಡುತ್ತಾ ಇರಬಹುದು." ರೂಮ್ ಮೇಟ್ ನಗುತ್ತಾ ಹೇಳಿದಳು.


Tuesday, 20 May 2014

ಡೈರಿ - ಪುಟ ೩೯


                         ಎಕ್ಸಾಮ್ ಹತ್ತಿರವಾಗುತ್ತಿದ್ದರೂ ಇವತ್ತೇಕೋ ನನಗೂ, ನನ್ನ ರೂಮ್ ಮೇಟ್ ಗೂ ಓದುವ ಮೂಡ್ ಇರಲಿಲ್ಲ. ಹೊರಗಡೆ ತಿರುಗಲಿಕ್ಕೆ ಹೋಗೋಣವೆಂದರೆ ಹಾಳು ಬಿಸಿಲು. ಮತ್ತೇನು ಮಾಡುವುದು..?? "ಬಹಳ ದಿನವಾಯಿತು ಕಣೇ. ಇವತ್ತು ರಂಗ್ ದೇ ಬಸಂತಿ ನೋಡೋಣ" ಎಂದಳು ನನ್ನ ರೂಮ್ ಮೇಟ್. ಸರಿ ಎನ್ನುತ್ತಾ ಲ್ಯಾಪ್ ಟಾಪ್ ಅನ್ನು ತೆಗೆದು ಫಿಲ್ಮ್ ನೋಡುತ್ತಾ ಕುಳಿತೆವು. ಮಿಗ್ ವಿಮಾನದ ಅಪಘಾತವೊಂದರಲ್ಲಿ ಕ್ಯಾಪ್ಟನ್ ಅಜಯ್ ರಾಥೋಡ್ ನಿಧನ ಹೊಂದಿದನೋ ಅಲ್ಲಿಂದ ಫಿಲ್ಮ್ ದಿ ಎಂಡ್ ವರೆಗೂ ನಮ್ಮಿಬ್ಬರ ಕಣ್ಣುಗಳಲ್ಲೂ ಬಿಟ್ಟು ಬಿಟ್ಟು ನೀರು ಹನಿಯಾಗಿ ಉದುರುತ್ತಿತ್ತು. ರೂಮ್ ಮೇಟ್ ಏಕೆ ಅಳುತ್ತಿದ್ದಳೋ ನಾನು ಕೇಳುವ ಪ್ರಯತ್ನ ಮಾಡಲಿಲ್ಲ. ನಾನಂತೂ ಸೈನಿಕರನ್ನು, ಅವರ ಕುಟುಂಬದವರನ್ನು, ಮುಖ್ಯವಾಗಿ ಅವರ ಹೆಂಡತಿ, ಮಕ್ಕಳನ್ನು ನೆನೆದು ದುಃಖಿಸುತ್ತಿದ್ದೆ.
                      ಗಡಿಯಲ್ಲಿ ದೇಶ ಕಾಯುವ ಹೊಣೆ ಹೊತ್ತವನಿಗೆ ಯುದ್ಧಭೂಮಿಯೇ ಮೊದಲ ಮನೆ. ಭಾರತಾಂಬೆಯೇ ಮೊದಲ ತಾಯಿ. ಆ ನಂತರವೇ ಹೆಂಡತಿ, ಮಕ್ಕಳೆಲ್ಲಾ. ದೇಶ ಸೇವೆಯೆಂಬ ಪವಿತ್ರ ಯಜ್ಞದಲ್ಲಿ ತನ್ನ ಸ್ವಂತ ಬದುಕಿನ ಸುಖ, ಸಂತೋಷ, ನೆಮ್ಮದಿಗಳನ್ನೆಲ್ಲಾ ಆಹುತಿಯಾಗಿಸಿ ರಾಷ್ಟ್ರ ರಕ್ಷಣೆಯ ಮಹಾನ್ ಕಾರ್ಯದಲ್ಲಿ ಜೀವನ ಪೂರ್ತಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ ಸೈನಿಕನೊಬ್ಬ. ಅವನ ತಾಯಿ ಆತ ಯುದ್ಧ ಭೂಮಿಗೆ ಹೋಗಿ ಬರಲು ನಮಸ್ಕರಿಸಿದಾಗ ಹೆತ್ತ ಕರುಳು ಚುರ್ ಎನ್ನುತ್ತಿದ್ದರೂ ನಗು ನಗುತ್ತಾ ಆಶೀರ್ವದಿಸುತ್ತಾಳೆ. ಹೆಂಡತಿಯ ಹೃದಯದ ಬಡಿತ ಜೋರಾದರೂ ಧೈರ್ಯ, ಪ್ರೋತ್ಸಾಹದ ಅಪ್ಪುಗೆಯನಿತ್ತು ಬೀಳ್ಕೊಡುತ್ತಾಳೆ. ತಂದೆ, ಅಣ್ಣ, ತಮ್ಮಂದಿರಿದ್ದರೂ ಅವರೆಲ್ಲಾ ತಮ್ಮ ದುಗುಡಗಳನ್ನು ಮನಸ್ಸಿನಲ್ಲಿಯೇ ಅಡಗಿಸಿಕೊಂಡು ಹೋಗಿ ಬಾ, ಶುಭವಾಗಲಿ ಎಂದು ಹಾರೈಸುತ್ತಾರೆ. ಆ ಕ್ಷಣದಲ್ಲಿ ಇವರೆಲ್ಲರಿಗೂ ಒಂದೇ ತಳಮಳ. ಇನ್ನು ಮತ್ತೆ ಪುನಃ ಯಾವಾಗ ಇವನನ್ನು ನೋಡುವುದು..?? ನೋಡುವ ಭಾಗ್ಯವಾದರೂ ಇದೆಯೋ ಇಲ್ಲವೋ..?? ಇನ್ನು ಅವನ ಪುಟಾಣಿ ಮಕ್ಕಳು ತಮ್ಮ ಪುಟ್ಟ ಪುಟ್ಟ ಕೈಗಳೆನ್ನಿತ್ತಿ ಬೀಸುತ್ತಾ ಟಾಟಾ ಹೇಳುತ್ತವೆ. ಇಂಥವ ಸೈನಿಕನೊಬ್ಬ ಯುದ್ಧದಲ್ಲಿ ಬಲಿಯಾಗಿ ಆತನ ಹೆಣ ಮನೆಯ ಬಾಗಿಲಿಗೆ ಬಂದಾಗ ಇವರೆಲ್ಲರ ಮನಸ್ಥಿತಿಯನ್ನು ಊಹಿಸಿಕೊಳ್ಳಿ.
                                   ಮನೆಯ ಸದಸ್ಯನೊಬ್ಬ ಸೈನ್ಯದಲ್ಲಿದ್ದಾನೆಯೆಂದರೆ ಆತನ ಪ್ರಾಣ ಇನ್ನು ಮುಂದೆ ದೇಶಕ್ಕೆ ಮೀಸಲು ಎಂದೇ ಅರ್ಥ. ತಮ್ಮ ಸ್ವಂತ ಸುಖವನ್ನು ಅವರೂ ಸಹ ತ್ಯಾಗ ಮಾಡಬೇಕು. ಸ್ವಾರ್ಥಪರವಾಗಿ ಆಲೋಚಿಸದೇ ನಾಲ್ಕು ಮಂದಿಯ ಹಿತದ ಕುರಿತು ಚಿಂತಿಸಬೇಕು. ನಾವೆಲ್ಲಾ ಇಷ್ಟು ನೆಮ್ಮದಿಯಿಂದ ಇರಲು ಅವರೆಲ್ಲರೂ ಕಾರಣರಲ್ಲವಾ..?? ನೆನೆದರೆ ಮತ್ತೆ ಹನಿಗಳು ಉದುರುತ್ತವೆ.


ನಾವೆಷ್ಟರ ಮಟ್ಟಿಗೆ ಹೊಣೆ..??


                   ಯಾವುದೋ ಒಂದು ಚಲನಚಿತ್ರ ನೋಡಿದಾಗ ನಮ್ಮೊಳಗಿನ ಭಾರತೀಯ ಎಚ್ಚೆತ್ತುಕೊಳ್ಳುತ್ತಾನೆ/ಳೆ. ಯಾರದ್ದೋ ಭಾಷಣ ಕೇಳಿದಾಗ ನಮ್ಮ ದೇಶದ ಕುರಿತು ನಮಗೆ ಅಭಿಮಾನ ಮೂಡುತ್ತದೆ. ಯಾವುದೋ ಒಂದು ಪುಸ್ತಕದಲ್ಲಿನ ನಾಲ್ಕು ಸಾಲುಗಳನ್ನು ಓದಿದಾಗ ನಾವು ಸತ್ಯವನ್ನು ಸಮಾಧಿ ಮಾಡಿ ಸುಳ್ಳನ್ನು ಆರಾಧಿಸುತ್ತಿರುವ ಕುರಿತು ಜ್ಞಾನೋದಯವಾಗುತ್ತದೆ. ಉಳಿದ ಹೊತ್ತಿನಲ್ಲಿ..?? ಕಪಟ ನಿದ್ದೆ. ಗಡಿಯಲ್ಲಿ ಯಾವುದೋ ಒಬ್ಬ ಸೈನಿಕನನ್ನು ಶತ್ರುದೇಶದ ಯೋಧನೊಬ್ಬ ಗುಂಡಿಕ್ಕಿ ಕೊಂದರೆ ಆತನ ಕುರಿತು ಸಂತಾಪ ವ್ಯಕ್ತ ಪಡಿಸುತ್ತೇವೆ, ಸರ್ಕಾರದ ಕುರಿತು ಆಕ್ರೋಶ ಉಕ್ಕುತ್ತದೆ. ಯುವತಿಯೊಬ್ಬಳನ್ನು ಅತ್ಯಾಚಾರಗೈದು ಕೊಂದರೆ ಎಲ್ಲರಿಗೂ ಮಾನವೀಯತೆ, ರಕ್ಷಣೆಯೆಂಬ ಪದಗಳು ನೆನಪಾಗುತ್ತವೆ. ವ್ಯವಸ್ಥೆ ಸರಿಯಿಲ್ಲವೆಂದು ಪ್ರತಿಭಟನೆ ಗೈಯ್ಯುತ್ತೇವೆ. ಅದೂ ಕೂಡ ಇವೆಲ್ಲ ಘಟನೆಗಳೂ ಕಣ್ಣು, ಕಿವಿಗಳ ಮೂಲಕ ಹೃದಯವನ್ನು ತಲುಪಿ ಕೊನೆಗೆ ಮಲಗಿರುವ ಮೆದುಳನ್ನು ಬಡಿದೆಬ್ಬಿಸಬೇಕು. ಹಾಗೆಂದರೆ ಮಾತ್ರವೇ ನಾವು ಏಳುವುದು. ಇಲ್ಲವೆಂದಾದರೆ..??
                     ಇದು ಇಂದು ನಿನ್ನೆಯ ಕಥೆಯಲ್ಲ. ಸುಮಾರು ಶತಮಾನಗಳಿಂದಲೂ ನಾವೆಲ್ಲರೂ ಮಲಗಿಯೇ ಇದ್ದೇವೆ. ನಿದ್ದೆಗಣ್ಣಿನಲ್ಲಿರುವ ನಮಗೆ ನಾವೇನು ಮಾಡುತ್ತಿದ್ದೇವೆ ಎನ್ನುವುದೇ ಅರ್ಥವಾಗುತ್ತಿಲ್ಲ. ಎಚ್ಚೆತ್ತು ಅದನ್ನು ಅರ್ಥ ಮಾಡಿಕೊಳ್ಳುವುದು ಬೇಕಾಗೂ ಇಲ್ಲ. ಸ್ವಾತಂತ್ರ್ಯ ಬರುವ ಮೊದಲೂ, ಬಂದ ನಂತರದಲ್ಲೂ ನಮ್ಮದು ಅದೇ ಕತೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸುಖ ಸಂತೋಷವನ್ನು ತ್ಯಾಗಮಾಡಿ ಪ್ರಾಣವನ್ನೇ ಬಲಿದಾನಗೈದ ವೀರ ಸೇನಾನಿಗಳನ್ನು ಮೂಲೆಗಟ್ಟಿದ್ದೇವೆ. ಅವರ ಹೋರಾಟದ ಕೀರ್ತಿಯನ್ನು ಪುಕ್ಕಟೆಯಾಗಿ ತಮ್ಮದಾಗಿಸಿಕೊಂಡವರನ್ನು ನಾಯಕರೆಂದು ಹೊಗಳಿ ಅಟ್ಟಕ್ಕೇರಿಸಿದ್ದೇವೆ. ಈಗಲೂ ಸಹ ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇವೆ. ಹೊಗಳಲೂ ನಮಗೆ ಅವರೇ ಬೇಕು. ಉಳಿದವರ ಕೊಡುಗೆ ಇದ್ದರೂ ಅದು ಕಾಣಿಸುವುದಿಲ್ಲ. ಆಮೇಲೆ ಏನಾದರೂ ತಪ್ಪಾದರೆ ತೆಗಳುವುದೂ ಅವರನ್ನೇ. ಅದರಲ್ಲಿ ನಮ್ಮದು ಪಾತ್ರವಿದೆಯೆಂಬುದನ್ನು ನಾವು ಯೋಚಿಸುವ ಗೋಜಿಗೇ ಹೋಗುವುದಿಲ್ಲ.
                                 ಬಹಳ ಹಿಂದಿನ ಕಥೆಯೇಕೆ, ಕಳೆದ ಐದು ವರ್ಷಗಳನ್ನೇ ತೆಗೆದುಕೊಳ್ಳೋಣ. ದೇಶ ಹಲವಾರು ಸಮಸ್ಯೆಗಳ ಸುಳಿಗೆ ಸಿಲುಕಿದಾಗ ನಾವೆಲ್ಲಾ ಬೈದು ತೆಗಳಿದ್ದು ನಮ್ಮ ಸರ್ಕಾರವನ್ನು, ನಮ್ಮ ವ್ಯವಸ್ಥೆಯನ್ನು. ಆದರೆ ಸರ್ಕಾರ ಎಂದರೇನು..?? ಅದನ್ನು ರಚಿಸಿದವರು ಯಾರು..?? ನಾವೇ ಅಲ್ಲವೇ..?? "ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿಯೇ, ಪ್ರಜೆಗಳಿಗೋಸ್ಕರ ರಚಿತವಾದ ಒಂದು ವ್ಯವಸ್ಥೆ." ಎನ್ನುವುದನ್ನು ಐದು-ಆರನೇ ತರಗತಿಗಳಲ್ಲಿದ್ದಾಗ ಅದೆಷ್ಟು ಸಲ ಕಂಠಪಾಠ ಮಾಡಿರುವುದಿಲ್ಲ..?? ವಯಸ್ಕರಾದ ಕೂಡಲೇ ಅದೆಲ್ಲವೂ ಮರೆತು ಹೋಗುವುದೇಕೆ..?? ಎಲ್ಲದಕ್ಕೂ ಬೇರೆಯವರನ್ನು ಹೊಣೆಗಾರರನ್ನಾಗಿಸಿ ನಾವು ಜಾರಿಕೊಳ್ಳುವ ಮನಸ್ಥಿತಿಯೇಕೆ..?? ಇದನ್ನು ಹೇಡಿತನ ಎಂದಲ್ಲದೇ ಮತ್ತೇನೆನ್ನಬೇಕು..?? ಯಾರೋ ಒಬ್ಬ ಮಹಾನ್ ವ್ಯಕ್ತಿಯೇ ಬಂದು ಇದನ್ನೆಲ್ಲಾ ಸರಿಪಡಿಸಬೇಕೆನ್ನುತ್ತೇವೆ. ನಾವೇ ಏಕೆ ಸ್ವಚ್ಛಗೊಳಿಸಲು ಮುಂದಾಗುವುದಿಲ್ಲ..?? ಇಲ್ಲಿಯೇ ಹುಟ್ಟಿ, ಇಲ್ಲಿಯ ಗಾಳಿ, ನೀರುಗಳನ್ನೇ ಸೇವಿಸಿ, ಇಲ್ಲಿಯ ಸಕಲ ಸಂಪನ್ಮೂಲ, ಸೌಕರ್ಯ, ಸವಲತ್ತುಗಳನ್ನೆಲ್ಲಾ ಪಡೆದುಕೊಂಡು ಕೊನೆಗೆ ಇಲ್ಲಿ ಏನು ಸರಿಯಿಲ್ಲವೆಂದು ಹೇಳುತ್ತಾ ವಿದೇಶಕ್ಕೆ ಹಾರಲು ತಯಾರಾಗುತ್ತೇವೆ. ಎಲ್ಲರೂ ಹೀಗೆಯೇ ಹಾರಿ ಹೋದರೆ ಇಲ್ಲಿದ್ದುಕೊಂಡು ಕೊಳೆಯನ್ನು ಚೊಕ್ಕಟಮಾಡುವವರಾರು..?? ತೆಗೆದುಕೊಳ್ಳುವುದೊಂದೇ ನಮ್ಮ ಹಕ್ಕೇ..?? ತಿರುಗಿ ನೀಡುವ ಕರ್ತವ್ಯವೂ ನಮಗಿಲ್ಲವೇ..?? ಇದೆಲ್ಲವೂ ನಮಗೆ ತಿಳಿಯದ ವಿಷಯಗಳೇ..?? ಚೆನ್ನಾಗಿ ತಿಳಿದಿರುವಂಥವುಗಳೇ. ಅದಕ್ಕೆ ಹೇಳಿದ್ದು ನಮ್ಮದು ಕಪಟ ನಿದ್ದೆಯೆಂದು.


                            ನಮ್ಮ ನಮ್ಮ ಮನೆಗಳಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಅದನ್ನು ಎಲ್ಲರೂ ಒಟ್ಟಾಗಿ ಬಗೆಹರಿಸಲು ಮುಂದಾಗುತ್ತೇವೆಯೇ ಹೊರತು ಯಾರೊಬ್ಬರೂ ಕೂಡ ಸಮಸ್ಯೆಯ ನೆಪ ಹೇಳಿ ಮನೆ ಬಿಟ್ಟು ಹೋಗುವುದಿಲ್ಲ. ಇದು ನಮ್ಮ ದೇಶಕ್ಕೂ, ಸಮಾಜಕ್ಕೂ ಅನ್ವಯಿಸುತ್ತದೆ. ಮೊದಲು ನಾವು ಸದಾ ಎಚ್ಚೆತ್ತುಕೊಂಡಿರಬೇಕು. ಯಾವುದೋ ಒಂದು ವ್ಯಕ್ತಿ, ವಿಷಯ, ಘಟನೆ ನಮ್ಮನ್ನು ಎಬ್ಬಿಸುತ್ತಿರಬೇಕಾದಂತಹ ಸೋಮಾರಿಗಳಾಗಬಾರದು. ಆವಾಗ ನಮ್ಮ ನಮ್ಮ ಹಕ್ಕು, ಕರ್ತವ್ಯ, ಜವಾಬ್ದಾರಿಗಳ ಸಂಪೂರ್ಣ ಅರಿವು ನಮಗಾಗುತ್ತದೆ. ಏನೇ ಆದರೂ ಅದಕ್ಕೆ ಬೇರೆಯವರನ್ನು ದೂರುವ ಮೊದಲು ಒಮ್ಮೆ ನಮ್ಮೊಳಗೆ ಕಣ್ಣು ಹಾಯಿಸಬೇಕು. ಏಕೆಂದರೆ ನಾವು ನಮ್ಮ ತೋರು ಬೆರಳನ್ನು ಮುಂದೆ ಮಾಡಿದಾಗ ಉಳಿದ ನಾಲ್ಕು ಬೆರಳುಗಳು ನಮ್ಮತ್ತಲೇ ಮುಖ ಮಾಡಿರುತ್ತವೆ.
                            ಮೊನ್ನೆಯಷ್ಟೆ ಚುನಾವಣಾ ಫಲಿತಾಂಶ ಬಂದಿದೆ. ಹೊಸ ಆಶಯವನ್ನು ಹೊತ್ತು ಹೊಸ ಭರವಸೆಗಳೊಂದಿಗೆ ಹೊಸ ಜನರ ಕೈಗೆ ದೇಶದ ಆಡಳಿತದ ಚುಕ್ಕಾಣಿಯನ್ನು ಒಪ್ಪಿಸಿದ್ದಾಗಿದೆ. ಹಾಗಂತ ಇಷ್ಟಕ್ಕೇ ನಮ್ಮೆಲ್ಲರ ಪಾತ್ರ ಮುಗಿದು ಹೋಯಿತೆಂದರ್ಥವಲ್ಲ. ಅಸಲಿ ಪಾತ್ರ ಆರಂಭವಾಗುವುದೇ ಈಗ. ಆಡಳಿತ ನಡೆಸುವವರು ಹಾಗೆ ಮಾಡಲಿ ಹೀಗೆ ಮಾಡಲಿ ಎನ್ನುತ್ತಾ ಎಲ್ಲವನ್ನೂ ಅವರ ಕೈಗೊಪ್ಪಿಸಿ ನಾವು ಸುಮ್ಮನೆ ಕಣ್ಮುಚ್ಚಿ ಕೂರುವಂತಿಲ್ಲ. ನಮ್ಮ ಮೇಲೂ ಹಲವಾರು ಗುರುತರವಾದ ಜವಾಬ್ದಾರಿಗಳಿವೆ. ಸ್ವತಃ ನಾವೇ ಮುಂದಾಗಿ ಮಾಡಬೇಕಾದ ಕರ್ತವ್ಯಗಳಿವೆ. ಅದನ್ನೆಲ್ಲ ನಾವು ಅರಿತು ನಡೆಯಬೇಕು. ಇನ್ನಾದರೂ ಸತ್ಯದ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ನಿಲ್ಲಿಸಬೇಕು. ಹಾಗಾದಾಗ ಮುಂದೊಂದು ದಿನ ಬೇರೆಯವರನ್ನು ದೂರಬೇಕಾದ ಸಂದರ್ಭವೇ ಬರುವುದಿಲ್ಲ. ನಮ್ಮ ದೇಶ, ವ್ಯವಸ್ಥೆಗಳ ಕುರಿತು ಬೇಸರಪಟ್ಟುಕೊಳ್ಳುವ ಅಗತ್ಯವೂ ಉಂಟಾಗುವುದಿಲ್ಲ. ಆಗಲೇ ೬೬ ವರ್ಷಗಳು ಕಳೆದವು ಭಾರತ ಸ್ವಾತಂತ್ರ್ಯ ರಾಷ್ಟ್ರವಾಗಿ. ಇನ್ನೂ ಎಲ್ಲಿಯ ತನಕ ಈ ಕಪಟ ನಿದ್ದೆ..?? ಸಾಕು, ಇನ್ನಾದರೂ ಎಲ್ಲರೂ ಎದ್ದೇಳೋಣ.


Monday, 19 May 2014

ನಿನ್ನ ನೆನಪು


ಹೇಗೆ ಪಾರಾಗಲಿ ನೀನೇ ಹೇಳು..??
ನಾ ದೂರ ಹೋದಷ್ಟೂ ಹತ್ತಿರವಾಗುತಿದೆ
ನಾ ಮೌನ ತಾಳಿದಷ್ಟೂ ಮಾತನಾಡುತಿದೆ
ಕಣ್ಣಂಚಿನಲ್ಲಿ ಹನಿಯಾಗಿ ಹೆಪ್ಪುಗಟ್ಟುತಲಿ
ತುಟಿಯಂಚಿನಲ್ಲಿ ಮಿಂಚಿ ಮಾಯವಾಗುತಲಿ
ಕೊನೆಗೆ ನನ್ನನ್ನೇ ಆವರಿಸಿಕೊಂಡು
ನಿನ್ನವಳನ್ನಾಗಿಸುತಿದೆ ನಿನ್ನ ನೆನಪು

ಹೀಗೇಕೆ ಗೋಳು ಹೊಯ್ದುಕೊಳ್ಳುತಿದೆ ನನ್ನನ್ನು
ಅತ್ತ ಅಲ್ಲ ಇತ್ತ ಇಲ್ಲ, ಎತ್ತಲೋ ನೋಡುವೆ
ನೀ ನನ್ನ ಸೋಕಿದಂತಾಗಿ ಬೆಚ್ಚಿ ಬೀಳುವೆ
ಮೊದ್ದು ಮನಸ್ಸನ್ನಿಂದು ಚಂಚಲವಾಗಿಸುತ
ಹದಿ ಹೃದಯವನ್ನು ಹಿಂಡಿ ಹಿಪ್ಪೆಯಾಗಿಸುತ
ಕೊನೆಗೆ ಹೊಂಚಿನಿಂದ ನನ್ನುಸಿರನ್ನೇ ಕದ್ದೊಯ್ದು
ನಿನ್ನವಳನ್ನಾಗಿಸುತಿದೆ ನಿನ್ನ ನೆನಪು

ಹಾಗೆಯೇ ಸೋತು ಹೋಗಿಹೆನು ನಾ ನನ್ನೊಳಗೆ
ಸ್ಮೃತಿಯ ಅಲೆಗಳ ಹೊಡೆತಕ್ಕೆ ನುಚ್ಚುನೂರಾಗಿಹೆ
ಕನಸುಗಳ ಪ್ರವಾಹಕ್ಕೆ ಕೊಚ್ಚಿ ಹೋಗುತಿಹೆ
ಬಿರುಗಾಳಿಗೆ ತೂರಿಬರುವ ತರಗೆಲೆಗಳಂತೆ
ಸುರಿವ ಮಳೆಯಲ್ಲಿ ತೋಯ್ದು ತೊಪ್ಪೆಯಾದಂತೆ
ಕೊನೆಗೆ ನನ್ನನ್ನೇ ತನ್ನೊಳಗೆಳೆದುಕೊಳ್ಳುತ್ತಲಿ
ನಿನ್ನವಳನ್ನಾಗಿಸುತಿದೆ ನಿನ್ನ ನೆನಪು


ಡೈರಿ - ಪುಟ ೩೮


                            "ಥತ್, ಸಾಕಾಗಿ ಹೋಯ್ತು. ಒಂದು ತಾಸಾಯಿತು ಕಣೇ. ಎರಡು ಕಲರುಗಳನ್ನು ಬಿಟ್ಟು ಉಳಿದೆಲ್ಲವನ್ನೂ ಅರೇಂಜ್ ಮಾಡಿದೆ. ಅವೆರಡನ್ನು ಮಾತ್ರ ಹೇಗೆ ಸೆಟ್ ಮಾಡುವುದೆಂದೇ ತಿಳಿಯುತ್ತಿಲ್ಲ." ರೂಬಿಕ್ ಕ್ಯೂಬ್ ಹಿಡಿದುಕೊಂಡು ಆಟವಾಡುತ್ತಿದ್ದ ರೂಮ್ ಮೇಟ್ ತಾಳ್ಮೆ ಕಳೆದುಕೊಂಡವಳಂತೆ ಹೇಳಿದಳು.
                        "ಅದ್ಯಾಕೆ ಆ ಥರ ಮುಖ ಮಾಡ್ತಿದೀಯಾ..?? ಮರಳಿ ಯತ್ನವ ಮಾಡು. ಹೇಯ್, ಈಗ ನೆನಪಾಯಿತು ನೋಡು. ಇವತ್ತು ರೂಬಿಕ್ ಕ್ಯೂಬ್ ೪೯ನೇ ಬರ್ತ್ ಡೇ ಕಣೇ. ಬೆಳಿಗ್ಗೆ ಗೂಗಲ್ ಹೋಮ್ ಪೇಜ್ ನೋಡಿದಾಗ ಗೊತ್ತಾಯ್ತು." ನಾನು ಒಮ್ಮೆಲೇ ಜ್ಞಾಪಿಸಿಕೊಂಡವನಂತೆ ಹೇಳಿದೆ.
                        "ಅರೆ ವಾಹ್, ಈ ಪುಟ್ಟ ಆಟಿಕೆಗೂ ಬರ್ತ್ ಡೇ ಇದ್ಯಾ..?? ಹ್ಯಾಪಿ ಬರ್ತ್ ಡೇ ರೂಬಿಕ್ ಕ್ಯೂಬ್." ಚಿಕ್ಕಮಕ್ಕಳಂತೆ ಅದಕ್ಕೆ ಶುಭಾಷಯ ಹೇಳಿದಳವಳು.
                        "ನಿನಗೆ ಇದರ ಕಥೆ ಗೊತ್ತಾ..?? ೧೯೭೪ರಲ್ಲಿ ಎರ್ನೊ ರೂಬಿಕ್ ಎಂಬ ಆರ್ಕಿಟೆಕ್ಟ್ ಇದನ್ನು ಮೊದಲು ಕಂಡುಹಿಡಿದದ್ದು. ಮೊದಲು ಅದನ್ನು ವಿದ್ಯಾರ್ಥಿಗಳಿಗೆ ತ್ರೀಡಿ ವಸ್ತುಗಳ ಬಗ್ಗೆ ಕಲಿಯಲು ಅನುಕೂಲವಾಗಲಿ ಎಂದು ಇದು ಬಳಕೆಯಾದರೂ ಎರ್ನೊ ಅವರ ಮೂಲ ಉದ್ದೇಶ ವಿಜ್ಞಾನದ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗಿಸುವುದಾಗಿತ್ತು. ಆಮೇಲೆ ಈ ಪುಟ್ಟ ಕ್ಯೂಬ್ ಗಣಿತದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲೂ ಸಹಾಯಕವಾಯಿತು. ನೀನು ಬಯಸಿದಂತೆ ಎಲ್ಲ ಕಲರುಗಳನ್ನು ಸೆಟ್ ಮಾಡಲಿಕ್ಕೆ ಒಂದು ವೈಜ್ಞಾನಿಕ ವಿಧಾನವೇ ಇದೆ. ಆ ಪ್ರಕಾರ ಸೆಟ್ ಮಾಡುತ್ತಾ ಹೋಗಬೇಕು. ಪ್ರತಿ ವರ್ಷ ರೂಬಿಕ್ ಕ್ಯೂಬ್ ಅನ್ನು ಸಾಲ್ವ್ ಮಾಡುವ ವಿಶ್ವ ಮಟ್ಟದ ಒಂದು ಸ್ಪರ್ಧೆಯನ್ನೇ ಏರ್ಪಡಿಸಲಾಗುತ್ತದೆ. ಹಾಗೆ ಇದನ್ನು ಕಂಪ್ಯೂಟರ್ ನಲ್ಲೂ ಆಡಬಹುದು. ಅದಕ್ಕಾಗಿ ಒಂದು ವಿಶೇಷ ಸಾಫ್ಟ್ ವೇರ್ ಅನ್ನೇ ಅಭಿವೃದ್ಧಿ ಪಡಿಸಿದ್ದಾರೆ. ಈ ಪುಟ್ಟ ಕ್ಯೂಬ್ ನ ಮೇಲೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ."
                         "ಅಬ್ಬಬ್ಬಾ, ಇಷ್ಟೆಲ್ಲಾ ಕಥೆ ಇದೆಯಾ..?? ತಡಿ, ನಾನು ಇನ್ನೊಮ್ಮೆ ಇವೆರಡು ಕಲರುಗಳನ್ನ್ನು ಸೆಟ್ ಮಾಡಿಯೇ ಬಿಡುತ್ತೇನೆ." ಅವಳು ಮತ್ತೆ ರೂಬಿಕ್ ಕ್ಯೂಬ್ ಅನ್ನು ಹಿಡಿದುಕೊಂಡಳು.Saturday, 17 May 2014

ಡೈರಿ - ಪುಟ ೩೭


                         "ಮೇ ಇಪ್ಪತ್ತಕ್ಕೆ ಮೋದಿ ಪ್ರಮಾಣ ದಿನ ನಿಗದಿ. ಎಲೆಕ್ಷನ್ ರಿಸಲ್ಟ್ ದಿನ ಅಂತೂ ಟಿ. ವಿ. ಮುಂದೆ ಕೂತ್ಕೊಳ್ಲಿಕ್ಕೆ ಆಗ್ಲಿಲ್ಲ. ಮೋದಿ ಪ್ರಮಾಣ ವಚನ ಸ್ವೀಕರಿಸೋದನ್ನಾದರೂ ಲೈವ್ ನಲ್ಲಿ ನೋಡ್ಬೇಕು ಕಣೇ." ನ್ಯೂಸ್ ಪೇಪರ್ ನಲ್ಲಿ ತಲೆ ಹುದುಗಿಸಿ ಕುಳಿತಿದ್ದ ನನ್ನ ರೂಮ್ ಮೇಟ್ ತಲೆ ಎತ್ತದೆಯೇ ಹೇಳಿದಳು.
                        "ನೋಡ್ಬೇಕು ಅಂತಾ ನಾನು ಕೂಡಾ ಅಂದ್ಕೊಂಡಿದೀನಿ. ಆದ್ರೆ, ಹೇಗೆ ನೋಡೋದು..?? ಎಲ್ಲಿ ನೋಡೋದು..?? ಹಾಸ್ಟೆಲಿನಲ್ಲಂತೂ ಟಿ. ವಿ. ಬರಲ್ಲಾ. ಮತ್ತೆಲ್ಲಿಗೆ ಹೋಗೋದು..??" ನಾನು ಅಸಹಾಯಕತೆಯನ್ನು ಪ್ರದರ್ಶಿಸುತ್ತಾ ಹೇಳಿದೆ.
                        "ಅಯ್ಯೋ, ಲೋಕಲೈಟ್ಸ್ ಫ್ರೆಂಡ್ಸ್ ಯಾರಾದ್ರು ಮನೆಗೆ ಹೋಗೋಣ ಬಿಡು. ನಾನು ನನ್ನ ಫ್ರೆಂಡ್ ಹತ್ರ ಕೇಳಿ ನೊಡ್ತೀನಿ. ಒಂದು ವಿಷ್ಯ ಕೇಳು. ನಿನ್ನೆಯಿಂದ ಎಲ್ಲರೂ ಪ್ರಧಾನಿ ಸ್ಥಾನದಲ್ಲಿ ಕೂರಲಿರುವ ಮೋದಿ ಕರ್ತವ್ಯದ ಬಗ್ಗೆ ಮಾತಾಡ್ತಾ ಇದಾರೆ. ಮೋದಿ ಅವರು ಹಾಗೆ ಆಡಳಿತ ಮಾಡ್ಬೇಕು, ಬಡವರಿಗೆ ಏನೆಲ್ಲಾ ಸವಲತ್ತು ಮಾಡ್ಕೊಡ್ಬೇಕು, ಭ್ರಷ್ಟಾಚರ ನಿರ್ಮೂಲನೆ ಮಾಡ್ಬೇಕು - ಅದು ಇದು ಅಂತೆಲ್ಲಾ ಎಲ್ಲಾರು ಹೇಳೋರೆ. ಅಲ್ಲಾ,  ಮೋದಿ ಒಬ್ರಿಗೇನಾ ಕರ್ತವ್ಯ ಇರೋದು..?? ಉಳಿದ ಯಾವ ಭಾರತೀಯನಿಗೂ ಇಲ್ವಾ..??"
                           "ಹೌದು ಮಾರಾಯ್ತಿ. ಎಲ್ಲರೂ ಮೋದಿ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಅಂತಿದಾರೆಯೇ ಹೊರತು ಆ ಜವಾಬ್ದಾರಿಯಲ್ಲಿ ತಮ್ಮ ಪಾಲೂ ಇದೆ ಅನ್ನೋದನ್ನ ಅರ್ಥ ಮಾಡ್ಕೊಂಡ ಹಾಗೆ ಕಾಣಿಸ್ತಿಲ್ಲ. ಎಲ್ಲರೂ ಬಿಜೆಪಿಗೆ ವೋಟ್ ಹಾಕಿ ತಮ್ಮ ತಮ್ಮ ಹಕ್ಕನ್ನು ಚಲಾಯಿಸಿದ್ದಾಯಿತು. ಪ್ರತಿಫಲವಾಗಿ ಬಿಜೆಪಿ ಗೆದ್ದು ಬಂದಾಯಿತು. ಈಗ ಮಾತ್ರ ಎಲ್ಲ ಜವಾಬ್ದಾರಿಯ ಹೊಣೆಯನ್ನು ಮೋದಿಯೊಬ್ಬರದೇ ಬೆನ್ನ ಮೇಲೆ ಹೊರೆಸುವುದು ಸರಿಯೇ..?? ಹಕ್ಕು ಚಲಾಯಿಸಿದವರಿಗೆ ಕರ್ತವ್ಯ ನಿಭಾಯಿಸುವ ಹೊಣೆಯೂ ಇರುವುದಿಲ್ಲವೇ..?? ಪಾರದರ್ಶಕ ಆಡಳಿತ, ಭ್ರಷ್ಟಾಚಾರ ನಿರ್ಮೂಲನೆ, ಅಭಿವೃದ್ಧಿ ಯೋಜನೆಗಳು - ಇಂಥವುಗಳೆಲ್ಲ ಯಶಸ್ವಿಯಾಗಿ ಅನುಷ್ಠಾನವಾಗಬೇಕೆಂದರೆ ಅದರಲ್ಲಿ ಜನ ಸಾಮಾನ್ಯರದ್ದೂ ಕೂಡ ಗುರುತರ ಪಾತ್ರವಿದೆ ತಾನೇ..?? ನಮ್ಮ ಪಾತ್ರವನ್ನು ನಿಭಾಯಿಸದೇ ಮೌನ ವಹಿಸಿದ್ದರಿಂದಲೇ ಯುಪಿಎ-೨ರ ಅವಧಿಯಲ್ಲಿ ಕೆಟ್ಟ ಆಡಳಿತಕ್ಕೆ ಸಾಕ್ಷಿಯಾಗಬೇಕಾಗಿ ಬಂತು. ಅದನ್ನೆಲ್ಲಾ ನಾವು ಅರ್ಥ ಮಾಡಿಕೊಳ್ಳಬೇಕು. ಸುಮ್ಮ ಸುಮ್ಮನೇ ಎಲ್ಲವನ್ನೂ ಮೋದಿ ತಲೆಗೆ ಕಟ್ಟುವುದಲ್ಲ." ನಾನು ಉತ್ತರಿಸಿದೆ.


ಮಿಸ್ ಯೂ ಶಿರಸಿ


ಇಂದೇಕೋ ನೀ ನನ್ನ ಬಹಳವೇ ಕಾಡುತ್ತಿಹೆ
ಪದೇ ಪದೇ ಸ್ಮೃತಿಯಲ್ಲಿ ಮಿಂಚಿ ಮಾಯವಾಗುತ್ತಿಹೆ
ಹಳೆಯ ನೆನಪುಗಳ ಸುಮಗಳಿಂದ ಪೂಜೆ ಸಲ್ಲಿಸಿ
ನನ್ನಿಂದ ಕಣ್ಣೀರಿನ ದಕ್ಷಿಣೆಯನ್ನು ಬೇಡುತಿಹೆಯೇಕೆ..??

ಎಷ್ಟು ಚೆಂದದ ಬಾಲ್ಯದ ದಿನಗಳವು
ನಿನ್ನ ಮಣ್ಣಿನ ಮಡಿಲಲ್ಲಿ ಹೊರಳಾಡಿದ ಕ್ಷಣಗಳು
ಹಸುರಿನ ತಂಪಿನಲ್ಲಿ ಆಡಿದ ಮುಸ್ಸಂಜೆಗಳು
‘ಶಿರ’ದಲ್ಲೇ ಕೂತು ದರ್ಬಾರು ಮಾಡಿದ ಘಳಿಗೆಗಳು

ಶಾಲೆಯೆಂದರೆ ಅದು ಇನ್ನೊಂದು ಮನೆಯಂತೆ
ನಿಜವಾದ ಅರ್ಥದಲ್ಲಿ ಸರಸ್ವತಿಯ ದೇಗುಲ
ಅದೆಷ್ಟು ಕಲಿತೆ ನಾನು, ಕಲಿಯುತ್ತಲೇ ನಲಿದಿದ್ದೆ
ವಯಸ್ಸು ಏರಿದರೂ ಮಕ್ಕಳ ಸುಖ ಸಂತಸವಿತ್ತು

ಈಗ ಸಿಗುತ್ತಿಲ್ಲ ತೆಳ್ಳೇವು, ತೊಡದೇವು, ಅಪ್ಪೆಹುಳಿ
ಅದಕ್ಕೆ ಹೊಟ್ಟೆಯು ಯಾವಾಗಲೂ ಅರ್ಧ ಖಾಲಿ
ಮಾರಾಯಾ, ಮಾರಾಯ್ತಿಯಲ್ಲಿನ ಆತ್ಮೀಯತೆಯ ಸೊಗಸು
ಕಾಣಿಸುವುದಿಲ್ಲ ಹಲ್ಲೋ, ಹಾಯ್, ಬಾಯ್ ಗಳಲ್ಲಿ

ಮಲೆನಾಡಿನ ಮಳೆಗಾಲದಲ್ಲಿ ನೆನೆಯುವ ಭಾಗ್ಯವಿಲ್ಲ
ಚಳಿಗಾಲದಲ್ಲಿ ಕಂಬಳಿ ಹೊದ್ದು ಮಲಗುವ ಮಜವಿಲ್ಲ
ಬೇಸಿಗೆಯ ಬಿಸಿಲಿನಲ್ಲೂ ಕಾಡು-ಮೇಡು ಸುತ್ತುವಂತಿಲ್ಲ
ನಾಲ್ಕು ಗೋಡೆಗಳಲ್ಲೇ ಕಳೆಯುತ್ತಿಹೆನು ದಿನಗಳನ್ನೆಲ್ಲ

ಚೌತಿಯಲ್ಲಿ ದೇವಿಕೆರೆಯ ಡೊಳ್ಳು ಗಣಪನೂ ಕಾಣಲಾರ
ನವರಾತ್ರಿಯ ಮಾರಿಯಮ್ಮನ ವೈಭವವೂ ಸಿಗದು
ಆಲೆಮನೆಯ ಕಬ್ಬಿನ ರಸಕ್ಕೂ ಬೆಲ್ಲಕ್ಕೂ ಕೊಕ್ಕೆ
ಶಿವರಾತ್ರಿಯ ಸಹಸ್ರಲಿಂಗದ ಪ್ರವಾಸವೂ ದೂರ ದೂರ

ತಂಬುಳಿಯ ತಂಪಿಲ್ಲದೇ ತಲೆಯೆಲ್ಲ ಉರಿಯಾಗಿದೆ
ಕವಳವ ಹಾಕದೇ ನಾಲಿಗೆಯೂ ರುಚಿಯ ಮರೆತಿದೆ
ಗಜಾನನ ಸ್ಟೋರ್ಸ್ ಗೆ ಹೋಗದೇ ಅದ್ಯಾವ ಕಾಲವಾಯಿತು
ನಟರಾಜ್ ನಲ್ಲಿ ಫಿಲ್ಮ್ ನೋಡದೇ ವರ್ಷಗಳೇ ಉರುಳಿದವು

ವಿರಹ ವೇದನೆ ಬಿಡದೇ ಅತಿಯಾಗಿ ಬೆಂಬತ್ತಿದೆ
ಮರಳಿ ನಿನ್ನ ತೆಕ್ಕೆಗೇ ಬಂದು ಬೀಳುವ ಮನಸ್ಸಾಗುತ್ತಿದೆ
ಆದರೆ ಕಾಲರಾಯನೇಕೋ ಅನುಮತಿ ನೀಡುತ್ತಿಲ್ಲ
ಆತನ ಮನವೊಲಿದು ಸೈ ಎಂದರೆ ಇಲ್ಲಿ ನಿಲ್ಲುವ ಮಾತಿಲ್ಲ


ಡೈರಿ - ಪುಟ ೩೬


                               "ನಾವು ಶಿರಸಿಯ ಜನ ಇದ್ದೀವಲ್ಲಾ, ನಮಗೆ ನಿಜವಾಗಲೂ ಬುದ್ಧಿಯಿಲ್ಲ ಕಣೇ. ತಲೆ ಅಂತ ಇರೋದು ಸುಮ್ಮನೆ ಹೆಸರಿಗೆ. ಅದರೊಳಗೆ ಮೆದುಳು ಅನ್ನೋದು ಇದ್ದರೂ ಅದು ದಂಡಕ್ಕೆ." ನನ್ನ ರೂಮ್ ಮೇಟ್ ಬೇಸರದಿಂದಲೇ ಎನ್ನುವಂತೆ ಹೇಳಿದಳು.
                        "ಯಾಕೆ..?? ಏನಾಯಿತು..?? ಅದು ನಿನ್ನ ಬಾಯಿಂದ ಇಂಥಾ ಮಾತು. ನೀನು ಹೇಳಿದ್ದು ಸ್ವಲ್ಪ ನಿಜವೇ ಇರಬಹುದು. ಆದರೆ ವಿಷಯ ಏನಂತ ಮೊದಲು ಹೇಳು. ಆಮೇಲೆ ಬುದ್ಧಿ ಇದೆಯೋ ಇಲ್ಲವೋ ಎಂದು ಜಡ್ಜ್ ಮೆಂಟ್ ಕೊಡೋಣ" ನಾನು ಹೇಳಿದೆ.
                     "ನಮ್ಮ ಶಿರಸಿಯಂಥಾ ಸುಂದರ ಊರು ಬೇರೆ ಇದ್ಯಾ..?? ಸುತ್ತಲೂ ಹಸಿರು, ಸದಾ ತಂಪು, ಉತ್ತಮವಾದ ಗಾಳಿ ಉಸಿರಾಡಲಿಕ್ಕೆ, ಮೃಷ್ಟಾನ್ನ ಭೋಜನ ಹೊಟ್ಟೆ ತುಂಬಲಿಕ್ಕೆ. ಇಂಥಾ ಊರನ್ನು ಬಿಟ್ಟು ಏನೇನೋ ಕಾರಣಗಳನ್ನು ಹೊತ್ತು ಬೇರೆ ಬೇರೆ ಊರಿಗೆ ಹೋಗ್ತೀವಲ್ಲಾ, ನಮಗೆ ಬುದ್ಧಿ ಇದ್ಯಾ...?? ದೇವರೇ ಸ್ವತಃ ನಮ್ಮನ್ನು ಶಿರಸಿಯಲ್ಲಿ ಹುಟ್ಟಿಸಿದರೂ ನಮಗೆ ಅಲ್ಲಿ ಬದುಕೊ ಅದೃಷ್ಟ, ಯೋಗ್ಯತೆ ಇಲ್ಲಾ ನೋಡು. ಒದ್ದಾಡ್ತಾ ಬೇರೆ ಊರಲ್ಲಿ ಬದುಕ್ತೀವಿ."
                          "ಅಲ್ಲಾ ಕಣೇ. ಓದು, ಉದ್ಯೋಗದ ಸಲುವಾಗಿ ತಾನೇ ನಾವು ಬೇರೆ ಊರಿಗೆ ಹೋಗೋದು. ಅದರಲ್ಲಿ ತಪ್ಪೇನಿದೆ..?? ಅದನ್ನ ಮಾಡ್ಲೇಬೇಕಲ್ವಾ ನಾವೆಲ್ಲಾ..?? ನಮ್ಮ ಭವಿಷ್ಯ ಒಳ್ಳೆದಾಗ್ಲಿ ಅಂತಾನೇ ನಾವು ಹಾಗೆ ಮಾಡೋದಲ್ವಾ..??"
                        "ಮೊನ್ನೆ ಮೊನ್ನೆ ಎಸ್ಸೆಸ್ಸೆಲ್ಸಿ ರಿಸಲ್ಟ್ ನೋಡಿದ್ದು ಮರೆತು ಹೋಯ್ತಾ..?? ನಮ್ಮ ಶಿರಸಿ ಎರಡನೇ ಸ್ಥಾನದಲ್ಲಿತ್ತು. ಪ್ರಾಥಮಿಕ ಶಿಕ್ಷಣ ಇಷ್ಟು ಚೆನ್ನಾಗಿರೋವಾಗ ಉನ್ನತ ಶಿಕ್ಷಣದ ಕೋರ್ಸುಗಳೂ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಹೇಳು. ಅವುಗಳನ್ನೆಲ್ಲಾ ಅಲ್ಲಿ ಆರಂಭಿಸಬಹುದಲ್ವಾ..?? ಅದಕ್ಕೆ ಬೇಕಾದ ಸಕಲ ಸವಲತ್ತು, ಸಂಪತ್ತುಗಳೂ ಅಲ್ಲಿವೆಯಲ್ವಾ..?? ಉನ್ನತ ಶಿಕ್ಷಣದ ಅವಕಾಶ ಅಲ್ಲಿ ಇದ್ದಿದ್ದರೆ ಅದಕ್ಕೆ ತಕ್ಕ ಉದ್ಯೋಗಾವಕಾಶಗಳೂ ಇರುತ್ತಿದ್ದವು. ಅವು ಇಲ್ಲ ಅನ್ನೋ ಕಾರಣಕ್ಕೆ ಬೇರೆ ಕಡೆ ಹೋಗಬೇಕು ಅನ್ನೋದು ಓಕೆ. ಆದರೆ ಅದರ ಸಲುವಾಗಿ ಎಷ್ಟೆಲ್ಲಾ ಒದ್ದಾಡ್ಬೇಕು, ಏನೇನೆಲ್ಲಾ ಅನುಭವಿಸಬೇಕು. ಅದಕ್ಕೆ ಕೊನೆಯೇ ಇಲ್ಲ. ಏನು ಮಾಡಿದರೂ ಮನಶ್ಶಾಂತಿ ಅನ್ನೋದು ಮರೀಚಿಕೆಯೇ. ಬದುಕಲಿಕ್ಕೆ ಯೋಗ್ಯವಾದ ಉದ್ಯೋಗ ದೊರಕುವಂಥ ಕೋರ್ಸುಗಳು ನಮ್ಮ ಶಿರಸಿಯಲ್ಲಿ ಇಲ್ವೇ ಇಲ್ಲ ಅನ್ನೋ ಹಾಗಿಲ್ಲ, ಇವೆ. ನಮಗೆಲ್ಲಾ ಅವುಗಳಲ್ಲಿ ಆಸಕ್ತಿಯಿಲ್ಲ ಅಷ್ಟೆ. ಏನೇನೋ ಸಾಧನೆ ಮಾಡ್ತೀವಿ ಅಂತೆಲ್ಲಾ ದೊಡ್ಡ ದೊಡ್ಡ ಮಾತು ಹೇಳುತ್ತಾ ಎಲ್ಲೆಲ್ಲಿಗೋ ಹೋಗ್ತೀವಿ. ಬದುಕಿನ ಮುಂಜಾನೆಯಿಂದ ಮಧ್ಯಾನ್ಹ ಮುಗಿಯುವ ತನಕವೂ ಹುಟ್ಟೂರಿನಿಂದ ದೂರವೇ ಇರ್ತೀವಿ. ಆಮೇಲೆ ಮುಸ್ಸಂಜೆಯ ಹೊತ್ತಲ್ಲಿ ವಾಪಸ್ಸು ಊರಿಗೆ ಬಂದರೂ ಇಲ್ಲ ಸಲ್ಲದ ರೋಗಗಳೂ, ತೊಂದರೆ ತಾಪತ್ರಯಗಳು ಬೆನ್ನಿಗಂಟಿಕೊಂಡಿರುತ್ತವೆ. ಆವಾಗ ಊರಿನ ವೈಭವವನ್ನು ಅನುಭವಿಸುವ ಭಾಗ್ಯವೂ ಇರುವುದಿಲ್ಲ."
                     "ನಿಮ್ಮ ತರ್ಕ ಸರಿಯಾದುದೇ. ಆದರೆ ವಾಸ್ತವ ನೀವು ಹೇಳಿದಂತೆ ಇಲ್ಲವಲ್ಲ. ಅದಕ್ಕೆ ನಾವಿಲ್ಲಿ ಹೀಗೆ ಇದ್ದೇವೆ ತಾನೇ..??"
                     "ಇದಕ್ಕೆ ನಿಜವಾಗಲೂ ಪರಿಹಾರವಿತ್ತು. ನಾವು ಸುಮ್ಮನೆ ನಮ್ಮ ಶಿರಸಿಯಲ್ಲಿ ಮನೆಯಲ್ಲೇ ಇರುವ ಮಾಣಿಯನ್ನು ಮದುವೆಯಾಗುತ್ತೇನೆ ಎಂದಿದ್ದರೆ ಇಲ್ಲಿಗೆ ಬಂದು ಓದಬೇಕೆನ್ನುವ ಗೋಜು ಇರುತ್ತಿರಲಿಲ್ಲ. ನಮಗದು ಬೇಕಾಗಿಲ್ಲ. ಸಿಟಿಯ ಧೂಳನ್ನು, ಕಲುಷಿತ ನೀರು-ಗಾಳಿಯನ್ನು ತಿನ್ನುವ ಹುಚ್ಚು ನಮಗೆ. ಗಂಡು ಮಕ್ಕಳೂ ಅಷ್ಟೆ. ಅಲ್ಲಿಯೇ ಇದ್ದು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ನೋಡುವುದಿಲ್ಲ. ಅಪ್ಪ ಅಮ್ಮಂದಿರಿಗೆ ತಮ್ಮ ಮಗ ಇಲ್ಲೇ ಇದ್ದರೆ ಹಾಪಾಪೋಲಿ ಆಗುತ್ತಾನೆ, ಊರು ಬಿಟ್ಟರೆ ಉದ್ಧಾರವಾಗುತ್ತಾನೆ ಅನ್ನೋ ಭ್ರಮೆ. ನಿಜವಾಗಲೂ ನಮಗೆ ಬುದ್ಧಿ ಇಲ್ಲಾ ಕಣೇ, ಬುದ್ಧಿ ಇಲ್ಲಾ." ಹಣೆ ಬಡಿದುಕೊಂಡಳು ಅವಳು.
                          "ಬಿಡು, ಈ ಜನ್ಮದಲ್ಲೇನೋ ಹಿಂಗಾಯ್ತು. ಮುಂದಿನ ಜನ್ಮದಲ್ಲಾದರೂ ಜೀವನ ಪೂರ್ತಿ ಶಿರಸಿಯಲ್ಲೇ ಇರೋ ಹಾಗೆ ಬುದ್ಧಿ ಕೊಡು ಅಂತಾ ಸಂಜೆ ಪ್ರೇಯರ್ ಮಾಡೋವಾಗ ದೇವ್ರ ಹತ್ತಿರ ಬೇಡ್ಕೊಳೋಣ." ನಾನು ಸಮಾಧಾನ ಮಾಡಿದೆ.

Friday, 16 May 2014

ಕುಸುರಿ


ಕುಂಚವನ್ನು ಕೈಯ್ಯಲ್ಲಿ ಹಿಡಿಯದೇ ಚಿತ್ರಿಸಲೇ..??
ಬಣ್ಣಗಳ ಸಿಂಚನಗಳ ಹನಿಯ ತಾಕಿಸದೇ
ಚಿತ್ತವು ಲಗಾಮಿಲ್ಲದ ಕುದುರೆಯನೇರಿ ಹೊರಟಾಗ
ಇನ್ನಾವುದರ ಹಂಗು ಬೇಕು ತನುವಿಗೆ
ಕಲ್ಪನೆಯ ಲೋಕದಲ್ಲಿ ತೇಲಾಡುವ ಸುಖ ಸಾಲದೇ..??

ಕಣ್ಣೆದುರಿಗೆ ಕಾಣುವ ಕೆತ್ತನೆಗಿಂತ
ಕಣ್ಣೊಳಗೆ ರೂಪ ತಳೆಯುವ ಕುಸುರಿಗೆ ಸಾಟಿ ಎಲ್ಲಿ..??
ಕಿವಿ ಕೇಳುವ ಮಾತುಗಳಿಗೆ ಮಿಗಿಲಾಗಿ
ಹೃದಯ ಬಡಿತದ ಮೌನ ಮಿಡಿತವು ಸಂಭಾಷಿಸದೇ..??
ಅಗೋಚರ ಕಲೆಯಲ್ಲಡಗಿದೆ ಅವ್ಯಕ್ತ ಅನುಭೂತಿ

ಮನಸ್ಸೆಂಬ ಮರಳಿನಲ್ಲಿ ಎಷ್ಟು ಚಿತ್ತಾರವ ಅರಳಿಸಲಿ..??
ನೂರು ಭಾವಗಳ ಸಾವಿರ ಹೆಜ್ಜೆಗಳನ್ನು ಮೂಡಿಸಲೇ..??
ಹರಳಿನ ಹೆರಳು ಹಿಡಿದು ಓರಣವಾಗಿ ಹೆಣೆಯಲೇ..??
ಕಾಲನ ಅಲೆಗಳು ಬಂದು ಅಳಿಸಿ ಹೋದರೇನಂತೆ
ನೆನಪುಗಳ ಗಾಳಿ ಅದನ್ನು ಸದಾ ಹಸಿಯಾಗಿಡುವುದು


ಡೈರಿ - ಪುಟ ೩೫


                                  "ಅಬ್ ಕಿ ಬಾರ್, ಮೋದಿ ಸರ್ಕಾರ್. ಇಲ್ಲಿ ನೋಡೇ" ಹೊರಗಡೆ ಹೋಗಿದ್ದ ನಾನು ಸಣ್ಣ ಮಗುವಿನ ಥರ ಕುಪ್ಪಳಿಸುತ್ತಾ ಒಳಗೆ ಬಂದದ್ದು ನೋಡಿ ನನ್ನ ರೂಮ್ ಮೇಟ್ ಗೆ ನಗು ಬಂತು. ಅದಕ್ಕೂ ಕಾರಣವಿತ್ತು ಬಿಡಿ. ನನ್ನ ಮುಖವನ್ನು ಮೋದಿಯವರ ಮುಖವಾಡ ಅಲಂಕರಿಸಿತ್ತು.
                            "ಹ್ಹೆ ಹ್ಹೆ ಹ್ಹೆ. ಇದೆಲ್ಲಿಂದ ಸಿಕ್ಕಿತೇ ಮಾರಾಯ್ತಿ ನಿನಗೆ..?? ಚೆನ್ನಾಗಿದೆ. ಬಿಜೆಪಿಯವರು ಪುಕ್ಕಟೆಯಾಗಿ ಎಲ್ಲರಿಗೂ ಹಂಚುತ್ತಾ ಇದ್ದಾರಾ ಹೇಗೆ..?? ನನಗೂ ಒಂದು ತರಬೇಕಿತ್ತು" ರೂಮ್ ಮೇಟ್ ಸ್ವಲ್ಪ ಮುಖ ಊದಿಸಿಕೊಂಡಳು.
                             "ಅಯ್ಯೋ, ತಂದಿದ್ದೇನೆ ಕಣೇ. ಐದಾರು ಮುಖವಾಡಗಳನ್ನು ಹಿಡಿದುಕೊಂಡು ಬಂದಿದ್ದೇನೆ. ಅಲ್ಲಿ ಪ್ರಹ್ಲಾದ ಜೋಷಿಯವರ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಾ ಇತ್ತು. ಅದೆಷ್ಟು ಪಟಾಕಿ ಹೊಡೆದರು ಗೊತ್ತಾ..?? ಕಿವಿ ಕೆಪ್ಪಗಾಗುವುದೊಂದು ಬಾಕಿ. ಹಾಸ್ಟೆಲ್ ತನಕ ಕೇಳಿಸಲಿಲ್ಲವಾ..??"
                              "ಕೇಳಿಸಿತು ಮಾರಾಯ್ತಿ. ನಾವೀಗ ಶಿರಸಿಯಲ್ಲಿ ಇರಬೇಕಿತ್ತು ಕಣೇ. ಅಲ್ಲಿಯ ಗೆಲುವಿನ ಆಚರಣೆಯ ಮಜಾನೇ ಬೇರೆ. ಇವತ್ತು ಸಂಜೆ ಕಾಲೇಜಿನಿಂದ ಬರುವಾಗ ನೋಡಿದೆ. ಅಲ್ಲೆಲ್ಲಾ ಹುಡುಗರು ಕೇಸರಿ ಬಣ್ಣದಲ್ಲಿ ಹೋಳಿ ಆಡ್ತಾ ಇದ್ರು. ನಾವು ಸೆಲೆಬ್ರೇಟ್ ಮಾಡೋಣ ಕಣೇ."
                                "ಅದಕ್ಕೇನು, ಮಾಡೋಣ ಬಿಡು. ಮೊದಲು ಫೋಟೋ ತೆಗೆ ನನ್ನದು. ಫೇಸ್ ಬುಕ್ ಪ್ರೊಫೈಲ್ ಪಿಕ್ಚರ್ ಹಾಕ್ಬೇಕು." ಎನ್ನುತ್ತಾ ನಾನು ಕ್ಯಾಮೆರಾ ಹೊರತೆಗೆದೆ.


Thursday, 15 May 2014

ಎಲ್ಲ ಮರೆತಿರುವಾಗ (ಭಾಗ ೧)


                    ‘ಕ್ರೀಂ ಕ್ರೀಂ’ ಶಬ್ದದೊಂದಿಗೆ ಬಸ್ಸಿನ ಓಟಕ್ಕೆ ಬ್ರೇಕ್ ಬಿದ್ದು ಅದರೊಂದಿಗೆ ತಾನೂ ಮುಗ್ಗರಿಸಿದಾಗಲೇ ಮಂದಾಕಿನಿಗೆ ತಾನು ನಿದ್ದೆ ಹೋಗಿದ್ದ ವಿಷಯ ಅರಿವಿಗೆ ಬಂತು. "ಛೇ, ಅದ್ಯಾವ ಕ್ಷಣದಲ್ಲಿ ನಿದ್ದೆ ಹತ್ತಿತೋ ಏನೋ" ಎಂದು ತನ್ನನ್ನೇ ತಾನು ಶಪಿಸಿಕೊಂಡು ಸರಿಯಾಗಿ ಎದ್ದು ಕುಳಿತುಕೊಳ್ಳುತ್ತಾ ತನ್ನ ಸೀರೆ ಸರಿಯಾಗಿದೆಯೇ ಇಲ್ಲ ನಿದ್ದೆ ಮಂಪರಿನಲ್ಲಿ ಸೆರಗು ಜಾರಿದೆಯೇ ಎಂದು ಪರೀಕ್ಷಿಕೊಂಡಳು. ಬಸ್ಸೇಕೆ ಒಮ್ಮೆಗೇ ನಿಂತಿತು ಎಂಬ ಯೋಚನೆ ಮೂಡಿತು. "ಅಯ್ಯೋ, ಟ್ರಾಫಿಕ್ ಬಿತ್ತೇ..?? ಹಾಗಾದರೆ ಇನ್ನು ಮನೆ ಸೇರುವುದು ಒಂದು ಗಂಟೆ ತಡವಾಗುವುದೆಂದೇ ಲೆಕ್ಕ" ಎನ್ನುವುದು ಅರಿವಾಗುತ್ತಿದ್ದಂತೆಯೇ ಥತ್ ಎಂಬ ಮಾತು ಹೊರಬಂತು. ಇವತ್ತು ಎದ್ದ ಗಳಿಗೆಯೇ ಚೆನ್ನಾಗಿಲ್ಲ ಇರಬೇಕು. ಬೆಳಿಗ್ಗೆ ನೋಡಿದರೆ ದಾರಿ ಮಧ್ಯದಲ್ಲಿ ಬಸ್ಸು ಪಂಕ್ಚರ್ ಆಗಿ ಬೇರೆ ಬಸ್ಸು ಹಿಡಿದು ಆಫೀಸಿಗೆ ಹೋಗಬೇಕಾಯಿತು. ತಡವಾಗಿ ಹೋಗಿದ್ದಕ್ಕೆ ಮೇಲಧಿಕಾರಿಯಿಂದ ಬೈಗುಳಗಳ ಪೂಜೆಯೂ ದೊರೆಯಿತು. ಅದರ ಜೊತೆಯಲ್ಲೇ ಲಕ್ಷ್ಮೀಯ ಜೊತೆಯೂ ಸುಮ್ಮನೆ ವಿನಾಕಾರಣ ಮನಸ್ತಾಪಕ್ಕೊಳಗಾಗುವಂತಾಯಿತು. ಈಗ ನೋಡಿದರೆ ಇಲ್ಲಿ ಹೀಗೆ ವ್ಯರ್ಥವಾಗಿ ಗಂಟೆಗಳ ಕಾಲ ಬಸ್ಸಿನಲ್ಲಿ ಕೂತಿರಬೇಕು.
                             ಲಕ್ಷ್ಮೀಯ ನೆನಪು ಮೂಡುತ್ತಿದ್ದಂತೆ ಅಂದಿನ ದಿನ ಊಟದ ಬಿಡುವಿನಲ್ಲಿ ನಡೆದ ಮಾತುಕತೆಗಳೆಲ್ಲ ಮಂದಾಕಿನಿಯ ಕಣ್ಣೆದುರು ತೇಲಿ ಬರತೊಡಗಿದವು. ಈ ಮೊದಲು ಹೇಳಿದ ಮಾತುಗಳನ್ನೇ ಪುನಃ ಇಂದು ಹೇಳಿದರೂ ಲಕ್ಷ್ಮೀಯ ಮಾತುಗಳಲ್ಲಿ ತನ್ನ ಕುರಿತಾಗಿ ಸಾಕಷ್ಟು ಬೇಸರ, ಹತಾಶೆ, ಕಾಳಜಿ, ಮಮತೆಗಳೆಲ್ಲವೂ ವ್ಯಕ್ತವಾಗಿದ್ದವು. ಅವಳು ಹೇಳಿದ್ದರಲ್ಲಿ ತಪ್ಪಾದರೂ ಏನಿದೆ..?? "ನಿನಗೆಷ್ಟು ಸಲ ಹೇಳಿದರೂ ಅಷ್ಟೆ ಕಣೇ. ಹೇಳಿ ಹೇಳಿ ನನ್ನ ಗಂಟಲಿಗೆ ಒಂದಿಷ್ಟು ಶ್ರಮವಾಗುವುದೇ ಹೊರತು ನಿನ್ನ ತಲೆಗೆ ಮಾತ್ರ ಏನೂ ಅರ್ಥವಾಗುವುದಿಲ್ಲ. ನೀನು ಯಾಕೆ ಹಳೆಯ ನೆನಪುಗಳಲ್ಲೇ ಇಂದಿನ ಬದುಕನ್ನು ಕಟ್ಟಿಕೊಳ್ಳುತ್ತೀಯ ಎನ್ನುವುದು ಮಾತ್ರ ನನಗೂ ಅರ್ಥವಾಗದ ವಿಚಾರ. ಅವುಗಳಿಂದ ನಿನ್ನ ಮನಸ್ಸಿಗೆ ದೊರಕುವುದು ನೋವೇ ಹೊರತು ಸಂತಸವಲ್ಲ ಎನ್ನುವುದು ಅನುಭವದಿಂದಲೂ ನಿನಗೆ ಅರಿವಾಗುವುದಿಲ್ಲವಲ್ಲ. ಏನನ್ನೂ ವ್ಯಕ್ತಪಡಿಸದೇ ಮನಸ್ಸಿನಲ್ಲೇ ಎಲ್ಲವನ್ನೂ ಹೊತ್ತುಕೊಂಡರೆ ಮನಶ್ಶಾಂತಿಯಿಂದ ಇರಲಾಗುವುದೇ..?? ಸರಿ ತಪ್ಪು ಎನ್ನುವುದನ್ನೆಲ್ಲ ಯೋಚಿಸದೇ ಅವತ್ತಿನ ದಿನ ನೀನು ಅವನಿಗೆ ಎಲ್ಲವನ್ನೂ ಹೇಳಿ ಬಿಡಬೇಕಾಗಿತ್ತು. ಅದನ್ನೂ ನೀನು ಮಾಡಲಿಲ್ಲ. ಸರಿ, ಆಮೇಲಾದರೂ ನೀನು ಸುಖವಾಗಿ ಇರಬೇಕೆಂದೇ ಅಲ್ಲವೇ ಅವನಿಂದ ದೂರವಾದದ್ದು..?? ಈಗ ಮತ್ತೆ ಹಳೆಯದರ ನೆರಳಲ್ಲೇ ಬೆಳಕನ್ನು ಹುಡುಕಲು ಹೊರಟರೆ ಅದಾಗುವುದೇ ಮಂದಾ..?? ನೋಡು, ನಿನ್ನ ಸಮಸ್ಯೆಗಳೆಲ್ಲವೂ ವರ್ಷದ ಹಿಂದೆಯೇ ತೀರಿಹೋಗಿವೆ. ಪುಟ್ಟ ನಿಕ್ಕಿಯ ಸಂಗತಿಯೂ ಸ್ವಲ್ಪ ದಿನಗಳಲ್ಲೇ ಬಗೆಹರಿಯಲಿದೆ. ಆದರೂ ನೀನು ಮಾತ್ರ ಒಂದು ಚೂರು ಬದಲಾಗಿಲ್ಲ. ಇನ್ನೂ ಹಳೆಯ ಮಂದಾಳಂತೆಯೇ ಇದ್ದೀಯಾ. ಆದದ್ದೇನೋ ಆಗಿ ಹೋಯಿತು. ಅದೆಲ್ಲವೂ ಒಂದು ಕೆಟ್ಟ ಘಳಿಗೆ ಎಂದುಕೊಂಡು ಕೊನೆ ಪಕ್ಷ ನಿಕ್ಕಿಯ ಸಲುವಾಗಿಯಾದರೂ ನೀನು ಹೊಸ ಬದುಕನ್ನು ಶುರು ಮಾಡಬೇಕು ತಾನೇ..?? ನಾನಿದೆಲ್ಲವನ್ನೂ ನಿನಗೆ ಅದೆಷ್ಟು ಬಾರಿ ಹೇಳಿದ್ದೇನೆ. ನೀನು ದಡ್ಡಿ ಮಾತ್ರವಲ್ಲ, ಹೇಡಿಯೂ ಹೌದು. ಇಲ್ಲದಿದ್ದರೆ ಒಂದು ವರ್ಷದ ಬಳಿಕವೂ ನೀನು ಹೀಗೆ ಇರುತ್ತಿರಲಿಲ್ಲ. ಇನ್ನೂ ಎಷ್ಟು ದಿನ ಹೀಗೆ ಇರಬೇಕೆಂದು ತೀರ್ಮಾನಿಸಿದ್ದೀಯಾ ಅನ್ನೋದನ್ನಾದರೂ ಹೇಳಿ ಬಿಡು ಮಾರಾಯ್ತಿ. ನಾನು ಇನ್ನಾದರೂ ನಿನಗೆ ಬುದ್ಧಿ ಹೇಳುವ ವ್ಯರ್ಥ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡುತ್ತೇನೆ." ಅವಳು ಇಷ್ಟೆಲ್ಲಾ ಹೇಳಲು ಕಾರಣವಾದರೂ ಏನು..?? ತಾನು ಹೇಳಿದ ಒಂದೇ ಒಂದು ವಾಕ್ಯ, "ಇವತ್ತಿಗೆ ನಾನು ಕಾರ್ತಿಕ್ ನಿಂದ ಡೈವೋರ್ಸ್ ತೆಗೆದುಕೊಂಡು ಸರಿಯಾಗಿ ಒಂದು ವರುಷವಾಯಿತು ಲಕ್ಷ್ಮೀ."
                                ಅದೊಂದು ಮಾತಿಗೆ ಅವಳು ಅಷ್ಟು ಬೈದಿದ್ದಲ್ಲವೆನ್ನುವುದು ಮಂದಾಕಿನಿಗೆ ಅರ್ಥವಾಗಿತ್ತು. ಅವಳು ಹೇಳಿದಂತೆಯೇ ತಾನು ಕಾರ್ತಿಕ್ ಜೊತೆ ಸಂಸಾರ ಮಾಡುವಾಗ ಹೇಗೆ ಇದ್ದೆನೋ ಅವನಿಂದ ದೂರವಾದ ನಂತರವೂ ಹಾಗೆಯೇ ಇದ್ದೇನೆನ್ನುವುದನ್ನು ಅವಳೂ ಬಲ್ಲಳು. "ಹೌದು ತಾನು ಹೇಡಿಯೇ ಸರಿ. ಎಲ್ಲವನ್ನೂ ಮರೆತು ಹೊಸ ಹಾದಿಯಲ್ಲಿ ಸಾಗಬೇಕೆಂದು ಮನಸ್ಸು ಬಯಸುತ್ತದೆಯೇ ವಿನಃ ಆ ದಿಕ್ಕಿನಲ್ಲಿ ಹೆಜ್ಜೆಯಿಡಲು ಮುಂದಾಗುವುದಿಲ್ಲ. ಎಲ್ಲದರಿಂದಲೂ ಮುಕ್ತಿ ದೊರಕಿ ಮನ ಬಂದ ಕಡೆ ಗರಿಬಿಚ್ಚಿ ಹಾರುವ ಅವಕಾಶ ಕಣ್ಣೆದುರಿಗೆ ಕೈಗೆಟುಕುವಂತಿದ್ದರೂ ತಾನು ಹಾರಲಾರೆ. ಪಂಜರದ ಹಕ್ಕಿಯಂತೆ ಮುಖ ಬಾಡಿಸಿ ಕುಳಿತುಕೊಳ್ಳುವುದೊಂದೇ ತಿಳಿದಿರುವುದು ತನಗೆ. ವಯಸ್ಸು ಮೂವತ್ತು ದಾಟಿರುವುದು ಸುಮ್ಮನೆ ತನಗೆ. ಸರಳ ಸತ್ಯದ ಅರಿವು ಇನ್ನು ಮೂಡುತ್ತಿಲ್ಲ." ತನ್ನ ಬಗ್ಗೆ ಯೋಚಿಸಿದಷ್ಟೂ ಬೇಸರವು ಅತಿಯಾಗಿ ಮಂದಾಕಿನಿಯ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಬಸ್ಸಿನಲ್ಲಿ ಯಾರಾದರೂ ನೋಡಿದರೆ ಮುಜುಗರವಾಗುವುದೆಂದು ಬೇಗನೇ ಸೆರಗಿನ ತುದಿಯಿಂದ ಕಣ್ಣನ್ನು ಒರೆಸಿಕೊಂಡಳು. ಥಟ್ಟನೇ ಅಲ್ಲಿಯ ತನಕವೂ ಇಲ್ಲದಿದ್ದ ನಿಕ್ಕಿಯ ನೆನಪು ಬಂತು. ಇಷ್ಟೊತ್ತಿಗೆ ಸ್ಕೂಲ್ ವ್ಯಾನು ಬಂದು ಇಳಿಸಿ ಹೋಗಿರುತ್ತದೆ. ತನಗಾಗಿಯೇ ಕಾದು ಕಾದು ಸಿಟ್ಟು ಬಂದಿರುತ್ತದೆಯಷ್ಟೆ. ಸ್ಟಾಪಿನಲ್ಲಿ ಬಸ್ಸಿನಿಂದ ಇಳಿದ ಕೂಡಲೇ ಅಲ್ಲೇ ಹತ್ತಿರವಿರುವ ಶೆಟ್ಟರ ಅಂಗಡಿಯಿಂದ ಒಂದು ಲಾಲಿಪಾಪ್ ಅನ್ನು ತೆಗೆದುಕೊಂಡು ಹೋಗಬೇಕು ಎಂದುಕೊಂಡಳು. ಅಷ್ಟು ಹೊತ್ತಿಗೆ ಟ್ರಾಫಿಕ್ ಕೂಡ ತೆರವಾಗುತ್ತಾ ಬಂತು. (ಮುಂದುವರೆಯುವುದು)


Wednesday, 14 May 2014

ಈ ರಾತ್ರಿಯಲಿ


ಕತ್ತಲೆಯ ರಾತ್ರಿಯಿಂದು ಹೊತ್ತು ತರುತಿದೆ
ಮತ್ತೆ ಅದೇ ನೆನಪುಗಳ ಬೆಳದಿಂಗಳನ್ನು
ಬೀಸುವ ತಂಗಾಳಿಯ ತಂಪಿನಲ್ಲೂ
ತೇಲಿ ಬರುತಿದೆ ಬಿಸಿ ಸ್ಪರ್ಶದ ಸೌರಭವು
ಆಗಸದ ಚುಕ್ಕಿಗಳನ್ನು ಎಣಿಸುವಾಗಲೂ
ಸಿಹಿಯಾದ ಹೂಮುತ್ತುಗಳದೇ ಗುಣಾಕಾರ

ನಿಶೆಯ ಕಪ್ಪು ಚಾದರದ ಹೊದ್ದಿಕೆಯು
ಜೊತೆಯಾಗಿ ಕಳೆದ ಕ್ಷಣಗಳ ಅಪ್ಪಿಹಿಡಿದಂತೆ
ಚಲಿಸದೇ ಹೆಪ್ಪುಗಟ್ಟಿ ನಿಂತಿಹವು ಮೋಡಗಳು
ಮೌನ ಸಂಭಾಷಣೆಗೆ ರಾಯಭಾರಿಯಾಗಿ
ಸಾಗುತಿಹೆ ನಾನೊಬ್ಬಳೇ ಇಲ್ಲಿ ಹೀಗೆ
ಭಾವಗಳ ಮರಳಿನಲ್ಲಿ ಮೋಹದ ಹೆಜ್ಜೆಯನಿಡುತ್ತಾ

ಪುನಃ ಅದೆಲ್ಲಿಂದಲೋ ನೀ ಬರುವೆ
ನನ್ನೊಳಗಿನ ಏಕಾಂತವನ್ನು ಭಂಗಗೊಳಿಸಲು
ನಾನಾಗ ಮುಂದೆ ನಡೆಯಲಾರದೇ ಸೋಲುವೆ
ನಿನ್ನ ನೆನಪು ಸೋಕಿದರೆ ನನ್ನ ಮನಸನ್ನು
ಪ್ರತಿಮೆಯಾಗಿ ನಿಲ್ಲುವುದು ಪ್ರತಿ ಉಸಿರು
ನೀನಾದರೋ ಕತ್ತಲಲ್ಲಿ ಕರಗಿ ದೂರಹೋಗುವೆ

ನೆನಪುಗಳ ಪರದೆಯ ಸರಿಸುವಷ್ಟರಲ್ಲಿ
ಕನಸುಗಳ ರಂಗದಲ್ಲಿ ಅಂಕವು ಮುಗಿದು
ಕತ್ತಲು ಗಂಟು ಮೂಟೆಯ ಕಟ್ಟುವ ಹೊತ್ತು
ದೂರವೇ ನಿಲ್ಲು ನೀ ಬಳಿ ಬರದೆ
ನಾ ಸಾಗುವೆ ಭಾರವಾದ ಹೆಜ್ಜೆಯೊಂದಿಗೆ
ಈ ರಾತ್ರಿಯಲ್ಲಿ ಯೋಚನೆಗಳ ತೀರದಲ್ಲಿ


ಡೈರಿ - ಪುಟ ೩೪


                     "ಅಂತೂ ಇಂತೂ ಎಲೆಕ್ಷನ್ ಮುಗೀತು. ಚುನಾವಣಾ ಪೂರ್ವ ಸಮೀಕ್ಷೆಗಳಿಗೂ ಚುನಾವಣೋತ್ತರ ಸಮೀಕ್ಷೆಗಳಿಗೂ ಏನೂ ವ್ಯತ್ಯಾಸವಿಲ್ಲ. ಎಲ್ಲವೂ ಮೋದಿ ಅವರೇ ಮುಂದಿನ ಪ್ರಧಾನಿ ಅಂತ ತೀರ್ಪು ಕೊಟ್ಟಿವೆ. ಮೋದಿ ಅಲೆ ಉಳಿದವೆಲ್ಲರನ್ನೂ ಧೂಳೀಪಟ ಮಾಡಿದೆ ಅನ್ನೋದು ಸುಳ್ಳಲ್ಲ. ಅಬ್ ಕಿ ಬಾರ್, ಮೋದಿ ಸರ್ಕಾರ್ ಅನ್ನೋ ಸ್ಲೋಗನ್ ನಿಜ ಆಗೋ ಹಾಗೆ ಕಾಣ್ಸತ್ತೆ." ದಿನಪತ್ರಿಕೆಯಲ್ಲಿ ಬಂದ ಸಮೀಕ್ಷೆಗಳ ವರದಿಯನ್ನೋದುತ್ತ ಕುಳಿತಿದ್ದ ನನ್ನ ರೂಮ್ ಮೇಟ್ ಹೇಳಿದಳು.
                      "ಸಮೀಕ್ಷೆಗಳ ಅಭಿಪ್ರಾಯವೇ ಅಂತಿಮವಲ್ಲ ಕಣೇ. ಮತದಾರ ಪ್ರಭುವಿನ ಮತ ಯಾರಿಗೆ ಬಿದ್ದಿದೆ ಅನ್ನೋದು ಮತ ಎಣಿಕೆಯ ನಂತರವೇ ತಿಳಿಯಬೇಕಲ್ಲಾ. ೨೦೦೪ರ ಲೋಕಸಭಾ ಚುನಾವಣೆಯಲ್ಲಿ ಸಮೀಕ್ಷೆಗಳೆಲ್ಲಾ ಎನ್ ಡಿ ಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಬರುವುದು ಖಚಿತ ಎಂದಿದ್ದವು. ಆದರೇನಾಯಿತು..?? ಯುಪಿಎ ಮೈತ್ರಿಕೂಟ ಅಧಿಕಾರದ ಗದ್ದುಗೆಗೆ ಏರಲಿಲ್ಲವೇ..?? ಈ ಸಲ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಬರದೇ ಹೋಗಬಹುದು. ಹಾಗೆಯೇ ಬಿಜೆಪಿ ಸುಲಭವಾಗಿ ೨೪೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬಹುದು ಎನ್ನಲೂ ಸಾಧ್ಯವಿಲ್ಲ. ಸರ್ಕಾರ ರಚಿಸಲು ತೃತೀಯ ರಂಗದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿ ಬರುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ. ಆ ಹಾದಿಯೇನೂ ಅಷ್ಟು ಸುಲಭವಾಗಿಲ್ಲ. ಎನ್ ಡಿ ಎ ಮಿತ್ರಪಕ್ಷಗಳನ್ನು ಬಿಟ್ಟು ಉಳಿದೆಲ್ಲವೂ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲಿಕ್ಕಾಗಿ ನಾನಾ ಬಗೆಯ ತಂತ್ರಗಳನ್ನು ಹೆಣೆಯುತ್ತಾ ಕುಳಿತಿದ್ದಾರೆ. ಅವರೇನಾದರೂ ಯಶಸ್ವಿಯಾದರೆಂತಿಟ್ಟುಕೊ, ಅಬ್ ಕಿ ಬಾರ್ ಮೋದಿ ಸರ್ಕಾರ್ ಅನ್ನೋದು ಕೇವಲ ಸ್ಲೋಗನ್ ಆಗಿಯೇ ಉಳಿಯುತ್ತದೆಯಷ್ಟೆ." ನಾನು ಸಣ್ಣ ಭಾಷಣವನ್ನೇ ಬಿಗಿದೆ.
                                  "ಅಯ್ಯೋ ಮಾರಾಯ್ತಿ, ಸಾಕು ಮಾಡು. ನಿನ್ನ ಈ ರಾಜಕೀಯ ಜ್ಞಾನದ ಬತ್ತಳಿಕೆಯಿಂದ ನನಗೆ ಬಾಣ ಬಿಡಬೇಡ. ಇನ್ನೊಂದು ಚಿಕ್ಕ ಪ್ರಶ್ನೆಯಿದೆ. ಮೋದಿ ಪ್ರಧಾನಿಯಾದರೆ ದೇಶ ಉದ್ಧಾರ ಆಗಬಹುದು ಅಲ್ವಾ..?? ಗುಜರಾತ್ ನಲ್ಲಿ ಅವರು ಮಾಡಿದ ಅಭಿವೃದ್ಧಿಯನ್ನು ನೋಡಿದರೆ ಭರವಸೆ ಇಟ್ಟುಕೊಳ್ಳಬಹುದೇನೋ ಅಂತಾ ನನ್ನ ಅಭಿಪ್ರಾಯ."
                           "ಒಂದೊಮ್ಮೆ ಬಿಜೆಪಿ ಗೆದ್ದರೆ ಯಾರ್‍ಯಾರು ಹೇಗೆ ಬದಲಾಗುತ್ತರೋ ಯಾರಿಗೆ ಗೊತ್ತು..?? ಮೋದಿಯವರನ್ನ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸುವಾಗಲೇ ಅಡ್ವಾಣಿಯರನ್ನೂ ಹಿಡಿದು ಹಲವಾರು ಬಿಜೆಪಿ ಮತ್ತು ಮಿತ್ರಪಕ್ಷಗಳ ನಾಯಕರಿಗೆ ಅಸಮಾಧಾನವಿತ್ತು. ಇನ್ನು ಬಿಜೆಪಿಯಲ್ಲೂ ಭ್ರಷ್ಟ ಅಧಿಕಾರಿಗಳಿಲ್ಲವೇ..?? ಜೊತೆಯಲ್ಲಿ ಮೋದಿಗೆ ಆಡಳಿತದಲ್ಲಿ ಹೆಗಲು ನೀಡಬಲ್ಲಂಥ ಸಮರ್ಥ ನಾಯಕರ ಕೊರತೆಯೂ ಇದೆ. ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಮೋದಿ ಆಡಳಿತ ನಡೆಸಬೇಕಾಗುತ್ತದೆ. ಇನ್ನು ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ನಡೆದ ಹಗರಣಗಳನ್ನೆಲ್ಲಾ ನ್ಯಾಯಯುತವಾಗಿ ಬಗೆಹರಿಸಬೇಕು. ಆ ನಂತರದಲ್ಲಿ ತಮ್ಮದೇ ಸರ್ಕಾರದ ಯೋಜನೆಗಳನ್ನು ಘೋಷಿಸಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಇದೆಲ್ಲಾ ಆದರೆ ದೇಶ ಅಭಿವೃದ್ಧಿ ಕಾಣುತ್ತದೆ. ಕಾಂಗ್ರೆಸ್ಸಿನ ಕೆಟ್ಟ ಆಡಳಿತಕ್ಕೆ ಬೇಸತ್ತ ಜನ ಈ ಬಾರಿ ಬಿಜೆಪಿಗೆ ಅವಕಾಶ ನೀಡುಬಹುದು ಅಷ್ಟೆ."
                       "ಉಸ್ಸಪ್ಪಾ, ಮುಗಿಯಿತಾ ಮಾತು..?? ತಪ್ಪಾಯಿತು ಮಾರಾಯ್ತಿ. ನಾಡಿದ್ದು ೧೬ಕ್ಕೆ ಫಲಿತಾಂಶ ಬರುವವರೆಗೂ ನಾನು ಏನನ್ನೂ ಕೇಳುವುದಿಲ್ಲ." ನಾಟಕೀಯವಾಗಿ ಕೈ ಮುಗಿಯುತ್ತಾ ನುಡಿದಳು ನನ್ನ ರೂಮ್ ಮೇಟ್.


Tuesday, 13 May 2014

ಡೈರಿ - ಪುಟ ೩೩


                             "ನಂಗೊಂದು ಡೌಟು ಕಣೇ. ಎಸ್ಸೆಸ್ಸೆಲ್ಸಿ, ಪಿಯುಸಿಗಳಲ್ಲಿ ರ್‍ಯಾಂಕ್ ಬಂದು ಮಿಂಚುತ್ತಾರಲ್ಲಾ, ಅವರೆಲ್ಲರೂ ಆಮೇಲೆ ಕಾಣಿಸುವುದೇ ಇಲ್ಲ ಯಾಕೆ..?? ಎಲ್ಲಿ ಮಾಯವಾಗಿ ಹೋಗುತ್ತಾರೆ..?? ಇನ್ ಫ್ಯಾಕ್ಟ್ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ ಅವರೆಲ್ಲಾ ಸಾಯೋವರೆಗೂ ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚುತ್ತಾ ಇರೋದು ಸುದ್ದಿಯಾಗ್ತಾ ಇರ್ಬೇಕಪಾ. ಆದರೆ ಹಾಗಾಗೋದಿಲ್ವಲಾ. ಹೀಗೂ ಉಂಟೇ..??" ರೂಮ್ ಮೇಟ್ ನ್ಯೂಸ್ ಪೇಪರ್ ಓದುತ್ತಾ ಹೇಳಿದಳು.
                             "ಮಾರಾಯ್ತಿ. ನಿನ್ನ ತಲೆಯಲ್ಲೂ ಇಂಥ ಆಲೋಚನೆಗಳು ಬರುತ್ತವಾ..?? ವಿಚಿತ್ರ ಆದರೂ ಸತ್ಯ ಅನ್ನೋ ಹಂಗಾಯ್ತು." ನಾನವಳನ್ನು ರೇಗಿಸುತ್ತಾ ಹೇಳಿದೆ.
                             "ನಿನ್ನ ತಮಾಷೆ ಆಮೇಲೆ ಇಟ್ಟುಕೊ. ನನ್ನ ಪ್ರಶ್ನೆಗೆ ಉತ್ತರ ಹೇಳು."
                             "ನೋಡೇ, ನಮ್ಮ ದೇಶದ ಜನಕ್ಕೆ ಒಂದು ಮಾನಸಿಕ ಖಾಯಿಲೆಯಿದೆ. ಅದೇನಪಾ ಅಂತಂದ್ರೆ, ರ್‍ಯಾಂಕ್ ಸ್ಟೂಡೆಂಟ್ಸ್ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸುಗಳನ್ನೇ ಆಯ್ಕೆ ಮಾಡ್ಕೊಬೇಕು. ಅದೂ ಕೂಡ ಪ್ರತಿಷ್ಠಿತ ಕಾಲೇಜುಗಳಲ್ಲಿಯೇ ಓದಬೇಕು. ಆಮೇಲೆ ಹೆಚ್ಚಿನ ವ್ಯಾಸಂಗವನ್ನು ಅಪ್ಪಿ ತಪ್ಪಿಯೂ ನಮ್ಮ ದೇಶದ ಕಾಲೇಜುಗಳಲ್ಲಿ ಮಾಡಬಾರದು. ಅದಕ್ಕಾಗಿ ವಿದೇಶಕ್ಕೇ ಹೋಗಬೇಕು. ಒಮ್ಮೆ ಅಲ್ಲಿಗೆ ಹಾರಿದವೆಂದರೆ ಈ ರ್‍ಯಾಂಕ್ ಹಕ್ಕಿಗಳು ವಾಪಸ್ಸು ಗೂಡಿಗೆ ಬರುತ್ತವಾ..?? ನೋ ಛಾನ್ಸ್. ಕೈತುಂಬಾ ಡಾಲರ್ ಎಣಿಸುತ್ತಾ ಅಲ್ಲೇ ಹಾಯಾಗಿರುತ್ತಾರೆ. ಈಗ ಗೊತ್ತಾಯಿತಲ್ಲ, ಹೇಗೆ ಕಾಣೆಯಾಗ್ತಾರೆ ಅಂತ. ಅದೇ ಎಸ್ಸೆಸ್ಸೆಲ್ಸಿ, ಪಿಯುಸಿಗಳನ್ನು ಸಾಮಾನ್ಯ ಸಾಧನೆಗೈದವರು ಕಷ್ಟಪಟ್ಟು ಮುಂದಿನ ಹಂತಗಳನ್ನು ಪೂರೈಸಿ ಇಲ್ಲೇ ಇದ್ದು ಸಾಧನೆಗೈಯ್ಯುತ್ತಾರೆ. ಅವರ ಹೆಸರನ್ನು ನಾವು ಮತ್ತೆ ಮತ್ತೆ ಕೇಳುತ್ತಾ ಇರುತ್ತೇವೆ."


Monday, 12 May 2014

ಬೆಂಕಿ


ಕಿಚ್ಚು ಹೆಚ್ಚಾಗಿ ಹೊತ್ತಿ ಉರಿಯಿತಿದೆ
ಭಾವನೆಗಳ ಕೆನ್ನಾಲೆಯಲ್ಲಿ ಜೀವವು
ಎತ್ತ ಕಡೆಯಿಂದಲೂ ಬಿಡಿಸಿಕೊಳ್ಳಲಾರದಂತೆ
ಚಕ್ರವ್ಯೂಹದಲ್ಲಿ ಕಟ್ಟಿ ಹಾಕಿ ಸುಡುತಿವೆ
ಕರಕಲಾಗಿ ಹೋಗುತಿಹೆ ನಾನಿಂದು

ಯಾವಾಗ ಹೇಗೆ ಎಲ್ಲಿ ಹೊತ್ತಿತೋ ತಿಳಿಯೆ
ಯಾವ ಕ್ಷಣದಲ್ಲಿ ನನ್ನ ಮೇಲೆ ಬಿದ್ದಿತೋ ಅರಿಯೆ
ಈಗ ನಾನಾಗಿಹೆ ಜ್ವಾಲೆಗಳಿಗೆ ಬಲಿಪಶು
ಆರಿಸಲೆತ್ನಿಸಿದಷ್ಟೂ ಹೊತ್ತುಕೊಂಡು ಉರಿಯುವವು
ಹೊಗೆಯ ಕಪ್ಪಿನಲ್ಲಿ ಕಳೆದುಹೋಗಿದೆ ನನ್ನ ಕೂಗು

ಬೆಂಕಿ ಶಮನವಾಗುವ ಸೂಚನೆಯೇ ಇಲ್ಲ
ಇನ್ನು ಬೂದಿಯಾಗುವ ವಿಚಾರವೆಲ್ಲಿಯದು..??
ಇನ್ನೆಷ್ಟು ಕಾಲ ಬೇಯಬೇಕಿದೆ ಇಲ್ಲಿ..??
ಒಮ್ಮೆ ಸತ್ತುಹೋದೆನಾದರೂ ಚಿಂತೆಯಿಲ್ಲ
ಮರುಹುಟ್ಟು ಪಡೆದಾಗ ತಂಪು ದೊರಕೀತು


ಹೆಜ್ಜೆ


ಸಮಯ ಸರಿದಂತೆ ವೇಗ ಹೆಚ್ಚುತ್ತಿತ್ತು
ದಣಿವನ್ನು ಲೆಕ್ಕಿಸದೇ ಮನಸು ಓಡುತ್ತಿತ್ತು
ಹಾದಿ ಮುಗಿಯುವ ತನಕವೋ..??
ಉಸಿರು ನಿಲ್ಲುವ ತನಕವೋ..??
ಊಹ್ಞೂಂ ತಿಳಿಯದು, ಹೆಜ್ಜೆ ಮಾತ್ರ ಬೀಳುತ್ತಲಿತ್ತು

ಕಲ್ಲು ಮುಳ್ಳುಗಳು ಎದುರಾದರೇನಂತೆ
ದಾಟಿಹೋಗುವ ಮುನ್ನ ಬದಿಗೆ ಸರಿಸು
ಕತ್ತಲಿನಲ್ಲಿ ಎಡವಿ ಬಿದ್ದರೂ ಚಿಂತೆಯಿಲ್ಲ
ಬೆಳಕು ಹರಿದ ಮೇಲೆ ಮತ್ತೆ ಮೇಲೇಳು
ಹೊತ್ತು ಕಳೆಯುವ ಮೊದಲೇ ಹೆಜ್ಜೆ ಹಾಕು

ಎಷ್ಟೆಲ್ಲ ಕವಲುಗಳು ಏನೆಲ್ಲ ತಿರುವುಗಳು
ಎತ್ತ ಸಾಗುವುದು ಎಲ್ಲಿಗೆ ತಲುಪುವುದು
ಗೊಂದಲವೇ ತಾನಾಗಿ ಮೂಡುತಿದೆ ಹೆಜ್ಜೆ
ಒಮ್ಮೆ ಇಟ್ಟ ಮೇಲೆ ಮತ್ತೆ ಕೀಳಲು ಬಾರದು
ಮುಂದಿನ ಹೆಜ್ಜೆಯ ಇಡುವುದೇ ನಿಯಮ

ಕಾಲಚಕ್ರದ ಜೊತೆಗೆ ಕ್ಷಣಗಳ ಸಾಥಿಯಾಗಿ
ಬೀಳುವುದು ಪ್ರತಿ ಹೆಜ್ಜೆ ಮೂಕವಾಗಿ
ಮನದಂಗಳದಲ್ಲಿ, ಬಾಳ ಬೀದಿಯಲ್ಲಿ
ಅಳಿಸಲಾಗದೇ ಉಳಿದರೇನು ಬಂತು..??
ವಾಸ್ತವತೆಯಲ್ಲಿ ಅದು ಮರಳಿನ ಚಿತ್ತಾರದಂತೆ